Home Blog Page 3308

ಪೇಪರ್ ಸಿಂಹ ಆಗಬೇಡ ಎಂದು ಸಂಸದನಿಗೆ ಏಕ ವಚನದಲ್ಲಿಯೇ ಮಾತನಡಾದಿ ಜಿಟಿಡಿ!

ವಿಜಯಸಾಕ್ಷಿ ಸುದ್ದಿ, ಮೈಸೂರು

ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಶಾಸಕ ಜಿ.ಟಿ. ದೇವೇಗೌಡ ಅವರು ಏಕ ವಚನದಲ್ಲಿಯೇ ಗುಡುಗಿದ್ದಾರೆ.
ನಿನಗೆ ತಾಕತ್ತಿದ್ದರೆ ಡಿಸಿಯನ್ನು ವರ್ಗಾವಣೆ ಮಾಡಿಸು. ರೋಹಿಣಿ ಸಿಂಧೂರಿ ವಿರುದ್ದ ಪ್ರತಾಪ್‌ ಸಿಂಹ ಹೇಳಿಕೆ ಬೇಕಿತ್ತಾ? ಸುಖಾ ಸುಮ್ಮನೆ ಹಾದಿ ಬೀದಿಲಿ ನಿಂತು ಮಾತನಾಡಬೇಡ. ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಪೇಪರ್ ಟೈಗರ್ ಆಗುವುದು ಬೇಡ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಧಿಕಾರಿಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡಬೇಡಿ. ಜಿಲ್ಲೆಯ ಶಾಸಕರು ನಿನಗಿಂತಲೂ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಸ್ವಂತ ಹಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಸಂಸದನಾಗಿ ನೀನೆಷ್ಟು ಸ್ವಂತ ಹಣ ಖರ್ಚು ಮಾಡಿರುವ ಲೆಕ್ಕ ಕೊಡು. ವೈಫಲ್ಯತೆ ಬಗ್ಗೆ ವಿರೋಧ ಪಕ್ಷದವರು ಮಾತನಾಡಬೇಕು. ಆಡಳಿತ ಪಕ್ಷದವರಲ್ಲ ಎಂದು ಗುಡುಗಿದ್ದಾರೆ.

ನೀನು ಪವರ್‌ ಫುಲ್ ಎಂಪಿ, ಪಿಎಂ, ಸಿಎಂ ನೀನು ಹೇಳಿದಂತೆ ಕೇಳುತ್ತಾರೆ. ತಾಕತ್ತಿದ್ದರೆ ಡಿಸಿಯನ್ನು ವರ್ಗಾವಣೆ ಮಾಡಿ ತೋರಿಸು. ಅದನ್ನು ಬಿಟ್ಟು ಪೇಪರ್‌ ಸ್ಟೇಟ್‌ ಮೆಂಟ್ ಕೊಟ್ಟು ಗೊಂದಲ ಏಕೆ ಮಾಡಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ಹೇಳಿಕೆ, ಆರೋಪಗಳ ಹಿಂದೆ ವೈಯುಕ್ತಿಕ ಸಮಸ್ಯೆ ಇದೆ ಎನಿಸುತ್ತಿದೆ. ನಿಮ್ಮ ಹೇಳಿಕೆಗಳು ಜನರಲ್ಲಿ ಅನುಮಾನ ಸೃಷ್ಟಿಸಿವೆ ಎಂದು ಹೇಳಿದ್ದಾರೆ.

ಸತ್ರ ನಾ ಸಾಯಿತೀನಿ,ನಿಮಗೇನು ಕಷ್ಟ!

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು

ಕೊರೊನಾ ಸೋಂಕಿತ ವ್ಯಕ್ತಿ ದರ್ಪ ಮೆರೆದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ನಾನು ಸತ್ತರೆ ಸಾಯುತ್ತೇನೆ. ನಿಮಗೇನು ಕಷ್ಟ? ನನ್ನ ತೋಟಕ್ಕೆ ನೀವು ಗೊಬ್ಬರ ಹಾಕಲು ನೀವು ಬರುತ್ತೀರಾ? ಎಂದು ಸೋಂಕಿತ ವ್ಯಕ್ತಿ ದರ್ಪ ಮೆರೆದು ಅಧಿಕಾರಿಗಳನ್ನೇ ತರಾಟೆಗೆ ತೆಗೆದುಕೊಂಡಿದ್ದಾನೆ.

ಈ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೋಂ ಐಸೋಲೇಷನ್ ನಲ್ಲಿ ಇದ್ದರು. ಆದರೂ ಹೊರಗಡೆ ತಿರುಗಾಟ ನಡೆಸಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ಆತನನ್ನು ಪ್ರಶ್ನಿಸಿದ್ದಾರೆ. ಆದರೆ, ಆ ವ್ಯಕ್ತಿ ಅಧಿಕಾರಿಗಳನ್ನೇ ತರಾಟೆಗೆ ತೆಗೆದುಕೊಂಡಿದ್ದಾನೆ. ಅಲ್ಲದೇ, ಪ್ರಶ್ನೆ ಮಾಡಿದ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಘಟನೆ ತಾಲೂಕಿನ ನೆರಡಿ ಗ್ರಾಮದಲ್ಲಿ ನಡೆದಿದೆ.

ಮನೆಯಲ್ಲಿರುವುದು ಬಿಟ್ಟು ಹೊರಗೆ ಏಕೆ ಹೋಗಿದ್ದೀರಾ? ಎಂದು ಅಧಿಕಾರಗಳು ಪ್ರಶ್ನಿಸಿದ್ದರು. ಆಗ ನನ್ನಿಂದ ಯಾರಿಗೆ ತೊಂದರೆಯಾಗಿದೆ ಹೇಳಿ? ನಾನು ಹೊರಗಡೆ ಓಡಾಡುತ್ತೇನೆ ಅದನ್ನು ನೀವು ಕೇಳಬಾರದು ಎಂದು ಅಧಿಕಾರಿಗಳನ್ನೇ ಪ್ರಶ್ನಿಸಿದ್ದಾನೆ. ಸದ್ಯ ಸೋಂಕಿತ ವ್ಯಕ್ತಿಯ ವಿರುದ್ಧ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋವಿಡ್ ನಿಯಮ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಾಗಿದೆ.

ನಕಲಿ ಪತ್ರಕರ್ತನ ಬೈಕ್ ಸೀಜ್ ಮಾಡಿದ‌ ಪೊಲೀಸರು

ವಿಜಯಸಾಕ್ಷಿ ಸುದ್ದಿ, ಗದಗ

ಪ್ರೆಸ್ ಎಂದು ಹೇಳಿಕೊಂಡು ಊರೆಲ್ಲ ಸುತ್ತುತ್ತಿದ್ದ ನಕಲಿ ಪತ್ರಕರ್ತನ ಬೈಕ್ ನ್ನು ಪೊಲೀಸರು ಸೀಜ್ ಮಾಡಿರುವ ಘಟನೆ ನಡೆದಿದೆ. ಕೊರೊನಾದಿಂದಾಗಿ ರಾಜ್ಯದಲ್ಲಿ ಕಠಿಣ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಹೀಗಾಗಿ ಅನಾವಶ್ಯಕವಾಗಿ ಓಡಾಡುತ್ತಿರುವವರ ಬೈಕ್ ಸೀಜ್ ಮಾಡುವಂತೆ ಸರ್ಕಾರ ಸೂಚಿಸಿದೆ. ಆದರೂ ಹಲವರು ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತ ಉದ್ಧಟತನ ಮೆರೆಯುತ್ತಿದ್ದಾರೆ.

ಇದೇ ರೀತಿ ತಿರುಗಾಡುತ್ತಿದ್ದ ನಕಲಿ ಪತ್ರಕರ್ತನಿಗೆ ಪೊಲೀಸರು ಬುದ್ಧಿ ಕಲಿಸಿದ್ದಾರೆ.

ಇಂದು ಕೂಡ ಪೊಲೀಸರು ನಗರದ ವಿವಿಧ ಬಡಾವಣೆಗಳಲ್ಲಿ ಅನಾವಶ್ಯಕವಾಗಿ ಓಡಾಡುತ್ತಿರುವವರ ಬೈಕ್ ಸೀಜ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ರೋಡಿಗೆ ಬಂದಿದ್ದ ವ್ಯಕ್ತಿಯೊಬ್ಬ ಪ್ರೆಸ್ ಎಂದು ಸುಳ್ಳು ಹೇಳಿ ಸಿಕ್ಕಿ ಹಾಕಿಕೊಂಡಿದ್ದಾನೆ.

ಪಂಚಾಕ್ಷರಿ ನಗರದ ರಸ್ತೆಯ ಹತ್ತಿರ ಪ್ರೆಸ್ ಎಂದು ಹೇಳಿಕೊಂಡಿದ್ದ ವ್ಯಕ್ತಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ ಡಿವೈಎಸ್ ಪಿ ವಿಜಯ್ ಬಿರಾದಾರ ಐಡಿ ಕಾರ್ಡ್ ಕೇಳಿದ್ದಾರೆ. ಆಗ ವಾಕ್ ಹೋಗಿದ್ದೆ…ಪ್ರೆಸ್ ಎಂದು ಏನೇನೊ ಹೇಳಿ ಯುವಕ ಸಿಕ್ಕಿ ಬಿದ್ದಿದ್ದಾನೆ. ಪೊಲೀಸರು ಮುಲಾಜಿಲ್ಲದೆ, ಬೈಕ್ ಸೀಜ್ ಮಾಡಿದ್ದಾರೆ.

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

ವಿಜಯಸಾಕ್ಷಿ ಸುದ್ದಿ, ಗದಗ

ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ಜೀವವಾಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ 2017 ಜುಲೈ 29ರಂದು ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಶುರಾಮ ಗೋಣೆಪ್ಪ ಗುಡದರ ಈತನಿಗೆ ಜೀವಾವಧಿ ಶಿಕ್ಷೆ ಹಾಗೂ 5ಸಾವಿರ ರೂ. ದಂಡ ವಿಧಿಸಿ ನ್ಯಾ. ರಾಜಶೇಖರ ಪಾಟೀಲ ತೀರ್ಪು ಹೊರಡಿಸಿದ್ದಾರೆ.

ಕಟ್ಟಡ ಕಾರ್ಮಿಕನಾಗಿದ್ದ ಪರಶುರಾಮ ಗುಡದರ, ಅಣ್ಣಪ್ಪ ಗಜಕೋಶ ಮತ್ತು ಆತನ ಚಿಕ್ಕಪ್ಪ ಸೋಮನಾಥ ಒಟ್ಟಿಗೆ ಕೆಲಸಕ್ಕೆ ಹೋಗುತ್ತಿದ್ದರು. ಸೋಮನಾಥ ಮದ್ಯ ಸೇವನೆ ಮಾಡಿದಾಗಲೆಲ್ಲಾ ಪರಶುರಾಮ ಗುಡದರ ವಿನಾಕಾರಣ ಜಗಳ ತೆಗೆಯುತ್ತಿದ್ದ. ಅಲ್ಲದೇ ಆತನ ಬಳಿಯಿದ್ದ ಹಣವನ್ನು ಕಿತ್ತುಕೊಳ್ಳುತ್ತಿದ್ದ.

2017 ಜುಲೈ 29ರಂದು ಪರಶುರಾಮ, ಸೋಮನಾಥ ಕಿಸೆಯಿಂದ 120ರೂ. ಕಿತ್ತುಕೊಂಡಿದ್ದ. ಈ ವಿಷಯವನ್ನು ಸೋಮನಾಥ ಮತ್ತು ಅಣ್ಣಪ್ಪ ಸೇರಿಕೊಂಡು ಓಣಿಯ ಹಿರಿಯರಿಗೆ ತಿಳಿಸಿದ್ದರು. ಇದರಿಂದ ಸಿಟ್ಟಾದ ಪರಶುರಾಮ, ಓಣಿಯ ಹಿರಿಯರು ಕರೆಯುತ್ತಿದ್ದಾರೆ ಬನ್ನಿ ಎಂದು ಸೋಮನಾಥ ಮತ್ತು ಅಣ್ಣಪ್ಪನನ್ನು ಪುಸಲಾಯಿಸಿಕೊಂಡು, ಅಗಸ್ತ್ಯ ತೀರ್ಥದ ಬಳಿ ಕರೆದೊಯ್ದಿದ್ದಾನೆ. ಅಲ್ಲಿ ಇಬ್ಬರಿಗೂ ಅವಾಚ್ಯ ಶಬ್ಧಗಳಿಂದ ಬೈದಾಡಿ, ಕಲ್ಲಿನಿಂದ ಸೋಮನಾಥನ ತಲೆ, ಮುಖಕ್ಕೆ ಹೊಡೆದು ಕೊಲೆ ಮಾಡಿದ್ದಾನೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನೂ ಕೊಲೆ ಮಾಡುತ್ತೇನೆ ಎಂದು ಅಣ್ಣಪ್ಪನಿಗೆ ಬೆದರಿಕೆಯೊಡ್ಡಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಬೆದರಿಕೆ ಮಧ್ಯೆಯೂ ಅಣ್ಣಪ್ಪ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣದ ತನಿಖೆ ನಡೆದು ಪರಶುರಾಮ ಕೊಲೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಸರಕಾರದ ಪರವಾಗಿ ಸವಿತಾ ಶಿಗ್ಲಿ ವಾದ ಮಂಡಿಸಿದ್ದಾರೆ.

ಚಂದನ್ ಶೆಟ್ಟಿಯ ಸಲಿಗೆ ಬಿಡುಗಡೆಗೆ ಸಿದ್ಧ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕನ್ನಡದ ರಯಾಗ ಪರ್‌ ಚಂದನ್ ಶೆಟ್ಟಿ ಅವರ ಮುಂದಿನ ‘ಸಲಿಗೆ’ ಮೇ. 28ರಂದು ಬಿಡುಗಡೆಯಾಗಲಿದೆ. ಸಲಿಗೆಗಾಗಿ ಕೆನಡಾದಲ್ಲಿ ದೊಡ್ಡ ಮಟ್ಟದ ಶೂಟಿಂಗ್ ಮಾಡಲಾಗಿದೆ. ಸಲಿಗೆಯನ್ನು 2019ರಲ್ಲಿಯೇ ಕಾಂಪೋಸ್ ಮಾಡಲಾಗಿತ್ತು. ಕನ್ನಡದಲ್ಲಿ ಈ ರೀತಿ ಹಿಂದೆ ಯಾವ ಪ್ರಯೋಗ ಕೂಡ ನಡೆದಿರಲಿಲ್ಲ.

2019ರಲ್ಲಿ ಕೆನಡಾಗೆ ಟೂರ್‌ ಮಾಡಿದ ಸಂದರ್ಭದಲ್ಲಿ ಹಾಡನ್ನು ಟೊರಾಂಟೋ, ಮಾಂಟ್ರಿಯಲ್ ಹಾಗೂ ನಯಾಗರಾ ಜಲಪಾತದ ಬಳಿ ಶೂಟಿಂಗ್ ಮಾಡಲಾಗಿದೆ ಎಂದು ಚಂದನ್ ಹೇಳಿದ್ದಾರೆ.

3 ಪೆಗ್, ಚಾಕೊಲೇಟ್ ಗರ್ಲ್, ಟಕಿಲಾ, ಫೈರ್ ಮತ್ತು ಪಾರ್ಟಿ ಫ್ರೀಕ್, ನನಗೆ ಸಾಕಷ್ಟು ಹೆಸರು ತಂದು ಕೊಟ್ಟಿವೆ. ಸದ್ಯ ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸುತ್ತಿದ್ದೇನೆ ಎಂದು ಚಂದನ್ ಹೇಳಿದ್ದಾರೆ.

ಜನರ ಅಭಿರುಚಿ ಆಗಾಗ ಬದಲಾಗುತ್ತಿರುತ್ತದೆ. ಮೊದಲು ಮೈಕಲ್ ಜಾಕ್ಸನ್ ನಂತರ, ರೆಟ್ರೋ ಈಗ ಮತ್ತೆ ಫಂಕ್ ಹಾಡುಗಳನ್ನು ಕೇಳಲು ಬಯಸುತ್ತಾರೆ ಎಂದು ಚಂದನ್ ಶೆಟ್ಟಿ ತಿಳಿಸಿದ್ದಾರೆ.
ಪೊಗರು ಚಿತ್ರದಲ್ಲಿ ಹಿಟ್ ಸಾಂಗ್ ನೀಡಿದ ಚಂದನ್, ಸದ್ಯ ನಿರ್ದೇಶಕ ನಂದ ಕಿಶೋರ್ ಮತ್ತು ನಟ ಧೃವ ಸರ್ಜಾ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ.

ಅಕ್ರಮ ಮದ್ಯ ಮಾರಾಟ; ಸಿಡಿದೆದ್ದ ಮಹಿಳೆಯರು

ವಿಜಯಸಾಕ್ಷಿ ಸುದ್ದಿ, ಗದಗ

ಎಲ್ಲೆಡೆ ಈಗ ಅಕ್ರಮ ಮದ್ಯ ಮಾರಾಟದ್ದೇ ಸುದ್ದಿ. ಪ್ರತಿ ಹಳ್ಳಿಯಲ್ಲೂ ಅಕ್ರಮ ಮದ್ಯ ಮಾರಾಟದ ದಂದೆಕೋರರು ಯಾವುದೇ ಅಳಕಿಲ್ಲದೆ ರಾಜಾರೋಷವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಎಷ್ಟೋ ಸಂಸಾರಗಳಲ್ಲಿ ಪಾನಮತ್ತರು ಜಗಳ ಮಾಡಿ ಹಾದಿ ರಂಪ-ಬೀದಿ ರಂಪ ಮಾಡುತ್ತಾರೆ. ಇಂತಹ ಅಕ್ರಮ ಮದ್ಯ ಮಾರಾಟದ ವಿರುದ್ಧ ಮಹಿಳೆಯರೇ ಬೀದಿಗೆ ಇಳಿದಿದ್ದಾರೆ.

ನೆಮ್ಮದಿ ಹಾಳು

ಮುಂಡರಗಿ ತಾಲೂಕಿನ ಕದಾಂಪುರ ಗ್ರಾಮದಲ್ಲಿ ಮಹಿಳೆಯರು, ಅಕ್ರಮ ಮದ್ಯ ಮಾರಾಟದ ದಂದೆಕೋರರಿಗೆ ಕಡಿವಾಣ ಹಾಕಿ ಎಂದು ಗ್ರಾಮ ಪಂಚಾಯತಿಗೆ ಮನವಿ ನೀಡಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ದಿನವೂ ಕೆಲವು ಕುಡುಕರು ನಮ್ಮ ನೆಮ್ಮದಿ ಹಾಳು ಮಾಡುತ್ತಿದ್ದಾರೆ. ಪಾನಮತ್ತರಾಗಿ ಬಂದು ಹೆಂಡತಿ -ಮಕ್ಕಳೊಂದಿಗೆ ಜಗಳ ಮಾಡುತ್ತಿದ್ದಾರೆ. ಎಲ್ಲಿ ನೋಡಿದರೂ ಟೆಟ್ರಾ ಪ್ಯಾಕೇಟುಗಳು ಕಂಡು ಬರುತ್ತಿವೆ. ಬಸ್ ನಿಲ್ದಾಣಗಳಲ್ಲಿ ಈಗ ಜನರಿಲ್ಲದ ಕಾರಣ ಕುಡುಕರು ಅವುಗಳನ್ನು ತಮ್ಮ ಅಡ್ಡೆಗಳನ್ನಾಗಿ ಮಾಡಿಕೊಂಡಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

ಅಕ್ರಮ ಮದ್ಯ ಮಾರಾಟದ ದಂದೆಕೋರರಿಗೆ ಅಬಕಾರಿ ಅಧಿಕಾರಿಗಳ ಹಾಗೂ ಪೊಲೀಸರ ಕುಮ್ಮುಕ್ಕು ಇದೆ. ಹೀಗಾಗಿಯೇ ಗ್ರಾಮದಲ್ಲಿ ಎಲ್ಲಿ ಬೇಕಾದಲ್ಲಿ ಮಾರಾಟ ಮಾಡುತ್ತಿದ್ದಾರೆ. ಗ್ರಾಮದ ಅಶಾಂತಿಗೆ ಇವರೇ ಕಾರಣ ಎಂದು ಮಹಿಳೆಯರು ಆರೋಪಿಸಿದರು.

ಹಣ ಕದ್ದು ಕುಡೀತಾರೆ

ತಂದೆಯಿಲ್ಲದ ಮನೆಯಲ್ಲಿ ತಾಯಿ ಒಬ್ಬಳೇ ದುಡಿಯೋದು. ದುಡಿದ ಹಣ ಮನೆಯಲ್ಲಿಟ್ಟಾಗ ನನ್ನ ಸಹೋದರರು ಆ ಹಣ ಕದ್ದು ಸಾರಾಯಿ ಕುಡಿಯಲು ಹೋಗುತ್ತಾರೆ ಎಂದು ಯುವತಿಯೊಬ್ಬಳು ಪಂಚಾಯತಿಯ ಆವರಣದಲ್ಲಿಯೇ ಕಣ್ಣೀರು ಹಾಕಿದಳು. ಗ್ರಾಮದ ಮಹಿಳೆಯರು ಮನವಿಗೆ ಸ್ಪಂದಿಸಿದ ಪಿಡಿಒ, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಈ ಹಿಂದೆಯೂ ಕದಾಂಪುರ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗೆ ಮಹಿಳೆಯರೇ ಬೆಂಕಿ ಹಚ್ಚಿದ್ದರು. ಆದರೂ ಪೊಲೀಸರು, ಅಬಕಾರಿ ಇಲಾಖೆಯವರು ಬುದ್ಧಿ ಕಲಿತಿಲ್ಲ.

ಒಂದೇ ದಿನ 105 ವಾಹನ ಸೀಜ್, 71 ಕೇಸ್; ಎಸ್ಪಿ ಯತೀಶ್

ವಿಜಯಸಾಕ್ಷಿ ಸುದ್ದಿ, ಗದಗ

ಲಾಕ್ ಡೌನ್ ಉಲ್ಲಂಘಿಸಿ ರಸ್ತೆಗೆ ಇಳಿದಿದ್ದ ವಾಹನ ಸವಾರರಿಗೆ ನಿನ್ನೆ ಗದಗ ಜಿಲ್ಲಾ ಪೊಲೀಸರು ಪಾಠ ಕಲಿಸಿದ್ದಾರೆ. ನಿನ್ನೆ ಒಂದೇ ದಿನ ಲಾಕ್‌ಡೌನ್ ಉಲ್ಲಂಘಿಸಿ ಅನಗತ್ಯವಾಗಿ ಓಡಾಡುತ್ತಿದ್ದ 105 ವಾಹನಗಳನ್ನು ಸೀಜ್ ಮಾಡಲಾಗಿದೆ.

ಗುರುವಾರದಂದು ರೋಣ, ಗದಗ, ಲಕ್ಷ್ಮೇಶ್ವರ, ಗಜೇಂದ್ರಗಡ ಸೇರಿದಂತೆ ಜಿಲ್ಲೆಯ ವಿವಿದೆಡೆ ಆಟೋ, ಬೈಕ್ ಸೇರಿದಂತೆ 105 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ 71 ಕೇಸ್ ದಾಖಲಾಗಿವೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಹೇಳಿದ್ದಾರೆ.

ಈ ಕುರಿತು ವಿಜಯಸಾಕ್ಷಿ ಗೆ ಮಾಹಿತಿ ‌ನೀಡಿರುವ ಅವರು, ಸೋಂಕು ತಡೆಗಟ್ಟಲು ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಅನಗತ್ಯವಾಗಿ ಮನೆಯಿಂದ ಹೊರಬರದೇ, ವಾಹನಗಳಲ್ಲಿ ಬೇಕಾಬಿಟ್ಟಿ ಓಡಾಡದೆ ಸೋಂಕು ತಡೆಗಟ್ಟಲು ಸಹಕರಿಸಲು ಸಾರ್ವಜನಿಕರಲ್ಲಿ ಕೋರಿದ್ದಾರೆ.

ಲಾಠಿ ಬೀಸಿ ಬೈಕ್ ‌ಕೆಡವಿದ ಪೊಲೀಸರು; ಸಾರ್ವಜನಿಕರ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ತಪ್ಪಿಸಿಕೊಳ್ಳಲು ಹೋಗಿದ್ದ ಬೈಕ್ ಸವಾರನ ಮೇಲೆ ಲಾಠಿ ಬೀಸಿದ ಪರಿಣಾಮ ಬೈಕ್ ಸವಾರ‌ ಬಿದ್ದು ಗಾಯಗೊಂಡ ಘಟನೆ ಹಳೆಹುಬ್ಬಳ್ಳಿಯ ದೇವರ ಗುಡಿಹಾಳ‌ ಬಳಿ ನಡೆದಿದೆ.

ಬೈಕ್ ಸವಾರ ರಹಮತ್‌ ಕಾಗದಗಾರ ಎಂಬಾತ ಗಾಯಗೊಂಡಾತ. ಈತ ದೇವರ ಗುಡಿಹಾಳ ಬಳಿ ಬೈಕ್ ನಲ್ಲಿ ಬರುತ್ತಿದ್ದಾಗ ಪಿಎಸ್ಐ ಸುಖಾನಂದ ಶಿಂದೆ ಎಂಬುವವರು ಬೈಕ್ ನಿಲ್ಲಿಸಿಲು ಸೂಚಿಸಿದ್ದಾರೆ. ಆದ್ರೆ ಬೈಕ್ ಸವಾರ ಬೈಕ್ ನಿಲ್ಲಸದೇ ಸ್ಪೀಡ್ ಜಾಸ್ತಿ ಮಾಡಿದ್ದಾನೆ. ಇದರಿಂದ ಸಿಟ್ಟಾದ ಪಿಎಸ್ಐ ಶಿಂದೆ ಲಾಠಿ ಬೀಸಿದ್ದಾರೆ. ಬೀಸಿದ ಲಾಠಿ ವೇಗವಾಗಿ ಹೊರಟಿದ್ದ ಬೈಕ್ ಬೀಳುವಂತೆ ಮಾಡಿದೆ. ಇದರಿಂದಾಗಿ ಬೈಕ್ ಸವಾರ ಬಿದ್ದು ಗಾಯಗೊಂಡಿದ್ದಾನೆ ಎನ್ನಲಾಗಿದೆ. ಆದರೆ ಕೆಲ ಮೂಲಗಳು ಹೇಳೋದೆ ಬೇರೆ. ಪಿಎಸ್ಐ ಬೀಸಿದ ಲಾಠಿ ಮುಖಕ್ಕೆ ಬಿದ್ದಿದೆ, ಹೀಗಾಗಿ ಸವಾರ‌ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ ಅಂತ.

ಪೊಲೀಸರ ಈ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿ ತಿಳಿದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜನಸ್ನೇಹಿಯಾಗಿ ವರ್ತಿಸಬೇಕಾದ ಪೊಲೀಸರೇ ಈ ರೀತಿ ವರ್ತಿಸಿದರೆ ಹೇಗೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರ್ತಾ ಇದೆ.

ಗಾಯಗೊಂಡ ರಹಮತ್ ಕಿಮ್ಸ್ ಆಸ್ಪತ್ರೆಗೆ ದಾಖಾಲಾಗಿದ್ದಾನೆ.

ಎರಡು ಬಾರಿ ಕೊರೊನಾ ಗೆದ್ದ 90ರ ಅಜ್ಜಿ

ವಿಜಯಸಾಕ್ಷಿ ಸುದ್ದಿ, ರಾಯಚೂರು

90 ವಯಸ್ಸಿನ ಅಜ್ಜಿಯೊಬ್ಬರು 2ನೇ ಬಾರಿಗೆ ಕೊರೊನಾ ಮಹಾಮಾರಿ ಗೆದ್ದಿದ್ದಾರೆ.
ಜಿಲ್ಲೆಯ ಲಿಂಗಸುಗೂರಿನ 90 ವರ್ಷದ ಅಜ್ಜಿ ಎರಡನೇ ಬಾರಿ ಕೊರೊನಾ ಗೆದ್ದಿದ್ದಾರೆ. ಸೋಂಕು ತಗುಲಿದರೂ ಎದೆ ಗುಂದದೆ ಆತ್ಮವಿಶ್ವಾಸದಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ.

ಕೊರೊನಾ ಹೆದರಿಕೊಳ್ಳುವ ರೋಗವೇ ಅಲ್ಲ ಎಂದು ಹೇಳುತ್ತಿರುವ ಅಜ್ಜಿ ಈಶ್ವರಮ್ಮ, ಕೊರೊನಾ ಗೆಲ್ಲಲು ಔಷಧಿಯಷ್ಟೇ ಅಲ್ಲ ಆತ್ಮವಿಶ್ವಾಸ ಬೇಕು ಎಂದು ಇತರರಿಗೆ ಧೈರ್ಯ ತುಂಬುತ್ತಿದ್ದಾರೆ. ಗುಣಮುಖರಾಗಿ ಮನೆಗೆ ಮರಳಿರುವ ಅಜ್ಜಿ, ನಿಜಕ್ಕೂ ಎಲ್ಲರಿಗೂ ಸ್ಪೂರ್ತಿ. ವೈದ್ಯರು ಹೇಳಿದಂತೆ ಕೇಳಬೇಕು, ವ್ಯಾಯಾಮ ಮಾಡಬೇಕು ರೋಗ ತಾನೇ ಹೋಗುತ್ತದೆ ಎಂದು ಯುವ ಪೀಳಿಗೆಗೆ ಹೇಳುತ್ತಿದ್ದಾರೆ.

ಫೆಬ್ರವರಿ ತಿಂಗಳಲ್ಲಿ ಮೊದಲ ಬಾರಿ ಸೋಂಕು ತಗುಲಿತ್ತು. ಲಿಂಗಸುಗೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಬಳಿಕ 10 ದಿನಗಳ ಕೆಳಗೆ ಪುನಃ ಸೋಂಕು ಧೃಡವಾಗಿತ್ತು. ಹೀಗಾಗಿ ಇಲ್ಲಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿ, ಗುಣಮುಖರಾಗಿ ಅಜ್ಜಿ ಮನೆಗೆ ಬಂದಿದ್ದಾರೆ. ಆಸ್ಪತ್ರೆಯಲ್ಲಿದ್ದಾಗ ಹೆದರಿದ್ದ ಮಕ್ಕಳು, ಮೊಮ್ಮಕ್ಕಳಿಗೆ ಅಜ್ಜಿಯೇ ಧೈರ್ಯ ತುಂಬಿ ಗುಣಮುಖರಾಗಿ ಬಂದಿದ್ದಾರೆ.

ರಾಜ್ಯದಲ್ಲಿ ತಪ್ಪುತ್ತಿಲ್ಲ ಸಾವಿನ ಆತಂಕ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಇಂದು ಕೂಡ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, ಸಾವಿನಲ್ಲಿ ಆತಂಕ ಮನೆ ಮಾಡಿದೆ. ಇಂದು ರಾಜ್ಯದಲ್ಲಿ 24,214 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 31,459 ಜನರು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಅಲ್ಲದೇ, ಇಂದು 476 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸತ್ತವರ ಸಂಖ್ಯೆ 27,405ಕ್ಕೆ ತಲುಪಿದೆ.

ಇಂದು ರಾಜಧಾನಿಯಲ್ಲಿ 5,949 ಪ್ರಕರಣಗಳು ವರದಿಯಾಗಿದ್ದು, ಅಲ್ಲದೇ, 273 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. 6,643 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ರಾಜ್ಯದ ಬಾಗಲಕೋಟೆ 214, ಬಳ್ಳಾರಿಯ 725, ಬೆಳಗಾವಿ 1,147, ಬೆಂಗಳೂರು ಗ್ರಾಮಾಂತರ 623, ಬೆಂಗಳೂರು ನಗರ 5,949, ಬೀದರ್ 60, ಚಾಮರಾಜನಗರ 380, ಚಿಕ್ಕಬಳ್ಳಾಪುರ 238, ಚಿಕ್ಕಮಗಳೂರು 715, ಚಿತ್ರದುರ್ಗ 710, ದಕ್ಷಿಣ ಕನ್ನಡ 555, ದಾವಣಗೆರೆ 806, ಧಾರವಾಡ 678, ಗದಗ 370, ಹಾಸನ 1,505, ಹಾವೇರಿ 159, ಕಲಬುರಗಿ 153, ಕೊಡಗು 337, ಕೋಲಾರ 591, ಕೊಪ್ಪಳ 495, ಮಂಡ್ಯ 755, ಮೈಸೂರು 2,240, ರಾಯಚೂರು 445, ರಾಮನಗರ 263, ಶಿವಮೊಗ್ಗ 822, ತುಮಕೂರು 1,219, ಉಡುಪಿ 905, ಉತ್ತರ ಕನ್ನಡ 659, ವಿಜಯಪುರ 306 ಹಾಗೂ ಯಾದಗಿರಿಯಲ್ಲಿ 190 ಹೊಸ ಪ್ರಕರಣಗಳು ಪತ್ತೆಯಾಗಿವೆ.

error: Content is protected !!