Home Blog Page 3316

ವಿದ್ಯಾರ್ಥಿಗಳಲ್ಲಿ ಸೋಂಕು ಹೆಚ್ಚಳ; ತಜ್ಞರ ಸಲಹೆ ಪಡೆದು ಮುಂದಿನ ಕ್ರಮ

ವಿಜಯಸಾಕ್ಷಿ ಸುದ್ದಿ, ಗದಗ:

ರಾಜ್ಯದಲ್ಲಿ ಓಮಿಕ್ರಾನ್ ಅಷ್ಟೇ ಅಲ್ಲ, ಡೆಲ್ಟಾನೂ ಇದೆ. ಅಲ್ಲದೇ, ಶಾಲಾ ಕಾಲೇಜು ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ತೀವ್ರ ನಿಗಾವಹಿಸಲಾಗುತ್ತಿದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.

ಸೋಮವಾರ ಗದಗನಲ್ಲಿ ಬಿಜೆಪಿ ಪ್ರಚಾರ ಸಭೆಗೂ ಮುನ್ನ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಚಿಕ್ಕಮಗಳೂರಿನಲ್ಲಿ ಓರ್ವ ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ 400 ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಗಿದೆ. ಅದರಲ್ಲಿ 68 ಮಕ್ಕಳಿಗೆ ಸೋಂಕು ದೃಢವಾಗಿದೆ ಎಂದರು.

ಶಾಲಾ ಕಾಲೇಜಿನಲ್ಲಿ ಯಾರಿಗಾದರೂ ಕೋವಿಡ್ ಲಕ್ಷಣಗಳಿದ್ದರೆ ಕೂಡಲೇ ಪರೀಕ್ಷಿಸಲು ಸೂಚಿಸಲಾಗಿದೆ. ಎಲ್ಲೆಲ್ಲಿ ವಸತಿ ನಿಲಯಗಳಿವೆ, ಎಲ್ಲಿ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದಾರೋ ಅಲ್ಲಿ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ನಿಗಾವಹಿಸಲಿದೆ. ಈ ಬಗ್ಗೆ ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು‌ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.

ಈ ಸಂದರ್ಭದಲ್ಲಿ ಸಚಿವ ಸಿ.ಸಿ ಪಾಟೀಲ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಂಸದ ಶಿವಕುಮಾರ್ ಉದಾಸಿ, ಶಾಸಕರಾದ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ್ ಸೇರಿದಂತೆ ಅನೇಕರು ಇದ್ದರು.

ಯೋಧ ದೆಹಲಿಯ ಮೀರಟ್ ಕ್ಯಾಂಪ್‍ನಲ್ಲಿ ಆತ್ಮಹತ್ಯೆ

ವಿಜಯಸಾಕ್ಷಿ ಸುದ್ದಿ, ಮುದ್ದೆಬಿಹಾಳ

ತಾಲೂಕಿನ ಜಟ್ಟಗಿ ಗ್ರಾಮದ ಯುವ ಯೋಧ ಮಂಜುನಾಥ ಯಲ್ಲಪ್ಪ ಹೂಗಾರ (21) ದೇಶದ ರಾಜಧಾನಿ ದೆಹಲಿಯ ಮಿರಟ್ ಬಳಿ ಇರುವ ಎಂಇಜಿ ಯೂನಿಟ್-9ರ ಭಾರತೀಯ ಸೇನಾ ಕ್ಯಾಂಪ್‍ನಲ್ಲಿ ಕರ್ತವ್ಯದಲ್ಲಿದ್ದ ಸಮಯದಲ್ಲೇ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸೇನಾ ಅಧಿಕಾರಿಗಳು ಈ ವಿಷಯವನ್ನು ಇಲ್ಲಿನ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿ, ಕುಟುಂಬ ವರ್ಗಕ್ಕೆ ಮಾಹಿತಿ ನೀಡಿದ್ದಾರೆ.

ಮೃತ ಯೋಧನಿಗೆ ತಂದೆ, ತಾಯಿ, ಇಬ್ಬರು ಸಹೋದರ, ಸಹೋದರಿಯರು ಸೇರಿ ಅಪಾರ ಬಂಧು ಬಳಗ ಇದೆ.

ಮಂಜುನಾಥ ಹೂಗಾರ ಈತ ಸೇನೆಗೆ ಆಯ್ಕೆಯಾಗಿ ತರಬೇತಿ ಪಡೆದು ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಎಂಇಜಿ ಯುನಿಟ್-9ನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ.

ಆತನ ಆತ್ಮಹತ್ಯೆಗೆ ಕಾರಣ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.

ದೆಹಲಿಯ ಸೇನಾ ಆಸ್ಪತ್ರೆಗೆ ಪಾರ್ಥೀವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ಮಂಗಳವಾರ ಅಥವಾ ಬುಧವಾರ ಪಾರ್ಥೀವ ಶರೀರ ಗ್ರಾಮಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ವರದಿ : ಡಾ. ಅಬ್ದುಲ್ ರಜಾಕ್

ಗ್ರೇನ್ ಮಾರ್ಕೆಟ್’ನಲ್ಲಿ ಆಕಸ್ಮಿಕ ಬೆಂಕಿ ; 10 ಲಕ್ಷ ರೂ. ಮೌಲ್ಯದ ಸಾಮಾಗ್ರಿ ಸುಟ್ಟು ಭಸ್ಮ

ವಿಜಯಸಾಕ್ಷಿ ಸುದ್ದಿ, ಗದಗ:

ವೆಲ್ಡಿಂಗ್ ಕೆಲಸ ಮಾಡುವ ವೇಳೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ‌ ಪರಿಣಾಮ ಅಂಗಡಿಯಲ್ಲಿದ್ದ ಸುಮಾರು 10 ಲಕ್ಷ ರೂ. ಮೌಲ್ಯದ ಕುರುಕಲು ತಿಂಡಿಗಳು ಸುಟ್ಟು ಭಸ್ಮವಾಗಿರುವ ಘಟನೆ ಗದಗನ ಗ್ರೇನ್ ಮಾರುಕಟ್ಟೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಎಂ.ಎಂ.ನರೇಗಲ್ ಎಂಬುವವರಿಗೆ ಸೇರಿದ ಕಿರಾಣಿ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ರಾತ್ರಿ 12 ಗಂಟೆ ಸುಮಾರಿಗೆ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವೇಳೆ ಅಂಗಡಿಗೆ ಬೆಂಕಿ ತಗುಲಿದೆ. ಇದರಿಂದ ಅಂಗಡಿಯಲ್ಲಿದ್ದ ಕುರುಕಲು ತಿಂಡಿಗಳು, ಗುಟ್ಕಾ ಪ್ಯಾಕೆಟ್, ಪಾನ್ ಸುಪಾರಿಗಳು ಸೇರಿದಂತೆ ಅಪಾರ ಪ್ರಮಾಣದ ಸಾಮಾಗ್ರಿಗಳು ಸುಟ್ಟು ಕರಕಲಾಗಿವೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಗದಗನಲ್ಲಿ ಎಗ್ಗಿಲ್ಲದೇ ಸಾಗಿದ ಇಸ್ಪೀಟು, ಮಟ್ಕಾದಂಧೆ: ಜಿ.ಎಸ್.ಪಾಟೀಲ್ ವಿಷಾದ

0

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ನನ್ನ ಜೀವನದಲ್ಲಿಯೇ ಇಂತಹ ಅವ್ಯವಸ್ಥೆ ನಾನೆಂದಿಗೂ ನೋಡಿರಲಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್.ಪಾಟೀಲ್ ವಿಷಾದ ವ್ಯಕ್ತಪಡಿಸಿದರು.

ಶನಿವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಾದ್ಯಂತ ಎಲ್ಲೆಂದರಲ್ಲಿ ಇಸ್ಪೀಟು ಅಡ್ಡೆಗಳು ತಲೆ ಎತ್ತಿವೆ. ಅಲ್ಲದೇ, ಮಟ್ಕಾದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಇದರಿಂದ ಗ್ರಾಮೀಣ, ನಗರ ಪ್ರದೇಶದ ಬಹುತೇಕ ಜನರು ಜೂಜಾಟಕ್ಕೆ ಬಲಿಯಾಗುತ್ತಿದ್ದಾರೆ ಎಂದರು.

ಅದರಂತೆ, ಕಿರಾಣಿ, ಹೋಟೆಲ್ ಸೇರಿದಂತೆ ಇನ್ನಿತರ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದರೂ
ಅಬಕಾರಿ ಇಲಾಖೆ ಅಕ್ರಮ ಸಾರಾಯಿ ಮಾರಾಟ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.
ಇನ್ನು ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸರ್ಕಾರ ಇಂತಹ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಜಿ.ಎಸ್.ಪಾಟೀಲ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಶಹರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರಣ್ಣ ಬಳಗಾನೂರ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ ಮಂದಾಲಿ, ಎಸ್ ಸಿ ಘಟಕದ ಜಿಲ್ಲಾಧ್ಯಕ್ಷ ಬಸವರಾಜ್ ಕಡೆಮನಿ, ಬಸವರಾಜ್ ಶೀಲವಂತರ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಉಮರ್ ಪಾರೂಕ್ ಹುಬ್ಬಳ್ಳಿ ಉಪಸ್ಥಿತರಿದ್ದರು.

ಈರುಳ್ಳಿ ಮಾರಲು ಹೋದ ರೈತ ಸೇರಿ ನಾಲ್ವರ ಸಾವು!

0

ಬೆಳ್ಳಂಬೆಳಗ್ಗೆ ಯಮರೂಪಿಯಾದ ಟ್ಯಾಂಕರ್

ವಿಜಯಸಾಕ್ಷಿ ಸುದ್ದಿ,
ಗದಗ/ಕೊಪ್ಪಳ: ಈರುಳ್ಳಿ ಮಾರಲು ಗದಗ ಜಿಲ್ಲೆಯ ರೋಣ ತಾಲೂಕಿನ ಅರಹುಣಸಿಯಿಂದ ಬೆಂಗಳೂರಿಗೆ ಹೊರಟಿದ್ದ ರೈತ ಸೇರಿದಂತೆ ನಾಲ್ವರ ಮೇಲೆ ಟ್ಯಾಂಕರ್ ಹರಿದು ನಾಲ್ವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಬ್ಬ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಶನಿವಾರ ಬೆಳಗ್ಗೆ ಚಿತ್ರದುರ್ಗದ ಬಳಿ ಸಂಭವಿಸಿದೆ.

ಮೃತರನ್ನು ರೋಣ ತಾಲೂಕಿನ ಅರಹುಣಸಿಯ ರೈತ ಶರಣಪ್ಪ ಅಳವಂಡಿ, ವಿಜಯಪುರ ಮೂಲದ ಲಾರಿ ಕ್ಲೀನರ್ ಸಂಜಯ್, ಲಿಂಗಸೂಗುರು ತಾಲೂಕಿನ ಬಯಲುಗುಡ್ಡ ಮೂಲದ ಹುಲಗಪ್ಪ ಹಾಗೂ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೆನಕನಾಳ ಮೂಲದ ಲಾರಿ ಚಾಲಕ ಮಂಜುನಾಥ್ ಬಾದವಾಡಗಿ ಎಂದು ಗುರುತಿಸಲಾಗಿದೆ.

ಲಾರಿಯಲ್ಲಿ ಈರುಳ್ಳಿ ಹಾಕಿಕೊಂಡು ಬೆಂಗಳೂರಿನತ್ತ ಹೋಗುತ್ತಿರುವಾಗ ನಸುಕಿನ‌ ಜಾವ ಟೈರ್ ಪಂಕ್ಚರ್ ಆಗಿದೆ. ಹೆದ್ದಾರಿಯ ಪಕ್ಕದಲ್ಲಿ ಲಾರಿ ನಿಲ್ಲಿಸಿ ಪಂಕ್ಚರ್ ಸರಿಪಡಿಸುವ ಕೆಲಸದಲ್ಲಿ ಲಾರಿಯಲ್ಲಿದ್ದ ಐದು ಜನ ನಿರತರಾಗಿರುವಾಗ ಹಿಂಬದಿಯಿಂದ ಯಮರೂಪಿಯಾಗಿ ಬಂದ ಟ್ಯಾಂಕರ್ ಐವರ ಮೇಲೂ ಹರಿದಿದೆ. ನಾಲ್ವರು ಸ್ಥಳದಲ್ಲೇ ಅಸು ನೀಗಿದ್ದಾರೆ. ಓರ್ವನ ಸ್ಥಿತಿ ತೀರಾ ಗಂಭೀರವಾಗಿದೆ. ಈ ಕುರಿತು ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕನರಗುಂದ; ಓದುವ ಬೆಳಕಿನಡಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

0

ವಿಜಯಸಾಕ್ಷಿ ಸುದ್ದಿ, ನರಗುಂದ:

ತಾಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿ ಆವರಣದಲ್ಲಿರುವ ಗ್ರಂಥಾಲಯ ಕಟ್ಟಡದಲ್ಲಿ ಶುಕ್ರವಾರ ಶಾಲಾ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶೈನಾಜ್ ಮುಜಾವರ್ ಹಾಗೂ ಗ್ರಂಥಾಲಯ ಮೇಲ್ವಿಚಾರಕಿ ಬಸಮ್ಮ ಹಿರೇಗೌಡ್ರ ಅವರು
ಓದುವ ಬೆಳಕು ಕಾರ್ಯಕ್ರಮದಡಿ ಓದಿನ ಕಡೆಗೆ ಆಸಕ್ತಿ, ಸಾಮಾನ್ಯ ಜ್ಞಾನ ಹೆಚ್ಚಿಸುವ ಸಲುವಾಗಿ
ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದರು.

ಈ ಸಂದರ್ಭದಲ್ಲಿ ಪಿಡಿಒ ಶೈನಾಜ್ ಮುಜಾವರ್ ಮಾತನಾಡಿ, ‘ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬಿದ್ದಿರುವುದರಿಂದ ಓದಿನಿಂದ ವಿಮುಕ್ತರಾಗುತ್ತಿದ್ದಾರೆ. ಅಲ್ಲದೇ, ತಂತ್ರಜ್ಞಾನಗಳ ಬಳಕೆಯಿಂದಾಗಿ ಪುಸ್ತಕಗಳ ಬಗೆಗಿನ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ, ಮಕ್ಕಳು ಓದಿನ ಕಡೆ ಹೆಚ್ಚು ಗಮನಹರಸಲಿ ಎಂಬ ಸದುದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಮಕ್ಕಳಿಗಾಗಿ ‘ಓದುವ ಬೆಳಕು’ ಎಂಬ ಯೋಜನೆ ಜಾರಿಗೊಳಿಸಿದೆ ಎಂದು ತಿಳಿಸಿದರು.

ಟ್ರ್ಯಾಕ್ಟರ್‌ನಿಂದ ಬಿದ್ದು ವಿದ್ಯಾರ್ಥಿನಿ ಸ್ಥಳದಲ್ಲಿಯೇ ಸಾವು

ವಿಜಯಸಾಕ್ಷಿ ಸುದ್ದಿ, ಗದಗ:

ಟ್ರ್ಯಾಕ್ಟರ್‌ನಲ್ಲಿ ಶಾಲೆಗೆ ಹೊರಟಿದ್ದ ನಾಲ್ಕನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದಿರುವ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಜರಗಿದೆ.

ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಸಹಳ್ಳಿ ಕ್ರಾಸ್ ಬಳಿ ನಡೆದ ಈ ದುರ್ಘಟನೆಯಲ್ಲಿ ಮೂಲತಃ ಕಡಕೋಳ ಗ್ರಾಮದ ಸುಧಾ (10) ಮೃತಪಟ್ಟ ದುರ್ಧೈವಿಯಾಗಿದ್ದಾಳೆ.

ತನ್ನ ಅಜ್ಜಿ ಮನೆ ಹೊಸಹಳ್ಳಿಯಲ್ಲಿದ್ದು ಕಡಕೋಳ ಗ್ರಾಮದ ಸರಕಾರಿ ಶಾಲೆಗೆ ಹೋಗಿ ಬರುತ್ತಿದ್ದ ಸುಧಾ ಶುಕ್ರವಾರ ಟ್ರ್ಯಾಕ್ಟರ್‌ನಲ್ಲಿ ಕಡಕೋಳಕ್ಕೆ ಶಾಲೆಗೆ ಹೊರಟಿದ್ದಳು. ಆದರೆ, ಹೊಸಹಳ್ಳಿ ಕ್ರಾಸ್‌ನಲ್ಲಿ ಅತೀ ವೇಗವಾಗಿ ಚಾಲಕ ಟ್ರ್ಯಾಕ್ಟರ್‌ನ್ನು ಚಲಾಯಿಸಿದ್ದರಿಂದ ಟ್ರೇಲರ್‌ನಲ್ಲಿ ನಿಂತಿದ್ದ ವಿದ್ಯಾರ್ಥಿನಿ ಸುಧಾ ಆಯ ತಪ್ಪಿ ಕೆಳಗೆ ಬಿದ್ದಿದ್ದು, ಹಿಂದಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

ಚಾಲಕನ ಅಜಾಗರೂಕತೆಯಿಂದ ಟ್ರ್ಯಾಕ್ಟರ ಚಾಲನೆ ಮಾಡಿದ್ದೇ ಈ ಘಟನೆಗೆ ಕಾರಣ ಎಂದು ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶಿವಾನಂದ ಪಟ್ಟಣಶೆಟ್ಟಿ, ಇನ್ಸ್‌ಪೆಕ್ಟರ್ ವಿಕಾಸ ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಿಎಸ್‌ಐ ನವೀನ ಜಕ್ಕಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ರಾಜ್ಯದಲ್ಲಿ 16 ಜನರಿಗೆ ಓಮಿಕ್ರಾನ್ ಸೋಂಕು ಧೃಡ?: ಶಾಸಕ ಎಚ್ಕೆ ಪಾಟೀಲ್ ಸ್ಫೋಟಕ ಹೇಳಿಕೆ

0

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿನ ಭೀತಿ ಇದ್ದು, ನಿನ್ನೆ (ಡಿ.೨) ಸಂಜೆ ಇಬ್ಬರಿಗೆ ಓಮಿಕ್ರಾನ್ ಸೋಂಕು ದೃಢಪಟ್ಟಿದೆ. ಆದರೆ, ಗುರುವಾರ ಸಂಜೆಯ ಅನಧಿಕೃತ ವರದಿ ಪ್ರಕಾರ ರಾಜ್ಯದ ಇನ್ನೂ 16 ಜನರಿಗೆ ಓಮಿಕ್ರಾನ್ ಸೋಂಕು ಖಚಿತ ಪಟ್ಟಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ.ಪಾಟೀಲ್ ಸ್ಫೋಟಕ ಹೇಳಿಕೆ ನೀಡಿದರು.

ಶುಕ್ರವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಓಮಿಕ್ರಾನ್ ಸೋಂಕು ದೃಢಪಟ್ಟಿರುವುದು ಗಂಭೀರ ವಿಷಯವಾಗಿದ್ದು, ಸರ್ಕಾರ ನಿರ್ಲಕ್ಷ್ಯ ವಹಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ
ಜನರು ಭಯಪಡದೇ ಜಾಗೃತರಾಗಿರಬೇಕು. ಆದರೆ, ಸರ್ಕಾರ ಭಯದಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಅದರಂತೆ, ಕೊರೊನಾ ಒಂದು ಮತ್ತು ಎರಡನೇ ಅಲೆಗಿಂತ ಮೂರನೇ ಅಲೆಯಾಗಿ ಪರಿವರ್ತನೆಗೊಂಡಿರುವ ಕೊರೊನಾ ಓಮಿಕ್ರಾನ್ ಕೆಟ್ಟ ಪರಿಣಾಮ ಬೀರುತ್ತಿದೆ‌. ಇದು ಅತ್ಯಂತ ವೇಗವಾಗಿ ಹರಡುವ ಸ್ವಭಾವ ಹೊಂದಿದೆ. ನ.20 ರಂದು ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ವೈದ್ಯಕೀಯ ಸಮ್ಮೇಳನದಲ್ಲಿ ಭಾಗವಹಿಸಿದ 250 ಜನರ ಪೈಕಿ ರಾಜ್ಯ ಸರ್ಕಾರದ ವೈದ್ಯರೊಬ್ಬರಿಗೆ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ ಎಂದರು.

ರಾಜ್ಯ ಸರ್ಕಾರ ಸಮ್ಮೇಳನದಲ್ಲಿ ಪಾಲ್ಗೊಂಡವರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಪತ್ತೆ ಮಾಡುವಲ್ಲಿ ವಿಫಲವಾಗಿದೆ. ಅಲ್ಲದೇ, ಓಮಿಕ್ರಾನ್ ತಪಾಸಣಾ ವರದಿ ವಿಳಂಬವಾಗುತ್ತಿದ್ದು, ವರದಿಗಾಗಿ ಸುಮಾರು ಹನ್ನೆರಡು ದಿನಗಳವರೆಗೆ ಕಾಯಬೇಕಾಗಿದೆ ಎಂದು ಶಾಸಕ ಎಚ್.ಕೆ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಎಫ್ ಎಚ್ ಜಕ್ಕಪ್ಪನವರ, ಬಸವರಾಜ್ ಕಡೆಮನಿ, ಅಶೋಕ ಮಂದಾಲಿ, ವಾಸಣ್ಣ ಕುರುಡಗಿ ಸೇರಿದಂತೆ ಹಲವರು ಇದ್ದರು.

10 ಕ್ವಿಂಟಲ್ ಈರುಳ್ಳಿಗೆ ಸಿಕ್ಕಿದ್ದು 170 ರೂ.! ಬೆಲೆ ಕುಸಿತ, ಸಾಲದ ಹೊರೆಯೊಂದಿಗೆ ಬಂದ ಅನ್ನದಾತ!

0

ವಿಜಯಸಾಕ್ಷಿ ಸುದ್ದಿ, ಗದಗ

ಸತತ ಮಳೆಯಿಂದ ಬೆಳೆ ನಷ್ಟಕ್ಕೆ ಒಳಗಾಗಿರುವ ರೈತ ಈಗ ಮಾರುಕಟ್ಟೆಗೆ ಬೆಳೆಯನ್ನು ಒಯ್ದರೆ ಸರಿಯಾದ ಬೆಲೆಯೂ ಬರುತ್ತಿಲ್ಲ. 10 ಕ್ವಿಂಟಲ್ ಈರುಳ್ಳಿ ಮಾರಿದ ರೈತರೊಬ್ಬರಿಗೆ ಖರ್ಚು ಕಳೆದು ಕೇವಲ 170 ರೂ. ಪಾವತಿಯಾಗಿದೆ!

ಆದರೆ, ಬೆಂಗಳೂರಿಗೆ ಹೋಗಿ, ಈರುಳ್ಳಿ ಮಾರಾಟ ಮಾಡಲು ಹಾಗೂ ಹಮಾಲಿ ಸೇರಿ 6,000 ರೂ. ಖರ್ಚಾಗಿದ್ದರಿಂದ ಅಷ್ಟೂ ಸಾಲದ ಹೊರೆ ರೈತನ ಮೇಲೆ ಬಿದ್ದಿದೆ.

ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಕ್ಕು ಸ್ವಲ್ಪ ಹಣ ಸಂಪಾದಿಸಬಹುದೆಂಬ ಅಲ್ಪ ಆಸೆಯೊಂದಿಗೆ ಬೆಂಗಳೂರಿಗೆ ಈರುಳ್ಳಿ ಮಾರಲು ಹೋದ ರೈತ ಸಾಲದ ಹೊರೆಯೊಂದಿಗೆ ಮರಳಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

ಸಮಿಪದ ಕೋಟುಮಚಗಿ ಗ್ರಾಮದ ರೈತ ಅಂಬರೀಶ್ ಅಬ್ಬಿಗೇರಿ ತನ್ನ ನಾಲ್ಕೂವರೆ ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದರು. ಈಗಾಗಲೇ ಎರಡು ಹಂತದಲ್ಲಿ ಈರುಳ್ಳಿ ಬೆಳೆ ಮಾರಾಟ ಮಾಡಿದ್ದು, 118 ಮೂಟೆಗಳಿಗೆ ಒಟ್ಟು 76,000 ರೂ. ಬಂದು ತುಸು ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿತ್ತು. ಉಳಿದ 20 ಚೀಲ ಈರುಳ್ಳಿಯನ್ನು ಮಾರಾಟ ಮಾಡಲು ಸೋಮವಾರ (ನ.29) ಬೆಂಗಳೂರಿನ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯ ಶ್ರೀಉಮಾಶಂಕರ ಟ್ರೇಡರ್ಸ್ ದಲಾಲಿ ಅಂಗಡಿಯಲ್ಲಿ ಇರಿಸಿದ್ದರು.

ಕ್ವಿಂಟಲ್‌ಗೆ ಕೇವಲ 400, 300 ಹಾಗೂ 100 ರೂ.ಗೆ ಮಾರಾಟ ಆಗಿದೆ. ಒಟ್ಟು 10 ಕ್ವಿಂಟಲ್ ತೂಗಿದ್ದು, ಒಟ್ಟು ವ್ಯಾಪಾರದಿಂದ 2,420 ರೂ. ಹಣ ಬಂದಿದೆ. ಲಾರಿ ಬಾಡಿಗೆ, ಹಮಾಲಿ ಹಣ ಕಳೆದು 170 ರೂ. ಮರಳಿ ಬಂದಿದೆ. ಇದನ್ನು ನೋಡಿ ರೈತ ಕಂಗಾಲಾಗಿ ಬರಿಗೈಯಲ್ಲಿ ವಾಪಸ್ ಬರುವಂತಾಗಿದೆ.

ಬೆಂಗಳೂರಿನ ಮಾರುಕಟ್ಟೆಗೆ ಒಯ್ದ 20 ಮೂಟೆ ಪೈಕಿ ದೊಡ್ಡ ಈರುಳ್ಳಿಗೆ 200 ರೂ., ಸಣ್ಣದಕ್ಕೆ 150 ರೂ. ಹಾಗೂ ಮಧ್ಯಮ ಗಾತ್ರದ ಉಳ್ಳಾಗಡ್ಡಿ ಕೇವಲ 50 ರೂ.ಗೆ ಮಾರಾಟವಾಗಿದೆ. ಒಂದು ಮೂಟೆ ಮಾರುಕಟ್ಟೆಗೆ ಬಂದು ಬೀಳಬೇಕಾದರೆ, ಸುಮಾರು 500 ರೂ. ಖರ್ಚಾಗುತ್ತದೆ.

20 ಮೂಟೆಗಳಿಗೆ 1008 ಕೆ.ಜಿ. ತೂಕ ಬಂದಿದ್ದು, ಒಟ್ಟು 2,425 ರೂ. ಪಟ್ಟಿಯಾಗಿದೆ. ಅದರಲ್ಲಿ ಹಮಾಲಿ 141 ರೂ. ಹಾಗೂ ಸರಕು ಸಾಗಾಣೆ ವೆಚ್ಚ 2,113 ರೂ. ಕಡಿತಗೊಂಡು ರೈತನ ಕೈಗೆ ಕೇವಲ 170 ರೂ. ಮಾತ್ರ ಸಿಕ್ಕಿದೆ. ಇದು ರೈತನಿಗೆ ಆಶ್ಚರ್ಯವನ್ನುಂಟು ಮಾಡಿದ್ದಲ್ಲದೇ, ನೆಲಕ್ಕೆ ಕುಸಿಯುವಂತೆ ಮಾಡಿದೆ.

ಬೆಲೆಗಿಂತ ಕೂಲಿ ಹಣವೇ ಅಧಿಕ!

ಹವಾಮಾನ ವೈಪರೀತ್ಯದಿಂದಾಗಿ ಹಲವು ದಿನಗಳಿಂದ ಸುರಿದ ಅಕಾಲಿಕ ಮಳೆಯಿಂದಾಗಿ ಈರುಳ್ಳಿ ಕೊಳೆಯುವ ಸ್ಥಿತಿಗೆ ಬಂದಿದ್ದು, ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ಬೆಲೆಯೂ ಕುಸಿದಿದೆ. ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತೆ ಆಗಬಾರದು ಎಂಬ ಕಾರಣಕ್ಕೆ ಸಿಕ್ಕ ಬೆಲೆ ಮಾರಾಟ ಮಾಡುತ್ತಿದ್ದಾರೆ.

ಜಮೀನಿನಲ್ಲಿರುವ ಈರುಳ್ಳಿ ಕಿತ್ತು ಹಾಕಲು ಒಬ್ಬ ಕೂಲಿ ಕಾರ್ಮಿಕರಿಗೆ 300 ರೂ. ಕೂಲಿ ಇದ್ದು, ಒಂದು ಬುಟ್ಟಿ ಉಳ್ಳಾಗಡ್ಡಿ ಹೆಚ್ಚಲು (ಕೊಯ್ಯಲು) 20 ರೂ. ನೀಡಬೇಕು. ಕೆಲಸಕ್ಕೆ ಇದ್ದೂರಲ್ಲಿ ಕೂಲಿ ಕಾರ್ಮಿಕರು ಸಿಗದ ಕಾರಣ 2,000 ಸಾವಿರ ರೂ. ವಾಹನ ಬಾಡಿಗೆ ಕೊಟ್ಟು 30 ಕಿ.ಮೀ.ನಿಂದ ತರಿಸಬೇಕು. ರೈತನಿಗೆ ಈರುಳ್ಳಿ ಬೆಲೆಗಿಂತ ಕೂಲಿ ಹಣವೇ ಜಾಸ್ತಿ ಹೊರೆಯಾಗುತ್ತಿದೆ.

ಸರ್ಕಾರ ಬೇಗನೆ ಮಧ್ಯೆ ಪ್ರವೇಶಿಸಿ, ಬೆಂಬಲ ಬೆಲೆಗೆ ಈರುಳ್ಳಿ ಹಾಗೂ ಇತರ ಬೆಳೆಗಳನ್ನು ಖರೀದಿಸಿ ರೈತರಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ಆಗ್ರಹಿಸಿದ್ದಾರೆ.

ಬೆಂಗಳೂರಿಗೆ ಹೋಗಲು ಕಾರಣ…

ರಾಜ್ಯದಲ್ಲಿ ಬೆಂಗಳೂರು ಮಾರುಕಟ್ಟೆ ದೊಡ್ಡದಾಗಿದ್ದು, ಇಲ್ಲಿ ಖರೀದಿದಾರರು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ ಎಂಬ ನಂಬಿಕೆಯಿಂದ ರೈತರು ಅಲ್ಲಿಗೆ ಹೋಗುತ್ತಿದ್ದಾರೆ. ಗದಗ ಮಾರುಕಟ್ಟೆಯಂತೆ, ಇಲ್ಲಿ ರೈತರಿಂದ ಹೆಚ್ಚು ದಲ್ಲಾಳಿ (ಕಮಿಷನ್) ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಹತ್ತಿರದ ಗದಗ, ಹುಬ್ಬಳ್ಳಿ ಮಾರುಕಟ್ಟೆಗಳನ್ನು ಬಿಟ್ಟು ಬೆಂಗಳೂರಿಗೆ ಈರುಳ್ಳಿ ಮೂಟೆ ತೆಗೆದುಕೊಂಡು ಹೋಗಲು ಆರ್ಥಿಕ ಹೊರೆಯಾಗುತ್ತಿದ್ದರೂ ಲಾಭದಾಸೆಗೆ ಹೋಗಲಾಗುತ್ತಿದೆ. ಆದರೆ, ಸದ್ಯದ ಮಾರುಕಟ್ಟೆಯ ಬೆಲೆಯಿಂದಾಗಿ ರೈತ ವರ್ಷಾನುಗಟ್ಟಲೆ ದುಡಿದ ಸಂಬಳವೂ ಸಿಗದಂತಾಗಿದೆ.

ರೈತ ಮಾರುಕಟ್ಟೆಗೆ ಬೆಳೆ ಮಾರಾಟ ಮಾಡಲು ಹೋದರೆ ಖರೀದಿದಾರರು, ವರ್ತಕರಾಗಲಿ ಯಾರೂ ಸರಿಯಾಗಿ ಸ್ಪಂದಿಸುವುದಿಲ್ಲ. ಇನ್ನು ಈರುಳ್ಳಿ ಬೆಲೆ ಕುಸಿತದಿಂದಾಗಿ ಈರುಳ್ಳಿ ಬೆಳೆಗಾರರು ಸೂಕ್ತ ಬೆಲೆ ಸಿಗದೆ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಮಾರುಕಟ್ಟೆಗೆ ಬೆಳೆ ಮಾರಾಟ ಮಾಡಲು ಹೋದರೂ ಒಂದು ರೂ. ಲಾಭಾಂಶ ಪಡೆಯದೇ ಬರಿಗೈಯಲ್ಲೇ ವಾಪಾಸ್ ಆಗುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ರಾಜ್ಯ ಸರ್ಕಾರ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸುವ ಮೂಲಕ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು.

ಅಂಬರೀಶ್ ಅಬ್ಬಿಗೇರಿ, ರೈತ

ಪೊಲೀಸರಿಂದಲೇ ‘ಕಳ್ಳ-ಪೊಲೀಸ್’ ಆಟ! ಠಾಣೆಯ ಕಪಾಟಿಗೆ ಕೈ ಹಾಕಿ ಹಣ ಕದ್ದನೇ ಪೊಲೀಸ್ ಪೇದೆ?

ವಿಜಯಸಾಕ್ಷಿ ಸುದ್ದಿ, ಗದಗ

ರೈಲು, ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಜೇಬುಗಳ್ಳರಿದ್ದಾರೆ, ಮೊಬೈಲ್ ಕಳ್ಳರಿದ್ದಾರೆ ಎಚ್ಚರಿಕೆ ಎಂಬ ಸಂದೇಶಗಳ ಮೂಲಕ ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೇ, ಕಳ್ಳ ಕಾಕಾರ ಮೇಲೆ ನಿಗಾವಹಿಸುವ ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗುತ್ತಿರುವುದು ಪ್ರತಿಯೊಬ್ಬರಿಗೂ ತಿಳಿದಿರುವ ಸಂಗತಿ. ಆದರೆ, ರಾತ್ರಿ ಹೊತ್ತು ಗಸ್ತು ತಿರುಗಲು ಕರ್ತವ್ಯದ ಮೇಲೆ ಹೊರಗೆ ಹೋದ ಪೊಲೀಸರೊಬ್ಬರ ಕಪಾಟಿಗೆ (ಟ್ರಜರಿ) ಪೊಲೀಸ್ ಪೇದೆಯೊಬ್ಬ ಕನ್ನ ಹಾಕಿರುವ ಅಪರೂಪದ ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಮೊನ್ನೆ ಅಂದರೆ ಡಿಸೆಂಬರ್ 1 ಬೆಳಗಿನ ಜಾವ ನೈಟ್ ಪಾಳೆಯದಲ್ಲಿದ್ದ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಮಂಜುನಾಥ್ ಎಂಬ ಪೊಲೀಸ್ ಪೇದೆ, ಗದಗ ಗ್ರಾಮೀಣ ಪೊಲೀಸ್ ಠಾಣೆಯ ಟ್ರಜರಿಯಲ್ಲಿ ಇದ್ದ ಸುಮಾರು 45 ಸಾವಿರಕ್ಕೂ ಹೆಚ್ಚಿನ ಹಣ ಕಳ್ಳತನ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಸದ್ಯ ಪೊಲೀಸ್ ಠಾಣೆಯ ಕಪಾಟಿನಲ್ಲಿಟ್ಟಿದ್ದ ಹಣ ದೋಚಿದ್ದಾನೆ ಎನ್ನಲಾಗುತ್ತಿರುವ ಪೊಲೀಸ್ ಪೇದೆ ಬುಧವಾರ ರಾತ್ರಿ ಠಾಣೆಯಲ್ಲೆ ಮೂರ್ಛೆರೋಗ ಬಂದು ಬಿದ್ದಿದ್ದು, ಜಿಮ್ಸ್ ಆಸ್ಪತ್ರೆಯಲ್ಲಿ ಬಿಗಿ ಭದ್ರತೆಯೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ಖಚಿತಪಡಿಸಿವೆ.

ಕಳ್ಳ ಕಾಕರಿಂದ ಜನರಿಗೆ ರಕ್ಷಣೆ ಕೊಡಬೇಕಾದ ಪೊಲೀಸರೇ ಕಳ್ಳರಾದರೆ ಹೇಗೆ ಎಂಬ ಭೀತಿ ಸದ್ಯ ಅವಳಿ ನಗರದ ಜನರನ್ನು ಕಾಡುತ್ತಿದೆ.

error: Content is protected !!