Home Blog Page 3303

ಗದಗ-ಬೆಟಗೇರಿ ನಗರಸಭೆ ಉಪಾಧ್ಯಕ್ಷ ಪಟ್ಟ ಯಾರಿಗೆ?; ಬಿಜೆಪಿ ಇಬ್ಬರು ಸದಸ್ಯರು ಹೈಜಾಕ್ !

*ಗದಗ-ಬೆಟಗೇರಿ ನಗರಸಭೆ ಉಪಾಧ್ಯಕ್ಷ ಪಟ್ಟಕ್ಕಾಗಿ ಶ್ವೇತಾ ದಂಡಿನ, ಸುನಂದಾ ಬಾಕಳೆ, ಶೈಲಾ ಬಾಕಳೆ ಮಧ್ಯೆ ಪೈಪೋಟಿ

ದುರಗಪ್ಪ ಹೊಸಮನಿ:

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ 14 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಭದ್ರಕೋಟೆ ಬೇಧಿಸಿರುವ ಕಮಲ ಪಡೆಯಲ್ಲೀಗ ಅಧ್ಯಕ್ಷರು ಯಾರಾಗುತ್ತಾರೆ? ಎಂಬ ಬಗ್ಗೆ ಸ್ಪಷ್ಟತೆ ಇದೆ. ಆದರೆ, ಉಪಾಧ್ಯಕ್ಷ ಕುರ್ಚಿ ಯಾರ ಪಾಲಾಗಲಿದೆ ಎಂಬ ಚರ್ಚೆ ಶುರುವಾಗಿದೆ.

ಚುನಾವಣಾ ಪೂರ್ವದಲ್ಲಿಯೇ ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರಿಸಿದೆ. ಹೀಗಾಗಿ ಕಾಂಗ್ರೆಸ್, ಬಿಜೆಪಿಯಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆದಿತ್ತು. ಸದ್ಯ 18 ಜನ ಬಿಜೆಪಿ ಸದಸ್ಯರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಉಷಾ ಮಹೇಶ ದಾಸರ ಒಬ್ಬರೇ ಇದ್ದಾರೆ. ಹೀಗಾಗಿ ಯಾರೊಬ್ಬರ ಪೈಪೋಟಿ ಇರದ ಕಾರಣ ಸುಲಭವಾಗಿ ನಗರಸಭೆ ಅಧ್ಯಕ್ಷರಾಗಲಿದ್ದಾರೆ.

ನಗರಸಭೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದೆ. ಬಿಜೆಪಿಯಿಂದ ಆಯ್ಕೆಯಾದ ಸದಸ್ಯರಲ್ಲಿ ಕೆಲವರ ಮಧ್ಯೆ ಉಪಾಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಅದರಲ್ಲಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿ ರವಿ ದಂಡಿನ ಅವರ ಪುತ್ರಿ 11ನೇ ವಾರ್ಡಿನ ಸದಸ್ಯೆ ಶ್ವೇತಾ ದಂಡಿನ ಹಾಗೂ ಹಿಂದುಳಿದ ವರ್ಗಗಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಬಾಕಳೆ ಅವರ ಪತ್ನಿ 32ನೇ ವಾರ್ಡಿನ ಸುನಂದಾ ಬಾಕಳೆ ಮುಂಚೂಣಿಯಲ್ಲಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರೊಂದಿಗೆ ವೈಯಕ್ತಿಕವಾಗಿ ಉತ್ತಮ ಬಾಂಧವ್ಯ ಹೊಂದಿರುವ ರವಿ ದಂಡಿನ ಅವರು ಮೊದಲ ಬಾರಿಗೆ ರಾಜಕೀಯ ರಂಗ ಪ್ರವೇಶಿಸಿರುವ ತಮ್ಮ ಮಗಳನ್ನು ಉಪಾಧ್ಯಕ್ಷ ಪಟ್ಟದಲ್ಲಿ ಕೂರಿಸಬೇಕೆಂದು ಪಣತೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಅದರಂತೆ, 31ನೇ ವಾರ್ಡಿನ ಶೈಲಾ ನರಸಿಂಗಸಾ ಬಾಕಳೆ ಸಹಿತ ಉಪಾಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದಾರೆ ಎನ್ನಲಾಗುತ್ತಿದ್ದು, ಕೊನೆ ಘಳಿಗೆಯಲ್ಲಿ ಯಾರಿಗೆ ಉಪಾಧ್ಯಕ್ಷ ಪಟ್ಟ ಒಲಿಯಲಿದೆ ಎಂಬುವುದನ್ನು ಕಾದು ನೋಡಬೇಕಿದೆ.

ಬಿಜೆಪಿಯ ಇಬ್ಬರು ಸದಸ್ಯರು ಹೈಜಾಕ್?

ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನಗಳಲ್ಲಿ ಗೆಲುವು ಸಾಧಿಸಿ, ಅಧಿಕಾರ ಹಿಡಿಯುವಲ್ಲಿ ಸೋತು ಹತಾಶೆಗೊಂಡಿದೆ. ಹೀಗಾಗಿ ಶತಾಯಗತಾಯ ನಗರಸಭೆ ಆಡಳಿತ ಚುಕ್ಕಾಣಿ ಹಿಡಿಯಲೇಬೇಕೆಂದು ರಣತಂತ್ರ ರೂಪಿಸುತ್ತಿದೆ. ಇತ್ತ ಮ್ಯಾಜಿಕ್ ಸಂಖ್ಯೆ 18 ಸ್ಥಾನಗಳಲ್ಲಿ ಜಯಿಸಿರುವ ಬಿಜೆಪಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಭರ್ಜರಿ ಸಿದ್ಧತೆ ನಡೆಸಿದೆ. ಈ ಬೆನ್ನಲ್ಲೇ ಆಪರೇಷನ್ ಹಸ್ತ ಮೂಲಕ ಬಿಜೆಪಿಯ ಇಬ್ಬರು ಸದಸ್ಯರನ್ನು ಹೇಗಾದರೂ ಮಾಡಿ ತನ್ನತ್ತ ಸೆಳೆಯಲು ಕಾರ್ಯತಂತ್ರ ರೂಪಿಸುತ್ತಿದೆ ಎಂಬ ಮಾತುಗಳು ಅವಳಿ ನಗರದಲ್ಲಿ ಕೇಳಿ ಬರುತ್ತಿದ್ದು, ಇದು ಅವಳಿ ನಗರದ ಜನರಲ್ಲಿ ಹಾಗೂ ನಗರಸಭೆ ಸದಸ್ಯರಲ್ಲಿ ಗೊಂದಲ ಮೂಡಿಸುವ ಸಲುವಾಗಿ ಹಬ್ಬಿರುವ ರೂಮರ್ ಎಂದೂ ಹೇಳಲಾಗುತ್ತಿದೆ.

ಸದ್ಯಕ್ಕೆ ತಟಸ್ಥರಿದ್ದೇವೆ. ನಮ್ಮ ಗೆಲುವಿಗಾಗಿ ತನು ಮನ ಧನದಿಂದ ಶ್ರಮಿಸಿದ ವಾರ್ಡಿನ ಮತದಾರರ, ವಿವಿಧ ಸಮಾಜದ ಮುಖಂಡರ, ಗೆಳೆಯರ, ಬೆಂಬಲಿಗರಮ ಅಭಿಮಾನಿಗಳ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು.

ಮೆಹಬೂಬ(ಚುಮ್ಮಿ) ನದಾಫ್ ಹಾಗೂ ಆಸ್ಮಾ ಮುನ್ನಾ ರೇಶ್ಮಿ, ವಿಜೇತ ಪಕ್ಷೇತರರು

ಇಲ್ಲಿಯವರೆಗೂ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಪಕ್ಷದವರು ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದಕ್ಕೆ ನಮ್ಮ ಸಹಮತವಿರುತ್ತದೆ. ಉಪಾಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಸಿಲ್ಲ. ಪಕ್ಷದ ಹಿರಿಯರು, ಮುಖಂಡರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧವಾಗಿದ್ದೇವೆ.

ರವಿ ದಂಡಿನ, ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯ ಕಾರ್ಯದರ್ಶಿ

ನಾಳೆಯಿಂದ ಗದಗ ಜಿಲ್ಲೆಯ 55,880 ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೋವ್ಯಾಕ್ಸಿನ್ ಲಸಿಕೆ

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯ 15-18 ವರ್ಷದೊಳಗಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನಾಳೆಯಿಂದ(ಜ.3) ಕೋವಿಡ್ ಲಸಿಕೆ ಹಾಕಲಾಗುತ್ತಿದ್ದು, ಸೋಮವಾರ ಲಸಿಕಾಕರಣ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಚಾಲನೆ ನೀಡಲಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 55,880 ಜನ 15-18 ವರ್ಷದೊಳಗಿನ ವಿದ್ಯಾರ್ಥಿಗಳಿದ್ದು, ಲಸಿಕಾರಣಕ್ಕೆ ಆರೋಗ್ಯ ಇಲಾಖೆ 50 ಕಡೆ ಸಿದ್ಧತೆ ಮಾಡಿಕೊಂಡಿದೆ. ಅದರಂತೆ, 14 ಸಾವಿರ ಕೋವ್ಯಾಕ್ಸಿನ್ ಡೋಸ್ ಸಂಗ್ರಹವಿಟ್ಟುಕೊಂಡಿದೆ. ಲಸಿಕಾಕರಣದ ಮೊದಲ ದಿನ 5 ಸಾವಿರ ವಿದ್ಯಾರ್ಥಿಗಳಿಗೆ ಕೋವ್ಯಾಕ್ಸಿನ್ ಲಸಿಕೆ ಹಾಕುವ ಗುರಿ ಹೊಂದಿದ್ದು, ಒಂದು ವಾರದೊಳಗೆ ಎಲ್ಲರಿಗೂ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.

ಸೋಮವಾರದಿಂದ ಆರೋಗ್ಯ ಇಲಾಖೆ ಸಿಬ್ಬಂದಿಗಳು ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೂ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಿದ್ದಾರೆ. ಇನ್ನು ಗೈರಾದ ವಿದ್ಯಾರ್ಥಿಗಳು ಸಮೀಪದ ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಎಂದು ಆರ್ ಸಿಎಚ್ ಅಧಿಕಾರಿ ಡಾ.ಬಿ.ಎಂ.ಗೊಜನೂರ ‘ವಿಜಯಸಾಕ್ಷಿ’ ಗೆ ತಿಳಿಸಿದರು.

ಶಲವಡಿಯಲ್ಲಿ ಧರ್ಮಸಭೆ, ಸಾಂಸ್ಕೃತಿಕ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ನವಲಗುಂದ:

ತಾಲ್ಲೂಕಿನ ಶಲವಡಿ ಶ್ರೀವೀರಭದ್ರೇಶ್ವರ ಮಹಾ ರಥೋತ್ಸವ ಹಾಗೂ ಲಕ್ಷ ದೀಪೋತ್ಸವ ಅಂಗವಾಗಿ ಡಿ.31 ಮತ್ತು ಜ.1 ರಂದು ಧರ್ಮ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದಲ್ಲಿ ನರಗುಂದದ ಪತ್ರಿವನಮಠದ ಸ್ವಾಮೀಜಿ ಮತ್ತು ನವಲಗುಂದ ಗವಿಮಠದ ಸ್ವಾಮೀಜಿ, ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ, ಸಾಹಿತಿ ಶ್ರೀಶೈಲ್ ಹುದ್ದಾರ್ ಉಪಸ್ಥಿತರಿದ್ದರು.

ನಗರಸಭೆ ಬಿಜೆಪಿ ಸದಸ್ಯೆಯ ಕಾರು ಡಿಕ್ಕಿ; ಮಹಾಲಕ್ಷ್ಮಿ ದೇವಸ್ಥಾನ ಧ್ವಂಸ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ಬೆಟಗೇರಿ ನಗರಸಭೆಗೆ ನೂತನವಾಗಿ ಆಯ್ಕೆಯಾಗಿರುವ 32ನೇ ವಾರ್ಡಿನ ಬಿಜೆಪಿ ಸದಸ್ಯೆಯ ಕಾರು ಡಿಕ್ಕಿ ಹೊಡೆದ ಪರಿಣಾಮ ದೇವಸ್ಥಾನ ಧ್ವಂಸಗೊಂಡಿರುವ ಘಟನೆ ಗುರುವಾರ ಮಧ್ಯೆರಾತ್ರಿ ಅವಳಿ ನಗರದ ಟಾಂಗಾಕೂಟ ಬಳಿ ನಡೆದಿದೆ.

ಬಿಜೆಪಿ ಸದಸ್ಯೆ ಸುನಂದಾ ಪ್ರಕಾಶ್ ಬಾಕಳೆಗೆ ಸೇರಿದ (ಕೆಎ 26 ಎನ್ 2360) ಕಾರನ್ನು ಸುನಂದಾ ಅವರ ಪುತ್ರ ಚಲಾಯಿಸುತ್ತಿದ್ದ ಎನ್ನಲಾಗಿದೆ.

ಕಾರು ಮೊದಲಿಗೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡಿದಿದ್ದು, ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಮುರಿದಿದೆ. ಬಳಿಕ ಪುರಾತನ ಕಾಲದ ಹಳೆಯ ಮಹಾಲಕ್ಷ್ಮಿ ಗುಡಿ ಧ್ವಂಸವಾಗಿದೆ.

ಇನ್ನು ಘಟನೆಯ ಭೀಕರತೆ ನೋಡಿದರೆ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಇದುವರೆಗೂ ಪ್ರಕರಣ ದಾಖಲಾಗಿಲ್ಲ.

ಮತ್ತೇ ‘ಕೈ’ ಮುಂದೆ, ಆದ್ರೂ ಅಧಿಕಾರ ಬಿಜೆಪಿಯದ್ದೇ!!

0

ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ

-ಕನಕಗಿರಿಯಲ್ಲಿ ಶಾಸಕ ದಢೇಸೂಗುರುಗೆ ಮುಖಭಂಗ

-ಉಸ್ತುವಾರಿ ಸಚಿವ ಹಾಲಪ್ಪ ಕ್ಷೇತ್ರದ ಕುಕನೂರಿನಲ್ಲಿ ಸಮಬಲ!!

ಬಸವರಾಜ ಕರುಗಲ್,
ವಿಜಯಸಾಕ್ಷಿ ವಿಶೇಷ, ಕೊಪ್ಪಳ: ಸ್ಥಳೀಯ ಸಂಸ್ಥೆಗಳ ಸಂಗ್ರಾಮಕ್ಕೆ ತೆರೆ ಬಿದ್ದಿದೆ. ಕೊಪ್ಪಳ ಜಿಲ್ಲೆಯ 5 ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಮೇಲ್ನೋಟಕ್ಕೆ ಕೈ ಮುಂದಿದೆಯಾದರೂ, ನಾಲ್ಕು ಕಡೆ ಗದ್ದುಗೆ ಮಾತ್ರ ಬಿಜೆಪಿಯದ್ದೇ ಎನ್ನುವ ವಾತಾವರಣ ಸದ್ಯಕ್ಕಿದೆ.

ಜಿಲ್ಲೆಯ ಕನಕಗಿರಿ, ಭಾಗ್ಯನಗರ, ಕುಕನೂರು ಮತ್ತು ತಾವರಗೇರಾ ಪಟ್ಟಣ ಪಂಚಾಯಿತಿ ಹಾಗೂ ಕಾರಟಗಿ ಪುರಸಭೆ ಸೇರಿದಂತೆ 5 ಸ್ಥಳೀಯ ಸಂಸ್ಥೆಗಳ 96 ವಾರ್ಡ್‌ಗಳ ಚುನಾವಣಾ ಫಲಿತಾಂಶ ಬಂದಿದ್ದು 49ರಲ್ಲಿ ಕಾಂಗ್ರೆಸ್, 41ರಲ್ಲಿ ಬಿಜೆಪಿ, 1ರಲ್ಲಿ ಜೆಡಿಎಸ್ ಹಾಗೂ 5 ವಾರ್ಡ್‌ಗಳಲ್ಲಿ ಪಕ್ಷೇತರರು ಗೆಲುವಿನ ನಗೆ ಬೀರಿದ್ದಾರೆ.

ಕಳೆದ ಅವಧಿಯಲ್ಲಿ ಜಿಲ್ಲೆಯ ಈ ಐದೂ ಸ್ಥಳೀಯ ಸಂಸ್ಥೆಗಳ ಪೈಕಿಯ 96 ವಾರ್ಡ್‌ಗಳಲ್ಲಿ 50ರಲ್ಲಿ ಕಾಂಗ್ರೆಸ್, 40ರಲ್ಲಿ ಬಿಜೆಪಿ ಹಾಗೂ 6 ಕಡೆ ಪಕ್ಷೇತರರು ಚುನಾಯಿತರಾಗಿದ್ದರು. ಜೆಡಿಎಸ್, ಖಾತೆಯನ್ನೇ ತೆರೆದಿರಲಿಲ್ಲ.

ಕಳೆದ ಅವಧಿಯ ಚುನಾವಣಾ ಫಲಿತಾಂಶಕ್ಕೆ ಹೋಲಿಸಿದರೆ ಕಾಂಗ್ರೆಸ್‌ಗೆ 1 ಕಡೆ ನಷ್ಟವಾದರೆ, ಬಿಜೆಪಿಗೆ 1 ಕಡೆ ಲಾಭ ಆಗಿದೆ. ಜೆಡಿಎಸ್ ಸಹ 1 ಕಡೆ ಖಾತೆ ತೆರೆದಿದ್ದು ಸಾಧನೆಯೇ ಸರಿ.

ಎಲ್ಲೆಲ್ಲಿ ಯಾವ್ಯಾವ ಪಕ್ಷಕ್ಕೆ ಗದ್ದುಗೆ?
ಕಾರಟಗಿ ಪುರಸಭೆಯ 23 ಸ್ಥಾನಗಳ ಪೈಕಿ ಹಿಂದಿನ ಅವಧಿಯಲ್ಲಿ 12 ಕಾಂಗ್ರೆಸ್, 10 ಬಿಜೆಪಿ ಹಾಗೂ 1 ಪಕ್ಷೇತರ ಇದ್ದು ಎರಡೂ ಪಕ್ಷಗಳು ಅಧಿಕಾರ ಅನುಭವಿಸಿದ್ದವು. ಈ ಅವಧಿಗೆ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 11 ಸ್ಥಾನಗಳನ್ನು ಗಳಿಸಿದ್ದು, ಒಂದು ಸ್ಥಾನ‌ ಜೆಡಿಎಸ್‌ಗೂ ಲಭಿಸಿದೆ. ಜೆಡಿಎಸ್ ಇಲ್ಲಿ‌ ನಿರ್ಣಾಯಕವಾಗಿದ್ದು, ಬಹುತೇಕ ಬಿಜೆಪಿಯ ಪಾಲಿಗೆ ಗದ್ದುಗೆ ಸಿಗಲಿದೆ.

ಕನಕಗಿರಿ ಪಟ್ಟಣ ಪಂಚಾಯಿತಿಯ 17 ಸ್ಥಾನಗಳ ಪೈಕಿ ಹಿಂದಿನ ಅವಧಿಯಲ್ಲಿ 9 ಕಾಂಗ್ರೆಸ್, 5 ಬಿಜೆಪಿ ಮತ್ತು 3 ಪಕ್ಷೇತರ ಇದ್ದು, ಎರಡೂ ಪಕ್ಷಗಳು ಅಧಿಕಾರ ಅನುಭವಿಸಿದ್ದವು. ಈ ಅವಧಿಗೆ 12 ಕಾಂಗ್ರೆಸ್ ಹಾಗೂ 5 ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದು, ಗದ್ದುಗೆ ಬಹುತೇಕ ಕಾಂಗ್ರೆಸ್ ಪಾಲಾಗಿದೆ. ಆದರೆ ಆಡಳಿತಾರೂಢ ಸರಕಾರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಯಾವ ವರ್ಗಕ್ಕೆ ನೀಡುತ್ತದೆ ಎಂಬುದರ ಮೇಲೆ ಅದು ನಿಂತಿದೆ.

ಕೊಪ್ಪಳ ವಿಧಾನಸಭಾ ಕ್ಷೇತ್ರದ ಭಾಗ್ಯನಗರ ಪಟ್ಟಣ ಪಂಚಾಯತಿಯ 19 ಸ್ಥಾನಗಳಿಗೆ ಸಂಬಂಧಿಸಿದಂತೆ ಹಿಂದಿನ‌ ಅವಧಿಗೆ 8 ರಲ್ಲಿ ಕಾಂಗ್ರೆಸ್, 10ರಲ್ಲಿ ಬಿಜೆಪಿ ಹಾಗೂ 1 ಪಕ್ಷೇತರ ಆಯ್ಕೆಯಾಗಿದ್ದು, ಇಲ್ಲೂ ಸಹ ಎರಡೂ ಪಕ್ಷಗಳು ಅಧಿಕಾರ ಅನುಭವಿಸಿವೆ. ಈ ಬಾರಿ ಮತ್ತೇ 8 ರಲ್ಲಿ ಕಾಂಗ್ರೆಸ್, 9ರಲ್ಲಿ ಬಿಜೆಪಿ ಹಾಗೂ 2 ಪಕ್ಷೇತರರು ಆಯ್ಕೆಯಾಗಿದ್ದು, ಪಕ್ಷೇತರರು ಯಾವ ಪಕ್ಷದ ಕಡೆ ವಾಲುತ್ತಾರೊ, ಅದೇ ಪಕ್ಷ ಗದ್ದುಗೆಗೆ ಏರಲಿದೆ. ಕಮಲ ಅಧಿಕಾರಕ್ಕೆ ಬರುವುದು ಬಹುತೇಕ ಫೈನಲ್.

ಕುಷ್ಟಗಿ ವಿಧಾನಸಭಾ ಕ್ಷೇತ್ರದ ತಾವರಗೇರಾ ಪಟ್ಟಣ ಪಂಚಾಯಿತಿಯ 18 ಸ್ಥಾನಗಳಲ್ಲಿ ಹಿಂದಿನ ಅವಧಿಗೆ 10 ಕಾಂಗ್ರೆಸ್, 7 ಬಿಜೆಪಿ ಹಾಗೂ 1 ಪಕ್ಷೇತರ ಆಯ್ಕೆಯಾಗಿದ್ದು ಕಾಂಗ್ರೆಸ್ ಆಡಳಿತ ನಡೆಸಿತ್ತು. ಈ ಸಲ 8ರಲ್ಲಿ ಕಾಂಗ್ರೆಸ್, 7ರಲ್ಲಿ ಬಿಜೆಪಿ, 3 ಪಕ್ಷೇತರರು ಆಯ್ಕೆಯಾಗಿದ್ದು, ಪಕ್ಷೇತರರೇ ನಿರ್ಣಾಯಕ. ಇಲ್ಲೂ ಸಹ ಈ ಸಲ ಬಿಜೆಪಿಯೇ ಗದ್ದುಗೆ ಹಿಡಿಯುವ ಸಾಧ್ಯತೆಗಳು ನಿಶ್ಚಳವಾಗಿವೆ.

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕುಕನೂರು ಪಟ್ಟಣ ಪಂಚಾಯಿತಿಯ 19 ಸ್ಥಾನಗಳ ಪೈಕಿ ಹಿಂದಿನ ಅವಧಿಗೆ 11 ಕಾಂಗ್ರೆಸ್, 8 ಬಿಜೆಪಿ ಸ್ಥಾನಗಳಿದ್ದು ಎರಡೂ ಪಕ್ಷಗಳು ಅಧಿಕಾರ ಕಂಡಿದ್ದವು. ಈ ಸಲ 10 ಕಾಂಗ್ರೆಸ್, 9 ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದು, ಮೇಲ್ನೋಟಕ್ಕೆ ಕಾಂಗ್ರೆಸ್ ಮುಂಚೂಣಿ ಎನಿಸಿದರೂ ಉಸ್ತುವಾರಿ ಸಚಿವರ ಕ್ಷೇತ್ರ ಆಗಿರುವುದರಿಂದ ಗದ್ದುಗೆ ಗುದ್ದಾಟ ನಿಶ್ಚಿತ. ಸಂಸದ, ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯ ಮತ ಚಲಾಯಿಸಿದರೂ ಸಮಬಲವನ್ನ ಇಲ್ಲಿ ಕಾಣಬಹುದು. ಈ ಸ್ಥಳೀಯ ಸಂಸ್ಥೆ ಯಾವ ಪಕ್ಷದ ಪಾಲಾಗಲಿದೆ ಎಂಬುದು ಮಾತ್ರ ಕುತೂಹಲದ ಸಂಗತಿಯಾಗಿ ಉಳಿದುಕೊಂಡಿದೆ.

ಉಷಾ ದಾಸರ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ? ಮತ್ತೊಮ್ಮೆ ಅಧಿಕಾರ ಹಿಡಿಯಲು ‘ಆಪರೇಷನ್’ಗೆ ಮುಂದಾಗುತ್ತಾ ಕಾಂಗ್ರೆಸ್!

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿರುವ ಬೆನ್ನಲ್ಲೇ ಸ್ಥಳೀಯ ಸಂಸ್ಥೆಯ ಸಿಂಹಾಸನಾಧೀಶ ಯಾರಾಗುತ್ತಾರೆಂಬ ಚರ್ಚೆ ಶುರುವಾಗಿದೆ. ಈಗಾಗಲೇ 18 ಸ್ಥಾನ ಗೆದ್ದಿರುವ ಬಿಜೆಪಿ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬೇಕಾಗಿರುವ ಸ್ಪಷ್ಟ ಬಹುಮತ ಹೊಂದಿದ್ದು, 35ನೇ ವಾರ್ಡಿನಲ್ಲಿ ಜಯಶೀಲರಾಗಿರುವ ಉಷಾ ಮಹೇಶ ದಾಸರ ಅವರು ಅಧ್ಯಕ್ಷರಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ.

ಚುನಾವಣೆ ಪೂರ್ವದಲ್ಲೇ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪಟ್ಟಿ ಪ್ರಕಟಗೊಂಡಿದ್ದು, ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಪ್ರವರ್ಗ-2ಎಗೆ ಮೀಸಲಿರಿಸಲಾಗಿದೆ. ಹೀಗಾಗಿ ಆಯ್ಕೆಗೊಂಡಿರುವ 18 ಜನ ಬಿಜೆಪಿ ಅಭ್ಯರ್ಥಿಗಳಲ್ಲಿ ಉಷಾ ದಾಸರ ಅವರೊಬ್ಬರೇ ಪರಿಶಿಷ್ಟ ಜಾತಿಗೆ ಸೇರಿದ ಸದಸ್ಯರಿದ್ದು, ಬಹುತೇಕ ಉಸಾ ದಾಸರ ಅವರೇ ಅಧ್ಯಕ್ಷರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅವಳಿ ನಗರದ 35ನೇ ವಾರ್ಡಿನಲ್ಲಿ ಈ ಹಿಂದೆ ನಗರಸಭೆ ಅಧ್ಯಕ್ಷರಾಗಿದ್ದ ನಾಗರತ್ನಾ ಶಿವಪ್ಪ ಮುಳಗುಂದ ಎಂಬ ಪ್ರಭಾವಿ ಅಭ್ಯರ್ಥಿಯ ವಿರುದ್ಧ ಭರ್ಜರಿ ಜಯ ಸಾದಿಸುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ಪರಿಶಿಷ್ಟ ಜಾತಿಯಲ್ಲಿ ಬರುವ ದಾಸರ ಸಮುದಾಯ ರಾಜ್ಯದಲ್ಲಿ 52 ಸಾವಿರ ಜನಸಂಖ್ಯೆ ಹೊಂದಿದ್ದು, ರಾಜ್ಯದಲ್ಲಿಯೇ ಉಷಾ ಅವರು ಪ್ರಥಮ ಮಹಿಳಾ ನಗರಸಭೆ ಸದಸ್ಯರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಅದರಂತೆ, 2001ರಲ್ಲಿ ಕೊಪ್ಪಳದ ನಗರಸಭೆ ಚುನಾವಣೆಯಲ್ಲಿ ಮಾಜಿ ನಗರಸಭೆ ಅಧ್ಯಕ್ಷರ ವಿರುದ್ಧ ಉಷಾ ದಾಸರ ಅವರ ತಂದೆ ವೆಂಕಟೇಶ ದಾಸರ ಗೆಲುವಿನ ನಗೆ ಬೀರಿದ್ದರು. ಸುಮಾರು 21 ವರ್ಷಗಳ ಬಳಿಕ ನೆರೆಯ ಗದಗ ಜಿಲ್ಲೆಯಲ್ಲಿ ತಂದೆಯ ಹಾದಿಯಲ್ಲಿಯೇ ಸಾಗಿದ ಮಗಳು ಉಷಾ ದಾಸರ ಸಹಿತ ಮಾಜಿ ಅಧ್ಯಕ್ಷರ ವಿರುದ್ಧವೇ ಜಯಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಪಕ್ಷೇತರರತ್ತ ಕಾಂಗ್ರೆಸ್ ಚಿತ್ತ

ಗದಗ-ಬೆಟಗೇರಿ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದ್ದರೂ, ಆಪರೇಷನ್ ಕಾಂಗ್ರೆಸ್‌ನ ಭೀತಿ ಶುರುವಾಗಿದೆ. ಬಿಜೆಪಿ 18 ಸ್ಥಾನಗಳಲ್ಲಿ ಜಯಸಿದ್ದು, ಕಾಂಗ್ರೆಸ್ 15 ಹಾಗೂ ಪಕ್ಷೇತರರು ಎರಡು ಸ್ಥಾನಗಳಲ್ಲಿ ಗೆದ್ದಿದ್ದಾರೆ. ಇನ್ನು ಗೆದ್ದಿರುವ ಪಕ್ಷೇತರ ಅಭ್ಯರ್ಥಿಗಳಿಬ್ಬರೂ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿರುವುದು ವಿಶೇಷ. ಹೀಗಾಗಿ ಪಕ್ಷೇತರರನ್ನು ತನ್ನತ್ತ ಸೆಳೆಯುವ ಮೂಲಕ ಸಂಖ್ಯೆ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ಯತ್ನಿಸುತ್ತಿದೆ ಎನ್ನಲಾಗಿದೆ.

ಇತ್ತ ಬಿಜೆಪಿ ನಾಯಕರೂ ಸಹಿತ ಸೇಫರ್ ಸೈಡ್ ಆಗಿ ಪಕ್ಷೇತರ ಅಭ್ಯರ್ಥಿಗಳಿಗೆ ಗಾಳ ಹಾಕಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಪಕ್ಷೇತರರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದೇ ಆದಲ್ಲಿ, ಬಿಜೆಪಿಗೆ ಮತ್ತಷ್ಟು ತಲೆನೋವು ಶುರುವಾಗಲಿದೆ. ಅಲ್ಲದೆ, 14 ವರ್ಷಗಳ ಬಳಿಕ ಸಿಕ್ಕಿರುವ ಸುವರ್ಣಾವಕಾಶ ‘ಕೈ’ ತಪ್ಪುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಆದರೆ, ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುವುದನ್ನು ಕಾದು ನೋಡಬೇಕಿದೆ.

ಪಕ್ಷದಿಂದ ಗೆದ್ದಿರುವ ಎಲ್ಲರೂ ಅಪ್ಪಟ ಬಿಜೆಪಿಗರು. ಅವರ ರಕ್ತದಲ್ಲೇ ಬಿಜೆಪಿ ಇದೆ. ನಮ್ಮವರನ್ನು ಹೈಜಾಕ್ ಮಾಡುವ ಅವಕಾಶ ಕಾಂಗ್ರೆಸ್‌ಗೆ ಕೊಡುವುದಿಲ್ಲ. ನಮ್ಮದು ಯುವ ಪಡೆಯಾಗಿದ್ದು, ಘಟಾನುಘಟಿಗಳಿಗೆ ಸೋಲಿನ ರುಚಿ ಉಣಬಡಿಸಿದ್ದಾರೆ. ಪಕ್ಷೇತರವಾಗಿ ಗೆದ್ದಿರುವ ಇಬ್ಬರು ಅಭ್ಯರ್ಥಿಗಳು ಕೂಡ ನಮ್ಮನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

ಅನಿಲ್ ಮೆಣಸಿನಕಾಯಿ, ಬಿಜೆಪಿ ಯುವ ಮುಖಂಡರು.

ಬಿಜೆಪಿ ವನವಾಸ ಅಂತ್ಯ? ಮಿಷನ್ -30 ಹೆಸರಿನಲ್ಲಿ ಸಂಘಟಿತ ಪ್ರಚಾರದಿಂದ ಗೆದ್ದ ಕೇಸರಿ ಪಡೆ, ಕೈ ಕೊಟ್ಟ ಮುಖಂಡರು

ದುರಗಪ್ಪ ಹೊಸಮನಿ:

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ- ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಅವಳಿ ನಗರದ 35 ವಾರ್ಡ್‌ಗಳ ಪೈಕಿ 18 ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ 14 ವರ್ಷಗಳ ವನವಾಸದಿಂದ ಬಿಜೆಪಿ ಮುಕ್ತಿ ಹೊಂದಿದಂತಾಗಿದ್ದು, ಕೇವಲ 15 ವಾರ್ಡ್‌ಗಳಲ್ಲಿ ಜಯಿಸಿರುವ ಕಾಂಗ್ರೆಸ್‌ಗೆ ಭಾರೀ ಮುಖಭಂಗವಾಗಿದೆ.

ಕಳೆದ ನಗರಸಭೆ ಚುನಾವಣೆಯಲ್ಲಿ ಹೀನಾಯ ಸೋಲುಂಡಿದ್ದ ಬಿಜೆಪಿ ಈ ಬಾರಿ 18 ಸ್ಥಾನ ಗೆದ್ದು ಬೀಗುತ್ತಿದ್ದರೆ, ಈ ಹಿಂದೆ 23 ಸ್ಥಾನಗಳೊಂದಿಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಕೇವಲ 15 ಸ್ಥಾನಗಳನ್ನಷ್ಟೇ ಪಡೆಯಲು ಶಕ್ತವಾಗಿದೆ. ಅದರಂತೆ, ಈ ಸಲ ಇಬ್ಬರು ಪಕ್ಷೇತರ ಅಭ್ಯರ್ಥಿಗಳಿಗೆ ಜಾಕ್‌ಪಾಟ್ ಹೊಡೆದಿದೆ.

ಕಾಂಗ್ರೆಸ್ ಸೋಲಿಗೆ ಕಾರಣವೇನು?

ಜಿಲ್ಲೆಯ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಹಿಡಿತ ಸಾಧಿಸಿರುವ ಕಾಂಗ್ರೆಸ್ ಪಕ್ಷ, ಈ ಬಾರಿ ನಗರಸಭೆ ಅಧಿಕಾರದ ಚುಕ್ಕಾಣೆ ಹಿಡಿಯುವಲ್ಲಿ ವಿಫಲವಾಗಿದೆ. ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ನಗರಸಭೆಯಲ್ಲಿ ಹಿಡಿತ ಸಾಧಿಸಿತ್ತು. ಯಾವ ಪಕ್ಷಕ್ಕೂ ಅಧಿಕಾರ ಬಿಟ್ಟಕೊಡದೇ ನಿರಂತರವಾಗಿ ಆಡಳಿತ ನಡೆಸಿತ್ತು. ಆದರೆ, ಇಷ್ಟು ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್‌ನಿಂದ ಅವಳಿ ನಗರದ ಜನ ನಿರೀಕ್ಷಿಸದಷ್ಟು ಅಭಿವೃದ್ಧಿ ಕೆಲಸಗಳಾಗಿಲ್ಲ. ಅಲ್ಲದೇ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳ ಸ್ಪರ್ಧೆ, ಪಕ್ಷದಲ್ಲಿನ ಒಳಜಗಳ, ಪಕ್ಷದಲ್ಲಿದ್ದುಕೊಂಡೆ ಬೇರೆ ಪಕ್ಷ, ಪಕ್ಷೇತರ ಅಭ್ಯರ್ಥಿಗಳಿಗೆ ಬಾಹ್ಯ ಬೆಂಬಲ, ಗೌಡರ ಕುಟುಂಬದ ಕುಡಿಯೊಂದು ಪಕ್ಷೇತರ ಅಭ್ಯರ್ಥಿಗಳ ಪರ ಪ್ರಚಾರ ಮಾಡಿರುವುದು, ಗೆದ್ದೇ ಗೆಲ್ಲಿಸುತ್ತಾರೆ ಎಂಬ ಅಹಂಭಾವ, ಪಕ್ಷದ ಕಾರ್ಯಕರ್ತರು ಹಾಗೂ ಅವಳಿ ನಗರದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದೇ ಕಾಂಗ್ರೆಸ್ ಸೋಲಿಗೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿ ಗೆಲ್ಲಿಸಿದ ಅಂಶಗಳು

ಹಲವು ವರ್ಷಗಳಿಂದ ನಗರಸಭೆ ಅಧಿಕಾರಕ್ಕಾಗಿ ಕನವರಿಸುತ್ತಿದ್ದ ಬಿಜೆಪಿಯ ಕನಸು ಕಡೆಗೂ ಈಡೇರಿದೆ. ಅನೇಕ ವರ್ಷಗಳಿಂದ ಒಂದೇ ಪಕ್ಷ ಅಧಿಕಾರದಲ್ಲಿದ್ದರಿಂದ ಅಭಿವೃದ್ಧಿ ನಿರೀಕ್ಷಿಸುವುದು ಜನರಿಗೆ ಕಷ್ಟವಾಗಿತ್ತು. ಕಾಂಗ್ರೆಸ್ ಅಷ್ಟು ವರ್ಷ ಆಡಳಿತದಲ್ಲಿದ್ದರೂ ಅವಳಿ ನಗರದ ಜನರಿಗೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಸಲಿಲ್ಲ. ನಗರಸಭೆ ವ್ಯಾಪ್ತಿಯ ರಸ್ತೆಗಳು ನಿರೀಕ್ಷಿಸಿದಷ್ಟು ಸುಧಾರಣೆ ಕಾಣಲಿಲ್ಲ. ಉದ್ಯಾನವನಗಳ ಪುನರುತ್ಥಾನವಾಗಲಿಲ್ಲ. ನಗರದ ಸೌಂದರ್ಯಕರಣಕ್ಕೆ ಆದ್ಯತೆ ನೀಡಲಿಲ್ಲ. ನಗರದ ನೈರ್ಮಲ್ಯ ಕಾಪಾಡಲಿಲ್ಲ. ಹೀಗಾಗಿ ಹೊಸ ಪಕ್ಷಕ್ಕೆ ಅಧಿಕಾರ ನೀಡಿದರೆ ಅಭಿವೃದ್ಧಿ ನೀರೀಕ್ಷಿಸಬಹುದು ಎಂಬ ಭಾವನೆಯಿಂದಾಗಿ ಜಿಡ್ಡು ಹಿಡಿದ ಕಾಂಗ್ರೆಸ್ ಆಡಳಿತದಿಂದ ಬೇಸತ್ತಿದ್ದ ಜನರು ಈ ಬಾರಿ ಬದಲಾವಣೆ ಬಯಿಸಿ ಬಿಜೆಪಿಯತ್ತ ಹೆಚ್ಚು ಒಲವು ತೋರಿದ್ದಾರೆ. ಇನ್ನು ಕಮಲ ಪಾಳೆಯದಲ್ಲಿ ಮೂಲ ಹಾಗೂ ವಲಸಿಗರು ಎಂಬ ಎರಡು ಬಣಗಳಿದ್ದು, ಚುನಾವಣಾ ಪೂರ್ವದಲ್ಲಿ ವೈಷಮ್ಯ, ವೈಮನಸ್ಸು ಮರೆತು ಜನರ ಭಾವನೆಗಳಿಗೆ ಪೂರಕವಾಗಿ ಸಂಘಟನಾತ್ಮಕವಾಗಿ ಚುನಾವಣೆ ಎದುರಿಸಿದ್ದೇ ಬಿಜೆಪಿ ಗೆಲುವಿಗೆ ಕಾರಣ ಎಂದು ಬಣ್ಣಿಸಲಾಗುತ್ತಿದೆ.

ಶ್ರೀರಾಮುಲು, ಅನಿಲ್ ಕ್ಯಾಂಪೇನ್ ಫಲಶೃತಿ!?

ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಹಾಗೂ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಅವಳಿ ನಗರದಲ್ಲಿ ಭರ್ಜರಿ ಪ್ರಚಾರ ನಡೆಸುವ ಮೂಲಕ ಸ್ಟಾರ್ ಪ್ರಚಾರಕರಾಗಿ ಗುರುತಿಸಿಕೊಂಡಿದ್ದರು. ಶ್ರೀರಾಮುಲು ಬಹಿರಂಗ ಪ್ರಚಾರ ನಡೆಸಿದರೆ, ಅನಿಲ್ ಮೆಣಸಿನಕಾಯಿ ಮನೆ ಮನೆಗಳಿಗೆ ಭೇಟಿ ನೀಡಿ ಮತಭಿಕ್ಷೆ ನಡೆಸಿದ್ದರು. ಈ ವೇಳೆ ಜನರಿಂದ ಅಲ್ಲಿನ ಸ್ಥಳೀಯ ಸಮಸ್ಯೆಗಳ ಬಗ್ಗೆ ಸ್ಥಳೀಯರಿಂದಲೇ ಅರಿತುಕೊಳ್ಳುವ ಮೂಲಕ ಜನರ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರಿದರು. ಈ ಇಬ್ಬರೂ ನಾಯಕರ ಪ್ರಚಾರದಿಂದಾಗಿ ಬಿಜೆಪಿಯ ಅಭ್ಯರ್ಥಿಗಳಲ್ಲಿ ಹೆಚ್ಚು ಉತ್ಸಾಹ ನೀಡಿತ್ತು. ಗೆಲ್ಲುವ ನಿರೀಕ್ಷೆಗಳನ್ನು ಹೆಚ್ಚಿಸಿತ್ತು. ಹೀಗಾಗಿ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬಂದಿದೆ ಎನ್ನುತ್ತವೆ ಬಿಜೆಪಿ ಮೂಲಗಳು.

ಸುಳಿಯಲಿಲ್ಲ ಕಾಂಗ್ರೆಸ್ ಮುಖಂಡರು

ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್, ಶಾಸಕ ಕಳಕಪ್ಪ ಬಂಡಿ, ಎಸ್.ವಿ. ಸಂಕನೂರ ಅವರು ಬಿಡುವು ಮಾಡಿಕೊಂಡು ಬಂದು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡುವ ಮೂಲಕ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವ ಕುರಿತು ಜನರಲ್ಲಿ ಭರವಸೆ ಮೂಡಿಸಿ ಯಶಸ್ವಿಯಾದರು. ಆದರೆ, ಕಾಂಗ್ರೆಸ್‌ನಲ್ಲಿ ಶಾಸಕ ಎಚ್.ಕೆ. ಪಾಟೀಲ್ ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲ್ ಅವರನ್ನು ಹೊರತುಪಡಿಸಿದರೆ ರಾಜ್ಯದ ಯಾವೊಬ್ಬ ನಾಯಕರೂ ಇತ್ತ ಸುಳಿಯಲಿಲ್ಲ. ಇಲ್ಲೇ ನೂರಾರು ಕಿ.ಮೀ. ದೂರದ ಬೆಳಗಾವಿಯಲ್ಲಿದ್ದರೂ ಯಾರೊಬ್ಬರೂ ಅವಳಿ ನಗರಕ್ಕೆ ಬಂದು ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿಲ್ಲ. ಅಲ್ಲದೇ, ದೊಡ್ಡಮಟ್ಟದ ಈ ಇಬ್ಬರು ನಾಯಕರನ್ನು ಬಿಟ್ಟರೆ, ಸ್ಥಳೀಯ ನಾಯಕರ‍್ಯಾರು ಮತದಾರರ ಮೇಲೆ ಪ್ರಭಾವ ಬೀರಲಿಲ್ಲ. ಪಕ್ಷದ ಪ್ರಣಾಳಿಕೆ ಜನರ ಮನವನ್ನು ಅಷ್ಟಾಗಿ ತಲುಪದಿರುವುದೇ ಕಾಂಗ್ರೆಸ್ ಸೋಲಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ನಗರಸಭೆ ಚುನಾವಣೆ ಫಲಿತಾಂಶ; ಏಳರಲ್ಲಿ ಪಕ್ಷೇತರರ ಪ್ರಾಬಲ್ಯ, ಎರಡರಲ್ಲಿ ಗೆಲುವು

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಅವಳಿ ನಗರದ 35 ವಾರ್ಡ್‌ಗಳಲ್ಲಿ ಒಟ್ಟು 51 ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇವರಲ್ಲಿ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಅದರಂತೆ, ಏಳು ವಾರ್ಡ್‌ಗಳಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಪ್ರಬಲ ಪೈಪೋಟಿ ನೀಡಿದ್ದಾರೆ.

ಅವಳಿ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದರಿಂದ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಇದರಲ್ಲಿ ಬಹುತೇಕರು ಬಿಜೆಪಿ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವ ಮೂಲಕ ಸ್ವಪಕ್ಷದ ಅಭ್ಯರ್ಥಿಗಳಿಗೆ ಸೆಡ್ಡು ಹೊಡೆದಿದ್ದರು.

ಇವರಲ್ಲಿ ಕೆಲವರು ಕೈ-ಕಮಲ ಅಭ್ಯರ್ಥಿಗಳಿಗೆ ನಡುಕ ಹುಟ್ಟಿಸಿದ್ದರು. ಆದರೆ, ಅವರಲ್ಲಿ ವಾರ್ಡ್ ನಂ. 17ರಲ್ಲಿ ಆಸ್ಮಾ ರೇಶ್ಮಿ ಹಾಗೂ 21ನೇ ವಾರ್ಡಿನ ಮೈಬೂಬಸಾಬ ನದಾಫ್ ಎಂಬ ಇಬ್ಬರು ಪಕ್ಷೇತರರು ಮಾತ್ರ ಗೆದ್ದಿದ್ದು, ಇವರಿಬ್ಬರೂ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಗಳು ಎಂಬುದು ವಿಶೇಷ.

ಅದರಂತೆ, ಅವಳಿ ನಗರದ 2, 10, 11, 16, 20, 23 ಹಾಗೂ 28 ಸೇರಿ ಒಟ್ಟು 7 ವಾರ್ಡ್‌ಗಳಲ್ಲಿ ಪಕ್ಷೇತರರ ಪ್ರಾಬಲ್ಯ ಹೆಚ್ಚಿದೆ. ಇವುಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳನ್ನು ಹಿಂದಿಕ್ಕಿ 2ನೇ ಸ್ಥಾನ ಗಳಿಸಿದ್ದಾರೆ. ಇನ್ನು 16ನೇ ವಾರ್ಡ್‌ನಲ್ಲಿ 2ನೇ ಸ್ಥಾನದಿಂದ ಕ್ರಮವಾಗಿ 5ನೇ ಸ್ಥಾನದವರೆಗೆ ಪಕ್ಷೇತರರಿದ್ದು, ಇಲ್ಲಿ ಬಿಜೆಪಿ 6ನೇ ಸ್ಥಾನಕ್ಕೆ ಹೋಗಿದೆ.

ನಗರಸಭೆ ಚುನಾವಣೆ ಫಲಿತಾಂಶ; ಗೆದ್ದ ಅಭ್ಯರ್ಥಿಗಳು ಪಡೆದ ಮತಗಳ ಸಂಪೂರ್ಣ ಅಪ್ಡೇಟ್

ವಿಜಯಸಾಕ್ಷಿ ಸುದ್ದಿ, ಗದಗ;

ಗದಗ ಬೆಟಗೇರಿ ನಗರಸಭೆಯ 35 ವಾರ್ಡ್ ಗಳ ಪೈಕಿ 18 ವಾರ್ಡ್ ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ಅದರಂತೆ ಕಾಂಗ್ರೆಸ್ 15, ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಜಯಶಾಲಿಗಳಾಗಿದ್ದು, ಕದನ ಕಲಿಗಳು ಚುನಾವಣಾ ಕಣದಲ್ಲಿ ಪಡೆದ ಮತಗಳ ಸಂಪೂರ್ಣ ವಿವರ ಇಂತಿದೆ.

ನಗರಸಭೆ ಚುನಾವಣೆ ಫಲಿತಾಂಶ; ಮ್ಯಾಜಿಕ್ ಸಂಖ್ಯೆ ತಲುಪಿದ ಬಿಜೆಪಿ

07 ಹಾಗೂ 35ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿಗಳ ಭರ್ಜರಿ ಗೆಲವು

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ಬೆಟಗೇರಿ ನಗರಸಭೆಯ 35 ವಾರ್ಡ್ ಗಳ ಪೈಕಿ 18 ವಾರ್ಡ್ ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. ಅದರಂತೆ ಕಾಂಗ್ರೆಸ್ ಕಾಂಗ್ರೆಸ್ -15 ಪಕ್ಷೇತರ- 2 ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ನಗರಸಭೆ ಅಧಿಕಾರವನ್ನು ತೆಕ್ಕೆಗೆ ತೆಗೆದುಕೊಂಡಿದೆ.

ಅವಳಿ‌ ನಗರದ ವಾರ್ಡ್ ನಂ.3ರಲ್ಲಿ ಮಾದುಸಾ ಮೇರವಾಡೆ, 5ರಲ್ಲಿ ಶಂಕರ್ ಕಾಕಿ, 7ರಲ್ಲಿ ರಾಘವೇಂದ್ರ ಯಳವತ್ತಿ, 11 ರಲ್ಲಿ ಶ್ವೇತಾ ದಂಡಿನ 12ರಲ್ಲಿ ವಿಜಯಲಕ್ಷ್ಮೀ ದಿಂಡೂರ, 13 ರಲ್ಲಿ ಗೂಳಪ್ಪ ಮುಶಿಗೇರಿ, 14ರಲ್ಲಿ ಪ್ರಕಾಶ ಅಂಗಡಿ, 15ರಲ್ಲಿ ಚಂದ್ರಶೇಖರ್ ತಡಸದ, 19ರಲ್ಲಿ ಮಹಾಂತೇಶ ನಲವಡಿ, 24ರಲ್ಲಿ ನಾಗರಾಜ ತಳವಾರ, 25ರಲ್ಲಿ ವಿನಾಯಕ ಮಾನ್ವಿ, 26ರಲ್ಲಿ ಹುಲಿಗೆಮ್ಮ ಹಬೀಬ, 28ರಲ್ಲಿ ಅನಿಲ್ ಅಬ್ಬಿಗೇರಿ, 31ರಲ್ಲಿ ಶೈಲಾ ಬಾಕಳೆ, 32ರಲ್ಲಿ ಸುನಂದಾ ಬಾಕಳೆ, 33ರಲ್ಲಿ ಅನಿತಾ ಗಡ್ಡಿ, 34ರಲ್ಲಿ ವಿದ್ಯಾವತಿ ಗಡಗಿ, ಹಾಗೂ 35ರಲ್ಲಿ ಉಷಾ ದಾಸರ ಸೇರಿ 15 ವಾರ್ಡ್ ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಅದರಂತೆ, ವಾರ್ಡ್ ನಂ1 ರಲ್ಲಿ ಲಕ್ಷ್ಮೀ ಸಿದ್ದಮ್ಮನಹಳ್ಳಿ,
2ರಲ್ಲಿ ಸುರೇಶ ಕಟ್ಟಿಮನಿ, 4ರಲ್ಲಿ ಶಕುಂತಲಾ ಅಕ್ಕಿ,
8ರಲ್ಲಿ ಪೂರ್ಣಿಮಾ ಬರದ್ವಾಡ, 6ರಲ್ಲಿ ಲಕ್ಷ್ಮವ್ವ ಭಜಂತ್ರಿ, 9ರಲ್ಲಿ ಚಂದ್ರು ಕರಿಸೋಮನಗೌಡ್ರ, 10ರಲ್ಲಿ ಇಮ್ತಿಯಾಜ್ ಶಿರಹಟ್ಟಿ, 16ರಲ್ಲಿ ಕೃಷ್ಣ ಪರಾಪೂರ, 18ರಲ್ಲಿ ಜೈನುಲಾಬ್ದಿನ್ ನಮಾಜಿ, 20ರಲ್ಲಿ ಪರವೀನಬಾಬು ಮುಲ್ಲಾ, 22ರಲ್ಲಿ ರವಿ ಕಮತರ, 23ರಲ್ಲಿ ಬರಕತ್ ಅಲಿ ಮುಲ್ಲಾ, 27ರಲ್ಲಿ ಲಲಿತಾ ಅಸೂಟಿ, 29ರಲ್ಲಿ ಲಕ್ಷ್ಮಣ ಚಂದಾವರಿ, 30ರಲ್ಲಿ ಪದ್ಮಾ ಕಟಗಿ ಸೇರಿ 15 ವಾರ್ಡ್ ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಇನ್ನು ವಾರ್ಡ್ ನಂ.17ನೇ ಆಸ್ಮಾ ರೇಶ್ಮಿ ಹಾಗೂ 21ನೇ ವಾರ್ಡಿನ ಮೈಬೂಬಸಾಬ ನದಾಫ್ ಪಕ್ಷೇತರ ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದಾರೆ.

error: Content is protected !!