Home Blog Page 3289

ಟೆಂಪೋ, ಆಟೋ ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಸಾವು, ಹಲವರಿಗೆ ಗಾಯ

ಸ್ಥಳಕ್ಕೆ ಪೊಲೀಸರ ಭೇಟಿ….. ಪರಿಶೀಲನೆ….

ವಿಜಯಸಾಕ್ಷಿ ಸುದ್ದಿ, ಗದಗ

ಎಲ್ಪಿಜಿ ಆಟೋ ವಾಹನ ಹಾಗೂ ಮಿನಿ ಬಸ್ (ಟೆಂಪೋ) ನಡುವೆ ಭೀಕರ ಅಪಘಾತ ವಾಗಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, ಹಲವು ಜನರು ಗಾಯಗೊಂಡ ಘಟನೆ ಬೆಟಗೇರಿ ಸಮೀಪದ ಗಜೇಂದ್ರಗಡ ರಸ್ತೆಯ ಬಸವೇಶ್ವರ ದೇವಸ್ಥಾನದ ಬಳಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದ್ದ ಮದುವೆ ಮುಗಿಸಿ ಬೆಟಗೇರಿ ಕಡೆ ಬರುತ್ತಿದ್ದ ಮಿನಿ ಬಸ್, ನರೇಗಲ್ ಕಡೆ ಹೊರಟಿದ್ದ ಎಲ್ಪಿಜಿ ಆಟೋ ನಡುವೆ ಈ ಅಪಘಾತ ನಡೆದಿದೆ.

ಆಟೋದಲ್ಲಿ ಇದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರಿಂದ ಮೃತರ ಹೆಸರು, ವಿಳಾಸ ತಿಳಿದುಕೊಳ್ಳಲು ಹರಸಾಹಸ ಪಡಬೇಕಾಯಿತು.

ಅಪಘಾತ ಜರುಗಿ ಒಂದು ಗಂಟೆಯ ನಂತರ ಇಬ್ಬರು ಹೆಸರು ಗೊತ್ತಾಗಿದೆ. ಅದರಲ್ಲಿ ಬೆಟಗೇರಿಯ ನರಸಾಪೂರ ಆಶ್ರಯ ಕಾಲೋನಿಯ ಸಯ್ಯದ್ ಅಲಿ (20) ಹಾಗೂ ಪ್ರದೀಪ್ (40) ಎಂದು ತಿಳಿದು ಬಂದಿದೆ. ಮತ್ತೊಬ್ಬ ಬೆಟಗೇರಿ ಮಂಜುನಾಥ್ ನಗರದ ನಿವಾಸಿ ನಿಖಿಲ್ ಎನ್ನಲಾಗಿದೆ.

ಗಾಯಗೊಂಡವರು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಆಟೋ ಹಾಗೂ ಮಿನಿ ಬಸ್ ನಡುವೆ ನಡೆದ ಅಪಘಾತದಲ್ಲಿ ಆಟೋ ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಅಪಘಾತದ ಸುದ್ದಿ ತಿಳಿದ ಕೂಡಲೇ ಬೆಟಗೇರಿ ಪೊಲೀಸರು, ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಪ್ರಕರಣ ದಾಖಲಾಗಿದೆ.

ನಿವೃತ್ತ ಡಿಎಚ್ಓ ಪುತ್ರನ ಮನೆಯಲ್ಲಿ‌ ಕಳ್ಳತನ; 8.17 ಲಕ್ಷ ರೂ. ನಗ-ನಾಣ್ಯ ಲೂಟಿ

ನಿವೃತ್ತ ಡಿಎಚ್ಓ ಸತೀಶ್ ಬಸರಿಗಿಡದ ಅವರ ಪುತ್ರನ ಮನೆಯಲ್ಲಿ ಕಳ್ಳತನ…..

ವಿಜಯಸಾಕ್ಷಿ ಸುದ್ದಿ, ಗದಗ

ಮನೆಯ ಹಿತ್ತಲ ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿದ ಕಳ್ಳರು, ಬೆಡ್‌ರೂಮಿನ ಟ್ರೆಝರಿಯಲ್ಲಿದ್ದ ಬಂಗಾರದ ಆಭರಣಗಳು, ನಗದು ಹಣವನ್ನು ದೋಚಿರುವ ಘಟನೆ ಗದಗ ಶಹರ ಪೊಲೀಸ್‌ ಠಾಣಾ ವ್ಯಾಪ್ತಿಯ ಟಿಪ್ಪು ಸುಲ್ತಾನ್‌ ವೃತ್ತದ ಬಳಿಯ ಸಜ್ಜನ್ನರ ಲೇಔಟ್‌ನ ಆಕಾಶ್ ಸತೀಶ ಬಸರಿಗಿಡದ ಎಂಬುವರ ಮನೆಯಲ್ಲಿ ನಡೆದಿದೆ.

ಫೆ.7ರ ರಾತ್ರಿ 7 ಗಂಟೆಯಿಂದ ಫೆ.8ರ ರಾತ್ರಿ 8.30ರ ಸಮಯದಲ್ಲಿ ಕಳ್ಳತನ ನಡೆದಿದೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.

ಈ ಸಮಯದಲ್ಲಿ ಮನೆಯ ಹಿತ್ತಲಿನ ಬಾಗಿಲನ್ನು ಮುರಿದು ಒಳಸೇರಿದ ಕಳ್ಳರು ಬೆಡ್‌ರೂಮ್‌ನ ಬಾಗಿಲನ್ನು ಒಡೆದು, ಒಳಗಿದ್ದ ಟ್ರೆಝರಿಯನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು, 80 ಸಾವಿರ ರೂ ಬೆಲೆಯ 20 ಗ್ರಾಂ. ತೂಕದ ಕರಿಮಣಿ ಸರ, 40 ಗ್ರಾಂ. ತೂಕದ 1.60 ಲಕ್ಷ ರೂ ಬೆಲೆಯ ಬಂಗಾರದ ಕಡಿ, 40 ಸಾವಿರ ರೂ. ಬೆಲೆಯ 10 ಗ್ರಾಂ ತೂಕದ ಬಂಗಾರದ ಉಂಗುರ, 12 ಗ್ರಾಂ ತೂಕದ 45 ಸಾವಿರ ರೂ ಬೆಲೆಬಾಳುವ ಬಂಗಾರದ ನೆಕ್ಲೆಸ್‌,

60 ಸಾವಿರ ಬೆಲೆಯ 15 ಗ್ರಾಂ ತೂಕದ ಸುತ್ತುಂಗುರ, 6 ಗ್ರಾಂ ತೂಕದ 22 ಸಾವಿರ ರೂ ಬೆಲೆಯ ಹರಳಿನ ಉಂಗುರ, 6 ಗ್ರಾಂ ತೂಕದ 22 ಸಾವಿರ ರೂ. ಬೆಲೆಬಾಳುವ ಮುತ್ತಿನ ಸರ, 20 ಗ್ರಾಂ ತೂಕದ 80 ಸಾವಿರ ರೂ ಬೆಲೆಯುಳ್ಳ ಬಂಗಾರದ ಕಿವಿಯೋಲೆ, 15 ಗ್ರಾಂ ತೂಕದ 60 ಸಾವಿರ ರೂ. ಬೆಲೆಯ ತಾಳಿ ಸರ, 10 ಗ್ರಾಂ ತೂಕದ 40 ಸಾವಿರ ರೂ. ಬೆಲೆಬಾಳುವ ಚಿನ್ನದ ಸರ,

2 ಗ್ರಾಂ ತೂಕದ 8 ಸಾವಿರ ರೂ. ಬೆಲೆಯ ಬಂಗಾರದ ನಾಣ್ಯ ಸೇರಿದಂತೆ ಒಟ್ಟೂ 156 ಗ್ರಾಂ. ತೂಕದ 6.17 ಲಕ್ಷ ರೂ ಬೆಲೆಬಾಳುವ ಬಂಗಾರದ ಆಭರಣಗಳು ಹಾಗೂ 2 ಲಕ್ಷ ರೂ. ನಗದು ಹಣ ಹೀಗೆ ಒಟ್ಟೂ 8.17 ಲಕ್ಷ ರೂ. ಸೊತ್ತನ್ನು ಕಳ್ಳತನ ಮಾಡಲಾಗಿದೆ ಎಂದು ಫಿರ್ಯಾದಿ ಆಕಾಶ್ ತಂದೆ ಸತೀಶ್ ಬಸರಿಗಿಡದ ದೂರು ದಾಖಲಿಸಿದ್ದಾರೆ.

ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದಾರೆ.

`ನಿಮಗೆ ರೋಗಿಗಳ ಬಗ್ಗೆ ಕಾಳಜಿಯಿಲ್ಲವಾ?’; ವೈದ್ಯಾಧಿಕಾರಿಗಳ ತರಾಟೆಗೆ ತೆಗೆದುಕೊಂಡ ಶಾಸಕ…!

0

ಮಧ್ಯಾಹ್ನ 12 ಆದರೂ ಬಾಗಿಲು ತಗೆಯದ ಆರೋಗ್ಯ ಕೇಂದ್ರ……..?

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ತಾಲೂಕಿನ ಬಾಲೆಹೊಸೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಮಧ್ಯಾಹ್ನ 12 ಗಂಟೆಯಾದರೂ ಬಾಗಿಲು ತೆರೆಯದ್ದರಿಂದ ಆಕ್ರೋಶಗೊಂಡ ಶಾಸಕ ರಾಮಣ್ಣ ಲಮಾಣಿ ತಾಲೂಕಾ ವೈದ್ಯಾಧಿಕಾರಿ, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆಯಿತು.

ಬಾಲೆಹೊಸೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಸಿಬ್ಬಂದಿಗಳ ವಸತಿಗೃಹ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮಕ್ಕೆ ಶಾಸಕರು ಆಗಮಿಸಿದ್ದರು. ಇನ್ನೂ ತೆರೆಯದೇ ಇರುವ ಆಸ್ಪತ್ರೆಯ ಬಾಗಿಲ ಮುಂದೆ ಅನೇಕ ವಯೋವೃದ್ಧರು, ಮಹಿಳೆಯರು ಆರೋಗ್ಯ ಚಿಕಿತ್ಸೆಗಾಗಿ ಕಾಯುತ್ತಾ ಕುಳಿತಿದ್ದರು. ಇದನ್ನು ಗಮನಿಸಿದ ಶಾಸಕರು ಸಿಟ್ಟಿನಿಂದಲೇ ತಾಲೂಕಾ ವೈದ್ಯಾಧಿಕಾರಿ ಅವರಿಗೆ ಪೋನ್ ಮಾಡಿ ದಬಾಯಿಸಿದರು.

ಸ್ವಲ್ಪ ಸಮಯಕ್ಕೆ ಆಸ್ಪತ್ರೆಗೆ ಆಗಮಿಸಿದ ವೈದ್ಯ ಡಾ.ಸಚಿನ್ ಮತ್ತು ಸಿಬ್ಬಂದಿಗೆ ನಿಮಗೆ ಕಿಂಚಿತ್ತಾದರೂ ಸಮಯಪ್ರಜ್ಞೆ, ರೋಗಿಗಳ ಬಗ್ಗೆ ಕಾಳಜಿ ಇಲ್ಲವೇ? ಇಲ್ಲಿ ಜನರು ಕಾಯುತ್ತಾ ಕುಳಿತಿದ್ದಾರೆ, ಕಷ್ಟ-ಸುಖ ಕೇಳುವವರು ಯಾರೂ ಇಲ್ಲವೆಂದುಕೊಂಡಿರಾ? ಹೀಗೆ ಬೇಜವಾಬ್ದಾರಿಯಿಂದ ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುವದನ್ನು ಸಹಿಸುವುದಿಲ್ಲ. ಇನ್ನೊಂದು ಬಾರಿ ಇಂತಹ ಘಟನೆಗಳು ಮರುಕಳಿಸಿದರೆ ನಿಮ್ಮ ಮೇಲೆ ಸೂಕ್ತ ಕ್ರಮಕ್ಕೆ ಸೂಚಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ವೈದ್ಯರು ಮತ್ತು ಸಿಬ್ಬಂದಿಗಳು ಆಗಿರುವ ಸಮಸ್ಯೆಗೆ ವಿಷಾದ ವ್ಯಕ್ತಪಡಿಸಿ ಈ ರೀತಿಯಾಗದಂತೆ ಕೆಲಸ ಮಾಡುವದಾಗಿ ಹೇಳಿದರು.  ಈ ಸಂದರ್ಭದಲ್ಲಿ ಹಿರಿಯರಾದ ಕರಿಯಪ್ಪ ಮೈಲಾರಿ, ಲಕ್ಷ್ಮವ್ವ ಗಾಣಿಗೇರ, ಬಸವಣ್ಣೆಪ್ಪ ಗೊಂಡೇದ, ಬಸಪ್ಪ ಮಾಯಕೊಂಡ, ನಾಗಯ್ಯ ಮಠಪತಿ, ಎಂ.ಬಿ. ಚಪ್ಪರಮನಿ ಸೇರಿ ಹಲವರಿದ್ದರು.

ನ್ಯಾಯಾಧೀಶರಿಂದ ಮನಃ ಪರಿವರ್ತನೆ; ಲೋಕ ಅದಾಲತ್‌ನಲ್ಲಿ ಒಂದಾದ ದಂಪತಿ

0
  • ದೂರವಾಗಲಿದ್ದ ದಂಪತಿಗಳ ಬಾಂಧವ್ಯ ಬೆಸೆದ ನ್ಯಾಯಾಲಯ

ವಿಜಯಸಾಕ್ಷಿ ಸುದ್ದಿ, ರೋಣ

ಬಾಳಿ ಬೆಳಗಬೇಕಿದ್ದ ನವ ದಂಪತಿಗಳು ವೈವಾಹಿಕ ಹಕ್ಕುಗಳ ಪುನರ್ ಸ್ಥಾಪನೆಗೆ ಅರ್ಜಿ ಸಲ್ಲಿಸುವ ಮೂಲಕ ನ್ಯಾಯಲಯದ ಮೆಟ್ಟಿಲೇರಿದ್ದರು. ನ್ಯಾಯಾಧೀಶ ಚನ್ನಸ್ವಾಮಿರವರ ನ್ಯಾಯಯುತ ಸಲಹೆಯನ್ನು ಪಡೆದು ದಂಪತಿಗಳು ಲೋಕ ಅದಾಲತ್‌ನಲ್ಲಿ ಮತ್ತೆ ಒಂದಾಗುವ ಮೂಲಕ ಹೊಸ ಜೀವನದತ್ತ ಹೆಜ್ಜೆ ಹಾಕಿದ್ದಾರೆ.

ತಾಲೂಕಿನ ಅಬ್ಬಿಗೇರಿ ಗ್ರಾಮದ ಮುತ್ತಪ್ಪ ಜೋಗಿನ ಎಂಬುವರ ವಿರುದ್ಧ ಪತ್ನಿ ವಿದ್ಯಾ ಮುತ್ತಪ್ಪ ಜೋಗಿನ ಹಿರಿಯ ದಿವಾಣಿ ನ್ಯಾಯಾಧೀಶರುಗಳ ನ್ಯಾಯಾಲಯದಲ್ಲಿ ವೈವಾಹಿಕ ಹಕ್ಕುಗಳ ಪುನರ್‌ಸ್ಥಾಪನೆ ಕುರಿತು ಅರ್ಜಿ ಸಲ್ಲಿಸಿದ್ದರು.

https://youtube.com/live/buee8YcjQPQ

ಪತಿ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಕೆಲಸದಲ್ಲಿದ್ದು, ಪತ್ನಿ ವಿದ್ಯಾ ಶೇತ್ಕಿ ಕೆಲಸದಲ್ಲಿ ತೊಡಗಿಕೊಂಡಿದ್ದರು ಹಾಗೂ ಈ ದಂಪತಿಗಳಿಗೆ ಮಗು ಕೂಡ ಇದೆ.

ಹಿಂದೂ ಧರ್ಮ ಪದ್ಧತಿಯಂತೆ ಏಪ್ರಿಲ್ 8, 2019ರಲ್ಲಿ ಇವರು ವಿವಾಹವಾಗಿದ್ದು, ಎರಡು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದರು. ಆದರೆ ಮುತ್ತಪ್ಪ ವಿದ್ಯಾಳಿಂದ ದೂರ ಸರಿದಾಗ, ಆಕೆ ಹಿಂದೂ ವಿವಾಹ ಅಧಿನಿಯಮ ಕಾಯ್ದೆಯನ್ವಯ ವೈವಾಹಿಕ ಹಕ್ಕುಗಳ ಪುನರ್‌ಸ್ಥಾಪನೆಗೆ ನ್ಯಾಯಲಯದ ಮೊರೆ ಹೋಗಿದ್ದರು.

https://youtube.com/live/buee8YcjQPQ

ನ್ಯಾಯಾಧೀಶರಾದ ಚನ್ನಸ್ವಾಮಿಯವರು ದಂಪತಿಗಳಿಗೆ ಭವಿಷ್ಯದ ಬಗ್ಗೆ ತಿಳುವಳಿಕೆ ನೀಡಿ, ಮಗುವಿನ ಭವಿಷ್ಯದ ದೃಷ್ಟಿಯಿಂದ ತಂದೆ-ತಾಯಿಗಳ ಪಾತ್ರ ದೊಡ್ಡದಾಗಿದೆ. ಜೀವನದಲ್ಲಿ ಉತ್ತಮ ಭವಿಷ್ಯದತ್ತ ಸಾಗಬೇಕಿರುವ ನೀವುಗಳು ಹಾದಿ ತಪ್ಪಿದರೆ ಹೇಗೆ ಎಂದು ಮನಃಪರಿವರ್ತನೆಯ ಪೂರಕ ಸಲಹೆಗಳನ್ನು ನೀಡಿದ್ದಾರೆ.

ಇದರಿಂದ ಮನಸ್ಸು ಬದಲಿಸಿದ ಪತಿ ಮುತ್ತಪ್ಪ, ಪತ್ನಿ ವಿದ್ಯಾಳೊಂದಿಗೆ ಸಹಬಾಳ್ವೆ ನಡೆಸಿ ಮಗುವಿನ ಉಜ್ವಲ ಭವಿಷ್ಯಕ್ಕೆ ಬುನಾದಿಯಾಗುತ್ತೇನೆ ಎಂದು ನ್ಯಾಯಾಧೀಶರುಗಳ ಸಮ್ಮುಖದಲ್ಲಿ ವಿದ್ಯಾಳನ್ನು ಸ್ವೀಕರಿಸಿದ್ದು ಸ್ವಾಗತರ್ಹವಾಗಿದೆ. ಇದೇ ಸಂದರ್ಭದಲ್ಲಿ ಇಬ್ಬರೂ ಹಾರ ಬದಲಾಯಿಸಿಕೊಂಡು ನೆಮ್ಮದಿಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅರ್ಜಿದಾರಳ ಪರವಾಗಿ ನ್ಯಾಯವಾದಿ ಆಯ್.ಎ. ಕಿರೇಸೂರು ಸೇರಿದಂತೆ ನ್ಯಾಯವಾದಿಗಳಾದ ಶ್ರೀಶೈಲ್ ಹೂಗಾರ, ಎಸ್.ಬಿ. ಕುಂಬಾರ, ಪಿ.ಎಸ್. ಪಲ್ಲೇದ, ಜಿ.ಎಂ. ಹೆಬ್ಬಳಿಮಠ, ವಾಯ್.ಎಂ. ಗಡ್ಡಿ ಸೇರಿದಂತೆ ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಬೈಕ್-ಬಸ್ ನಡುವೆ ಡಿಕ್ಕಿ; ಸ್ಥಳದಲ್ಲೇ ಬೈಕ್ ಸವಾರ ಸಾವು

0

ಮುಖಾಮುಖಿ ಡಿಕ್ಕಿ ಹೊಡೆದು ದುರ್ಘಟನೆ…..

ನವಲಗುಂದ: ಪಟ್ಟಣದ ಲಾಲಗುಡಿ ಮಾರುತಿ ದೇವಸ್ಥಾನದ ಎದುರಿನ ಹುಬ್ಬಳ್ಳಿ-ವಿಜಯಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರವಾಹನ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.

ನವಲಗುಂದ ತಾಲ್ಲೂಕಿನ ಬೆಳವಟಗಿ ಗ್ರಾಮದ ತಿಪ್ಪನಗೌಡ್ರ ಈಶ್ವರಗೌಡ್ರ ಅಡಿವೆಪ್ಪಗೌಡ್ರ (43) ಬೆಳವಟಗಿಯಿಂದ ದ್ವಿಚಕ್ರ ವಾಹನದಲ್ಲಿ ನವಲಗುಂದಕ್ಕೆ ಬರುತ್ತಿದ್ದಾಗ ಎದುರಗಡೆ ಬಂದ ಹುಬ್ಬಳ್ಳಿ-ಇಳಕಲ್ಲ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಮೃತ ತಿಪ್ಪನಗೌಡ್ರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನವಲಗುಂದ ಸರ್ಕಾರಿ ಆಸ್ಪತ್ರೆಯಲ್ಲಿ ಕಾಯ್ದಿರಿಸಿದ್ದಾರೆ. ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿದ್ದಾರೆ. 

ಸಕ್ಕರೆ ಖಾತೆ ಸಚಿವರಿಂದ ನಿರುದ್ಯೋಗಿಗಳಿಗೆ ಅಕ್ಕರೆಯ ಉಡುಗೊರೆ…!

ಸಕ್ಕರೆ ಕಾರ್ಖಾನೆ  ಜವಳಿ ಪಾರ್ಕ ಮಂಜೂರಾತಿ – ಇಮ್ಮಡಿಯಾದ ರೈತರ ಉತ್ಸಾಹ

ವಿಜಯಸಾಕ್ಷಿ ಸುದ್ದಿ, ನವಲಗುಂದ

ಕ್ಷೇತ್ರದ ತುಪ್ಪರಿಹಳ್ಳ ವ್ಯಾಪ್ತಿಯಲ್ಲಿ ಕಬ್ಬು ಬೆಳೆಗಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಹಾಗೂ ನಿರುದ್ಯೋಗಿ ಯುವಕರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಯ ಉದ್ದೇಶದಿಂದ ದಾವಣಗೇರಿಯ ಶ್ಯಾಮನೂರ ಪ್ರೈವೆಟ್ ಕಂಪನಿಗೆ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ ಎಂದು ಕಬ್ಬು, ಸಕ್ಕರೆ ಹಾಗೂ ಜವಳಿ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದರು.

ಈ ಕುರಿತು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾಹಿತಿ ನೀಡಿದ ಅವರು, ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಅನುಮತಿ ನೀಡಲಾಗಿದೆ. ಜೊತೆಗೆ ಜವಳಿ ಪಾರ್ಕ ನಿರ್ಮಾಣಕ್ಕೂ ಮಂಜೂರಾತಿ ನೀಡಲಾಗಿದ್ದು ಇದರಿಂದಾಗಿ ಸುಮಾರು 10 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದರು.

ಸಕ್ಕರೆ ಕಾರ್ಖಾನೆ ಮಂಜೂರಾತಿಯಿಂದಾಗಿ ಈ ಭಾಗದಲ್ಲಿ ಕಬ್ಬು ಬೆಳೆಯುವ ರೈತರಿಗೆ ಅನುಕೂಲವಾಗಲಿದೆ. ಜೊತೆಗೆ ಎಥೆನಾಲ್ ಘಟಕವನ್ನು ಪ್ರಾರಂಭಿಸುವುದರಿಂದ ಸಕ್ಕರೆ ಕಾರ್ಖಾನೆಗಳಿಗೆ ಮಾರುಕಟ್ಟೆಗೆ ಸಮಸ್ಯೆಯಾಗುವುದಿಲ್ಲ. ಎಥೆನಾಲ್ ಮಿಶ್ರಿತ ಪೆಟ್ರೋಲ್ ತಯಾರಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದರಿಂದ ಶೀಘ್ರದಲ್ಲಿಯೇ ಕಾರ್ಖಾನೆ ಪ್ರಾರಂಭವಾಗಲಿದೆ.

ಕಾರ್ಖಾನೆಗಳು ಬರೀ ಸಕ್ಕರೆಯನ್ನಷ್ಟೇ ಉತ್ಪಾದಿಸುವುದರಿಂದ ಹೆಚ್ಚಿನ ಲಾಭ ಬರುವುದಿಲ್ಲ. ಮಾರುಕಟ್ಟೆಯಲ್ಲಿ ಸಕ್ಕರೆಯ ದರ ಇಳಿಕೆಯಾದರೆ ಉತ್ಪಾದಿಸಿದ ಸಕ್ಕರೆಯನ್ನು ಶೇಖರಣೆ ಮಾಡಿಕೊಳ್ಳಬೇಕು, ದಾಸ್ತಾನಾಗಿದ್ದ ಸಕ್ಕರೆ ಮಳೆ ಗಾಳಿಗೆ ಹಾನಿಯಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಇದರಿಂದಾಗಿ ರೈತರಿಗೂ ಸಕಾಲದಲ್ಲಿ ದುಡ್ಡು ಕೊಡಲು ಸಾಧ್ಯವಾಗುವುದಿಲ್ಲ. ಇದರ ಬದಲಾಗಿ ಎಥೆನಾಲ್ ಉತ್ಪಾದಿಸಿದರೆ ಕೇಂದ್ರ ಸರ್ಕಾರದಿಂದ ಸಾಲ ಸೇರಿದಂತೆ ವಿವಿಧ ಸೌಲಭ್ಯಗಳು ಸಿಗುತ್ತವೆ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಹಗೀರದಾರ, ತಹಸೀಲ್ದಾರ್ ಅನಿಲ ಬಡಿಗೇರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪೂರ, ಅಣ್ಣಿಗೇರಿ  ತಹಸೀಲ್ದಾರ್ ಬ್ರಹ್ಮರಾಂಭಾ ಗುಬ್ಬಿಶೆಟ್ಟಿ ಉಪಸ್ಥಿತರಿದ್ದರು.

ಹೊಟ್ಟೆ ಕಿಚ್ಚು ಪಡುವವರಿಗೆ ಮದ್ದಿಲ್ಲ – ಸಚಿವ ಮುನೇನಕೊಪ್ಪ

ರೈತರ ದಶಕಗಳ ಕನಸಾಗಿದ್ದ ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಡಿ.ಪಿ.ಆರ್. ಗೆ ಅನುಮೋದನೆ ನೀಡಿದೆ, ಸುಪ್ರೀಂ ಕೋರ್ಟ ವಕೀಲರೆ ಬಂದು ಡಿ.ಪಿ.ಆರ್ ಸರಿಯಾಗಿದೆ ಎಂದು ಹೇಳಿದರೂ ವಿರೋಧ ಪಕ್ಷಗಳು ಇದು ಸರಿಯಿಲ್ಲವೆಂದು ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ ನಮಗೆ ಬದ್ಧತೆ ಇರುವುದರಿಂದ ಮಹದಾಯಿ ನೀರನ್ನು ಮಲಪ್ರಭೆಗೆ ತಂದೆ ತರುತ್ತೇವೆ, ಇನ್ನು ಸಕ್ಕರೆ ಕಾರ್ಖಾನೆ, ಜವಳಿ ಪಾರ್ಕ ನಿರ್ಮಾಣಕ್ಕೆ ಮಂಜೂರಾತಿ ಪಡೆದು 10 ಸಾವಿರ ರೈತನ ಮಕ್ಕಳಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಭರವಸೆ ನೀಡಿದರೂ ವಿರೋಧ ಪಕ್ಷಗಳು ನಂಬದೇ ಹತಾಶೆ ಭಾವನೆ ವ್ಯಕ್ತಪಡಿಸುತ್ತಾರೆ.

ತುಪ್ಪರಿಹಳ್ಳದ ಹೂಳೆತ್ತುವ ಕಾಮಗಾರಿಗೆ ರೂ,150 ಕೋಟಿ ಬಿಡುಗಡೆ ಮಾಡಿಸಿ ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸುತ್ತೇವೆಂದರೂ ಹೊಟ್ಟೆ ಕಿಚ್ಚು ಪಡುವವರಿಗೆ ಮದ್ದಿಲ್ಲವೆಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಖಾರವಾಗಿಯೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. 

ಜಿ.ಎಸ್. ಪಾಟೀಲ ಗೆಲುವಿಗಾಗಿ ಹಠಯೋಗಿ ವೀರಪ್ಪಜ್ಜನ ಮಠದವರೆಗೆ ಕಾರ್ಯಕರ್ತನ ದೀಡ್ ನಮಸ್ಕಾರ

ಕಾಂಗ್ರೆಸ್ ಕಾರ್ಯಕರ್ತ ಶೇಖಪ್ಪ ಕೆಂಗಾರ ಅದರಿಂದ ದೀಡ ನಮಸ್ಕಾರ….

ವಿಜಯಸಾಕ್ಷಿ ಸುದ್ದಿ, ನರೇಗಲ್ಲ

ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ರೋಣ ಮತಕ್ಷೇತ್ರದ ಅಭ್ಯರ್ಥಿ ಜಿ.ಎಸ್. ಪಾಟೀಲ ಗೆಲುವಿಗಾಗಿ ಪಟ್ಟಣದ ಕಾರ್ಯಕರ್ತ ಶೇಖಪ್ಪ ಕೆಂಗಾರ ದೀಡ ನಮಸ್ಕಾರ ಹಾಕುವ ಮೂಲಕ ಪ್ರಾರ್ಥನೆ ಸಲ್ಲಿಸಿದರು. ಮಂಗಳವಾರ ಕೋಡಿಕೊಪ್ಪದ ಮಲ್ಲಯ್ಯಜ್ಜನವರ ಗದ್ದುಗೆಯಿಂದ ಹಠಯೋಗಿ ವೀರಪ್ಪಜ್ಜನ ಮಠದವರೆಗೆ ಸುಮಾರು ಒಂದು ಕಿ.ಮೀ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ ದೀಡ ನಮಸ್ಕಾರ ಹಾಕಿದರು.

ಕಾಂಗ್ರೆಸ್ ಮುಖಂಡ ಎಂ.ಎಸ್. ಧಡೇಸೂರಮಠ ಮಾತನಾಡಿ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ.ಎಸ್. ಪಾಟೀಲ ಗೆಲ್ಲುವುದು ಖಚಿತ. ಈಗಾಗಲೇ ಕ್ಷೇತ್ರದ ಮತದಾರರು ಜಿ.ಎಸ್. ಪಾಟೀಲ ಅವರ ಪರ ಸ್ವಯಂ ಪ್ರಚಾರ ನಡೆಸುತ್ತಿದ್ದು, ಭಾರಿ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ.

ಜಿ.ಎಸ್. ಪಾಟೀಲ ಅವರ ಅಧಿಕಾರವಧಿಯಲ್ಲಿ ಕ್ಷೇತ್ರದಲ್ಲಾದ ಅಭಿವೃದ್ಧಿ ಕಾರ್ಯಗಳು ಅವರ ಗೆಲುವಿಗೆ ಪ್ರಮುಖ ಕಾರಣವಾಗಲಿವೆ. ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುವ ಅವರ ಗುಣ, ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತಚಾಚುವ ಪ್ರವೃತ್ತಿ, ಕಿರಿಯರು, ಹಿರಿಯರು ಎನ್ನದೇ ಎಲ್ಲರನ್ನೂ ಆತ್ಮೀಯವಾಗಿ ನೋಡುವ ಮನಸ್ಥಿತಿ ಅವರದ್ದಾಗಿದೆ. ಆದ್ದರಿಂದಲೇ, ಜಿ.ಎಸ್. ಪಾಟೀಲರ ಬಗ್ಗೆ ಕ್ಷೇತ್ರದ ಜನೆತೆಗೆ ವಿಶೇಷವಾದ ವಿಶ್ವಾಸವಿದೆ. ಮುಂಬರುವ ಚುಣಾವಣೆಯಲ್ಲಿ ಜಿ.ಎಸ್. ಪಾಟೀಲ ಅವರು ಗೆಲ್ಲುವುದು ಸೂರ್ಯ, ಚಂದ್ರರಿರುವಷ್ಟೆ ಸತ್ಯ ಎಂದರು.

ಮಾಜಿ ಶಾಸಕ ಜಿ.ಎಸ್. ಪಾಟೀಲ, ನರೇಗಲ್ಲ ಘಟಕದ ಅಧ್ಯಕ್ಷ ಶಿವನಗೌಡ ಪಾಟೀಲ, ನರೇಗಲ್ಲ ಬ್ಲಾಕ್ ಅಧ್ಯಕ್ಷ ಶರಣಪ್ಪ ಬೆಟಗೇರಿ, ಎ.ಆರ್. ಮಲ್ಲಗೌಡ್ರ, ಅಲ್ಲಾಭಕ್ಷಿ ನದಾಫ್, ಬಾಳಪ್ಪ ಸೋಮಗೊಂಡ, ನಿಂಗನಗೌಡ ಲಕ್ಕನಗೌಡ್ರ, ಗುಡದಪ್ಪ ಗೋಡಿ, ಬಿ.ಎಸ್. ಕೊತಬಾಳ, ಬಸವರಾಜ ಅಬ್ಬಿಗೇರಿ, ರಾಚಯ್ಯ ಮಾಲಗಿತ್ತಿಮಠ, ಹನಮಂತ ದ್ವಾಸಲ, ಶರಣಪ್ಪ ಸೋಮಗೊಂಡ, ಶೇಖಪ್ಪ ಜುಟ್ಲ, ಶರಣಪ್ಪ ಕುರಿ, ಹಟೇಲಸಾಬ ಲತೀಫಸಾಬನವರ ಸೇರಿದಂತೆ ಇತರರಿದ್ದರು.

ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ, ಜೀಪ್ ಗ್ಲಾಸ್ ಒಡೆದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು

0

ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾಗ ಹಲ್ಲೆ ಮಾಡಿದ್ದ ಆರೋಪ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಕರ್ತವ್ಯನಿರತ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪಕ್ಕಾಗಿ ರಮೇಶ ಹನುಮಂತಪ್ಪ ವಡ್ಡರ ಹಾಗೂ ಇತರರಿಗೆ ಜಿಲ್ಲಾ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ವಿವರ

ತಾಲೂಕಿನ ಆದ್ರಳ್ಳಿ ಗ್ರಾಮದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ದಿ: 27-11-2015 ರಂದು ಮಧ್ಯರಾತ್ರಿ ರಮೇಶ ಹನುಮಂತಪ್ಪ ವಡ್ಡರ ಹಾಗೂ ಇತರರು ಅಕ್ರಮಕೂಟ ರಚಿಸಿಕೊಂಡು ಸ್ವರಾಜ್ ಕಂಪನಿಯ ಟ್ರಾಕ್ಟರ್ ಹಾಗೂ ಕಂಪ್ರೆಶರ್ ಮಶಿನ್‌ನಿಂದ ಕಲ್ಲುಬಂಡೆಗೆ ರಂಧ್ರ ಹಾಕಿ ಕಲ್ಲು ಒಡೆಯುತ್ತಿದ್ದಾಗ ರಾತ್ರಿ ಗಸ್ತು ಕರ್ತವ್ಯದ ಮೇಲಿದ್ದ ಅರಣ್ಯ ಸಿಬ್ಬಂದಿ ಹಾಗೂ ಅವರ ಜೊತೆಗಿದ್ದ ಜನರು ಅದನ್ನು ತಡೆಯಲು ಹೋದಾಗ, ಅವರಿಗೆ ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದರು.

ಅಲ್ಲದೆ ಸರ್ಕಾರಿ ಜೀಪ್‌ಗೆ ಗ್ಲಾಸ್ ಒಡೆದು, ಸರ್ಕಾರದ ಆಸ್ತಿಯನ್ನು ನಾಶಪಡಿಸಿದ ಆರೋಪವೂ ಅವರ ಮೇಲಿತ್ತು. ಆರೋಪಿತರ ವಿರುದ್ಧ ಅಂದಿನ ಪಿ.ಎಸ್.ಐ. ರವಿಚಂದ್ರ ಬಡಫಕ್ಕೀರಪ್ಪನವರ, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಸಾಕ್ಷಿ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರ ಎಸ್. ಶೆಟ್ಟಿ ಅವರು ಪ್ರಕರಣದಲ್ಲಿ ಆರೋಪ ರುಜುವಾತು ಆಗಿದ್ದರಿಂದ ಆರೋಪಿ ರಮೇಶ ಹನುಮಂತಪ್ಪ ವಡ್ಡರ ಹಾಗೂ ಇತರರಿಗೆ ಪಿ.ಓ. ಕಾಯ್ದೆ ಅಡಿ ಕಠಿಣ ಷರತ್ತುಗಳನ್ನು ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಮಲ್ಲಿಕಾರ್ಜುನಗೌಡ ಬಸವನಗೌಡ ದೊಡ್ಡಗೌಡ್ರ ಸಾಕ್ಷಿ ವಿಚಾರಣೆ ಮಾಡಿ, ವಾದವನ್ನು ಮಂಡಿಸಿದ್ದರು.

ಗಾಂಜಾ ಬೆಳೆಸಿದ್ದ ಆರೋಪಿಗೆ 15 ವರ್ಷ ಕಠಿಣ ಶಿಕ್ಷೆ, 2ಲಕ್ಷ ರೂ. ದಂಡ

0

ಅಂದಿನ ಪ್ರೊ.ಡಿ ಎಸ್ ಪಿ ಬಿ.ಎಸ್ ನೇಮಗೌಡ ನೇತೃತ್ವದಲ್ಲಿ ನಡೆದಿದ್ದ ಕಾರ್ಯಾಚರಣೆ……

ವಿಜಯಸಾಕ್ಷಿ ಸುದ್ದಿ, ಗದಗ

ತನ್ನ ಜಮೀನಿನಲ್ಲಿ ಗಾಂಜಾ ಬೆಳೆ ಬೆಳೆಸಿದ ಆರೋಪಿಗೆ ಜಿಲ್ಲಾ ಸತ್ರ ನ್ಯಾಯಾಲಯ ಹದಿನೈದು ವರ್ಷ ಕಠಿಣ ಶಿಕ್ಷೆ ಹಾಗೂ ಎರಡು ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

ದಿ.09-11-2013ರಂದು ಗದಗ ಜಿಲ್ಲೆಯ ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಗಟ್ಟಿ ಗ್ರಾಮದ ಆರೋಪಿತ ಉಡಚಪ್ಪ ಬಸವಣ್ಣೆಪ್ಪ ಪುರದ ಎಂಬುವರು ತಮ್ಮ ಒಂದು ಎಕರೆ ಮೂವತ್ತು ಗುಂಟೆ ಜಮೀನಿನಲ್ಲಿ ಹತ್ತಿ ಹಾಗೂ ತೊಗರಿ ಬೆಳೆಯಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದ ಬಗ್ಗೆ ಖಚಿತ ಮಾಹಿತಿ ಪಡೆದ ಅಂದಿನ ಪ್ರೊಬಷನರಿ ಡಿಎಸ್ ಪಿ ಬಿ ಎಸ್. ನೇಮಗೌಡ, ಪಿಎಸ್ಐ ವಿಕಾಸ್ ಲಮಾಣಿ ಹಾಗೂ ಸಿಬ್ಬಂದಿ ವರ್ಗ ದಾಳಿ ಮಾಡಿದ್ದರು.

ದಾಳಿಯ ಕಾಲಕ್ಕೆ ಒಂದು ಲಕ್ಷ ರೂ. ಮೌಲ್ಯದ 101ಕೆ.ಜಿ ಗಾಂಜಾ ಗಿಡಗಳು ವಶಪಡಿಸಿಕೊಳ್ಳಲಾಗಿತ್ತು. ಆ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ.95/2013 ಕಲಂ +20[ಎ][ಬಿ] ಎನ್ ಡಿ ಪಿಎಸ್ ಅಡಿಯಲ್ಲಿ ದಾಖಲು ಮಾಡಿಕೊಂಡಿದ್ದ ಪ್ರಕರಣವನ್ನು ಪಿಎಸ್ಐ ಆರ್.ಎಸ್. ಕಟ್ಟಿಮನಿ ಇವರು ತನಿಖೆ ಪೂರೈಸಿ ದಿ.30.04.2014 ರಂದು ಮಾನ್ಯ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.

ಸದರಿ ಪ್ರಕರಣದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಮಲ್ಲಿಕಾರ್ಜುನಗೌಡ ಬಿ. ದೊಡ್ಡಗೌಡರ ಅವರು ಪರಿಣಾಮಕಾರಿಯಾಗಿ ವಾದ ಮಂಡಿಸಿದ್ದು, ಆರೋಪಿತನ ಕೃತ್ಯ ಎಸೆಗಿದ್ದು ಸಾಬೀತಾದ ಪರಿಣಾಮ ದಿ.06.02.2023ರಂದು ಹೆಚ್ಚುವರಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರಿ ಎಸ್.ಶೆಟ್ಟಿ ಅವರು ಆರೋಪಿಗೆ ಹದಿನೈದು ವರ್ಷ ಕಠಿಣ ಶಿಕ್ಷೆ ಹಾಗೂ ಎರಡು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಕೊಡಲಿಯಿಂದ ಕೊಚ್ಚಿ ಪತಿಯಿಂದ ಪತ್ನಿಯ ಬರ್ಬರ್ ಹತ್ಯೆ; ಪ್ರೀತಿಸಿ ಮದುವೆಯಾಗಿದ್ದ ಜೋಡಿ!

ಪೊಲೀಸರಿಂದ ಆರೋಪಿ ಮೌನೇಶ್ವರ ಬಂಧನ....

ಪತ್ನಿಯ ಶೀಲದ ಬಗ್ಗೆ ಸಂಶಯಪಟ್ಟ ಪಾಪಿ ಪತಿಯೊಬ್ಬ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಬೇವಿನಕಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವಿದ್ಯಾಶ್ರೀ (29) ಕೋಲೆಗೀಡಾದ ನತದೃಷ್ಟ ಮಹಿಳೆ.

ಪಾಪಿ ಪತಿ ಮೌನೇಶ್ವರ ಆಡಿನ ಈ ಕೃತ್ಯ ಎಸೆಗಿದ ಆರೋಪಿಯಾಗಿದ್ದು, ಪೊಲೀಸರ ಅತಿಥಿಯಾಗಿದ್ದಾನೆ.

ಕಳೆದ 7-8 ವರ್ಷಗಳ ಹಿಂದೆ ವಿದ್ಯಾಶ್ರೀ ಹಾಗೂ ಮೌನೇಶ್ವರ ಪ್ರೀತಿಸಿ ಮದುವೆಯಾಗಿದ್ದರು ಎನ್ನಲಾಗಿದೆ. ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

ಪ್ರೀತಿಸಿ ಮದುವೆಯಾಗಿದ್ದ ಜೋಡಿಗಳಲ್ಲಿ ಬರುಬರುತ್ತಾ ಮೃತ ವಿದ್ಯಾಶ್ರೀಯ ಶೀಲದ ಬಗ್ಗೆ ಸಂಶಯಪಡುತ್ತಾ ಬಂದ ಮೌನೇಶ್ವರ, ಮನೆಯಲ್ಲಿ ಆಗಾಗ ಇಬ್ಬರ ನಡುವೆ ಕಲಹ ನಡೆಯುತ್ತಿತ್ತು ಎನ್ನಲಾಗಿದ್ದು, ಅದು ಮಂಗಳವಾರ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ. ಕೊಡಲಿಯಿಂದ ಕುತ್ತಿಗೆಗೆ ಹೊಡೆದು ಕೊಲೆ ಮಾಡಿದ್ದಾನೆ.

ತೀವ್ರ ರಕ್ತಸ್ರಾವವಾಗಿ ವಿದ್ಯಾಶ್ರೀ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸುದ್ದಿ ತಿಳಿದು ಗಜೇಂದ್ರಗಡ ಪಿಎಸ್ಐ ರಾಘವೇಂದ್ರ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದಾರೆ.