Home Blog Page 3344

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಲಯ ಆದೇಶ ಪಾಲನೆ ಅಗತ್ಯ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕು‌ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದ್ದಾರೆ. ದೇವಸ್ಥಾನ ತೆರವು ವಿಚಾರವಾಗಿ ಚಿತ್ರದುರ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು,‌ ಸುಪ್ರೀಂನಲ್ಲಿ ತಪ್ಪಾದರೆ ಅಮೈಂಡ್ ಮಾಡುವ ಅಧಿಕಾರ ಪಾರ್ಲಿಮೆಂಟ್ ಗೆ ಇದೆ. ಪಾರ್ಲಿಮೆಂಟ್ ನಲ್ಲಿ ತಪ್ಪು ಮಾಡಿದಾಗ ಪ್ರಶ್ನಿಸುವ ಅಧಿಕಾರ ರಾಷ್ಟ್ರಪತಿಗಿದೆ. ಈಡೀ ವಿಶ್ವಕ್ಕೆ ನಮ್ಮ ಪ್ರಜಾಪ್ರಭುತ್ವ ಮಾದರಿಯಾಗಿದೆ ಎಂದರು.

ಗೊತ್ತೋ ಗೊತ್ತಿಲ್ಲದೆ ಸಂಸದ ಪ್ರತಾಪ್ ಸಿಂಹ ದೇವಸ್ಥಾನ ತೆರವಿಗೆ ವಿರೋಧ ಮಾಡುತ್ತಿದ್ದಾರೆ.‌ ಈ ಕುರಿತು ಚರ್ಚೆ ಆಗುತ್ತದೆ, ತಪ್ಪುಗಳು ನಡೆದಾಗ ತಿದ್ದಿಕೊಳ್ಳುತ್ತೇವೆ ಎಂದು ಹೇಳಿದರು.

ನಾವು ಹಿಂದೂ ರಾಷ್ಟ್ರ ಕಟ್ಟಲು ಹೊರಟಿದ್ದೇವೆ, ಡೋಂಗಿ ರಾಜಕಾರಣ ಮಾಡಲ್ಲ. ಬಿಜೆಪಿ ಮತ್ತು ಸಂಘ ಹಿಂದು ರಾಷ್ಟ್ರ ನಿರ್ಮಾಣಕ್ಕೆ ಕಟಿಬದ್ಧವಾಗಿವೆ. ಹಾಗಂತ ಬೇರೆ ಧರ್ಮಗಳನ್ನು ವಿರೋಧಿಸಲ್ಲ ಎಂದು ಹೇಳಿದರು.

ಗಜಾನನ ಮಂಟಪದಲ್ಲಿ ಸತ್ಯನಾರಾಯಣ ಪೂಜೆ, ಲಸಿಕಾ‌ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ

ಇಲ್ಲಿನ ಶಿದ್ದಲಿಂಗ ನಗರದಲ್ಲಿ ಶ್ರೀ ಜಾಗೃತ ಗಜಾನನ ಯುವಕ ಮಂಡಳಿ ಪ್ರತಿಷ್ಠಾಪಿಸಿರುವ ಶ್ರೀ ಗಜಾನನ ಮಂಟಪದಲ್ಲಿ ಶುಕ್ರವಾರ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಹಾಗೂ ಕೋವಿಡ್ ಲಸಿಕಾಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಲಸಿಕಾ ಅಭಿಯಾನ ನಿಮಿತ್ತ ಉಚಿತ ಕೋವಿಡ್ ಲಸಿಕೆ ಹಾಕಲಾಯಿತು. ಸುಮಾರು 300 ಜನರಿಗೆ ಲಸಿಕೆ ಹಾಕಲಾಯಿತು. ಇದೇ ಸಮಯದಲ್ಲಿ 104 ಅಜ್ಜಿ ಲಸಿಕೆ ಪಡೆದಿದ್ದು ವಿಶೇಷವಾಗಿತ್ತು.

ಶಿದ್ಧಲಿಂಗ ನಗರ ಶ್ರೀ ಜಾಗೃತ ಗಜಾನನ ಯುವಕ ಮಂಡಳಿಯ ಡಾ. ಜಯಕುಮಾರ ಬ್ಯಾಳಿ, ಸಿದ್ದು ಅಂದಾನಗೌಡರ, ಸೂರಜ್ ಜಿಗಜಿನ್ನಿ, ಮಂಜು ಅಂಗಡಿ, ಸಂತೋಷ ಮಾಳಶೆಟ್ಟಿ, ದೀಪಕ್ ಬೊಮ್ಮನಹಳ್ಳಿ, ಸಂಗಮೇಶ ಗೊಂದಿ, ಸಿದ್ದು ಪುಟಾಣಿ, ಸುನೀಲ್ ಕಲಾಲ, ಬಸವರಾಜ್ ಹೂಗಾರ, ನಿಖಿಲ್ ವರ್ಣೆಕರ ಸೇರಿದಂತೆ ಇತರರು ಇದ್ದರು.

ವಿಶ್ವಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ: ಮುತ್ತು ರಾಯರಡ್ಡಿ

0

ವಿಜಯಸಾಕ್ಷಿ ಸುದ್ದಿ, ನರಗುಂದ

ವಿಶ್ವಕರ್ಮ ಜಯಂತಿ ಕೇವಲ ಸಾಮಾಜಿಕ ಕಾರ್ಯಕ್ರಮ ಮಾತ್ರವಲ್ಲ, ಧಾರ್ಮಿಕ ಕಾರ್ಯಕ್ರಮವೂ ಆಗಿದೆ ಎಂದು ತಾಲೂಕಿನ ಚಿಕ್ಕ ನರಗುಂದ ಗ್ರಾಪಂ ಅಧ್ಯಕ್ಷ ಮುತ್ತು ರಾಯರಡ್ಡಿ ಹೇಳಿದರು.

ಗ್ರಾಪಂ ವತಿಯಿಂದ ಸಭಾಭವನದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಸ್ತ್ರ, ಸಾಧನ, ಸಲಕರಣೆಗಳು, ಒಡವೆಗಳು, ಶಿಲ್ಪಗಳು ಸೇರಿದಂತೆ ಈ ಜಗತ್ತಿಗೆ ಶಿವ, ವಿಷ್ಣು, ಇಂದ್ರ, ಮತ್ತಿತರ ದೇವರುಗಳಿಗೆ ಅಸ್ತ್ರ, ರಥಗಳನ್ನು ಮಾಡಿಕೊಟ್ಟು ದುಷ್ಟ ರಕ್ಕಸರ ವಧೆಗೆ ಕಾರಣರಾದ ವಿಶ್ವಕರ್ಮರ ಕೊಡುಗೆ ಅಪಾರವಿದೆ ಎಂದರು.

ಕಾರ್ಯಕ್ರಮದಲ್ಲಿ ಸಮಾಜದ ಯುವ ಸಮುದಾಯ ಹಾಗೂ ವಿಧ್ಯಾರ್ಥಿಗಳು ಪಾಲ್ಗೊಳ್ಳುವಿಕೆ ಹೆಚ್ಚಿಸಬೇಕು. ಸಮುದಾಯದ ಅಭಿವೃದ್ಧಿಗೆ ಮುಖಂಡರು ಸಂಘಟಿತವಾಗಿ ಶ್ರಮಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಲಕ್ಷ್ಮಣ ಕಂಬಳಿ, ಬಾಪುಗೌಡ‌ ಹಿರೇಗೌಡ್ರ, ಶ್ರುತಿ ಬ್ಯಾಳಿ, ಪಿಡಿಓ ಶೈನಾಜ್ ಮುಜಾವರ, ಹಿರಿಯರಾದ ಅಡಿವೆಪ್ಪ ಮರಿಯಣ್ಣವರ, ಉಮೇಶ ಕೆಂಚನಗೌಡ್ರ, ಮಹೇಶ ಆರೆಬೆಂಚಿ, ಪಡಿಯಪ್ಪ ಬಾಚಿ, ರಮೇಶ ಪತ್ತಾರ, ಕಾಳಪ್ಪ ಬಡಿಗೇರ, ವಿನಾಯಕ ಬಡಿಗೇರ, ಪಂಚಾಯತಿ ಸಿಬ್ಬಂದಿ ಭಾಗವಹಿಸಿದ್ದರು.

ಪರಾರಿಯಾಗಿದ್ದ ರೆವಿನ್ಯೂ ಇನ್‌ಸ್ಪೆಕ್ಟರ್ ಜೈಲುಪಾಲು!

0

-ಜಮೀನು ನೋಂದಣಿಗೆ ಲಂಚ ಕೇಳಿದ್ದ ಎಸ್.ಎಸ್. ಪಾಟೀಲ,
ಜಾಮೀನು ಸಿಗದ ಹಿನ್ನೆಲೆಯಲ್ಲಿ ಶರಣಾಗತಿ!

ವಿಜಯಸಾಕ್ಷಿ ಸುದ್ದಿ, ಗದಗ

ಖರೀದಿಸಿದ್ದ ಜಮೀನು ನೋಂದಣಿ ಮಾಡಲು ಲಂಚ ಕೇಳಿದ ಆರೋಪದ ಹಿನ್ನೆಲೆಯಲ್ಲಿ ಪರಾರಿಯಾಗಿದ್ದ ಗದಗನ ರೆವಿನ್ಯೂ ಇನ್‌ಸ್ಪೆಕ್ಟರ್ ಸುರೇಶ್ ಗೌಡ ಶೇಖರಗೌಡ್ ಪಾಟೀಲ ಗುರುವಾರ ಕೊನೆಗೂ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ.

ಗದಗ ತಾಲೂಕಿನ ಅಂತೂರ- ಬೆಂತೂರ ಗ್ರಾಮದ ಗುರಯ್ಯ ಲಗ್ಮಯ್ಯನವರ ಎಂಬುವವರು ಜಮೀನು ಖರೀದಿ ಮಾಡಿದ್ದರು. ಆ ಜಮೀನು ಗುರಯ್ಯ ಲಗ್ಮಯ್ಯನವರ ಹೆಸರಲ್ಲಿ ನೋಂದಣಿ ಮಾಡಲು ಆರ್‌ಐ ಎಸ್.ಎಸ್. ಪಾಟೀಲ 8,000 ರೂ. ಲಂಚ ಕೇಳಿದ್ದರು ಎನ್ನಲಾಗಿದೆ.

ಈ ಬಗ್ಗೆ ಎಸಿಬಿ ಕಚೇರಿಗೆ ರೈತ ಗುರಯ್ಯ ದೂರು ನೀಡಿದ್ದರು. ಆ. 1ರಂದು ರೈತ ಗುರಯ್ಯ ಲಗ್ಮಯ್ಯನವರ ಹಣ ಕೊಡಲು ಬಂದಾಗ ಕಚೇರಿಯಲ್ಲಿ ಆರ್‌ಐ ಇರಲಿಲ್ಲ. ಮಧ್ಯವರ್ತಿ ದಾವಲ್ ಎಂಬಾತನ ಕೈಯಲ್ಲಿ ಹಣ ಕೊಡುವಾಗ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ದಾವಲ್‌ನನ್ನು ವಶಕ್ಕೆ ಪಡೆದಿದ್ದರು.

ಎಸಿಬಿ ಅಧಿಕಾರಿಗಳು ಕಛೇರಿ ಮೇಲೆ ದಾಳಿ ಮಾಡಿದ ಸುದ್ದಿ ಕೇಳಿ ಆರ್‌ಐ, ಎಸ್.ಎಸ್. ಪಾಟೀಲ ಕಚೇರಿಯತ್ತ ತಲೆ ಹಾಕದೆ, ಎಸಿಬಿ ಅಧಿಕಾರಿಗಳ ಕೈಗೂ ಸಿಗದೆ ಪರಾರಿಯಾಗಿದ್ದರು.

ಇದನ್ನೂ ಓದಿ ಕಂದಾಯ ಇಲಾಖೆ ಮೇಲೆ ಎಸಿಬಿ ಅಧಿಕಾರಿಗಳ ದಾಳಿ; ರೆವಿನ್ಯೂ ಇನ್ಸ್‌ಪೆಕ್ಟರ್ ಪಾಟೀಲ್ ಪರಾರಿ!

ಬಂಧನದಿಂದ ತಪ್ಪಿಸಿಕೊಳ್ಳಲು ಜಾಮೀನು ಪಡೆಯುವುದಕ್ಕಾಗಿ ಜಿಲ್ಲಾ ನ್ಯಾಯಲಯ, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರೂ ತಿರಸ್ಕೃತವಾಗಿದ್ದರಿಂದ ಗುರುವಾರ ಅನಿವಾರ್ಯವಾಗಿ ಜಿಲ್ಲಾ ನ್ಯಾಯಾಲಯದ ಮುಂದೆ ಶರಣಾದರೆಂದು ಮೂಲಗಳು ತಿಳಿಸಿವೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಎಸಿಬಿ ಅಧಿಕಾರಿಗಳ ತಾತ್ಸಾರ!

ಆ. 1ರಂದೇ ಈ ಪ್ರಕರಣ ನಡೆದಿದ್ದರೂ ಆರ್‌ಐ ಎಸ್.ಎಸ್. ಪಾಟೀಲರನ್ನು ಬಂಧಿಸದ ಎಸಿಬಿ ಅಧಿಕಾರಿಗಳ ಕುರಿತು ಹಲವು ರೀತಿಯ ಮಾತುಗಳು ಕೇಳಿ ಬಂದಿವೆ. ಬಂಧನ ಮಾಡದಂತೆ ಯಾವ ರಾಜಕಾರಣಿ ಒತ್ತಡ ಹಾಕಿದ್ದರು ಎಂಬುದೂ ಚರ್ಚೆಯಾಗಿದೆ. ಮುಂದಾದರೂ ಎಸಿಬಿ ಅಧಿಕಾರಿಗಳು ಈ ರೀತಿ ತಾರತಮ್ಯ ಮಾಡದೆ ನಿಷ್ಪಕ್ಷಪಾತವಾಗಿ ನಡೆದುಕೊಳ್ಳಲಿ ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

ನನಗೆ ಸ್ಥಾನಮಾನ ನೀಡುವ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ: ಬಿ.ವೈ.ವಿಜಯೇಂದ್ರ

-ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿಕೆ

ವಿಜಯಸಾಕ್ಷಿ ಸುದ್ದಿ, ಶಿವಮೊಗ್ಗ

ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಯಾವ ಸ್ಥಾನಮಾನ ಕೊಡಬೇಕು ಎಂದು ನಿರ್ಧರಿಸುತ್ತಾರೆ. ನಾನು ಯಾವುದೇ ನಿರೀಕ್ಷೆ ಇಟ್ಟುಕೊಂಡು ಕೆಲಸ ಮಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಶಿವಮೊಗ್ಗದಲ್ಲಿ ಸಚಿವ ಸ್ಥಾನದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಷಯದಲ್ಲಿ ಬಿ.ಎಸ್. ಯಡಿಯೂರಪ್ಪನವರ ಪ್ರಶ್ನೆ ಉದ್ಭವಿಸಲ್ಲ. ಬಿಜೆಪಿಯ ಕಾರ್ಯಕರ್ತನಾಗಿ ಪಕ್ಷದ ಉಪಾಧ್ಯಕ್ಷ ನಾಗಿ ನನ್ನ ಕೆಲಸ ನಾನು ಮಾಡುತ್ತಿದ್ದೇನೆ.

ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕೋ ? ಬೇಡವೋ? ಎಲ್ಲಿಂದ ಸ್ಪರ್ಧಿಸಬೇಕು ಎಂಬುದನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ದೇಗುಲಗಳ ಒಡೆಯುವ ಕೆಲಸ ಮಾಡುವ ಮೊದಲು ಅಧಿಕಾರಿಗಳು ಯೋಚನೆ ಮಾಡಬೇಕಿತ್ತು. ಜನರ ಭಾವನೆಗಳನ್ನು ಗೌರವಿಸಿ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರವು ಮಾಡಲಾಗುತ್ತಿದೆ. ಇದಕ್ಕೆ ಅವಕಾಶ ನೀಡಲ್ಲ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಇದು ಆದಷ್ಟು ಬೇಗ ಸರಿ ಹೋಗುವ ವಿಶ್ವಾಸವಿದೆ ಎಂದರು.

ತಾಯಿ ಕೊಂದ ದ್ವೇಷ; ತಮ್ಮನಿಂದ ಅಣ್ಣನ ಭೀಕರ ಹತ್ಯೆ

0

ವಿಜಯಸಾಕ್ಷಿ ಸುದ್ದಿ, ಹೂವಿನಹಡಗಲಿ

ಹಣಕಾಸಿನ ವ್ಯವಹಾರ ಹಾಗೂ ತಾಯಿಯನ್ನು ಕೊಲೆಗೈದ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಅಣ್ಣನನ್ನೇ ಸಹೋದರ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ತಾಲೂಕಿನ ಅಲ್ಲಿಪುರ ಗ್ರಾಮದಲ್ಲಿ ನಡೆದಿದೆ.

ಕುರಿ ಶಿವಪ್ಪ (40) ಹತ್ಯೆಯಾದ ವ್ಯಕ್ತಿ. ಕುರಿ ಪಕ್ಕೀರಸ್ವಾಮಿ(35) ಕೊಲೆ ಮಾಡಿದ ಆರೋಪಿ.

ಘಟನೆಯ ವಿವರ

ಕೊಲೆಯಾದ ಶಿವಪ್ಪ 8 ವರ್ಷಗಳ ಹಿಂದೆ ತಾಯಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಜೈಲಿಗೆ ಹೋಗಿ ಹೊರಬಂದಿದ್ದ. ಜೈಲಿನಿಂದ ಬಂದಾಗಿನಿಂದ ತಮ್ಮ ಪಕ್ಕೀರಸ್ವಾಮಿ ಜೊತೆಗೆ ಹಣಕಾಸಿನ ವಿಚಾರಕ್ಕೆ ಪದೇ ಪದೆ ಜಗಳ ತೆಗೆಯುತ್ತಿದ್ದನಲ್ಲದೆ, ಕೊಲೆ ಬೆದರಿಕೆ ಹಾಕುತ್ತಿದ್ದ.

ಇದರಿಂದ ತೀವ್ರವಾಗಿ ನೊಂದಿದ್ದ ಫಕೀರಸ್ವಾಮಿ ಗುರುವಾರ ಬೆಳಿಗ್ಗೆ ಅಣ್ಣನ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದು, ತಲೆ, ಕೈಗೆ ಬಿದ್ದ ಬಲವಾದ ಏಟಿಗೆ ಶಿವಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಿಪಿಐ ರಮೇಶ್ ಕುಲಕರ್ಣಿ, ಹಿರೇಹಡಗಲಿ ಪಿಎಸ್ಐ ದಾದಾವಲಿ ಕೆ.ಎಚ್, ಸಿಬ್ಬಂದಿ ಅಂಜಿನಪ್ಪ ಮಾಗಳ, ಕಲ್ಲೇಶ್ ಗೌಡ, ಹಾಲೇಶ, ಮಾಬು ಸ್ಥಳ ಮಹಜರು ನಡೆಸಿ, ಬಳಿಕ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ ಎಂದು ಕರೆ ಮಾಡಿ ಶಿಕ್ಷಕಿಗೆ ಲಕ್ಷ ರೂ. ಟೋಪಿ!

0

ವಿಜಯಸಾಕ್ಷಿ ಸುದ್ದಿ, ಗದಗ

ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ ಎಂದು ಕರೆ ಮಾಡಿದ ಖದೀಮನೊಬ್ಬ ಶಿಕ್ಷಕಿಯೊಬ್ಬರ ಸುಮಾರು 1 ಲಕ್ಷ ರೂ. ಹಣವನ್ನು ಖಾತೆಯಿಂದ ಎಗರಿಸಿದ್ದಾನೆ.

ಗದಗ ತಾಲೂಕಿನ ಹುಲಕೋಟಿಯ ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುವ ಮಹಿಳೆಗೆ ಈ ರೀತಿಯ ವಂಚನೆ ಆಗಿದೆ.
ಸೆ. 1ರಂದು ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ, ನಿಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ. ಸರಿಪಡಿಸಲು ಅದರ ಸಂಖ್ಯೆ, ಪಿವಿವಿ ನಂಬರ್ ಹಾಗೂ ಸದ್ಯ ಬಳಸುತ್ತಿರುವ ಎಟಿಎಂ ಪಿನ್ ನೀಡುವಂತೆ ಕೇಳಿದ್ದಾನೆ.

ಶಿಕ್ಷಕಿಗೆ ಅನುಮಾನ ಬಂದಿದೆ. ನಿಮ್ಮ ಅಕೌಂಟ್ ಹುಲಕೋಟಿ ಶಾಖೆಯಲ್ಲಿಯೇ ಇರುವುದು ಎಂದು ಆ ವ್ಯಕ್ತಿ ಕನ್ನಡದಲ್ಲಿ ಹೇಳಿದಾಗ ಒಂದಿಷ್ಟು ವಿಶ್ವಾಸ ಮೂಡಿದೆ. ಎಟಿಎಂ ಕಾರ್ಡ್ ಮೇಲಿರುವ ನಂಬರ್ ಹೇಳಿದ ಮೇಲೆ, ಒಟಿಪಿ ನಂಬರ್ ಕೇಳಿದ ಆ ವ್ಯಕ್ತಿ ಒಡನೆಯೇ ತಲಾ 49,999 ರೂ.ಗಳಂತೆ ಎರಡು ಬಾರಿ ಹಣ ಡ್ರಾ ಮಾಡಿಕೊಂಡಿದ್ದಾನೆ.

ಹಣ ಖಾತೆಯಿಂದ ಹಿಂಪಡೆದಿರುವ ಬಗ್ಗೆ ಮೊಬೈಲ್‌ಗೆ ಎಸ್ಸೆಮ್ಮೆಸ್ ಬಂದಾಗ ಟೀಚರಮ್ಮನಿಗೆ ತಾವು ಮೋಸ ಹೋಗಿದ್ದು ಅರಿವಾಗಿದೆ. ಕುಟುಂಬಸ್ಥರೊಂದಿಗೆ ಚರ್ಚಿಸಿ ತಡವಾಗಿ ದೂರು ನೀಡಿದ್ದಾರೆ. ಈ ಕುರಿತು ಗದಗ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್‌ಸ್ಪೆಕ್ಟರ್ ಟಿ ಮಹಾಂತೇಶ್ ತನಿಖೆ ಕೈಗೊಂಡಿದ್ದಾರೆ.

ಮಲಪ್ರಭಾ ನದಿಯ ನಡುಗಡ್ಡೆಯಲ್ಲಿ ಸಿಲುಕಿ ವೃದ್ಧನ ಪರದಾಟ

0

ವಿಜಯಸಾಕ್ಷಿ ಸುದ್ದಿ, ನರಗುಂದ

ತಾಲೂಕಿನ ಕೊಣ್ಣೂರು ಬಳಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ವೃದ್ಧನೋರ್ವ ಮಲಪ್ರಭಾ ನದಿಯಲ್ಲಿ ಸಿಲುಕಿಕೊಂಡು, ಸುಮಾರು ಮೂರು ಗಂಟೆಗಳ ಕಾಲ ಪರದಾಡಿದ ಘಟನೆ ಜರುಗಿದೆ.

ಕೊಣ್ಣೂರು ನಿವಾಸಿ ಬಸಪ್ಪ ತಳವಾರ (60) ನದಿಯಲ್ಲಿ ಸಿಲುಕಿಕೊಂಡಿದ್ದ ವೃದ್ಧ. ಗ್ರಾಮದ ಹೊರವಲಯದಲ್ಲಿರುವ ಮಲಪ್ರಭಾ ನದಿಗೆ ಸ್ನಾನಕ್ಕೆಂದು ತೆರಳಿದ್ದು, ನದಿಯ ದಂಡೆಯಲ್ಲಿ ಕುಳಿತು ಸ್ನಾನ ಮಾಡುತ್ತಿದ್ದಾಗ ಏಕಾಏಕಿ ನದಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ.

ಸ್ನಾನ ಮಾಡಲೆಂದು ಕುಳಿತ ಸ್ಥಳ ನಡುಗಡ್ಡೆಯಾಗಿ ಮಾರ್ಪಟ್ಟು ಎರಡೂ ಬದಿಗೆ ನೀರು ರಭಸವಾಗಿ ಹರಿಯಲಾರಂಭಿಸಿದ್ದು, ಗಿಡದ ಪೊದೆಯಲ್ಲಿ ಕುಳಿತು ಸಹಾಯಕ್ಕೆ ಅಂಗಲಾಚಿದ್ದಾನೆ. ನದಿಯ ನೀರಿನ ಮಟ್ಟ ಹೆಚ್ಚಾಗಿ ವೃದ್ಧ ಕುಳಿತ ಪೊದೆಯೂ ನೀರಲ್ಲಿ ಕೊಚ್ಚಿಹೋಗುವ ಭೀತಿ ಆವರಿಸಿ ಕೆಲಹೊತ್ತು ಆಘಾತಕ್ಕೊಳಗಾಗಿದ್ದ.

ಸುದ್ದಿ ತಿಳಿದು ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಅಗ್ನಿಶಾಮಕ ದಳದ ಸಿಬ್ಬಂದಿ, ಗ್ರಾಮಸ್ಥರ ನೆರವಿನೊಂದಿಗೆ ರಕ್ಷಣೆ ಮಾಡಿದ್ದಾರೆ ಎಂದು ಗ್ರಾಮದ ಮುಖಂಡ ಚಂದ್ರಗೌಡ ಪಾಟೀಲ ಮಾಹಿತಿ ನೀಡಿದ್ದಾರೆ.

ಪೊಲೀಸರ ನಿರ್ಲಕ್ಷ್ಯ; ಅತ್ಯಾಚಾರ ಆರೋಪಿ ಪರಾರಿ

0

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಅತ್ಯಾಚಾರ ಆರೋಪಿಯನ್ನು ಬಂಧಿಸಿ ಮೆಡಿಕಲ್ ಟೆಸ್ಟ್ ಗೆಂದು ಜಿಲ್ಲಾಸ್ಪತ್ರೆಗೆ ಕರೆತಂದಿದ್ದ ವೇಳೆ ಆರೋಪಿ ಪರಾರಿಯಾದ ಘಟನೆ ಬೆಳಗಾವಿಯಲ್ಲಿ ಗುರುವಾರ ನಡೆದಿದೆ.

ಅತ್ಯಾಚಾರ ಪ್ರಕರಣದ ಆರೋಪಿಯನ್ನು ಬಂಧಿಸಿದ್ದ ಕಾಕತಿ ಪೋಲೀಸರು, ಮೆಡಿಕಲ್ ಟೆಸ್ಟ್ ಮಾಡಿಸಲು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದರು. ಆದರೆ, ಆರೋಪಿ ಪೋಲೀಸರ ಕಣ್ಣುತಪ್ಪಿಸಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.

ಆರೋಪಿಯ ಪತ್ತೆಗೆ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಪೊಕ್ಸೊ ಪ್ರಕರಣದ ಆರೋಪಿ ಆಗಿರುವುದರಿಂದ ಹೆಸರು ಗೌಪ್ಯವಾಗಿಡಲಾಗಿದೆ.

ಪೊಲೀಸರ ದಾಳಿ; ಗಾಂಜಾ ಮಾರುತ್ತಿದ್ದ ಯುವಕನ ಬಂಧನ

0

ವಿಜಯಸಾಕ್ಷಿ ಸುದ್ದಿ, ಗದಗ

ಅಕ್ರಮವಾಗಿ ಗಾಂಜಾ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ಲಕ್ಷ್ಮೇಶ್ವರದ ದೊಡ್ಡೂರು ರಸ್ತೆಯ ಬದಿ ಗಾಂಜಾದ ಚೀಟು ಕಟ್ಟುತ್ತಿದ್ದಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಮುಧೋಳ ಮೂಲದ ಕಟ್ಟಡ ಕಾರ್ಮಿಕ ಸಲೀಂ ಅಲಿಯಾಸ್ ಸಲ್ಮಾನ್ ದಾದಾಪೀರ್ ಶಿಲ್ಲೆದಾರ ಬಂಧಿತ ಆರೋಪಿ.

ಬಂಧಿತನಿಂದ 650 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆದಿದ್ದಾರೆ. ಸೆ.13ರಂದು ಲಕ್ಷ್ಮೇಶ್ವರದ ಹುಡ್ಕೋ ಹತ್ತಿರ ದೊಡ್ಡೂರ ರಸ್ತೆಯ ಪೂಲ್ ಕಟ್ಟೆಯ ಬಳಿ ಗಾಂಜಾ ಚೀಟು ಕಟ್ಟುತ್ತಿದ್ದಾಗ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿದಾಗ ಆರೋಪಿ ಸಿಕ್ಕಿಬಿದ್ದಾನೆ. ಲಕ್ಷ್ಮೇಶ್ವರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

error: Content is protected !!