Home Blog Page 3298

ಗದಗ ಜಿಲ್ಲೆಯಲ್ಲಿ ಜೂನ್ 14 ರವರೆಗೆ ನಿಷೇಧಾಜ್ಞೆ; ಡಿಸಿ

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯದಲ್ಲಿ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರ ಪ್ರಕಟಿಸಿದ ಮಾರ್ಗಸೂಚಿಗಳು ಜೂನ್ 7ರ ಬೆಳಗ್ಗೆ 6 ಗಂಟೆಯಿಂದ ಜೂನ್ 14 ರ ಬೆಳಿಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರಲಿವೆ.

ಈ ಅವಧಿಯಲ್ಲಿ ಕೆಳಕಂಡಂತೆ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಗದಗ ಜಿಲ್ಲೆಯಲ್ಲಿ ಯಥಾವತ್ತಾಗಿ ಜಾರಿಗೊಳಿಸಲಾಗಿದೆ.
ಸಾರ್ವಜನಿಕರು ಈ ಮಾರ್ಗಸೂಚಿಗಳ ಪಾಲನೆ ಮಾಡುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

ಬೆ. 6 ರಿಂದ ಬೆ 10 ಗಂಟೆಯವರೆಗೆ ಮಾಂಸ ಮತ್ತು ಹೈನುಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳು , ಆಹಾರ ಸಾಮಗ್ರಿ, ದಿನಸಿ, ಮಾಂಸ ಮತ್ತು ಮೀನಿನ ಮಳಿಗೆಗಳು ಮತ್ತು ಪಶು ಆಹಾರದ ಮಳಿಗೆಗಳು, ಹಾಲಿನ ಬೂತ್, ಮದ್ಯ ಮಾರಾಟ ಮಳಿಗೆಗಳು ಕೇವಲ ಪಾರ್ಸೆಲ್ ಸೇವೆಗಾಗಿ ಅವಕಾಶ ಕಲ್ಪಿಸಲಾಗಿದೆ.

ಬೆಳಿಗ್ಗೆ 6 ರಿಂದ 12 ಗಂಟೆಯವರೆಗೆ ರೈತರಿಗೆ ಅಗತ್ಯವಿರುವ ಬೀಜ,ಗೊಬ್ಬರ, ಕೀಟನಾಶಕ, ಯಂತ್ರೋಪಕರಣ ಖರೀದಿಗಾಗಿ ಅವಕಾಶ ಕಲ್ಪಿಸಲಾಗಿದೆ.

ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ತಳ್ಳುಗಾಡಿ, ಆಟೋ, ಟಂಟಂಗಳಲ್ಲಿ ಬೀದಿ ಸುತ್ತುವ ಮೂಲಕ ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ.

ನಿಗದಿಯಾಗಿರುವ ವಿಮಾನ ಮತ್ತು ರೈಲುಗಳು, ಟ್ಯಾಕ್ಸಿ , ಅಟೋ, ರಿಕ್ಷಾಗಳು ತುರ್ತು ಸಂದರ್ಭಗಳಲ್ಲಿ ಹಾಗೂ ಮಾರ್ಗಸೂಚಿಯಲ್ಲಿ ಅನುಮತಿಸಿದ ರೀತಿಯಲ್ಲಿ ಎಲ್ಲ ಸರಕು ಸಾಗಾಣಿಕೆ ವಾಹನಗಳ ಮುಕ್ತ ಸಂಚಾರಕ್ಕೆ ಅನುಮತಿ ಇದೆ.

ಹೋಟೆಲ್, ರೆಸ್ಟೋರೆಂಟ್ ಮತ್ತು ಆಹಾರ ಮಳಿಗೆಗಳು , ಪಾರ್ಸೆಲ್ ಹಾಗೂ ಹೋಂ ಡಿಲೆವರಿ ಸೇವೆ ಮಾತ್ರ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಗತ್ಯ ಸೇವೆ ನೀಡುವ ಕಚೇರಿಗಳು ಮಾತ್ರ ಕಾರ್ಯನಿರ್ವಹಿಸಲಿವೆ.

ಎಲ್ಲ ಆರೋಗ್ಯ ಸೇವಾ ಸೌಲಭ್ಯಗಳು ಮತ್ತು ಸಂಬಂಧಿತ ಸೇವೆ, ಮೀನುಗಾರಿಕೆ, ಕೋಳಿ ಸಾಕಾಣಿಕೆ, ದಿನದ 24 ಗಂಟೆಯೂ ಅಗತ್ಯ ವಸ್ತುಗಳ ಹೋಂ ಡೆಲಿವರಿ ಸೇವೆಗೆ, ದೂರ ಸಂಪರ್ಕ, ಇಂಟರ್ ನೆಟ್ , ಪ್ರಸಾರ ಮತ್ತು ಕೆಬಲ್ ಸೇವೆಗಳು, ಐಟಿ ಮತ್ತು ಐಟಿಇಎಸ್ ಕಂಪನಿಗಳ ಅಗತ್ಯ ಸಿಬ್ಬಂದಿ ಮಾತ್ರ ಕಚೇರಿಗಳಲ್ಲಿ ಕಾರ್ಯ; (ಇತರ ಸಿಬ್ಬಂದಿ ಮನೆಯಿಂದಲೇ ಕಾರ್ಯ ನಿರ್ವಹಿಸಬೇಕು) ಸ್ಥಳದಲ್ಲಿಯೇ ಕಾರ್ಮಿಕರು/ ಸಿಬ್ಬಂದಿ ಲಭ್ಯವಿರುವ ಕೈಗಾರಿಕೆಗಳು/ ಉತ್ಪಾದನಾ ಘಟಕಗಳು ಸ್ಥಳದಲ್ಲಿಯೇ ಕಾರ್ಮಿಕರು, ಕೆಲಸಗಾರರನ್ನು ಹೊಂದಿರುವ ನಿರ್ಮಾಣ ಚಟುವಟಿಕೆ ಹಾಗೂ ರಸ್ತೆ ಕಾಮಗಾರಿ, ಅಗತ್ಯ ವಸ್ತುಗಳ ತಯಾರಿಕಾ ಘಟಕ; ನಿರಂತರ ಕಾರ್ಯನಿರ್ವಹಣೆಯ ಅಗತ್ಯವಿರುವ ತಯಾರಿಕಾ ಘಟಕ, ನ್ಯಾಯಬೆಲೆ ಅಂಗಡಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅಂತ್ಯ ಸಂಸ್ಕಾರದಲ್ಲಿ ಗರಿಷ್ಟ 5 ಜನರಿಗೆ, ಮದುವೆ ಸಮಾರಂಭಗಳಲ್ಲಿ ಗರಿಷ್ಟ 40 ಜನರಿಗೆ ಅವಕಾಶ ಕಲ್ಪಿಸಲಾಗಿದೆ.

ಈ ಕೆಳಗಿನವುಗಳಿಗೆ ಅವಕಾಶವಿಲ್ಲ

ಬಸ್, ಮೆಟ್ರೋ ರೈಲು ಸಂಚಾರ, ಶಾಲೆ, ಕಾಲೇಜುಗಳು, ಶಿಕ್ಷಣ/ ಕೋಚಿಂಗ್ ಸಂಸ್ಥೆಗಳ ತರಗತಿಗಳು, ಸಿನೆಮಾ ಹಾಲ್, ಶಾಪಿಂಗ್ ಮಾಲ್, ಜಿಮ್ನೇಸಿಯಂಗಳು, ಕ್ರೀಡಾ ಸಂಕೀರ್ಣಗಳು , ಕ್ರೀಡಾಂಗಣ, ಈಜುಗೊಳ, ಉದ್ಯಾನವನಗಳು, ಮನರಂಜನಾ ಪಾರ್ಕ್, ಕ್ಲಬ್ , ಥಿಯೇಟರ್ , ಬಾರ್ ಮತ್ತು ಸಭಾಂಗಣ, ಸಮುದಾಯ ಭವನಗಳಂತಹ ಸ್ಥಳಗಳು ಮುಚ್ಚಲಿವೆ.

ಎಲ್ಲ ಸಾಮಾಜಿಕ , ರಾಜಕೀಯ , ಕ್ರೀಡೆ , ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ದಾರ್ಮಿಕ ಕಾರ್ಯಕ್ರಮಗಳು ಮೊದಲಾದ ಹೆಚ್ಚಿನ ಜನ ಸೇರುವ ಕಾರ್ಯಕ್ರಮಗಳು, ಸಮಾವೇಶಗಳ ನಿಷೇಧ, ಎಲ್ಲ ಧಾರ್ಮಿಕ ಸ್ಥಳಗಳು / ಪೂಜಾ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧ, ಸಾರ್ವಜನಿಕರ ಓಡಾಟ ಕಡ್ಡಾಯವಾಗಿ ನಿಷೇಧ (ಕೆಲವು ವಿನಾಯಿತಿಗಳನ್ನು ಮಾತ್ರ ನೀಡಲಾಗಿದೆ) ಮಾರ್ಗಸೂಚಿಯಲ್ಲಿ ಅನುಮತಿಸಿದ ಸಂದರ್ಭಗಳನ್ನು ಹೊರತುಪಡಿಸಿ, ಸರ್ಕಾರಿ ಹಾಗೂ ಖಾಸಗಿ ಬಸ್‍ಗಳು ಹಾಗೂ ಇತರ ಪ್ರಯಾಣಿಕ ವಾಹನಗಳ ಸಂಚಾರವನ್ನು ನಿಷೇಧಿಸಿದೆ.

ಪ್ರತಿಬಂಧಕಾಜ್ಞೆ ಜಾರಿ

ಗದಗ ಜಿಲ್ಲೆಯಾದ್ಯಂತ ಕೋವಿಡ್-19 ವೈರಸ್ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ದಂಡ ಪ್ರಕ್ರಿಯೆ ಸಂಹಿತೆ 1973 , ಸಾಂಕ್ರಾಮಿಕ ರೋಗ ಕಾಯ್ದೆ 1897 ದಿ ಕರ್ನಾಟಕ ಎಪಿಡಮಿಕ್ ಡಿಸೀಸ್ ಕೋವಿಡ್-19 ರೆಗ್ಯುಲೇಷನ್ 2020 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಪ್ರಕಾರ ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಮುಖಗವಸುಗಳನ್ನು ಧರಿಸುವಿಕೆ, ಕೈಗಳನ್ನು ಶುಚಿಯಾಗಿಡುವಿಕೆ, ಮತ್ತು ದೈಹಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಕೋವಿಡ್-19 ಸರಪಳಿಯನ್ನು ತುಂಡಿರಿಸಲು ಆದೇಶದಲ್ಲಿ ಅವಕಾಶ ನೀಡಿದ ಚಟುವಟಿಕೆಗಳಿಗೆ ಮಾತ್ರ ಅನುಮತಿ ನೀಡಿದೆ. ಆದೇಶದಲ್ಲಿ ಹೊರಡಿಸಿರುವ ಷರತ್ತುಗಳಿಗೆ ಒಳಪಟ್ಟು ಮತ್ತು ಅವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಸಲುವಾಗಿ ಜೂನ 7 ರ ಬೆಳಗಿನ 6 ಗಂಟೆಯವರೆಗೆ ಜಾರಿಗೊಳಿಸಲಾದ ಪ್ರತಿಬಂಧಕಾಜ್ಞೆಯನ್ನು ಜೂನ್ 14 ಬೆಳಗಿನ 6 ಗಂಟೆಯವರೆಗೆ ಮುಂದುವರೆಸಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪ್ರಾಣಿಗಳನ್ನು ಕೊಲ್ಲುವು ಗೋ ರಕ್ಷಣೆಯಾ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಸುಗಳ ಕಾಲುಬಾಯಿ ಜ್ವರಕ್ಕೆ ಲಸಿಕೆ ಅಭಿಯಾನ ನಡೆಸದೆ ಈಗ ಗೋವುಗಳನ್ನು ಸಾವಿನ ಬಾಯಿಗೆ ದೂಡಿರುವುದು ಎಂತಹ ಗೋ ರಕ್ಷಣೆಯಾಗುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಅವರು, ಗೋ ರಕ್ಷಣೆ ಕುರಿತು ಬಿಜೆಪಿ ಬೀದಿ ಬೀದಿಯಲ್ಲಿ ಅರಚುತ್ತಲೇ ಇದೆ. ಆದರೆ, ಇವರದು ಕೇವಲ ಮಾತು, ಗೋವುಗಳ ರಕ್ಷಣೆ ಅಲ್ಲ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹಣೆ ಇದೆ.
ಹಸುಗಳಲ್ಲಿ ಕಾಣಿಸಿಕೊಳ್ಳುವ ಕಾಲುಬಾಯಿ ಜ್ವರದ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಲಸಿಕಾ ಅಭಿಯಾನ ನಡೆಸಿಯೇ ಇಲ್ಲ. ಇದನ್ನು ರಾಜ್ಯ ಸರ್ಕಾರವೂ ಕೇಳಿಲ್ಲ. ಹೀಗಾಗಿ ರಾಸುಗಳು ಅನಾರೋಗ್ಯದಿಂದ ನರಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಲುಬಾಯಿ ಜ್ವರ ಭೀಕರ ಕಾಯಿಲೆಯಾಗಿದೆ. ಈ ರೋಗ ಉಲ್ಭಣಗೊಂಡರೆ ಪ್ರಾಣಿಗಳು ನರಳಾಡಿ ಸಾಯುತ್ತವೆ. ಗೋವುಗಳ ಪಾಡು ನೋಡಲಾಗದೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಸದ್ಯ ರಾಜ್ಯದಲ್ಲಿನ ಹಲವು ಜಿಲ್ಲೆಗಳಲ್ಲಿ ರಾಸುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕಾಣುತ್ತಿದೆ. ಕೇಂದ್ರ ಸರ್ಕಾರ ಲಸಿಕಾ ಅಭಿಯಾನ ನಡೆಸದಿರುವುದಕ್ಕೆ ಇದೆ ಕಾರಣ ಎಂಬ ಅಂಶ ಬಯಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಹಿಂದೆ ಅಕ್ಟೋಬರ್‍ ತಿಂಗಳಲ್ಲಿ ಕೇಂದ್ರ ಸರ್ಕಾರವು ರಾಸುಗಳಿಗೆ ಲಸಿಕೆ ಅಭಿಯಾನ ನಡೆಸಬೇಕಿತ್ತು. ಆದರೆ, ಕೊರೊನಾ ಕಾರಣದಿಂದಾಗಿ ಈ ಅಭಿಯಾನ ಕೈಗೊಂಡಿಲ್ಲ ಎಂದು ಪಶು ವೈದ್ಯರು ಹೇಳಿದ್ದಾರೆ. ಆದರೆ, ಇಂತಹ ಸಂದರ್ಭದಲ್ಲಿ ಪ್ರಾಣಿಗಳನ್ನು ಸಾವಿನ ಬಾಯಿಗೆ ದೂಡಿರುವುದು ಎಂಥ ಗೋರಕ್ಷಣೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಯಿಲೆಗೆ ಬಲಿಯಾಗಿರುವ ರಾಸುಗಳ ಮಾಲೀಕರಿಗೆ ಸರ್ಕಾರ ಪರಿಹಾರ ನೀಡಬೇಕು. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿತ್ತು. ನಾನೇ ವೈಯಕ್ತಿಕವಾಗಿ ರೈತರಿಗೆ ಪರಿಹಾರ ಹಣ ನೀಡಿದ್ದೆ. ಇದರಿಂದ ಎಚ್ಚೆತ್ತ ಸರ್ಕಾರ ಕೂಡ ಪರಿಹಾರ ನೀಡಿತ್ತು. ಈಗಲೂ ಪ್ರಾಣಿಗಳ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದ್ದಾರೆ.

ಪೊಲೀಸರ ಎದುರೇ ಮೀನಿಗಾಗಿ ಗ್ರಾಮಸ್ಥರ ರೂಲ್ಸ್‌ ಬ್ರೇಕ್!

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ‌.‌ ಕೊರೊನಾ ಕಟ್ಟಿ ಹಾಕಲು ರಾಜ್ಯ ಸರ್ಕಾರ ಕಠಿಣ ಲಾಕ್ ಡೌನ್ ಜಾರಿ ಮಾಡಿದೆ.

ಆದ್ರೆ ಕಟ್ಟುನಿಟ್ಟಾಗಿ ಲಾಕ್ ಡೌನ್ ಜಾರಿ ನಡುವೆಯೋ ಇಲ್ಲಿ ಮೀನು ಮಾರಾಟ ಬಿಂದಾಸ್ ಆಗಿ ನಡೆದಿದೆ. ಹುಬ್ಬಳ್ಳಿ ತಾಲೂಕಿನ ಮಂಟೂರ ಗ್ರಾಮದ ಕೆರೆಯಲ್ಲಿನ ಮೀನು ಖರೀದಿಗೆ ಗ್ರಾಮಸ್ಥರು ಮುಗಿಬಿಳುತ್ತಿದ್ದಾರೆ. ಮೀನು ಖರೀದಿ ಮಾಡಲು ಸಾಮಾಜಿಕ ಅಂತರ ಮರೆತು ಉದ್ದುದ್ದ ಕ್ಯೂ ನಿಂತೂ ಫ್ರೆಶ್ ಮೀನು ಖರೀದಿ ನಡೆಸುತ್ತಿದ್ದಾರೆ. ಅದ್ರೆ ಮೀನು ಮಾರಾಟಕ್ಕೆ ಅವಕಾಶ ಇಲ್ಲದಿದ್ದರೂ ಸ್ವತಃ ಪೊಲೀಸರೇ ಮುಂದೇ ನಿಂತೂ ಮೀನು ಮಾರಾಟಕ್ಕೆ ಸಾಥ್ ನೀಡಿ ಅಕ್ರಮಕ್ಕೆ ಅನುಕೂಲ ಕಲ್ಪಿಸಿದ್ದಾರೆ‌.

ಮಂಟೂರು ಗ್ರಾಮದ ಕೆರೆಯಲ್ಲಿನ‌ ಮೀನು ಖರೀದಿಗೆ ಗ್ರಾಮಸ್ಥರು ಮುಗಿಬಿದ್ದಿದ್ರು ಕ್ರಮ ಕೈಗೊಳ್ಳಬೇಕಾದ ಪೊಲೀಸರು ಮೀನು ಮಾರಾಟಗಾರರ ಜೊತೆ ಕೈ ಜೋಡಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ವಿವಾಹ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಯಾಮಿ ಗೌತಮ್!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಬಾಲಿವುಡ್ ನ ನಟಿ ಯಾಮಿ ಗೌತಮ್ ಅವರು ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ.

ಯಾಮಿ ಗೌತಮ್ ಅವರು ತಮ್ಮ ಬಹುಕಾಲದ ಗೆಳೆಯ ಆದಿತ್ಯ ಧಾರ್ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಆದಿತ್ಯ ಧಾರ್, ಯುಆರ್ ಐ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದಾರೆ, ಕೊರೊನಾ ಹಿನ್ನೆಲೆಯಲ್ಲಿ ಅವರ ಜೊತೆ ಸರಳ ಹಾಗೂ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದಿದ್ದಾರೆ.

ತಮ್ಮ ಮದುವೆ ಫೋಟೋವನ್ನು ಯಾಮಿ, ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕುಟುಂಬದ ಆಶೀರ್ವಾದದೊಂದಿಗೆ ನಾವಿಬ್ಬರೂ ಇಂದು ವಿವಾಹವಾದೆವು. ಈ ಸಮಾರಂಭಕ್ಕೆ ಆಪ್ತರು ಮಾತ್ರ ಆಗಮಿಸಿದ್ದರು.

ಯಾಮಿ ಹಾಗೂ ಆದಿತ್ಯ ಧಾರ್ ಗೆ ಸೆಲೆಬ್ರಿಟಿ ಹಾಗೂ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಯಾಮಿ ಕನ್ನಡದಲ್ಲಿಯೂ ನಟಿಸಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಸಿನಿ ಜರ್ನಿ ಆರಂಭಿಸಿದ್ದ ಯಾಮಿ ಗೋಲ್ಡನ್ ಸ್ಟಾರ್ ಗಣೇಶ್‍ ಗೆ ಜೋಡಿಯಾಗಿದ್ದರು. ಆ ನಂತರ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಬಾಲಿವುಡ್ ನಲ್ಲಿ ಕೂಡ ಹಲವು ಪ್ರಮುಖ ಹೀರೋಗಳೊಂದಿಗೆ ಅಭಿನಯಿಸಿದ್ದಾರೆ. ಸದ್ಯ ಯಾಮಿ ಅಭಿನಯದ ಭೂತ್ ಪೊಲೀಸ್, ದಾವಿ ಸಿನಿಮಾ ಬಿಡುಗಡೆಗೆ ತಯಾರಾಗಿವೆ.

ವ್ಯಾಕ್ಸಿನ್ ಹಾಕಿಸಿಕೊಳ್ಳದಿದ್ದರೆ ರೇಷನ ಇಲ್ಲ; ಗ್ರಾಮ ಪಂಚಾಯತಿ ನಿರ್ಧಾರ!

ವಿಜಯಸಾಕ್ಷಿ ಸುದ್ದಿ, ಗದಗ

ಕೊರೊನಾ ವ್ಯಾಕ್ಸಿನ್ ಜಾಗೃತಿಗಾಗಿ ಸರ್ಕಾರ ಹಾಗೂ ಜಿಲ್ಲಾಡಳಿತ ಹಲವು ಕ್ರಮಗಳನ್ನು ಕೈಗೊಂಡರು ಜನ ಮಾತ್ರು ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ. ಹೀಗಾಗಿ ಇಲ್ಲೊಂದು ಗ್ರಾಮದಲ್ಲಿ ಡಿಫರೆಂಟ್ ಆಗಿ ಜಾಗೃತಿ ಮೂಡಿಸಲಾಗುತ್ತಿದೆ.

ಕೊರೊ‌ನಾ ವ್ಯಾಕ್ಸಿನ್ ಹಾಕಿಸಿಕೊಳ್ಳದವರಿಗೆ ಈ ಗ್ರಾಮದಲ್ಲಿ ರೇಶನ್ ನೀಡದಿರಲು ತೀರ್ಮನಿಸಲಾಗಿದೆ. ಗ್ರಾಪಂ ಸಾಮಾನ್ಯ ಸಭೆಯಲ್ಲಿ ಜನರ ಒಳಿತಿಗಾಗಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಯಾರು ವ್ಯಾಕ್ಸಿನ್ ಹಾಕಿಸಿಕೊಳ್ಳುವದಿಲ್ಲವೋ ಅಂತಹ ಕುಟುಂಬಗಳಿಗೆ ಪಡಿತರ ನೀಡದಿರುವಂತೆ ಪಡಿತರ ಅಂಗಡಿಗಳಿಗೆ ಎಚ್ಚರಿಕೆ ನೀಡಲಾಗಿದೆ.

ಜಿಲ್ಲೆಯ ರೋಣ ತಾಲೂಕಿನ ಕೊತಬಾಳ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಗ್ರಾಪಂನಲ್ಲಿ ಸಾಮಾನ್ಯ ಸಭೆ ನಡೆದಿತ್ತು. ಹೀಗಾಗಿ ಈ‌ ಕುರಿತು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ.

ಗ್ರಾಮದಲ್ಲಿ ವ್ಯಾಕ್ಸಿನೇಶನ್ ಹಾಕಿಸಿಕೊಂಡವರಿಗೆ ಆರೋಗ್ಯ ಇಲಾಖೆ ವತಿಯಿಂದ ಪತ್ರವೊಂದನ್ನು ನೀಡಲಾಗುತ್ತದೆ. ಪಡಿತರ ಚೀಟಿದಾರರು ತಮ್ಮ ಪಡಿತರ ಕಾರ್ಡಿನೊಂದಿಗೆ ಆರೋಗ್ಯ ಇಲಾಖೆ ಪತ್ರ ತರಬೇಕು. ವ್ಯಾಕ್ಸಿನ್ ಹಾಕಿಸಿಕೊಂಡ ಬಗ್ಗೆ ಪತ್ರ‌ ನೀಡಿದರೆ ಮಾತ್ರ ಅಂತವರಿಗೆ ರೆಶನ್ ಹಂಚಿಕೆ ಮಾಡಲಾಗುವುದು ಎಂದು ಸೂಚಿಸಲಾಗಿದೆ.

ಈ ಗ್ರಾಮಸ್ಥರು ಹಾಗೂ ಗ್ರಾಪಂ ಸದಸ್ಯರು ಒಟ್ಟಾಗಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಈ ಕಟ್ಟುನಿಟ್ಟಿನ ನಿರ್ಧಾರ ಕೈಗೊಂಡಿದೆ. ಜನರ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಉತ್ತಮವಾಗಿದೆ ಎಂದು ಕೂಡ ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಗ್ರಾಮಸ್ಥರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಂದೆ ಬರುತ್ತಿದ್ದು, ಸದ್ಯ ಸುಮಾರು ನೂರಕ್ಕು ಹೆಚ್ಚು ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ.

ಕೆಎಸ್ ಆರ್ ಟಿಸಿ ಹೆಸರು ಬಳಕೆಗೆ ಇಲ್ಲ ಆಕ್ಷೇಪ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೆಎಸ್ಆರ್ ಟಿಸಿ ಎನ್ನುವ ಟ್ರೇಡ್ ಮಾರ್ಕ್ ಅನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಬಳಸುವಂತಿಲ್ಲ ಎಂದು ಕೇಂದ್ರದ ಟ್ರೇಡ್ ಮಾರ್ಕ್ ರಿಜಿಸ್ಟರಿ ಬುಧವಾರ ತನ್ನ ಅಂತಿಮ ತೀರ್ಪ ಪ್ರಕಟಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಇದು ಸತ್ಯಕ್ಕೆ ದೂರವಾದ ವರದಿ. ಏಕೆಂದರೆ ಇಲ್ಲಿಯವರೆಗೂ ನಮ್ಮ ಸಾರಿಗೆ ಸಂಸ್ಥೆ, ಕೇಂದ್ರ ಟ್ರೇಡ್ ಮಾರ್ಕ್ ರಿಜಿಸ್ಟರಿ ಯಾವುದೇ ಸೂಚನೆ ಅಥವಾ ಆದೇಶ ಬಂದಿಲ್ಲ ಎಂದು ವ್ಯವಸ್ಥಾಪಕ ನಿರ್ದೇಶಕರು ಶಿವಯೋಗಿ ಸಿ.ಕಳಸದ ಸ್ಪಷ್ಟೀಕರಣ ನೀಡಿದ್ದಾರೆ.

ಈ ವಿಚಾರವಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ‘ಕೆಎಸ್ಆರ್ ಟಿಸಿ ಗೆ ನೀಡಲಾದ ಟ್ರೇಡ್ ಮಾರ್ಕ್ ಪ್ರಮಾಣ ಪತ್ರದ ವಿರುದ್ಧ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿ (ಐಪಿಎಬಿ)ಯ ಮುಂದೆ ಸಲ್ಲಿಸಿದ ಮೇಲ್ಮನವಿಗಳಲ್ಲಿ ಯಾವುದೇ ಅಂತಿಮ ಆದೇಶಗಳನ್ನು ಸಹ ಹೊರಡಿಸಲಾಗಿಲ್ಲ.
ಈ ಮಂಡಳಿಯನ್ನು 4.04.2021 ರ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯ ಮೂಲಕ ರದ್ದುಪಡಿಸಲಾಗಿದೆ. ಇಲ್ಲಿ ಬಾಕಿ ಇರುವ ಅರ್ಜಿಗಳನ್ನು ಹೈಕೋರ್ಟ್‌ಗೆ ವರ್ಗಾಯಿಸಲಾಗುತ್ತದೆ. ಆದ್ದರಿಂದ, ಕೆಎಸ್‌ಆರ್‌ಟಿಸಿಯ ಟ್ರೇಡ್ ಮಾರ್ಕ್ ನೋಂದಣಿಯು ಪ್ರಸ್ತುತ ಜಾರಿಯಲ್ಲಿದೆ ಹಾಗೂ ಕೆಎಸ್‌ಆರ್‌ ಟಿಸಿಯು ತನಗೆ ನೀಡಲಾಗಿರುವ ಟ್ರೇಡ್‌ ಮಾರ್ಕ್‌ ಗಳನ್ನು ಬಳಸಲಾಗುವುದಿಲ್ಲ ಎಂಬ ಸುದ್ದಿ-ವರದಿಗಳು ಸತ್ಯಕ್ಕೆ ದೂರವಾಗಿವೆ ಮತ್ತು ಇದನ್ನು ಕಾನೂನಾತ್ಮಕವಾಗಿ ಒಪ್ಪಲಾಗದು ಎಂದಿದ್ದಾರೆ.

ಕೇರಳ ಎಸ್‌ ಆರ್‌ ಟಿಸಿಯು, ಕೆಎಸ್‌ ಆರ್‌ ಟಿಸಿ ಸಂಸ್ಥೆ ಗೆ ನೊಟೀಸ್ ನೀಡಿದರೆ, ಸಂಸ್ಥೆಯಿಂದ ಸೂಕ್ತವಾದ ಉತ್ತರ ನೀಡಲಾಗುತ್ತದೆ. ನಮ್ಮ ಹಕ್ಕುಗಳನ್ನು ರಕ್ಷಿಸಲು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ನಾವು ಪ್ರಸ್ತುತ ನಮ್ಮ ವಕೀಲರನ್ನು ಸಂಪರ್ಕಿಸುತ್ತಿದ್ದೇವೆ. ಹೀಗಾಗಿ ಮಾಧ್ಯಮಗಳು ಕಾನೂನಾತ್ಮಕವಲ್ಲದ ಇಂತಹ ವರದಿಗಳನ್ನು ಪ್ರಕಟಿಸದಂತೆ ವಿನಂತಿಸಿದ್ದಾರೆ.

ನಟಿ ಜುಹಿ ಚಾವ್ಲಾಗೆ ಭಾರಿ ದಂಡ ವಿಧಿಸಿದ ಕೋರ್ಟ್!

ವಿಜಯಸಾಕ್ಷಿ ಸುದ್ದಿ, ನವದೆಹಲಿ

5 ಜಿ ವೈರ್‌ ಲೆಸ್ ನೆಟ್‌ ವರ್ಕ್‌ ಗಳನ್ನು ಸ್ಥಾಪಿಸುವುದರ ವಿರುದ್ಧ ಮೊಕದ್ದಮೆ ಸಲ್ಲಿಸಿದ್ದ ನಟಿ ಜುಹಿ ಚಾವ್ಲಾ ಅವರಿಗೆ ದೆಹಲಿ ಹೈಕೋರ್ಟ್ ದಂಡ ವಿಧಿಸಿದೆ.

ಈ ದೂರು ಆಲಿಸಿದ ಕೋರ್ಟ್, ದೂರುದಾರರು ಕಾನೂನಿನ ಪ್ರಕ್ರಿಯೆ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಹೇಳಿದೆ. ಅಲ್ಲದೇ, ರೂ. 20 ಲಕ್ಷ ದಂಡ ವಿಧಿಸಿದೆ ಎಂದು ಎಎನ್‌ ಐ ವರದಿ ಮಾಡಿದೆ.

ಈ ‘ಮೊಕದ್ದಮೆ ಪ್ರಚಾರಕ್ಕಾಗಿ ಎಂದು ತೋರುತ್ತದೆ’ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಜುಹಿ ಚಾವ್ಲಾ, ಸಾಮಾಜಿಕ ಮಾಧ್ಯಮದಲ್ಲಿ ವಿಚಾರಣೆಯ ಲಿಂಕ್ ಪ್ರಸಾರ ಮಾಡಿದ್ದರಿಂದಾಗಿ, ಅದರ ಲಿಂಕ್ ನ್ನು ಅವರ ಅಭಿಮಾನಿಗಳು ಹಾಡು ಹಾಡುವ ಮೂಲಕ ಮೂರು ಬಾರಿ ಅಡ್ಡಿಪಡಿಸಿದ್ದರು.

ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್‌ ನ ವಿಚಾರಣೆಗೆ ಅಡ್ಡಿಪಡಿಸಿದ ವ್ಯಕ್ತಿ ಗುರುತಿಸಿ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದೆ.

ಮಕ್ಕಳನ್ನು ಈಗಲೇ ಕಾಡುತ್ತಿದೆ ಸೋಂಕು!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮಹಾಮಾರಿಯ ಎರಡನೇ ಅಲೆಯು ರಾಜ್ಯದಲ್ಲಿ ಕಡಿಮೆಯಾಗುತ್ತಿದೆ. ಆದರೆ, ಈ ಸಮಯದಲ್ಲಿಯೇ ಮಕ್ಕಳಲ್ಲಿ ಸೋಂಕು ಹೆಚ್ಚಾಗುತ್ತಿದೆ ಎಂದು ಮಕ್ಕಳ ರೋಗ ತಜ್ಞರು ತಿಳಿಸಿದ್ದಾರೆ.

ಮೂರನೇ ಅಲೆಯು ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ಳಲಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ. ಹಾಗಾದರೆ ಇದೀಗ ಮಕ್ಕಳಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿರುವುದು ಮೂರನೇ ಅಲೆಯಾ? ಎನ್ನುವ ಪ್ರಶ್ನೆ ಸಹಜವಾಗಿಯೇ ಎಲ್ಲರನ್ನು ಕಾಡುತ್ತಿದೆ. ಬೆಂಗಳೂರಿನಲ್ಲಿ ಕಳೆದ ಏಳು ದಿನಗಳಲ್ಲಿ 9 ವರ್ಷದೊಳಗಿನ 171 ಮಕ್ಕಳಲ್ಲಿ ಕೊರೊನಾ ಕಾಣಿಸಿಕೊಂಡಿದೆ.

ಮಾರ್ಚ್ 12 ರಿಂದ ಮೇ 14 ರ ವರೆಗೆ ಮಕ್ಕಳಲ್ಲಿ ಕೊರೋನಾ ಸೋಂಕಿನ ದರ ಶೇ. 2.9 ದಷ್ಟಿತ್ತು. ಆದರೆ, ಮೇ. 15 ರಿಂದ ಪತ್ತೆಯಾಗುತ್ತಿರುವ ಪ್ರಕರಣಗಳಲ್ಲಿ ಶೇ. 4ರಷ್ಟು ಕೊರೊನಾ ಸೋಂಕು 9 ವರ್ಷದೊಳಗಿನ ಮಕ್ಕಳಲ್ಲಿ ಪತ್ತೆಯಾಗಿದೆ ಎಂದು ಅಧಿಕೃತ ಮಾಹಿತಿ ವರದಿ ತಿಳಿಸಿದೆ. ರಾಜ್ಯದ ಇತರ ಜಿಲ್ಲೆಗಳಲ್ಲಿ ಮಕ್ಕಳಲ್ಲಿ ಶೇ. 3 ರಷ್ಟು ಸೋಂಕು ತಗುಲಿದೆ.

11 ರಿಂದ 19 ವರ್ಷ ವಯಸ್ಸಿನ ಮಕ್ಕಳಲ್ಲಿಯೂ ಪ್ರಕರಣಗಳು ಪ್ರತಿದಿನ ಶೇ. 8ರಷ್ಟು ದಾಖಲಾಗುತ್ತಿವೆ. ಬೆಂಗಳೂರಿಗೆ ಬರುವ ಹೆಚ್ಚಿನ ಪ್ರಕರಣಗಳು ಇತರ ಜಿಲ್ಲೆಗಳಿಂದ ಅದರಲ್ಲಿಯೂ ಹಳ್ಳಿಗಳಿಂದ ಬರುವ ಪ್ರಕರಣಗಳು ಹೆಚ್ಚಿವೆ. ಹೀಗಾಗಿ ಮಕ್ಕಳಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿದೆ ಮತ್ತು ಮಕ್ಕಳಲ್ಲಿ ಹೆಚ್ಚುತ್ತಿರುವ ಮಲ್ಟಿ ಇಂಪ್ಲಾಮೇಟರಿ ಸಿನ್ಡ್ರೋಮ್ ನಿಂದ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯಕ್ಕೆ ಎಂಟ್ರಿ ಕೊಟ್ಟ ಮುಂಗಾರು – ಹಲವೆಡೆ ಭಾರಿ ಮಳೆ

ವಿಜಯಸಾಕ್ಷಿ ಸುದ್ದಿ, ಚಿಕ್ಕಬಳ್ಳಾಪುರ

ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶ ಮಾಡಿದೆ. ಜೂ. 4ರಂದು ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡು ಪ್ರವೇಶ ಮಾಡಿರುವ ಮುಂಗಾರು, ಇಂದು ಉತ್ತರ ಒಳನಾಡಿಗೆ ಎಂಟ್ರಿ ಕೊಡಲಿದೆ. ಹೀಗಾಗಿ ನಿನ್ನೆ ಹಲವು ಜಿಲ್ಲೆಗಳಲ್ಲಿ ಮಳೆ ಸುರಿದಿದೆ.

ತಡರಾತ್ರಿ ಸುರಿದ ಭಾರಿ ಮಳೆಗೆ ಹಳ್ಳ- ಕೊಳ್ಳಗಳು ಉಕ್ಕಿ ಹರಿದಿವೆ. ಚಿಕ್ಕಬಳ್ಳಾಪುರ ತಾಲೂಕು ಹಾಗೂ ಗುಡಿಬಂಡೆ ಪ್ರದೇಶದಲ್ಲಿ ಉತ್ತಮವಾಗಿ ಸುರಿದ ಮಳೆಯಿಂದಾಗಿ ಜನ – ಜೀವನ ಅಸ್ತವ್ಯಸ್ಥಗೊಂಡಿದೆ. ರಾಮಪಟ್ನ ಹಾಗೂ ಕರಿಗಾನತಮ್ಮನ ಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಕುಂಬದ್ರೋಣ ಮಳೆ ರೈತರ ಭೂಮಿಗೆ ತಂಪು ಚಲ್ಲಿದೆ. ಹೀಗಾಗಿ ರೈತರ ಮುಖದಲ್ಲಿ ಹರ್ಷ ಮನೆ ಮಾಡಿದೆ.

ಧಾರಾಕಾರವಾಗಿ ಸುರಿದ ಮಳೆಯ ನೀರಿಗೆ ಹಲವು ರಸ್ತೆಗಳು ಹಾಗೂ ಜಮೀನುಗಳು ಜಲಾವೃತಗೊಂಡಿವೆ. ಈ ಪ್ರದೇಶದಲ್ಲಿ ನಿನ್ನೆ ರಾತ್ರಿ ಆಲಿಕಲ್ಲು ಸಹಿತ ಭಾರಿ ಮಳೆ ಸುರಿದಿದೆ. ಅಲ್ಲದೇ, ಈ ಅಬ್ಬರದ ಮಳೆಗೆ ತೋಟಗಾರಿಕೆ ಬೆಳೆಗಳು ನಾಶವಾಗಿವೆ.

ವಾಹನ ಇಲ್ಲದೆ ಪರದಾಡುತ್ತಿದ್ದ ಮಹಿಳೆಯರು; ಮಾನವೀಯತೆ ಮೆರೆದ ಮಾಧ್ಯಮ ಸ್ನೇಹಿತರು!

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ವಾಹನ ವ್ಯವಸ್ಥೆ ಇಲ್ಲದೆ ಕತ್ತಲು ಹಾಗೂ ಮಳೆಯಲ್ಲಿ ನಡೆದು ಬರುತ್ತಿರುವದ‌್ನು ಕಂಡ ಮಾಧ್ಯಮ ಸ್ನೇಹಿತರಿಬ್ಬರು ಮಹಿಳೆಯರನ್ನು ಕಾರಿನಲ್ಲಿ ಹುಬ್ಬಳ್ಳಿಗೆ ಕರೆದುಕೊಂಡು ಬಂದು ತಮ್ಮ ಮನೆಗಳಿಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಖಾಸಗಿ ವಾಹಿನಿ ವರದಿಗಾರರಾದ ರಾಜು ದಖನಿ ಹಾಗೂ ಮಲ್ಲೇಶ ಸೂರಣಗಿ ಎಂಬುವವರೇ ಮಹಿಳೆಯರಿಗೆ ಸಹಾಯ ಮಾಡಿದ ಮಾಧ್ಯಮ ಸ್ನೇಹಿತರು.

ಕೆಲಸದ ನಿಮಿತ್ತ ಗದಗ ಜಿಲ್ಲೆಗೆ ಹೋಗಿ ಬರುವಾಗ ಮಹಿಳೆಯರು ಕತ್ತಲಲ್ಲಿ ಮಳೆಯಲ್ಲಿ ತೋಯ್ದುಕೊಂಡು ಹೋಗುತ್ತಿದ್ದರು. ಇದನ್ನು ನೋಡಿದ ಸ್ನೇಹಿತರು ವಿಚಾರಿಸಿದಾಗ ಹುಬ್ಬಳ್ಳಿಯಿಂದ ಆಟೋ‌ ಮಾಡಿಕೊಂಡು ಹೆರಿಗೆಯಾದ ತಮ್ಮ ಸಂಬಂಧಿಯೊಬ್ಬರನ್ನು ಮಾತನಾಡಿಸಲು ಕೋಳಿವಾಡ ಗ್ರಾಮಕ್ಕೆ ಬಂದಿದ್ವಿರೀ ಆದ್ರ ಹೊಳ್ಳಿ ಹೋಗುವಾಗ ರಸ್ತೆದಾಗ ಆಟೋ ಕೆಟ್ಟು ನಿಂತು. ನಮಗ ದಿಕ್ಕ ದೋಜಲಿಲ್ಲರೀ. ನಡೆಕೊಂಡ ಮನೆ ಮುಟ್ಟಬೇಕು ಅಂತ ಹೊರಟೀವಿ ನೋಡ್ರೀ ಅಂದ್ರು.

ಆವಾಗ ಮಾಧ್ಯಮ ಸ್ನೇಹಿತರು ನೀವು ಎಲ್ಲಿಗೆ ಹೊರಟೀರಿ ಅಂದಾಗ ಹುಬ್ಬಳ್ಳಿಯ ಸಾಯಿನಗರಕ್ಕೆ ಹೋಗಬೇಕು ಅಂದ್ರು. ಆಯಿತು ನಾವು ಕರಕೊಂಡು ಹೊಕ್ಕೀವಿ ಅಂತ ತಮ್ಮ ಕಾರಿನಲ್ಲಿಯೇ ಅವರನ್ನು ಮನೆಯವರೆಗೂ ಮುಟ್ಟಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಇಬ್ಬರು ಮಾಧ್ಯಮ ಸ್ನೇಹಿತರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

error: Content is protected !!