Home Blog Page 3351

ಅಕ್ರಮ ಮದ್ಯ ಸಾಗಾಟ; ಆರೋಪಿ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ:

ಅಕ್ರಮವಾಗಿ ಮಾರಾಟ ಮಾಡಲು ಮದ್ಯ ಸಾಗಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ನರಗುಂದ ಪೊಲೀಸರು ಬಂಧಿಸಿದ್ದಾರೆ.

ರೋಣ ತಾಲ್ಲೂಕಿನ ಯಾವಗಲ್ ಗ್ರಾಮದ ಮಂಜುನಾಥ್ ನಿಂಗಪ್ಪ ಹೆಬಸೂರು ಎಂಬಾತ 3372 ರೂಪಾಯಿ ಮೌಲ್ಯದ ಮದ್ಯವನ್ನು ತನ್ನ ಗ್ರಾಮಕ್ಕೆ ಸಾಗಾಟ ಮಾಡುತ್ತಿದ್ದಾಗ ನರಗುಂದ ಠಾಣೆಯ ಎಎಸ್ಐ ಬಿ ಆರ್ ಸೊರಟೂರು ಹಾಗೂ ಸಿಬ್ಬಂದಿ ರೋಣ ಕ್ರಾಸ್ ಬಳಿ ದಾಳಿ ಮಾಡಿ ಬಂಧಿಸಿ,‌ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ನರಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಟುಂಬ ಕಲಹ ಹಿನ್ನೆಲೆ; ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಪೊಲೀಸ್

ವಿಜಯಸಾಕ್ಷಿ ಸುದ್ದಿ, ಗದಗ:

ಕುಟುಂಬ ಕಲಹದಿಂದ‌ ಬೇಸತ್ತಿದ್ದ ಮುಖ್ಯ ಪೇದೆಯೋರ್ವ 303 ಬಂದೂಕಿನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ಜರುಗಿದೆ.

ಇಲ್ಲಿನ ಜಿಲ್ಲಾಡಳಿತ ಭವನದ ಖಜಾನೆ ವಿಭಾಗದಲ್ಲಿ ಕರ್ತವ್ಯ ಮಾಡುತ್ತಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹೆಡ್ ಕಾನ್ಸ್‌ಟೇಬಲ್ ಕಿರಣಕುಮಾರ್ ಕೊಪ್ಪದ (45) ಎಂಬಾತನೇ ಕತ್ತಿಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿ.

ಸಂಜೆ ಆರು ಗಂಟೆಯಿಂದ ಒಂಬತ್ತು ಗಂಟೆಯವರೆಗೆ ಡ್ಯೂಟಿಗೆ ಬಂದಿದ್ದ ಕಿರಣಕುಮಾರ್
ಖಜಾನೆಯ ಕಛೇರಿಯ ಎಲ್ಲಾ ಬಾಗಿಲುಗಳನ್ನು ಹಾಕಿಕೊಂಡು, ಕುರ್ಚಿ ಮೇಲೆ ಕುಳಿತು, ಕೈಯಲ್ಲಿದ್ದ 303 ರೈಫಲ್ ನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ರಾತ್ರಿ 9 ಗಂಟೆಗೆ ನೈಟ್ ಡ್ಯೂಟಿ ಮಾಡುವ ಇನ್ನೋರ್ವ ಸಿಬ್ಬಂದಿ ಬಂದು ಬಾಗಿಲು ಬಡಿದರೂ ತೆರೆಯದ ಕಾರಣ ಹಿರಿಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.

ಸುದ್ದಿ ತಿಳಿದು ಗಾಬರಿಗೊಂಡ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ವಿದ್ಯಾನಂದ ನಾಯಕ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದು ಬಾಗಿಲು ಒಡೆದು ನೋಡಿದಾಗ ಕಿರಣಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.

ಕಿರಣಕುಮಾರ್ ಕೈಯಲ್ಲಿದ್ದ ರೈಫಲ್ ನಿಂದ ಕುತ್ತಿಗೆಗೆ ಇಟ್ಟುಕೊಂಡು ಡ್ರ್ಯಾಗರ್ ಕಾಲಿನಿಂದ ಪ್ರೆಸ್ ಮಾಡಿದ್ದಾನೆ. ಆಗ ರೈಫಲ್ ನಿಂದ ಹಾರಿದ ಗುಂಡು, ಕತ್ತನ್ನು ಸೀಳಿಕೊಂಡು ಗೋಡೆಗೆ ಹೋಗಿ ತಾಗಿದೆ. ಇದರಿಂದಾಗಿ ಕಿರಣಕುಮಾರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೌಟುಂಬಿಕ ಕಲಹ ಹಾಗೂ ಜೀವನದಲ್ಲಿ ಜಿಗುಪ್ಸೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಂದೆ ತಿಳಿಸಿದ್ದಾರೆ.

ಸುದ್ದಿ ತಿಳಿದು ಎಸ್ಸಿ ಶಿವಪ್ರಕಾಶ್ ದೇವರಾಜು, ಡಿವೈಎಸ್ಪಿ ಶಿವಾನಂದ ಪಟ್ಟಣಶೆಟ್ಟಿ, ಇನ್ಸ್‌ಪೆಕ್ಟರ್ ಗಳಾದ ಸಾಲಿಮಠ, ರವಿಕುಮಾರ್ ಕಪ್ಪತನವರ್, ಸುಬ್ಬಾಪೂರಮಠ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದ್ದರು. ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡೈಮಂಡ್ ಜ್ಯುವೆಲ್ಲರ್ಸ್ ಅಂಗಡಿ ಮಾಲೀಕನಿಗೆ ವಂಚನೆ; ನೆಕ್ಲೆಸ್ ಮಾಡಿಕೊಡದ ಪಶ್ಚಿಮ ಬಂಗಾಳದ ನವಾಬ್!

ವಿಜಯಸಾಕ್ಷಿ ಸುದ್ದಿ, ಗದಗ:

ಆಭರಣ ತಯಾರು ಮಾಡಿಕೊಡುವ ಪಶ್ಚಿಮ ಬಂಗಾಳ ಮೂಲದ ಅಸಾಮಿಯೊಬ್ಬ ಜ್ಯುವೆಲ್ಲರ್ಸ್ ಅಂಗಡಿ ಮಾಲೀಕನೊಬ್ಬನಿಗೆ ನೆಕ್ಲೆಸ್ ‌ಮಾಡಿಕೊಡದೇ‌ ವಂಚಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಹಕರೊಬ್ಬರ ಬೇಡಿಕೆಯಂತೆ 20 ಗ್ರಾಮ ತೂಕದ ಗಟ್ಟಿ ಬಂಗಾರವನ್ನು ನೆಕ್ಲೆಸ್ ಮಾಡಿಕೊಡಲು ಆಭರಣ ತಯಾರಿಕೆ ನಿಪುಣತೆ ಹೊಂದಿರುವ ಮೂಲತಃ ಪಶ್ಚಿಮ ಬಂಗಾಳದ, ಸದ್ಯ ಹನಮನಗರಡಿ ಬಳಿಯ ನಿವಾಸಿ ನವಾಬ್ ಅಲಿಯಾಸ್ ಹಸನ ಅಲಿ ಎಂಬಾತನಿಗೆ ಸ್ಟೇಷನ್ ರಸ್ತೆಯಲ್ಲಿ ಇರುವ ಡೈಮಂಡ್ ಜ್ಯುವೆಲ್ಲರ್ಸ್ ಅಂಗಡಿ ಮಾಲೀಕ ನಾಗರಾಜ್ ವಿಶ್ವನಾಥ ಸೇಠ್ ಎಂಬುವವರು ಮೇ 30ರಂದು ಕೊಟ್ಟಿದ್ದರು.

ನಾಲ್ಕೈದು ದಿನಗಳಲ್ಲಿ ನೆಕ್ಲೆಸ್ ಮಾಡಿಕೊಡುವುದಾಗಿ ಹೇಳಿ ಹೋಗಿದ್ದ ನವಾಬ್ ಅಲಿಯಾಸ್ ಹಸನ ಅಲಿ ಹೇಳಿದ ಮಾತಿಗೆ ತಪ್ಪಿದ್ದಾನೆ. ಅಷ್ಟೇ ಅಲ್ಲದೆ ಮರಳಿ ಬಂಗಾರವನ್ನು ನೀಡದೆ ವಂಚಿಸಿದ್ದಾನೆ. ಇದರಿಂದಾಗಿ ಡೈಮಂಡ್ ಜ್ಯುವೆಲ್ಲರ್ಸ್ ಅಂಗಡಿ ಮಾಲೀಕ ನಾಗರಾಜ್ ಸೇಠ್ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸಿದ್ದು ಪಲ್ಲೇದ ಅಧಿಕಾರ ಸ್ವೀಕಾರ

ವಿಜಯಸಾಕ್ಷಿ ಸುದ್ದಿ, ಗದಗ:

ತೀವ್ರ ಕುತೂಹಲ ಮೂಡಿಸಿದ್ದ ಗದಗ- ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಕೊನೆಗೂ ಪ್ರಭಲ ಲಿಂಗಾಯತ ಪಂಚಮಸಾಲಿ ಸಮುದಾಯಕ ಒಲಿದಿದೆ.

ಸಿದ್ದು ಪಲ್ಲೇದ ಅವರನ್ನು ನೂತನ ಅಧ್ಯಕ್ಷರನ್ನಾಗಿ ಸರಕಾರ ನೇಮಿಸಿ‌ ಬುಧವಾರ ಆದೇಶ ಮಾಡಿದ್ದು, ಸಿದ್ದು ಪಲ್ಲೇದ ಅಧಿಕಾರ ಸ್ವೀಕರಿಸಿದರು. ಸಂಗಮೇಶ ದುಂದೂರು ಅಧಿಕಾರ ಹಸ್ತಾಂತರಿಸಿದರು.

ಕಳೆದ ಮಾರ್ಚ್ ತಿಂಗಳಲ್ಲಿ ಶ್ರೀ ಪತಿ ಉಡುಪಿ ಅವರನ್ನು ಅಧ್ಯಕ್ಷರನ್ನಾಗಿ ಸರಕಾರ ನೇಮಿಸಿ ಆದೇಶ ಹೊರಡಿಸಿತ್ತು. ಇದರಿಂದಾಗಿ ಬಿಜೆಪಿ ಪಾಳೆಯದಲ್ಲಿ ವಿರೋಧ ವ್ಯಕ್ತವಾಗಿತ್ತು. ಅದರಲ್ಲೂ ಕಾಂಗ್ರೆಸ್, ಬಿಜೆಪಿ ಪಕ್ಷದಲ್ಲಿ ಇರುವ ಲಿಂಗಾಯತ ಪಂಚಮಸಾಲಿ ಸಮುದಾಯದ ಮುಖಂಡರಲ್ಲಿ ತೀವ್ರ ಅಸಮಾಧಾನ ಮೂಡಿತ್ತು. ಹೀಗಾಗಿ ಶ್ರೀಪತಿ ಉಡುಪಿ ಅವರು ಅಧಿಕಾರ ಸ್ವೀಕರಿಸುವ ಮುನ್ನವೇ ಆದೇಶ ತಡೆಹಿಡಿಯಲಾಗಿತ್ತು.

ಇದನ್ನೂ ಓದಿ ಪ್ರಾಧಿಕಾರದ ಅಧ್ಯಕ್ಷರಾಗಿ ಶ್ರೀಪತಿ ಉಡುಪಿ ನೇಮಕ: ಬಿಜೆಪಿ ಪಾಳೆಯದಲ್ಲಿ ತೀವ್ರ ಅಸಮಾಧಾನ

ಮತ್ತೀಗ ಮೂರು ವರ್ಷಗಳ ಕಾಲ ಸಿದ್ದಪ್ಪ ಚನ್ನಬಸಪ್ಪ ಪಲ್ಲೇದ ಅವರನ್ನು ನೇಮಿಸಿ ಸರಕಾರದ ಅಧೀನ ಕಾರ್ಯದರ್ಶಿ ಲತಾ ಕೆ ಅವರು ಆದೇಶ ಹೊರಡಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕಾಂತಿಲಾಲ್ ಬನ್ಸಾಲಿ, ನಗರಸಭೆ ಸದಸ್ಯರಾದ ವಿನಾಯಕ ಮಾನ್ವಿ, ಅನಿಲ ಅಬ್ಬಿಗೇರಿ, ಮುಖಂಡರಾದ ಪ್ರಶಾಂತ ನಾಯ್ಕರ್, ಕುಮಾರ್ ಮಾರನಬಸರಿ ಸೇರಿದಂತೆ ಅನೇಕರಿದ್ದರು.

ಡಿಸಿ ಆದೇಶ ಉಲ್ಲಂಘನೆ; ಮಾಂಸಾಹಾರಿ ಹೋಟೆಲ್ ಮೇಲೆ ಪೊಲೀಸರ ದಾಳಿ

ವಿಜಯಸಾಕ್ಷಿ ಸುದ್ದಿ, ಗದಗ:

ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಭಾನುವಾರ ಹಾಗೂ ಸೋಮವಾರ ಎರಡು ದಿನಗಳ ಕಾಲ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಎಂ ಸುಂದರೇಶ್ ಬಾಬು ಅವರು ಆದೇಶ ಹೊರಡಿಸಿದ್ದರು.

ಆದರೆ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ಮಾಂಸಾಹಾರಿ ಹೋಟೆಲ್ ಸೇರಿದಂತೆ ಎರಡು ಕಡೆ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಿಲ್ಲೆಯ ರೋಣ ಪಟ್ಟಣದ ಲೋಕೋಪಯೋಗಿ ಇಲಾಖೆಯ ಕಛೇರಿ ಬಳಿ ಮದ್ಯ ಮಾರಾಟ ಮಾಡುತ್ತಿದ್ದ ಕರೀಮ್ ಖಾಸಿಮಸಾಬ್ ಪಠಾಣ್ ಎಂಬಾತನನ್ನು ಬಂಧಿಸಿ ಆತನಿಂದ 7 ನೂರು ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಗದಗನ ಧೋಬಿ ಘಾಟ್ ಬಳಿಯ ರಿಂಗ್ ರೋಡ್ ನಲ್ಲಿ ಸಾವಜಿ ಕಿಚನ್ ಹೋಟೆಲ್ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಶಹರ ಠಾಣೆಯ ಪಿಎಸ್ಐ ಜಿ ಟಿ ಜಕ್ಕಲಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಆರೋಪಿ ನಾರಾಯಣ ಹನಮಂತಸಾ ಕಾಟವಾ ಎಂಬಾತನನ್ನು ವಶಕ್ಕೆ ಪಡೆದು, 422 ರೂ.ಮೌಲ್ಯದ ಮದ್ಯವನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓ.ಸಿ ಜೂಜಾಟ; ಕುಖ್ಯಾತ ಬುಕ್ಕಿ‌ ಸೇರಿ ಮೂವರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ:

ಇಲ್ಲಿನ ಸ್ಟೇಷನ್ ರಸ್ತೆಯ ಗೌರಿ ಶಂಕರ್ ಲಾಡ್ಜ್ ಹತ್ತಿರ ಸಾರ್ವಜನಿಕರಿಂದ ಹಣ ಪಡೆದು ಓ.ಸಿ. ಜೂಜಾಟದಲ್ಲಿ ತೊಡಗಿದ್ದ ಕುಖ್ಯಾತ ಮಟ್ಕಾ ಬುಕ್ಕಿ ಸೇರಿದಂತೆ ಮೂವರನ್ನು ಶಹರ ಪೊಲೀಸರು ಬಂಧಿಸಿದ್ದಾರೆ.

ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವುದಾಗಿ ಜನರಿಂದ ಹಣ ಪಡೆದು ಓ.ಸಿ ಕಲ್ಯಾಣಿ ಎಂಬ ಜೂಜಾಟದಲ್ಲಿ ತೊಡಗಿದ್ದ ಜೋಡ ಮಾರುತಿ ದೇವಸ್ಥಾನದ ಬಳಿಯ ಕಿಲ್ಲಾ ಓಣಿಯ ಮಾಧುಸಾ ರಾಮನಾಥಸಾ ಮಿಸ್ಕಿನ್, ಬೆಟಗೇರಿಯ ಮಂಜುನಾಥ್ ನಗರದ ಕಣವಿ ಪ್ಲಾಟ್ ನಿವಾಸಿ ಯಲ್ಲಪ್ಪ ಪರಶುರಾಮ ಢಗೆ ಹಾಗೂ ಜವಳಗಲ್ಲಿಯ ಪೆಂಟರ್ ಹುಚ್ಚಪ್ಪ ಜಟ್ಟೆಪ್ಪ ಅರಕೇರಿ ಎಂಬುವರನ್ನು ಶಹರ ಠಾಣೆಯ ಪಿಎಸ್ಐ ಜಿ ಟಿ ಜಕ್ಕಲಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ.

ಬಂಧಿತರಿಂದ ಸುಮಾರು 12ಸಾವಿರ ರೂಪಾಯಿಗಳನ್ನು ಹಾಗೂ ಚೀಟಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಚಾರಣಾಧೀನ ಖೈದಿ ಆತ್ಮಹತ್ಯೆಗೆ ಯತ್ನ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ವಿಚಾರಣಾಧೀನ ಖೈದಿಯೊಬ್ಬ ಹಣೆಗೆ ಬ್ಲೇಡ್ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದ ಬ್ಯಾಂಕ್ ದರೋಡೆ ಪ್ರಕರಣದ ಆರೋಪಿ ಪ್ರಶಾಂತ ಆತ್ಮಹತ್ಯೆಗೆ ಯತ್ನಿಸಿದಾತ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಗರದ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ಶುಕ್ರವಾರ ವಿಚಾರಣೆಗಾಗಿ ಜಿಲ್ಲಾ ನ್ಯಾಯಾಲಯಕ್ಕೆ ಕರೆ ತರಲಾಗಿತ್ತು.

ಬಳ್ಳಾರಿ ಕಾರಾಗೃಹಕ್ಕೆ ಸ್ಥಳಾಂತರಿಸುವಂತೆ ಆರೋಪಿ ಪ್ರಶಾಂತ್ ಮನವಿ ಮಾಡಿದ್ದ. ಆದರೆ, ಪೊಲೀಸರು ವಿಚಾರಣೆಯೂ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿರುವುದರಿಂದ ನಗರದ ಹೊರ ವಲಯದಲ್ಲಿರುವ ಕಾರಾಗೃಹದಲ್ಲಿಯೇ ಇರಿಸುತ್ತೇವೆ ಎಂದಿದ್ದಾರೆ‌. ಇದರಿಂದಾಗಿ ಬೇಸತ್ತ ಆರೋಪಿ ಹಣೆಗೆ ಬ್ಲೇಡ್ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಬಳಿಕ ಪೊಲೀಸರು ಆರೋಪಿಯನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಗೆ ದಾಖಲು ಮಾಡಿದ್ದಾರೆ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಜಿಪಂ ಸಿಇಒ ಡಾ.ಸುಶೀಲಾರಿಂದ ನರೇಗಾ ಕಾಮಗಾರಿ ವೀಕ್ಷಣೆ; ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ

ಆರ್ಥಿಕತೆ ಸುಧಾರಣೆಗೆ ಸಹಕಾರಿ

ವಿಜಯಸಾಕ್ಷಿ ಸುದ್ದಿ, ನರಗುಂದ:

ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಅಂಗನವಾಡಿ, ಮಹಿಳಾ ವರ್ಕ್ಶೆಡ್, ಘನತ್ಯಾಜ್ಯ ವಿಲೇವಾರಿ ಘಟಕ, ಡಿಜಿಟಲ್ ಗ್ರಂಥಾಲಯ ಹಾಗೂ ಜಲಜೀವನ್ ಮಿಷನ್ ಕಾಮಗಾರಿಗಳ ಸ್ಥಳಕ್ಕೆ ಶುಕ್ರವಾರ ಜಿಪಂ ಸಿಇಒ ಡಾ.ಸುಶೀಲಾ ಅವರು ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.

ಬಳಿಕ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹಳ್ಳ ಹೂಳೆತ್ತುವ ಕಾಮಗಾರಿ ವೀಕ್ಷಿಸಿ, ಕೂಲಿಕಾರರ ಕುಂದು ಕೊರತೆಗಳನ್ನು ಆಲಿಸಿದರು. ಬಳಿಕ ಮಾತನಾಡಿದ ಡಾ.ಸುಶೀಲಾ ಅವರು, ಗ್ರಾಮೀಣ ಜನರ ಜೀವನಕ್ಕೆ ಭದ್ರತೆ ಹೆಚ್ಚಿಸಲು ವರ್ಷದಲ್ಲಿ ಪ್ರತಿ ಕುಟುಂಬಕ್ಕೆ ೧೦೦ ದಿನಗಳವರೆಗೆ ನರೇಗಾದಡಿ ಕೆಲಸ ನೀಡಲಾಗುತ್ತಿದೆ.

ಈ ಯೋಜನೆಯು ಬಡ ಕುಟುಂಬಗಳ ಆರ್ಥಿಕತೆ ಸುಧಾರಣೆಗೆ ಸಹಕಾರಿಯಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಕೆಲಸದಲ್ಲಿ ಪಾಲ್ಗೊಳ್ಳುವ ಮೂಲಕ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಬಾಪು ಹಿರೇಗೌಡ್ರ, ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ, ತಾಪಂ ಇಒ ಹೊನ್ನಯ್ಯ ಬಿ.ಕೆ., ಎಂ.ಡಿ.ತೋಗುಣಸಿ, ಚಂದ್ರಶೇಖರ ಕುರ್ತಕೋಟಿ, ಸುರೇಶ ಬಾಳಿಕಾಯಿ, ಶೈನಾಜ್ ಮುಜಾವರ್ ಸೇರಿದಂತೆ ಹಲವರಿದ್ದರು.

ಆಕರ್ಷಣೀಯವಾಗಿ ಡಿಜಿಟಲ್ ಗ್ರಂಥಾಲಯ ರಚಿಸಿ ಓದುಗರಿಗೆ ಹೆಚ್ಚಿನ ಆಸನಗಳ ವ್ಯವಸ್ಥೆ ಮಾಡಬೇಕು. ಜಲಜೀವನ್ ಮಿಷನ್ ಹಾಗೂ ಘನತ್ಯಾಜ್ಯ ವಿಲೇವಾರಿ ಘಟಕಗಳ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.

ಡಾ.ಸುಶೀಲಾ, ಜಿಪಂ ಸಿಇಒ

ಭೂಮಿ ಯೋಜನೆ ಅನುಷ್ಠಾನ ರಾಜ್ಯಕ್ಕೆ ನವಲಗುಂದ ಪ್ರಥಮ

0

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಭೂಮಿ ಯೋಜನೆಯಡಿ 2022 ರ ಏಪ್ರಿಲ್ ತಿಂಗಳಲ್ಲಿ ಸಾರ್ವಜನಿಕರಿಂದ ಸ್ವೀಕರಿಸಲಾಗಿರುವ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಿದ ನವಲಗುಂದ ತಾಲ್ಲೂಕು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದಕ್ಕೆ ಭೂ ಮಾಪನ ಇಲಾಖೆ ಆಯುಕ್ತ ಮುನೇಶ ಮೌದ್ಗೀಲ್ ಅಭಿನಂದಿಸಿದ್ದಾರೆ.

ನವಲಗುಂದ ತಹಶೀಲ್ದಾರ್ ಅನಿಲ ಬಡಿಗೇರ ಅವರಿಗೆ ಅಭಿನಂದನಾ ಪತ್ರ ಬರೆದಿರುವ ಅವರು, ಭೂಮಿ ಯೋಜನೆಯಡಿ ಸ್ವೀಕರಿಸಲಾಗಿರುವ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಶೀಘ್ರ ವಿಲೆವಾರಿ ಮಾಡಿ 4.72 ಸಿಗ್ಮಾ ಮೌಲ್ಯ ಹಾಗೂ 3.947 ರಷ್ಟು ವಿಲೇವಾರಿ ಸೂಚ್ಯಂಕವನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ.

ಈ ಸಾಧನೆಗೆ ತಹಸೀಲ್ದಾರ್ ಕಚೇರಿಯ ಸಿಬ್ಬಂದಿ ಹಾಗೂ ಅಧಿಕಾರಿಗಳ ಕಾರ್ಯತತ್ವರತೆ ಕಾರಣವಾಗಿದೆ. ಬರುವ ದಿನಗಳಲ್ಲಿಯೂ ಇದೇ ಉತ್ಸಾಹ ಕಾಪಾಡಿಕೊಂಡು ಮುನ್ನಡೆಯಬೇಕು ಎಂದು ಮುನೀಶ ಮೌದ್ಗೀಲ್ ತಿಳಿಸಿದ್ದಾರೆ. 

ಹೋಟೆಲ್ ಗೋಡೆ ಕುಸಿದು ಮಾಲೀಕ ಸಾವು

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಇಲ್ಲಿಯ ಕೃಷಿ ಇಲಾಖೆಯ ಎದುರಿನ ತೋಟದವರ ಹೋಟೆಲ್ ಗೋಡೆ ಕುಸಿದು ಮಾಲೀಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನೊಬ್ಬರಿಗೆ ಕಾಲು ಮುರಿದ ಘಟನೆ ಬುಧವಾರ ಸಂಜೆ ನಡೆದಿದೆ.

ಹುಬ್ಬಳ್ಳಿ- ವಿಜಯಪೂರ ರಾಷ್ಟ್ರೀಯ ಹೆದ್ದಾರಿಯ ಬಳಿ ಮಾಜಿ ಸಚಿವ ಕೆ.ಎನ್.ಗಡ್ಡಿ ಯವರ ಮನೆಯ ಪಕ್ಕದಲ್ಲಿದ್ದ ತೋಟದವರ ಹೋಟೆಲ್ ಗೋಡೆ ಕುಸಿದ ಪರಿಣಾಮ ಮಾಲಿಕ ಶಿವಪ್ಪ ಬಸವಂತಪ್ಪ ತೋಟದ (65) ಎಂಬುವರು ಸ್ಥಳದಲ್ಲಿಯೇ ಮೃತಪಟ್ಟರೆ,  ಅದೇ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಶಿದ್ಲಿಂಗಪ್ಪ ಕಲ್ಲಪ್ಪ ತೋಟದ (50) ಎಂಬುವರ ಕಾಲು ಮುರಿದಿದ್ದು, ಸ್ಥಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಕಳೆದೆರಡು ದಿನದಿಂದ ಸುರಿದ ಮಳೆಗೆ ಹೋಟೆಲ್ ಗೋಡೆ ಸಂಪೂರ್ಣವಾಗಿ ನೆನೆದು ನೀರು ಒಳಗಡೆ ಬರುತ್ತಿದ್ದುದನ್ನು ಕಂಡ ಮಾಲಿಕ ಶಿವಪ್ಪ ತೋಟದ ನೀರು ಬರುತ್ತಿರುವ ಸ್ಥಳವನ್ನು ಮಣ್ಣು ಹಾಕಿ ಮುಚ್ಚಲು ಹೋದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಸಿಪಿಐ ಚಂದ್ರಶೇಖರ ಮಠಪತಿ, ತಹಶೀಲ್ದಾರ್ ಅನಿಲ ಬಡಿಗೇರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.