Home Blog Page 3345

ಗಣೇಶ ಮೂರ್ತಿ ವಿಸರ್ಜನೆ ವೇಳೆ ಕಾಲುಜಾರಿ ಯುವಕ ನೀರುಪಾಲು

0

ವಿಜಯಸಾಕ್ಷಿ ಸುದ್ದಿ, ಕಲಬುರ್ಗಿ

ಸ್ನೇಹಿತನೊಂದಿಗೆ ಗಣೇಶ ಮೂರ್ತಿ ವಿಸರ್ಜನೆಗೆ ಭೀಮಾ ನದಿಗೆ ತೆರಳಿದ್ದ ಯುವಕ ನೀರು ಪಾಲಾದ ಘಟನೆ ಜೀವರ್ಗಿ ತಾಲೂಕಿನ ಅಂಕಲಗಾ ತಾಂಡಾದಲ್ಲಿ ಸಂಭವಿಸಿದೆ. ತಾಂಡಾ ನಿವಾಸಿ ಗಿರೀಶ್ ಜಯರಾಮ ಚವ್ಹಾಣ (21) ಮೃತ ಯುವಕ.

ತಾಂಡಾದಲ್ಲಿ ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣೇಶ ಮೂರ್ತಿಯನ್ನು ವಿಸರ್ಜನೆಗೆಂದು ಐವರು ಸ್ನೇಹಿತರೊಂದಿಗೆ ಭೀಮಾ ತೀರಕ್ಕೆ ಹೋಗಿದ್ದು, ಮೂರ್ತಿಯನ್ನು ನದಿಯಲ್ಲಿ ವಿಸರ್ಜನೆ ಮಾಡುವಾಗ ಕಾಲುಜಾರಿ ನದಿಗೆ ಬಿದ್ದಿದ್ದಾನೆ. ಯುವಕನ ಶವಕ್ಕಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಜೀವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾನ್ ಉದ್ರಿ ಕೊಡದಿದ್ದಕ್ಕೆ ಚಾಕುವಿನಿಂದ ಇರಿದು ಅಂಗಡಿ ಮಾಲೀಕನ ಕೊಲೆ

0

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಕ್ಷುಲ್ಲಕ ಕಾರಣಕ್ಕಾಗಿ ಕುಂದಾಪುರ ಮೂಲದ
ಪಾನ್ ಶಾಪ್ ಅಂಗಡಿ ವ್ಯಾಪಾರಿಯನ್ನು ಕೊಲೆ ಮಾಡಿದ ಘಟನೆ ನಗರದ ವಡಗಾವಿ ಪ್ರದೇಶದ ಲಕ್ಷ್ಮೀ ನಗರದಲ್ಲಿ ನಡೆದಿದೆ.

ಮೂಲತಃ ಕುಂದಾಪುರದ ಬಾಳಕೃಷ್ಣ ಶೆಟ್ಟಿ ಮೃತ ವ್ಯಕ್ತಿ. ಈತ ಕಳೆದ 25 ವರ್ಷಗಳಿಂದ ಬೆಳಗಾವಿಯ ಲಕ್ಷ್ಮೀ ನಗರದಲ್ಲಿ ಪಾನ್ ಶಾಪ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ.

ವಡಗಾವಿಯ ದತ್ತಾ ಜತ್ತಿನಕಟ್ಟಿ ಎಂಬಾತ ದಿನನಿತ್ಯ ರಾತ್ರಿ ಬಾಳಕೃಷ್ಣನ ಅಂಗಡಿಗೆ ಬಂದು ಗುಟಖಾ, ಸಿಗರೇಟ್ ಉದ್ರಿ ಕೊಡುವಂತೆ ಪೀಡಿಸುತ್ತಿದ್ದ, ಉದ್ರಿ ಕೊಡದ ಕಾರಣ ಬಾಳಕೃಷ್ಣ ಶೆಟ್ಟಿಯ ಜೊತೆ ಜಗಳಾಡುತ್ತಿದ್ದ. ಆದರೆ, ನಿನ್ನೆ ರಾತ್ರಿ ಹೊಸ ಕ್ಯಾತೆ ತೆಗೆದ ದತ್ತಾ ನನ್ನ ಮೊಬೈಲ್ ಕಳುವಾಗಿದೆ. ಅದನ್ನು ನೀನೇ ತೆಗೆದುಕೊಡಿದ್ದಿ ಎಂದು ಜಗಳ ತೆಗದಿದ್ದಾನೆ. ಈತನ ಜೊತೆ ಜಗಳವೇ ಬೇಡ ಎಂದು ಬಾಳಕೃಷ್ಣ ಶೆಟ್ಟಿ ಪಾನ್ ಅಂಗಡಿ ಬಂದ್ ಮಾಡಿಕೊಂಡು ಮನೆಗೆ ಹೋಗಿದ್ದಾನೆ. ಅಷ್ಟಕ್ಕೂ ಸುಮ್ಮನಾಗದ ದತ್ತಾ ಬಾಳಕೃಷ್ಣನ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಬಾಳಕೃಷ್ಣನ ಆಪ್ತರು ತಿಳಿಸಿದ್ದಾರೆ.

ಆರೋಪಿ ದತ್ತಾ ಜತ್ತಿನಕಟ್ಟಿಯನ್ನು ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಲು ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಕಾರಟಗಿ:
ಸಾಮಾಜಿಕವಾಗಿ ರಾಜ್ಯದಲ್ಲಿ ದೊಡ್ಡ ಸಮುದಾಯವನ್ನೇ ಹೊಂದಿರುವ ಲಿಂಗಾಯತ ಪಂಚಮಸಾಲಿ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಪಂಚಮಸಾಲಿ ಸಮುದಾಯದ‌ವರನ್ನು 2A ವರ್ಗಕ್ಕೆ ಸೇರಿಸಲು ರಾಜ್ಯ ಸರ್ಕಾರಕ್ಕೆ ನೀಡಿದ್ದ ಗಡುವು ಮುಗಿದಿದೆ. ತಕ್ಷಣವೇ ಪಂಚಮಸಾಲಿ ಸಮಾಜವನ್ನು ಸರಕಾರ 2ಎ ವರ್ಗಕ್ಕೆ ಸೇರಿಸುವಂತೆ ಆಗ್ರಹಿಸಿ ಪಟ್ಟಣದ ತಹಶೀಲ್ದಾರ ಕಚೇರಿ ಎದುರು ಬುಧವಾರ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ವೇಳೆ ಮಾತನಾಡಿದ ಪಂಚಮಸಾಲಿ ‌ಸಮಾಜದ ತಾಲೂಕು ಅಧ್ಯಕ್ಷ ಚನ್ನಬಸಪ್ಪ ಸುಂಕದ್ ಮಾಜಿ ಸಿಎಂ ಬಿಎಸ್ವೈ ಮಾತು ಕೊಟ್ಟು ತಪ್ಪಿದ್ದಾರೆ. ಇದೀಗ ಸಿಎಂ ಬಸವರಾಜ್ ಬೊಮ್ಮಾಯಿ ಮಾತು ತಪ್ಪಿದರೆ ಮುಂದಿನ ದಿನಮಾನಗಳಲ್ಲಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿದರು.

ಮುಖಂಡ ಪರಮೇಶಗೌಡ ಕೊಂತನೂರ್ ಮಾತನಾಡಿ, ಲಿಂಗಾಯತ ಪಂಚಮಸಾಲಿ ಸಮುದಾಯಗಳ ಮತಗಳನ್ನು ಪಡೆದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬರುವ ಮುಂಚೆ ಬಿಜೆಪಿ ಮಾತು ಕೊಟ್ಟಿತ್ತು.‌ ಆದರೆ ಇದೀಗ ಮಾತು ಉಳಿಸಿಕೊಳ್ಳುತ್ತಿಲ್ಲ. ಇದು ಸರಿ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಖಂಡ ಕೊತ್ವಾಲ್ ಶರಣಪ್ಪ ಸೇರಿದಂತೆ ಮತ್ತಿತರರು ಇದ್ದರು.

ಬಸ್‌ಗಳಿಗೆ ಇಲ್ಲದ ನಿರ್ಬಂಧ ಚಿತ್ರಮಂದಿರಗಳಿಗೇಕೆ?

0

ತೆರೆ ಕಾಣಲು ತುದಿಗಾಲಲ್ಲಿರುವ ಬಿಗ್ ಸಿನಿಮಾಗಳು

-ಶೇಕಡಾ 100 ಆಸನ ಭರ್ತಿಗೆ ಅವಕಾಶ ಕೊಡಿ

-19 ತಿಂಗಳಿನಿಂದ ಥೇಟರ್ ಸಂಕಷ್ಟ

ಬಸವರಾಜ ಕರುಗಲ್,
ವಿಜಯಸಾಕ್ಷಿ ವಿಶೇಷ, ಬೆಂಗಳೂರು

ಕೋವಿಡ್ ದಿನಗಳು ಬಂದು ಹಲವರ ಬದುಕು, ಉದ್ಯೋಗವನ್ನೇ ಕಸಿದಿವೆ. ಕೋವಿಡ್‌ನಿಂದಾಗಿ ಅಲ್ಲದೇ ನಂತರದ ದಿನಗಳಲ್ಲಿ ದುಡಿಮೆ ಇಲ್ಲದೇ ಜೀವನ ಹೇಗೆ ಎಂದು ಆತಂಕಕ್ಕೊಳಗಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆಗೇನು ಕಡಿಮೆ ಇಲ್ಲ. ಇಂಥ ಆತಂಕದ ಮಡುವಿನಲ್ಲೇ ಇನ್ನೂ ಉಸಿರು ಬಿಗಿ ಹಿಡಿದಿರುವ ಸ್ಥಿತಿ ಚಿತ್ರರಂಗದ್ದು.

ಸರಿ ಸುಮಾರು 19 ತಿಂಗಳಿನಿಂದ ಭಾರತದ ಚಿತ್ರಮಂದಿರಗಳಿಗೆ ಬೀಗ ಬಿದ್ದಿದೆ. 2021ರ ಜನೇವರಿಯಲ್ಲಿ ಪುನಾರಂಭಗೊಂಡಿದ್ದ ಚಿತ್ರರಂಗ ಇನ್ನೇನು ಚೇತರಿಕೆ ಕಾಣಬೇಕೆನ್ನುವಷ್ಟರಲ್ಲಿ ಮತ್ತೇ ಸ್ಥಗಿತವಾಯಿತು. ಅದು ಅನಿವಾರ್ಯವೂ ಆಗಿತ್ತು.

ಆದರೆ ಈಗ ಕೋವಿಡ್ ಚಿತ್ರಣ ಬದಲಾಗಿದೆ. ವಿಶೇಷವಾಗಿ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ಇಳಿಕೆ ಕಂಡಿದ್ದರಿಂದ ಹಂತ ಹಂತವಾಗಿ ವಿವಿಧ ಚಟುವಟಿಕೆಗಳು ಕಾರ್ಯಾರಂಭ ಮಾಡಿವೆ.

ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭಗೊಂಡಿವೆ. ಅಂಗಡಿ-ಮುಂಗಟ್ಟುಗಳು, ಬಾರ್-ರೆಸ್ಟೋರೆಂಟ್‌ಗಳು ಬಾಗಿಲು ತೆರೆದಿವೆ. ಬಸ್ ಸಂಚಾರ ಮತ್ತೇ ಎಂದಿನ ಲಯಕ್ಕೆ ಮರಳಿದೆ. ಗಣೇಶೋತ್ಸವವೂ ಕೋವಿಡ್‌ಗೂ ಹಿಂದಿನ ವರ್ಷಗಳಿಗೆ ಸವಾಲೊಡ್ಡುವ ರೀತಿಯಲ್ಲಿ ನಡೆಯುತ್ತಿದೆ. ಆದರೆ ಚಿತ್ರೋದ್ಯಮ ಮಾತ್ರ ಕಸುವು ಕಳೆದುಕೊಂಡಂತಾಗಿದೆ.

ಬಸ್‌ನಲ್ಲಿ ಆಸನ ಭರ್ತಿಗೆ ಅವಕಾಶ ಇದೆ, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಜನರಿಂದ ಭರ್ತಿಯಾಗಿ ಭರ್ಜರಿ ವ್ಯಾಪಾರ ಮಾಡುತ್ತಿವೆ. ಸಿನಿಮಾ ಥೇಟರ್ ವಿಷಯಕ್ಕೆ ಬಂದರೆ ಮಾತ್ರ ಸರಕಾರ ಕೋವಿಡ್ ಕಾರಣವನ್ನು ಮುಂದೊಡ್ಡುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಚಿತ್ರರಂಗಗ ನಾನಾ ಶಾಖೆಗಳಲ್ಲಿ ಕೆಲಸ ಮಾಡುತ್ತಿರುವವರ ಅಭಿಪ್ರಾಯ.

ಸರಕಾರದ ಈ ತಾರತಮ್ಯ ನೀತಿಯಿಂದ ಬರೀ ಸಿನಿಮಾ ಕಾರ್ಮಿಕರ ಬದುಕಿಗೆ ಪೆಟ್ಟು ಬಿದ್ದಿಲ್ಲ. ಚಿತ್ರಮಂದಿರಗಳ ಮಾಲಕರು, ಪ್ರದರ್ಶಕರು, ವಿತರಕರು, ನಿರ್ಮಾಪಕರು.. ಹೀಗೆ ಚಿತ್ರರಂಗದ ಎಲ್ಲ ವಿಭಾಗದವರಿಗೂ ಹೊಡೆತ ಬಿದ್ದಿದೆ.


ಪರಿಹಾರ ಪಡೆಯಲು ನಿಯಮಗಳದ್ದೇ ಸವಾಲು!


ಸರಕಾರ ಎಲ್ಲ ಕಾರ್ಮಿಕರಿಗೂ ಕೋವಿಡ್ ಪರಿಹಾರ ಒದಗಿಸಲು ಮುಂದಾಗಿದ್ದು ಶ್ಲಾಘನೀಯವೇ. ಇದರಲ್ಲಿ ಚಿತ್ರರಂಗದ ಕಾರ್ಮಿಕರನ್ನು ಸೇರ್ಪಡೆ ಮಾಡಿದ್ದು ಸ್ವಾಗತಾರ್ಹ ಸಂಗತಿ. ಆದರೆ ಪರಿಹಾರ ಪಡೆಯಲು ಸರಕಾರ ವಿಧಿಸಿರುವ ನಿಯಮಗಳನ್ನು ‌ಗಮನಿಸಿದರೆ ನೂರು ಜನರಲ್ಲಿ ಐದಾರು ಜನ ಮಾತ್ರ ಈ ಪರಿಹಾರದ ಫಲ ಪಡೆಯುತ್ತಾರೆ. ಇನ್ನುಳಿದವರು ಸರಕಾರ ಕೊಡುವ ಪರಿಹಾರ ಧನದ ಅರ್ಧಭಾಗವನ್ನು ನಿಯಮಗಳ ಪಾಲನೆಗೆ ಸುರಿಯಬೇಕಾಗುತ್ತದೆ ಎಂದು ಚಿತ್ರಮಂದಿರದ ದ್ವಾರಪಾಲಕ ವಿಜಯಸಾಕ್ಷಿ ಎದುರು ಅಳಲು ತೋಡಿಕೊಂಡರು.

“ರಾಜ್ಯದಲ್ಲಿ ಬಸ್, ಟೆಂಪೋ, ಟ್ರಕ್ ಭರ್ತಿಯಾಗಿ ಓಡಾಡುತ್ತಿವೆ. ಅಲ್ಲಿ ಉಲ್ಲಂಘನೆಯಾಗದ ಕೋವಿಡ್ ನಿಯಮ ಚಿತ್ರಮಂದಿರಗಳ ಆಸನ ಭರ್ತಿಗೆ ಅವಕಾಶ ಕೊಟ್ಟರೆ ಆಗುತ್ತಾ? ಎಲ್ಲರಿಗೂ ಅವಕಾಶ ಕೊಟ್ಟಿರುವಂತೆ ಚಿತ್ರಮಂದಿರಗಳ ಭರ್ತಿಗೆ ಅವಕಾಶ ಕೊಡಿ. ಈಗ ಕೊರೊನಾ ನಿಯಂತ್ರಣದಲ್ಲಿದೆ. ಚಿತ್ರೋದ್ಯಮದ ಚಟುವಟಿಕೆ ನಂಬಿಕೊಂಡು ಸಾವಿರಾರು ಕುಟುಂಬಗಳು ಬದುಕುತ್ತಿವೆ. ದೊಡ್ಡ ದೊಡ್ಡ ಸಿನಿಮಾಗಳು ತೆರೆಗೆ ಬರಲು ತುದಿಗಾಲಲ್ಲಿವೆ. ಸರಕಾರದ ವಿರುದ್ಧ ಹೋಗಬಾರದು ಎನ್ನುವ ಕಾರಣಕ್ಕೆ ಬಿಗ್ ಸಿನಿಮಾಗಳು ತೆರೆ‌ಗೆ ಬಂದಿಲ್ಲ. ಸರಕಾರ ಚಿತ್ರಮಂದಿರಗಳಲ್ಲಿ ಶೇಕಡಾ 100 ಆಸನ ಭರ್ತಿಗೆ ಅವಕಾಶ ಕೊಡಲಿ. ಒಂದೊಮ್ಮೆ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ‌ ಕಂಡು ಬಂದರೆ ಎಲ್ಲವನ್ನು ಬಂದ್ ಮಾಡುವಂತೆ ಚಿತ್ರಮಂದಿರಗಳನ್ನು ಬಂದ್ ಮಾಡಲು ಸೂಚಿಸಲಿ. ಯಾರು ಬೇಡ ಅಂತಾರೆ?”

ಆರ್ ಆರ್ ಓದುಗೌಡರ್, ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳಿ

“ಸರಕಾರದ ಈ ತಾರತಮ್ಯ ನೀತಿಯಿಂದ ಚಿತ್ರಮಂದಿರಗಳ ಮಾಲಕರು ಚಿಂತಾಕ್ರಾಂತರಾಗಿದ್ದಾರೆ. ಸರಕಾರ ಕೆಲವು ತೆರಿಗೆ ಶುಲ್ಕ, ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಕೆಲ ವಿನಾಯಿತಿಗಳನ್ನು ಕೊಟ್ಟದ್ದು ನಿಜ. ಆದರೆ ಈಗಲೂ ಚಿತ್ರಮಂದಿರಗಳ ಭರ್ತಿಗೆ ಅವಕಾಶ ಕೊಡದಿದ್ದರೆ ಥೇಟರ್ ನಡೆಸೋದಾದರೂ ಹೇಗೆ?”

ವಿಶ್ವನಾಥ್ ಮಹಾಂತಯ್ಯನಮಠ, ಮಾಲಕರು, ಶ್ರೀ ಲಕ್ಷ್ಮೀ ಹಾಗೂ ಶಿವ ಚಿತ್ರಮಂದಿರ, ಕೊಪ್ಪಳ.

ಕಪ್ಪತ್ತಗುಡ್ಡದ ಸೆರಗಿನಲ್ಲಿ ಭೂಕಂಪನ! ಬೆದರಿದ ಜನ!

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ, ವಿರೂಪಾಪುರ ತಾಂಡಾ ಸುತ್ತ ಮುತ್ತ ಮಂಗಳವಾರ ರಾತ್ರಿ ಲಘು ಭೂಕಂಪ ಉಂಟಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ವಿಜಯಸಾಕ್ಷಿಗೆ ತಿಳಿಸಿದ್ದಾರೆ.

ಮಂಗಳವಾರ ರಾತ್ರಿ 8-24ರ ಸುಮಾರಿಗೆ 2-3 ಸೆಕೆಂಡ್‌ಗಳಷ್ಟು ಕಾಲ ಭೂಮಿ ಕಂಪಿಸಿದ ಅನುಭವ ತಾಂಡಾ ಹಾಗೂ ಕಲಕೇರಿ ಗ್ರಾಮದ ಜನರಿಗೆ ಉಂಟಾಗಿದ್ದು, ಮನೆಯ ಗೃಹಪಯೋಗಿ ವಸ್ತುಗಳು ಅಲುಗಾಡಿವೆ. ಘಟನೆಯಿಂದ ಗಾಬರಿಗೊಂಡ ಜನ ಮನೆಯಿಂದ ಹೊರ ಓಡಿ ಬಂದು ಗುಂಪು ಸೇರಿ ಚರ್ಚಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಈ ಕುರಿತು ವಿಜಯಸಾಕ್ಷಿಗೆ ಮಾಹಿತಿ ನೀಡಿರುವ ಕಲಕೇರಿ ಗ್ರಾಮ ಪಂಚಾಯತಿ ಸದಸ್ಯ ಜಹೀರುದ್ದೀನ್ ಮುಲ್ಲಾ ಅವರು, ಕಂಪನದ ಅನುಭವ ಬಿಚ್ಚಿಟ್ಟರು.

ಲಕ್ಷ್ಮೇಶ್ವರ ಪೊಲೀಸರ ಪ್ರತ್ಯೇಕ ದಾಳಿ; ಘಟಾನುಘಟಿಗಳು ಸೇರಿ 26 ಜನರ ಬಂಧನ

0

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಜೂಜಾಟ ಕಡಿಮೆ ಆಗುವಂತೆ ಕಾಣುತ್ತಿಲ್ಲ. ಅದಕ್ಕೆ ಸ್ಪಷ್ಟ ಉದಾಹರಣೆ ಎರಡು ಗ್ರಾಮಗಳಲ್ಲಿ ನಡೆದ ಪೊಲೀಸರ ದಾಳಿ. ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಗುತ್ತಿಗೆದಾರ, ಚಾಲಕ ಸೇರಿದಂತೆ ಆರು ಜನರನ್ನು ಬಂಧಿಸಿದರೆ, ಪುಟಗಾಂವ ಬಡ್ನಿ ಗ್ರಾಮದಲ್ಲಿ ಬರೋಬ್ಬರಿ‌ 20 ಜನ ಘಟಾನುಘಟಿಗಳನ್ನು ಬಂಧಿಸಲಾಗಿದೆ.

ಸೂರಣಗಿ ಗ್ರಾಮದಲ್ಲಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಗುತ್ತಿಗೆದಾರ, ಇಬ್ಬರು ಚಾಲಕರು ಸೇರಿದಂತೆ ಆರು ಜನರನ್ನು ಲಕ್ಷ್ಮೇಶ್ವರ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ. ಸೂರಣಗಿ ಗ್ರಾಮದ ಬಸ್ ನಿಲ್ದಾಣದ ಬಳಿ ಜೂಜಾಟದಲ್ಲಿ ತೊಡಗಿದ್ದ ರಫೀಕ್ ಮಾಬುಸಾಬ್ ಕೊಲಕಾರ್, ಬಸವರಾಜ್ ರಾಮಣ್ಣ ಸಂಕ್ಲಿಪುರ, ಅಂದಪ್ಪ ಬಸಪ್ಪ ರೆಡ್ಡಿ, ಮಾರುತಿ ಪಕ್ಕೀರಪ್ಪ ಬಾರ್ಕಿ, ಬಸವರಾಜ್ ಈರಪ್ಪ ಶಿಗ್ಲಿ, ಜಗದೀಶಪ್ಪ ಬಸಪ್ಪ ಶೀರನಹಳ್ಳಿ ಎಂಬುವವರನ್ನು ಬಂಧಿಸಿ ಅವರಿಂದ 4700 ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಪುಟಗಾಂವ ಬಡ್ನಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಬಳಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ 20 ಜನರ ತಂಡದ ಮೇಲೆ ಲಕ್ಷ್ಮೇಶ್ವರ ಪೊಲೀಸರು ದಾಳಿ ಬಂಧಿಸಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಲಕ್ಷ್ಮೇಶ್ವರ ಠಾಣೆಯ ಪಿಎಸ್ಐ ಡಿ ಪ್ರಕಾಶ್ ಹಾಗೂ ಸಿಬ್ಬಂದಿ ದಾಳಿ ಮಾಡಿದಾಗ ಘಟಾನುಘಟಿ ವ್ಯಕ್ತಿಗಳು ಸಿಕ್ಕಿಬಿದ್ದಿದ್ದಾರೆ.

ರಮೇಶ್ ಶಿವಪುತ್ರಪ್ಪ ಮರಿಹೊಳಲಣ್ಣವರ್, ಈರಪ್ಪ ಪಂಚಪ್ಪ ಅಂಗಡಿ, ಮಂಜುನಾಥ್ ಮುದಕಪ್ಪ ಚನ್ನೂರು, ಆನಂದ ಶಿವಪುತ್ರಪ್ಪ ಅತ್ತಿಗೇರಿ, ರಾಜು ನಾಗಪ್ಪ ಬಸನಕಟ್ಟಿ, ಅಶೋಕ ಮಹಾಲಿಂಗಪ್ಪ ಚನ್ನೂರು, ‌ಶಿವರಾಜ್ ಚನ್ನಬಸಪ್ಪ ಛಬ್ಬಿ, ಬಸವರಾಜ್ ಹಾಲಪ್ಪ ಬನ್ನಿಕೊಪ್ಪ,

ಹನಮಂತಪ್ಪ ಹೂವಪ್ಪ ಬುಕಿ, ಹನುಮಂತಗೌಡ್ ನೀಲಪ್ಪಗೌಡ ಮುಂದಿನಮನಿ, ಮುತ್ತಪ್ಪ ಶಂಕರಪ್ಪ ಗುಂಜಾಳ, ರುದ್ರಪ್ಪ ಪರಮೇಶಪ್ಪ ಬೂದಿಹಾಳ, ವಸಂತ ತಿಪ್ಪನಗೌಡ ಪಾಟೀಲ, ಮಾನಪ್ಪ ಹನಮಂತಪ್ಪ ಬುಕಿ, ಬಸವರಾಜ್ ರಾಮಪ್ಪ ಕಟ್ಟೆಣ್ಣವರ್, ಮೌನೇಶ್ ನಾಗಪ್ಪ ಅರ್ಕಸಾಲಿ, ಸಿದ್ದರಾಮಪ್ಪ ಪ್ರಕಾಶಪ್ಪ ಚೊತಗಲ್ಲ, ಫಕ್ಕೀರೇಶ್ ಯಲಪ್ಪ ಗೊಜನೂರು, ಶಿವಲಿಂಗಪ್ಪ ಶಿವಪ್ಪ ಯಲವಿಗಿ, ಶಿವಪುತ್ರಪ್ಪ ಬಸವಣ್ಣೆಪ್ಪ ಕೊರಕಣ್ಣವರ್ ಎಂಬುವವರನ್ನು ಬಂಧಿಸಲಾಗಿದೆ.

ಬಂಧಿತರಿಂದ ನಗದು 17 ಸಾವಿರದ 600 ಹಣವನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಟಗೇರಿ ಬಡಾವಣೆ ಪೊಲೀಸರ ಕಾರ್ಯಾಚರಣೆ; ಬಲೆಗೆ ಬಿದ್ದ ಇಬ್ಬರು ಅಂತಾರಾಜ್ಯ ಕಳ್ಳಿಯರು

0

ವಿಜಯಸಾಕ್ಷಿ ಸುದ್ದಿ, ಗದಗ

ಪ್ಲಾಸ್ಟಿಕ್ ವ್ಯಾಪಾರದ ಸೋಗಿನಲ್ಲಿ ಬಂದು ಕಳ್ಳತನಕ್ಕಿಳಿದಿದ್ದ ಇಬ್ಬರು ಅಂತಾರಾಜ್ಯ ಕಳ್ಳಿಯರನ್ನು ಬಂಧಿಸುವಲ್ಲಿ ಬೆಟಗೇರಿ ಬಡಾವಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಹಾರಾಷ್ಟ್ರದ ಔರಂಗಾಬಾದ್ ದ ಮುಕಂದವಾಡ ಏರಿಯಾ ನಿವಾಸಿಗಳಾದ ಸಂಗೀತಾ ಸುರೇಶ್ ಹಾಗೂ ಶ್ರುತಿ ಅಲಿಯಾಸ್ ಆರತಿ ರಾಮು ಎಂಬವರು ಗದಗನ ಕಳಸಾಪೂರ ರಿಂಗ್ ರೋಡ್ ಬಳಿ ಜೋಪಡಿ ಹಾಕಿಕೊಂಡು ವಾಸವಾಗಿದ್ದವರೇ ಬಂಧಿತ ಕಳ್ಳಿಯರು.

ಕಳೆದ ಆಗಸ್ಟ್ 11 ರಂದು ಗದಗ ಹೊಸ ಬಸ್ ನಿಲ್ದಾಣದಲ್ಲಿ ಕುಮಟಾದ ಸೌಮ್ಯ ಸತೀಶ್ ಎನ್ನುವ ಮಹಿಳೆಯೊಬ್ಬರ‌ ವೆನಿಟಿ ಬ್ಯಾಗ್ ಕಳ್ಳತನವಾಗಿತ್ತು. ಅದರಲ್ಲಿ ಮೂರು ಲಕ್ಷಕ್ಕೂ ಅಧಿಕ ಮೊತ್ತದ ಮಂಗಳಸೂತ್ರ ಸೇರಿದಂತೆ ಚಿನ್ನಾಭರಣಗಳಿದ್ದವು.

ಕಳ್ಳತನವಾದ ಕುರಿತು ಬಡಾವಣೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ತನಿಖಾ ತಂಡ ರಚಿಸಲಾಗಿತ್ತು.

ಮೊನ್ನೆ ಭಾನುವಾರ ಹೊಸ ಬಸ್ ನಿಲ್ದಾಣದಲ್ಲಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಇಬ್ಬರು ಮಹಿಳೆಯರನ್ನು ವಿಚಾರಿಸಿದಾಗ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.

ಎಸ್ಪಿ ಯತೀಶ್ ಎನ್, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಮಾರ್ಗದರ್ಶನದಲ್ಲಿ, ಬೆಟಗೇರಿ ಠಾಣೆಯ ಸಿಪಿಐ ಬಿ ಜಿ ಸುಬ್ಬಾಪೂರಮಠ ನೇತೃತ್ವದಲ್ಲಿ ಬಡಾವಣೆ ಠಾಣೆಯ ಪಿಎಸ್ಐ ಆರ್ ಆರ್ ಮುಂಡೆವಾಡಗಿ, ಸಿಬ್ಬಂದಿಗಳಾದ ಪರಶುರಾಮ ದೊಡ್ಡಮನಿ, ಆರ್ ಐ ಗುಂಜಳ, ಎಸ್ ಸಿ ಕೊರಡೂರ, ಚಂದ್ರು ದೊಡ್ಡಮನಿ, ಎಸ್ ಎಚ್ ಕಮತರ, ಬಿ ಎಫ್ ಯರಗುಪ್ಪಿ, ಅಶೋಕ ಗದಗ, ಆರ್ ಎಲ್ ಗೋಗೇರಿ, ಜೆ ಆರ್ ಕಮತದ, ಎಲ್ ಎಸ್ ಹೊಸಮನಿ ಈ ಕಾರ್ಯಾಚರಣೆ ನಡೆಸಿ ಇಬ್ಬರ ಕಳ್ಳಿಯರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಸಿಬ್ಬಂದಿಗೆ ಎಸ್ಪಿ ಯತೀಶ್ ಎನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪ್ರೊ.ಎಂ.ಎಂ ನದಾಫ್ ಇನ್ನಿಲ್ಲ : ಕೊಡೇಕಲ್ ದಾವಲ ಮಲಿಕ್ ಶ್ರೀಗಳ ಸಂತಾಪ

0

ನವಲಗುಂದ : ಕರ್ನಾಟಕ ರಾಜ್ಯ ನದಾಫ ಪಿಂಜಾರ ಸಂಘದ ಮಾಜಿ ರಾಜ್ಯಾಧ್ಯಕ್ಷ
ಎಮ್. ಎಮ್. ನದಾಫ ಇವರು ಸೋಮವಾರ 13-9-2021 ಮಧ್ಯಾಹ್ನ ಹೃಧಾಯಘಾತದಿಂದ ದಾವಣಗೆರೆಯಲ್ಲಿ ಸ್ವರ್ಗವಾಸಿಗಳಾದರು.

ಇವರ ನಿಧನಕ್ಕೆ ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ ಶ್ರೀದಾವಲ ಮಲಿಕ್ ಅನಾಥಾಶ್ರಮದ ಶ್ರೀ ದಾವಲಮಲಿಕ್ ಶ್ರೀಗಳು ಸಂತಾಪ ಸೂಚಿಸಿದ್ದಾರೆ.

ವೃತ್ತಿಯಲ್ಲಿ ಪ್ರೋಫೆಸ್ಸರ ಆಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೂಂದಿದ್ದ ಇವರು ಮೂಲತಃ ಗದಗ ಜಿಲ್ಲೆಯವರು. ಇವರು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೂಂಡಿದ್ದರು.

ಶ್ರೀಯುತರಾದ ಜನಾಬ್ ಎಂ ಎಂ ನದಾಫ್ ಇವರು ಕರ್ನಾಟಕ ರಾಜ್ಯ ಪಿಂಜಾರ್ ನದಾಫ್ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ದಿ. ಎಚ್ ಇಬ್ರಾಹಿಂಸಾಬ್ ಇವರ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದವರು.

ದಿ. ಎಚ್ ಇಬ್ರಾಹಿಂ ನಂತರ KRNP ಸಂಘದ ಐದು ವರ್ಷ ರಾಜಾಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿ ಸಮಾಜ ಸೇವಕರಾಗಿ ಸೇವೆ ಸಲ್ಲಿಸಿದ ಮುತ್ಸದ್ದಿಯಾಗಿದ್ದರು.

ಮೃತರ ಅಂತ್ಶಕ್ರಿಯ ಇಂದು 14/09/2021ರಂದು ಮುಂಜಾನೆ 11-00 ಘಂಟೆಗೆ ತೇಜಸ್ವಿನಗರ ಮಕ್ಕಾ ಮಸೀದದಲ್ಲಿ ಜನಾಜಾ ನಮಾಜ ಇರುತ್ತದೆ.

ಅಲ್ಲಾಹು ಮೃತರ ಸ್ವರ್ಗ ಪ್ರಾಪ್ತಿ ಮಾಡಲಿ. ಮೃತರ ಕುಟುಂಬಕ್ಕೆ ನೋವುನ್ನು ಭರಿಸುವ ಶಕ್ತಿ ಸಹ ನೀಡಲಿ ಎಂದು ಶ್ರೀ ದಾವಲ ಮಲಿಕ್ ಶ್ರೀಗಳು ಸಂತಾಪ ಸೂಚಿಸಿದ್ದಾರೆ.

ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದಂಪತಿ

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಯಾದಲಗಟ್ಟೆ ಗ್ರಾಮದಲ್ಲಿ ನಡೆದಿದೆ. ಮಹಾಂತೇಶ (34), ಶೈಲಮ್ಮ (29) ಆತ್ಮಹತ್ಯೆಗೆ ಶರಣಾದ ದಂಪತಿ.

ನಿನ್ನೆ ಸಂಜೆ ಪತ್ನಿ ಶೈಲಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಪತ್ನಿಯ ಸಾವಿನ ಬಳಿಕ ಮನನೊಂದು ಪತಿಯೂ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪಿಎಸ್ ಐ ಮಾರುತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೀಪ್- ಲಾರಿ ಮಧ್ಯೆ ಭೀಕರ ಅಪಘಾತ; 8 ಜನರ ದಾರುಣ ಸಾವು

ವಿಜಯಸಾಕ್ಷಿ ಸುದ್ದಿ, ಚಿಕ್ಕಬಳ್ಳಾಪುರ

ಚಿಂತಾಮಣಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 8 ಜನರು ಸ್ಥಳದಲ್ಲೇ‌ ಸಾವಿಗೀಡಾಗಿ, ಹಲವರು ಗಾಯಗೊಂಡ ಘಟನೆ ಸಂಭವಿಸಿದೆ.

ಶ್ರೀನಿವಾಸಪುರದಿಂದ ಚಿಂತಾಮಣಿ ಕಡೆಗೆ ಬರುತ್ತಿದ್ದ ಪ್ಯಾಸೆಂಜರ್ ಜೀಪ್ ಗೆ
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಮರಿನಾಯಕನಹಳ್ಳಿ ಬಳಿ ಸಿಮೆಂಟ್ ತುಂಬಿದ್ದ ಲಾರಿ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.

ಮಾನವೀಯತೆ ಮೆರೆದ ಶಾಸಕರು

ಸುದ್ದಿ ತಿಳಿದು ಸ್ಥಳಕ್ಕಾಮಿಸಿದ ಶ್ರೀನಿವಾಸಪುರ ಶಾಸಕ ಕೆ.ಆರ್.ರಮೇಶಕುಮಾರ್, ಮಾಲೂರ್ ಶಾಸಕ ಕೆ.ವೈ. ನಂಜೇಗೌಡ ಗಾಯಾಳುಗಳನ್ನು ಸಾಗಿಸಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದರು.

ಸ್ಥಳಕ್ಕೆ‌ ಡಿವೈಎಸ್ಪಿ ಲಕ್ಷ್ಮಯ್ಯ ನೇತೃತ್ವದಲ್ಲಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!