Home Blog Page 3353

ಟ್ಯಾಂಕರ್ ಹಾಯ್ದು ದ್ವಿಚಕ್ರ ಸವಾರ ಸ್ಥಳದಲ್ಲಿಯೇ ಸಾವು

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಇಲ್ಲಿಯ ಕೃಷಿ ಇಲಾಖೆ ಕಚೇರಿಯ ಮುಂದಿನ ಹುಬ್ಬಳ್ಳಿ ವಿಜಯಪೂರ ರಾಷ್ಟ್ರೀಯ ಹೆದಾರಿಯಲ್ಲಿ ಟ್ಯಾಂಕರ್ ಹಾಯ್ದು ದ್ವಿಚಕ್ರ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.

ನರಗುಂದ ಕಡೆಯಿಂದ ಬರುತ್ತಿದ್ದ ಟ್ಯಾಂಕರ್‍ಗೆ ದ್ವಿಚಕ್ರ ಸವಾರ ಡಿಕ್ಕಿ ಹೊಡೆದ ಪರಿಣಾಮ ಪಟ್ಟಣದ ಗೊಲ್ಲರ ಓಣಿಯ ನಿವಾಸಿ ಶ್ರೀನಿವಾಸ ಗೊಲ್ಲರ (27) ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಹಿಂಬದಿ ಸವಾರನಿಗೆ ಗಾಯಗಳಾಗಿದ್ದು ಸ್ಥಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಸಿಪಿಐ ಚಂದ್ರಶೇಖರ ಮಠಪತಿ ಭೇಟಿ ನೀಡಿದ್ದು ತನಿಖೆ ಕೈಗೊಂಡಿದ್ದಾರೆ. ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ ಪರಿಣಾಮ ಕೆಲಹೊತ್ತು ವಾಹನಗಳ ದಟ್ಟಣೆಯಾಗಿದ್ದು ಕಂಡುಬಂತು. 

ಕಣ್ಣು ಒದ್ದೆಯಾಗಿಸುತ್ತಲೇ ಕಚಗುಳಿಯಿಡುವ Cutting ಶಾಪ್! ಬೇಡವಾದ್ದನ್ನು ಕಿತ್ತೆಸೆದು, ಬೇಕಾದ್ದನ್ನು ಜೋಡಿಸಿದರೆ ಬದುಕು ಸುಂದರ

ಅನಂತ ಹುದೆಂಗಜೆ

ಟಿಂಕ ಟಿಂಕ ಟಿಂಕ ಎಂದು ಪದಗಳ ಜತೆಗೆ ಆಟವಾಡುತ್ತಲೇ ಅದು `ಕಟ್ಟಿಂಗ್ ಶಾಪ್’ ಎಂದು ಆಗುವ ಸೃಜನಶೀಲತೆಯನ್ನು ಹೊಸಬರಿಂದಷ್ಟೇ ನಿರೀಕ್ಷಿಸಲು ಸಾಧ್ಯ. ಈ ಹಾಡು ಈ ಚಿತ್ರ ಸಿನೆಮಾ ಎಡಿಟರ್ ಒಬ್ಬನ ಕಥೆ ಎಂಬುದನ್ನೂ ತಿಳಿಸುತ್ತದೆ. ಮೇ 20ರಂದು ಉಳಿದ 10 ಸಿನೆಮಾಗಳ ಜತೆಗೆ ಚಂದನವನದ ಬೆಳ್ಳಿ ತೆರೆಗೆ ಬಂದ `ಕಟ್ಟಿಂಗ್ ಶಾಪ್’ ನವಿರಾದ ಹಾಸ್ಯದ ಮೂಲಕವೇ ನಿಮಗೆ ಕಚಗುಳಿಯಿಡುತ್ತದೆ.

ಈ ಚಿತ್ರದ ನಿರ್ದೇಶಕ – ಪವನ್ ಭಟ್, ನಾಯಕ ನಟ ಹಾಗೂ ಸಂಗೀತ ನಿರ್ದೇಶಕ ಪ್ರವೀಣ್ ಕೆ.ಬಿ., ನಾಯಕಿ ಅರ್ಚನಾ ಕೊಟ್ಟಿಗೆ, ಹಲವು ಸಹನಟರು, ತಂತ್ರಜ್ಞರು ಎಲ್ಲರೂ ಹೊಸಬರು. ಪವನ್-ಪ್ರವೀಣ್ ಸೋದರರು ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಸ್ವತಂತ್ರ ಯೋಜನೆ ಇದೇ ಮೊದಲಿನದು.

ನಾಯಕನ ಸೋದರಮಾವನ ಪಾತ್ರದಲ್ಲಿ ಮಿಂಚಿರುವ ನವೀನ್ ಕೃಷ್ಣ, ಪಕ್ಕದ ಮನೆ ಅಂಕಲ್ ಪಾತ್ರದಲ್ಲಿ ದೊರೈ ಭಗವಾನ್, ಹೊಸಬರನ್ನು ಪ್ರೋತ್ಸಾಹಿಸಬೇಕೆಂಬ ಸಂದೇಶ ಸಾರುವ ನಿರ್ದೇಶಕನಾಗಿ ಕೆಲವೇ ದೃಶ್ಯಗಳಲ್ಲಿ ತೆರೆಯನ್ನು ಆವರಿಸುವ ಓಂ ಪ್ರಕಾಶ್ ರಾವ್, ಮತ್ತು ಪ್ರಶಸ್ತಿ ವಿತರಿಸಲು ವೇದಿಕೆಯೇರುವ ತರುಣ್ ಸುಧೀರ್ ಮಾತ್ರ ಪರಿಚಿತ ಮುಖಗಳು.

ಕಟ್ಟಿಂಗ್ ಶಾಪ್ ಕೇವಲ 122 ನಿಮಿಷಗಳಷ್ಟು ದೀರ್ಘವಾಗಿದೆ. ಆದರೆ, ನಿಮ್ಮನ್ನು ಎಲ್ಲಿಯೂ ಬೋರ್ ಹೊಡೆಸುವುದಿಲ್ಲ. ಅನಗತ್ಯ ಬಿಲ್ಡಪ್‌ಗಳಿಲ್ಲ. ಹೊಡೆದಾಟ-ಬಡಿದಾಟ, ಕಿವಿಗಪ್ಪಳಿಸುವ ಅಬ್ಬರದ ಸಂಗೀತವಂತೂ ಇಲ್ಲವೇ ಇಲ್ಲ. ಪ್ರೀತಿಯ ಎಳೆಯಿದ್ದರೂ ಎಳೆದಾಡುವ ಸನ್ನಿವೇಶಗಳಿಲ್ಲ.

ಪ್ರೀತಿಯನ್ನು ಹೇಗೆ ವ್ಯಕ್ತಪಡಿಸಬೇಕು, ಪ್ರೀತಿಸಿದವರಿಗಾಗಿ ಏನು ಮಾಡಬೇಕು ಎನ್ನುವ ಸಂದೇಶವೂ ಸೂಚ್ಯವಾಗಿದೆ. ನಗುತ್ತ, ಬಿಕ್ಕಳಿಸುತ್ತಲೇ ಸಿನೆಮಾ ನೋಡಿ ಹೊರಬರುವಾಗ ಮನಸ್ಸು ಫ್ರೆಶ್ ಆಗಿರುತ್ತದೆ.

ನಾಯಕ ಪ್ರವೀಣ ವೀಡಿಯೋ ಎಡಿಟಿಂಗ್ ಮೂಲಕ ಬದುಕನ್ನು ಕಟ್ಟಿಕೊಳ್ಳಲು ಪಡುವ ಪಾಡನ್ನು ಚಿತ್ರವು ಮನೋಜ್ಞವಾಗಿ ಬಿಂಬಿಸುತ್ತದೆ. ಕಾರು ರಿವರ್ಸ್ ತೆಗೆಯುವಾಗ ಪ್ರತಿ ದಿನವೂ ಪ್ರವೀಣನ ಸೈಕಲ್‌ಗೆ ಡಿಕ್ಕಿ ಹೊಡೆದು, `ಪ್ರವೀಣ್, ಸಾರಿ ಕಣಪ್ಪ, ಯೂ ನೀಡ್ ಎನಿ ಹೆಲ್ಪ್?’ ಎಂದು ಕೇಳಿ ಕೇಳಿ ತಲೆ ಚಿಟ್ಟು ಹಿಡಿಸುವ ಪಕ್ಕದ ಮನೆಯ ಮುದುಕ, ನೀನು ಅಂದುಕೊಂಡಿದ್ದನ್ನು ಸಾಧಿಸುವ ತನಕ ಮನೆ ಕಡೆ ಬರಬೇಡಪ್ಪ’ ಎಂದು ಹೇಳುವ ತಾಯಿ, ಪ್ರವೀಣ ಮನೆಯಲ್ಲಿಟ್ಟಿದ್ದ ಕಂಪ್ಯೂಟರ್‌ಗಳನ್ನು ದೊಡ್ಡ ಮಗನಿಗೆ ತಿಳಿಯದಂತೆ ಪ್ಯಾಕ್ ಮಾಡಿಕೊಡುವಾಗ ಅದರೊಳಗೆ ಹಣವಿಟ್ಟಿದ್ದನ್ನು ಕಂಡಾಗ ನಿಮ್ಮ ಹೃದಯ ಆರ್ದ್ರವಾಗದೇ ಇರಲು ಸಾಧ್ಯವೇ? ಕೊನೆಗೂ ಪ್ರವೀಣನಿಗೆ ಆಸರೆಯಾಗುವುದು- ಮಾವನ ಅದೇ `ಡಬ್ಬಾ ಸ್ಟುಡಿಯೋ’!

ಕಹಿ ವಾಸ್ತವಗಳು:

ನೀಲಿ ಚಿತ್ರವೊಂದರಲ್ಲಿ `ಸಂಕಲನ: ಪ್ರವೀಣ್’ ಎಂದು ದೊಡ್ಡದಾಗಿ ಮುದ್ರಿಸಿರುತ್ತಾರೆ. ಆದರೆ, ಖುಷಿ ಪಡುವಂತಿಲ್ಲ. ಒಳ್ಳೆಯ ಚಿತ್ರವೊಂದಕ್ಕಾಗಿ ತುಂಬ ಶ್ರಮವಹಿಸಿ ಕೆಲಸ ಮಾಡಿದರೆ, ಅಲ್ಲಿ ಆತನ ಬದಲು ಬೇರೊಬ್ಬ ಸಂಕಲನಕಾರನ ಹೆಸರಿರುತ್ತದೆ.

ಬೇಸರ-ಸಿಟ್ಟು ನುಂಗಿಕೊಳ್ಳದೆ ವಿಧಿಯಿಲ್ಲ. ಇದು ಚಿತ್ರಜಗತ್ತಿನ ಕಹಿ ಸತ್ಯವನ್ನು ತೆರೆದಿಡುತ್ತದೆ. ಹಲವು ಹೊಸಬರ ಶ್ರಮ ಹೇಗೆ ಖ್ಯಾತನಾಮರ ಪಾಲಾಗುತ್ತದೆ ಎಂಬುದು ಅರಗಿಸಿಕೊಳ್ಳುವುದು ಕಷ್ಟ.

ಮದುವೆ ಸಮಾರಂಭದ ಒಂದು ವೀಡಿಯೋದಲ್ಲಿ ಬ್ಯಾಟರಿ ಖಾಲಿಯಾಗಿ ತಾಳಿ ಕಟ್ಟುವ ದೃಶ್ಯವೇ ಸೆರೆಯಾಗದೇ ಇದ್ದಾಗ ತಂತ್ರಜ್ಞಾನವನ್ನು ಬಳಸಿ ಪ್ರವೀಣ ಅದನ್ನು ಮರುಸೃಷ್ಟಿ ಮಾಡಿ ಮಾವನ ಮಾನ ಉಳಿಸುತ್ತಾನೆ. ಅದಕ್ಕೆ ಪ್ರತಿಯಾಗಿ ಮಾವ ತನ್ನ ಶೆಡ್ ಒಂದನ್ನು ಬಿಟ್ಟುಕೊಡುತ್ತಾನೆ. ಅದರಲ್ಲಿ ಈ ಮೊದಲು ಯಾರೋ ಸಲೂನ್ ನಡೆಸುತ್ತಿದ್ದರು. ತನ್ನ ಕೆಲಸವೂ ಕತ್ತರಿಸುವುದು-ಜೋಡಿಸುವುದೇ ಆಗಿರುವುದರಿಂದ ಪ್ರವೀಣ ಅಲ್ಲಿ ತಾನು ತೆರೆದ ಕಚೇರಿಗೂ ಕಟ್ಟಿಂಗ್ ಶಾಪ್ ಎಂದೇ ಹೆಸರಿಡುತ್ತಾನೆ.

ನಗಿಸುವ ಗೆಳೆಯ:

ಕಚೇರಿ ತೆರೆದ ಮಾತ್ರಕ್ಕೆ ಕೆಲಸ ರಾಶಿ ಬೀಳುವುದೇ? ಕರೆಂಟ್ ಬಿಲ್ ಕಟ್ಟದ ಕಾರಣಕ್ಕೆ ಲೈನ್‌ಮನ್ ಆಗಾಗ ಫ್ಯೂಸ್ ಕಿತ್ತಿಡುತ್ತಾನೆ. ಇವರು ಮತ್ತೆ ಜೋಡಿಸಿಕೊಳ್ಳುತ್ತಾರೆ. ಇದನ್ನು ಗಮನಿಸಿ ಆತ ಫ್ಯೂಸ್ ಒಯ್ಯುತ್ತಾನೆ. ನಾಯಕಿ ದೀಪಾ ಬಿಲ್ ಪಾವತಿಸಿ, ಮತ್ತೆ ನಾಯಕನ ಬದುಕು ಬೆಳಗುವಂತೆ ಮಾಡುತ್ತಾಳೆ. ಮಗಳನ್ನು ಮದುವೆಯಾಗು, ನನ್ನದೇ ಒಂದು ಆಫೀಸ್ ನೋಡಿಕೊಂಡಿರು ಎಂದು ಹೇಳುವ ಹುಡುಗಿಯ ಅಪ್ಪನ ಮಾತನ್ನು ಸ್ವಾಭಿಮಾನಿ ಪ್ರವೀಣ ತಿರಸ್ಕರಿಸುವ ಪ್ರವೀಣ ಇದನ್ನು ಒಪ್ಪಿಕೊಳ್ಳುವನೇ? ಆದರೆ, ನಿಮ್ಮಿಬ್ಬರ ನಡುವೆ ಮುಚ್ಚಿದ ಬಾಗಿಲಿನ ಹಿಂದೆ ಆಗಿರುವ ಮಾತುಕತೆ ನನಗೇನು ಗೊತ್ತು? ಕರೆಂಟಿಲ್ಲದೆ ಹೇಗೆ ಎಡಿಟರ್ ಆಗ್ತೀಯಾ ಎಂದು ನಾಯಕಿ ಪ್ರಶ್ನಿಸುತ್ತಾಳೆ. ಆಕೆಯ ಪ್ರೀತಿ ನಿಷ್ಕಪಟವೆಂಬುದು ಅರ್ಥವಾಗಿ ಪ್ರವೀಣ ಸಮ್ಮತಿಸುತ್ತಾನೆ.

ಈ ನಡುವೆ ಫೇಲಾದ ಗೆಳೆಯನಿಗೆ ಪ್ರವೀಣ ಆಶ್ರಯ ಕೊಡುತ್ತಾನೆ. ಆತನಿಂದಲೇ ಕೆಲಸ ಕೆಡುತ್ತದೆ, ಆದರೂ ಸುಖ-ದುಃಖ ಎರಡನ್ನೂ ಇಬ್ಬರೂ ಹಂಚಿಕೊಳ್ಳುತ್ತಾರೆ. ಆ ಗೆಳೆಯನಿಗೋ ಪದಗಳನ್ನು ಹೇಳುವಾಗ ಅಕ್ಷರಗಳು ಅದಲು ಬದಲಾಗುವ ಸಮಸ್ಯೆ (ಉದಾ: ಹಾರ್ಡ್ ಡಿಕ್ಸ್). ಆತನ ಪದಪ್ರಯೋಗಗಳೇ ಹಲವು ಕಡೆಗಳಲ್ಲಿ ಅನಾಯಾಸವಾಗಿ ನಗು ಉಕ್ಕಿಸುತ್ತವೆ. ಮದುವೆ ಮನೆಯಲ್ಲಿ ಲಾಡುಗಳ ಫೋಟೋ ತೆಗೆಯುವ ದೃಶ್ಯದ ಆ ಕಲ್ಪನೆ ಹೇಗೆ ಹೊಳೆಯಿತೋ ದೇವನೇ ಬಲ್ಲ! ಅದನ್ನು ನೋಡಿಯೇ ಆನಂದಿಸಬೇಕು.

ಚೇತೋಹಾರಿ ದೃಶ್ಯಗಳು:

ವಾಸ್ತವಕ್ಕೆ ತೀರಾ ಹತ್ತಿರವಾದ, ನಮ್ಮ ಬದುಕಿನಲ್ಲೇ ಹಿಂದೆಂದೋ ಸಂಭವಿಸಿದ ಘಟನೆಗಳಿವು ಎನ್ನಿಸುವಂತಹ ದೃಶ್ಯಗಳಿಂದಲೇ ಚಿತ್ರವು ಸಮೃದ್ಧವಾಗಿದೆ. ಕಾಲೇಜಿನ ದೃಶ್ಯಗಳು ಲೈವ್ಲಿಯಾಗಿವೆ. `ನಮ್ಗೆ ನಮ್ ಕ್ಲಾಸ್ ಒಂದು ಬಿಟ್ಟು ಬೇರೆ ಎಲ್ಲ ಕ್ಲಾಸ್‌ಗಳಲ್ಲೂ ಫಿಗರ್‌ಗಳು ಕಾಣ್ತಾವೆ’ (ಯಾಕೋ ಶಿಷ್ಯಾ ಹಾಡು. ಕೊನೆಗೆ ಹುಡುಗೀರಿಗೂ ಹೀಗೇ ಅನ್ಸುತ್ತಾ ಎಂದು ಪ್ರಶ್ನಿಸುವುದೂ, ಅದಕ್ಕೆ ಉತ್ತರವನ್ನೂ ಹಾಡಿನ ಚರಣದ ಮೂಲಕವೇ ಕೊಡುವುದೂ ಚೂಟಿಯಾಗಿದೆ.

ಈ ಹಾಡಲ್ಲಿ ಬರುವ ಸುಂದರಿಯನ್ನು ಚಿತ್ರದ ನಾಯಕಿ ಎಂದು ತಪ್ಪು ತಿಳಿದುಕೊಂಡರೆ ನಾವು ಹೊಣೆಯಲ್ಲ!) ಹಾಗೂ ನ್ಯಾಕ್ ತಂಡ ಬರುವಾಗ ಕಾಲೇಜಿನ ಶ್ರೇಷ್ಠತೆಯನ್ನು ಬಿಂಬಿಸುವ ವೀಡಿಯೋ ಮಾಡಿಕೊಟ್ಟರೂ, ಅಟೆಂಡೆನ್ಸ್ ಕಮ್ಮಿಯಿರುವ ಕಾರಣಕ್ಕೆ ಪರೀಕ್ಷೆ ಹಾಲ್ ಟಿಕೆಟ್ ಕೊಡಬೇಕಿದ್ದರೆ 5,000 ರೂ. ಫೈನ್ ಕಟ್ಟು ಎಂದು ಪ್ರಾಂಶುಪಾಲರು ಖಡಾಖಂಡಿತವಾಗಿ ಹೇಳಿದಾಗ, ಕಾಲೇಜಿನ ವಾಸ್ತವ ಸ್ಥಿತಿಯನ್ನು ಬಿಂಬಿಸುವ ಮತ್ತೊಂದು ವೀಡಿಯೋ ಹರಿಬಿಟ್ಟು ಡಿಬಾರ್ ಆಗುವ ತುಂಟ ಪ್ರವೀಣ ಕಠಿಣ ಪರಿಶ್ರಮದಿಂದಲೇ ಯಶಸ್ವಿ ಎಡಿಟರ್ ಆಗಿ, ನಿರ್ದೇಶಕರೊಬ್ಬರು ಅಪಘಾತದಲ್ಲಿ ತೀರಿಕೊಳ್ಳುವ ಮುನ್ನ ಅರ್ಧ ಮುಗಿಸಿದ್ದ ಚಿತ್ರವನ್ನು ನಿರ್ದೇಶಕನಾಗಿಯೂ ಪೂರ್ಣಗೊಳಿಸುವತನಕ, ಬೆಳೆಯುವ ಪ್ರವೀಣನ ಜರ್ನಿ ಆಹ್ಲಾದಕರವಾಗಿದೆ, ಚಿತ್ರವು ಅಪ್ಡೇಟ್ ಆಗಿದೆ.

ಆಲ್ ಓಕೆ ಅವರು ಗೂಡಂಗಡಿ ರಾಮಣ್ಣ ಹಾಡನ್ನು ಈ ಚಿತ್ರಕ್ಕಾಗಿ ಹಾಡಿದ್ದು, ಕಾಲು ಕುಣಿಸುವಂತಿದೆ. `ಕನಸಲ್ಲೂ ಕಾಣದ’ ರೊಮ್ಯಾಂಟಿಕ್ ಹಾಡು ಕಿವಿಗಿಂಪಾಗಿದೆ. ಮಾತು ಮಾತಿಗೆ `ಬೊಜ್ಜ’ ಎನ್ನುತ್ತ ಬಯ್ಯುವ, ಬಿಲ್ಡಪ್ ಪ್ರೊಫೆಸರ್ ಪಾತ್ರದಲ್ಲಿ ರಾಮನಾಥ ಲೋಂಢೆ ರಂಜಿಸುತ್ತಾರೆ. ಚಿತ್ರದ ಸಂಭಾಷಣೆ ನವಿರಾಗಿದೆ. ಪವನ್ ಭಟ್ ಪೆನ್ನಲ್ಲಿ ಪ್ರವೀಣನ ಸೈಕಲ್, ಅಂಕಲ್ ಹಳೆ ಕಾರು ಕೂಡ ಪಾತ್ರಗಳಾಗುವುದು ವಿಶೇಷ. ನಾಯಕ ಪ್ರವೀಣ್ ಇಲ್ಲಿ ಸಂಗೀತ ನಿರ್ದೇಶಕರೂ ಆಗಿ, ಚಿತ್ರವೊಂದಕ್ಕೆ ಸಂಗೀತ ಹೇಗೆ ರಸಪಾಕದಂತಿರಬೇಕೆಂದು ತೋರಿಸಿಕೊಟ್ಟಿದ್ದಾರೆ.

ಸದ್ಯ ಬೆಂಗಳೂರು ಮತ್ತು ಕಾರ್ಕಳದ ಥಿಯೇಟರ್‌ಗಳಲ್ಲಿ ಮಾತ್ರ ಉಳಿದಿರುವ ಈ ಚಿತ್ರ ಶೀಘ್ರದಲ್ಲೇ ಒಟಿಟಿಯಲ್ಲಿ ವೀಕ್ಷಿಸಲು ಸಿಗುವ ನಿರೀಕ್ಷೆಯಿದೆ. ಆಗಲಾದರೂ ಮರೆಯದೇ ನೋಡಿ.

ಆಸ್ತಿ ಕಲಹ; ತಮ್ಮನನ್ನು ಗುಂಡಕ್ಕಿ ಕೊಂದ ಅಣ್ಣ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣನೇ ತಮ್ಮನನ್ನು ಗುಂಡಿಟ್ಟು ಕೊಂದಿರುವ ಭೀಕರ ಘಟನೆ ಜರಗಿದೆ.

ತಾಲೂಕಿನ ಕವಲೂರು ಗ್ರಾಮದ ವಿನಾಯಕ ದೇಸಾಯಿ (38) ಮೃತ ವ್ಯಕ್ತಿ. ಇವರ ಅಣ್ಣ ರಾಘವೇಂದ್ರ ದೇಸಾಯಿ ಕೊಲೆ ಮಾಡಿದಾತ. ಆಸ್ತಿಗಾಗಿ ಅಣ್ಣ ತಮ್ಮಂದಿರ ನಡುವೆ ಬಹುದಿನದಿಂದ ಜಗಳವಿತ್ತು. ವಿವಾದ ಇರುವಾಗಲೇ ರಾಘವೇಂದ್ರ ದೇಸಾಯಿ ಹೊಲದಲ್ಲಿ ಬಿತ್ತನೆ ಮಾಡಿದ್ದಾನೆ. ಅದನ್ನು ತೆರವು ಮಾಡಲು ವಿನಾಯಕ‌ ದೇಸಾಯಿ ತೆರಳಿದಾಗ ಪರಸ್ಪರ ಜಗಳವಾಗಿದೆ. ಇದರಿಂದ ಉದ್ರಿಕ್ತಗೊಂಡ ರಾಘವೇಂದ್ರ ದೇಸಾಯಿ ತನ್ನ ಪರವಾನಗಿ ಹೊಂದಿದ ಬಂದೂಕಿನಿಂದ ವಿನಾಯಕನಿಗೆ ಗುಂಡು ಹೊಡೆದು ಕೊಲೆಗೈದು ಮನೆಯಲ್ಲಿ ಅವಿತು ಕುಳಿತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಎಸ್ಪಿ ಅರುಣಾಂಗ್ಶು ಗಿರಿ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಅಳವಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬುದ್ಧಿಮಾತು ಹೇಳಿದ ಪೊಲೀಸಪ್ಪನಿಗೆ ಮೂವರಿಂದ ಥಳಿತ

ವಿಜಯಸಾಕ್ಷಿ ಸುದ್ದಿ, ಗದಗ:

ಇತ್ತೀಚಿಗೆ ಬೈಕ್ ವ್ಹೀಲಿಂಗ್, ವಾಹನಗಳನ್ನು ಅಡ್ಡಾದಿಡ್ಡಿ ಓಡಿಸುವವರ ಸಂಖ್ಯೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ಹೆಚ್ಚಾಗುತ್ತಿದೆ. ಹೀಗೆ ತಪ್ಪು ಮಾಡಿದವರಿಗೆ ಬುದ್ಧಿಮಾತು ಹೇಳಲು ಹೋಗುವವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸುತ್ತಿರುವುದು ಹೊಸತೇನಲ್ಲ. ಆದರೆ, ಈ ಭೂಪರು ಬುದ್ಧಿಮಾತು ಹೇಳಿದ ಪೊಲೀಸಪ್ಪನ ಮೇಲೆಯೇ ಹಲ್ಲೆ ನಡೆಸಿದ್ದಾರೆ.

ಹೌದು, ಬೆಟಗೇರಿ ಸೆಟ್ಲಮೆಂಟ್ (ಗಾಂಧಿ ನಗರ)ದ ಓರ್ವ ಸೇರಿ ಮೂವರು ಆರೋಪಿಗಳು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನಸ್ಟೇಬಲ್ ಓರ್ವರಿಗೆ ಥಳಿಸಿರುವ ಘಟನೆ ನಿನ್ನೆ(ಗುರುವಾರ) ರಾತ್ರಿ ಪಾಲಾ ಬಾದಾಮಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಬಳಿ ನಡೆದಿದೆ.

ಹಾತಲಗೇರಿ ರಿಂಗ್ ರೋಡ್‌ನ ನಿವಾಸಿಗಳಾದ ಕಿಶೋರಕುಮಾರ ಮಂಜುನಾಥ ಕದಂ, ಪ್ರಭಾಕರ ವಾಸಪ್ಪ ಶೇಷಪ್ಪನವರ ಹಾಗೂ ಬೆಟಗೇರಿ ಸೆಟ್ಲಮೆಂಟ್‌ನ ಮಾರುತಿ ಮದ್ದಪ್ಪ ಮುತಗಾರ ಎಂಬ ಮೂವರು ಆರೋಪಿಗಳು ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ:

ಹಾತಲಗೇರಿ ರಿಂಗ್ ರೋಡ್‌ನ ನಿವಾಸಿ ಕಿಶೋರಕುಮಾರ ಎಂಬಾತ ತನ್ನ ರಾಯಲ್ ಎನ್‌ಫಿಲ್ಡ್ (ಕೆಎ 26 E 6444) ಬೈಕ್‌ನ್ನು ಅಡ್ಡಾದಿಡ್ಡಿಯಾಗಿ ಓಡಿಸುಕೊಂಡು ಬರುತ್ತಿದ್ದ. ಆಗ ಹಲ್ಲೆಗೊಳಗಾಗಿರುವ ಪೊಲೀಸ್ ಪೇದೆ ಸರಿಯಾಗಿ ವಾಹನ ಚಾಲನೆ ಮಾಡಿಕೊಂಡು ಹೋಗುವಂತೆ ತಿಳಿಸಿದ್ದಾರೆ. ಇಷ್ಟಕ್ಕೆ ಕಿಶೋರಕುಮಾರನ ಹಿಂದೆ ಬರುತ್ತಿದ್ದ ಮಾರುತಿ ಹಾಗೂ ಪ್ರಭಾಕರ ತಮ್ಮ ಬೈಕ್ (ಕೆಎ 26 E 5013)ನ್ನು ಅಡ್ಡಲಾಗಿ ನಿಲ್ಲಿಸಿ ‘ನಮಗೆ ಬುದ್ಧಿವಾದ ಹೇಳತಿ. ನಾವ್ಯಾರೆಂದು ತಿಳಿದುಕೊಂಡಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ, ಮೊದಲನೇ ಆರೋಪಿ ಕಿಶೋರಕುಮಾರ ಜೊತೆಗೂಡಿ ಈ ಮೂವರು ಆರೋಪಿಗಳು ಹಲ್ಲೆ ನಡೆಸಿದ್ದಾರೆ. ನನ್ನ ಸರ್ಕಾರಿ ಸೇವೆಗೆ ಅಡ್ಡಿಪಡಿಸಿದ್ದಾರೆ ಎಂದು ಪೊಲೀಸ್ ಪೇದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಾಲೇಜು ರಂಗ ಟೈಟಲ್ ಅನಾವರಣ ಸಮಾರಂಭ, ಪತ್ರಿಕೋದ್ಯಮದಲ್ಲಿ ವಿಪುಲ ಅವಕಾಶ; ಪಾಟೀಲ್

ಬರವಣಿಗೆ ಕೌಶಲ್ಯ ಬೆಳೆಸಿಕೊಳ್ಳಿ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ;

ಪತ್ರಿಕೋದ್ಯಮ ನಿಂತ ನೀರಲ್ಲ. ಹೊಸ ಸಾಧ್ಯತೆಗಳತ್ತ ಮುಖ ಮಾಡಿರುವ ಕ್ಷೇತ್ರ. ಡಿಜಿಟಲ್ ಮೀಡಿಯಾ ಮೂಲಕ ಆರ್ಥಿಕ ಸದೃಢತೆಗೆ ಒಡ್ಡಿಕೊಂಡಿರುವ ಪತ್ರಿಕಾರಂಗದಲ್ಲಿ ಈಗ ಬರವಣಿಗೆಗೆ, ಬೆಳವಣಿಗೆಗೆ ವಿಫುಲ ಅವಕಾಶಗಳಿವೆ ಎಂದು ಹಿರಿಯ ಪತ್ರಕರ್ತ ಸಿದ್ಧನಗೌಡ ಪಾಟೀಲ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಪತ್ರಿಕೋದ್ಯಮ ವಿಭಾಗ ಹಾಗೂ ಐಕ್ಯುಎಸಿ ಘಟಕದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ನೂತನವಾಗಿ ಹೊರತರುತ್ತಿರುವ ಮಾಸಪತ್ರಿಕೆ ‘ಕಾಲೇಜು ರಂಗ ಎಂಬ ಟೈಟಲ್ ಅನಾವರಣಗೊಳಿಸಿ ಅವರು ಮಾತನಾಡಿದರು.

‘ಕಾಲೇಜಿನಲ್ಲಿ ಸಾಮಾನ್ಯವಾಗಿ ಕಲಿಕೆ ಇರುತ್ತದೆ. ಇಂಥ ಚಟುವಟಿಕೆಗಳಿಂದ ಪ್ರಯೋಗಶೀಲತೆ, ಕ್ರಿಯಾಶೀಲತೆ ಹೆಚ್ಚಾಗುತ್ತದೆ. ಕಾಲೇಜು ರಂಗ ವಿದ್ಯಾರ್ಥಿಗಳ ಪ್ರತಿಭೆಗೆ ದೊಡ್ಡ ವೇದಿಕೆಯಾಗಿದ್ದು ಪ್ರಯೋಜನ ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು.

ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ತಿಮ್ಮಾರೆಡ್ಡಿ ಮಾತನಾಡಿ, ‘ಶಂಕರನಾಗ್ ಆರಂಭಿಸಿದ ರಂಗಶಂಕರದಿಂದ ಅನೇಕರು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ನಮ್ಮ ಕಾಲೇಜಿನ ಈ ಕಾಲೇಜು ರಂಗ ಪತ್ರಿಕೆಯಿಂದ ವಿದ್ಯಾರ್ಥಿಗಳು ಪತ್ರಿಕಾಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದು ಆಶಿಸಿದರು.

ಐಕ್ಯುಎಸಿ ಘಟಕದ ಸಂಯೋಜಕ ಡಾ.ಪ್ರಭುರಾಜ್ ನಾಯಕ್ ಮಾತನಾಡಿ, ‘ಸಮಾಜದಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಅಗಾಧ ಶಕ್ತಿ ಇದೆ. ಲೇಖನಿ ಜೊತೆಗಿದ್ದರೆ ಪತ್ರಕರ್ತನಿಗೆ ಅದು ದೊಡ್ಡ ಬಲ ಇದ್ದಂತೆ. ಕಾಲೇಜು ರಂಗ ನಿರಂತರತೆ ಕಾಪಾಡಿಕೊಳ್ಳಲಿ, ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಲಿ ಎಂದು ಹಾರೈಸಿದರು.

ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ವಿಜಯಕುಮಾರ್ ಕುಲಕರ್ಣಿ ಮಾತನಾಡಿ, ‘ಪತ್ರಿಕಾ ಕ್ಷೇತ್ರ ಸಂವಿಧಾನದ ನಾಲ್ಕನೇ ಅಂಗ. ಮೂರು ಅಂಗಗಳು ವೈಫಲ್ಯವಾದಾಗ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವುದೇ ಪತ್ರಿಕಾ ರಂಗ. ಪ್ರಾಯೋಗಿಕವಾಗಿಯೂ ವಿದ್ಯಾರ್ಥಿಗಳು ಈ ಹಂತದಿಂದಲೇ ನೈಪುಣ್ಯತೆ ಗಳಿಸಲಿ ಎನ್ನುವ ಕಾರಣಕ್ಕಾಗಿ ಕಾಲೇಜು ರಂಗ ಆರಂಭಿಸಲಾಗುತ್ತಿದ್ದು, ಕಾಲೇಜಿನ ಎಲ್ಲ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಸಹಕಾರ ಇರಲಿ ಎಂದು ಕೋರಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಮಾರುತೇಶ್ ಬಿ. ಮಾತನಾಡಿ, ‘ಪತ್ರಿಕೋದ್ಯಮ ವಿಭಾಗಕ್ಕೆ ಕ್ರಿಯಾಶೀಲ ಉಪನ್ಯಾಸಕರಿದ್ದು ಪಾಠದ ಜೊತೆಗೆ ಪ್ರಾಯೋಗಿಕತೆಗೂ ಒತ್ತು ನೀಡಿರುವುದು ಸಂತಸದ ಸಂಗತಿ. ಬರುವ ದಿನಗಳಲ್ಲಿ ಕಾಲೇಜಿನಲ್ಲಿ ಪತ್ರಿಕೋದ್ಯಮ ರೆಗ್ಯೂಲರ್ ಕೋರ್ಸ್ ಆರಂಭಿಸಲಾಗುವುದು ಎಂದು ತಿಳಿಸಿದರು.

ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಬಸವರಾಜ ಕರುಗಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಧುರಾ ಮತ್ತು ಸ್ವಾತಿ ಪ್ರಾರ್ಥಿಸಿದರು. ನಿಂಗಮ್ಮ ನಿರೂಪಿಸಿದರು. ರಮೇಶ್ ಸ್ವಾಗತಿಸಿದರು. ರೇಷ್ಮಾ ಅತಿಥಿ ಪರಿಚಯ ಮಾಡಿಕೊಟ್ಟರು. ಭೀಮೇಶ್ ವಂದಿಸಿದರು.

ಆಟೋ ಪಲ್ಟಿ; ಚಾಲಕ ಸ್ಥಳದಲ್ಲಿಯೇ ಸಾವು

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಚಾಲಕನ ನಿಯಂತ್ರಣ ತಪ್ಪಿ ಆಟೋವೊಂದು ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ವೃದ್ದೆಯೊಬ್ಬಳಿಗೆ ಗಂಭೀರ ಗಾಯವಾದ ಘಟನೆ ತಾಲ್ಲೂಕಿನ ಗುಡಿಸಾಗರ ಕ್ರಾಸ್ ಬಳಿ ಸೋಮವಾರ ಸಂಜೆ ಸಂಭವಿಸಿದೆ.

ನವಲಗುಂದ ತಾಲ್ಲೂಕಿನ ಯಮನೂರ ಚಾಂಗದೇವನ ದರ್ಶನಕ್ಕೆಂದು ಗದಗ ಜಿಲ್ಲೆಯ ರೋಣದಿಂದ ಆಟೋದಲ್ಲಿ ಬಂದಿದ್ದ ಭಕ್ತರು ಚಾಂಗದೇವನ ದರ್ಶನ ಪಡೆದು ಮರಳಿ ಹೋಗುವ ಸಂದರ್ಭದಲ್ಲಿ ಸಂಜೆ ಈ ದುರ್ಘಟನೆ ಸಂಭವಿಸಿದೆ.

ಚಾಲಕ ಮೌಲಾಸಾಬ ರಂಜಾನ್‍ಸಾಬ ಮುಲ್ಲಾನವರ ಸ್ಥಳದಲ್ಲಿಯೇ ಮೃತಪಟ್ಟಿದ್ದು, ವೃದ್ದೆ ಬೀಬಿಜಾನ ರಂಜಾನ್‍ಸಾಬ ಮುಲ್ಲಾನವರ ಗಾಯಗೊಂಡಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ನವಲಗುಂದ ಪೊಲೀಸರು ಆಗಮಿಸಿ ತನಿಖೆ ಕೈಗೊಂಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಕೊಪ್ಪಳ ಜಿಲ್ಲೆಗೆ ಮತ್ತೊಂದು ಐಎಎಸ್ ಗರಿ; ಯುಪಿಎಸ್‌ಸಿ ಪರೀಕ್ಷೆಯಲ್ಲಿ 191ನೇ ರ‍್ಯಾಂಕ್ ಪಡೆದ ಅಪೂರ್ವ ಬಾಸೂರ

ಯುಪಿಎಸ್‌ಸಿ ಫಲಿತಾಂಶ ಪ್ರಕಟ; ಭತ್ತದ ನಾಡಿನ ‘ಅಪೂರ್ವ’ಗೆ 191ನೇ ರ‍್ಯಾಂಕ್; ಎರಡನೇ ಪ್ರಯತ್ನದಲ್ಲಿ ಐಎಎಸ್ ಉತ್ತೀರ್ಣ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:

ಸಾಧಿಸಬೇಕು ಎಂಬುವ ಅಚಲ ಮನಸ್ಸು ಒಂದಿದ್ದರೆ ಸಾಕು ಏನನ್ನಾದರೂ ಸಾಧಿಸಬಹುದು ಎಂಬುದನ್ನು ನಿರೂಪಿಸಿದ್ದಾರೆ ಭತ್ತದ ನಾಡಿನ ಈ ಪ್ರತಿಭೆ.

ಯುಪಿಎಸ್‌ಸಿ ಸೋಮವಾರ ಪ್ರಕಟಿಸಿದ ಐಎಎಸ್ ಪರೀಕ್ಷೆ ಫಲಿತಾಂಶದಲ್ಲಿ ಗಂಗಾವತಿ ನಗರದ ಅಪೂರ್ವ ಬಾಸೂರ ದೇಶಕ್ಕೆ 191ನೇ ರ‍್ಯಾಂಕ್ ಪಡೆದು ರಾಜ್ಯದ ಗಮನ ಸೆಳೆದಿದ್ದಾರೆ. ಐಎಎಸ್ ಪಾಸಾಗಿರುವ ಅಪೂರ್ವ ಬಾಸೂರು 1 ರಿಂದ 10ನೇ ತರಗತಿಯವರೆಗೆ ಗಂಗಾವತಿಯ ಸೆಂಟ್ ಪಾಲ್ಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ.

2012ರಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮುಗಿಸಿ, ಬೆಂಗಳೂರಿನ ಆರ್.ವಿ.ಡೆಂಟಲ್ ಕಾಲೇಜಿನಲ್ಲಿ ಬಿಡಿಎಸ್(ಡೆಂಟಿಸ್ಟ್) ಅಭ್ಯಾಸದ ನಂತರ ಅಪೂರ್ವ 2018ರಲ್ಲಿ ದೆಹಲಿಗೆ ಐಎಎಸ್ ಕೋಚಿಂಗ್ ಪಡೆಯಲು ತೆರಳಿದರು.

2018ರಿಂದ 2020ರವೆಗೆ ತರಬೇತಿ ಪಡೆದು ಮರಳಿ ರಾಜ್ಯಕ್ಕೆ ವಾಪಸ್ ಬಂದು 2020ರಲ್ಲಿ ಮೊದಲ ಬಾರಿಗೆ ಐಎಎಸ್ ಪರೀಕ್ಷೆ ಎದುರಿಸಿದರು. ಆದರೆ, ಸೂಕ್ತ ತಯಾರಿಯೊಂದಿಗೆ ಮೊದಲ ಬಾರಿಗೆ ಪರೀಕ್ಷೆ ಎದುರಿಸಿದಾಗಲೂ ಪ್ರಿಲಿಮನರಿ ಪಾಸ್ ಆಗಲು ಸಾಧ್ಯವಾಗಿರಲಿಲ್ಲ. ಆದರೆ, ದೃತಿಗೆಡದೆ ಚಿತ್ತ ಮನಸ್ಸಿನಿಂದ ಮತ್ತೆ ದಿನಕ್ಕೆ 8-10 ಗಂಟೆ ಅಧ್ಯಯನ ಮುಂದುವರೆಸಿ, 2021ರಲ್ಲಿ ಎರಡನೇ ಬಾರಿಗೆ ಮತ್ತೆ ಪರೀಕ್ಷೆ ಎದುರಿಸಿದಾಗ ಪ್ರಿಲಿಮನರಿ, ಮೇನ್ಸ್ ಹಾಗೂ ಸಂದರ್ಶನದಲ್ಲಿ ಉತ್ತೀರ್ಣರಾಗಿ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.

ಐಎಎಸ್ ಆಗಬೇಕೆಂಬ ದೃಢ ಮನಸಿತ್ತು
ಸಾರ್ವಜನಿಕ ಆಡಳಿತ ವಿಷಯ ಮುಖ್ಯ ವಿಷಯವನ್ನಾಗಿ ಇಟ್ಟುಕೊಂಡು ಪರೀಕ್ಷೆ ಬರೆದಿದ್ದ ಅಪೂರ್ವ ಅವರಿಗೆ ಚಿಕ್ಕಂದಿನಿಂದಲೇ ಐಎಎಸ್ ಆಗಬೇಕೆಂಬ ದೃಢ ನಿರ್ಧಾರವಿತ್ತು. ಈ ನಿಟ್ಟಿನಲ್ಲಿ ಸದಾ ಪ್ರಯತ್ನ ನಡೆಸಿದ ಪರಿಣಾಮ ಅಚ್ಚರಿ ಎಂಬಂತೆ ಎರಡನೇ ಪ್ರಯತ್ನದಲ್ಲಿಯೇ ಯುಪಿಎಸ್‌ಸಿ ಪರೀಕ್ಷೆ ಪಾಸಾಗಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ ಇವರು, ಮುಂದೆ ಪಾಲ್ಸ್ ಮೇಕಿಂಗ್ ಅಧಿಕಾರಿಯಾಗಿ ಜನಸೇವೆ ಮಾಡಬೇಕೆನ್ನುವ ಆಸೆ ಹೊಂದಿದ್ದಾರೆ.

ತರಬೇತಿ ಹಾಗೂ ವಿದ್ಯಾಭ್ಯಾಸದ ಸಮಯದಲ್ಲಿ ಕುಟುಂಬದವರ ಸಹಕಾರ ಅತ್ಯಮೂಲ್ಯವಾಗಿದ್ದರಿಂದ ಐಎಎಸ್ ಪಾಸ್ ಮಾಡಿದ್ದೇನೆ. ಮೊದಲ ಪ್ರಯತ್ನದಲ್ಲಿ ಹಿನ್ನಡೆಯಾದಾಗ ಕುಗ್ಗದೇ ಮರು ಪ್ರಯತ್ನ ಮಾಡಿದ್ದರಿಂದ ಎರಡನೇ ಪ್ರಯತ್ನದಲ್ಲಿ ಯಶಸ್ಸು ದೊರೆಯಿತು.

-ಅಪೂರ್ವ ಬಾಸೂರ, ಯುಪಿಎಸ್‌ಸಿ 191ನೇ ರ‍್ಯಾಂಕ್ ಪಡೆದ ಯುವತಿ.

ನನ್ನ ಮಗಳ ಸಾಧನೆ ಅತ್ಯಂತ ಖುಷಿ ತಂದಿದೆ.
ನಿರಂತರ ಅಧ್ಯಯನಶೀಲಳಾಗಿ ಎರಡನೇ ಪ್ರಯತ್ನದಲ್ಲಿಯೇ ಐಎಎಸ್ ಪಾಸ್ ಮಾಡಿರುವುದು ಸಂತಸ ತಂದಿದೆ. – ಡಾ. ಶ್ರೀಕಾಂತ್ ಬಾಸೂರ, ಅಪೂರ್ವ ತಂದೆ

ಮುಸ್ಲಿಂರನ್ನು ದೇಶ ಬಿಟ್ಟು ಕಳಿಸಲು ಅಸಾಧ್ಯ: ಸಂಸದ ಸಂಗಣ್ಣ ಕರಡಿ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:

‘ಮುಸ್ಲಿಂರನ್ನು ದೇಶ ಬಿಟ್ಟು ಕಳಿಸಲು ಸಾಧ್ಯವಿಲ್ಲ ಎಂದು ಸಂಸದ ಸಂಗಣ್ಣ ಕರಡಿ ಹೇಳುವ ಮೂಲಕ ಅಚ್ಚರಿ ಮೂಡಿಸಿದರು.

ಶನಿವಾರ ಕೊಪ್ಪಳದಲ್ಲಿ ನಡೆದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮದಲ್ಲಿ ಅವರು ಈ ಮೇಲಿನಂತೆ ಹೇಳಿದರು.

‘ಸ್ವಾತಂತ್ರ್ಯ ನಂತರ ದೇಶ ವಿಭಜನೆಯಾಗಿ ಹಿಂದೂ, ಮುಸ್ಲಿಂ ರಾಷ್ಟ್ರಗಳು ಹುಟ್ಟಿಕೊಂಡವು. ನಮ್ಮ ದೇಶದಲ್ಲಿ ಅನೇಕ ಮುಸ್ಲಿಂ ಕುಟುಂಬ ಉಳಿದುಕೊಂಡವು. ಇಂದಿಗೂ ಅವರು ನಾವು ಒಂದೇ ಕುಟುಂಬದ ಅಣ್ಣತಮ್ಮಂದಿರಂತೆ ಸೌಹಾರ್ದತೆ, ಸಹೋದರತೆ, ಭ್ರಾತೃತ್ವದಿಂದ ಬದುಕುತ್ತಿದ್ದೇವೆ. ಹೀಗಾಗಿ ಅವರನ್ನು ದೇಶ ಬಿಟ್ಟು ಕಳಿಸಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

ರಾಜ್ಯದಲ್ಲಿ ಹಿಜಾಬ್, ಹಲಾಲ್ ಕಟ್, ಆಜಾನ್.. ಹೀಗೆ ದಿನದಿಂದ ದಿನಕ್ಕೆ ಹಿಂದೂ ಮುಸ್ಲಿಂರ ಮಧ್ಯೆ ವಿವಾದ ಹುಟ್ಟಿಕೊಳ್ಳುತ್ತಿರುವ ಹೊತ್ತಲ್ಲಿ ಬಿಜೆಪಿ ಸಂಸದರು ದೇಶದಲ್ಲಿರುವ ಮುಸ್ಲಿಂರನ್ನು ಭಾರತ ಬಿಟ್ಟು ಕಳಿಸಲು ಸಾಧ್ಯವಿಲ್ಲ ಎಂಬ ಹೇಳಿಕೆ ಗಮನಾರ್ಹವಾಗಿದೆ.

ಈಗಾಗಲೇ ಬಿಜೆಪಿಯಿಂದ ಒಂದು ಕಾಲು ಹೊರಗೆ ಇಟ್ಟಿದ್ದಾರೆಂದು ಹೇಳಲಾಗುತ್ತಿರುವ ಸಂಸದ ಸಂಗಣ್ಣ ಕರಡಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಸುವ ಕಾರಣಕ್ಕೆ ಅಲ್ಪಸಂಖ್ಯಾತರನ್ನು ಒಲೈಸಿಕೊಳ್ಳಲು ಇಷ್ಟೊಂದು ಪ್ರೀತಿ ತೋರುತ್ತಿದ್ದಾರೆಯೇ? ಎಂಬ ಚರ್ಚೆಗಳು ಜಿಲ್ಲೆಯಾದ್ಯಂತ ಶುರುವಾಗಿದೆ.

ಎಸಿಬಿ ಡಿವೈಎಸ್ಪಿ ಹೆಸರಿನಲ್ಲಿ ರೋಣ ತಹಸೀಲ್ದಾರ್‌ ಜಕ್ಕಣಗೌಡ್ರಗೆ ಬ್ಲಾಕ್ ಮೇಲ್; ನಾಲ್ವರು ಆರೋಪಿಗಳ ಬಂಧನ

ವಿಜಯಸಾಕ್ಷಿ ಸುದ್ದಿ, ಹಾಸನ/ಗದಗ:

ಗದಗ ಜಿಲ್ಲೆಯ ರೋಣ ತಾಲ್ಲೂಕು ತಹಸೀಲ್ದಾರ ಜೆ.ಬಿ.ಜಕ್ಕನಗೌಡರ ಸೇರಿದಂತೆ ರಾಜ್ಯಾದ್ಯಂತ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ಹೆಸರಿನಲ್ಲಿ ವಿವಿಧ ಇಲಾಖೆಯ ನೌಕರರಿಗೆ ದೂರವಾಣಿ ಕರೆ ಮಾಡಿ ಹಣ ಸಂದಾಯ ಮಾಡುವಂತೆ ವಂಚಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಇಬ್ಬರು ಮುಖ್ಯ ಆರೋಪಿಗಳನ್ನು ಹಾಗೂ ಇವರಿಗೆ ಸಹಕರಿಸುತ್ತಿದ್ದ ಇನ್ನಿಬ್ಬರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಸದಲಗಾ ಗ್ರಾಮದ ಮುರಿಗೆಪ್ಪಾ ನಿಂಗಪ್ಪ ಕುಂಬಾರ (೫೬), ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮುಗುಲಿ ಗ್ರಾಮದ ರಜನಿಕಾಂತ್ ತಂದೆ ನಾಗರಾಜ್ (೪೬) ಎಂಬುವವರೇ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ಸಿಮ್‌ಕಾರ್ಡ್, ಮೊಬೈಲ್‌ಗಳನ್ನು ಪಶಪಡಿಸಿಕೊಂಡಿದ್ದಾರೆ.

ಇವರಿಬ್ಬರು ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ನಿಮ್ಮ ಮೇಲೆ ಎಸಿಬಿ ದಾಳಿ ಮಾಡಲಾಗುವುದು. ಇದರಿಂದ ತಪ್ಪಿಸಿಕೊಳ್ಳಬೇಕಾದರೆ ಕೂಡಲೇ ನಮ್ಮ ಖಾತೆಗೆ ಆನ್‌ಲೈನ್ ಮೂಲಕ ಹಣ ಸಂದಾಯ ಮಾಡುವಂತೆ ವಂಚಿಸುತ್ತಿದ್ದರು. ಈ ಬಗ್ಗೆ ರಾಜ್ಯಾದ್ಯಂತ ವಿವಿಧ ಪೊಲೀಸ್ ಠಾಣೆಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಆರೋಪಿತರ ಹೆಡೆಮುರಿ ಕಟ್ಟಲು ನಾಲ್ಕು ತಂಡಗಳನ್ನು ರಚಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೇರೆ ಬೇರೆ ವ್ಯಕ್ತಿಗಳ ಹೆಸರಿನಲ್ಲಿ ಸಿಮ್ ಕಾರ್ಡ್ ಮತ್ತು ಮೊಬೈಲ್ ಖರೀದಿಸಿ ವಿವಿಧ ಇಲಾಖೆಯ ನೌಕರರಿಗೆ ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಎಸಿಬಿ ದಾಳಿ ಮಾಡುವುದಾಗಿ ಹೆದರಿಸುತ್ತಿದ್ದರು. ಅಲ್ಲದೆ, ವಿವಿಧ ವ್ಯಕ್ತಿಗಳ ಖಾತೆಗಳಿಗೆ ಹಣ ಸಂದಾಯ
ಮಾಡಿಸಿಕೊಳ್ಳುತ್ತಿದ್ದರು ಎಂಬುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಇನ್ನು ಅನೇಕರಿಗೆ ಇದೇ ರೀತಿ ವಂಚಿಸಿ ಹಣ ಪಡೆದಿರುವ ಬಗ್ಗೆಯೂ ಆರೋಪಿಗಳು ತಿಳಿಸಿದ್ದಾರೆ ಎಂದು ಎಸಿಬಿ ಪೊಲೀಸರು ತಿಳಿಸಿದ್ದಾರೆ.

ಮೊದಲನೇ ಆರೋಪಿ ಮುರಿಗೆಪ್ಪಾ ಕುಂಬಾರ ಸುಮಾರು ೪೦ಕ್ಕಿಂತ ಹೆಚ್ಚು ಮತ್ತು ಎರಡನೇ ಆರೋಪಿ ರಜನಿಕಾಂತ್ ಸುಮಾರು ೦೬ಕ್ಕಿಂತ ಅಧಿಕ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಇವರ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಕೆಲವು ಪ್ರಕರಣಗಳು ತನಿಖಾ ಹಂತದಲ್ಲಿ, ಕೆಲವು ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು, ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯದಿಂದ ವಾರೆಂಟ್ ಸಹ ಹೊರಡಿಸಲಾಗಿತ್ತು. ಅಲ್ಲದೆ, ಇವರಿಬ್ಬರು ಈ ಹಿಂದೆ ಬಂಧಿತರಾಗಿ, ನ್ಯಾಯಾಲಯದಿಂದ ಜಾಮೀನು ಸಹ ಪಡೆದು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಗಲಕೋಟೆ ಎಸ್‌ಪಿ ಲೋಕೇಶ್ ಜಗಲಾಸರ್, ಹಾಸನ ಎಸ್‌ಪಿ ಆರ್.ಶ್ರೀನಿವಾಸ್‌ಗೌಡ, ಬೆಳಗಾವಿ ಎಸಿಬಿ ಉತ್ತರ ವಲಯದ ಪೊಲೀಸ್ ಅಧೀಕ್ಷಕ ಬಿ.ಎಸ್.ನೇಮಗೌಡ ಹಾಗೂ ಮೈಸೂರು ಎಸಿಬಿ ದಕ್ಷಿಣ ವಲಯದ ಪೊಲೀಸ್ ಅಧೀಕ್ಷಕ ಸಜೀತ ವಿ.ಜೆ. ಅವರ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು.

ಇನ್ನಿಬ್ಬರು ಆರೋಪಿಗಳ ಬಂಧನ

ಹಾಸನದಲ್ಲಿ ಬಂಧಿಸಲಾಗಿರುವ ಮುಖ್ಯ ಆರೋಪಿಗಳಾದ ಮುರಿಗೆಪ್ಪಾ ಹಾಗೂ ರಜನಿಕಾಂತ್‌ಗೆ ಸಿಮ್ ಮತ್ತು ಮೊಬೈಲ್ ಖರೀದಿಗೆ ಆಧಾರ್ ಕಾರ್ಡ್ ಸೇರಿದಂತೆ ಹಲವು ದಾಖಲೆ ಕೊಟ್ಟು ಸಹಕರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಗದಗ ಎಸಿಬಿ ಅಧಿಕಾರಿಗಳು ಹಾಗೂ ರೋಣ ಪೊಲೀಸರು ಬಂಧಿಸಿದ್ದಾರೆ. ಸದಲಗಾ ಬಳಿಯ ಮಹಾರಾಷ್ಟ್ರದ ದತ್ತುವಾಡ ಗ್ರಾಮದ ನಿವಾಸಿಗಳಾದ ರಮೇಶ್ ಚೌಗಲೆ, ಮಹಾವೀರ ಚೌಗಲೆ ಎಂಬುವವರನ್ನು ಬಂಧಿಸಿದ್ದಾರೆ. ಇವರಿಬ್ಬರು ಮುರಿಗೆಪ್ಪಾ ಮತ್ತು ರಜನೀಕಾಂತ್‌ಗೆ ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ವಂಚಿಸುವುದಕ್ಕೆ ಸಹಕರಿಸುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಸಿಎಂ ತವರು ಕ್ಷೇತ್ರದಲ್ಲಿ ಇಬ್ಬರು ದುಷ್ಕರ್ಮಿಗಳಿಂದ ಗುಂಡಿನ ದಾಳಿ

ವಿಜಯಸಾಕ್ಷಿ ಸುದ್ದಿ, ಹಾವೇರಿ:

ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹುಲಗೂರು ಗ್ರಾಮದ ಮನೆಯೊಂದರ ಮೇಲೆ ಬುಧವಾರ ರಾತ್ರಿ ಶೂಟೌಟ್ ಪ್ರಕರಣ ನಡೆದಿದೆ.

ಹುಲಗೂರು ಗ್ರಾಮದ ಆಜಾದ ಓಣಿಯ ಕೂಲಿ ಕಾರ್ಮಿಕ ಮಾಬುಸಾಬ್ ಹುಸೇನಸಾಬ್ ಗುಡಗೇರಿ ಎಂಬುವರು ಪುತ್ರಿಯನ್ನು ಗುರಿಯಾಗಿಸಿಕೊಂಡು ಇಬ್ಬರು ಆಗುಂತಕರು ಈ ಗುಂಡಿನ‌ ದಾಳಿ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿ ಉಳಿದ ಮನೆ ಮಂದಿಯೆಲ್ಲಾ ಮಲಗಿದ್ದರಿಂದ ದೊಡ್ಡ ದುರಂತ ತಪ್ಪಿದೆ.

ಗುಂಡು ಹಾರಿಸಿದ ರಭಸಕ್ಕೆ ಕಿಟಕಿಯಲ್ಲಿದ್ದ ತಗಡಿನ ಮುಖಾಂತರ ಒಳಗಡೆ ಹೊಕ್ಕಿದ್ದು, ಹಾಲ್ ನಲ್ಲಿ 6 ರಂಧ್ರಗಳು ಬಿದ್ದಿವೆ. ಗುಂಡು ಹಾರಿಸಿದ ವೇಳೆಯಲ್ಲಿ ಕರೆಂಟು ಇಲ್ಲದಿರುವುದರಿಂದ ಗುಂಡು ಯಾರಿಗೂ ತಾಗಿಲ್ಲ.

ಸುದ್ದಿ ತಿಳಿದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಭಯ ಪಡದಂತೆ ಆತ್ಮಸ್ಥೈರ್ಯ ತುಂಬಿದರು. ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲು ಪೊಲೀಸರಿಗೆ ಒತ್ತಾಯಿಸಿದರು.

ಇತ್ತೀಚಿಗೆಷ್ಟೇ ಪಟ್ಟಣದ ಸಿನೀಮಾ ಟಾಕೀಸ್ ನಲ್ಲಿ ನಡೆದ ಶೂಟೌಟ್ ಪ್ರಕರಣದ ಆರೋಪಿ ಬಂಧಿಸಿದ ಬೆನ್ನಲ್ಲೆ ಮತ್ತೊಂದು ಗುಂಡಿನ ದಾಳಿ ನಡೆದಿರುವುದು ಜನರನ್ನು ಬೆಚ್ಚಿ ಬೀಳಿಸಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ.