Home Blog Page 3348

ಭ್ರಷ್ಟಾಚಾರದ ಮುಖವಾಡ ಕಳಚಿ ಬಿದ್ದಿದೆ; ಎಚ್‌.ಕೆ.ಪಾಟೀಲ ವಿರುದ್ಧ ಅನಿಲ್ ಮೆಣಸಿನಕಾಯಿ ವಾಗ್ದಾಳಿ

ವಿಜಯಸಾಕ್ಷಿ ಸುದ್ದಿ, ಗದಗ 
ಶಾಸಕ ಎಚ್. ಕೆ. ಪಾಟೀಲ ಅವರ ಭ್ರಷ್ಟಾಚಾರದ, ಅವ್ಯವಹಾರದ ಮುಖವಾಡ ಕಳಚಿ ಬಿದ್ದಿದೆ. ಚುನಾವಣೆ ಹತ್ತಿರ ಇರುವುದರಿಂದ ಇಲ್ಲ ಸಲ್ಲದ ಆರೋಪ ಮಾಡುತ್ತಾ, ಜನರಿಗೆ ಹತ್ತಿರವಾಗುವ ನಾಟಕ ಆರಂಭಿಸಿದ್ದಾರೆ ಎಂದು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಕೆಂಡಾಮಂಡಲರಾದರು.
ನಗರದ ಖಾಸಗಿ ಹೊಟೇಲನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಷ್ಟು ದಿನ ಇಲ್ಲದ ಗದಗ ಜನರ ಮೇಲಿನ ಪ್ರೀತಿ, ಕಾಳಜಿ ಈಗ ದೀಢೀರನೇ ಬರುವುದಕ್ಕೆ ಚುನಾವಣೆ ಸಮೀಪಿಸಿರುವುದು ಎಂಬುದು ಎಂಥವರಿಗಾದರೂ ಗೊತ್ತಾಗುತ್ತದೆ. ಶಾಸಕರು ಸುಳ್ಳು ಹೇಳುವುದನ್ನು ನಿಲ್ಲಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಎಚ್.ಕೆ.ಪಾಟೀಲರು ಕುಂಭಕರ್ಣ ನಿದ್ರೆಯಿಂದ ಈಗ ಎಚ್ಚೆತ್ತುಕೊಂಡಿದ್ದಾರೆ. ಜೊತೆಗೆ ವರ್ಷಾನುಗಟ್ಟಲೇ ಗದಗ ಜನರಿಗೆ ಕುಡಿಯುವ ನೀರು ಸಿಕ್ಕಿಲ್ಲ ಎಂಬುದನ್ನು ತಪ್ಪೊಪ್ಪಿಕೊಂಡಿದ್ದಾರೆ. ಆದರೆ ತಪ್ಪಿನ ಹೊಣೆಯನ್ನು ನಗರಸಭೆಯ ಬಿಜೆಪಿ ಸದಸ್ಯರ ಹೆಗಲಿಗೆ ಹಾಕುವ ಪ್ರಯತ್ನ ನಡೆಸುತ್ತಿರುವುದು ಸರಿಯಲ್ಲ ಎಂದರು.
ಚುನಾವಣೆಯ ಸಂದರ್ಭದಲ್ಲಿ ಗದಗ ಬೆಟಗೇರಿ ಮಹಾಜನತೆಗೆ 24/7 ಕಾಲ ನೀರು ಕೊಡ್ತೀವಿ ಎಂದು ಸಿದ್ದರಾಮಯ್ಯನವರನ್ನು ಕರೆಸಿ, ಅವರಿಂದಲೇ ಹೇಳಿಸಿ, ಕಳ್ಳ ವೋಟು, ಸತ್ತವರ ವೋಟು, ನಕಲಿ ವೋಟು ಹಾಕಿಸಿಕೊಂಡು ಹಾಗೂ ಹೀಗೂ ಗೆದ್ದು 4 ವರ್ಷಗಳಾದವು. ಪಾಟೀಲರು ನೀಡಿದ್ದ ಭರವಸೆ ಏನಾಯ್ತು? ಎಂದು ಪ್ರಶ್ನಿಸಿದರು.
ಮತ ಹಾಕಿದ ಮತದಾರನಿಗೆ ಕೃತಜ್ಞತೆಯ ಕೆಲಸ ಮಾಡಬೇಕಿದ್ದ ಎಚ್‌ಕೆ, ಕೇಂದ್ರ ಸರಕಾರದ 60 ಕೋಟಿ ರೂಪಾಯಿ ಅನುದಾನದಡಿಯ ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರವನ್ನು ಅತಿಥಿ ಗೃಹ ಮಾಡಿಕೊಂಡು ನಿದ್ರೆಗೆ ಜಾರಿದ್ದಾರೆ. ಗದಗನಲ್ಲೇ ಏನು ಜನಪರ ಕೆಲಸ ಮಾಡದ ಅವರು ರಾಷ್ಟ್ರೀಯ ನಾಯಕರಾಗಿ ರಾಜ್ಯ ಬಿಟ್ಟು ಬೇರೆಡೆ ಏನು ಕೆಲಸ ಮಾಡಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಎಂದು ಹರಿಹಾಯ್ದರು.
ಎಚ್.ಕೆ.ಪಾಟೀಲರು ಆರ್‌ಡಿಪಿಆರ್ ಮಂತ್ರಿಯಾಗಿದ್ದಾಗ ಜಿಲ್ಲೆಯ ಯಾವ ಗ್ರಾಮೀಣ ರಸ್ತೆಗಳನ್ನು ಸುಧಾರಣೆ ಮಾಡಿದ್ದಾರೆ? ಹುಲಕೋಟಿ ಬಿಟ್ಟು ಗದಗ ವಿಧಾನಸಭಾ ಕ್ಷೇತ್ರದ ಬಹುತೇಕ ಗ್ರಾಮೀಣ ರಸ್ತೆಗಳು ತೀವ್ರ ಹದಗೆಟ್ಟಿವೆ. ಅವರ ಮನೆಯ 20 ಜನ ಗುತ್ತಿಗೆದಾರರ ಕೈಗೆ ಯುಜಿಡಿ ಕೆಲಸ ಕೊಟ್ಟು ಕೋಟಿಗಟ್ಟಲೆ ಹಣ ಲೂಟಿ ಹೊಡೆದಿದ್ದಾರೆ. ಎಲ್ಲ ಕಡೆ ಕಳಪೆ ಕಾಮಗಾರಿ. ಜನಪ್ರತಿನಿಧಿಗೆ ಮುಂದಿನ ಹತ್ತಿಪ್ಪತ್ತು ವರ್ಷಗಳ ದೂರದೃಷ್ಟಿತ್ವ ಇರಬೇಕು. ಎಚ್.ಕೆ.ಪಾಟೀಲರಿಗೆ ಯಾವ ದೂರದೃಷ್ಟಿಯೂ ಇಲ್ಲ, ಅಭಿವೃದ್ಧಿ ಮಾಡುವ ದೃಷ್ಟಿಕೋನವೂ ಕಾಣುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಗದಗ ನಗರದ ಕುಡಿಯುವ ನೀರಿನ ಸಮಸ್ಯೆಗೆ ಮೂಲ ಕಾರಣವೇ ಎಚ್‌.ಕೆ.ಪಾಟೀಲ. ಸಾಕಷ್ಟು ಉದ್ಯೋಗಾವಕಾಶ ಸಿಗುತ್ತಿದ್ದ ಕೈಗಾರಿಕೆಯನ್ನು ಓಡಿಸಿದ ಮಹಾನ್ ಕೀರ್ತಿ ಪಾಟೀಲರಿಗೆ ಸಲ್ಲುತ್ತದೆ. ಈಗಲೂ ಕಾಲ ಮಿಂಚಿಲ್ಲ. ಜನರ ಬಳಿ ಕ್ಷಮೆಯಾಚಿಸಿ, ಉಳಿದಿರುವ ಶಾಸಕತ್ವದ ಅವಧಿಯನ್ನು ಜನಪರ ಕೆಲಸ ಮಾಡಿ ಸಾರ್ಥಕಗೊಳಿಸಲು ಪ್ರಯತ್ನಿಸಿದರೆ ಸಹಕಾರ ಕೊಡುತ್ತೇವೆ ಎಂದು ಸಲಹೆ ನೀಡಿದರು.
ಈ ವೇಳೆ ಕಾಂತಿಲಾಲ್ ಬನ್ಸಾಲಿ, ಸಂಗಮೇಶ ದುಂದೂರು, ಜಗನ್ನಾಥ ಸಾ ಬಾಂಢಗೆ, ರಾಘು ಯಳವತ್ತಿ, ವಿದ್ಯಾವತಿ ಗಡಗಿ, ಅಶ್ವಿನಿ ಜಗತಾಪ, ಸಿದ್ದಪ್ಪ ಪಲ್ಲೇದ, ರತ್ನ ಕುರಗೋಡ, ಉಷಾ ದಾಸರ್, ಚಂದ್ರು ತಡಸದ ಮತ್ತಿತರರು ಇದ್ದರು.
 

ವಿಜಯೇಂದ್ರ ಬಂದರೆ ಸಂತೋಷ:

ಲಿಂಗಾಯತ ಸಮುದಾಯದ ವರ್ಚಸ್ಸು, ವಿಶ್ವಾಸ ಉಳಿಸಲು, ಗಳಿಸಲು ವಿಜಯೇಂದ್ರ ಇಲ್ಲಿ ಸ್ಪರ್ಧಿಸುವುದಾದರೆ ಸಂತೋಷ. ಪಕ್ಷ ಅವರಿಗೆ ಟಿಕೆಟ್ ಕೊಟ್ಟರೆ ಬೆಂಬಲಿಸುತ್ತೇನೆ ಎಂದು ಅನಿಲ್ ಮೆಣಸಿನಕಾಯಿ ಹೇಳಿದರು.

 

“ಶಾಸಕ ಎಚ್.ಕೆ. ಪಾಟೀಲರು ನೀರಿನ ವಿಷಯ ಮುಂದಿಟ್ಟುಕೊಂಡು ಚುನಾವಣೆ ದೃಷ್ಟಿಯಿಂದ ಹಾಗೂ ಬಿಜೆಪಿಗೆ ಸಿಗುತ್ತಿರುವ ವ್ಯಾಪಕ ಬೆಂಬಲದಿಂದ ಭೀತಿಗೊಂಡು ಜನರನ್ನು ಮರುಳು ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಜನ ಈಗ ಮರುಳಾಗುವುದಿಲ್ಲ. ನಿಮ್ಮ ಅವಧಿಯಲ್ಲಿ ಯುಜಿಡಿ ಕೆಲಸ, ಕುಡಿಯುವ ನೀರಿನ ಕೆಲಸ ಏನು ಮಾಡಿದ್ದಾರೆ ಎಂಬುದನ್ನು ತೋರಿಸಲಿ. ಇದನ್ನು ಸವಾಲಾಗಿ ಸ್ವೀಕರಿಸಿ ಉತ್ತರಿಸಲಿ. ನನ್ನ ಬಳಿ ದಾಖಲೆಗಳಿವೆ.
ಅನಿಲ್ ಮೆಣಸಿನಕಾಯಿ, ಬಿಜೆಪಿ ಮುಖಂಡ, ಗದಗ.

ಸಿದ್ದರಾಮಯ್ಯಗೆ ಕಳಸಾ ಬಂಡೂರಿ ಹೋರಾಟಗಾರರ ಮುತ್ತಿಗೆ; ಕಾರು ತಡೆದು ಆಕ್ರೋಶ

ವಿಜಯಸಾಕ್ಷಿ ಸುದ್ದಿ, ನವಲಗುಂದ 
ಮಹದಾಯಿ ಹಾಗೂ ಕಳಸಾ ಬಂಡೂರಿ ಜೋಡಣೆ ಕಾರ್ಯ ವಿಳಂಭವಾಗುತ್ತಿದ್ದು ವಿರೋಧ ಪಕ್ಷದ ನಾಯಕರಾಗಿರುವ ತಾವು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಕಳಸಾ ಬಂಡೂರಿ ಹೋರಾಟಗಾರರು ಶುಕ್ರವಾರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕಾರಿಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಿದರು.
ಬದಾಮಿ ಕ್ಷೇತ್ರದಿಂದ ನವಲಗುಂದ ಮಾರ್ಗವಾಗಿ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮಾರ್ಗಮಧ್ಯ ಅವರ ಕಾರನ್ನು ತಡೆದು ಮುತ್ತಿಗೆ ಹಾಕಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಸುಭಾಸಚಂದ್ರಗೌಡ ಪಾಟೀಲ ಮಾತನಾಡಿ, ತಾವು ಹೋರಾಟಗಾರರಿದ್ದೀರಿ, ಈ ಭಾಗದ ಸಮಸ್ಯೆಗಳಿಗೆ ನ್ಯಾಯ ಒದಗಿಸಿಕೊಡುತ್ತೀರಿ ಎಂಬ ವಿಶ್ವಾಸದಿಂದ ನಿಮ್ಮನ್ನು ಉತ್ತರ ಕರ್ನಾಟಕದದಿಂದ ಚುನಾಯಿಸಿ ಕಳುಹಿಸಿದ್ದಾರೆ.
ನಾವು ಕೂಡ ನಿರಂತರವಾಗಿ ಹೋರಾಟ, ಸತ್ಯಾಗ್ರಹ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಕಾರಣ ಕೂಡಲೇ ತಾವು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ಈ ಭಾಗದ ರೈತರ ದಶಕಗಳ ಕನಸಾಗಿರುವ ಕಳಸಾ ಬಂಡೂರಿ ಹೋರಾಟಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿರು.
ಮನವಿ ಸ್ವೀಕರಿಸಿದ ಸಿದ್ದರಾಮಯ್ಯನವರು ಆಯ್ತು ಸರ್ಕಾರದ ಮೇಲೆ ಒತ್ತಡ ಹಾಕುವುದಾಗಿ ಹೇಳುತ್ತಾ ಹೋರಾಟಗಾರರ ಕೈಕುಲಕಿ ಹೊರಟು ಹೋದರು. ನೂರಾರು ರೈತರು ಉಪಸ್ಥಿತರಿದ್ದರು.

ಸಾಲದ ಹಣ ವಾಪಸ್ ಕೊಡ್ತೀನಿ ಅಂದ್ರೂ ಬಿಡದ ಆರೋಪಿಗಳು; ಸ್ಟಂಪ್ ನಿಂದ ಥಳಸಿ ಪರಾರಿ

ವಿಜಯಸಾಕ್ಷಿ ಸುದ್ದಿ, ಬೆಟಗೇರಿ
ಮೂರು ವರ್ಷಗಳ ಹಿಂದೆ ವಯಕ್ತಿಕ ಕೆಲಸಕ್ಕಾಗಿ ಪಡೆದುಕೊಂಡಿದ್ದ ಒಂದು ಲಕ್ಷ.ರೂಗಳನ್ನು ಬೇಗ ವಾಪಸ್ ಕೊಡುತ್ತೇನೆ ಎಂದು ಹೇಳಿ ಕಾಲಾವಕಾಶ ಕೇಳಿದ್ದರೂ ಹಣ ನೀಡಿದಾತ ತನ್ನ ತಮ್ಮನೊಂದಿಗೆ ಕೂಡಿಕೊಂಡು ರಾತ್ರಿ ವೇಳೆ ಬೇರೊಂದು ಸ್ಥಳಕ್ಕೆ ಕರೆಯಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಬಗ್ಗೆ ಬೆಟಗೇರಿಯಲ್ಲಿ ನಡೆದಿದೆ.
ಬೆಟಗೇರಿ ಮನಿಯಾರ್ ಓಣಿಯ ಶಬ್ಬೀರಹ್ಮದ್ ಅಮೀನ್‌ಸಾಬ್ ಮನಿಯಾರ್ ಎಂಬುವರು ಆರೋಪಿ ಬೆಟಗೇರಿಯ ಸೆಟ್ಲಮೆಂಟ್ ಏರಿಯಾದ‌ ನಿವಾಸಿ ಗಿರೀಶ್ ರಮೇಶ್ ಕಟ್ಟಿಮನಿ ಎಂಬುವರ ಬಳಿ ತನ್ನ ವೈಯಕ್ತಿಕ ಕೆಲಸಕ್ಕೆ ಹಣದ ಅಡಚಣೆಯಾಗಿದ್ದರಿಂದ ಒಂದು ಲಕ್ಷ.ರೂ ಹಣವನ್ನು ಸಾಲವಾಗಿ ಪಡೆದುಕೊಂಡಿದ್ದರು. ಆಗಾಗ ಶಬ್ಬೀರಹ್ಮದ್ ಬಳಿ ಗಿರೀಶ್ ಕಟ್ಟಿಮನಿ ಹಣವನ್ನು ವಾಪಸ್ ಕೊಡುವಂತೆಯೂ ಕೇಳುತ್ತ ಬಂದಿದ್ದರು. ಆ ಸಂದರ್ಭದಲ್ಲಿ, ವ್ಯವಹಾರದಲ್ಲಿ ನಷ್ಟವಾಗಿದ್ದು, ಹಣವನ್ನು ಇನ್ನೂ ಸ್ವಲ್ಪ ದಿನಗಳಲ್ಲಿಯೇ ವಾಪಸ್ ಕೊಡುತ್ತೇನೆ ಎಂದು ಹೇಳಿದ್ದರು.
ಜುಲೈ ೧೦ರಂದು ರಾತ್ರಿ ೮.೩೦ರ ಸಮಯಕ್ಕೆ ಫಿರ್ಯಾದಿ ಶಬ್ಬೀರಹ್ಮದ್ ಮನೆಗೆ ಬಂದ ಇನ್ನೊಬ್ಬ ಆರೋಪಿ ನವೀನ್ ರಮೇಶ್ ಕಟ್ಟಿಮನಿ, ಸದರಿ ಹಣಕಾಸಿನ ವಿಷಯವಾಗಿ ಮಾತನಾಡಲು ತನ್ನ ಅಣ್ಣ ಗಿರೀಶ್ ಕರೆಯುತ್ತಿದ್ದಾನೆ ಬಾ ಎಂದು ಹೇಳಿ ತನ್ನ ಸಂಗಡವೇ ಗದಗ ರೈಲ್ವೇ ನಿಲ್ದಾಣದ ಬಳಿಯಿರುವ ದುರ್ಗಾದೇವಿ ಗುಡಿಯ ಹಿಂದಿನ ಮೈದಾನಕ್ಕೆ ಕರೆದುಕೊಂಡು ಹೋಗಿದ್ದಾನೆ.
ಅಲ್ಲಿ ಆರೋಪಿ ಗಿರೀಶ್ ಹಾಗೂ ಅವನ ತಮ್ಮ ನವೀನ್ ಇಬ್ಬರೂ ಸೇರಿಕೊಂಡು ಜೀವಕ್ಕೆ ಹಾನಿ ಮಾಡುವ ಉದ್ದೇಶದಿಂದ ‘ನಮ್ಮ ಹಣ ವಾಪಸ್ ಕೊಡ್ತೀಯೋ ಇಲ್ಲವೋ’ ಎಂದು ಕೆಟ್ಟ ಶಬ್ಧಗಳಿಂದ ಬೈದು ಹೊಡಿಬಡಿ ಮಾಡಿದ್ದಲ್ಲದೇ ಅಲ್ಲಿಯೇ ಇದ್ದ ಕ್ರಿಕೆಟ್ ಸ್ಟಂಪ್ ಒಂದರಿಂದ ಫಿರ್ಯಾದಿ ಶಬ್ಬೀರಹ್ಮದ್‌ಗೆ ಏಕಾಏಕಿ ಬೆನ್ನು, ಕಾಲು, ಕೈಗಳ ಮೇಲೆ ಮುರಿದುಹೋಗುವಂತೆ ಹೊಡೆದು, ಇನ್ನೊಂದು ವಾರದಲ್ಲಿ ನಮ್ಮ ಹಣ ವಾಪಸ್ ಕೊಡದಿದ್ದರೆ ನಿನ್ನನ್ನು ಜೀವಸಹಿತ ಬಿಡುವದಿಲ್ಲ ಎಂದು ಬೆದರಿಕೆ ಹಾಕಿರುವ ಬಗ್ಗೆ ದೂರು ದಾಖಲಾಗಿದೆ.
ಗಿರೀಶ್ ರಮೇಶ್ ಕಟ್ಟಿಮನಿ ಹಾಗೂ ನವೀನ್ ರಮೇಶ ಕಟ್ಟಿಮನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಬೆಟಗೇರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರೋಡ್ ಗ್ರೇಡರ್ ವಾಹನ ಹಾಯ್ದು ವೃದ್ಧ ಸ್ಥಳದಲ್ಲೇ ಸಾವು

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ
 
ಇಲ್ಲಿಯ ಮಾರುತಿ ನಗರಕ್ಕೆ ಹೋಗುವ ಮೇಲುಸೇತುವೆ ಪಕ್ಕ ರಸ್ತೆ ಕಾಮಗಾರಿ ನಡೆಸುತ್ತಿದ್ದ ರೋಡ್ ಗ್ರೇಡರ್ ವಾಹನಕ್ಕೆ ಸಿಲುಕಿ ವೃದ್ಧನೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.
ಮೃತ ಪಟ್ಟ ವ್ಯಕ್ತಿ ಅಲ್ಲಾವುದ್ದೀನ ಇಮಾಮ್ ಹುಸೇನ ಪಾಣಿಗಟ್ಟಿ(೬೨) ಎಂದು ಗುರುತಿಸಲಾಗಿದೆ.
ಗ್ರಾಮದಲ್ಲಿ ತನ್ನ ಬ್ಯಾಂಕ್ ವ್ಯವಹಾರದ ಕಾರ್ಯವನ್ನು ಮುಗಿಸಿಕೊಂಡು ಮಾರುತಿ ನಗರದಲ್ಲಿ ಇರುವ ತನ್ನ ಮನೆಗೆ ತೆರಳುತ್ತಿದ್ದಾಗ ಬ್ರಿಡ್ಜ ಪಕ್ಕ ಹೆದ್ದಾರಿ ರಸ್ತೆ ಕಾಮಗಾರಿ ನಡೆಸುತ್ತಿದ್ದ ರೋಡ್ ಗ್ರೇಡರ್ ವಾಹನಕ್ಕೆ ಸಿಲುಕಿ ವೃದ್ಧ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ. ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ರಿವನ ಮಠದ ಜಾತ್ರೆ ಅದ್ಧೂರಿಯಾಗಿ ಆಚರಿಸಲು ನಿರ್ಧಾರ

0

ವಿಜಯಸಾಕ್ಷಿ ಸುದ್ದಿ, ನರಗುಂದ:

ಇಲ್ಲಿನ ಪುಣ್ಯರಣ್ಯ ಪತ್ರಿವನ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಕರೆದ ಪೂರ್ವಭಾವಿ ಸಭೆಯಲ್ಲಿ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿತು.

ಶ್ರೀ ಗುರು ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಪತ್ರಿವನಮಠ ಇವರ ದಿವ್ಯ ಸಾನಿಧ್ಯದಲ್ಲಿ ನೆಡೆದ ಪೂರ್ವಭಾವಿ ಸಭೆಯಲ್ಲಿ ಮಠದ ಸಕಲ ಸದ್ಭಕ್ತರು ಭಾಗವಹಿಸಿ, ಆಗಸ್ಟ್ ಮೂರರಿಂದ ಜಾತ್ರಾ ಕಾರ್ಯಕ್ರಮ ನೆಡೆಸಲು ನಿರ್ಧರಿಸಲಾಗಿದ್ದು, ಏಳು ದಿನಗಳ ಕಾಲ ಜಾತ್ರೆ ನಡೆಯಲಿದೆ.

ಪ್ರತಿ ದಿನ ಒಂದೊಂದು ಊರಿನಿಂದ ಊಟದ ವ್ಯವಸ್ಥೆ ಮಾಡಲಾಗುವುದು, ಆಗಸ್ಟ್ 10 ರಂದು ತೇರು ಎಳೆಯಲು ನಿರ್ಧರಿಸಲಾಗಿದೆ. ಜಾತ್ರೆಯುದ್ದಕ್ಕೂ ವಿಶೇಷ ಕಾರ್ಯಕ್ರಮ ಜರುಗಲಿದ್ದು, ಜಾತ್ರೆಯ ಕೊನೆಯ ದಿನ ಧರ್ಮಸಭೆ ನೆಡೆಸಲು ನಿರ್ಧರಿಸಲಾಗಿದೆ ಎಂದು ಶ್ರೀ ಗುರು ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಪತ್ರಿವನಮಠ ಇವರು ಸಕಲ ಸದ್ಭಕ್ತರು ಸಮ್ಮುಖದಲ್ಲಿ ತಿಳಿಸಿದರು.

ಭೀಕರ ಅಪಘಾತ, ಇಬ್ಬರು ಸ್ಥಳದಲ್ಲಿಯೇ ಸಾವು; ಬಿಸಿಎಂ ತಾಲ್ಲೂಕಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಮ್ಯಾನೇಜರ್ ಸಾವು

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ:

ಗೂಡ್ಸ್ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಅಧಿಕಾರಿಗಳು ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಪರಸಾಪೂರ ಕ್ರಾಸ್ ಬಳಿ ನಡೆದಿದೆ.

ಮೃತರನ್ನು ಶಿರಹಟ್ಟಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕಾಧಿಕಾರಿ ಅಶೋಕ್ ಪಾಟೀಲ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಮ್ಯಾನೇಜರ್‌ ವಿ ಎಸ್ ಬೂದಿಹಾಳ ಎಂದು ಗುರುತಿಸಲಾಗಿದೆ.

ಅಪಘಾತ ಬಳಿಕ ಗೂಡ್ಸ್ ವಾಹನವೂ ಪಲ್ಟಿಯಾಗಿದ್ದು ಚಾಲಕ ಪರಾರಿಯಾಗಿದ್ದಾನೆ. ಸುದ್ದಿ ತಿಳಿದ
ಶಿರಹಟ್ಟಿ ಸಿಪಿಐ ವಿಕಾಸ ಲಮಾಣಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.

ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿ ಥಳಿಸಿ ಬೈಕ್ ಜಖಂಗೊಳಿಸಿದ ಪುಡಾರಿಗಳು

ವಿಜಯಸಾಕ್ಷಿ ಸುದ್ದಿ, ಬೆಟಗೇರಿ:

ಮೊಬೈಲ್ ವಿಷಯಕ್ಕಾಗಿ ಯುವಕರ ನಡುವೆ ಪ್ರಾರಂಭವಾದ ಜಗಳ ಮಾರಾಮಾರಿಯವರೆಗೂ ಹೋಗಿ ಇದೀಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವವರೆಗೆ ತಲುಪಿದೆ.

ಬೆಟಗೇರಿಯ ರಂಗಾವಧೂತ ನಗರದ ವೀರೇಶ ರೇವಪ್ಪ ನಿಟ್ಟಾಲಿ ಹಾಗೂ ಆರೋಪಿ ಶರಣಬಸವೇಶ್ವರ ನಗರದ ಜಾವೇದ ಬ್ಯಾಳಿರೊಟ್ಟಿ ಮತ್ತು ಕುರಹಟ್ಟಿ ಪೇಟೆಯ ಸೈಫುಲ್ಲ ನಡುವೆ ವಾರದ ಹಿಂದೆ ಮೊಬೈಲ್ ವಿಷಯಕ್ಕೆ ಸಂಬಂಧಿಸಿದಂತೆ ಜಗಳವಾಗಿತ್ತು. ಇದೇ ದ್ವೇಷವನ್ನಿಟ್ಟುಕೊಂಡು ಜುಲೈ 5ರಂದು ಮದ್ಯಾಹ್ನ 12-30ರ ಸುಮಾರಿಗೆ ಗದಗದ ವಿ.ಡಿ.ಎಸ್.ಟಿ.ಸಿ ಕಾಲೇಜು ಮೈದಾನದ ಹತ್ತಿರದ ರಸ್ತೆಯಲ್ಲಿ ವೀರೇಶ ತನ್ನ ಬೈಕ್ ಮೇಲೆ ಹೋಗುತ್ತಿದ್ದಾಗ, ಆರೋಪಿತರು ಆಟೋದಲ್ಲಿ ಬಂದವರೇ ರಸ್ತೆಯಲ್ಲೇ ನಿಲ್ಲಿಸಿ, `ಏನಲೇ, ನಿನ್ನ ಆಟ ಭಾಳ ಆಗೈತಿ. ನಮ್ಮ ಹುಡುಗರಿಗೆ ಸಿಟ್ಟಿನ ಮುಖದಿಂದ ನೋಡತೀಯಂತ? ಏನ್ ಮಾಡ್ತೀ, ಈಗ ಮಾಡಿ ತೋರಿಸು’ ಎಂದು ಅವಾಚ್ಯ ಶಬ್ಧಗಳಿಂದ ಬೈದಾಡುತ್ತ, ಆರೋಪಿ ಜಾವೇದ ಹಾಗೂ ಇತರರು ಸೇರಿ ತಮ್ಮ ಕೈಲಿದ್ದ ಬಡಿಗೆಯಿಂದ ವೀರೇಶನ ಬೆನ್ನು, ಕೈಕಾಲುಗಳ ಮೇಲೆ ಹೊಡೆಯಲು ಪ್ರಾರಂಭಿಸಿದ್ದು, ವೀರೇಶ ಭಯಗೊಂಡು ಅಲ್ಲಿಂದ ತಪ್ಪಿಸಿಕೊಂಡು ಓಡಿದ್ದಾನೆ. ಆರೋಪಿತರೂ ಕೂಡ ವೀರೇಶನ ಬೆನ್ನಟ್ಟಿದ್ದಾರೆ.

ವೀರೇಶ ಅವರಿಂದ ತಪ್ಪಿಸಿಕೊಂಡು ಸ್ವಲ್ಪದೂರ ಓಡಿದಾಗ, ಆರೋಪಿತರು ಅಲ್ಲೇ ನಿಲ್ಲಿಸಿದ್ದ ಫಿರ್ಯಾದಿಯ ಬೈಕ್ ಕಡೆಗೆ ಬಂದು, ಎಲ್ಲರೂ ಸೇರಿ ಅದನ್ನು ಕೆಡವಿ ತಮ್ಮ ಕೈಲಿದ್ದ ಬಡಿಗೆಯಿಂದ ಬಡಿದು, ದೊಡ್ಡ ಕಲ್ಲನ್ನು ಎತ್ತಿ ಬೈಕಿನ ಮೇಲೆ ಹಾಕಿ ಹಾನಿಗೊಳಿಸಿರುವದಾಗಿ ಹಾಗೂ ಜೀವ ಬೆದರಿಕೆ ಹಾಕಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಜಾವೇದ ಬ್ಯಾಳಿರೊಟ್ಟಿ, ಸಾಹಿಲ್, ಸೋಹೆಲ್, ರಾಕೇಶ್, ಅಭಿಷೇಕ್, ಯಶವಂತ್, ಸೈಫುಲ್, ಅಭಿಷೇಕ್ ಹಾಗೂ ವಿನೋದ್ ಎಂಬ ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಬೆಟಗೇರಿ ಬಡಾವಣೆ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಶಾಸಕ ರಾಮಣ್ಣ ಲಮಾಣಿ ಲೆಟರ್ ಹೆಡ್ ಅವಾಂತರ; ನಮ್ಮ ಕಾರ್ಯಕರ್ತ, ಗಾಡಿ‌ ಹಿಡಿಬೇಡಿ!

ವಿಜಯಸಾಕ್ಷಿ ಸುದ್ದಿ, ಗದಗ:

ಸಾರ್ವಜನಿಕ ಕಾರ್ಯಗಳಿಗೆ ಜನಪ್ರತಿನಿಧಿಗಳ ಲೆಟರ್ ಹೆಡ್ ಬಳಕೆಯಾಗುವುದು ಸಾಮಾನ್ಯ. ಆದರೆ “ಇಂಥ ವಾಹನ ಯಾರೂ ಹಿಡಿಯಬೇಡಿ, ಯಾಕೆಂದರೆ ಅವನು ನಮ್ಮ ಪಕ್ಷದ ಕಾರ್ಯಕರ್ತ” ಎಂದು ಜನಪ್ರತಿನಿಧಿ ತನ್ನ ಲೆಟರ್ ಹೆಡ್‌ನಲ್ಲಿ ಬರೆದು ಸಹಿ ಹಾಕಿ ಕೊಡುವುದು ಮಾತ್ರ ವಿಚಿತ್ರ.

ಗದಗ ಜಿಲ್ಲೆಯ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಇಂಥ ಅವಾಂತರಕ್ಕೆ‌ ತುತ್ತಾಗುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಶಾಸಕ ಸಾರ್ವಜನಿಕ ಹಿತ ಕಾಯದ ಕೆಲಸಗಳಿಗೆ ತಮ್ಮ ಲೆಟರ್ ಹೆಡ್‌ನಲ್ಲಿ ಸಹಿ ಹಾಕಿ ಕೊಟ್ಟು ಪೇಚಿಗೆ ಸಿಲುಕಿದ್ದರು. ಈಗ ಮತ್ತೇ ಅಂಥ ಅವಾಂತರಕ್ಕೆ ಸಿಲುಕಿದ್ದಾರೆ.

ಆಗಿದ್ದಾದರೂ ಏನು?:

ಶಿರಹಟ್ಟಿ ತಾಲೂಕಿನ ಬೆಳಗಟ್ಟಿ ಗ್ರಾಮದ ಬಸವರಾಜ ಎಂಬಾತನಿಗೆ ಶಾಸಕ ರಾಮಣ್ಣ ಲಮಾಣಿಯವರು ತಮ್ಮ ಲೆಟರ್ ಹೆಡ್ ಕೊಟ್ಟಿದ್ದಾರೆ. ಆ ಪತ್ರಕ್ಕೆ ವಿಷಯವನ್ನು ಓದಿಯೊ? ಓದದೆಯೊ? ಸಹಿ ಹಾಕಿದ್ದಾರೆ. ಅದರಲ್ಲಿದ್ದ ವಿಷಯ, ಜಿ.ಬಸವರಾಜ ಎಂಬುವವರು ನಮ್ಮ ಶಿರಹಟ್ಟಿ ಮತ ಕ್ಷೇತ್ರದವರು. ನಮ್ಮ ಪಕ್ಷದ ಕಾರ್ಯಕರ್ತರು, ಬಹಳ ಚಿರಪರಿಚಿತರು. ಇವರು AP 39 V 3517 ನೋಂದಣಿ ಸಂಖ್ಯೆಯ ಬೊಲೆರೊ ವಾಹನವನ್ನು ಹೊಂದಿದ್ದು, ಇದನ್ನು ಹಿಡಿಯಬಾರದು, ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು ಎಂಬ ಸಾರವಿರುವ ಪತ್ರಕ್ಕೆ ಸಹಿ ಹಾಕಿ ಕೊಟ್ಟಿದ್ದು ಪತ್ರ ವೈರಲ್ ಆಗಿದೆ.

ಶಾಸಕ ಲಮಾಣಿಯವರ ಲೆಟರ್ ಹೆಡ್ ಬೇಕಾಬಿಟ್ಟಿಯಾಗಿ ಬಳಕೆ, ದುರ್ಬಳಕೆ ಆಗುತ್ತವೆ. ಯಾರೂ ಕೇಳಿದ್ರೂ ಖಾಲಿ ಲೆಟರ್ ಹೆಡ್‌ಗೆ ಸಹಿ ಮಾಡಿ ಕೊಡುತ್ತಾರೆ ಎಂಬ ಆರೋಪ ಕೇಳ ಬಂದಿದೆ.

“ಶಾಲಾ‌ ಮಕ್ಕಳ ಕಾರ್ಯಕ್ರಮದಲ್ಲಿದ್ದಾಗ ಬಂದಿದ್ದ. ನಾನು ಗದ್ದಲದಲ್ಲಿ ಇದ್ದುದರಿಂದ ಪತ್ರಕ್ಕೆ ಸಹಿ ಹಾಕಿದೆ. ಮೋಸದಿಂದ ಪತ್ರಕ್ಕೆ ಸಹಿ ಹಾಕಿಸಿಕೊಂಡು ಹೋಗಿರುವ ಅವನು ಯಾರು ಎಂಬುದು ನನಗೆ ಗೊತ್ತೇ ಇಲ್ಲ. ಈ ಬಗ್ಗೆ ಶಿರಹಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ನಾಳೆ ಅವನನ್ನು ಹಿಡಿದು ತಂದು ವ್ಯವಸ್ಥೆ ಮಾಡ್ತಾರೆ.

-ರಾಮಣ್ಣ ಲಮಾಣಿ, ಶಾಸಕರು, ಶಿರಹಟ್ಟಿ.

ಗದಗ ಜಿಲ್ಲಾಧಿಕಾರಿ ಸುಂದರೇಶ್ ಬಾಬು ವರ್ಗಾವಣೆ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯನ್ನಾಗಿ ಹೊನ್ನಾಂಬ ಅವರನ್ನು ಸರಕಾರ ಸೋಮವಾರ ನಿಯೋಜಿಸಿದೆ.

ಇಲ್ಲಿನ ಜಿಲ್ಲಾಧಿಕಾರಿಯಾಗಿದ್ದ ಎಂ.ಸುಂದರೇಶ ಬಾಬು ಅವರನ್ನು ಬೆಂಗಳೂರು ಸ್ಮಾರ್ಟ್ ಸಿಟಿ ಕಾರ್ಪೊರೇಷನ್‌ಗೆ ವರ್ಗಾವಣೆ ಮಾಡಲಾಗಿದ್ದು ವ್ಯವಸ್ಥಾಪಕ ನಿರ್ದೇಶಕ ಹುದ್ದೆ ನೀಡಲಾಗಿದೆ.

ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿಯಾಗಿದ್ದ ಹೊನ್ನಾಂಬ ಅವರನ್ನು ಗದಗ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸರಕಾರ ವರ್ಗಾವಣೆ ಮಾಡಿದೆ.

ಜೂಜಾಟ ಆಡುತ್ತಿದ್ದವರ ಬಂಧನ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ:

ಪಟ್ಟಣದ ಚಹಾ ಅಂಗಡಿಯೊಂದರ ಮುಂದೆ ಸಾರ್ವಜನಿಕವಾಗಿ ಇಸ್ಪೀಟ್ ಆಟ ಆಡುತ್ತಿದ್ದವರಲ್ಲಿ ಐವರನ್ನು ಪೊಲೀಸರು ಬಂಧಿಸಿದ ಘಟನೆ ಶಿರಹಟ್ಟಿ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಪೊಲೀಸ್ ದಾಳಿಯ ಸಮಯದಲ್ಲಿ ಇನ್ನೂ ಕೆಲವರು ತಪ್ಪಿಸಿಕೊಂಡಿದ್ದು ಅವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆಂದು ತಿಳಿದು ಬಂದಿದೆ.

ಕುಬೇರ ಶಂಕ್ರಪ್ಪ ಲಮಾಣಿ, ಉಮೇಶ ಹನುಮಂತಪ್ಪ ಲಮಾಣಿ, ಮಾನಪ್ಪ ಡಾಕಪ್ಪ ಲಮಾಣಿ, ಮುತ್ತಪ್ಪ ಠಾಕರೆಪ್ಪ ಲಮಾಣಿ, ಪ್ರದೀಪ ಮರಿಯಪ್ಪ ಬೂದಿಹಾಳ ಬಂಧಿತರು. ಬಂಧಿತರು 7850 ರೂ. ಹಣವನ್ನು ಪಣಕ್ಕೆ ಕಟ್ಟಿ ಆಡುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಶಿರಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.