Home Blog Page 3333

ಭಾರೀ ಮಳೆ ಹಿನ್ನೆಲೆ; ಮನೆ ಗೋಡೆ ಕುಸಿದು ವೃದ್ಧೆ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಳೆ ಮನೆಯ ಗೋಡೆಗಳು ನೆನೆದು ಕುಸಿದು ಬಿದ್ದ ಪರಿಣಾಮವಾಗಿ ವೃದ್ಧೆ ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಗ್ರಾಮದ ದುರ್ಗಾದೇವಿ ದೇವಸ್ಥಾನದ ಹತ್ತಿರ ತಗಡಿನ ಶೆಡ್ ನಲ್ಲಿ ವಾಸವಿದ್ದ ವೃದ್ಧೆ ಲಕ್ಷ್ಮವ್ವ ತಂದೆ ಹನಮಪ್ಪ ಮಾದರ (80) ಮೃತಪಟ್ಟ ನತದೃಷ್ಟೆ.

ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ಸುರಿದ ಪರಿಣಾಮ ಈ ದುರ್ಘಟನೆ ಜರುಗಿದೆ.

ಸುದ್ದಿ ತಿಳಿದು ರೋಣ ಪೊಲೀಸರು, ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಣ್ಣಿನಲ್ಲಿ ಸಿಲುಕಿದ್ದ ಮೃತದೇಹ ಹೊರಗಡೆ ತೆಗೆದರು. ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕನ್ನಡದಲ್ಲಿ ಬರೆದ ಚೆಕ್ ಅಮಾನ್ಯ ಮಾಡಿದ ಬ್ಯಾಂಕ್; 85 ಸಾವಿರ ರೂ. ದಂಡ ವಿಧಿಸಿದ ಆಯೋಗ

0

ವಿಜಯಸಾಕ್ಷಿ ಸುದ್ದಿ, ಧಾರವಾಡ

ಕನ್ನಡದಲ್ಲಿ ಬರೆದ ಕಾಸೋಲೆ (ಚೆಕ್) ಯನ್ನು ಅಮಾನ್ಯ ಮಾಡಿದ ಹಳಿಯಾಳದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 85,177 ರೂ.ದಂಡ ಪರಿಹಾರ ಪಾವತಿಸುವಂತೆ ಆದೇಶಿಸಿದೆ.

ಧಾರವಾಡದ ಇಂಗ್ಲೀಷ್ ಪ್ರಾಧ್ಯಾಪಕ ವಾದಿರಾಜಾಚಾರ್ಯ ಇನಾಮದಾರ ಎಂಬುವರು ತಮ್ಮ ಉಳಿತಾಯ ಖಾತೆಯಲ್ಲಿದ್ದ ಹಣ ಹಿಂಪಡೆಯಲು ಕನ್ನಡದಲ್ಲಿ ಬರೆದು ಸಲ್ಲಿಸಿದ್ದ ಕಾಸೋಲೆ (ಚೆಕ್) ಯನ್ನು ಹಳಿಯಾಳದ ಎಸ್‌ಬಿಐ ಶಾಖೆ ತಿರಸ್ಕರಿಸಿತ್ತು. ಇದರ ವಿರುದ್ಧ ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ಆಯೋಗವು ದೂರುದಾರರ ಉಳಿತಾಯ ಖಾತೆಯಲ್ಲಿ 9 ಲಕ್ಷ ರೂ.ಕ್ಕಿಂತ ಹೆಚ್ಚು ಹಣ ಇದ್ದರೂ ಕೂಡ ಕೇವಲ 6 ಸಾವಿರ ರೂ. ಮೌಲ್ಯದ ಚೆಕ್ಕನ್ನು ಕನ್ನಡ ಭಾಷೆಯಲ್ಲಿ ಬರೆದುದಕ್ಕಾಗಿ ಅಮಾನ್ಯ ಮಾಡಿರುವುದನ್ನು, ಸೇವಾ ನ್ಯೂನ್ಯತೆ ಎಂದು ಪರಿಗಣಿಸಿ ಹಳಿಯಾಳ ಎಸ್‌ಬಿಐ ಬ್ಯಾಂಕ್ ಶಾಖೆಯು ಫಿರ್ಯಾದಿಗೆ ಪರಿಹಾರ ಮತ್ತು ದಂಡ ರೂಪದಲ್ಲಿ ಒಟ್ಟು 85,177 ರೂ.ಗಳನ್ನು ಪಾವತಿಸುವಂತೆ ಆದೇಶಿಸಿದೆ.

ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಸದಸ್ಯರಾದ ವಿ.ಅ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಈ ತೀರ್ಪು ನೀಡಿದ್ದಾರೆ .

ಬ್ಯಾಂಕುಗಳಲ್ಲಿ ತ್ರಿಭಾಷಾ ಸೂತ್ರದ ಬಳಕೆ ನಿಯಮಾನುಸಾರ ಸ್ಥಳೀಯ ಭಾಷಾ ಬಳಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ನೀಡಿರುವ ತೀರ್ಪು ವಿಶೇಷ ಹಾಗೂ ಮಹತ್ವದ್ದೆನಿಸಿದೆ.

ಕೊನೆಗೂ ಶವವಾಗಿ ಪತ್ತೆಯಾದ ಮಹೇಶ್; ಇಲಾಖೆಗೆ ಜೊತೆಯಲ್ಲಿ ಸೇರಿ, ಜೊತೆಯಾಗಿ ಇಹಲೋಕ ತ್ಯಜಿಸಿದ ಸ್ನೇಹಿತರು!

ವಿಜಯಸಾಕ್ಷಿ ಸುದ್ದಿ, ಗದಗ

ಹಳ್ಳದ ಸೆಳವುನಲ್ಲಿ ಕೊಚ್ಚಿ ಹೋಗಿದ್ದ ಮತ್ತೊಬ್ಬ ಪೊಲೀಸ್ ಮಹೇಶ್ ವಕ್ರದ ಕೊನೆಗೂ ಶವವಾಗಿ ಪತ್ತೆಯಾಗಿದ್ದಾನೆ.

ಯಲಬುರ್ಗಾ ತಾಲೂಕಿನ ಸಂಗನಾಳ ಬಳಿ ಇರುವ ಸೇತುವೆ ಕೆಳಗೆ ಮಹೇಶ್ ವಕ್ರದನ ಶವ ಸಿಕ್ಕಿದೆ.‌ ನಿನ್ನೆಯಿಂದಲೂ ಕೊಪ್ಪಳ ಜಿಲ್ಲೆಯ ಪೊಲೀಸರು, ಗದಗ ಜಿಲ್ಲೆಯ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು. ನಿನ್ನೆಯಿಂದ ಗದಗ ಎಸ್ಪಿ ಶಿವಪ್ರಕಾಶ್ ದೇವರಾಜು ಖುದ್ದು ಕಾರ್ಯಾಚರಣೆ ಸ್ಥಳದಲ್ಲಿಯೇ ಇದ್ದರು.

ಸೋಮವಾರ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ನಡೆದ ಪ್ರತಿಭಟನೆಯ ಬಂದೋಬಸ್ತ್ ಗೆ ತೆರಳಿದ್ದ ಮುಂಡರಗಿ ಠಾಣೆಯ ನಿಂಗಪ್ಪ ಹಲವಾಗಲಿ ಹಾಗೂ ಮಹೇಶ್ ವಕ್ರದ ಕರ್ತವ್ಯ ಮುಗಿಸಿಕೊಂಡು ಮುಂಡರಗಿಗೆ ವಾಪಾಸು ಬರುವಾಗ ಕೊಪ್ಪಳ ಜಿಲ್ಲೆಯ ತೊಂಡಿಹಾಳ-ಬಂಡಿಹಾಳ ಗ್ರಾಮದ ಹತ್ತಿರದ ಹೊಸಹಳ್ಳದಲ್ಲಿ ಬೈಕ್ ಸಮೇತ ಇಬ್ಬರು ಕೊಚ್ಚಿಹೋಗಿದ್ದರು.

ಮೃತಪಟ್ಟ ಇಬ್ಬರೂ ಪೇದೆಗಳು 2016ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದರು. ಜೊತೆಯಾಗಿಯೇ ಇಹಲೋಕ ತ್ಯಜಿಸಿದ್ದು ದೊಡ್ಡ ದುರಂತ. ಇದೆಂಥಾ ವಿಧಿಲಿಖಿತ?

ಇದನ್ನೂ ಓದಿ ನಾಪತ್ತೆಯಾಗಿದ್ದ ಇಬ್ಬರು ಪೊಲೀಸರಲ್ಲಿ ಒಬ್ಬನ ಶವ ಪತ್ತೆ, ಮತ್ತೋರ್ವ ಪೊಲೀಸನಿಗಾಗಿ ಮುಂದುವರಿದ ಶೋಧ

ಈ ಮೂಲಕ ಕೇವಲ ಏಳು ವರ್ಷಗಳಲ್ಲಿಯೇ ಇಬ್ಬರು ಸರಕಾರಿ ಸೇವೆ‌ ಮುಗಿಸಿದಂತಾಗಿದೆ. ತೀರಾ ಬಡತನದಲ್ಲಿ ಹುಟ್ಟಿ ಬೆಳದಿದ್ದ ಇಬ್ಬರು ಇಲಾಖೆಯಲ್ಲಿ ಒಳ್ಳೆಯ ಹೆಸರು ಗಳಿಸಿಕೊಂಡಿದ್ದರು.

ಇದನ್ನೂ ಓದಿ ಭಾರೀ ಮಳೆ ಹಿನ್ನೆಲೆ; ಕರ್ತವ್ಯಕ್ಕೆ ತೆರಳಿದ್ದ ಇಬ್ಬರು ಮುಂಡರಗಿ ಠಾಣಾ ಪೊಲೀಸರು ನಾಪತ್ತೆ?

ಮೃತ ಇಬ್ಬರೂ ಮುಂಡರಗಿ ತಾಲೂಕಿನ ‌ನಿವಾಸಿಗಳು ಎಂಬುದು ಗಮನಾರ್ಹ. ನಿಂಗಪ್ಪ ಹಲವಾಗಲಿ‌ ನಾಗರಹಳ್ಳಿ ಗ್ರಾಮದ ನಿವಾಸಿಯಾಗಿದ್ದರೇ, ಮಹೇಶ್ ವಕ್ರದ ಹಮ್ಮಗಿ ಗ್ರಾಮದವನು.

ಮೃತರ ಕುಟುಂಬಸ್ಥರ ಆಕ್ರಂಧನ‌ಮುಗಿಲ ಮುಟ್ಟಿದ್ದು, ಹರೆಯದ ಮಕ್ಕಳನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.

ಪರಿಹಾರಕ್ಕೆ ಒತ್ತಾಯ

ತೀರಾ ಬಡತನದಲ್ಲಿ ಹುಟ್ಟಿ ಬೆಳೆದ ನಿಂಗಪ್ಪ ಹಲವಾಗಲಿ ಹಾಗೂ ಮಹೇಶ್ ವಕ್ರದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಯುವ ಕಾಂಗ್ರೆಸ್‌ನ ರಾಜ್ಯ ವಕ್ತಾರ ದುದುಪೀರ ಹಣಗಿ, ಎರಡೂ ಕುಟುಂಬಗಳು, ತಮ್ಮ ಮಕ್ಕಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಸರಕಾರ ಪ್ರತಿ ಕುಟುಂಬಕ್ಕೆ 50ಲಕ್ಷದಂತೆ‌ ಪರಿಹಾರ ನೀಡುವಂತೆ ಒತ್ತಾಯಿಸಿದ್ದು, ಆ ಮೂಲಕ ಮೃತ ಪೇದೆಗಳ ಕುಟುಂಬಗಳಿಗೆ ಸರಕಾರ ಧೈರ್ಯ ತುಂಬಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ಸ್ಪರ್ಶ; ಮೂವರ ಸಾವು

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು

ಗಣಪತಿ ವಿಸರ್ಜನೆ ಮಾಡಿ ವಾಪಾಸು ಬರುವಾಗ ವಿದ್ಯುತ್ ಸ್ಪರ್ಶಿಸಿ ‌ಮೂವರು ದಾರುಣವಾಗಿ ಮೃತಪಟ್ಟು, ಆರು ಜನ ಗಾಯಗೊಂಡ ದುರ್ಘಟನೆ ನಿನ್ನೆ ರಾತ್ರಿ ಜರುಗಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ‌ಬಿ.ಹೊಸಹಳ್ಳಿ ‌ಗ್ರಾಮದಲ್ಲಿ ಈ ಅವಘಡ ನಡೆದಿದೆ.

ನಿನ್ನೆ ಏಳನೇ ದಿನದ ನಂತರ ಗಣಪತಿ ವಿಸರ್ಜನೆ ಅಂಗವಾಗಿ ಟ್ರ್ಯಾಕ್ಟರ್ ಮೂಲಕ ಗಣಪತಿ ಮೆರವಣಿಗೆ ಮಾಡಿಕೊಂಡು ಹೋಗಿ ವಿಸರ್ಜನೆ ಮಾಡಿ, ವಾಪಾಸು ಮನೆಗೆ ಬರುವಾಗ ಟ್ರ್ಯಾಕ್ಟರ್ ನ ಪೆಂಡಾಲ್ ಗೆ ವಿದ್ಯುತ್ ತಂತಿ ಸ್ಪರ್ಶಸಿ ರಾಜು(45) ರಚನಾ(33) ಹಾಗೂ ಪಾರ್ವತಿ (22) ಮೃತಪಟ್ಟಿದ್ದಾರೆ.

ಗಾಯಗೊಂಡ ಆರು ಜನರಲ್ಲಿ ಸಂಗೀತ ಹಾಗೂ ಪಲ್ಲವಿ ಎಂಬ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಹಾಸನದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಡ್ರೈವರ್ ಮಾತ್ರ ಅಪಾಯದಿಂದ ಪಾರಾಗಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಉತ್ತರ ಕರ್ನಾಟಕದ ಅಭಿವೃದ್ಧಿಯ ಕನಸುಗಾರ, ಸಚಿವ ಉಮೇಶ್ ಕತ್ತಿ ಹೃದಯಾಘಾತದಿಂದ ನಿಧನ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಸದಾ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ, ಪ್ರತ್ಯೇಕತೆಯ ಧ್ವನಿ ಎತ್ತಿ ಮುಖ್ಯಮಂತ್ರಿ ಗಾದೆಯ ಕನಸು ಕಾಣುತ್ತಿದ್ದ ಹಿರಿಯ ರಾಜಕಾರಣಿ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ಕ್ಷೇತ್ರದ ಶಾಸಕ, ಆಹಾರ ಸಚಿವ ಉಮೇಶ್ ಕತ್ತಿ ಹೃದಯ ಘಾತದಿಂದ ನಿಧನರಾಗಿದ್ದಾರೆ.

ಇದನ್ನೂ ಓದಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ರಾಜೀನಾಮೆಗೂ ಸಿದ್ಧ; ಉಮೇಶ ಕತ್ತಿ

ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಮಂಗಳವಾರ ರಾತ್ರಿ 10 ಗಂಟೆಗೆ ಹೃದಯಾಘಾತದಿಂದ ಅಸ್ವಸ್ಥಗೊಂಡಿದ್ದ ಉಮೇಶ್ ಕತ್ತಿ ಅವರನ್ನು ತಕ್ಷಣ ಎಮ್ ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ‌ಈ ಕುರಿತು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ  ನನಗೂ ಸಿಎಂ ಆಗೋ ಆಸೆ ಇದೆ! ಉಮೇಶ್ ಕತ್ತಿ ಹೊಸ ವರಸೆ

ಆಗಸ್ಟ್ 26 ರಂದು ಗದಗ ಜಿಲ್ಲೆಗೆ ಭೇಟಿ ನೀಡಿದ್ದ ಉಮೇಶ್ ಕತ್ತಿ, ಕೇವಲ ಉತ್ತರ ಕರ್ನಾಟಕಕ್ಕೆ ಮಾತ್ರವಲ್ಲ ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗ್ತೀನಿ ಎಂದಿದ್ದರು.

ಸಚಿವ ಉಮೇಶ್ ಕತ್ತಿ ಅವರ ನಿಧನದಿಂದ ಬೆಳಗಾವಿ ಜಿಲ್ಲೆ ಸೇರಿದಂತೆ ಅವರ ಅಭಿಮಾನಿಗಳಲ್ಲಿ ದುಃಖ ಮಡುಗಟ್ಟಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಅನೇಕ ರಾಜಕಾರಣಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಚಿವ ಉಮೇಶ್ ಕತ್ತಿ ಅವರ ನಿಧನಕ್ಕೆ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಹಿರಿಯ ರಾಜಕಾರಣಿ ಆಗಿದ್ದ ಉಮೇಶ್ ಕತ್ತಿ ಅವರ ಅಕಾಲಿಕ ನಿಧನ ತೀವ್ರ ಆಘಾತ ತರಿಸಿದೆ ಎಂದು ಹೇಳಿದ್ದಾರೆ.

ದೊಡ್ಡಹಳ್ಳದಲ್ಲಿ ಕೊಚ್ಚಿಹೋಗಿದ್ದ ಕುರಿ, ಮೇಕೆ ಮರಿಗಳು ಪತ್ತೆ; ಇದೊಂದು ಮನಕಲಕುವ ದೃಶ್ಯ

ವಿಜಯಸಾಕ್ಷಿ ಸುದ್ದಿ, ಗದಗ

ಕಳೆದೆರಡು ದಿನಗಳಿಂದ ಸುರಿದ ಭೀಕರ ಮಳೆ ಇಡೀ ಜಿಲ್ಲೆಯನ್ನು ಕಣ್ಣೀರಲ್ಲಿ ಮುಳುಗಿಸಿದೆ. ಒಂದೆಡೆ ಮಳೆಯ ನೀರು ಮನೆಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದ್ದರೆ, ಇನ್ನೊಂದೆಡೆ ಪ್ರವಾಹದಲ್ಲಿ ಸಿಲುಕಿ ಕಣ್ಮರೆಯಾದವರ ಪತ್ತೆ ಕಾರ್ಯ ಇನ್ನೂ ನಡೆಯುತ್ತಿದೆ.

ರೈತರು ಬೆಳೆದ ಬೆಳೆಗಳಿಗೂ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಈ ನಡುವೆ ನೀಲಗುಂದ ಗ್ರಾಮದ ದೊಡ್ಡ ಹಳ್ಳದಲ್ಲಿ ಕೊಚ್ಚಿಹೋಗಿದ್ದ ಹಲವು ಕುರಿ, ಮೇಕೆ ಮರಿಗಳು ಹಳ್ಳದ ಬದಿಯಲ್ಲಿ ಪತ್ತೆಯಾಗಿವೆ. ಇದೊಂದು ಮನಕಲಕುವ ದೃಶ್ಯವಾಗಿದ್ದು, ನೋಡುಗರ ಕರುಳು ಚುರುಕು ಎನ್ನಿಸುವಂತಿದೆ.

ಗದಗ ತಾಲೂಕಿನ ಕಲ್ಲೂರು ಗ್ರಾಮದ ಹನುಮಪ್ಪ ಹರಿಜನ ಎಂಬುವರು ತಾವು ಸಾಕಿದ್ದ 200 ಕುರಿಗಳನ್ನು ಮೇಯಿಸುತ್ತ ನೀಲಗುಂದ ವ್ಯಾಪ್ತಿಯ ಜಮೀನುಗಳಿಗೆ ಬಂದಿದ್ದರು. ಸೋಮವಾರ ರಾತ್ರಿ ರಣರೌದ್ರ ಮಳೆ ಸುರಿದ ಹಿನ್ನೆಲೆಯಲ್ಲಿ, ಮಳೆಯ ನೀರು ಜಮೀನಲ್ಲಿಯೂ ಹರಿದು ಬರುತ್ತಿತ್ತು. ಈ ಕಾರಣಕ್ಕೆ ನೀಲಗುಂದದ ಬಳಿ ರಸ್ತೆ ಮಧ್ಯದಲ್ಲಿಯೇ ಹನುಮಪ್ಪ ಕುರಿಗಳನ್ನು ನಿಲ್ಲಿಸಿದ್ದರು.

ಹರಿದುಬಂದ ಮಳೆ ನೀರಿನೊಂದಿಗೆ ಇವುಗಳ ಪೈಕಿ 30ಕ್ಕೂ ಹೆಚ್ಚು ಮರಿಗಳು ಕೊಚ್ಚಿಹೋಗಿದ್ದವು. ಇದೀಗ 17 ಕುರಿ ಮರಿಗಳ ದೇಹ ಹಳ್ಳದ ಬದಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಮುಳಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಒಟ್ಟಿನಲ್ಲಿ, ಮಳೆ ಮನುಷ್ಯರನ್ನಷ್ಟೇ ಅಲ್ಲದೆ, ಮೂಕ ಪ್ರಾಣಿಗಳನ್ನೂ ಬಲಿ ತೆಗೆದುಕೊಳ್ಳತೊಡಗಿದ್ದು, ಆತಂಕ ಉಂಟುಮಾಡಿದೆ.

ನಾಪತ್ತೆಯಾಗಿದ್ದ ಇಬ್ಬರು ಪೊಲೀಸರಲ್ಲಿ ಒಬ್ಬನ ಶವ ಪತ್ತೆ, ಮತ್ತೋರ್ವ ಪೊಲೀಸನಿಗಾಗಿ ಮುಂದುವರಿದ ಶೋಧ

ವಿಜಯಸಾಕ್ಷಿ ಸುದ್ದಿ, ಗದಗ

ಗಜೇಂದ್ರಗಡ ಬಂದೋಬಸ್ತ್ ಮುಗಿಸಿ ಮುಂಡರಗಿಗೆ ವಾಪಾಸು ಬರುತಿದ್ದಾಗ ತೊಂಡಿಹಾಳ-ಬಂಡಿಹಾಳ ಬಳಿಯ ಹಳ್ಳದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಪೊಲೀಸರಲ್ಲಿ ಓರ್ವ ಪೇದೆ ಶವವಾಗಿ ಪತ್ತೆಯಾಗಿದ್ದಾನೆ.

ಇದನ್ನೂ ಓದಿ ಭಾರೀ ಮಳೆ ಹಿನ್ನೆಲೆ; ಕರ್ತವ್ಯಕ್ಕೆ ತೆರಳಿದ್ದ ಇಬ್ಬರು ಮುಂಡರಗಿ ಠಾಣಾ ಪೊಲೀಸರು ನಾಪತ್ತೆ?

ನಿಂಗಪ್ಪ ಹಲವಾಗಲಿ (29) ಎಂಬಾತನ ಶವ ಯಲಬುರ್ಗಾ ತಾಲೂಕಿನ ಸಂಗನಾಳ ಚೆಕ್ ಡ್ಯಾಂ ಬಳಿ ಪತ್ತೆಯಾಗಿದೆ.

ಘಟನಾ ಸ್ಥಳದಿಂದ ಸುಮಾರು ಮೂರು ಕಿಮೀ ನಷ್ಟು ದೂರಕ್ಕೆ ನಿಂಗಪ್ಪನ ಶವ ಪತ್ತೆಯಾಗಿದೆ.

ಬೈಕ್ ಇನ್ನೂ ಪತ್ತೆಯಾಗಿಲ್ಲ ಎನ್ನಲಾಗಿದೆ. ಹೆಲ್ಮೆಟ್, ಬೈಕ್ ನ ಸೈಡ್‌ ಕವರ್ ಮಾತ್ರ ಸಿಕ್ಕಿವೆ ಎಂದು ಹೇಳಲಾಗುತ್ತದೆ.

ಮುಂಜಾನೆ ಮುಂಡರಗಿ ಠಾಣೆಯ ಇಬ್ಬರೂ ಪೊಲೀಸರು ನಾಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಗದಗ ಎಸ್ಪಿ ಶಿವಪ್ರಕಾಶ್ ದೇವರಾಜು, ಕೊಪ್ಪಳ ಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನರೇಗಲ್ ಪೊಲೀಸರು, ಯಲಬುರ್ಗಾ, ಕುಕನೂರು ಪೊಲೀಸರು ಜಂಟಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಾಪತ್ತೆಯಾಗಿರುವ ಮಹೇಶನಿಗಾಗಿ ತೀವ್ರ ಶೋಧ ನಡೆದಿದೆ. ಮಹೇಶ್ ನಿಗೆ ಈಜು ಬರುತ್ತದೆ ಎಂದು ಹೇಳಲಾಗುತ್ತದೆ.

ಚಿಕ್ಕನರಗುಂದ ಗ್ರಾಮದಲ್ಲಿ ಮಳೆ ಅವಾಂತರ; ಸಮೀಕ್ಷೆಗೆ ಮುಂದಾದ ಗ್ರಾ.ಪಂ ಸಿಬ್ಬಂದಿ

0

ವಿಜಯಸಾಕ್ಷಿ ಸುದ್ದಿ, ನರಗುಂದ

ಸೋಮವಾರ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ತಾಲೂಕಿನ ಚಿಕ್ಕನರಗುಂದ ಗ್ರಾಮಸ್ಥರು ಪರಾದಡಿದ ಘಟನೆ ನಡೆದಿದೆ.

ಗ್ರಾಮದ ಹಲವಾರು ಮನೆಗಳಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದ್ದರಿಂದ ಮನೆಯಲ್ಲಿರುವ ಮಕ್ಕಳು, ವೃದ್ಧರು, ಪರದಾಡಿದರು.

ಮನೆಯಲ್ಲಿರುವ ದವಸ ಧಾನ್ಯಗಳು, ಮಾಡಿದ ಅಡುಗೆಯೂ ನೀರು ಪಾಲಾಗಿದ್ದರಿಂದ ಕೆಲವರು ರಾತ್ರಿ ಉಪವಾಸ, ವನವಾಸ ಅನುಭವಿಸಿದ್ದಾರೆ.

ಸುದ್ದಿ ತಿಳಿದು ಗ್ರಾಮ ಪಂಚಾಯತಿ ಪಿಡಿಓ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಮನೆ ಮನೆ ಭೇಟಿ ನೀಡಿ ಸಂತ್ರಸ್ತರ ಅಳಲು ಕೇಳಿದರು.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶೈನಾಜ್ ಮುಜಾವರ್, ಕಂದಾಯ ಇಲಾಖೆ ಗ್ರಾಮಲೆಕ್ಕಾಧಿಕಾರಿ ಎನ್ ಎನ್ ದೊಡಮನಿ ಹಾನಿಗೊಳಗಾದ ಮನೆಗಳ ಪರಿಶೀಲನೆ ಮಾಡಿ ಅರ್ಜಿ ಸ್ವಿಕರಿಸಿದರು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮಣ ಕಂಬಳಿ, ಶರಣಬಸಪ್ಪ ಹಳೇಮನಿ, ಕಾರ್ಯದರ್ಶಿ ಕೆಂಚಪ್ಪ ಮಾದರ ಸೇರಿದಂತೆ ಇತರರಿದ್ದರು.

ಭಾರೀ‌ ಮಳೆ ಹಿನ್ನೆಲೆ; ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಮಹಿಳೆ ಶವವಾಗಿ ಪತ್ತೆ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ನಿನ್ನೆ ಸುರಿದ ರಕ್ಕಸ ಮಳೆಗೆ ಹಲವು ಅವಘಡ ಸಂಬಂಧಿಸಿದ್ದು, ಹೋಲಕ್ಕೆ ಕೆಲಸಕ್ಕೆ ಹೋಗಿದ್ದ ಮಹಿಳೆ ಸಂಜೆ ಮನೆಗೆ ವಾಪಾಸು ಬರುವಾಗ ಊರ ಮುಂದಿನ ಹಳ್ಳದ ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಮಹಿಳೆ ಇಂದು ಶವವಾಗಿ ಪತ್ತೆಯಾದ ದುರ್ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮದ ನಾಗಮ್ಮ (46)ಎಂಬ ಮಹಿಳೆಯೇ ಹಳ್ಳದಲ್ಲಿ ತೇಲಿಹೋಗಿ ಶವವಾಗಿ ಪತ್ತೆಯಾದ ನತದೃಷ್ಟೆ.

ಎಂದಿನಂತೆ ನಿನ್ನೆ ಕೂಡ ಕೆಲಸಕ್ಕೆ ಹೋಲಕ್ಕೆ ಹೋಗಿದ್ದ ಮಹಿಳೆ ಸಂಜೆ ಮಳೆ ಆರಂಭವಾದ ನಂತರ ಮನೆ ಕಡೆ ವಾಪಾಸು ಬರುವಾಗ ಹಳ್ಳಿಕೇರಿ ಗ್ರಾಮದ ಊರ ಮುಂದಿನ ಹಳ್ಳ ದಾಟುವಾಗ ನೀರಿನ ಸೆಳೆವಿಗೆ ತೇಲಿ ಹೋಗಿದ್ದಳು ಎಂದು ಹೇಳಲಾಗಿದೆ.

ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಭಾರೀ ಮಳೆ ಹಿನ್ನೆಲೆ; ಕರ್ತವ್ಯಕ್ಕೆ ತೆರಳಿದ್ದ ಇಬ್ಬರು ಮುಂಡರಗಿ ಠಾಣಾ ಪೊಲೀಸರು ನಾಪತ್ತೆ?

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಗಜೇಂದ್ರಗಡದಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆ ಬಂದೋಬಸ್ತ್ ಗೆ ತೆರಳಿದ್ದ ಮುಂಡರಗಿ ಠಾಣೆಯ ಇಬ್ಬರು ಪೊಲೀಸರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಮಹೇಶ್ ವಕ್ರದ ಹಾಗೂ ನಿಂಗಪ್ಪ ಹಲವಾಗಲಿ ಎಂಬ ಪೊಲೀಸರು ನಿನ್ನೆ ಗಜೇಂದ್ರಗಡ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಗ್ರಿಡ್ ಗೆ ಮುತ್ತಿಗೆ ಹಾಕುವ ಪ್ರತಿಭಟನೆ ಇತ್ತು. ಅದರ ಬಂದೋಬಸ್ತ್ ಗೆ ಮುಂಡರಗಿ ಠಾಣೆಯಿಂದ ಹತ್ತು ಜನ ಸಿಬ್ಬಂದಿ ಹೋಗಿದ್ದರು ಎನ್ನಲಾಗಿದೆ.

ಅದರಲ್ಲಿ ಎಂಟು ಜನ ಸಿಬ್ಬಂದಿ ಬಸ್, ಜೀಪ ಮೂಲಕ ವಾಪಾಸು ಠಾಣೆಗೆ ಬಂದು ವರದಿ ಮಾಡಿಕೊಂಡಿದ್ದಾರೆ. ಬೈಕ್ ಮೂಲಕ ಕರ್ತವ್ಯಕ್ಕೆ ತೆರಳಿದ್ದ ಮಹೇಶ್ ಹಾಗೂ ನಿಂಗಪ್ಪ ಇದುವರೆಗೂ ವರದಿ ಮಾಡಿಕೊಂಡಿಲ್ಲ. ಅಷ್ಟೇ ಅಲ್ಲ ಅವರ ಮೊಬೈಲ್ ಫೋನ್ ಕೂಡ ರೀಚ್ ಆಗ್ತಾ ಇಲ್ಲ. ಹೀಗಾಗಿ ಹಿರಿಯ ಅಧಿಕಾರಿಗಳು ಅವರ ಪತ್ತೆಗೆ ಶೋಧ ನಡೆಸಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ನಿನ್ನೆ ರಾತ್ರಿ ಮುಂಡರಗಿಗೆ ವಾಪಾಸು ಬರುವಾಗ ಭಾರೀ ಮಳೆ ಸುರಿಯುತ್ತಿತ್ತು. ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ತೊಂಡಿಹಾಳ ಹಾಗೂ ಬಂಡಿಹಾಳ ಹತ್ತಿರ ಹಳ್ಳ ಉಕ್ಕಿ ಹರಿಯುತ್ತಿತ್ತು. ಅದೇ ಹಳ್ಳದಲ್ಲಿ ಬೈಕ್ ಮೂಲಕ ದಾಟುವಾಗ ತೇಲಿ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ ಮಹೇಶ್ ನಿಗೆ ಈಜು ಬರುತ್ತಿತ್ತು ಎಂದು ಹೇಳಲಾಗುತ್ತದೆ. ಸದ್ಯಕ್ಕೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಎಸ್ಪಿ ಶಿವಪ್ರಕಾಶ್ ದೇವರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.