ಬೆಂಗಳೂರು: ದೇಶವನ್ನೇ ಬೆಚ್ಚಿಬೀಳಿಸಿದ್ದ ಬಹುಕೋಟಿ ಬಿಟ್‌ಕಾಯಿನ್ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪ್ರಮುಖ ಆರೋಪಿಗಳಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ರಾಬಿನ್ ಖಂಡೇವಾಲ ಮತ್ತು ಸುನೀಶ್ ಹೆಗ್ಡೆ ವಿರುದ್ಧ ಮಹತ್ವದ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದೆ.
ಇ.ಡಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಸುಮಾರು 50 ಸಾವಿರ ಯುಎಸ್ಡಿಟಿ ಮೌಲ್ಯದ ಬಿಟ್‌ಕಾಯಿನ್ ಜಪ್ತಿ ಮಾಡಲಾಗಿದೆ. ಭಾರತೀಯ ಕರೆನ್ಸಿಯಲ್ಲಿ ಇದರ ಮೌಲ್ಯ ಸುಮಾರು 47.66 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ, ಕೃತ್ಯಕ್ಕೆ ಬಳಸಲಾಗಿದ್ದ 3 ಲ್ಯಾಪ್‌ಟಾಪ್‌ಗಳು ಹಾಗೂ 3 ಮೊಬೈಲ್ ಫೋನ್‌ಗಳನ್ನು ಸಹ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ತನಿಖೆ ವೇಳೆ ಮತ್ತೊಂದು ಶಾಕಿಂಗ್ ಸಂಗತಿ ಬೆಳಕಿಗೆ ಬಂದಿದೆ. ಆರೋಪಿಗಳು ಅಮೆರಿಕ ಮೂಲದ ಪ್ರತಿಷ್ಠಿತ ಕಂಪನಿಯೊಂದರ ನೆಟ್‌ವರ್ಕ್ ಹ್ಯಾಕ್ ಮಾಡಿ, ಅಕ್ರಮವಾಗಿ ಪಡೆದ ಹಣದ ಮೂಲಕವೇ ಈ ಬಿಟ್‌ಕಾಯಿನ್ ಖರೀದಿ ಮಾಡಿದ್ದರು ಎಂದು ಇ.ಡಿ ಮೂಲಗಳು ತಿಳಿಸಿವೆ.
ಪ್ರಕರಣದ ಸಂಬಂಧ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ ಈ ಸೈಬರ್ ಮತ್ತು ಕ್ರಿಪ್ಟೋ ವಂಚನೆ ಪ್ರಕರಣದ ಹಿಂದೆ ಇನ್ನಷ್ಟು ದೊಡ್ಡ ಜಾಲವಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಸದ್ಯ ಇ.ಡಿ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.



