Home Blog Page 3287

ಚರಂಡಿ, ರಸ್ತೆ ಸ್ವಚ್ಛವಾಗಿಲ್ಲ ಎಂದು ಈ ಶಾಸಕ ಮಾಡಿದ್ದೇನು?

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಮೋರಿ ಕ್ಲೀನ್ ಆಗಿಲ್ಲ ಎಂಬ ಕಾರಣಕ್ಕೆ ಸಿಟ್ಟಾದ ಶಾಸಕರೊಬ್ಬರು ಕಂಟ್ರಾಕ್ಟರ್ ಮೇಲೆ ಕಸದ ರಾಶಿಯನ್ನೇ ಸುರಿವಿದ ಘಟನೆ ನಗರದಲ್ಲಿ ನಡೆದಿದೆ. ಚರಂಡಿಗಳನ್ನು ಸರಿಯಾಗಿ ಸ್ವಚ್ಛ ಮಾಡಿಲ್ಲ ಎಂದು ಶಿವಸೇನಾ ಶಾಸಕರೇ ಕಂಟ್ರಾಕ್ಟರ್ ಮೇಲೆ ಕಸದ ರಾಶಿ ಸುರಿವಿದ್ದಾರೆ. ಕಸದ ರಾಶಿ ಸುರುವಂತೆ ಜನರಿಗೆ ಹೇಳಿದ್ದಾರೆ. ಚರಂಡಿಗಳನ್ನು ಸರಿಯಾಗಿ ಸ್ವಚ್ಛ ಮಾಡಿಲ್ಲ ಎಂದು ಶಾಸಕರು ಗುತ್ತಿಗೆದಾರರಿಗೆ ಈ ಶಿಕ್ಷೆ ನೀಡಿ ಸುದ್ದಿಯಾಗಿದ್ದಾರೆ.

ಕಂಡಿವಲಿ ಕ್ಷೇತ್ರದ ಶಿವಸೇನಾ ಶಾಸಕ ದಿಲೀಪ್ ಲ್ಯಾಂಡೆ, ಈ ರೀತಿ ಮಾಡಿದವರು. ನೀರು ತುಂಬಿರುವ ರಸ್ತೆಯಲ್ಲಿ ಕುಳಿತುಕೊಳ್ಳಲು ಗುತ್ತಿಗೆದಾರರಿಗೆ ಹೇಳಿದ್ದಾರೆ. ನಂತರ ಕಸವನ್ನು ಆ ಗುತ್ತಿಗೆದಾರನ ಮೇಲೆ ಸುರಿಯುವಂತೆ ಹೇಳಿದ್ದಾರೆ. ಕಂಟ್ರಾಕ್ಟರ್ ಸರಿಯಾಗಿ ತನ್ನ ಕಾರ್ಯ ನಿರ್ವಹಿಸಿಲ್ಲ. ಹೀಗಾಗಿ ಆತನಿಗೆ ಶಿಕ್ಷೆ ನೀಡಲಾಯಿತು ಎಂದು ಶಾಸಕ ದಿಲೀಪ್ ಲ್ಯಾಂಡೆ ಹೇಳಿದ್ದಾರೆ.

ರಸ್ತೆ ಅಪಘಾತದಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿ ಖ್ಯಾತ ನಟ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಸ್ತೆ ಅಪಘಾತದಲ್ಲಿ ನಟ ಸಂಚಾರಿ ವಿಜಯ್ ಗಾಯಗೊಂಡಿದ್ದಾರೆ. ಹೀಗಾಗಿ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರಿ ವಿಜಯ್, ಬೈಕ್ ನಲ್ಲಿ ಸ್ನೇಹಿತರ ಜೊತೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ವಿಜಯ್, ಮೆದುಳಿನ ಬಲಭಾಗ ಹಾಗೂ ಬಲ ತೊಡೆಗೆ ಗಂಭೀರ ಗಾಯಗಳಾಗಿವೆ. ಅಪಘಾತದ ತೀವ್ರತೆಗೆ ತೊಡೆಯ ಭಾಗ ಮುರಿದು, ತೀವ್ರ ರಕ್ತಸ್ರಾವವಾಗಿದೆ. ಆರೋಗ್ಯ ಚಿಂತಾಜನಕವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸಂಚಾರಿ ವಿಜಯ್ ನಾನು ಅವಳಲ್ಲ ಸಿನಿಮಾ ನಟನೆಗೆ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ನಾತಿಚರಾಮಿ, ಜಂಟಲ್ಮೆಶನ್, ಆಕ್ಟ್ 1978, ಕೃಷ್ಣ ತುಳಸಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಲಸಿಕೆ ಹಾಕಿಸಿಕೊಂಡವರಿಗೆ ಉಚಿತ ಅಕ್ಕಿ!

ವಿಜಯಸಾಕ್ಷಿ ಸುದ್ದಿ, ಅರುಣಾಚಲ ಪ್ರದೇಶ

ಜನರಿಗೆ ಕೊರೊನಾ ಲಸಿಕೆ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದರೂ ಲಸಿಕೆ ಹಾಕಿಕೊಳ್ಳಲು ಮಾತ್ರ ಮುಂದಾಗುತ್ತಿಲ್ಲ. ಹಲವು ಆತಂಕ ಹಾಗೂ ಭಯದಿಂದ ಲಸಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ಹೀಗಾಗಿ ಜನರನ್ನು ಸೆಳೆಯಲು ಹಲವೆಡೆ ಹಲವು ರೀತಿಯ ಪ್ರಯತ್ನಗಳು ನಡೆಯುತ್ತಲೇ ಇವೆ. ಹೀಗಾಗಿ ಅಕ್ಕಿ ಆಫರ್ ನೀಡಿ ಜನರಿಗೆ ಲಸಿಕೆ ಹಾಕಿಸುವ ಪ್ರಯತ್ನ ಅರುಣಾಚಲ ಪ್ರದೇಶದಲ್ಲಿ ನಡೆದಿದೆ.

ಅರುಣಾಚಲಪ್ರದೇಶದಲ್ಲಿ ಲಸಿಕೆ ಪಡೆದವರಿಗೆ 20 ಕೆಜಿ ಉಚಿತ ಅಕ್ಕಿ ಆಫರ್ ನೀಡಲಾಗಿದೆ. ಇಂದರಿಂದಾಗಿ ಆರಂಭದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದ ಜನರು, ಸಾಲುಗಟ್ಟಿ ಬಂದು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಅರುಣಾಚಲ ಪ್ರದೇಶದ ಸುಬನ್ಸಿರಿ ಜಿಲ್ಲೆಯ ಯಜಾಲಿಯ ವೃತ್ತಾಧಿಕಾರಿ ತಾಶಿ ವಾಂಗ್ ಚುಕ್ ಥೋಂಗ್ಡಾಕ್ ಎಂಬುವವರೇ ಜನರಿಗೆ ಅಕ್ಕಿ ಆಫರ್ ನೀಡಿದವರು. ಅವರು ಲಸಿಕೆ ಹಾಕಿಸಿಕೊಳ್ಳುವುದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ಇವರು 45 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಂಡರೆ, ಉಚಿತ ಅಕ್ಕಿ ನೀಡುವುದಾಗಿ ಘೋಷಿಸಿದ್ದಾರೆ. ಇದರಿಂದಾಗಿ, 80ಕ್ಕೂ ಹೆಚ್ಚು ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ.

ಈ ಭಾಗದಲ್ಲಿ ಲಸಿಕೆಯ ಕುರಿತು ಹಲವು ಕಿಡಿಗೇಡಿಗಳು ವದಂತಿಗಳನ್ನು ಹರಡಿದ್ದರು. ಹೀಗಾಗಿ ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಈ ಜನರಲ್ಲಿನ ಭಯ ದೂರವಾಗಿಸುವ ನಿಟ್ಟಿನಲ್ಲಿ ತಾಶಿವಾಂಗ್ ಅವರು ಲಸಿಕೆ ಹಾಕಿಸಿಕೊಂಡವರಿಗೆ 20 ಕೆಜಿ ಉಚಿತ ಅಕ್ಕಿ ನೀಡುವುದಾಗಿ ಘೋಷಿಸಿದ್ದರು. ಇದನ್ನು ಕೇಳಿದ್ದೆ ತಡ, ಜನರು ಸಾಲಲ್ಲಿ ನಿಂತು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.

ಮಹಾಮಾರಿಗೆ ಬಲಿಯಾದ ಲಕ್ಷ್ಮೀ, ಶಾಂತಲಾ! ಏಕಾಂಗಿಯಾಯಿತೆ ಗಾಯತ್ರಿ?

ವಿಜಯಸಾಕ್ಷಿ ಸುದ್ದಿ, ಮೈಸೂರು

ಕೊರೊನಾ ಮಹಾಮಾರಿ ಬಡವರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ. ಹಲವು ಕುಟುಂಬಗಳು ತಂದೆ – ತಾಯಿ ಕಳೆದುಕೊಂಡು ತಬ್ಬಲಿಯಾಗಿದ್ದಾರೆ.
ಸದ್ಯ ಇದರ ಹೊಡೆತಕ್ಕೆ ಹಲವಾರು ಉದ್ಯಮಗಳು ಕೂಡ ಬಂದ್ ಆಗಿವೆ. ಹಲವಾರು ಕುಟಂಬಗಳಿಗೆ ಅನ್ನದ ಹಾದಿ ಬಂದ್ ಆಗುತ್ತಿವೆ. ಸದ್ಯ ಈ ಸಾಲಿಗೆ ಇಲ್ಲಿಯವರೆಗೂ ಜನರಿಗೆ ಮನರಂಜನೆ ನೀಡುತ್ತಿದ್ದ ನಗರದಲ್ಲಿನ ಲಕ್ಷ್ಮೀ ಟಾಕೀಸ್ ಬಂದ್ ಆಗಿದೆ.

ಇತ್ತೀಚೆಗಷ್ಟೇ ನಗರದಲ್ಲಿನ ಶಾಂತಲಾ ಟಾಕೀಸ್ ನಷ್ಟದಿಂದ ಬಂದ್ ಆಗಿತ್ತು. ಈಗ ಈ ಸಾಲಿಗೆ ಲಕ್ಷ್ಮೀ ಟಾಕೀಸ್ ಸೇರಿದೆ. ಹೀಗಾಗಿ ಗಾಯತ್ರಿ ಟಾಕೀಸ್ ಒಂದೇ ಜನರಿಗೆ ಮನರಂಜನೆ ನೀಡುವ ಉದ್ಧೇಶದಿಂದ ಉಳಿದಿದೆ.

ಈ ಮೂರು ಚಿತ್ರಮಂದಿರಗಳು ತ್ರಿನೇತ್ರಿಗಳಂತೆ ಇದ್ದವು. ಒಂದೇ ರಸ್ತೆಯಲ್ಲಿ ಈ ಮೂರು ಚಿತ್ರಮಂದಿರಗಳು ಇದ್ದವು. ಹೀಗಾಗಿ ಇಲ್ಲಿಯ ಜನ ಇವುಗಳನ್ನು ಒಂದೇ ರಸ್ತೆಯಲ್ಲಿನ ಕುವರಿಯರು ಎಂದೇ ಕರೆಯುತ್ತಿದ್ದರು. ಆದರೆ, ಹಲವು ವರ್ಷಗಳಿಂದ ಜನರಿಗೆ ಮನರಂಜನೆ ನೀಡುತ್ತಿದ್ದ ಇವು ಬಂದ್ ಆಗಿವೆ. ನಷ್ಟಕ್ಕೆ ತುತ್ತಾಗಿ ಮಾಲೀಕರು ಇವುಗಳನ್ನು ಬಂದ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.

ಕುದುರೆ ಜೊತೆ ರೇಸ್ ಮಾಡಿದ ಧೋನಿ?

ವಿಜಯಸಾಕ್ಷಿ ಸುದ್ದಿ, ರಾಂಚಿ

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೈದಾನದಲ್ಲಿ ರನ್ ಕದಿಯಲು ಓಡುತ್ತಿದ್ದರೆ, ಎದುರಿಗಿರುವ ಇನ್ನೊಬ್ಬ ಆಟಗಾರ ಸುಸ್ತಾಗಿ ಹೋಗುವುದು ಶತಸಿದ್ಧ ಎಂದೇ ಎಲ್ಲರೂ ಹೇಳುತ್ತಿದ್ದರು. ಈ ಕುದುರೆ ವೇಗಿ ಈಗ ಕುದುರೆಯೊಂದಿಗೆ ರೇಸ್ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ನಂತರ ಧೋನಿ ಸದ್ಯ ಐಪಿಎಲ್ ನಲ್ಲಿ ಮಾತ್ರ ಆಡುತ್ತಿದ್ದಾರೆ.

ಐಪಿಎಲ್ ಕೊರೊನಾದಿಂದಾಗಿ ಮುಂದೂಡಲ್ಪಟ್ಟಿದ್ದರಿಂದಾಗಿ ಧೋನಿ ಸದ್ಯ ತಮ್ಮ ಕುಟುಂಬದೊಂದಿಗೆ ರಾಂಚಿಯಲ್ಲಿರುವ ಫಾರ್ಮ್ ಹೌಸ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ಫಾರ್ಮ್ ಹೌಸ್ ನಲ್ಲಿ ಇತ್ತೀಚೆಗಷ್ಟೇ ತಂದಿದ್ದ ಬಿಳಿ ವರ್ಣದ ಕುದುರೆಯೊಂದಿಗೆ ಧೋನಿ ರೇಸ್‍ ಗೆ ಇಳಿದಿದ್ದಾರೆ. ಈ ರೇಸ್ನನ ವೀಡಿಯೋ ಒಂದನ್ನು ಪತ್ನಿ ಸಾಕ್ಷಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಧೋನಿ ಕುದುರೆಯೊಂದಿಗೆ ವೇಗವಾಗಿ ಓಡುತ್ತಿದ್ದಾರೆ. ಆದರೆ, ಧೋನಿಯನ್ನು ಕುದುರೆ ರೇಸ್ ನಲ್ಲಿ ಸೋಲಿಸಿದೆ. ಧೋನಿಯನ್ನು ಇಲ್ಲಿ ಕುದುರೆ ಬೆವರಿಳಿಸಿದೆ. ಕೆಳದಿನಗಳ ಹಿಂದೆ ಧೋನಿ ಚೇತಕ್ ಹಾಗೂ ಲಿಲ್ಲಿ ಎಂಬ ಹೆಸರಿನ ಎರಡು ಕುದುರೆಗಳನ್ನು ಖರೀದಿಸಿದ್ದರು. ಕುದುರೆಯೊಂದಿಗಿನ ಫೋಟೋವನ್ನು ಸಾಕ್ಷಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಮೈದಾನದಲ್ಲಿ ಕುಸಿದು ಬಿದ್ದ ಡು ಪ್ಲೆಸಿಸ್!

ವಿಜಯಸಾಕ್ಷಿ ಸುದ್ದಿ, ಯುಎಇ

ಮಹಾಮಾರಿಯಿಂದಾಗಿ 2021ರ ಪಾಕಿಸ್ತಾನ್ ಲೀಗ್ ಟೂರ್ನಿ ಕೂಡ ಅರ್ಧಕ್ಕೆ ನಿಂತಿತ್ತು. ಸದ್ಯ ಈ ಟೂರ್ನಿ ಜೂ. 9ರಿಂದ ಯುಎಇಯಲ್ಲಿ ಆರಂಭವಾಗಿದೆ. ಈ ಲೀಗ್ ನಲ್ಲಿ ಸೌತ್ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಕೂಡ ಭಾಗವಹಿಸಿದ್ದಾರೆ. ಅವರು ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಪರ ಆಡುತ್ತಿದ್ದಾರೆ.

ಶನಿವಾರ ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ಪೇಶಾವರ್ ಜಲ್ಮಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಫಾಫ್ ಡು ಪ್ಲೆಸಿಸ್ ತೀವ್ರವಾಗಿ ಗಾಯಗೊಂಡಿದ್ದಾರೆ. ತಂಡದ ಏಳನೇ ಓವರ್‌ ವೇಳೆ ಬೌಂಡರಿ ಗೆರೆಯಲ್ಲಿ ನಿಂತ ಸಂದರ್ಭದಲ್ಲಿ ಬೌಲ್ ತಡೆಯುವ ಪ್ರಯತ್ನದಲ್ಲಿದ್ದ ಫಾಫ್ ಡು ಪ್ಲೆಸಿಸ್ ತಲೆಗೆ ತಂಡದ ಸಹ ಆಟಗಾರ ಮೊಹಮ್ಮದ್ ಹಸ್ನೈನ್ ಕಾಲು ಬಲವಾಗಿ ಬಡಿದಿದೆ.

ಇಬ್ಬರೂ ಸೇರಿ ಒಟ್ಟಾಗಿ ಬೌಂಡರಿ ತಡೆಯುವ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಡು ಪ್ಲೆಸಿಸ್ ತೀವ್ರ ಗಾಯಕ್ಕೊಳಗಾಗಿದ್ದಾರೆ ಎನ್ನಲಾಗಿದೆ. ಕೂಡಲೇ ಮೈದಾನದಲ್ಲಿಯೇ ಕುಸಿದು ಬಿದ್ದಿದ್ದಾರೆ. ಅಬುಧಾಬಿಯ ಆಸ್ಪತ್ರೆಯೊಂದಕ್ಕೆ ಅವರನ್ನು ಕೂಡಲೇ ಸಾಗಿಸಲಾಯಿತು ಎಂದು ಪಾಕ್ ನ ಮಾಧ್ಯಮಗಳು ವರದಿ ಮಾಡಿವೆ.

ಕಾಮಗಾರಿ ಮಾಹಿತಿ ಕೇಳಿದ ಯುವಕನ ಮೇಲೆ ಹಲ್ಲೆ ಮಾಡಿದ ಗ್ರಾ. ಪಂ. ಸದಸ್ಯ

ವಿಜಯಸಾಕ್ಷಿ ಸುದ್ದಿ, ಗದಗ

ಗ್ರಾಮ ಪಂಚಾಯತಿ ವತಿಯಿಂದ ಕೈಗೊಂಡಿದ್ದ ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆ ಮಾಡಿದ ಯುವಕನ ಮೇಲೆ, ಬಿಡಿಸಲು ಬಂದ ಅವನ ತಾಯಿಯ ಮೇಲೂ ಗ್ರಾಮ ಪಂಚಾಯತಿ ಸದಸ್ಯನೊಬ್ಬ ತನ್ನ ಸಹಚರರೊಂದಿಗೆ ಸೇರಿ ಹಲ್ಲೆ ಮಾಡಿದ ಘಟನೆ ನಡೆದಿದೆ.

ಗದಗ ತಾಲೂಕಿನ ಅಂತೂರ- ಬೆಂತೂರ ಗ್ರಾಮದಲ್ಲಿ ನಡೆದಿರುವ ಕಾಮಗಾರಿಯ ಬಗ್ಗೆ ಗ್ರಾಮದ ನೀಲಪ್ಪ ಹನಮಂತಪ್ಪ ಕಟಗಿ ಎಂಬಾತ ಮಾಹಿತಿ ಕೇಳಿದ್ದ. ಇದರಿಂದ ಸಿಟ್ಟಾದ ಗ್ರಾಮ ಪಂಚಾಯತಿ ಸದಸ್ಯ ಚನ್ನಬಸಪ್ಪ ಬಸಪ್ಪ ಪತ್ತಾರ ಎಂಬುವವರು ತನ್ನ ಸಹಚರರಾದ ಮುತ್ತಪ್ಪ ವೆಂಕಣ್ಣ ಜಿನಗಿ, ಶಿವಪ್ಪ ದೇವಪ್ಪ ಕೋಳಿವಾಡ ಹಾಗೂ ಮುತ್ತಣ್ಣ ಉಡಚಪ್ಪ ಹಡಗಲಿ ಎಂಬುವವರನ್ನು ಕರೆದುಕೊಂಡು ಫಿರ್ಯಾದಿ ನೀಲಪ್ಪ ಹನಮಂತಪ್ಪ ಕಟಗಿಗೆ ಅವಾಚ್ಯ ಶಬ್ದಗಳಿಂದ ‌ನಿಂದಿಸಿ ಹಲ್ಲೆ ಮಾಡಿದ್ದಾರೆ. ಬಿಡಿಸಲು ಬಂದ ನೀಲಪ್ಪನ ತಾಯಿಯ ಮೇಲೂ ಹಲ್ಲೆ ಮಾಡಿದ್ದಾರೆ.

ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಣ ಒತ್ತೆಯಾಗಿಟ್ಟುಕೊಂಡು ಹಣ ದೋಚಲು ಮುಂದಾದ ಆಸ್ಪತ್ರೆ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮಹಾಮಾರಿಯಿಂದ ನಿಧನ ಹೊಂದಿದ ರೋಗಿಯ ಮೃತದೇಹವನ್ನೇ ಒತ್ತೆಯಾಗಿಟ್ಟುಕೊಂಡು ರೂ. 1.30 ಲಕ್ಷ ಚಿಕಿತ್ಸಾ ಶುಲ್ಕ ಪಾವತಿಸುವಂತೆ ಇಲ್ಲಿಯ ಖಾಸಗಿ ಆಸ್ಪತ್ರೆ ಪಟ್ಟು ಹಿಡಿದಿದ್ದು, ಹಣ ಪಾವತಿಸಲು ಆಗದೆ ಕುಟುಂಬಸ್ಥರು ಒದ್ದಾಡಿರುವ ಘಟನೆ ಬೆಳಕಿಗೆ ಬಂದಿದೆ.

ಮೇ. 19 ರಂದು ನಾಗವಾರದ ಕುಪ್ಪುಸ್ವಾಮಿ ಲೇಔಟ್ ನಿವಾಸಿಯಾಗಿದ್ದ 70 ವರ್ಷದ ಮಖ್ಬೂಲ್ ಜಾನ್ ಎಂಬ ವೃದ್ಧೆಗೆ ಸೋಂಕು ಅಂಟಿಕೊಂಡಿತ್ತು. ಹೀಗಾಗಿ ಅವರನ್ನು ಇಲ್ಲಿಯ ಭಗವಾನ್ ಮಹವೀರ್ ಜೈನ್ ಆಸ್ಪತ್ರೆಗೆ ಸರ್ಕಾರ ನೀಡಿರುವ ಮೀಸಲಾತಿ ಅಡಿಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.
ಆದರೆ, ವೃದ್ದೆಗೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಹೀಗಾಗಿ ಅವರು ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದಾರೆ.

ಬಿಲ್ ಪಾವತಿ ಮಾಡದಿದ್ದರೂ ಮೃತದೇಹಗಳನ್ನು ಆಸ್ಪತ್ರೆ ಇಟ್ಟುಕೊಳ್ಳಬಾರದು ಎಂದು ಸರ್ಕಾರ ತಿಳಿಸಿದ್ದರೂ ಆಸ್ಪತ್ರೆ ಮಾತ್ರ ಈ ಮೃತ ದೇಹ ಒತ್ತಾಯಾಗಿ ಇಟ್ಟುಕೊಂಡು ಬಿಲ್ ಪಾವತಿಸುವಂತೆ ಒತ್ತಾಯ ಮಾಡಿದೆ.

ಈ ವೃದ್ಧೆಗೆ ಚಿಕಿತ್ಸೆ ನೀಡಿದ್ದಕ್ಕೆ ಆಸ್ಪತ್ರೆ ಒಟ್ಟು ರೂ.3,67,753 ಬಿಲ್ ಮಾಡಿದೆ. ಇನ್ನಿತರ ಪರೀಕ್ಷೆ ಹಾಗೂ ರೋಗಿಗೆ ನೀಡಲಾಗಿರುವ ಕೆಲವು ಔಷಧಿಗಳು ಆಯುಷ್ಮಾನ್ ಭಾರತ್-ರಾಜ್ಯ ಆರೋಗ್ಯ ಯೋಜನೆಗಳ ಅಡಿಯಲ್ಲಿ ಬಾರದ ಹಿನ್ನೆಲೆಯಲ್ಲಿ ಇವುಗಳ ಬಿಲ್ ಮೊತ್ತವನ್ನು ರೂ. 1,30,253 ಮಾಡಿದೆ. ಮೃತ ವೃದ್ಧೆಯ ಪುತ್ರ ವಿಕಲಚೇತನರಾಗಿದ್ದು, ನಿರುದ್ಯೋಗಿಯಾಗಿದ್ದಾರೆ. ಬಡ ಕುಟುಂಬವಾಗಿದ್ದು, ಬಿಲ್ ಪಾವತಿಸಲಾಗದೆ ಸಂಕಷ್ಟಕ್ಕೆ ಈಡಾಗಿದ್ದರು. ಆ ನಂತರ ತುರ್ತು ಪ್ರತಿಕ್ರಿಯಾ ತಂಡ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಧ್ಯೆ ಪ್ರವೇಶಿಸಿದ್ದಾರೆ. ಬರೋಬ್ಬರಿ 5 ಗಂಟೆಗಳ ನಂತರ ಆಸ್ಪತ್ರೆಯವರು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

ಶಕೀಬ್ ಅಲ್ ಹಸನ್ ಗೆ ನಿಷೇಧ!

ವಿಜಯಸಾಕ್ಷಿ ಸುದ್ದಿ, ಢಾಕಾ

ಢಾಕಾ ಪ್ರಿಮಿಯರ್ ಲೀಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಮೈದಾನದಲ್ಲಿ ಅಂಪೈರ್ ಮುಂದೆ ದುರ್ವರ್ತನೆ ಪ್ರದರ್ಶಿಸಿದ್ದ ಬಾಂಗ್ಲಾದೇಶ ಆಲ್ ರೌಂಡರ್ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಗೆ ಶಿಕ್ಷೆ ವಿಧಿಸಲಾಗಿದೆ.
ಮೊಹಮ್ಮದಿನ್ ಸ್ಪೋರ್ಟಿಂಗ್ ತಂಡದ ನಾಯಕ ಶಕೀಬ್ ಅಲ್ ಹಸನ್ ಗೆ ನಾಲ್ಕು ಪಂದ್ಯಗಳ ನಿಷೇಧ ಹೇರಲಾಗಿದೆ. ಹೀಗಾಗಿ ಅವರು ಲೀಗ್ ನ ಎಂಟು, ಒಂಭತ್ತು, ಹತ್ತು ಮತ್ತು ಹನ್ನೊಂದನೆ ಹಂತದ ಪಂದ್ಯಗಳಲ್ಲಿ ಆಡುವಂತಿಲ್ಲ.

ಟೂರ್ನಿಯಲ್ಲಿ ಅಬಹಾನಿ ಲಿಮಿಟೆಡ್ ವಿರುದ್ಧ ಮೊಹಮ್ಮದಿನ್ ಸ್ಪೋರ್ಟಿಂಗ್ ತಂಡ ಡಕ್ವರ್ತ್-ಲೂಯಿಸ್ ವಿಧಾನದ ಮೂಲಕ ಗೆಲುವು ದಾಖಲಿಸಿತ್ತು. ಈ ಸಂದರ್ಭದಲ್ಲಿ ಶಕೀಬ್ ಆಕ್ರೋಶಭರಿತದ ವರ್ತನೆ ತೋರಿಸಿದ್ದರು. ಸ್ಟಂಪ್ ಗಳನ್ನು ಒದ್ದು, ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಅವರಿಗೆ ನಾಲ್ಲು ಪಂದ್ಯಗಳ ನಿಷೇಧ ಹೇರಲಾಗಿದೆ ಎಂದು ಬಾಂಗ್ಲಾದೇಶದ ಕ್ರಿಕೆಟ್ ಪೋರ್ಟಲ್ ಬಿಡಿ ಕ್ರಿಕ್ ಟೈಮ್ ವರದಿ ಮಾಡಿದೆ.

ಮುಶ್ಫಿಕೂರ್ ರಹೀಮ್ ಮನವಿಯನ್ನು ಅಂಪೈರ್ ತಿರಸ್ಕರಿಸಿದ್ದರಿಂದ ಕೋಪಗೊಂಡ ಶಕೀಬ್ ಮೊದಲಿಗೆ ಸ್ಟಂಪ್‌ಗೆ ಒದ್ದರು. ನಂತರ ಅಬಹಾನಿ ಇನ್ನಿಂಗ್ಸ್ ನ ಆರನೇ ಓವರ್‌ ವೇಳೆ ವಿರಾಮಕ್ಕೆ ಅಂಪೈರ್ ಗಳು ಕರೆ ನೀಡಿದ್ದರು. ಆಗ ಶಕೀಬ್ ಮೂರು ಸ್ಟಂಪ್‌ ಗಳನ್ನು ಕಿತ್ತು ಹಾಕಿ ದುರ್ವರ್ತನೆ ತೋರಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇದಕ್ಕೆ ಸಾರ್ವಜನಿಕರು ಹಾಗೂ ಶಕೀಬ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು.
ಕೂಡಲೇ ಘಟನೆ ಕುರಿತು ಟ್ವೀಟ್ ಮಾಡಿ ಶಕೀಬ್ ಕ್ಷಮೆಯಾಚಿಸಿದ್ದರು.

ಸಂಯಮ ಕಳೆದುಕೊಂಡು ಎಲ್ಲರಿಗೂ ಮತ್ತು ವಿಶೇಷವಾಗಿ ಮನೆಯಿಂದ ನೋಡುತ್ತಿರುವವರ ನೆಮ್ಮದಿ ಹಾಳು ಮಾಡಿದ್ದಕ್ಕೆ ನಾನು ತುಂಬಾ ವಿಷಾಧಿಸುತ್ತೇನೆ. ಒಬ್ಬ ಅನುಭವಿ ಆಟಗಾರ ಈ ರೀತಿ ಪ್ರತಿಕ್ರಿಯಿಸಬಾರದು. ಆದರೆ ಕೆಲವೊಮ್ಮೆ ಎಲ್ಲಾ ವಿಲಕ್ಷಣಗಳ ವಿರುದ್ಧವೂ ದುರದೃಷ್ಟವಶಾತ್ ಸಂಭವಿಸುತ್ತವೆ ಎಂದು ಫೇಸ್ ಬುಕ್ ನಲ್ಲಿ ಕ್ಷಮೆಯಾಚಿಸಿ ಬರೆದುಕೊಂಡಿದ್ದರು.

ಶಕೀಬ್ ಅಲ್ ಹಸನ್ ಬಾಂಗ್ಲಾದ ಉತ್ತಮ ಆಲ್ ರೌಂಡರ್ ಗಳಲ್ಲಿ ಒಬ್ಬರು. 34 ವರ್ಷದ ಶಕೀಬ್ ಎಲ್ಲ ರೀತಿಯ ಆಟಗಳಿಂದ 10 ಸಾವಿರಕ್ಕೂ ಅಧಿಕ ಅಂತಾರಾಷ್ಟ್ರೀಯ ರನ್ ಗಳಿಸಿದ್ದಾರೆ. ಅಲ್ಲದೇ, ಸುಮಾರು 600ಕ್ಕೂ ಅಧಿಕ ವಿಕೆಟ್ ಕಿತ್ತಿದ್ದಾರೆ.

ಜೂ. 18ಕ್ಕೆ ಯಡಿಯೂರಪ್ಪ ಭವಿಷ್ಯ ನಿರ್ಧಾರ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವಿಚಾರ ಹೆಚ್ಚು ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಇದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದರ ಮಧ್ಯೆ ಜೂ. 18ಕ್ಕೆ ಶಾಸಕರ ಸಭೆ ನಡೆಸುವಂತೆ ರಾಜ್ಯ ಬಿಜೆಪಿಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ ಎನ್ನಲಾಗಿದ್ದು, ಸಾಕಷ್ಟು ಸಂಚಲನ ಮೂಡಿಸಿದೆ.

ಇತ್ತೀಚೆಗಷ್ಟೇ ಸಿಎಂ ಯಡಿಯೂರಪ್ಪ ಅವರು, ಇನ್ನೂ ಎರಡು ವರ್ಷಗಳ ಕಾಲ ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಎಂದು ಹೇಳಿಕೆ ನೀಡಿದ್ದರು. ಇದರ ಮಧ್ಯೆ ಹೈಕಮಾಂಡ್ ಕೂಡ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆಯ ವಿಚಾರ ಇಲ್ಲ. ಸಿಎಂ ಯಡಿಯೂರಪ್ಪ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರೇ ಮುಂದುವರೆಯುತ್ತಾರೆ ಎಂದು ಹೇಳಿತ್ತು. ಇದರ ಬೆನ್ನಲ್ಲಿಯೇ ಮತ್ತೆ ಈ ವಿಷಯ ಜೀವಂತಿಕೆ ಉಳಿಸಿಕೊಂಡಿದ್ದು, ಹಲವಾರು ವದಂತಿಗಳು ಹರಿದಾಡುತ್ತಿವೆ. ಹೀಗಾಗಿ ರಾಜ್ಯ ಬಿಜೆಪಿ ಶಾಸಕರ ಜೊತೆ ಸಭೆ ನಡೆಸಲು ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ನಾಯಕತ್ವ ಬದಲಾವಣೆಯ ಕುರಿತು ಇರುವ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಶಾಸಕರ ಸಭೆ ನಡೆಸಬೇಕೆಂದು ಹಲವು ಶಾಸಕರು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಒತ್ತಡ ಹಾಕುತ್ತಿದ್ದರು. ಹೀಗಾಗಿ ಬಂಡಾಯ ಶಾಸಕರ ಒತ್ತಾಯಕ್ಕೆ ಮಣಿದು ಅರುಣ್ ಸಿಂಗ್, ಶಾಸಕರ ಸಭೆ ನಡೆಸುವ ಸಾಧ್ಯತೆ ಇದೆ ಎನ್ನಾಗಿದೆ.

ಈ ನಿಟ್ಟಿನಲ್ಲಿ ಶಾಸಕರ ಸಭೆ ಆಯೋಜಿಸುವ ಸಿದ್ಧತೆ ಬಿಜೆಪಿಯಲ್ಲಿ ನಡೆದಿದೆ ಎನ್ನಲಾಗಿದೆ. ಜೂ. 18ಕ್ಕೆ ಶಾಸಕರ ಸಭೆ ನಡೆಯುವ ಸಾದ್ಯತೆ ಕೂಡ ಇದೆ. ಆ ನಂತರ ಅರುಣ್ ಸಿಂಗ್ ಅವರು ನೀಡುವ ವರದಿಯ ಮೇಲೆ ಸಿಎಂ ಯಡಿಯೂರಪ್ಪ ಅವರ ಭವಿಷ್ಯ ಅಡಗಿದೆ ಎನ್ನಲಾಗುತ್ತಿದೆ. ವಿರೋಧಿ ಬಣಗಳ ತಂತ್ರ ಫಲಿಸಲಿದೆಯೇ? ಅಥವಾ ನಾಯಕತ್ವಕ್ಕೆ ಮಾದರಿಯಾಗಿರುವ ಯಡಿಯೂರಪ್ಪ ವಿರೋಧಿಗಳ ಶಕ್ತಿ ಹತ್ತಿಕ್ಕುವರೇ? ಎಂಬುವುದನ್ನು ಕಾಯ್ದು ನೋಡಬೇಕಿದೆ.

error: Content is protected !!