ದಾವಣಗೆರೆ: ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಹರ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ ಅವರ ವಿಚಾರಣೆಯನ್ನು ಪೊಲೀಸರು ಮುಂದೂಡಿದ್ದಾರೆ.
ಸ್ವಾಮೀಜಿ ಅವರು ಸೋಮವಾರ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಜರಾಗಬೇಕಾಗಿತ್ತು. ಆದರೆ ಬೇರೆ ಪ್ರಕರಣದ ತನಿಖೆ ನಿಮಿತ್ತ ಹರಿಹರ ಗ್ರಾಮಾಂತರ ಠಾಣೆಯ ಪಿಐ ಸುರೇಶ್ ಸಗರಿ ಕೇಂದ್ರ ಸ್ಥಾನದಿಂದ ಹೊರಗಿದ್ದ ಹಿನ್ನೆಲೆ ವಿಚಾರಣೆ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.
ವಿಚಾರಣೆಗೆ ಸಹಕರಿಸುವಂತೆ ಇನ್‌ಸ್ಪೆಕ್ಟರ್ ಅವರಿಂದ ಸ್ವಾಮೀಜಿಗೆ ಲಿಖಿತ ನೋಟಿಸ್ ರವಾನಿಸಲಾಗಿತ್ತು. ಇಂದು ಬೆಳಗ್ಗೆ 10 ಗಂಟೆಗೆ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಮೂರನೇ ಬಾರಿ ವಿಚಾರಣೆಗೆ ವಚನಾನಂದ ಸ್ವಾಮೀಜಿ ಹಾಜರಾಗಬೇಕಿತ್ತು.
ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ವಿರುದ್ಧ ಮಠದ ಹಾಸ್ಟೆಲ್ ವಿದ್ಯಾರ್ಥಿಗಳ ಮೇಲೆ ದೈಹಿಕ ಹಿಂಸೆ ನೀಡಿದ ಆರೋಪದಡಿ ಪೋಷಕರು ದೂರು ದಾಖಲಿಸಿದ್ದರು. ಈ ಸಂಬಂಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಪ್ರಾರಂಭದಲ್ಲಿ ಗದಗ ಜಿಲ್ಲೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ನಂತರ ಹರಿಹರ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಸಿಪಿಐ ಸುರೇಶ್ ಸಗರಿ ಮಾರ್ಗದರ್ಶನದಲ್ಲಿ ಪಿಎಸ್‌ಐ ಜಯರತ್ನಮ್ಮ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.
ಇದೇ ವೇಳೆ, ಪೋಕ್ಸೋ ಪ್ರಕರಣ ದಾಖಲಾಗುವ ಮುನ್ನವೇ ವಚನಾನಂದ ಸ್ವಾಮೀಜಿ ನಿರೀಕ್ಷಣಾ ಜಾಮೀನು ಪಡೆದಿದ್ದರು. ಬಳಿಕ ಆ ಜಾಮೀನನ್ನು ರದ್ದುಗೊಳಿಸುವಂತೆ ಪೊಲೀಸರು ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಜಾಮೀನು ವಿಚಾರಣೆ ನಡುವೆಯೇ ಸ್ವಾಮೀಜಿಯನ್ನು ಈಗಾಗಲೇ ವಿಚಾರಣೆಗೆ ಕರೆದು ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.



