ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ನಡುವೆ ಚಿನ್ನಯ್ಯ ವಿರುದ್ಧವೇ ಪ್ರತಿದಾಳಿ ಆರಂಭವಾಗಿದ್ದು, ಆತನ ಬ್ರೈನ್ ಮ್ಯಾಪಿಂಗ್ ಸೇರಿದಂತೆ ಎಲ್ಲಾ ಆರೋಪಗಳ ತನಿಖೆಗೆ ಒತ್ತಾಯಿಸಿ ಗಿರೀಶ್ ಮಟ್ಟಣ್ಣನವರ್ ಎಸ್‌ಐಟಿಗೆ ದೂರು ನೀಡಿದ್ದಾರೆ.
ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಭೇಟಿ ನೀಡಿದ ಗಿರೀಶ್ ಮಟ್ಟಣ್ಣನವರ್, ಚಿನ್ನಯ್ಯ ತನ್ನ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಿರುವ 200 ಕೋಟಿ ರೂಪಾಯಿ ಫಂಡಿಂಗ್ ಆರೋಪ, ನಟ ಪ್ರಕಾಶ್ ರಾಜ್ ಹೆಸರು ಹಾಗೂ ಇತರ ಗಂಭೀರ ವಿಚಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಚಿನ್ನಯ್ಯ ಹೇಳಿಕೆಗಳ ಆಧಾರದ ಮೇಲೆ ಸಂಬಂಧಪಟ್ಟ ಎಲ್ಲರನ್ನೂ ತನಿಖೆಗೆ ಒಳಪಡಿಸಬೇಕು. ಅಗತ್ಯವಿದ್ದರೆ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ತಮ್ಮ ಬ್ರೈನ್ ಮ್ಯಾಪಿಂಗ್ ನಡೆಸಲು ಕೂಡ ಸಿದ್ಧವಿರುವುದಾಗಿ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಗಿರೀಶ್ ಮಟ್ಟಣ್ಣನವರ್, ಚಿನ್ನಯ್ಯ ಬೇಡಿಕೆಯ ಮೇರೆಗೆ ಚಂದ್ರಶೇಖರ ಸ್ವಾಮೀಜಿ ಅವರನ್ನು ಭೇಟಿಯಾಗಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಯಾವುದೇ ಪೊಲೀಸ್ ಅಥವಾ ತನಿಖಾ ಪ್ರಕ್ರಿಯೆಗೆ ಸ್ವಾಮೀಜಿ ಶಿಫಾರಸು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಕಾಶ್ ರಾಜ್ ಬೆಂಬಲದ ಕುರಿತು ಪ್ರತಿಕ್ರಿಯಿಸಿದ ಅವರು, ಆ ವಿಚಾರಕ್ಕೆ ಸಂಬಂಧಿಸಿದ ಉತ್ತರವನ್ನು ಪ್ರಕಾಶ್ ರಾಜ್ ಅವರೇ ನೀಡಬೇಕು ಎಂದಿದ್ದಾರೆ. ಜೊತೆಗೆ ಚಿನ್ನಯ್ಯ ತಮ್ಮ ಜೊತೆ ಇದ್ದ ವೇಳೆ ಸ್ವಯಂಪ್ರೇರಿತವಾಗಿ ಕಾಲು ಒತ್ತುತ್ತಿದ್ದ ಎಂಬ ಹೇಳಿಕೆಯನ್ನೂ ನೀಡಿದ್ದಾರೆ.
ಪ್ರಕರಣದ ಹೊಸ ಬೆಳವಣಿಗೆಗಳು ಧರ್ಮಸ್ಥಳ ತನಿಖೆಗೆ ಮತ್ತಷ್ಟು ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿವೆ.



