Home Blog Page 3286

ಏಳು ತಿಂಗಳಾದರೂ ಸಭೆ ನಡೆಸದ ಶಾಸಕ ರಾಮಣ್ಣ ಲಮಾಣಿ; ಅಧಿಕಾರಿಗಳಿಗೆ ಸಭೆಗಳಂದ್ರೆ ಆಲಸ್ಯ!

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ;

ಶಿರಹಟ್ಟಿ ಮೀಸಲು ಮತಕ್ಷೇತ್ರಕ್ಕೆ ಸರ್ಕಾರದಿಂದ ವಿವಿಧ ಇಲಾಖೆಗಳ ಮೂಲಕ ಹಲವಾರು ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಆದರೆ ಇವುಗಳ ಪ್ರಗತಿ ನಡೆಸುವುದಕ್ಕಾಗಿ ತಾಲೂಕು ಪಂಚಾಯಿತಿಯಲ್ಲಿ ಆಗಾಗ್ಗೆ ನಡೆಯಬೇಕಿದ್ದ ಪ್ರಗತಿ ಪರಿಶೀಲನಾ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಪದೇಪದೇ ಗೈರಾಗುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿತನ ತಾಲೂಕಿನ ಅಭಿವೃದ್ಧಿಗೆ ಮಾರಕವಾಗುತ್ತಿದೆ ಅಲ್ಲದೇ, ಸಭೆಗಳು ನಾಮಕೆವಾಸ್ತೆ ನಡೆಯುತ್ತಿವೆ.

ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಹಾಗೂ ತಾಲೂಕು ಪಂಚಾಯತಿ ಆಡಳಿತಾಧಿಕಾರಿ ವಾಗೀಶ್ ಶಿವಾಚಾರ್ಯ ಇವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಾಮಾನ್ಯ ಸಭೆ ಜರುಗಿತು.

ಸಭೆಯಲ್ಲಿ ಸಣ್ಣ ನೀರಾವರಿ, ಕೆಆರ್‌ಡಿಎಲ್, ನಿರ್ಮಿತಿ ಕೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಬಕಾರಿ, ಕೆಎಸ್‌ಆರ್‌ಟಿಸಿ, ಆಹಾರ ಶಿರಸ್ತೆದಾರ, ಪ್ರಾದೇಶಿಕ ಅರಣ್ಯ, ಭೂಮಾಪನ, ಉಪನೋಂದಣಾಧಿಕಾರಿ, ಕಾರ್ಮಿಕ, ಡಾ.ಬಿ.ಆರ್.ಅಂಬೇಡ್ಕರ್ ನಿಗಮ, ಅಲ್ಪಸಂಖ್ಯಾತ, ಮೀನುಗಾರಿಕೆ ಇಲಾಖೆ ಹೀಗೆ 16 ಇಲಾಖೆಯ ಅಧಿಕಾರಿಗಳು ಗೈರಾಗಿದ್ದಾರೆ. ಕೇವಲ 15 ಇಲಾಖೆಯ ಅಧಿಕಾರಿಗಳು ಮಾತ್ರ ಸಭೆಗೆ ಹಾಜರಿದ್ದರು. ಅಲ್ಲದೇ, ಮಂಗಳವಾರ ಹಾಲಕೆರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿದ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಗಳು ಸಹ ಸಭೆಯಿಂದ ಬೇಗನೆ ನಿರ್ಗಮಿಸಿದರು.

ಅಧಿಕಾರಿಗಳ ಸಭೆ ನಡೆಸದ ಶಾಸಕರು!

ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಜಿಡ್ಡು ಹಿಡಿಯುತ್ತಿರುವಂತಹ ಅಧಿಕಾರಿ ವರ್ಗಕ್ಕೆ ಬಿಸಿ ಮುಟ್ಟಿಸಬೇಕಾಗಿರುವ ಶಾಸಕ ರಾಮಣ್ಣ ಲಮಾಣಿ ಏ.8 ರಂದು ತ್ರೈಮಾಸಿಕ ಸಭೆ ಏರ್ಪಡಿಸಿದ್ದನ್ನು ಬಿಟ್ಟರೆ ಬಳಿಕ ಯಾವುದೇ ಸಭೆ ನಡೆಸಿಲ್ಲ. ಏಳು ತಿಂಗಳಾದರೂ ಯಾವುದೇ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸದಿರುವುದು ಖೇದಕರ. ಅಲ್ಲದೇ, ಶಾಸಕರ ಈ ನಡೆ ಅಧಿಕಾರಿಗಳಿಗೆ ವರದಾನವಾಗಿದೆ.

ಇಒ ಅವರ ನಿರ್ದೇಶನಕ್ಕಿಲ್ಲ ಕಿಮ್ಮತ್ತು

ಸಭೆಗಳಿಗೆ ಅಧಿಕಾರಿಗಳು ಪದೇಪದೇ ಗೈರು ಉಳಿಯುತ್ತಿರುವುದಕ್ಕೆ ತಾಪಂ ಇಒ ಡಾ.ಎನ್.ಎಚ್.ಓಲೇಕಾರ್ ಅವರು ಸಾಕಷ್ಟು ಬಾರಿ ನಿರ್ದೇಶನ ನೀಡಿದರೂ ಇಒ ಅವರಿಗೆ ಕವಡಿ ಕಾಸಿನಷ್ಟು ಕಿಮ್ಮತ್ತಿಲ್ಲದಂತಾಗಿದೆ. ಇಒ ಅವರು ಈ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಲೇ ಬರುತ್ತಿದ್ದಾರೆ.

ಡಿಸಿ ಮತ್ತು ಜಿಲ್ಲಾ ಪಂಚಾಯತ್ ಸಿಇಒ ಗಮನಹರಿಸುವರೇ?

ಶಿರಹಟ್ಟಿ ತಾಲೂಕು ಕೇಂದ್ರದ ಜೊತೆಗೆ ವಿಧಾನಸಭಾ ಮತಕ್ಷೇತ್ರವಾಗಿದ್ದು, ಸರ್ಕಾರದ ಅನುದಾನ ಸದ್ಭ್ಬಳಕೆ ಆಗುತ್ತಿದೆಯೋ.. ಇಲ್ಲವೋ ಎಂಬುದನ್ನು ತಿಳಿಯಲು ನಡೆಸುವ ಪ್ರಗತಿ ಪರಿಶೀಲನಾ ಸಭೆಗಳಿಗೆ ಅಧಿಕಾರಿಗಳು ಗೈರಾಗುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿಗಳು ಗಮನಹರಿಸಬೇಕಿದೆ.

ಅಧಿಕಾರಿಗಳು ಸಭೆಗಳಿಗೆ ಪದೇಪದೇ ಗೈರು ಉಳಿಯುತ್ತಿರುವುದು ಕ್ಷೇತ್ರದ ಅಭಿವೃದ್ಧಿಗೆ ಮಾರಕವಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಜಿಪಂ ಸಿಇಒ ಅವರ ಗಮನಕ್ಕೆ ತರುವ ಮೂಲಕ ಶಿಸ್ತುಕ್ರಮ ಜರುಗಿಸುವಂತೆ ಸೂಚಿಸಲಾಗುವುದು. ನವೆಂಬರ್ 15ರ ನಂತರ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು.

ರಾಮಣ್ಣ ಲಮಾಣಿ, ಶಾಸಕರು

ಸಭೆಗೆ ಗೈರು ಉಳಿದಂತಹ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಿಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ವರದಿ ಸಲ್ಲಿಸಲಾಗುವುದು. ಕ್ರಮ ತೆಗೆದುಕೊಂಡರೆ ಮಾತ್ರ ಮುಂದಿನ ಸಭೆ ನಡೆಸಲಾಗುವುದು.

ಡಾ.ಎನ್.ಎಚ್.ಓಲೆಕಾರ್, ತಾಪಂ ಇಒ

ನೂರಾರು ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ; ಡಿಪೋ ಮ್ಯಾನೇಜರ್ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

0

ವಿಜಯಸಾಕ್ಷಿ ಸುದ್ದಿ, ನರಗುಂದ

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಅವರ ನರಗುಂದ ಮತಕ್ಷೇತ್ರದ ಹಲವು ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಮಂಗಳವಾರ ಸೂಕ್ತ ಬಸ್ಸಿನ ವ್ಯವಸ್ಥೆ ಕಲ್ಪಿಸಿ‌ಕೊಡುವಂತೆ ಆಗ್ರಹಿಸಿ ರೋಣ-ಬೆಳಗಾವಿ ಬಸ್ ತಡೆದು ಶಿರೋಳದಲ್ಲಿ ಪ್ರತಿಭಟನೆ ನಡೆಸಿದರು.

ತಾಲೂಕಿನ ಹೊಳೆಆಲೂರು, ಮೆಣಸಗಿ, ಕಪ್ಪಲಿ, ಕಲ್ಲಾಪುರ, ಶಿರೋಳ, ಗೊಳಗಂದಿ ಗ್ರಾಮಗಳ ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಸರಿಯಾದ ಬಸ್ಸಿನ ಸೌಲಭ್ಯವಿಲ್ಲದೇ ದಿನನಿತ್ಯ ಪರದಾಡುತ್ತಿದ್ದಾರೆ.

ರೋಣದಿಂದ ಬೆಳಗಾವಿ ಹೋಗುವ ಒಂದೇ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಬೆಳಿಗ್ಗೆ ಬರುವ ಇದೊಂದೇ ಬಸ್ಸಿನಲ್ಲಿ ಸುಮಾರು ೧೫೦ ವಿದ್ಯಾರ್ಥಿಗಳು ಪ್ರಯಾಣಿಸಿ ಕಾಲೇಜಿಗೆ ಹೋಗುವಂತಹ ಅನಿವಾರ್ಯ ಪರಿಸ್ಥಿತಿ ಇದೆ. ಒಂದು ವೇಳೆ ಪ್ರಯಾಣಿಕರಿಂದ ಬಸ್ ತುಂಬಿದರೆ, ವಿದ್ಯಾರ್ಥಿಗಳು ಖಾಸಗಿ ವಾಹನಗಳ ಮೊರೆ ಹೋಗಬೇಕಾದ ದುಸ್ಥಿತಿ ಉಂಟಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಇನ್ನೊಂದು ಬಸ್ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಹಲವು ಬಾರಿ ಡಿಪೋ ವ್ಯವಸ್ಥಾಪಕರಿಗೆ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಬಾರಿಯೂ ಬಸ್ ಬಿಡುವಂತೆ ಪ್ರತಿಭಟಿಸಲಾಗಿತ್ತು. ಇದು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ್ ಅವರ ಗಮನಕ್ಕೂ ಬಂದಿತ್ತು. ಆದರೂ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅನುಕೂಲವಾಗಿಲ್ಲ. ಸಚಿವರು ಹೇಳಿದರೆಂದು ಒಂದು ತಿಂಗಳವರೆಗೆ ಬಸ್ ಬಿಟ್ಟಂತೆ ಮಾಡುವ ನರಗುಂದ ಡಿಪೋ ವ್ಯವಸ್ಥಾಪಕರು ಪುನಃ ಈ ಮಾರ್ಗದ ಬಸ್ ಸಂಚಾರ ಬಂದ್ ಮಾಡುತ್ತಿದ್ದಾರೆ. ಬಸ್ ಯಾಕೆ ಬಂದ್ ಮಾಡಿದ್ದೀರಿ ಎಂದು ವಿದ್ಯಾರ್ಥಿಗಳು ಕೇಳಿದರೆ ‘ನಮಗೆ ಬಸ್ ಬಿಡುವುದು ಆಗುವುದಿಲ್ಲ. ನೀವು ಏನು ಮಾಡಿಕೊಳ್ಳುತ್ತಿರೋ ಮಾಡಿಕೊಳ್ಳಿ’ ಎಂದು ವಿದ್ಯಾರ್ಥಿಗಳ ಜೊತೆ ಅಸಭ್ಯ ವರ್ತನೆ ತೋರುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಅಲ್ಲದೇ, ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬೆ. 7.45 ಕ್ಕೆ ಶಿರೋಳ ಮಾರ್ಗವಾಗಿ ಕೊಣ್ಣೂರ ಹಾಗೂ ಮ. 2.45 ಕ್ಕೆ ಕೊಣ್ಣೂರದಿಂದ ಶಿರೋಳಕ್ಕೆ ಬಸ್ ಸೌಲಭ್ಯದ ಅವಶ್ಯಕತೆ ಇದ್ದು, ಕೂಡಲೇ ಈ ಮಾರ್ಗಗಳಲ್ಲಿ ಬಸ್ ಸಂಚಾರ ಆರಂಭಿಸುವಂತೆ ಆಗ್ರಹಿಸಿದರು.

ಅಂಗನವಾಡಿ ಪುನರಾರಂಭ: ಮಕ್ಕಳಿಗೆ ಹೂವು ನೀಡಿ ಸ್ವಾಗತ

0

ವಿಜಯಸಾಕ್ಷಿ ಸುದ್ದಿ, ನರಗುಂದ:

ರಾಜ್ಯಾದ್ಯಂತ ಸೋಮವಾರ ಅಂಗನವಾಡಿ ಕೇಂದ್ರಗಳು ಆರಂಭವಾದ ಹಿನ್ನೆಲೆಯಲ್ಲಿ ತಾಲ್ಲೂಕಿನ ಚಿಕ್ಕನರಗುಂದ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮುತ್ತು ರಾಯರಡ್ಡಿ ದೀಪ ಬೆಳಗಿಸುವ ಮೂಲಕ ಪುನರ್ ಆರಂಭಿಸಿದರು.

ಬಳಿಕ ಮಾತನಾಡಿದ ಅವರು, ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳಿಗೆ ಕೆಮ್ಮು, ನೆಗಡಿ, ಜ್ವರ, ಉಸಿರಾಟದ ಸಮಸ್ಯೆ ಕಂಡುಬಂದರೆ ಅಂತಹ ಮಗುವನ್ನು ಅಂಗನವಾಡಿ ಕೇಂದ್ರಕ್ಕೆ ಕರೆ ತರದಂತೆ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಪೋಷಕರಿಗೆ ಸೂಚಿಸಬೇಕು.

ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಅಂಗನವಾಡಿ ಕೇಂದ್ರಗಳಿಗೆ ಪ್ರತಿ ಶನಿವಾರ ಗ್ರಾಪಂ ಸಿಬ್ಬಂದಿಗಳಿಂದ ಸ್ಯಾನಿಟೈಸ್ ಸಿಂಪಡಿಸಲಾಗುವುದು ಎಂದರು.

ಗ್ರಾಮದಲ್ಲಿ ಒಟ್ಟು ಆರು ಅಂಗನವಾಡಿ ಕೇಂದ್ರಗಳಿದ್ದು, ಮಧುವನಗಿತ್ತಿಯಂತೆ ಶೃಂಗಾರಗೊಂಡಿದ್ದವು. ಮಕ್ಕಳಿಗೆ ಹೂವು ಕೊಡುವ ಮೂಲಕ ಬರಮಾಡಿಕೊಂಡರು.

ಈ ಸಂಧರ್ಭದಲ್ಲಿ ಗ್ರಾಪಂ ಸದಸ್ಯರಾದ ಲಕ್ಷ್ಮಣ ಕಂಬಳಿ, ಬಾಪುಗೌಡ ಹಿರೇಗೌಡ್ರ, ಶರಣಪ್ಪ ಹಳೇಮನಿ, ಈರಮ್ಮ ಮುದಿಗೌಡ್ರ, ಶೃತಿ ಬ್ಯಾಳಿ,

ಬಾಲವಿಕಾಸ ಸಮಿತಿ ಸದಸ್ಯರಾದ ವೀಣಾ ರಾಯರಡ್ಡಿ, ನಿಂಗವ್ವ ಮರಿಯಣ್ಣವರ, ಶ್ವೇತಾ ವಾಸನ, ಸುಧಾ ಗಾಣಿಗೇರ, ಗ್ರಾಮಸ್ಥರಾದ ಅಡಿವೆಪ್ಪ ಮರಿಯಣ್ಣವರ, ಬಸನಗೌಡ ಮುದಿಗೌಡ್ರ, ಅಂಗನವಾಡಿ ಕಾರ್ಯಕರ್ತೆಯರಾದ ಗೀತಾ ಕಾಡದೇವರಮಠ, ಸವಿತಾ ರಾಯರಡ್ಡಿ, ಭಾರತಿ ಪಾಟೀಲ್, ಮಂಜುಳಾ ಮೇಟಿ, ನೀಲಗಂಗಾ ಮಾದರ ಇದ್ದರು.

‘ಪೊಲೀಸ್ ಸ್ಟೇಶನ್’ಗೆ ಹೋದ ಮಗ, ಮನೆಗೆ ಹೆಣವಾಗಿ ಬಂದ್ನೋ ಎಪ್ಪಾ!’ ನ್ಯಾಯಕ್ಕಾಗಿ ಅಂಗಲಾಚುತ್ತಿರುವ ತಾಯಿ

ವಿಜಯಸಾಕ್ಷಿ ಸುದ್ದಿ, ಗದಗ:

‘ಅವತ್ತು(ನ.4) ಮಧ್ಯಾಹ್ನ ಎರಡು ಗಂಟೆಗೆ ಪೊಲೀಸರು ಮಗ(ಸಂತೋಷ)ನಿಗೆ ಪೋನ್ ಹಚ್ಚಿದ್ರು. ಪೊಲೀಸ್ರು ಪೋನ್ ಹಚ್ಚ್ಯಾರ ಸ್ಟೇಷನ್ಗೆ ಹೋಗಿ ಬರ್ತೀನಿ ಅಂತಾ ಹೇಳಿ ಎದ್ದು ಹೋದ. ಆದ್ರೆ, ಒಮ್ಮೆಲೆ ಸಂಜೆ ಪೊಲೀಸ್ರು ಫೋನ್ ಹಚ್ಚಿ ಜಿಲ್ಲಾಸ್ಪತ್ರೆಗೆ ಬರ್ರೀ ಅಂತಾ ಹೇಳಿದ್ರು. ಹೋಗಿ ನೋಡಿದ್ರ ಮಗ ಹೆಣವಾಗಿ ಬಿದ್ದಿದ್ದೋ ಎಪ್ಪಾ!’ ಎಂದು ಮೃತ ಸಂತೋಷನ ತಾಯಿ ಜನರ ಮುಂದೆ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರಂತೆ.

ಮಗನ ಕಳೆದುಕೊಂಡ ರೋಧಿಸುತ್ತಿರುವ ತಾಯಿ ಅನಸಮ್ಮ

ಆದರ್ಶ ನಗರದ ಮೃತ ಸಂತೋಷನ ಸಾವು ಗದಗ-ಬೆಟಗೇರಿ ಅವಳಿ ನಗರದ ಜನರ ಸಂಶಯಕ್ಕೆ ಕಾರಣವಾಗಿದ್ದು, ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮನೆಯವರ ಪ್ರಕಾರ ಸಂತೋಷನಿಗೆ ಯಾವುದೇ ಖಾಯಿಲೆ ಇರಲಿಲ್ಲ. ಅಲ್ಲದೇ, ಅವನಿಗೆ ಪಿಟ್ಸ್ ರೋಗವೇ ಇರಲಿಲ್ಲವಂತೆ. ಆದರೆ, ಕೆಲ ಪೊಲೀಸ್ ಮೂಲಗಳು ಸಂತೋಷ ಎದೆನೋವು ಕಾಣಿಸಿಕೊಂಡು ಸಾವನ್ನಪ್ಪಿದ್ದಾನೆ ಅಂತಾ ಹೇಳುತ್ತವೆ. ಇದು ಗೊಂದಲಕ್ಕೆ ಎಡೆಮಾಡಿಕೊಟ್ಟಂತಿದ್ದು, ಆರೋಗ್ಯವಾಗಿಯೇ ಇದ್ದ ಸಂತೋಷ ಪೊಲೀಸ್ ಠಾಣೆಗೆ ಹೋದ ಮೇಲೆ ಏನಾಗಿ ಮೃತಪಟ್ಟನೆಂಬ ಕುರಿತು ಕುಟುಂಬದವರಿಗೆ ಈಗಲೂ ಏನು ಗೊತ್ತಿಲ್ಲವಂತೆ.

ಮೃತಪಟ್ಟ ಸಂತೋಷ

ಎರಡು ದಿನ ಪೊಲೀಸರ ವಶದಲ್ಲಿದ್ದ ಪೋನ್!


ನ.4ರಂದು ಸಂತೋಷ ಗದಗ ಶಹರ ಪೊಲೀಸ್ ಠಾಣೆಗೆ ಬಂದ ದಿನದಿಂದ ಮೊನ್ನೆಯವರೆಗೂ(ನ.6) ರವರೆಗೂ ಆತನ ಮೊಬೈಲ್ ಪೊಲೀಸರ ವಶದಲ್ಲಿತ್ತಂತೆ. ಸಾವಿನ ಬಳಿಕ ಮನೆಯವರು ಸಂತೋಷನ ಮೊಬೈಲ್ ಕೊಡಿ ಎಂದು ಕೇಳಿದಾಗ. ಪೊಲೀಸರು ಮೊಬೈಲ್ ಕಳೆದಿದೆ ಎಂದು ಸುಳ್ಳು ಹೇಳಿದ್ದರಂತೆ. ಘಟನೆ ನಡೆದಾದ ಎರಡು ದಿನಗಳ ಬಳಿಕ ಅಂದರೆ ಮೊನ್ನೆ (ನ.6) ರಂದು ಪೊಲೀಸರು ಮನೆಯವರಿಗೆ ಸಂತೋಷನ ಮೊಬೈಲ್ ಕೊಟ್ಟಿದ್ದಾರಂತೆ. ಕೊಡುವಾಗ ಮೆಮೊರಿ ಕಾರ್ಡ್ ಹಾಳು (ಡ್ಯಾಮೇಜ್) ಮಾಡಿ ಸಾಕ್ಷ್ಯ ನಾಶ ಪಡಿಸಿದ್ದಾರಂತೆ. ಆದರೆ, ಪೊಲೀಸರು ಸಂತೋಷ‌ ಮೊಬೈಲ್ ನಲ್ಲಿದ್ದ ಇವೆರಡನ್ನೂ ಹಾಳು ಮಾಡಿದ್ದು ಯಾಕೆ?

ಮರಣೋತ್ತರ ಪರೀಕ್ಷೆ ಮಾಡಿದ್ದು ಯಾಕೆ?


ಪೊಲೀಸ್ ಮೂಲಗಳೇ ಹೇಳುವ ಹಾಗೆ ಸಂತೋಷ ಯಾವುದೇ ದುರ್ಮರಣಕ್ಕೆ ಇಡಾಗಿಲ್ಲ. ಅಲ್ಲದೇ, ಸಂಶಯಾಸ್ಪದವಾಗಿಯೂ ಸತ್ತಿಲ್ಲ. ಹಾಗಿದ್ದಾಗ್ಯೂ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದ್ದಾರಂತೆ. ಪೋಸ್ಟ್ ಮಾರ್ಟ್ಂ ಮಾಡುವ ವೇಳೆ ಮೃತ ಸಂತೋಷನ ಮನೆಯವರ ಅನುಮತಿಯನ್ನು ಕೇಳಿಲ್ಲವಂತೆ. ಹಾಗಿದ್ದಾಗ ಪೊಲೀಸರು ತರಾತುರಿಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಿದ್ದ್ಯಾಕೆ? ಮರಣೋತ್ತರ ಪರೀಕ್ಷೆ ಮಾಡಲೇ ಬೇಕೆಂದಿದ್ದರೆ, ಮನೆಯವರ ಅನುಮತಿ ಪಡೆಯಲಿಲ್ಲ ಯಾಕೆ?

ಸಂತೋಷನ ಮೃತದೇಹ ಹೂಳದೇ ಸುಟ್ಟಿದ್ದು ಯಾಕೆ?

ಪೊಲೀಸರ ಹೊಡೆತದಿಂದಲೇ ಮೃತಪಟ್ಟಿದ್ದಾನೆ ಎನ್ನಲಾಗುತ್ತಿರುವ ಸಂತೋಷ ಲಿಂಗಾಯತ ಸಮುದಾಯಕ್ಕೆ ಸೇರಿದವನಾಗಿದ್ದು, ಬಹುತೇಕ ಆ ಸಮುದಾಯದಲ್ಲಿ ಮರಣ ಹೊಂದಿದವರನ್ನು ಮಣ್ಣಲ್ಲಿ ಹೂಳುತ್ತಾರೆ. ಅಲ್ಲದೇ, ಈ ಸಮುದಾಯದವರು ಅಪಘಾತ ಸೇರಿ ಇನ್ನಿತರ ಘಟನೆಗಳಲ್ಲಿ ದುರ್ಮರಣಕ್ಕೀಡಾದರನ್ನು ಮಾತ್ರ ಹೂಳದೇ ಸುಟ್ಟು ಹಾಕುತ್ತಾರೆ. ಆದರೆ, ಸಂತೋಷನ ಮೃತ ದೇಹವನ್ನು ಹೂಳದೇ ಸುಟ್ಟು ಹಾಕಿದ್ದು ಯಾಕೆ? ಎಂಬ ಅವಳಿ ನಗರದ ಜನರ ಪ್ರಶ್ನೆಗಳಿಗೆ ಪೊಲೀಸರೇ ಉತ್ತರಿಸಬೇಕಿದೆ.

ಮಾಧ್ಯಮದ ಎದುರು ಮಾತಾಡದ ತಾಯಿ

ಅನೌಪಚಾರಿಕವಾಗಿ ಜನರ ಎದುರು ಪೊಲೀಸರ ಕರ್ಮಕಾಂಡದ ಬಗ್ಗೆ, ಮಗನ ಕೊಂದಿರುವ ಕುರಿತು ಬಾಯಿ ಬಿಡುವ ತಾಯಿ ಅನಸಮ್ಮ, ಮಾಧ್ಯಮದ ಮುಂದೆ ಮಾತ್ರ ಬಾಯಿ ಬಿಡುತ್ತಿಲ್ಲ. ಕಾರಣ ಪೊಲೀಸರ ಭಯ. ಮಾಧ್ಯಮದ ಮುಂದೆ ಮಾತೆತ್ತಿದರೆ ಎಪ್ಪಾ ನನಗ್ಯಾರು ದಿಕ್ಕಿಲ್ಲ…. ನಾ ಏನೂ ಮಾತಾಡಲ್ಲ ಅಂತಾ ಹೇಳ್ತಾಳೆ. ಆದರೆ ಮಾಧ್ಯಮದ ಮುಂದೆ ಮಾತ್ರ ಕೈ ಮುಗಿದು ನ್ಯಾಯ ಕೊಡಿಸಿ ಅಂತ ಅಂಗಲಾಚುತ್ತಿದ್ದಾಳೆ.

ಅಷ್ಟಕ್ಕೂ ಆಗಿದ್ದಾದರೂ ಏನು?

ಸಂತೋಷ ಕಬ್ಜಾದಾರರ ಜೊತೆಗೆ ಜಗಳ ಮಾಡಿ, ಅವಾಚ್ಯವಾಗಿ ಬೈದಾಡಿದ್ದನಂತೆ. ಅಲ್ಲದೇ, ನೀರು, ವಿದ್ಯುತ್ ಕಟ್ ಮಾಡಿದ್ದನಂತೆ. ಆದರೆ, ಇದೇನೂ ಅಷ್ಟೊಂದು ದೊಡ್ಡ ವಿಷಯ ಅಲ್ಲ ಅಂತಾರೆ ಪ್ರಜ್ಞಾವಂತರು. ಸಣ್ಣ ಪುಟ್ಟ ಜಗಳ ಮಾಡಿಕೊಂಡು ಬಂದ ನೂರಾರು ಜನರ ನಡುವೆ ರಾಜೀ ಸಂಧಾನ ಮಾಡಿ ಕಳುಹಿಸುವ ಪೊಲೀಸರು ಯಾಕೀಷ್ಟು ಹೃದಯಹೀನರಾದರು ಎಂಬುದು ಸಾರ್ವಜನಿಕರ ಪ್ರಶ್ನೆ.

2022ರ ಜನೇವರಿ 19ರಂದು ಅಜ್ಜನ ಜಾತ್ರೆ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:

ಕೊಪ್ಪಳ ಎಂದಾಕ್ಷಣ ಗವಿಮಠ ಕಣ್ಮುಂದೆ ಬರುತ್ತದೆ. ಗವಿಮಠದ ಜಾತ್ರೆ ದಕ್ಷಿಣದ ಕುಂಭಮೇಳ, ಉತ್ತರದ ಸಿದ್ಧಗಂಗೆ ಎಂತಲೂ ಫೇಮಸ್. 2021ರಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಜಾತ್ರಾ ಮಹೋತ್ಸವ, ಈ ವರ್ಷ ಮತ್ತೇ ಹಿಂದಿನ ವರ್ಷಗಳ ವೈಭವವನ್ನು ಕಟ್ಟಿ ಕೊಡುವ ನಿಟ್ಟಿನಲ್ಲಿ ಸಕಲ ಸಿದ್ಧತೆಗಳು ನಡೆದಿವೆ.

ಈ ಸಲ ಕೊರೋನಾ ಪ್ರಕರಣಗಳು ಕಳೆದ ಒಂದೂವರೆ ವರ್ಷಗಳ ಹಿಂದಿನ ದಿನಗಳಿಗಿಂತ ಕಡಿಮೆಯಾಗಿದ್ದು, ಅಜ್ಜನ ಅರ್ಥಪೂರ್ಣ ಜಾತ್ರಾ ಮಹೋತ್ಸವಕ್ಕೆ ತಯಾರಿ ನಡೆದಿದೆ‌.

2022ರ ಜನೇವರಿ 19ರಂದು ಅಜ್ಜನ ಜಾತ್ರೆಯ ಮಹಾರಥೋತ್ಸವಕ್ಕೆ ದಿನ ನಿಗದಿಯಾಗಿದ್ದು, ಹಿಂದಿನಂತೆ ಮೂರು ದಿನಗಳ ಸಾಂಸ್ಕೃತಿಕ ಉತ್ಸವ, ಹದಿನೈದು ದಿನಗಳ ಮಹಾ ಅನ್ನದಾಸೋಹ, ಸಂಜೆ ಮಹಾರಥೋತ್ಸವ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕುರಿತು ವಿಶೇಷ ಚಟುವಟಿಕೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.

2022ರ ಜನೇವರಿ 19ರಂದು ಅಜ್ಜನ ಜಾತ್ರೆ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೊಪ್ಪಳ ಎಂದಾಕ್ಷಣ ಗವಿಮಠ ಕಣ್ಮುಂದೆ ಬರುತ್ತದೆ. ಗವಿಮಠದ ಜಾತ್ರೆ ದಕ್ಷಿಣದ ಕುಂಭಮೇಳ, ಉತ್ತರದ ಸಿದ್ಧಗಂಗೆ ಎಂತಲೂ ಫೇಮಸ್. 2021ರಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಜಾತ್ರಾ ಮಹೋತ್ಸವ, ಈ ವರ್ಷ ಮತ್ತೇ ಹಿಂದಿನ ವರ್ಷಗಳ ವೈಭವವನ್ನು ಕಟ್ಟಿ ಕೊಡುವ ನಿಟ್ಟಿನಲ್ಲಿ ಸಕಲ ಸಿದ್ಧತೆಗಳು ನಡೆದಿವೆ.

ಈ ಸಲ ಕೊರೋನಾ ಪ್ರಕರಣಗಳು ಕಳೆದ ಒಂದೂವರೆ ವರ್ಷಗಳ ಹಿಂದಿನ ದಿನಗಳಿಗಿಂತ ಕಡಿಮೆಯಾಗಿದ್ದು, ಅಜ್ಜನ ಅರ್ಥಪೂರ್ಣ ಜಾತ್ರಾ ಮಹೋತ್ಸವಕ್ಕೆ ತಯಾರಿ ನಡೆದಿದೆ‌.

2022ರ ಜನೇವರಿ 19ರಂದು ಅಜ್ಜನ ಜಾತ್ರೆಯ ಮಹಾರಥೋತ್ಸವಕ್ಕೆ ದಿನ ನಿಗದಿಯಾಗಿದ್ದು, ಹಿಂದಿನಂತೆ ಮೂರು ದಿನಗಳ ಸಾಂಸ್ಕೃತಿಕ ಉತ್ಸವ, ಹದಿನೈದು ದಿನಗಳ ಮಹಾ ಅನ್ನದಾಸೋಹ, ಸಂಜೆ ಮಹಾರಥೋತ್ಸವ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕುರಿತು ವಿಶೇಷ ಚಟುವಟಿಕೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.

ಹೃದಯಾಘಾತವೋ? ಮೂರ್ಚೆ ರೋಗವೋ? ಲಾಕಪ್ ಡೆತ್ತೋ?;
ತಾಯಿ ಮಗನ ಜಗಳದಲ್ಲಿ ಖಾಕಿ ಹೊಡೆತಕ್ಕೆ ಪೊಲೀಸ್ ಠಾಣೆಯಲ್ಲೇ ವ್ಯಕ್ತಿ ಸಾವು?

ವಿಜಯಸಾಕ್ಷಿ ಸುದ್ದಿ, ಗದಗ;

ತಾಯಿ, ಮಗ ಮತ್ತು ಕಬ್ಜಾದಾರರ ನಡುವೆ ಉಂಟಾದ ಕಲಹ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಪೊಲೀಸ್ ಠಾಣೆಯಲ್ಲಿ ಪೊಲೀಸರ ಹೊಡೆತದಿಂದ ಗದಗ-ಬೆಟಗೇರಿಯ ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಮೃತಪಟ್ಟನಂತೆ ಎಂಬ ವದಂತಿ ಮೂರ್ನಾಲ್ಕು ದಿನಗಳಿಂದ ಅವಳಿ ನಗರದಲ್ಲಿ ಹರಿದಾಡುತ್ತಿದೆ.

ಗದಗ ಶಹರ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ಆಗಿದ್ದಾನೆ ಎನ್ನಲಾಗುತ್ತಿರುವ ಆದರ್ಶ ನಗರದ 45 ವರ್ಷದ ವ್ಯಕ್ತಿ ಸಂತೋಷ ಅಲಿಯಾಸ್ ಸಂತೋಷ್ ಕುಮಾರ ಪೊಲೀಸರ ಹೊಡೆತದಿಂದಲೇ ಸಾವನ್ನಪ್ಪಿದ್ದರೂ, ಪೊಲೀಸರು ಅವೆಲ್ಲವನ್ನು ಮುಚ್ಚಿಹಾಕಿ ಸಂತೋಷ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂಬ ಕಥೆ ಕಟ್ಟುತ್ತಿದ್ದಾರಂತೆ ಎಂಬ ಊಹಾಪೋಹಗಳು ಎದ್ದಿವೆ.

ಈ ಘಟನೆಯಿಂದ ಗದಗ-ಬೆಟಗೇರಿ ಅವಳಿ ನಗರದ ಜನತೆ ಅಕ್ಷರಶಃ ಬೆಚ್ಚಿಬಿದ್ದಿದ್ದು, ಸಂತೋಷ್‌ಗೆ ನಿಜಕ್ಕೂ ಎದೆನೋವು ಕಾಣಿಸಿಕೊಂಡಿತ್ತಾ? ಅಥವಾ ಪೊಲೀಸರ ಹೊಡೆತದಿಂದಲೇ ಆತ ಸಾವನ್ನಪ್ಪಿದನಾ? ವೈದ್ಯರು ಹೇಳುವ ಪ್ರಕಾರ ಆತನಿಗೆ ಹೃದಯಾಘಾತ ಸಂಭವಿಸಿತಾ?

ಅಷ್ಟಕ್ಕೂ ನ. 4 ರಂದು ಗದಗ ಶಹರ ಪೊಲೀಸ್ ಠಾಣೆಯಲ್ಲಿ ನಡೆದದ್ದಾರು ಏನು? ಪ್ರಕರಣದಿಂದ ಪಾರಾಗಲು ಪೊಲೀಸರು ಹೃದಯಾಘಾತ ಎಂಬ ಕಥೆ ಕಟ್ಟಿದರೆ? ಎಂಬ ಅವಳಿ ನಗರದ ಜನರ ಪ್ರಶ್ನೆಗೆ ಪೊಲೀಸರೇ ಉತ್ತರ ನೀಡಬೇಕಿದೆ.

ಕಬ್ಜಾದಾರನ ಹೆಂಡತಿಗೆ ಕಿರುಕುಳ?:

ಮೃತ ವ್ಯಕ್ತಿ ಸಂತೋಷನಿಗೆ ಎರಡು ಅಂತಸ್ತಿನ ಮನೆಯಿದ್ದು, ಅವರ ತಾಯಿ ತಾವಿದ್ದ ಮನೆಯಲ್ಲಿಯೇ ಕೆಳಗಿನ ಅಂತಸ್ತಿನ ಮನೆಯನ್ನು ನಾಲ್ಕು ಲಕ್ಷ ರೂ.ಗಳಿಗೆ ಬೇರೆಯವರಿಗೆ ಕಬ್ಜಾ ಕೊಟ್ಟಿದ್ದಾರಂತೆ. ಈಕೆಯ ಹಿರಿಯ ಮಗ ಸಂತೋಷ ಕಬ್ಜಾ ಕೊಟ್ಟಿರುವ ಮನೆಯನ್ನು ಬಿಡಿಸಿಕೊಳ್ಳುವಂತೆ ತನ್ನ ತಾಯಿಗೆ ಹೇಳುತ್ತಿದ್ದ. ಆಗ ತಾಯಿ, ಸದ್ಯ ಹಣವಿಲ್ಲ, ಹಣ ಕೂಡಿದ ಮೇಲೆ ಮನೆ ಬಿಡಿಸಿಕೊಳ್ಳುವುದಾಗಿ ಹೇಳಿದ್ದರಂತೆ.

ತನ್ನ ತಾಯಿ ಇಷ್ಟೆಲ್ಲ ಹೇಳಿದರೂ, ಸುಮ್ಮನಾಗದ ಸಂತೋಷ ದೀಪಾವಳಿ ಅಮಾವಾಸ್ಯೆ (ನ.೪) ರಂದು ಕಬ್ಜಾದಾರನ ಹೆಂಡತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನಂತೆ. ಆಗ ಕಬ್ಜಾದಾರನ ಹೆಂಡತಿ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುವುದಾಗಿ ಹೇಳಿದ್ದು, ಸಂತೋಷನೂ ದೂರು ಕೊಡುವುದಾಗಿ ಹೇಳಿ ಗದಗ ಶಹರ ಪೊಲೀಸ್ ಠಾಣೆಗೆ ಹೋಗಿದ್ದಾನೆ.

ಆಗ ಪೊಲೀಸರು, ನಿಂದೇ ತಪ್ಪು, ಪದೇ ಪದೇ ತಾಯಿ ಜೊತೆಗೆ ಜಗಳ ಮಾಡ್ತೀಯಾ, ಕಬ್ಜಾದಾರರ ಜೊತೆಗೂ ಕಿರಿಕಿರಿ ಮಾಡ್ತಿಯಾ ಅಂತ ವರಸೆ ತೋರಿಸಿದ್ದಾರೆ. ಆಗ ಆತ ಠಾಣೆಯ ಆವರಣದಲ್ಲಿ ಕುಸಿದು ಬಿದ್ದಿದ್ದಾನೆ. ತಕ್ಷಣ ಗಾಬರಿ ಬಿದ್ದ ಪೊಲೀಸರು ಜಿಮ್ಸ್ ಗೆ ಕರೆದೊಯ್ದಿದ್ದಾರೆ. ಆಗ ವೈದ್ಯರು, ಮೃತಪಟ್ಟ ಬಗ್ಗೆ ಖಚಿತ ಪಡಿಸಿದ್ದಾರೆ. ಆಗ ಪೊಲೀಸರ ಜಂಛಾಬಲವೇ ಉಡುಗಿಹೋಗಿದೆ.

ಠಾಣೆಗೆ ಬಂದದ್ದು ಎಷ್ಟು ಹೊತ್ತಿಗೆ?:

ಕೆಲವು ಮೂಲಗಳು ಹೇಳುವ ಅಂದು ಸಂಜೆ 6.40 ಗಂಟೆಗೆ ಸಂತೋಷ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಆದರೆ, ದೂರು ಕೊಡುವುದಾಗಿ ಸಂತೋಷ ಶಹರ ಪೊಲೀಸ್ ಠಾಣೆಗೆ ಬಂದಿದ್ದು ಎಷ್ಟೊತ್ತಿಗೆ? 6.40ಕ್ಕೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾನೆ ಎಂದಾದರೆ, ಸಂತೋಷನಿಗೆ ಎದೆನೋವು ಕಾಣಿಸಿಕೊಂಡಿದ್ದು ಯಾವಾಗ? ಎಂಬ ಬಗ್ಗೆ ಮಾಹಿತಿ ಇಲ್ಲ.

ಅನುಮಾನ ಹುಟ್ಟಿಸಿದ ಎಸ್‌ಪಿ ಹೇಳಿಕೆ

ಕೆಲ ಪೊಲೀಸ್ ಮೂಲಗಳ ಪ್ರಕಾರ ಸಂತೋಷ ಎದೆನೋವು ಕಾಣಿಸಿಕೊಂಡು ಸಾವನ್ನಪ್ಪಿದ್ದಾನೆ ಎಂಬುದಾಗಿದೆ. ಆದರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರ ಹೇಳಿಕೆಯು ಕೆಲವು ಅನುಮಾನ ಹುಟ್ಟಿಸಿದೆ. ಅವರು ಹೇಳಿದ್ದು ಹೀಗಿದೆ.

‘ಮೃತ ಸಂತೋಷನು ದೂರು ನೀಡಲು ಪೊಲೀಸ್ ಠಾಣೆಗೆ ಬಂದಾಗ ಮೂರ್ಛೆರೋಗ(ಪಿಟ್ಸ್) ಬಂದಿದೆ. ಅದನ್ನು ಲಾಕಪ್ ಡೆತ್ ಅನ್ನೋದಿಲ್ಲ. ಕಾನೂನು ಪ್ರಕಾರ ಪೊಲೀಸರ ಕಸ್ಟಡಿಯಲ್ಲಿದ್ದಾಗ ಸಾವನ್ನಪ್ಪಿದರೆ ಅದು ಲಾಕಪ್ ಡೆತ್ ಅಂತಾರೆ. ಪಿಟ್ಸ್ ಆಗಿದೆ ನಮ್ಮವರೇ(ಪೊಲೀಸರು) ಆಸ್ಪತ್ರೆಗೆ ಸೇರಿಸಿದ್ದರು. ಕಾರ್ಡಿಯಾಕ್ ಆರೆಸ್ಟ್ ಆಗಿದೆ ಎಂದು ‘ವಿಜಯಸಾಕ್ಷಿಗೆ ತಿಳಿಸಿದ್ದಾರೆ. ಒಟ್ಟಿನಲ್ಲಿ ಸಂತೋಷನ ಸಾವಿನ ಸುತ್ತ ಅನುಮಾನದ ಹುತ್ತ ಕಾಡುತ್ತಿದೆ.

ಕುಟುಂಬ ಕಲಹ; ಮೂರು ತಿಂಗಳ ಕಂದಮ್ಮ, ಪತ್ನಿ‌ ಕೊಲೆಗೈದು ನೇಣಿಗೆ ಶರಣಾದ ಪತಿ?

ವಿಜಯಸಾಕ್ಷಿ ಸುದ್ದಿ, ಗದಗ:

ಮೂರು ತಿಂಗಳ ಹೆಣ್ಣು ಮಗು ಹಾಗೂ ಪತ್ನಿ ಕೊಲೆಗೈದು ಪತಿ ಮಹಾಶಯನೊಬ್ಬ ನೇಣಿಗೆ ಶರಣಾದ ಮನ ಕಲುಕುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡ ಗ್ರಾಮದ ತೋಟದ ಮನೆಯಲ್ಲಿ ಈ ದುರ್ಘಟನೆ ನಡೆದಿದೆ.

ಮೂರು ತಿಂಗಳದ ಕಂದಮ್ಮ ರೂಪಶ್ರೀ, ಪತ್ನಿ ಸುಧಾ, ಪತಿ ಮಲ್ಲಪ್ಪ ಗಡಾದ ಮೃತಪಟ್ಟವರು.

ನಾಗೇಂದ್ರಗಡ ಗ್ರಾಮದ ಹೊರವಲಯದಲ್ಲಿರುವ ಜಮೀನನಲ್ಲಿ ಇರುವ ಮನೆಯಲ್ಲಿ ವಾಸವಾಗಿದ್ದರು.

ಮೃತ ಮಲ್ಲಪ್ಪ ಗಡಾದ ಮನೆಯ ಹಾಲ್ ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಮಲ್ಲಪ್ಪನ ಪತ್ನಿ ಸುಧಾ ಹಾಗೂ ಮಗಳು ರೂಪಶ್ರೀ ಮತ್ತೊಂದು ರೂಮಿನಲ್ಲಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಘಟನಾ ಸ್ಥಳಕ್ಕೆ ರೋಣ ಸಿಪಿಐ ಸುಧೀರಕುಮಾರ್ ಬೆಂಕಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ‌ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಈ ಘಟನೆಗೆ ಕುಟುಂಬ ಕಲಹ ಕಾರಣವಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಟೈರ್ ಸ್ಫೋಟ; ಪ್ರಯಾಣಿಕರ ಪ್ರಾಣ ಉಳಿಸಿದ ಬಸ್ ಚಾಲಕ

ವಿಜಯಸಾಕ್ಷಿ ಸುದ್ದಿ, ಗದಗ;

ಟೈರ್ ಸ್ಫೋಟಗೊಂಡ ಪರಿಣಾಮ ಕೆಎಸ್‌ಆರ್‌ಟಿಸಿ ಬಸ್‌ವೊಂದು ರಸ್ತೆಯ ಬದಿಗೆ ವಾಲಿದ್ದು, ಓರ್ವ ವಿದ್ಯಾರ್ಥಿನಿ ಸೇರಿ ಹಲವರಿಗೆ ಗಾಯಗಳಾಗಿರುವ ಘಟನೆ ತಾಲೂಕಿನ ಹಿರೇಕೊಪ್ಪ ಗ್ರಾಮದ ಬಳಿ ನಡೆದಿದೆ.

ಗದಗದಿಂದ ಅರಹುಣಸಿ ಗ್ರಾಮಕ್ಕೆ ತೆರುಳುತ್ತಿದ್ದ ಬಸ್ ಹಿರೇಕೊಪ್ಪ ಗ್ರಾಮದ ಬಳಿ ಹೋಗುತ್ತಿದ್ದಂತೆ ದಿಢೀರನೇ ಟೈರ್ ಸ್ಪೋಟಗೊಂಡಿದೆ. ಇದರಿಂದ ಬಸ್ ನಿಯಂತ್ರಣ ತಪ್ಪಿದರೂ ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಚಾಲಕ ಬಸ್ ನಿಲುಗಡೆ ಮಾಡಲು ರಭಸವಾಗಿ ಹಾಕಿದ ಬ್ರೇಕ್‌ನಿಂದ ಬಸ್‌ನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರು ಆಂಬ್ಯುಲೆನ್ಸ್ ಮೂಲಕ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಗದಗನ ಜಿಮ್ಸ್ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ. ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕ್ರಷರ್‌ಗಳಲ್ಲಿ ನಿಯಮ ಮೀರಿ ಬ್ಲಾಸ್ಟಿಂಗ್, ಮನೆಗಳ ಗೋಡೆ ಬಿರುಕು: ಸ್ಥಳೀಯರಿಂದ ಎಸ್‌ಪಿಗೆ ದೂರು

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ:

‘ಪಟ್ಟಣದ ಸುತ್ತಮುತ್ತಲಿನ ಕ್ರಷರ್‌ಗಳಲ್ಲಿ ನಿಯಮ ಮೀರಿ ಬ್ಲಾಸ್ಟಿಂಗ್ ಮಾಡಲಾಗುತ್ತಿದ್ದು, ಇದರಿಂದ ಮನೆಗಳ ಗೋಡೆಗಳು ಬಿರುಕು ಬಿಡುತ್ತಿವೆ ಎಂದು ಇಲ್ಲಿನ ಸ್ಥಳೀಯರು ಆರೋಪಿಸಿದರು.

ಮಂಗಳವಾರ ಶಿರಹಟ್ಟಿ ಪೊಲೀಸ್ ಠಾಣೆಗೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಭೇಟಿ ನೀಡಿ ಪರಿಶೀಲಿಸಿದ ಬಳಿಕ ನಡೆದ ಸಾರ್ವಜನಿಕರ ಸಭೆಯಲ್ಲಿ ಅವರು ದೂರಿದರು.

ಪಟ್ಟಣದ ವಿದ್ಯಾನಗರ ಭಾಗದಲ್ಲಿ ಬರುವ ಕ್ರಷರ್‌ಗಳಲ್ಲಿ ಅಕ್ರಮವಾಗಿ ಬ್ಲಾಸ್ಟಿಂಗ್ ಮಾಡುತ್ತಿದ್ದಾರೆ. ಈ ವೇಳೆ ಭಾರೀ ಪ್ರಮಾಣದಲ್ಲಿ ಸದ್ದು ಆಗುತ್ತಿದ್ದು, ಕ್ರಮೇಣ ಮನೆಯ ಗೋಡೆಗಳು ಬಿರುಕು ಬಿಡುತ್ತಿವೆ. ಇದರಿಂದ ನಿತ್ಯವೂ ಕಿರಿಕಿರಿಯುಂಟಾಗುತ್ತಿದೆ. ಅಲ್ಲದೇ, ಕ್ರಷರ್‌ಗಳಿಂದ ಮಿತಿಮೀರಿ ಜಲ್ಲಿ, ಎಂಸ್ಯಾಂಡ್ ಸಾಗಿಸುವ ಟಿಪ್ಪರ್‌ಗಳ ಹಾವಳಿ ಹೇಳತೀರದಾಗಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವ ಮೂಲಕ ಅಕ್ರಮಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ ಶಿವಪ್ರಕಾಶ್ ದೇವರಾಜು ಅವರು ‘ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸ್ಥಳೀಯ ಮಟ್ಟದ ಮುಖಂಡರು ಇನ್ನು ಮುಂದೆ ವಿವಿಧ ಅಪರಾಧ ಪ್ರಕರಣಗಳ ರಾಜಿ ಸಂಧಾನ ನಡೆಸುವುದು ಬೇಡ. ಪ್ರತಿ ಪ್ರಕರಣಗಳನ್ನು ಸ್ವತಃ ನಾವೇ ಇತ್ಯರ್ಥ ಪಡಿಸುತ್ತೇವೆ. ಇದಕ್ಕೆ ತಾವೆಲ್ಲರೂ ಸಹಕರಿಸಬೇಕು. ಪ್ರಕರಣಗಳಲ್ಲಿ ರಾಜಿ ಸಂಧಾನ ಮಾಡುವುದರಿಂದ ಅಪರಾಧಗಳಲ್ಲಿ ಭಾಗಿಯಾದವರು ಕೆಲವೇ ದಿನಗಳಲ್ಲಿ ತಮ್ಮ ಹಳೆಯ ಪ್ರವೃತ್ತಿಯನ್ನೇ ಮುಂದುವರಿಸುತ್ತಾರೆ. ಅಲ್ಲದೇ, ರಾಜಿ ಸಂಧಾನ ಮಾಡಿಸಿದವರ ಮಾತನ್ನೂ ಕೇಳುವುದಿಲ್ಲ.

ಹೀಗಾಗಿ ಇಂತಹ ಪ್ರಕ್ರಿಯೆಯನ್ನು ಕೈಬಿಡಬೇಕು. ಪ್ರತಿ ಹಳ್ಳಿಗೂ ಸಹ ಪೊಲೀಸ್ ಸಿಬ್ಬಂದಿ ಗಸ್ತು ಮಾಡಬೇಕು. ಗ್ರಾಮಗಳಲ್ಲಿ ಏನಾದರೂ ಸಮಸ್ಯೆಗಳಿದ್ದಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ಸಂಪರ್ಕಿಸಬೇಕು ಎಂದು ಎಸ್‌ಪಿ ಶಿವಪ್ರಕಾಶ್ ದೇವರಾಜು ಹೇಳಿದರು. ಈ ಸಂದರ್ಭದಲ್ಲಿ ಡಿ ಎಸ್ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ವಿಕಾಸ ಲಮಾಣಿ, ಪಿಎಸ್ಐ ನವೀನ ಜಕ್ಕಲಿ ಇದ್ದರು.

ಸಭೆಯಲ್ಲಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಫಕ್ಕೀರೇಶ ರಟ್ಟಿಹಳ್ಳಿ, ಮಾಬುಸಾಬ್ ಲಕ್ಷ್ಮೇಶ್ವರ, ಯಲ್ಲಪ್ಪಗೌಡ ಪಾಟೀಲ್, ಚಾಂದಸಾಬ ಮುಳಗುಂದ, ಬಸವಣ್ಣೆಪ್ಪ ತುಳಿ, ಬಸವರಾಜ ವಡವಿ, ಮುತ್ತುರಾಜ್ ಬಾವಿಮನಿ, ಯಲ್ಲಪ್ಪ ಇಂಗಳಗಿ, ಪರಶುರಾಮ ಡೊಂಕಬಳ್ಳಿ ಉಪಸ್ಥಿತರಿದ್ದರು.

error: Content is protected !!