ಬೆಂಗಳೂರು: ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ ಬಳಿಕ ತನಗೆ ಮತ್ತು ತನ್ನ ಕುಟುಂಬಕ್ಕೆ ಬೆದರಿಕೆ ಹಾಗೂ ಮಾನಸಿಕ ಒತ್ತಡ ಹಾಕಲಾಗುತ್ತಿದೆ ಎಂದು ಮಾಸ್ಕ್ ಮ್ಯಾನ್ ಚಿನ್ನಯ್ಯ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ವಿಶೇಷ ತನಿಖಾ ತಂಡಕ್ಕೆ (SIT) ಅಧಿಕೃತ ದೂರು ಸಲ್ಲಿಸಲಾಗಿದೆ.
ಪ್ರಕರಣದ ಕುರಿತು ಹೈಕೋರ್ಟ್‌ನಲ್ಲಿ W.P. No.17331/2026 ರಿಟ್ ಅರ್ಜಿ ಸಲ್ಲಿಸಿರುವ ಚಿನ್ನಯ್ಯ, ಅರ್ಜಿ ಸಲ್ಲಿಸಿದ ನಂತರ ಕೆಲ ವ್ಯಕ್ತಿಗಳು ನಿರಂತರವಾಗಿ ಸಂಪರ್ಕಿಸಿ ಒತ್ತಡ ಹೇರುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. “ಈ ಅರ್ಜಿಯ ಹಿಂದೆ ಯಾರು ಇದ್ದಾರೆ? ನಿಮಗೆ ಯಾರು ಸಹಾಯ ಮಾಡುತ್ತಿದ್ದಾರೆ? ಯಾರ ಪ್ರೇರಣೆಯಿಂದ ಈ ಕೆಲಸ ಮಾಡುತ್ತಿದ್ದೀರಿ?” ಎಂಬ ಪ್ರಶ್ನೆಗಳನ್ನು ಪದೇ ಪದೇ ಕೇಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ತನ್ನ ಮೊಬೈಲ್ ಸಂಖ್ಯೆ ಕೇಳಿ ನೇರವಾಗಿ ಮಾತನಾಡಲು ಒತ್ತಾಯಿಸಲಾಗಿದೆ. ಕುಟುಂಬ ಸದಸ್ಯರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನ ನಡೆಸಲಾಗಿದೆ. ಪರೋಕ್ಷ ಬೆದರಿಕೆ ಹಾಗೂ ಮಾನಸಿಕ ಕಿರುಕುಳದ ಮೂಲಕ ಪ್ರಕರಣದಿಂದ ಹಿಂದೆ ಸರಿಯುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಚಿನ್ನಯ್ಯ ಆರೋಪಿಸಿದ್ದಾರೆ.
ಯುನೈಟೆಡ್ ಮೀಡಿಯಾ ಯೂಟ್ಯೂಬ್ ಚಾನೆಲ್‌ಗೆ ಸಂಬಂಧಿಸಿದ ಅಭಿಷೇಕ್ ಹಾಗೂ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಚಿನ್ನಯ್ಯ ಮನವಿ ಮಾಡಿದ್ದಾರೆ. ಈ ಸಂಬಂಧ ಬೆಳ್ತಂಗಡಿಯ SIT ಕಚೇರಿಗೆ ಪತ್ನಿಯೊಂದಿಗೆ ಆಗಮಿಸಿ ತನಿಖಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ಇದೇ ವೇಳೆ, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ರಿಟ್ ಅರ್ಜಿಯನ್ನು ಪರಿಗಣಿಸಿರುವ ಹೈಕೋರ್ಟ್ ರಾಜ್ಯ ಸರ್ಕಾರ ಹಾಗೂ SITಗೆ ನೋಟಿಸ್ ಜಾರಿಗೊಳಿಸಿದೆ. ತನಿಖೆಯ ಪ್ರಗತಿ ಮತ್ತು ಸ್ಥಿತಿಗತಿಯ ಕುರಿತು ವರದಿ ಸಲ್ಲಿಸುವಂತೆ ವಿಶೇಷ ತನಿಖಾ ತಂಡಕ್ಕೆ ನಿರ್ದೇಶನ ನೀಡಲಾಗಿದೆ.



