ಕಲಬುರಗಿ: ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಕಾವ್ಯಾ ಶೈವ ಭಾಗವಹಿಸಿದ್ದ ಕಾರ್ಯಕ್ರಮವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಾರ್ಯಕ್ರಮದ ವೇಳೆ ವೇದಿಕೆ ಮೇಲೆಯೇ ಮಾತನಾಡುತ್ತಿದ್ದ ಕಾವ್ಯಾ ಅವರ ಕೈಯಿಂದ ವ್ಯಕ್ತಿಯೊಬ್ಬರು ಮೈಕ್ ಕಿತ್ತುಕೊಂಡ ಘಟನೆ ವೈರಲ್ ಆಗಿದೆ.
ಕಲಬುರಗಿಯ ಎಸ್.ಎಂ ಪಂಡಿತ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾವ್ಯಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಈ ನಡುವೆಯೇ ಕಾವ್ಯಾ ಮಾತನಾಡುತ್ತಿದ್ದಾಗ ವ್ಯಕ್ತಿಯೊಬ್ಬರು ಅವರ ಬಳಿ ಬಂದು ಮೈಕ್ ಅನ್ನು ಕಸಿದುಕೊಂಡಿದ್ದಾರೆ.
ಘಟನೆಯಿಂದ ಕೆಲಕಾಲ ವೇದಿಕೆಯ ಮೇಲೆ ಗೊಂದಲ ಉಂಟಾಯಿತು. ಕಾವ್ಯಾ ಶೈವ ಅಚ್ಚರಿಗೊಂಡರೂ, ಯಾವುದೇ ಪ್ರತಿಕ್ರಿಯೆ ನೀಡದೆ ಸಮಾಧಾನದಿಂದ ನಿಂತಿದ್ದರು. ಆದರೆ, ಕಾವ್ಯಾಗೆ ಆಗಿರುವ ಅವಮಾನವನ್ನು ಪ್ರಶ್ನಿಸಿದ ಸಂಘಟಕರೊಬ್ಬರು ಮೈಕ್ ಕಿತ್ತುಕೊಂಡ ವ್ಯಕ್ತಿಯೊಂದಿಗೆ ವಾಗ್ವಾದ ನಡೆಸಿದ್ದಾರೆ.
ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿದ್ದು, “ಅತಿಥಿಗಳಿಗೆ ಇದೇನಾ ಗೌರವ?” ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಕಾವ್ಯಾ ಅವರ ತಾಳ್ಮೆಯನ್ನು ಮೆಚ್ಚಿಕೊಂಡಿದ್ದಾರೆ.
ಕಾವ್ಯಾ ಶೈವ ಅವರು ಕಿರುತೆರೆಯ ‘ಕೆಂಡ ಸಂಪಿಗೆ’ ಧಾರಾವಾಹಿ ಮೂಲಕ ಮನೆಮಾತಾಗಿದ್ದು, ‘ಕೊತ್ತಲವಾಡಿ’ ಸಿನಿಮಾದಲ್ಲೂ ನಾಯಕಿಯಾಗಿ ಅಭಿನಯಿಸಿದ್ದಾರೆ.



