ಜಿಲ್ಲೆಯ ರೋಣ ತಾಲೂಕಿನ ಮಲ್ಲಾಪುರ ಗ್ರಾಮದ ರೈಲ್ವೇ ಗೇಟ್ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.
ಸಂತೋಷ ವಸಂತ ಛಲವಾದಿ ಎಂಬ ವ್ಯಕ್ತಿಯು ಪಾನ್ ಶಾಪ್ ನಡೆಸುತ್ತಿದ್ದು ಅಕ್ರಮವಾಗಿ ಸಾರ್ವನಿಕರಿಗೆ ಮದ್ಯವನ್ನು ಮಾರಾಟ ಮಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನಿಂದ 700ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ರೋಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಡಂಬಳ ಗ್ರಾಮದ ಹೊಸ ಬಸ್ ನಿಲ್ದಾಣದ ಬಳಿ ಇರುವ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ವ್ಯಕ್ತಿಯೊಬ್ಬ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಪೊಲೀಸರಿಗೆ ಸಿಕ್ಕುಬಿದ್ದಿದ್ದಾನೆ.
ರಂಗಪ್ಪ ಹನಮಪ್ಪ ಹರಿಜನ ಎಂಬುವವನೇ ಬಂಧಿತ ವ್ಯಕ್ತಿ. ಸುಮಾರು 1686 ರೂ. ಮೌಲ್ಯದ ಮದ್ಯವನ್ನು ಆತ ಮಾರಾಟ ಮಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಅವನ ಬಳಿ ತಲಾ 35.13 ರೂ.ಮುಖಬೆಲೆಯ 90 ಎಂ.ಎಲ್. ನ 48ಟೆಟ್ರಾ ಪ್ಯಾಕೇಟುಗಳು ಸಿಕ್ಕಿದ್ದು ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ್ಕಾರವು ಹೊಸದಾಗಿ ಜಾರಿಗೆ ತಂದಿರುವ ಇಆರ್‌ಎಸ್‌ಎಸ್-112 ಯೋಜನೆಯಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಗಳ ಬಗ್ಗೆ ಜಿಲ್ಲೆಯ ಸಾರ್ವಜನಿಕರಲ್ಲಿ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.
ಜೂನ್.19ರಂದು ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಮಹಿಳೆಯೊಬ್ಬಳು ಕೌಟುಂಬಿಕ ಕಲಹದಿಂದ ಮನನೊಂದು ಆತ್ಮಹತ್ಯೆಯ ನಿರ್ಧಾರ ತಳೆದು ನಗರದ ಹೊರವಲಯದ ಕೆರೆಯ ಬಳಿ ಹೋಗುತ್ತಿದ್ದಾಗ ಇಆರ್‌ಎಸ್‌ಎಸ್ ಕರ್ತವ್ಯದ ಮೇಲಿದ್ದ ಸಿಬ್ಬಂದಿಗಳು ಆ ಮಹಿಳೆಯನ್ನು ತಡೆದು, ವಿಚಾರಣೆ ನಡೆಸಿ ಧೈರ್ಯ ತುಂಬುವ ಸಾಂತ್ವನದ ಮಾತುಗಳನ್ನಾಡಿ, ಮನಃಪರಿವರ್ತನೆ ಮಾಡಿದ್ದಾರೆ ಮತ್ತು ಕ್ಷುಲ್ಲಕ ಕಾರಣಗಳಿಗೆ ಜೀವ ಕಳೆದುಕೊಳ್ಳುವ ನಿರ್ಧಾರ ತಾಳಬಾರದೆಂದು ಆತ್ಮವಿಶ್ವಾಸ ಮೂಡಿಸಿದ್ದರು.
ಇದೇ ರೀತಿ ತಾಲೂಕಿನ ಕಣಗಿಹಾಳ ಗ್ರಾಮದ ಹತ್ತಿರವಿರುವ ರೈಲ್ವೇ ಟ್ರಾಕ್ ಬಳಿ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುವದಕ್ಕಾಗಿ ಟ್ರಾಕ್‌ನ ಹತ್ತಿರ ಹೋಗುತ್ತಿದ್ದಾಗಲೂ ಇಆರ್‌ಎಸ್‌ಎಸ್ ಸಿಬ್ಬಂದಿಗಳು ಆ ಮಹಿಳೆಗೆ ಬುದ್ಧಿವಾದ ಹೇಳಿ ಸುರಕ್ಷಿತವಾಗಿ ತನ್ನ ಮನೆ ತಲುಪುವಂತೆ ಮಾಡಿದ್ದರು.
ಜುಲೈ.6, ಬುಧವಾರ ನಸುಕಿನ 3 ಗಂಟೆಯ ಸುಮಾರಿಗೆ ಗದಗ ನಗರದ ಹೊರವಲಯದಲ್ಲಿರುವ ಸಾರಿಗೆ ನಗರದ ಬಳಿ ಮನೆಗಳ್ಳತನದ ತಯಾರಿಯೊಂದಿಗೆ ಗುದ್ದಲಿ, ಕಬ್ಬಿಣದ ರಾಡ್ ಇತ್ಯಾದಿಗಳೊಂದಿಗೆ ಬೈಕ್ ಹತ್ತಿರ ನಿಂತಿದ್ದ ಆರೋಪಿತನನ್ನು ಗಸ್ತಿನಲ್ಲಿದ್ದ ಇಆರ್‌ಎಸ್‌ಎಸ್ ಸಿಬ್ಬಂದಿಗಳು ಬೆನ್ನಟ್ಟಿ ಹಿಡಿದು ವಿಚಾರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಜೂನ್.೨೪ರಂದು ದಾಖಲಾಗಿದ್ದ ಮನೆಗಳ್ಳತನದ ಆರೋಪಿಯೂ ಈತನೇ ಎಂದು ತಿಳಿದುಬಂದಿದ್ದು, ಸದರಿ ಆರೋಪಿತನಿಂದ 2.5 ಲಕ್ಷ. ರೂ ಬೆಲೆಬಾಳುವ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಎಲ್ಲ ಸಂದರ್ಭಗಳಲ್ಲೂ ಧನಾತ್ಮಕವಾಗಿ ಸ್ಪಂದಿಸಿದ ಅಧಿಕಾರಿ/ಸಿಬ್ಬಂದಿಗಳಾದ ಗ್ರಾಮೀಣ ಠಾಣೆಯ ಎಎಸ್ಐ ಎನ್ ಎಫ್ ಬೆಟಗೇರಿ, ಡಿಎಆರ್ ನ ಎಆರ್ ಎಸ್ಐ ಆರ್ ಎಸ್ ರಾಠೋಡ, ಸಿಬ್ಬಂದಿಗಳಾದ ಎಂ.ಎಸ್. ಅಂಗಡಿ(ನಿಸ್ತಂತು), ಎಂ.ಎಸ್. ನೂರುಖಾನವರ(ಎಚ್.ಸಿ), ಎಂ.ಎಸ್. ದೊಡ್ಡಮನಿ(ಮುಳಗುಂದ ಠಾಣೆ) ಹಾಗೂ ನಿಯಾಜ್ ಅಹ್ಮದ್.ಎನ್. ದಳವಾಯಿ, ಎಸ್ ಎಸ್ ತೇಲಸಂಗಿ, ಬಿ ಆರ್ ಚೌಡರ್, ಕೆ ಬಿ ಕಂಬಳಿ ಇವರನ್ನು “Best Responder Of The Month” ಎಂದು ಗುರುತಿಸಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಪ್ರಶಂಸನಾ ಪತ್ರ ನೀಡಿ ಗೌರವಿಸಿ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕ ಶಿವಪ್ರಕಾಶ ದೇವರಾಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರು ಯಾವುದೇ ಸಂದರ್ಭದಲ್ಲೂ ಧೃತಿಗೆಡದೇ ಪೊಲೀಸ್ ಇಲಾಖೆಯ ಸಹಕಾರ ಅವಶ್ಯವೆನಿಸಿದಲ್ಲಿ ತಕ್ಷಣ ಇಲಾಖೆಯ ಸಹಾಯವಾಣಿ ಇಆರ್‌ಎಸ್‌ಎಸ್-112 ಸಂಪರ್ಕಿಸಿ. ನಮ್ಮ ಸಿಬ್ಬಂದಿಗಳು ಸದಾ ಸಹಕಾರಕ್ಕೆ ಸಿದ್ಧವಾಗಿದ್ದಾರೆ ಎಂದು ಪೊಲೀಸ್ ಅಧೀಕ್ಷಕರು ಸಾರ್ವಜನಿಕರಿಗೆ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಸತತವಾಗಿ ಸುರಿಯುತ್ತಿರುವ ಮಳೆಯ ಪರಿಣಾಮವಾಗಿ ಜನರು ಕಂಗೆಟ್ಟಿದ್ದಾರೆ. ರೋಣ ತಾಲೂಕಿನ ಮೇಗೂರು ಗ್ರಾಮದಲ್ಲಿಯೂ ವರುಣರಾಯನ ಆರ್ಭಟದಿಂದ ಸಾಕಷ್ಟು ಕಷ್ಟನಷ್ಟಗಳನ್ನು ಸಂಭವಿಸುತ್ತಿದೆ. ಸಾರ್ವಜನಿಕರು ಮಳೆಯ ಪರಿಣಾಮವಾಗಿ ಶನಿವಾರ ನಸುಕಿನಲ್ಲಿ ಮೇಗೂರಿನ ಶಿವಾನಂದ ಅರಹುಣಸಿ ಎಂಬುವರ ಮನೆಯ ಛಾವಣಿ ಸಂಪೂರ್ಣ ನೆಲಕಚ್ಚಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಶಿವಾನಂದ ಅರಹುಣಸಿ ಎಂಬುವರ ಮನೆಯೊಳಗೆ ರಾತ್ರಿ ಕುಟುಂಬದ ಏಳು ಸದಸ್ಯರು ಮಲಗಿ ನಿದ್ರಿಸಿದ್ದರು. ನಸುಕಿನ ವೇಳೆಯಲ್ಲಿ ದೊಡ್ಡದಾದ ಸದ್ದು ಕೇಳಿಬರತೊಡಗಿತು. ಏಕಾಏಕಿ ಕೇಳಿಬಂದ ಶಬ್ಧ ಎಲ್ಲಿಂದ, ಏನು ಎಂದೂ ಯೋಚಿಸದೇ ತಕ್ಷಣ ಮನೆಯಿಂದ ಹೊರಭಾಗಕ್ಕೆ ಬಂದು ನಿಂತಿದ್ದು ನೋಡನೋಡುತ್ತಿದ್ದಂತೆ ಇಡೀ ಮನೆಯ ಮೇಲ್ಛಾವಣಿ ಕುಸಿದು ನೆಲಕ್ಕೆ ಬಿದ್ದಿದೆ ಎನ್ನಲಾಗಿದೆ. ತಕ್ಷಣ ಎಚ್ಚೆತ್ತು ಸ್ಥಳದಿಂದ ಹೊರಕ್ಕೆ ಬಂದ ಪರಿಣಾಮ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಛಾವಣಿ ಕುಸಿದ ಪರಿಣಾಮವಾಗಿ ಲಕ್ಷಾಂತರ ರೂ. ಮೌಲ್ಯದ ಅಡುಗೆ ಸಾಮಗ್ರಿ ಹಾಗೂ ಇನ್ನಿತರೇ ವಸ್ತುಗಳು ಹಾನಿಗೊಂಡಿವೆ.
ವಿಷಯ ತಿಳಿಯುತ್ತಿದ್ದಂತೆಯೇ ಜಿ.ಪಂ ಸದಸ್ಯ ಶಿವಕುಮಾರ ನೀಲಗುಂದ ಸ್ಥಳಕ್ಕೆ ಆಗಮಿಸಿ ಹಾನಿಯನ್ನು ಪರಿಶೀಲಿಸಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ.
ಹಳೆಯ ಯಾವುದೋ ಒಂದು ವಿಷಯವನ್ನು ಇಟ್ಟುಕೊಂಡು ವಿದ್ಯಾರ್ಥಿಯೊಬ್ಬನಿಗೆ ವ್ಯಕ್ತಿಯೊಬ್ಬ ಅವಾಚ್ಯ ಶಬ್ಧಗಳಿಂದ ಬೈದು ಫೋನಿನಲ್ಲಿ ಕೀಳುಮಟ್ಟದ ಶಬ್ಧಗಳಿಂದ ಬೈದು ತಾನು ಪಿಎಸ್‌ಐ ಇದ್ದೇನೆ ಎಂದು ಸುಳ್ಳು ಹೇಳಿ ಬೆದರಿಸಿರುವ ಬಗ್ಗೆ ಪ್ರಕರಣವೊಂದು ರೋಣದಿಂದ ವರದಿಯಾಗಿದೆ.
ಘಟನೆಯ ವಿವರ
ದೂರು ನೀಡಿರುವ ವಿದ್ಯಾರ್ಥಿ ರೋಣದ ವಿಜಯ ದೇವಪ್ಪ ಮಡಿವಾಳರ ಆಗಿದ್ದು, ಈತ ನಿತ್ಯ ರೋಣದಿಂದ ಗಜೇಂದ್ರಗಢ ಪಟ್ಟಣದಲ್ಲಿರುವ ಸರ್ಕಾರಿ ಡಿಪ್ಲೋಮಾ ಕಾಲೇಜಿಗೆ ವ್ಯಾಸಂಗಕ್ಕಾಗಿ ಹೋಗುತ್ತಿದ್ದ. ರೋಣದವನೇ ಆದ ಸಂತೋಷ ಫಕೀರಪ್ಪ ಚಲವಾದಿ ಎಂಬ ವ್ಯಕ್ತಿ ಪರಿಚಯದವನಿರುತ್ತಾನೆ.
ಈಗೊಂದು ವರ್ಷದ ಹಿಂದೆ ವಿಜಯ ಮಡಿವಾಳರನ ಸ್ನೇಹಿತ ಸತೀಶ ಉಳ್ಳಾಗಡ್ಡಿ ಎಂಬುವನ ಅಣ್ಣ ಸಂಜು ಉಳ್ಳಾಗಡ್ಡಿ ಈತ ಫಿರ್ಯಾದಿಯ ಸ್ನೇಹಿತ ಸಂತೋಷ ಚಲವಾದಿ ಹಾಗೂ ಇನ್ನೂ ಕೆಲವರ ಮೇಲೆ ಯಾವುದೋ ವಿಷಯಕ್ಕೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಸಂತೋಷ ಹಾಗೂ ಅವನ ತಮ್ಮ ನಾಗರಾಜ ಚಲವಾದಿ ಇಬ್ಬರೂ ಸೇರಿಕೊಂಡು ಎದುರಾದಾಗಲೆಲ್ಲಾ ನಮ್ಮ ವೈರಿ ಸತೀಶ ಉಳ್ಳಾಗಡ್ಡಿಯ ಜೊತೆ ಅಡ್ಡಾಡಬೇಡ. ಅವನ ಸಹವಾಸ ಬಿಟ್ಟುಬಿಡು. ಇಲ್ಲವಾದರೆ ನಿನಗೂ ಒಂದು ಗತಿ ಕಾಣಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.
ಇದಾದ ಬಳಿಕ, ಜುಲೈ.೧ರಂದು ಬೆಳಿಗ್ಗೆ ೮-೩೦ರ ಹೊತ್ತಿಗೆ ಕಾಲೇಜಿಗೆ ತೆರಳುತ್ತಿದ್ದ ವಿಜಯ ಮಡಿವಾಳರ ರೋಣ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಸಂತೋಷ ಚಲವಾದಿ ಇವನ ಹತ್ತಿರವೇ ಬಂದು, `ಲೇಯ್, ಬೋ…ಮಗನೇ ವಿಜಯ, ಶಿವಪೇಟೆಯ ಹುಡುಗ್ರ ಜೊತಿ ಅಡ್ಯಾಡಬೇಡ ಅಂತ ನಿನಗೆ ಮೊದಲೇ ಹೇಳಿದ್ದೆ ಹೌದಿಲ್ಲೋ? ಮತ್ಯಾಕ ಅವರ ಜೋಡಿ ಓಡಾಡ್ತಿದ್ದೀ? ನಿನಗೊಂದು ಗತಿ ಕಾಣಿಸ್ತೇನಿ ನೋಡ್ತಿರು ಎಂದು ಬೆದರಿಕೆ ಹಾಕಿದ್ದ.
ನಂತರ ಜುಲೈ.೪ರ ರಾತ್ರಿ ೮-೫೬ರ ಹೊತ್ತಿಗೆ ವಿಜಯ ಮಡಿವಾಳರ ಮೊಬೈಲ್ ನಂಬರಿಗೆ ಕರೆಯೊಂದು ಬಂದಿದ್ದು, ಯಾರು ಮಾತಾಡ್ತಿರೋದು ಅಂತ ಕೇಳಿದಾಗ ಆ ವ್ಯಕ್ತಿಯು`ಸಂತೂಗೆ ಏನು ಮಾತಾಡಿದಿ ನೀನು? ನಾನು ಪಿ.ಎಸ್.ಐ ಅದೀನಲೇ ಎಂದು ಧಮಕಿ ಹಾಕಿ ಅವಾಚ್ಯ ಶಬ್ಧಗಳಿಂದ ಬೈದು ಬೆದರಿಸಿದ್ದಾರೆ.
ಅಲ್ಲದೇ ಅದೇ ದಿನ ರಾತ್ರಿ ೧೦ ಗಂಟೆಯ ಹೊತ್ತಿಗೆ ಆರೋಪಿ ಸಂತೋಷ ಹಾಗೂ ನಾಗರಾಜ ಫಕೀರಪ್ಪ ಚಲವಾದಿ ಇಬ್ಬರೂ ಕೂಡಿಕೊಂಡು ವಿಜಯನ ಮನೆಯ ಬಳಿಯೇ ಬಂದು ಅವನ ತಂದೆ ದೇವಪ್ಪ ಮಡಿವಾಳರ ಇವರಿಗೆ `ನಿಮ್ಮ ಮಗ ವಿಜಯನಿಗೆ ಬುದ್ಧಿ ಹೇಳಿ. ಸತೀಶ ಉಳ್ಳಾಗಡ್ಡಿ ಸಂಗಡ ಅಡ್ಡಾಡಲಿಕ್ಕೆ ಬಿಡಬೇಡ್ರಿ. ಹಾಗೆ ಮತ್ತೆ ಅಡ್ಡಾಡಿದ್ದು ಕಂಡಿದ್ದೇ ಹೌದಾದರೆ ಆತನನ್ನು ಕೊಲೆ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿರುವ ಬಗ್ಗೆ ದೂರಿನಲ್ಲಿ ದಾಖಲಿಸಲಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ರೋಣದ ಪೊಲೀಸರು ತನಿಖೆ ನಡೆಸಿದ್ದಾರೆ.
ರಾಜ್ಯದ ಬೇಡ ಜಂಗಮರಿಗೆ ಸಂವಿಧಾನಿಕವಾಗಿ ಸಿಗಬೇಕಾದ ಜಾತಿ ಪ್ರಮಾಣ ಪತ್ರ ಪಡೆಯುವ ಉದ್ದೇಶದಿಂದ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸತ್ಯ ಪ್ರತಿಪಾದನಾ ಸತ್ಯಾಗ್ರಹದ ನೇತ್ರತ್ವ ವಹಿಸಿದ್ದ ಬಿ.ಡಿ.ಹಿರೇಮಠ ಅವರನ್ನು ಪೊಲೀಸರು ಬಂಧಿಸಿದ್ದನ್ನು ವಿರೋಧಿಸಿ ತಾಲ್ಲೂಕಾ ಬೇಡ ಜಂಗಮ ಸಮಾಜದವರಿಂದ ಬುಧವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಹೃದಯ ಭಾಗದಲ್ಲಿರುವ ನೀಲಮ್ಮನ ಕೆರೆಯ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ತಹಶೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ತಹಶೀಲ್ದಾರ್ ಅನಿಲ ಬಡಿಗೇರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕಾ ಬೇಡ ಜಂಗಮ ಸಮಾಜದ ಅಧ್ಯಕ್ಷ ಶ್ರೀಶೈಲ ಮೂಲಿಮನಿ ಮಾತನಾಡಿ, ಬೇಡ ಜಂಗಮರ ಜಾತಿ ಪ್ರಮಾಣ ಪತ್ರಕ್ಕಾಗಿ ಹಮ್ಮಿಕೊಂಡಿದ್ದ ಸತ್ಯಾಗ್ರಹದಲ್ಲಿ ರಾಜ್ಯಾಧ್ಯಕ್ಷರಾದ ಬಿ.ಡಿ.ಹಿರೇಮಠ ಅವರು ಮುಖ್ಯಮಂತ್ರಿಗಳ ಮನೆಗೆ ಮನವಿ ಕೊಡಲು ಹೋಗುವ ಸಂದರ್ಭದಲ್ಲಿ ಪೊಲೀಸರು ಅವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಇದು ಬೇಡ ಜಂಗಮರ ಹೋರಾಟಕ್ಕೆ ಮಾಡುತ್ತಿರುವ ಅನ್ಯಾಯವಾಗಿದ್ದು ತಕ್ಷಣವೇ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಗದಗ-ಬೆಟಗೇರಿ ನಗರಸಭೆಯ ವಿಶೇಷ ಸಾಮಾನ್ಯ ಸಭೆ ಕದನ ಕುತೂಹಲದ ಘಟ್ಟ ತಲುಪಿ ನಗರಸಭೆ ಅಧ್ಯಕ್ಷೆ ಉಷಾ ಮಹೇಶ್ ದಾಸರ್ ಪ್ರತಿಪಕ್ಷದ ನಾಯಕ ಎಲ್.ಡಿ.ಚಂದಾವರಿ ವಿರುದ್ಧ ಏಕವಚನ ಪದ ಪ್ರಯೋಗಿಸಿ, ಕೊನೆಗೆ ಅಳುತ್ತಲೇ ಸಭೆಯಿಂದ ಹೊರನಡೆಯಲು ಯತ್ನಿಸಿದ ಘಟನೆ ಬುಧವಾರ ನಡೆದಿದೆ.
ನಗರಸಭೆಗೆ ಸ್ಥಾತಿ ಸಮಿತಿ ಸದಸ್ಯರ ಆಯ್ಕೆ ಹಾಗೂ ನಗರಸಭೆಯ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಹೈಸ್ಕೂಲ್ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲು ಬುಧವಾರ ನಗರಸಭೆಯ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿತ್ತು.
ಸಭೆ ಆರಂಭಗೊಳ್ಳುತ್ತಿದ್ದಂತೆ ಪ್ರತಿ ಪಕ್ಷದ ನಾಯಕ ಎಲ್.ಡಿ. ಚಂದಾವರಿಯವರು ಎರಡು ತಿಂಗಳಿನಿಂದ ಸಭೆ ನಡೆದಿಲ್ಲ, ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ನೀವು ನಾಲ್ಕು ಜನ ಪಿಎಗಳನ್ನ ಇಟ್ಟುಕೊಂಡು ಏನು ಪ್ರಯೋಜನವಾಗಿಲ್ಲ ಎನ್ನುತ್ತಿದ್ದಂತೆ ಅಧ್ಯಕ್ಷೆ ಉಷಾ ಮಹೇಶ್ ದಾಸರ್ ಹರಿ ಹಾಯ್ದರು.
“ಏಯ್ ಸುಮ್ನೆ ಕುತ್ಕೊಳಪಾ, ನೀನು ಇಡೀ ಊರನ್ನೇ ಲೂಟಿ ಮಾಡಿದ್ದು ನಮಗೂ ಗೊತ್ತಿದೆ. ಇಟ್ಕೊಂಡಿದಿನಿ ಅಂದ್ರೆ ಏನರ್ಥ? ಅವರು ನನ್ನ ಸಹೋದರ ಸಮಾನರು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧ್ಯಕ್ಷೆಯ ಪದಪ್ರಯೋಗದಿಂದ ಕುಪಿತಗೊಂಡ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಿದರು.
ಇನ್ನುಳಿದ ಸದಸ್ಯರು ಪ್ರತಿಭಟನಾನಿರತ ಸದಸ್ಯರ ಮನವೊಲಿಸಿ ಚರ್ಚೆ ಆರಂಭಿಸುತ್ತಿದ್ದಂತೆ ಕಣ್ಣಾಲಿ ತೇವಗೊಂಡ ಉಷಾ ದಾಸರ್ ಅಳುತ್ತಲೇ ಸಭೆಯಿಂದ ನಿರ್ಗಮಿಸಲು ಮುಂದಾದರು. ಬಿಜೆಪಿ ಸದಸ್ಯರು ಅವರನ್ನು ಸಮಾಧಾನಪಡಿಸಿ, ಸಭೆ ಮುಂದುವರಿಯಲು ಸಹಕರಿಸಿದರು.
ಪ್ರಾಣಿ ಸಂಗ್ರಹಾಲಯಕ್ಕೆ ಜಿಂಕೆ ಮರಿ ಹಸ್ತಾಂತರ ಮಾಡಿದ ಗ್ರಾಪಂ ಅಧ್ಯಕ್ಷ ದಾವಲಸಾಬ ಹಿತ್ತಲಮನಿ
ವಿಜಯಸಾಕ್ಷಿ ಸುದ್ದಿ, ಗದಗ:
ಗದಗ ತಾಲೂಕಿನ ಬೆಳಹೋಡ ಗ್ರಾಮದಲ್ಲಿ ಜಿಂಕೆ ಮರಿಯೊಂದು ತಾಯಿ ಬಿಟ್ಟು ಅಗಲಿದ ಘಟನೆ ನಡೆದಿದೆ. ಹೌದು ಬೆಳಹೋಡ ಗ್ರಾಮದ ಸಿದ್ದಪ್ಪ ಹುಲಕೋಟಿ ಹಾಗೂ ನಾಗಪ್ಪ ಕುರಡಗಿ ಎಂಬ ರೈತರು ಜಮೀನ ಕೆಲಸಕ್ಕೆಂದು ಹೋಗಿದ್ದರು. ಆ ವೇಳೆ ಜಿಂಕೆಯೊಂದು ಮರಿಯನ್ನು ಜಮೀನಲ್ಲಿ ಬಿಟ್ಟು ಹೋಗಿದೆ.
ಜಿಂಕೆ ಮರಿಯನ್ನು ಕಂಡ ರೈತರು ತಕ್ಷಣ ಹಿಡಿಕೊಂಡು ಗ್ರಾಮ ಪಂಚಾಯತಿಗೆ ಬಂದಿದ್ದಾರೆ. ಗ್ರಾಮ ಪಂಚಾಯಿತಿ ಪಿಡಿಓ ಅನಿತಾ ಕೊಟ್ಟಿಗೆ ಅವರ ಕೈಯಲ್ಲಿ ಕೊಟ್ಟು ಇದನ್ನು ಅರಣ್ಯ ಇಲಾಖೆಗೆ ಒಪ್ಪಿಸಲು ಕೋರಿದ್ದಾರೆ.
ವಿಷಯ ತಿಳಿದ ಗ್ರಾಮ ಪಂಚಾಯತ್ ಅಧ್ಯಕ್ಷ ದಾವಲಸಾಬ್ ಹಿತ್ತಲಮನಿ ಹಾಗೂ ಸದಸ್ಯ ಗೂಳಪ್ಪ ಬೇರೆನವರ ಅವರು ಪ್ರಾಣಿ ಸಂಗ್ರಹಾಲಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದರು.
ಗ್ರಾಪಂ ಅಧ್ಯಕ್ಷ ದಾವಲಸಾಬ್ ಹಿತ್ತಲಮನಿ ಹಾಗೂ ಸದಸ್ಯ ಗೂಳಪ್ಪ ಅವರು ಬಿಂಕದಕಟ್ಟಿಯಲ್ಲಿರುವ ಪ್ರಾಣಿ ಸಂಗ್ರಹಾಲಯಕ್ಕೆ ಜಿಂಕೆ ಮರಿಯನ್ನು ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ. ಮಾನವೀಯತೆ ಮೆರೆದ ರೈತರು ಹಾಗೂ ಗ್ರಾಮ ಪಂಚಾಯಿತಿಯವರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಮನೆಯೊಳಗೆ ನುಗ್ಗಿದ ಪುಂಡರ ಗುಂಪೊಂದು ಮನೆಯಲ್ಲಿದ್ದ ಮಹಿಳೆ ಹಾಗೂ ಇತರ ಸದಸ್ಯರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ಬೈದು ಮನೆಯಲ್ಲಿದ್ದ ಇಬ್ಬರು ಮಕ್ಕಳನ್ನೂ ಬಲವಂತವಾಗಿ ತಮ್ಮೊಂದಿಗೆ ಎಳೆದೊಯ್ದ ಪ್ರಕರಣ ಭಾನುವಾರ ಗದಗದಲ್ಲಿ ನಡೆದಿದೆ.
ಕಳಸಾಪುರ ರಸ್ತೆಯ ನಂದೀಶ್ವರ ನಗರದ ಸುಕನ್ಯಾ ಜೀವನಕುಮಾರ್ ಪಾರ್ಷಾ ದೂರುದಾರರಾಗಿದ್ದಾರೆ. ಭಾನುವಾರ ಸಂಜೆ 6 ಗಂಟೆಯ ಸುಮಾರಿಗೆ ಚಾಕು ಹಾಗೂ ಇನ್ನಿತರ ಮಾರಕಾಸ್ತ್ರಗಳೊಂದಿಗೆ ಮನೆಗೆ ನುಗ್ಗಿದ ಹುಬ್ಬಳ್ಳಿಯ ಚೇತನ ಕಾಲೋನಿಯ ಜೀವನಕುಮಾರ್ ಪಾರ್ಷಾ ಹಾಗೂ ಇನ್ನಿತರರ ಗುಂಪು, ಸುಕನ್ಯಾ ಅವರಿಗೆ ಹಾಗೂ ಅವರ ಸಂಬಂಧಿಗಳಿಗೆ ಹೊಡೆದು, ಅವಾಚ್ಯ ಶಬ್ಧಗಳಿಂದ ಬೈದು, ಕಾಲಿನಿಂದ ಒದ್ದು, ಹೊಡೆದಿದ್ದಾರೆ.
ಅಷ್ಟೇ ಅಲ್ದೇ`ನಿಮ್ಮನ್ನೆಲ್ಲಾ ಸಾಯಿಸಿಬಿಡ್ತೀನಿ, ನಿನ್ನ ಹಿಂದೆ ಎಷ್ಟೇ ಜನ ಬಂದ್ರೂ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ, ನಿಮ್ಮ ಸಂಬಂಧಿಕರನ್ನೂ ಸುಮ್ಮನೇ ಬಿಡುವದಿಲ್ಲ, ಪೊಲೀಸ್ ಕಂಪ್ಲೇಂಟ್ ಕೊಡೋದಿದ್ದರೂ ಕೊಡಿ ನೋಡೋಣ’ ಎಂದು ಬೆದರಿಸಿ, ಸುಕನ್ಯಾರ ಮಕ್ಕಳಾದ ಏಳು ವರ್ಷದ ರಿತ್ವಿಕ ಪಾರ್ಷಾ ಹಾಗೂ ಐದು ವರ್ಷದ ರಚಿತಾ ಪಾರ್ಷಾರನ್ನು ಹೆದರಿಸಿ ಬಲವಂತವಾಗಿ ಎತ್ತಿಕೊಂಡು ಹೊರಗಿನಿಂದ ಮನೆಯ ಬಾಗಿಲು ಚಿಲಕ ಹಾಕಿ ಅವರು ಬಂದಿದ್ದ ವಾಹನದಲ್ಲಿ ಹೋಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಸದರಿ ಪ್ರಕರಣದ ಬಗ್ಗೆ ಜೀವನಕುಮಾರ್ ಪಾರ್ಷಾ, ಬರ್ನಾಬಸ್ ಪಾರ್ಷಾ, ಪುಲ್ಲಯ್ಯ ಪಾರ್ಷಾ, ಪ್ರೇಮಮ್ಮ ಪಾರ್ಷಾ ಹಾಗೂ ವಿಜಯಕುಮಾರಿ ಗದ್ದಮ್ ಇನ್ನಿತರರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿರುವದಾಗಿ ತಿಳಿದುಬಂದಿದೆ.
ರಾಜ್ಯದ ಖ್ಯಾತ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ (Chandrashekhar Guruji ) ಅವರನ್ನು ಹುಬ್ಬಳ್ಳಿಯಲ್ಲಿ ಕೊಲೆ (Murder in Hubli) ಮಾಡಲಾಗಿದೆ, ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದ್ದು, ಹುಬ್ಬಳ್ಳಿಯ ಉಣಕಲ್ ನ ಖಾಸಗಿ ಹೋಟೆಲ್ ನಲ್ಲಿ ಹತ್ಯೆ ನಡೆದಿದೆ. ಹೋಟೆಲ್ reception ಬಳಿ ಕೊಲೆ ನಡೆದಿದೆ ಎಂದು ವರದಿಯಾಗಿದೆ. ಚಂದ್ರಶೇಖರ್ ಗುರೂಜಿ ಅವರ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಚಂದ್ರಶೇಖರ್ ಗುರೂಜಿ ಸರಳವಾಸ್ತು ಮೂಲಕ ಜನಪ್ರಿಯಗಳಿಸಿದವರು. ಚಂದ್ರಶೇಖರ್ ಅವರು ಭಾರತ ಮತ್ತು ವಿದೇಶಗಳಲ್ಲಿ ವಾಸ್ತು ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ಭಕ್ತರ ವೇಷ ಧರಿಸಿ ಬಂದು ಚಾಕುವಿನಿಂದ ಇರಿದಿದ್ದಾರೆ ಎಂದು ವರದಿಯಾಗಿದೆ. ಗುರೂಜಿ ಕೆಳಗೆ ಬೀಳುತ್ತಿದ್ದಾಗ ಮತ್ತೆ ಚಾಕುವಿನಿಂದ ಇರಿದು ಓಡಿಹೋಗಿದ್ದಾರೆ ಎನ್ನಲಾಗಿದೆ.
ಈ ಎಲ್ಲಾ ದೃಶ್ಯಗಳು ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಘಟನಾ ಸ್ಥಳಕ್ಕೆ ಶ್ವಾನದಳವನ್ನು ಕರೆತರಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.