Home Blog Page 3302

ಲಾಕ್ ಡೌನ್ ನಿಂದಾಗಿ ಬಾಗಿಲು ಹಾಕಿರುವ ಪುಸ್ತಕ ಮಳಿಗೆಗೆ ಬೆಂಕಿ!

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಕೊರೊನಾ ಲಾಕ್ ಡೌನ್ ನಿಂದಾಗಿ ಸದ್ಯ ಅಂಗಡಿ – ಮುಂಗಟ್ಟುಗಳು ಬಂದ್ ಆಗಿವೆ. ಅದರಲ್ಲಿಯೂ ಲಾಕ್ ಡೌನ್ ಘೋಷಣೆಯಾದಾಗಿನಿಂದಲೂ ಬುಕ್ ಸ್ಟಾಲ್ ಗಳು ಬಾಗಿಲನ್ನೇ ತೆರೆದಿಲ್ಲ. ಹೀಗೆ ಬಾಗಿಲು ಹಾಕಿದ್ದ ಬುಕ್ ಸ್ಟಾಲ್ ಗೆ ಬೆಂಕಿ ಬಿದ್ದಿದ್ದು, ಬಹುತೇಕ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.

ಈ ಘಟನೆನ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿಯ ಬಿವಿಬಿ ಎಂಜನೀಯರಿಂಗ್ ಕಾಲೇಜಿನ ಎದುರಿಗಿರುವ ಕಾಂಪ್ಲೆಕ್ಸ್ ನಲ್ಲಿನ ರೂಪಾ ಬುಕ್ ಸ್ಟಾಲ್ ಮಳಿಗೆಗೆ ಬೆಂಕಿ ಹತ್ತಿದ್ದು, ಒಳಗಿರುವ ಎಲ್ಲ ಬಗೆಯ ಪುಸ್ತಕಗಳು ಹಾಗೂ ವಸ್ತುಗಳು ಸುಟ್ಟು ಕರಕಲಾಗಿವೆ.
ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಕೂಡೇ ಸ್ಥಳೀಯರು ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದ್ದರಿಂದ ಸಮಯಕ್ಕೆ ಸಾರಿಯಾಗಿ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಂಪೂರ್ಣ ಲಾಕ್ ಡೌನ್ ಗೂ ಮುನ್ನ ಖರೀದಿಗೆ ಮುಗಿಬಿದ್ದ ಜನ; 10 ಗಂಟೆ ವರೆಗೂ ಅವಳಿ ನಗರದಲ್ಲಿ ಜನಜಂಗುಳಿ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಾದ್ಯಂತ ಇಂದಿನಿಂದ ಐದು ದಿನಗಳ ಕಾಲ ಕಠಿಣ ಹಾಗೂ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರಲಿದೆ. ಹೀಗಾಗಿ ಬೆಳಿಗ್ಗೆ 10ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ, ಜನ ಮಾತ್ರ ಎಷ್ಟೇ ಹೇಳಿದರೂ ಮೈ ಮರೆಯುವುದನ್ನು ಮಾತ್ರ ಬಿಡಲಿಲ್ಲ.

ಕೊರೊನಾ ಎಗ್ಗಿಲ್ಲದೆ ಜನರ ಪ್ರಾಣ ಕಿತ್ತುಕೊಂಡು ಹೋಗುತ್ತಿದ್ದರೂ ಕೂಡ ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಮುಗಿ ಬಿದ್ದಿದ್ದರು. ನಗರದ ನಾಮ ಜೋಶಿ ರೋಡ್ ನಲ್ಲಿ ಜನ ಜಂಗುಳಿಯೇ ತುಂಬಿತ್ತು. ಇಲ್ಲಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿರುವ ಜನರು ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಮರೆತು ಅಗತ್ಯ ವಸ್ತುಗಳನ್ನು ಖರೀದಿಸಿದ್ದಾರೆ.

ಗದಗ- ಬೆಟಗೇರಿ ಅವಳಿ ನಗರದ ಜನರು ಸೇರಿದಂತೆ ಗ್ರಾಮೀಣ ಭಾಗದ ಜನರು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರು. ಹೀಗಾಗಿ ಮಾರುಕಟ್ಟೆಗಳು ಜನ ಜಾತ್ರೆಯಂತಾಗಿತ್ತು. ಬಹುತೇಕರು ಮಾಸ್ಕ್ ಗಳನ್ನೇ ಹಾಕಿಕೊಂಡು ಬಂದಿರಲಿಲ್ಲ. ಸಾಮಾಜಿಕ ಅಂತರವಂತೂ ಇವರಿಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸಿದ್ದಾರೆ.

ಸರ್ಕಾರ ಹಾಗೂ ಜಿಲ್ಲಾಡಳಿತ ಹಲವು ಕಾರ್ಯಕ್ರಮಗಳ ಮೂಲಕ ಹಾಗೂ ಲಾಕ್ ಡೌನ್ ಮೂಲಕ ಜನರಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಿದರೂ ಜನರು ಮಾತ್ರ ಸುಧಾರಿಸುತ್ತಿಲ್ಲ. ಅಧಿಕಾರಿಗಳು ಎಷ್ಟೇ ಬುದ್ಧಿ ಹೇಳಿದರೂ ಜನ ಮಾತ್ರ ತಮ್ಮ ವರ್ತನೆಯಿಂದಲೇ ಎಲ್ಲವನ್ನೂ ಖರೀದಿಸಿ ಮನೆಗಳತ್ತ ಮುಖ ಮಾಡಿದರು.

ಇಂದಿನಿಂದ ಮತ್ತೆ ಜಿಲ್ಲೆಯಲ್ಲಿ ಜೂ. 7ರ ವರೆಗೆ ಸಂಪೂರ್ಣ ಲಾಕ್ ಡೌನ್ ಇರಲಿದೆ.

ಕೊರೊನಾ ಸಂಕಷ್ಟ, ಕುಟುಂಬ ಕಲಹ; 15ನೇ ಮಹಡಿಯಿಂದ ಜಿಗಿದ ವ್ಯಕ್ತಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಲಾಕ್ ಡೌನ್ ನಿಂದಾಗಿ ಕೆಲಸ ಕಳೆದುಕೊಂಡ ವ್ಯಕ್ತಿಯೊಬ್ಬ ಮನೆಯಲ್ಲಿನ ಕಲಹಕ್ಕೆ ಮನನೊಂದು ಅಪಾರ್ಟ್ ಮೆಂಟ್ ವೊಂದರ 15ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿ ಕಾರ್ಪೋ ರೆಸಿಡೆನ್ಸ್ ನಲ್ಲಿ ನಡೆದಿದೆ.

ಇಲ್ಲಿಯ ಕೋರಮಂಗಲದ ನಿವಾಸಿ ವಿವೇದ್ ಮಧುಸೂದನ್ ವೈದ್ಯ (61) ಸಾವನ್ನಪ್ಪಿದ ವ್ಯಕ್ತಿ. ಫ್ಲ್ಯಾಟ್ ಖರೀದಿಸುವ ನೆಪದಲ್ಲಿ ನಿರ್ಮಾಣ ಹಂತದ ಕಟ್ಟಡಕ್ಕೆ ನಿನ್ನೆ ಬೆಳಿಗ್ಗೆ ತೆರಳಿದ್ದ ಮಧುಸೂದನ್, ಸೂಪರ್ ವೈಸರ್ ಗೆ ಫ್ಲ್ಯಾಟ್ ತೋರಿಸುವಂತೆ ಹೇಳಿದ್ದರು.

ಈ ಸಂದರ್ಭದಲ್ಲಿ ಸೂಪರ್ ವೈಸರ್ ಕಮಲೇಶ್ ಅವರು 15ನೇ ಮಹಡಿಯಲ್ಲಿರುವ ಫ್ಲ್ಯಾಟ್ ತೋರಿಸಿದ್ದಾರೆ. ಈ ಸಂದರ್ಭದಲ್ಲಿ ಫೋಟೋ ತೆಗೆಯಬೇಕು ನೀವು ಹೋಗಿ ಎಂದು ಕಮಲೇಶ್ ಗೆ ಹೇಳಿದ್ದಾರೆ. ಅವರು ಹೋಗುತ್ತಿದ್ದಂತೆಯೇ ಮಧುಸೂದನ್ ಕಟ್ಟಣಡದಿಂದ ಕೆಳಗೆ ಜಿಗಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಕಮಲೇಶ್, ಕೂಡಲೇ ಸ್ಥಳದಲ್ಲಿದ್ದ ಸಿಬ್ಬಂದಿಗಳನ್ನು ಕರೆದಿದ್ದಾರೆ. ಅಲ್ಲದೇ, ವಿವೇಕ್ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೃತ ವ್ಯಕ್ತಿಗೆ ಕಳೆದ 10 ವರ್ಷಗಳ ಹಿಂದೆಯೇ ಪತ್ನಿ ವಿಚ್ಛೇದನ ನೀಡಿದ್ದರು. ಸದ್ಯ ವಿಚ್ಛೇದಿತ ಪತ್ನಿ ಹಾಗೂ ಮಕ್ಕಳು ವಿದೇಶದಲ್ಲಿ ನಲೆಸಿದ್ದಾರೆ. ಪತ್ನಿ ವಿಚ್ಛೇದನ ನೀಡಿದಾಗಿನಿಂದಲೂ ಮಧುಸೂದನ್ ಮಾನಸಿಕವಾಗಿ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಆರ್ಥಿಕ ತೊಂದರೆಯಲ್ಲಿರುವ 3 ಸಾವಿರ ಸಿನಿಮಾ ಕಾರ್ಮಿಕರ ಬೆನ್ನಿಗೆ ನಿಂತ ನಟ ಯಶ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾದಿಂದಾಗಿ ಎಲ್ಲ ವರ್ಗದ ಜನರ ಬದುಕು ಬೀದಿಗೆ ಬಂದು ನಿಂತಿದೆ. ಸದ್ಯ ಲಾಕ್ ಡೌನ್ ಜಾರಿಯಲ್ಲಿರುವುದರಿಂದಾಗಿ ಚಿತ್ರರಂಗದ ಕಾರ್ಮಿಕರು ಮತ್ತು ತಂತ್ರಜ್ಞರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.  ನಟ ಯಶ್ ಅವರು ಚಿತ್ರರಂಗದ ಕಾರ್ಮಿಕರಿಗೆ ನೆರವು ನೀಡಲು ಮುಂದಾಗಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಯಶ್, ಕನ್ನಡ ಚಿತ್ರರಂಗದ ಮೂರು ಸಾವಿರ ಕಾರ್ಮಿಕರಿಗೆ ತಲಾ ರೂ. 5 ಸಾವಿರದಂತೆ  ಬರೋಬ್ಬರಿ 3 ಸಾವಿರ ಜನರಿಗ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. “ಕಣ್ಣಿಗೆ ಕಾಣದ ವೈರಸ್ ಮನುಷ್ಯನ ಬದುಕನ್ನು ಬುಡಮೇಲು ಮಾಡಿದ್ದು, ಕಳೆದ ಒಂದು ವರ್ಷದಿಂದ ನನ್ನ ಸಿನಿಮಾ ಕುಟುಂಬ ಅಸಹಾಯಕತೆಯಿಂದ ಕೈಕಟ್ಟಿ ಕುಳಿತಿದೆ. ಇದು ಮಾತನಾಡುವ ಸಮಯವಲ್ಲ. ಸಂಕಷ್ಟದಲ್ಲಿರುವವನ ಜೊತೆ ನಿಲ್ಲುವ ಸಮಯವಾಗಿದೆ.

ಹಾಗಾಗಿ, 3000ಕ್ಕೂ ಹೆಚ್ಚು ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಅಧಿಕೃತ ಖಾತೆಗಳಿಗೆ ಮೂರು ಸಾವಿರ ರೂಪಾಯಿಗಳನ್ನು ನನ್ನ ಸಂಪಾದನೆಯ ಹಣದಿಂದ ಭರಿಸಲು ನಿರ್ಧರಿಸಿದ್ದೇನೆ. ನಮ್ಮ ಒಕ್ಕೂಟದ ಅಧ್ಯಕ್ಷರಾದ ಸಾ.ರಾ. ಗೋವಿಂದು ಮತ್ತು ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ್ ಅವರೊಂದಿಗೆ ಚರ್ಚಿಸಿದ್ದೇನೆ.

ತಕ್ಷಣವೇ ತೊಂದರೆಯಲ್ಲಿರುವ 3000 ಕ್ಕೂ ಅಧಿಕ ಕಾರ್ಮಿಕರ ಖಾತೆಗೆ ತಲಾ 5 ಸಾವಿರ ರೂಪಾಯಿ ಜಮಾ ಮಾಡಲಾಗುವುದು ಎಂದು ಯಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೋಗ ತೊಲಗಲೆಂದು ದೇವರಿಗೆ ಹೋಳಿಗೆ ಎಡೆ! ಶ್ರೀದೇವಿ ನಿನ್ನಾಲ ಉದೋ ಉದೋ ಎಂದ ಗ್ರಾಮಸ್ಥರು

ವಿಜಯಸಾಕ್ಷಿ ಸುದ್ದಿ, ಹೂವಿನಹಡಗಲಿ

ಕೊರೊನಾ ಸಮಯದಲ್ಲಿಯೂ ಜನರು ತಮ್ಮ ನಂಬಿಕೆಯ ಮೊರೆ ಹೋಗುತ್ತಿದ್ದಾರೆ. ತಾಲೂಕಿನ ಮಿರಾಕೊರನಹಳ್ಳಿ ಹಾಗೂ ವಿನೋಬನಗರ ಗ್ರಾಮದ ಜನರು ಮಹಾಮಾರಿ ತೊಲಗಲೆಂದು ದೇವರ ಮೊರೆ ಹೋದ ದೃಶ್ಯ ಕಂಡು ಬಂದಿದೆ.

ಒಂದೆಡೆ ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್ ಡೌನ್ ವಿಧಿಸಿದ್ದರೆ, ಇತ್ತ ಜನರು ನಂಬಿಕೆಯ ಮೊರೆ ಹೋಗುತ್ತಿದ್ದಾರೆ. ಅದೇ ರೀತಿ ಇಲ್ಲಿಯ ಜನರು ದೇವಿಯ ಮೊರೆ ಹೋಗಿದ್ದಾರೆ. ಗ್ರಾಮದಲ್ಲಿನ ಪ್ರತಿಯೊಂದು ಕುಟುಂಬಸ್ಥರು ಗ್ರಾಮಗಳ ಗಡಿಯಾಚೆ ಇರುವ ದೇವಿಯ ಮರಕ್ಕೆ ಮಡಿಯಿಂದ ಹೋಳಿಗೆ ಮಾಡಿಕೊಂಡು ಪಾದಯಾತ್ರೆಯ ಮೂಲಕ ಹೂವು, ಹಣ್ಣು, ಕಾಯಿ ತೆಗೆದುಕೊಂಡು ಹೋಗಿ ಶ್ರೀದೇವಿ ನಿನ್ನಾಲ ಉದೋ ಉದೋ ಎನ್ನುತ್ತ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

25 ವರ್ಷಗಳಿಂದ ಮಹಾನ್ ಶರಣ ಶರಣ ಬಸವೇಶ್ವರ ಸ್ವಾಮಿಯ ಮಹಾ ಪುರಾಣ ನಡೆಸಿಕೊಂಡು ಬಂದ ಇತಿಹಾಸ ಈ ಎರಡೂ ಗ್ರಾಮಗಳದ್ದಾಗಿದೆ. ಜನರು ಶರಣ ಬಸವನ ಆಶೀರ್ವಾದದಿಂದಲೇ ಊರಲ್ಲಿ ಉತ್ತಮ ಮಳೆ, ಬೆಳೆ ಬರುತ್ತಿದೆ ಎಂದೇ ಭಾವಿಸಿದ್ದರು. ಸದ್ಯ ಕೊರೊನಾ ತೊಲಗಿಸಲು ದೇವಿಯ ಮೊರೆ ಹೋಗಿದ್ದಾರೆ. ದೇವಿಗೆ ಹರಿಕೆ ತೀರಿಸಿ, ಕೊರೊನಾ ತೊಲಗಲಿ ಎಂದು ಪ್ರಾರ್ಥಿಸಿದ್ದಾರೆ.

ಮಹಾಮಾರಿ ತೊಲಗಲಿ ಎಂದು ನಾವೆಲ್ಲರೂ ಹೋಳಿಗೆ, ಹೂವು, ಕಾಯಿ, ಹಣ್ಣು ಎಡೆ ಮಾಡಿ ದೇವಿಯ ಸನ್ನಿಧಿಗೆ ಹೋಗಿ ಪ್ರಾರ್ಥಿಸಿಕೊಂಡಿದ್ದೇವೆ. ನಾವು ದೇವರನ್ನು ನಂಬುತ್ತೇವೆ. ದೇವಿಯು ನಮ್ಮ ಪ್ರಾರ್ಥನೆ ಮನ್ನಿಸಿ, ಕೊರೊನಾ ತೊಲಗಿಸುತ್ತಾಳೆ ಎಂದು ಗ್ರಾಮದ ಜಿ. ಬಸವರಾಜ, ಪಿ.ಎಂ. ಕೊಟ್ಟಯ್ಯಸ್ವಾಮಿ ಸೇರಿದಂತೆ ಮುಖಂಡರು ಹೇಳುತ್ತಿದ್ದಾರೆ.

ರಾಜ್ಯದಲ್ಲಿಯೂ ರದ್ದಾಗಲಿವೆಯೇ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳು?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಈಗಾಗಲೇ ಕೇಂದ್ರ ಸರ್ಕಾರ ಸಿಬಿಎಸ್ ಇ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಿದೆ. ಈ ಬೆನ್ನಲ್ಲಿಯೇ ರಾಜ್ಯದಲ್ಲಿಯೂ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯ ಬಗ್ಗೆ ಚರ್ಚೆಗಳು ಶುರುವಾಗಿವೆ.
ಈಗಾಗಲೇ ಈ ಕುರಿತು ಸ್ಪಷ್ಟನೆ ನೀಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಈಗಾಗಲೇ ಸಿಬಿಎಸ್ ಇ ಪರೀಕ್ಷೆಗಳು ರದ್ದಾದ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿವೆ. ರಾಜ್ಯದ ಪರಿಸ್ಥಿತಿ ಅವಲೋಕಿಸಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ರಾಜ್ಯ ಪಠ್ಯಕ್ರಮ ಅನುಸರಿಸಿ ಓದುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಸ್ಥಿತಿಗತಿ, ಮೌಲ್ಯಮಾಪನದ ಅವಶ್ಯಕತೆ ಕುರಿತು ಅಭಿಪ್ರಾಯಗಳ ವಿಸ್ತೃತ ಚರ್ಚೆ ನಡೆಸಿ, ವಿದ್ಯಾರ್ಥಿಗಳ ಆರೋಗ್ಯ ಹಾಗೂ ಭವಿಷ್ಯದ ಹಿತದೃಷ್ಟಿಯಿಂದ ಶೀಘ್ರದಲ್ಲಿಯೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಆದರೆ, ಪರೀಕ್ಷೆಯ ದಿನಾಂಕವನ್ನು ಮಾತ್ರ ಪ್ರಕಟಿಸಿಲ್ಲ. ಇದರ ಮಧ್ಯೆ ಕೇಂದ್ರ ಸರ್ಕಾರವು ಸಿಬಿಎಸ್ ಇ 12ನೇ ತರಗತಿಗಳ ಪರೀಕ್ಷೆಗಳನ್ನು ರದ್ದು ಮಾಡಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಪರೀಕ್ಷೆ ನಡೆಸುವ ಕುರಿತು ಇನ್ನೆರಡು ದಿನಗಳಲ್ಲಿ ಸರ್ಕಾರದಿಂದ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಅಕ್ರಮ ಮದ್ಯ ಮಾರಾಟ; ಮೂರೇ ದಿನಗಳಲ್ಲಿ 15 ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಲಾಕ್ ಡೌನ್ ಸಂದರ್ಭದಲ್ಲಿ ಹಣ ಗಳಿಸುವ ದುರಾಸೆಯಿಂದ ಅಕ್ರಮವಾಗಿ ಮದ್ಯ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ೧೫ ಜನರನ್ನು ಬಂಧಿಸಲಾಗಿದೆ. ಮೂರು ದಿನಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 66,400 ರೂ. ಮೌಲ್ಯದ ಮದ್ಯ ವಶಪಡಿಸಿಕೊಂಡು 15 ಜನರನ್ನು ಬಂಧಿಸಲಾಗಿದೆ.

ಮೇ 29, 30 ಹಾಗೂ 31ರಂದು ಜಿಲ್ಲೆಯ ಲಕ್ಷ್ಮೇಶ್ವರ, ಗಜೇಂದ್ರಗಡ, ಶಿರಹಟ್ಟಿ, ಬೆಟಗೇರಿ, ಮುಂಡರಗಿ ಪೊಲೀಸರು ಹಾಗೂ ಸೈಬರ್ ಪೊಲೀಸರು ದಾಳಿ ನಡೆಸಿದ್ದರು.

ಬಂಧಿತರನ್ನು ಲಕ್ಷ್ಮೇಶ್ವರದ ಗಂಗಾಧರ ಶಿವಪ್ಪ ಹಳ್ಳಿಕೇರಿ, ಶರಣಪ್ಪ ಬಸವಣ್ಣೆಪ್ಪ ಗೋಡಿ, ಗಜೇಂದ್ರಗಡದ ಸಂಗಪ್ಪ ಈಶಪ್ಪ ಹಾವೇರಿ, ಹುಲಕೋಟಿಯ ನಾಗರಾಜ್ ಯಲ್ಲಪ್ಪ ಕಬಾಡಿ, ಶಶಿಕುಮಾರ್ ರಾಮಚಂದ್ರ ನಾಯಕ್, ಗಾವರವಾಡದ ಪ್ರಕಾಶ್ ಯಲ್ಲಪ್ಪ ಬೆಟಗೇರಿ, ಕದಡಿಯ ಅಡಿವೆಪ್ಪ ಮರಿಯಪ್ಪ ಸಾಗರ, ನಾಗಾವಿ ತಾಂಡಾದ ಮಾರುತಿ ಶಂಕ್ರಪ್ಪ ಲಮಾಣಿ, ಬಳಗಾನೂರಿನ ಬೂದಪ್ಪ ಬಸಪ್ಪ ಚಲವಾದಿ, ಕಳಸಾಪುರ ರಸ್ತೆಯ ಶಂಕರಸಾ ನಾಗೇಂದ್ರಸಾ ಪವಾರ,

ಶಿರಹಟ್ಟಿ ತಾಲೂಕಿನ ಯಳವತ್ತಿ ಗ್ರಾಮದ ಬಸವರಾಜ್ ರಾಮಪ್ಪ ಪತ್ತಾರ, ಬೆಟಗೇರಿಯ ಬಸಮ್ಮ ಕೊಟ್ರಪ್ಪ ಭಜಂತ್ರಿ, ಪ್ರದೀಪ ಅರ್ಜುನ್ ಮುದೋಳ ಹಾಗೂ ಮುಂಡರಗಿ ತಾಲೂಕಿನ ಚುರ್ಚಿಹಾಳ ಗ್ರಾಮದ ರಾಮಪ್ಪ ಬಾಲಪ್ಪ ಹರಣಶಿಖಾರಿ, ಕಲಕೇರಿಯ ಮಂಜುನಾಥ್ ಬಸಪ್ಪ ನಾಯ್ಕರ್ ಎಂದು ಗುರುತಿಸಲಾಗಿದೆ.

ಈ ಕಾರ್ಯಾಚರಣೆಗಳಲ್ಲಿ ಲಕ್ಷ್ಮೇಶ್ವರ ಪಿಎಸ್‌ಐ ಲೋಹಾರ, ಗಜೇಂದ್ರಗಡ ಪಿಎಸ್‌ಐ ದಾಸ್ಯಾಳ, ಗದಗ ಗ್ರಾಮೀಣ ಠಾಣೆಯ ಪಿಎಸ್‌ಐ ಅಜಿತಕುಮಾರ್ ಹೊಸಮನಿ, ಸೈಬರ್ ಠಾಣೆಯ ಇನ್‌ಸ್ಪೆಕ್ಟರ್ ಟಿ. ಮಹಾಂತೇಶ್, ಶಿರಹಟ್ಟಿ ಪಿಎಸ್‌ಐ ನವೀನ್ ಜಕ್ಕಲಿ, ಬೆಟಗೇರಿ ಪಿಎಸ್‌ಐ ರಾಜೇಶ್ ಬಟಗುರ್ಕಿ, ಮುಂಡರಗಿ ಪಿಎಸ್‌ಐ ನೂರಜಾಹನ್ ಸದರ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಪೊಲೀಸರ ಈ ಕಾರ್ಯಕ್ಕೆ ಎಸ್ಪಿ ಯತೀಶ್ ಎನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಅಬಕಾರಿ ಇಲಾಖೆ ಮೌನವೇಕೆ?

ಇಷ್ಟೆಲ್ಲ ಅಕ್ರಮ ಮದ್ಯ ಮಾರಾಟ ವಾಗುತ್ತಿದ್ದರೂ ನಮಗೆ ಇದ್ಯಾವದು ಸಂಬಂಧವೇ ಇಲ್ಲ ಅನ್ನುವಂತೆ ಅಬಕಾರಿ ಇಲಾಖೆ ಕಣ್ಮುಚ್ಚಿ ಕುಳಿತಿದೆ ಅಂತ ಜನ ಆರೋಪಿಸುತ್ತಿದ್ದಾರೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೇಗಿದೆ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತ ಸಾಗುತ್ತಿದೆ. ಇಂದು ರಾಜ್ಯದಲ್ಲಿ 14,304 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಆದರೆ, ಸಾವನ್ನಪ್ಪುವವರ ಸಂಖ್ಯೆಯಲ್ಲಿ ಆತಂಕ ಹೆಚ್ಚಾಗುತ್ತಿದ್ದು, 464 ಜನರು ಬಲಿಯಾಗಿದ್ದಾರೆ.

ಇಂದು ರಾಜ್ಯದ ವಿವಿಧ ಆಸ್ಪತ್ರೆಗಳಿಂದ 29271 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ ಮಹಾಮಾರಿಗೆ 29,554 ಜನರನ್ನು ಬಲಿ ಪಡೆದಿದೆ.

ಬೆಂಗಳೂರಿನಲ್ಲಿ ಇಂದು 3,418 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 276 ಜನ ಬಲಿಯಾಗಿದ್ದಾರೆ. ಇನ್ನುಳಿದಂತೆ ಬಾಗಲಕೋಟೆ 217, ಬಳ್ಳಾರಿ 399, ಬೆಳಗಾವಿ 891, ಬೆಂಗಳೂರು ಗ್ರಾಮಾಂತರ 202, ಬೆಂಗಳೂರು ನಗರ 3,418, ಬೀದರ್ 22, ಚಾಮರಾಜನಗರ 80, ಚಿಕ್ಕಬಳ್ಳಾಪುರ 152, ಚಿಕ್ಕಮಗಳೂರು 504, ಚಿತ್ರದುರ್ಗ 637, ದಕ್ಷಿಣ ಕನ್ನಡ 536, ದಾವಣಗೆರೆ 178, ಧಾರವಾಡ 267, ಗದಗ 214, ಹಾಸನ 1,127, ಹಾವೇರಿ 219, ಕಲಬುರಗಿ 82, ಕೊಡಗು 162, ಕೋಲಾರ 338, ಕೊಪ್ಪಳ 272, ಮಂಡ್ಯ 337, ಮೈಸೂರು 1,153, ರಾಯಚೂರು 133, ರಾಮನಗರ 138, ಶಿವಮೊಗ್ಗ 520, ತುಮಕೂರು 769, ಉಡುಪಿ 735, ಉತ್ತರ ಕನ್ನಡ 332, ವಿಜಯಪುರ 163 ಮತ್ತು ಯಾದಗಿರಿಯಲ್ಲಿ 107 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಇಳಿಮುಖ; ನಾಲ್ವರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಮೊನ್ನೆಯಿಂದ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗುತ್ತಿದೆ. ಮಂಗಳವಾರ ಜಿಲ್ಲಾಡಳಿತದ ಮಾಹಿತಿ ಪ್ರಕಾರ ನಾಲ್ವರು ಮೃತಪಟ್ಟಿದ್ದಾರೆ. ಇವತ್ತು 214 ಜನರಿಗೆ ಸೋಂಕು ತಗುಲಿದೆ.

ಇಂದಿನ 214 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 23780 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -131, ಮುಂಡರಗಿ-13, ನರಗುಂದ-15, ರೋಣ-20, ಶಿರಹಟ್ಟಿ-33, ಹೊರಜಿಲ್ಲೆಯ-02 ಸೇರಿದಂತೆ 214 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ನಾಲ್ವರು ಮೃತಪಟ್ಟಿದ್ದು, ಮೃತರ ಸಂಖ್ಯೆ 254 ಕ್ಕೇರಿದೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಮ್ಯಾಗೇರಿ ನಿವಾಸಿ 62 ವರ್ಷದ ವ್ಯಕ್ತಿ ಮೇ-24 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಮೇ ಮೇ-30 ರಂದು ಮೃತಪಟ್ಟಿದ್ದಾರೆ.

ಗದಗ ಶಹರದ ನಿವಾಸಿ 64 ವರ್ಷದ ಮಹಿಳೆ ಮೆ,19 ರಂದು ಖಾಸಗಿ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಮೇ 28 ರಂದು ಮೃತಪಟ್ಟಿದ್ದಾರೆ.

ಮುಂಡರಗಿ ತಾಲೂಕಿನ ಹಮ್ಮಗಿ ನಿವಾಸಿ 36 ವರ್ಷದ ಮಹಿಳೆ ಮೇ, 27 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಮೇ, 30 ರಂದು ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ಮೇಲ್ಮಠ ನಿವಾಸಿ 54 ವರ್ಷದ ಮಹಿಳೆ ಮೇ 30 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 30 ರಂದೇ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 351 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 21137 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 2389 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 188 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಕೊರೊನಾ ನಿಯಂತ್ರಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿಫಲ; ರಾಜು ಪೆಂಢಾರ್

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಉಸ್ತುವಾರಿ ಸಚಿವರು ಕೋವಿಡ್ ನಿಯಂತ್ರಣ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಅಡವಿ ಸೋಮಾಪೂರ ಗ್ರಾಮ ಪಂಚಾಯತಿ ಮಾಜಿ ಸದಸ್ಯ ರಾಜು ಪೆಂಢಾರ್ ಆರೋಪಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಗಳು ಹೆಚ್ಚುತ್ತ ಸಾಗುತ್ತಿವೆ. ಆದರೆ, ಈ ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು ವಿಫಲರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ಅವರ ಕ್ಷೇತ್ರದಲ್ಲಿ ಒಂದೇ ಒಂದು ಕೋವಿಡ ಸೆಂಟರ್ ನ್ನು ಕೂಡ ತೆರದಿಲ್ಲ. ಆದರೆ, ವಿರೋಧ ಪಕ್ಷದ ನಾಲ್ಕು ಮತ ಕ್ಷೇತ್ರದ ನಾಯಕರು, ಸಾರ್ವಜನಿಕರ ಸಹಾಯಕ್ಕಾಗಿ ಪಕ್ಷ ಬೇಧ ಮರೆತು ಕೋವಿಡ್ ಕೇರ್ ಸೆಂಟರ್ ತೆರೆದಿದ್ದಾರೆ. ಈ ಮೂಲಕ ಜನರ ಸೇವೆ ಮಾಡುತ್ತ, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಪೆಂಡಾರ್ ಹೇಳಿದ್ದಾರೆ.

error: Content is protected !!