ಬೆಂಗಳೂರು: ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಒಟ್ಟು ₹13.14 ಕೋಟಿ ಮೌಲ್ಯದ 38.34 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ಜಪ್ತಿ ಮಾಡಿದ್ದು, 6 ಮಂದಿ ಪ್ರಯಾಣಿಕರನ್ನು ಬಂಧಿಸಿದ್ದಾರೆ.
ಬೆಂಗಳೂರು ಕಸ್ಟಮ್ಸ್ ಇಲಾಖೆಯ ಮಾಹಿತಿಯಂತೆ, ಜೂನ್ 11ರಂದು ಬ್ಯಾಂಕಾಕ್ನಿಂದ ಬೆಂಗಳೂರಿಗೆ ಆಗಮಿಸಿದ್ದ ಐವರು ಪ್ರಯಾಣಿಕರ ಚೆಕ್-ಇನ್ ಲಗೇಜ್ಗಳನ್ನು ತಪಾಸಣೆ ನಡೆಸಿದ ವೇಳೆ 24.8 ಕೆಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಲಗೇಜ್ ಬ್ಯಾಗ್ಗಳಲ್ಲಿ ಚಾಣಾಕ್ಷತನದಿಂದ ಅಡಗಿಸಿಡಲಾಗಿದ್ದ ಈ ಮಾದಕ ವಸ್ತುವಿನ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಸುಮಾರು ₹8.68 ಕೋಟಿ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಐವರನ್ನು ಬಂಧಿಸಲಾಗಿದೆ.
ಇದೇ ರೀತಿ ಜೂನ್ 13ರಂದು ಬ್ಯಾಂಕಾಕ್ನಿಂದ ಬಂದ ಮತ್ತೊಬ್ಬ ಪ್ರಯಾಣಿಕನ ಚೆಕ್-ಇನ್ ಹಾಗೂ ಹ್ಯಾಂಡ್ ಲಗೇಜ್ಗಳನ್ನು ಪರಿಶೀಲಿಸಿದಾಗ ವ್ಯಾಕ್ಯೂಮ್ ಪ್ಯಾಕ್ ಮಾಡಲಾಗಿದ್ದ 13.54 ಕೆಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಇದರ ಮೌಲ್ಯ ಸುಮಾರು ₹4.74 ಕೋಟಿ ಎಂದು ಅಂದಾಜಿಸಲಾಗಿದೆ. ಈ ಪ್ರಕರಣದಲ್ಲೂ ಆರೋಪಿಯನ್ನು ಬಂಧಿಸಲಾಗಿದೆ.
ಎರಡೂ ಕಾರ್ಯಾಚರಣೆಗಳಲ್ಲಿ ಒಟ್ಟು 38.34 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಒಟ್ಟು ಮೌಲ್ಯ ₹13.14 ಕೋಟಿ ಎಂದು ಕಸ್ಟಮ್ಸ್ ಇಲಾಖೆ ತಿಳಿಸಿದೆ.
ಬಂಧಿತ ಆರು ಮಂದಿಯ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಅಂತರರಾಷ್ಟ್ರೀಯ ಡ್ರಗ್ಸ್ ಜಾಲದ ಸಂಪರ್ಕ ಹಾಗೂ ಮಾದಕ ವಸ್ತುಗಳನ್ನು ನಗರದಲ್ಲಿ ಯಾವ ಪ್ರದೇಶಗಳಿಗೆ ಸರಬರಾಜು ಮಾಡಲು ತರಲಾಗುತ್ತಿತ್ತು ಎಂಬ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.



