ಕೊಪ್ಪಳ ಜಿಲ್ಲೆಗೆ ಮತ್ತೊಂದು ಐಎಎಸ್ ಗರಿ; ಯುಪಿಎಸ್‌ಸಿ ಪರೀಕ್ಷೆಯಲ್ಲಿ 191ನೇ ರ‍್ಯಾಂಕ್ ಪಡೆದ ಅಪೂರ್ವ ಬಾಸೂರ

0
Spread the love

ಯುಪಿಎಸ್‌ಸಿ ಫಲಿತಾಂಶ ಪ್ರಕಟ; ಭತ್ತದ ನಾಡಿನ ‘ಅಪೂರ್ವ’ಗೆ 191ನೇ ರ‍್ಯಾಂಕ್; ಎರಡನೇ ಪ್ರಯತ್ನದಲ್ಲಿ ಐಎಎಸ್ ಉತ್ತೀರ್ಣ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:

ಸಾಧಿಸಬೇಕು ಎಂಬುವ ಅಚಲ ಮನಸ್ಸು ಒಂದಿದ್ದರೆ ಸಾಕು ಏನನ್ನಾದರೂ ಸಾಧಿಸಬಹುದು ಎಂಬುದನ್ನು ನಿರೂಪಿಸಿದ್ದಾರೆ ಭತ್ತದ ನಾಡಿನ ಈ ಪ್ರತಿಭೆ.

ಯುಪಿಎಸ್‌ಸಿ ಸೋಮವಾರ ಪ್ರಕಟಿಸಿದ ಐಎಎಸ್ ಪರೀಕ್ಷೆ ಫಲಿತಾಂಶದಲ್ಲಿ ಗಂಗಾವತಿ ನಗರದ ಅಪೂರ್ವ ಬಾಸೂರ ದೇಶಕ್ಕೆ 191ನೇ ರ‍್ಯಾಂಕ್ ಪಡೆದು ರಾಜ್ಯದ ಗಮನ ಸೆಳೆದಿದ್ದಾರೆ. ಐಎಎಸ್ ಪಾಸಾಗಿರುವ ಅಪೂರ್ವ ಬಾಸೂರು 1 ರಿಂದ 10ನೇ ತರಗತಿಯವರೆಗೆ ಗಂಗಾವತಿಯ ಸೆಂಟ್ ಪಾಲ್ಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ.

2012ರಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮುಗಿಸಿ, ಬೆಂಗಳೂರಿನ ಆರ್.ವಿ.ಡೆಂಟಲ್ ಕಾಲೇಜಿನಲ್ಲಿ ಬಿಡಿಎಸ್(ಡೆಂಟಿಸ್ಟ್) ಅಭ್ಯಾಸದ ನಂತರ ಅಪೂರ್ವ 2018ರಲ್ಲಿ ದೆಹಲಿಗೆ ಐಎಎಸ್ ಕೋಚಿಂಗ್ ಪಡೆಯಲು ತೆರಳಿದರು.

2018ರಿಂದ 2020ರವೆಗೆ ತರಬೇತಿ ಪಡೆದು ಮರಳಿ ರಾಜ್ಯಕ್ಕೆ ವಾಪಸ್ ಬಂದು 2020ರಲ್ಲಿ ಮೊದಲ ಬಾರಿಗೆ ಐಎಎಸ್ ಪರೀಕ್ಷೆ ಎದುರಿಸಿದರು. ಆದರೆ, ಸೂಕ್ತ ತಯಾರಿಯೊಂದಿಗೆ ಮೊದಲ ಬಾರಿಗೆ ಪರೀಕ್ಷೆ ಎದುರಿಸಿದಾಗಲೂ ಪ್ರಿಲಿಮನರಿ ಪಾಸ್ ಆಗಲು ಸಾಧ್ಯವಾಗಿರಲಿಲ್ಲ. ಆದರೆ, ದೃತಿಗೆಡದೆ ಚಿತ್ತ ಮನಸ್ಸಿನಿಂದ ಮತ್ತೆ ದಿನಕ್ಕೆ 8-10 ಗಂಟೆ ಅಧ್ಯಯನ ಮುಂದುವರೆಸಿ, 2021ರಲ್ಲಿ ಎರಡನೇ ಬಾರಿಗೆ ಮತ್ತೆ ಪರೀಕ್ಷೆ ಎದುರಿಸಿದಾಗ ಪ್ರಿಲಿಮನರಿ, ಮೇನ್ಸ್ ಹಾಗೂ ಸಂದರ್ಶನದಲ್ಲಿ ಉತ್ತೀರ್ಣರಾಗಿ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.

ಐಎಎಸ್ ಆಗಬೇಕೆಂಬ ದೃಢ ಮನಸಿತ್ತು
ಸಾರ್ವಜನಿಕ ಆಡಳಿತ ವಿಷಯ ಮುಖ್ಯ ವಿಷಯವನ್ನಾಗಿ ಇಟ್ಟುಕೊಂಡು ಪರೀಕ್ಷೆ ಬರೆದಿದ್ದ ಅಪೂರ್ವ ಅವರಿಗೆ ಚಿಕ್ಕಂದಿನಿಂದಲೇ ಐಎಎಸ್ ಆಗಬೇಕೆಂಬ ದೃಢ ನಿರ್ಧಾರವಿತ್ತು. ಈ ನಿಟ್ಟಿನಲ್ಲಿ ಸದಾ ಪ್ರಯತ್ನ ನಡೆಸಿದ ಪರಿಣಾಮ ಅಚ್ಚರಿ ಎಂಬಂತೆ ಎರಡನೇ ಪ್ರಯತ್ನದಲ್ಲಿಯೇ ಯುಪಿಎಸ್‌ಸಿ ಪರೀಕ್ಷೆ ಪಾಸಾಗಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ ಇವರು, ಮುಂದೆ ಪಾಲ್ಸ್ ಮೇಕಿಂಗ್ ಅಧಿಕಾರಿಯಾಗಿ ಜನಸೇವೆ ಮಾಡಬೇಕೆನ್ನುವ ಆಸೆ ಹೊಂದಿದ್ದಾರೆ.

ತರಬೇತಿ ಹಾಗೂ ವಿದ್ಯಾಭ್ಯಾಸದ ಸಮಯದಲ್ಲಿ ಕುಟುಂಬದವರ ಸಹಕಾರ ಅತ್ಯಮೂಲ್ಯವಾಗಿದ್ದರಿಂದ ಐಎಎಸ್ ಪಾಸ್ ಮಾಡಿದ್ದೇನೆ. ಮೊದಲ ಪ್ರಯತ್ನದಲ್ಲಿ ಹಿನ್ನಡೆಯಾದಾಗ ಕುಗ್ಗದೇ ಮರು ಪ್ರಯತ್ನ ಮಾಡಿದ್ದರಿಂದ ಎರಡನೇ ಪ್ರಯತ್ನದಲ್ಲಿ ಯಶಸ್ಸು ದೊರೆಯಿತು.

-ಅಪೂರ್ವ ಬಾಸೂರ, ಯುಪಿಎಸ್‌ಸಿ 191ನೇ ರ‍್ಯಾಂಕ್ ಪಡೆದ ಯುವತಿ.

ನನ್ನ ಮಗಳ ಸಾಧನೆ ಅತ್ಯಂತ ಖುಷಿ ತಂದಿದೆ.
ನಿರಂತರ ಅಧ್ಯಯನಶೀಲಳಾಗಿ ಎರಡನೇ ಪ್ರಯತ್ನದಲ್ಲಿಯೇ ಐಎಎಸ್ ಪಾಸ್ ಮಾಡಿರುವುದು ಸಂತಸ ತಂದಿದೆ. – ಡಾ. ಶ್ರೀಕಾಂತ್ ಬಾಸೂರ, ಅಪೂರ್ವ ತಂದೆ


Spread the love

LEAVE A REPLY

Please enter your comment!
Please enter your name here