Home Blog Page 3288

ಪಾದಚಾರಿ ಮಹಿಳೆಯ ತಾಳಿ ಸರ ಎಗರಿಸಿದ ಕಳ್ಳರು

ಬೈಕ್ ನಲ್ಲಿ ಬಂದ ಇಬ್ಬರಿಂದ ಕೃತ್ಯ……

ವಿಜಯಸಾಕ್ಷಿ ಸುದ್ದಿ, ಗದಗ

ಬೈಕಿನಲ್ಲಿ ಬಂದ ಅಪರಿಚಿತರಿಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಬಂಗಾರದ ತಾಳಿ ಸರವನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿರುವ ಘಟನೆ ನಡೆದಿದ್ದು, ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿ.16.2.2023ರಂದು ಮಧ್ಯಾಹ್ನ 12-10ರ ಸುಮಾರಿಗೆ ಇಲ್ಲಿನ ಆದರ್ಶನಗರದಲ್ಲಿರುವ ಏಕನಾಥ ಕುಲಕರ್ಣಿ ಇವರ ಮನೆಯ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಯಾರೋ ಇಬ್ಬರು 25-28 ವಯೋಮಾನದ ಅಪರಿಚಿತರು ಬೈಕ್‌ನಲ್ಲಿ ಬಂದು, ಬ್ಯಾಹಟ್ಟಿಯ ಫಿರ್ಯಾದಿ ರತ್ನಾ ಗಂಗಾಧರ ಹುಬ್ಬಳ್ಳಿ(52) ಇವರ ಕೊರಳಿನಲ್ಲಿದ್ದ 1.20 ಲಕ್ಷ ರೂ. ಬೆಲೆಬಾಳುವ ಸುಮಾರು 40 ಗ್ರಾಂ. ತೂಕದ ಬಂಗಾರದ ತಾಳಿ ಸರವನ್ನು ಬಲವಂತದಿಂದ ಕಿತ್ತುಕೊಂಡು ಹೋಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಗದಗ ಶಹರ ಪೊಲೀಸರು ತನಿಖೆ ನಡೆಸಿದ್ದಾರೆ.

ಶಿರಹಟ್ಟಿ ಪಿಎಸ್‌ಐ ಈರಣ್ಣ ರಿತ್ತಿ ಕರ್ತವ್ಯನಿಷ್ಠೆಗೆ ಪ್ರಶಂಸನಾ ಪತ್ರ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಇಲ್ಲಿನ ಪಿಎಸ್‌ಐ ಈರಣ್ಣ ರಿತ್ತಿ ಅವರ ಕರ್ತವ್ಯ ನಿಷ್ಠೆಯನ್ನು ಮೆಚ್ಚಿ ಇದೇ ರೀತಿ ಉತ್ಸಾಹ ಹಾಗೂ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿ ಇಲಾಖೆಗೆ ಶ್ರೇಯಸ್ಸು ತರುವಂತಾಗಲಿ ಎಂದು ಆಶಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಸ್.ನೇಮಗೌಡ ಪ್ರಶಂಸನಾ ಪತ್ರವನ್ನು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರ ಮೂಲಕ ಕೊಡಿಸಿದರು.

ದಿ. 8-11-2022ರಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಶಿರಹಟ್ಟಿ ಪಟ್ಟಣದಲ್ಲಿ ಜರುಗಿದ ಜನಸ್ಪಂದನ ಕಾರ್ಯಕ್ರಮದ ಕಾಲಕ್ಕೆ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದಕ್ಕೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ 5ಜನ ಆಪಾದಿತರ ಮೇಲೆ ರೌಡಿ ಶೀಟ್ ತೆರೆಯಲು ಕ್ರಮ, 7ಕೆಜಿ 800ಗ್ರಾಂ ಗಾಂಜಾ ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡ ಬಗ್ಗೆ ಕರ್ತವ್ಯ ನಿಷ್ಠೆಯನ್ನು ತೋರಿಸಿದ್ದಾರೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.

ಕುಟುಂಬ ಕಲಹ; ಹೆತ್ತ ತಂದೆಯನ್ನೇ ಹತ್ಯೆ ಮಾಡಿದ ಪುತ್ರ

ಕೊಡಲಿಯಿಂದ ಹೊಡೆದು ಕೊಲೆ……

ವಿಜಯಸಾಕ್ಷಿ ಸುದ್ದಿ, ನರಗುಂದ

ಕುಟುಂಬ ಕಲಹದಿಂದಾಗಿ ಉಂಟಾಗಿದ್ದ ಜಗಳ ವಿಕೋಪಕ್ಕೆ ಹೋಗಿ ತಂದೆಯ ಹತ್ಯೆಯಲ್ಲಿ ಅಂತ್ಯವಾದ ಘಟನೆ ಜರುಗಿದೆ.

ತಾಲೂಕಿನ ಹದ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಗನೇ ಹೆತ್ತ ತಂದೆಯನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ.

ಆರೋಪಿ ಮೌಲಾಸಾಬ ಕಾಲೇಖಾನ್ ಎಂಬಾತ ತನ್ನ ತಂದೆ ಮಲಕಸಾಬ ಕಾಲೇಖಾನ (52)ನನ್ನು ಕೊಲೆ ಮಾಡಿದ್ದಾನೆ.

ಮೃತ ಮಲಕಸಾಬ, ಕುಡಿದು ಬಂದು ರಸ್ತೆಯಲ್ಲಿ ನಿಂತು ತಾಯಿಗೆ ಅವಾಚ್ಯವಾಗಿ ಬೈದಾಡುತ್ತಿದ್ದ. ರಸ್ತೆಯಲ್ಲಿ ನಿಂತು ಬೈಯಬೇಡ, ಮಾನ ಮರ್ಯಾದೆ ತಗೆಬೇಡ ಎಂದು ಎಷ್ಟೇ ಹೇಳಿದರೂ ಕೇಳದಿದ್ದಾಗ, ಕೋಪಗೊಂಡ ಆರೋಪಿ ಮೌಲಾಸಾಬ ಕೊಡಲಿಯಿಂದ ತಲೆಗೆ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಅಸ್ವಸ್ಥಗೊಂಡ ಮಲಕಸಾಬನನ್ನು ನರಗುಂದ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಹೋಗುವಾಗ ಮೃತಪಟ್ಟಿದ್ದಾನೆ.

ಘಟನೆಯ ನಂತರ ಆರೋಪಿ ಮೌಲಾಸಾಬನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದು, 19/2023, 302, 504 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಬೆಂಕಿ ಅವಘಡ

0

ವಿಜಯಸಾಕ್ಷಿ ಸುದ್ದಿ, ಗದಗ

ತಾಲೂಕಿನ ಬಿಂಕದಕಟ್ಟಿ ಹತ್ತಿರ ಇರುವ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದ ಗುಡ್ಡದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಒಣಗಿದ್ದ ಹುಲ್ಲಿಗೆ ಬೆಂಕಿ ವ್ಯಾಪಿಸಿದ್ದರಿಂದ ಸುಮಾರು 20 ಗುಂಟೆ ಜಾಗದ ಹುಲ್ಲು ಬೆಂಕಿಗೆ ಆಹುತಿಯಾಗಿದೆ. ಆದರೆ ಸಸ್ಯೋದ್ಯಾನದ ನರ್ಸರಿ ಹಾಗೂ ಇನ್ನಿತರ ಗಿಡಮರಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ.

ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅರಣ್ಯ ಇಲಾಖೆ ಕಚೇರಿ ಹಾಗೂ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ ಇದ್ದಿದ್ದರಿಂದ ಹೆಚ್ಚಿನ ಸಿಬ್ಬಂದಿ ಸಸ್ಯೋದ್ಯಾನಕ್ಕೆ ತೆರಳಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿದ್ಯುತ್ ಅವಘಡ; ಅಪಾರ ಪ್ರಮಾಣದ ಬೆಳೆ ಹಾನಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ವಿದ್ಯುತ್ ಅವಘಡದಿಂದ ಪಂಪ್‌ಸೆಟ್ ಮತ್ತು ಹೊಲದಲ್ಲಿನ ಬೆಳೆ ಹಾನಿಯಾಗಿರುವ ಘಟನೆ ತಾಲೂಕಿನ ಒಡೆಯರ ಮಲ್ಲಾಪುರ ಗ್ರಾಮದಲ್ಲಿ ಗುರುವಾರ ಜರುಗಿದೆ.

ಗ್ರಾಮದ ರೈತ ಪದ್ಮನಗೌಡ ಗಂಗನಗೌಡ ಪಾಟೀಲ ಇವರಿಗೆ ಸಂಬಂಧಿಸಿದ ನೀರಾವರಿಯ 4 ಎಕರೆ ಹೊಲದಲ್ಲಿನ ಶತಾವರಿ ಬೆಳೆ ಮತ್ತು ಪಂಪ್‌ಸೆಟ್ ಸಂಪೂರ್ಣ ಬೆಂಕಿಗಾಹುತಿಯಾಗಿ ಅಂದಾಜು 5ಲಕ್ಷ ರೂ. ಹಾನಿಯಾಗಿದೆ ಎಂದು ರೈತ ಅಳಲನ್ನು ತೋಡಿಕೊಂಡರು.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಲು ಯಶಸ್ವಿಯಾಗಿ ಹೆಚ್ಚಿನ ಅನಾಹುತ ತಡೆದರು.
ಈ ಹಿಂದೆ ಗ್ರಾಮದಲ್ಲಿ ಹೆಸ್ಕಾಂ ಅಧಿಕಾರಿಗಳ ನೇತೃತ್ವದಲ್ಲಿ ವಿದ್ಯುತ್ ಅದಾಲತ್ ಕಾರ್ಯಕ್ರಮ ಜರುಗಿದಾಗ ರೈತ ಪದ್ಮನಗೌಡ ಪಾಟೀಲ ಪಂಪ್‌ಸೆಟ್ ಓವರ್‌ಲೋಡ್ ವಿದ್ಯುತ್ ಪ್ರಸರಣ ಆಗುತ್ತಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

ಈ ವೇಳೆ ಆ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಅನಾಹುತ ಸಂಭವಿಸಿದೆ. ರೈತನ ಸಮಸ್ಯೆಯನ್ನು ಅಧಿಕಾರಿಗಳು ಪರಿಗಣನೆಗೆ ತೆಗೆದುಕೊಂಡು ಆಗಿರುವ ಹಾನಿಗಳನ್ನು ಹೆಸ್ಕಾಂ ಇಲಾಖೆಯೆ ನೇರವಾಗಿ ಹೊಣೆ ಹೊತ್ತು ಸೂಕ್ತ ಪರಿಹಾರ ನೀಡಬೇಕೆಂದು ಜೆಡಿಎಸ್ ತಾಲೂಕ ಅಧ್ಯಕ್ಷ ಪದ್ಮರಾಜ ಪಾಟೀಲ ಆಗ್ರಹಿಸಿದ್ದಾರೆ.

ಭೀಕರ ರಸ್ತೆ ಅಪಘಾತ; ನಾಲ್ವರು ಸ್ಥಳದಲ್ಲೇ ಸಾವು

0

ಚಾಲಕನ ನಿಯಂತ್ರಣ ತಪ್ಪಿ ನಡೆದ ದುರಂತ…..

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಚಾಲಕನ ನಿಯಂತ್ರಣ ತಪ್ಪಿ ಸೇತುವೆ ತಡೆಗೋಡೆಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಯುವತಿಯರು ಸೇರಿದಂತೆ ನಾಲ್ವರು ಮೃತಪಟ್ಟ ಘಟನೆ ಗದಗ ರಸ್ತೆಯ ಬನ್ನಿಕೊಪ್ಪ ಬಳಿ ನಡೆದಿದೆ.

ಜಿಲ್ಲೆಯ ಕುಕನೂರು ತಾಲೂಕಿನ ಬನ್ನಿಕೊಪ್ಪ ಬಳಿ ನಡೆದ ಅಪಘಾತದಲ್ಲಿ ತೆಲಂಗಾಣದ ನಾಲ್ವರು ಮೃತಪಟ್ಟಿದ್ದಾರೆ.

ತೆಲಂಗಾಣ ಮೂಲದ ಶಣ್ಮುಖ (28), ವೆನಿಲಾ ವರುದಿನಿ (18) ಹಾಗೂ ಮುಪ್ಪಿದು ರೂಪವತಿ (23) ಎಂಬುವರು ಮೃತಪಟ್ಟವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನೊಬ್ಬರ ಹೆಸರು ಸದ್ಯಕ್ಕೆ ತಿಳಿದು ಬಂದಿಲ್ಲ.

ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಹಾಗಿದ್ದು, ಟೈಯರ್ ಸಮೇತ ಆ ಭಾಗ ಕಿತ್ತುಕೊಂಡು ಹೊರ ಬಂದಿದೆ. ಶವ ತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಟೆಂಪೋ, ಆಟೋ ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಸಾವು, ಹಲವರಿಗೆ ಗಾಯ

ಸ್ಥಳಕ್ಕೆ ಪೊಲೀಸರ ಭೇಟಿ….. ಪರಿಶೀಲನೆ….

ವಿಜಯಸಾಕ್ಷಿ ಸುದ್ದಿ, ಗದಗ

ಎಲ್ಪಿಜಿ ಆಟೋ ವಾಹನ ಹಾಗೂ ಮಿನಿ ಬಸ್ (ಟೆಂಪೋ) ನಡುವೆ ಭೀಕರ ಅಪಘಾತ ವಾಗಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, ಹಲವು ಜನರು ಗಾಯಗೊಂಡ ಘಟನೆ ಬೆಟಗೇರಿ ಸಮೀಪದ ಗಜೇಂದ್ರಗಡ ರಸ್ತೆಯ ಬಸವೇಶ್ವರ ದೇವಸ್ಥಾನದ ಬಳಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದ್ದ ಮದುವೆ ಮುಗಿಸಿ ಬೆಟಗೇರಿ ಕಡೆ ಬರುತ್ತಿದ್ದ ಮಿನಿ ಬಸ್, ನರೇಗಲ್ ಕಡೆ ಹೊರಟಿದ್ದ ಎಲ್ಪಿಜಿ ಆಟೋ ನಡುವೆ ಈ ಅಪಘಾತ ನಡೆದಿದೆ.

ಆಟೋದಲ್ಲಿ ಇದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರಿಂದ ಮೃತರ ಹೆಸರು, ವಿಳಾಸ ತಿಳಿದುಕೊಳ್ಳಲು ಹರಸಾಹಸ ಪಡಬೇಕಾಯಿತು.

ಅಪಘಾತ ಜರುಗಿ ಒಂದು ಗಂಟೆಯ ನಂತರ ಇಬ್ಬರು ಹೆಸರು ಗೊತ್ತಾಗಿದೆ. ಅದರಲ್ಲಿ ಬೆಟಗೇರಿಯ ನರಸಾಪೂರ ಆಶ್ರಯ ಕಾಲೋನಿಯ ಸಯ್ಯದ್ ಅಲಿ (20) ಹಾಗೂ ಪ್ರದೀಪ್ (40) ಎಂದು ತಿಳಿದು ಬಂದಿದೆ. ಮತ್ತೊಬ್ಬ ಬೆಟಗೇರಿ ಮಂಜುನಾಥ್ ನಗರದ ನಿವಾಸಿ ನಿಖಿಲ್ ಎನ್ನಲಾಗಿದೆ.

ಗಾಯಗೊಂಡವರು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಆಟೋ ಹಾಗೂ ಮಿನಿ ಬಸ್ ನಡುವೆ ನಡೆದ ಅಪಘಾತದಲ್ಲಿ ಆಟೋ ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಅಪಘಾತದ ಸುದ್ದಿ ತಿಳಿದ ಕೂಡಲೇ ಬೆಟಗೇರಿ ಪೊಲೀಸರು, ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಪ್ರಕರಣ ದಾಖಲಾಗಿದೆ.

ನಿವೃತ್ತ ಡಿಎಚ್ಓ ಪುತ್ರನ ಮನೆಯಲ್ಲಿ‌ ಕಳ್ಳತನ; 8.17 ಲಕ್ಷ ರೂ. ನಗ-ನಾಣ್ಯ ಲೂಟಿ

ನಿವೃತ್ತ ಡಿಎಚ್ಓ ಸತೀಶ್ ಬಸರಿಗಿಡದ ಅವರ ಪುತ್ರನ ಮನೆಯಲ್ಲಿ ಕಳ್ಳತನ…..

ವಿಜಯಸಾಕ್ಷಿ ಸುದ್ದಿ, ಗದಗ

ಮನೆಯ ಹಿತ್ತಲ ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿದ ಕಳ್ಳರು, ಬೆಡ್‌ರೂಮಿನ ಟ್ರೆಝರಿಯಲ್ಲಿದ್ದ ಬಂಗಾರದ ಆಭರಣಗಳು, ನಗದು ಹಣವನ್ನು ದೋಚಿರುವ ಘಟನೆ ಗದಗ ಶಹರ ಪೊಲೀಸ್‌ ಠಾಣಾ ವ್ಯಾಪ್ತಿಯ ಟಿಪ್ಪು ಸುಲ್ತಾನ್‌ ವೃತ್ತದ ಬಳಿಯ ಸಜ್ಜನ್ನರ ಲೇಔಟ್‌ನ ಆಕಾಶ್ ಸತೀಶ ಬಸರಿಗಿಡದ ಎಂಬುವರ ಮನೆಯಲ್ಲಿ ನಡೆದಿದೆ.

ಫೆ.7ರ ರಾತ್ರಿ 7 ಗಂಟೆಯಿಂದ ಫೆ.8ರ ರಾತ್ರಿ 8.30ರ ಸಮಯದಲ್ಲಿ ಕಳ್ಳತನ ನಡೆದಿದೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.

ಈ ಸಮಯದಲ್ಲಿ ಮನೆಯ ಹಿತ್ತಲಿನ ಬಾಗಿಲನ್ನು ಮುರಿದು ಒಳಸೇರಿದ ಕಳ್ಳರು ಬೆಡ್‌ರೂಮ್‌ನ ಬಾಗಿಲನ್ನು ಒಡೆದು, ಒಳಗಿದ್ದ ಟ್ರೆಝರಿಯನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು, 80 ಸಾವಿರ ರೂ ಬೆಲೆಯ 20 ಗ್ರಾಂ. ತೂಕದ ಕರಿಮಣಿ ಸರ, 40 ಗ್ರಾಂ. ತೂಕದ 1.60 ಲಕ್ಷ ರೂ ಬೆಲೆಯ ಬಂಗಾರದ ಕಡಿ, 40 ಸಾವಿರ ರೂ. ಬೆಲೆಯ 10 ಗ್ರಾಂ ತೂಕದ ಬಂಗಾರದ ಉಂಗುರ, 12 ಗ್ರಾಂ ತೂಕದ 45 ಸಾವಿರ ರೂ ಬೆಲೆಬಾಳುವ ಬಂಗಾರದ ನೆಕ್ಲೆಸ್‌,

60 ಸಾವಿರ ಬೆಲೆಯ 15 ಗ್ರಾಂ ತೂಕದ ಸುತ್ತುಂಗುರ, 6 ಗ್ರಾಂ ತೂಕದ 22 ಸಾವಿರ ರೂ ಬೆಲೆಯ ಹರಳಿನ ಉಂಗುರ, 6 ಗ್ರಾಂ ತೂಕದ 22 ಸಾವಿರ ರೂ. ಬೆಲೆಬಾಳುವ ಮುತ್ತಿನ ಸರ, 20 ಗ್ರಾಂ ತೂಕದ 80 ಸಾವಿರ ರೂ ಬೆಲೆಯುಳ್ಳ ಬಂಗಾರದ ಕಿವಿಯೋಲೆ, 15 ಗ್ರಾಂ ತೂಕದ 60 ಸಾವಿರ ರೂ. ಬೆಲೆಯ ತಾಳಿ ಸರ, 10 ಗ್ರಾಂ ತೂಕದ 40 ಸಾವಿರ ರೂ. ಬೆಲೆಬಾಳುವ ಚಿನ್ನದ ಸರ,

2 ಗ್ರಾಂ ತೂಕದ 8 ಸಾವಿರ ರೂ. ಬೆಲೆಯ ಬಂಗಾರದ ನಾಣ್ಯ ಸೇರಿದಂತೆ ಒಟ್ಟೂ 156 ಗ್ರಾಂ. ತೂಕದ 6.17 ಲಕ್ಷ ರೂ ಬೆಲೆಬಾಳುವ ಬಂಗಾರದ ಆಭರಣಗಳು ಹಾಗೂ 2 ಲಕ್ಷ ರೂ. ನಗದು ಹಣ ಹೀಗೆ ಒಟ್ಟೂ 8.17 ಲಕ್ಷ ರೂ. ಸೊತ್ತನ್ನು ಕಳ್ಳತನ ಮಾಡಲಾಗಿದೆ ಎಂದು ಫಿರ್ಯಾದಿ ಆಕಾಶ್ ತಂದೆ ಸತೀಶ್ ಬಸರಿಗಿಡದ ದೂರು ದಾಖಲಿಸಿದ್ದಾರೆ.

ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದಾರೆ.

`ನಿಮಗೆ ರೋಗಿಗಳ ಬಗ್ಗೆ ಕಾಳಜಿಯಿಲ್ಲವಾ?’; ವೈದ್ಯಾಧಿಕಾರಿಗಳ ತರಾಟೆಗೆ ತೆಗೆದುಕೊಂಡ ಶಾಸಕ…!

0

ಮಧ್ಯಾಹ್ನ 12 ಆದರೂ ಬಾಗಿಲು ತಗೆಯದ ಆರೋಗ್ಯ ಕೇಂದ್ರ……..?

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ತಾಲೂಕಿನ ಬಾಲೆಹೊಸೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಮಧ್ಯಾಹ್ನ 12 ಗಂಟೆಯಾದರೂ ಬಾಗಿಲು ತೆರೆಯದ್ದರಿಂದ ಆಕ್ರೋಶಗೊಂಡ ಶಾಸಕ ರಾಮಣ್ಣ ಲಮಾಣಿ ತಾಲೂಕಾ ವೈದ್ಯಾಧಿಕಾರಿ, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆಯಿತು.

ಬಾಲೆಹೊಸೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಸಿಬ್ಬಂದಿಗಳ ವಸತಿಗೃಹ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮಕ್ಕೆ ಶಾಸಕರು ಆಗಮಿಸಿದ್ದರು. ಇನ್ನೂ ತೆರೆಯದೇ ಇರುವ ಆಸ್ಪತ್ರೆಯ ಬಾಗಿಲ ಮುಂದೆ ಅನೇಕ ವಯೋವೃದ್ಧರು, ಮಹಿಳೆಯರು ಆರೋಗ್ಯ ಚಿಕಿತ್ಸೆಗಾಗಿ ಕಾಯುತ್ತಾ ಕುಳಿತಿದ್ದರು. ಇದನ್ನು ಗಮನಿಸಿದ ಶಾಸಕರು ಸಿಟ್ಟಿನಿಂದಲೇ ತಾಲೂಕಾ ವೈದ್ಯಾಧಿಕಾರಿ ಅವರಿಗೆ ಪೋನ್ ಮಾಡಿ ದಬಾಯಿಸಿದರು.

ಸ್ವಲ್ಪ ಸಮಯಕ್ಕೆ ಆಸ್ಪತ್ರೆಗೆ ಆಗಮಿಸಿದ ವೈದ್ಯ ಡಾ.ಸಚಿನ್ ಮತ್ತು ಸಿಬ್ಬಂದಿಗೆ ನಿಮಗೆ ಕಿಂಚಿತ್ತಾದರೂ ಸಮಯಪ್ರಜ್ಞೆ, ರೋಗಿಗಳ ಬಗ್ಗೆ ಕಾಳಜಿ ಇಲ್ಲವೇ? ಇಲ್ಲಿ ಜನರು ಕಾಯುತ್ತಾ ಕುಳಿತಿದ್ದಾರೆ, ಕಷ್ಟ-ಸುಖ ಕೇಳುವವರು ಯಾರೂ ಇಲ್ಲವೆಂದುಕೊಂಡಿರಾ? ಹೀಗೆ ಬೇಜವಾಬ್ದಾರಿಯಿಂದ ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುವದನ್ನು ಸಹಿಸುವುದಿಲ್ಲ. ಇನ್ನೊಂದು ಬಾರಿ ಇಂತಹ ಘಟನೆಗಳು ಮರುಕಳಿಸಿದರೆ ನಿಮ್ಮ ಮೇಲೆ ಸೂಕ್ತ ಕ್ರಮಕ್ಕೆ ಸೂಚಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ವೈದ್ಯರು ಮತ್ತು ಸಿಬ್ಬಂದಿಗಳು ಆಗಿರುವ ಸಮಸ್ಯೆಗೆ ವಿಷಾದ ವ್ಯಕ್ತಪಡಿಸಿ ಈ ರೀತಿಯಾಗದಂತೆ ಕೆಲಸ ಮಾಡುವದಾಗಿ ಹೇಳಿದರು.  ಈ ಸಂದರ್ಭದಲ್ಲಿ ಹಿರಿಯರಾದ ಕರಿಯಪ್ಪ ಮೈಲಾರಿ, ಲಕ್ಷ್ಮವ್ವ ಗಾಣಿಗೇರ, ಬಸವಣ್ಣೆಪ್ಪ ಗೊಂಡೇದ, ಬಸಪ್ಪ ಮಾಯಕೊಂಡ, ನಾಗಯ್ಯ ಮಠಪತಿ, ಎಂ.ಬಿ. ಚಪ್ಪರಮನಿ ಸೇರಿ ಹಲವರಿದ್ದರು.

ನ್ಯಾಯಾಧೀಶರಿಂದ ಮನಃ ಪರಿವರ್ತನೆ; ಲೋಕ ಅದಾಲತ್‌ನಲ್ಲಿ ಒಂದಾದ ದಂಪತಿ

0
  • ದೂರವಾಗಲಿದ್ದ ದಂಪತಿಗಳ ಬಾಂಧವ್ಯ ಬೆಸೆದ ನ್ಯಾಯಾಲಯ

ವಿಜಯಸಾಕ್ಷಿ ಸುದ್ದಿ, ರೋಣ

ಬಾಳಿ ಬೆಳಗಬೇಕಿದ್ದ ನವ ದಂಪತಿಗಳು ವೈವಾಹಿಕ ಹಕ್ಕುಗಳ ಪುನರ್ ಸ್ಥಾಪನೆಗೆ ಅರ್ಜಿ ಸಲ್ಲಿಸುವ ಮೂಲಕ ನ್ಯಾಯಲಯದ ಮೆಟ್ಟಿಲೇರಿದ್ದರು. ನ್ಯಾಯಾಧೀಶ ಚನ್ನಸ್ವಾಮಿರವರ ನ್ಯಾಯಯುತ ಸಲಹೆಯನ್ನು ಪಡೆದು ದಂಪತಿಗಳು ಲೋಕ ಅದಾಲತ್‌ನಲ್ಲಿ ಮತ್ತೆ ಒಂದಾಗುವ ಮೂಲಕ ಹೊಸ ಜೀವನದತ್ತ ಹೆಜ್ಜೆ ಹಾಕಿದ್ದಾರೆ.

ತಾಲೂಕಿನ ಅಬ್ಬಿಗೇರಿ ಗ್ರಾಮದ ಮುತ್ತಪ್ಪ ಜೋಗಿನ ಎಂಬುವರ ವಿರುದ್ಧ ಪತ್ನಿ ವಿದ್ಯಾ ಮುತ್ತಪ್ಪ ಜೋಗಿನ ಹಿರಿಯ ದಿವಾಣಿ ನ್ಯಾಯಾಧೀಶರುಗಳ ನ್ಯಾಯಾಲಯದಲ್ಲಿ ವೈವಾಹಿಕ ಹಕ್ಕುಗಳ ಪುನರ್‌ಸ್ಥಾಪನೆ ಕುರಿತು ಅರ್ಜಿ ಸಲ್ಲಿಸಿದ್ದರು.

https://youtube.com/live/buee8YcjQPQ

ಪತಿ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಕೆಲಸದಲ್ಲಿದ್ದು, ಪತ್ನಿ ವಿದ್ಯಾ ಶೇತ್ಕಿ ಕೆಲಸದಲ್ಲಿ ತೊಡಗಿಕೊಂಡಿದ್ದರು ಹಾಗೂ ಈ ದಂಪತಿಗಳಿಗೆ ಮಗು ಕೂಡ ಇದೆ.

ಹಿಂದೂ ಧರ್ಮ ಪದ್ಧತಿಯಂತೆ ಏಪ್ರಿಲ್ 8, 2019ರಲ್ಲಿ ಇವರು ವಿವಾಹವಾಗಿದ್ದು, ಎರಡು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದರು. ಆದರೆ ಮುತ್ತಪ್ಪ ವಿದ್ಯಾಳಿಂದ ದೂರ ಸರಿದಾಗ, ಆಕೆ ಹಿಂದೂ ವಿವಾಹ ಅಧಿನಿಯಮ ಕಾಯ್ದೆಯನ್ವಯ ವೈವಾಹಿಕ ಹಕ್ಕುಗಳ ಪುನರ್‌ಸ್ಥಾಪನೆಗೆ ನ್ಯಾಯಲಯದ ಮೊರೆ ಹೋಗಿದ್ದರು.

https://youtube.com/live/buee8YcjQPQ

ನ್ಯಾಯಾಧೀಶರಾದ ಚನ್ನಸ್ವಾಮಿಯವರು ದಂಪತಿಗಳಿಗೆ ಭವಿಷ್ಯದ ಬಗ್ಗೆ ತಿಳುವಳಿಕೆ ನೀಡಿ, ಮಗುವಿನ ಭವಿಷ್ಯದ ದೃಷ್ಟಿಯಿಂದ ತಂದೆ-ತಾಯಿಗಳ ಪಾತ್ರ ದೊಡ್ಡದಾಗಿದೆ. ಜೀವನದಲ್ಲಿ ಉತ್ತಮ ಭವಿಷ್ಯದತ್ತ ಸಾಗಬೇಕಿರುವ ನೀವುಗಳು ಹಾದಿ ತಪ್ಪಿದರೆ ಹೇಗೆ ಎಂದು ಮನಃಪರಿವರ್ತನೆಯ ಪೂರಕ ಸಲಹೆಗಳನ್ನು ನೀಡಿದ್ದಾರೆ.

ಇದರಿಂದ ಮನಸ್ಸು ಬದಲಿಸಿದ ಪತಿ ಮುತ್ತಪ್ಪ, ಪತ್ನಿ ವಿದ್ಯಾಳೊಂದಿಗೆ ಸಹಬಾಳ್ವೆ ನಡೆಸಿ ಮಗುವಿನ ಉಜ್ವಲ ಭವಿಷ್ಯಕ್ಕೆ ಬುನಾದಿಯಾಗುತ್ತೇನೆ ಎಂದು ನ್ಯಾಯಾಧೀಶರುಗಳ ಸಮ್ಮುಖದಲ್ಲಿ ವಿದ್ಯಾಳನ್ನು ಸ್ವೀಕರಿಸಿದ್ದು ಸ್ವಾಗತರ್ಹವಾಗಿದೆ. ಇದೇ ಸಂದರ್ಭದಲ್ಲಿ ಇಬ್ಬರೂ ಹಾರ ಬದಲಾಯಿಸಿಕೊಂಡು ನೆಮ್ಮದಿಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅರ್ಜಿದಾರಳ ಪರವಾಗಿ ನ್ಯಾಯವಾದಿ ಆಯ್.ಎ. ಕಿರೇಸೂರು ಸೇರಿದಂತೆ ನ್ಯಾಯವಾದಿಗಳಾದ ಶ್ರೀಶೈಲ್ ಹೂಗಾರ, ಎಸ್.ಬಿ. ಕುಂಬಾರ, ಪಿ.ಎಸ್. ಪಲ್ಲೇದ, ಜಿ.ಎಂ. ಹೆಬ್ಬಳಿಮಠ, ವಾಯ್.ಎಂ. ಗಡ್ಡಿ ಸೇರಿದಂತೆ ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.