Home Blog Page 3356

ಕಾರು ಸಮೇತ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ನಾಲ್ವರು; ಗ್ರಾಮಸ್ಥರು, ಪೊಲೀಸರಿಂದ ಬಚಾವ್

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ:

ಗದಗ ಜಿಲ್ಲೆಯ ಹಲವೆಡೆ ಮುಂಗಾರು
ಪೂರ್ವ ಮಳೆಯ ಆರ್ಭಟ ಶುರುವಾಗಿದ್ದು, ಅವಾಂತರ ಸೃಷ್ಟಿಸುತ್ತಿದೆ. ಅಕಾಲಿಕ‌ ಮಳೆಗೆ ಮನೆಗಳು ನೆಲಕಚ್ಚುತ್ತಿದ್ದು, ಮರಗಳು ಧರೆಗುರುಳುತ್ತಿವೆ. ಅಲ್ಲದೆ, ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ.

ಅದರಂತೆ, ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಮಳೆರಾಯನ ಸಿಂಚನ ಜೋರಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.

ಹೀಗೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಲಕ್ಷ್ಮೇಶ್ವರ ತಾಲ್ಲೂಕಿನ ನೆಲೊಗಲ್ ಗ್ರಾಮದ ಹಳ್ಳವೊಂದು ಹರಿಯುತ್ತಿದ್ದು, ಹಳ್ಳದಾಟಲು ಹೋದ ಕಾರು ಸಮೇತ ನಾಲ್ವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಬದುಕುಳಿದ ಘಟನೆ ಗುರುವಾರ ರಾತ್ರಿ ಸಂಭವಿಸಿತು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಲಕ್ಷ್ಮೇಶ್ವರ ಪೊಲೀಸರು ಹಾಗೂ ಸಿಪಿಐ ವಿಕಾಸ್ ಲಮಾಣಿ ಅವರು ನೀರಿನಲ್ಲಿ ಕೊಚ್ಚಿ ಹೋಗಿದ್ದ ನಾಲ್ವರನ್ನು ನೆಲೊಗಲ್ ಗ್ರಾಮಸ್ಥರ ಸಹಕಾರದಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೆಬ್ಬಾಳ ಗ್ರಾಮದವರಾದ ಚನ್ನವೀರಗೌಡ ಪಾಟೀಲ (40), ಡಾ.ಪ್ರಭು ಮನ್ಸೂರ್ (40), ಬಸವನಗೌಡ ತೆಗ್ಗಿನಮನಿ (40) ಹಾಗೂ ಕನಕವಾಡದ ವೀರೇಶ್ ಡಂಬಳ (30) ಕೊಚ್ಚಿ ಹೋಗಿದ್ದರು. ಇನ್ನು ನೀರಿನಲ್ಲಿ ಕೊಚ್ಚಿ ಹೋಗಿದ್ದವರನ್ನು ರಕ್ಷಿಸಿದ ಪೊಲೀಸರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್‌ಎಸ್‌ಎಲ್‌ಸಿ ಫಲಿತಾಂಶ, ಮೂವರು ವಿದ್ಯಾರ್ಥಿಗಳು ಜಿಲ್ಲೆಗೆ ಪ್ರಥಮ, ನರಗುಂದ ಫಸ್ಟ್, ಗದಗ ತಾಲ್ಲೂಕು ಲಾಸ್ಟ್!

ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ | ಮೂವರು ವಿದ್ಯಾರ್ಥಿಗಳು ಜಿಲ್ಲೆಗೆ ಪ್ರಥಮ | 88 ವಿದ್ಯಾರ್ಥಿಗಳು ಟಾಪ್‌ಟೆನ್‌ನಲ್ಲಿ ತೇರ್ಗಡೆ | ರಾಜ್ಯದ ಫಲಿತಾಂಶಕ್ಕಿಂತ ಶೇ.4ರಷ್ಟು ಹೆಚ್ಚಳ | ಗದಗ ಇತಿಹಾಸದಲ್ಲಿಯೇ ಉತ್ತಮ ಫಲಿತಾಂಶ: ಬಸವಲಿಂಗಪ್ಪ

ವಿಜಯಸಾಕ್ಷಿ ಸುದ್ದಿ, ಗದಗ;

ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು, ಗದಗ ಜಿಲ್ಲೆಯು ಶೇ.89.13ರಷ್ಟು ಸಾಧನೆ ಮಾಡುವ ಮೂಲಕ ‘ಎ ಗ್ರೇಡ್ ಪಡೆದುಕೊಂಡಿದೆ.

ಗದಗ ಜಿಲ್ಲೆಯಲ್ಲಿ ಪರೀಕ್ಷೆಗೆ ಗಂಡು 7,447, ಹೆಣ್ಣು 7,956 ಸೇರಿ 15,403 ವಿದ್ಯಾರ್ಥಿಗಳು ಹಾಜರಾಗಿದ್ದರು. ಅದರಲ್ಲಿ 6,381 ಗಂಡು ಹಾಗೂ 7,348 ಹೆಣ್ಣು ಸೇರಿ 13,729 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಮಾರ್ಚ್ 28 ರಿಂದ ಏಪ್ರಿಲ್ 11ರವರೆಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 22 ಸರ್ಕಾರಿ, 06 ಅನುದಾನಿತ ಹಾಗೂ 27 ಅನುದಾನ ರಹಿತ ಸೇರಿ 55 ಪ್ರೌಢಶಾಲೆಗಳು ಶೇ.100ರಷ್ಟು ಫಲಿತಾಂಶ ಸಾಧಿಸಿವೆ. ಅದರಂತೆ, ಸರ್ಕಾರಿ ಹಾಗೂ ಅನುದಾನಿತ 3 ಶಾಲೆಗಳು ಶೇ.40ಕ್ಕಿಂತ ಕಡಿಮೆ ಫಲಿತಾಂಶ ಬಂದಿವೆ.

ಗದಗ ಜಿಲ್ಲೆಯ ಮೂವರು ವಿದ್ಯಾರ್ಥಿಗಳು 625ಕ್ಕೆ 624 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು, ಶಾಲೆಗಳಿಗೆ ಕೀರ್ತಿ ತಂದಿದ್ದಾರೆ. ನರಗುಂದ ತಾಲ್ಲೂಕಿನ ಬೆನಕನಕೊಪ್ಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಾದ ನವೀನಗೌಡ ಮಲ್ಲನಗೌಡರ, ವಾಣಿಶ್ರೀ ಲಕ್ಷ್ಮಣಗೌಡ ಕುಲಕರ್ಣಿ ಹಾಗೂ ಗದಗನ ಲೊಯೊಲಾ ಆಂಗ್ಲ ಮಾಧ್ಯಮ ಶಾಲೆಯ ಮಹೇಕ್ ಆಫ್ರೀನ್ ಜಕ್ಕಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.

ಅದರಂತೆ, 625 ಅಂಕಗಳಿಗೆ 623 ಅಂಕ ಪಡೆಯುವ ಮೂಲಕ 9 ವಿದ್ಯಾರ್ಥಿಗಳು ದ್ವಿತೀಯ ಹಾಗೂ 07 ವಿದ್ಯಾರ್ಥಿಗಳು 622 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಇನ್ನು ಜಿಲ್ಲೆಯಲ್ಲಿಯೇ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರ ಸ್ವಕ್ಷೇತ್ರ ನರಗುಂದ ತಾಲ್ಲೂಕು ಶೇ.91.36ರಷ್ಟು ಫಲಿತಾಂಶದ ಮೂಲ ಉತ್ತಮ ಸಾಧನೆಗೈದಿದ್ದು, ಪ್ರಥಮ ಸ್ಥಾನ ಪಡೆದಿದೆ. ರೋಣ ಶೇ.90.10, ಶಿರಹಟ್ಟಿ ಶೇ.89.93, ಮುಂಡರಗಿ ಶೇ.89.73, ಗದಗ ಗ್ರಾಮೀಣ ಶೇ.88.47 ಹಾಗೂ ಗದಗ ಶಹರ 85.76ರಷ್ಟು ಫಲಿತಾಂಶ ಪಡೆದಿದ್ದು, ಗದಗ ತಾಲ್ಲೂಕು ಅತ್ಯಂತ ಕಳಪೆ ಮಟ್ಟದ ಸಾಧನೆ ಮಾಡುವ ಮೂಲಕ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟಿದೆ.

ರಾಜ್ಯಕ್ಕಿಂತ ಶೇ.4ರಷ್ಟು ಫಲಿತಾಂಶ ಹೆಚ್ಚಳ!

ಗದಗ ಜಿಲ್ಲೆಯಲ್ಲಿ ಒಟ್ಟು 1,873 ವಿದ್ಯಾರ್ಥಿಗಳು ‘ಎ+, 3,235 ‘ಎ, 3,140 ‘ಬಿ+, 2,992 ‘ಬಿ, 2053 ‘ಸಿ+ ಹಾಗೂ 436 ವಿದ್ಯಾರ್ಥಿಗಳು ‘ಸಿ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇನ್ನು 88 ವಿದ್ಯಾರ್ಥಿಗಳು ಟಾಪ್‌ಟೆನ್ 616 ರಿಂದ 624ವರೆಗೆ ಅಂಕ ಪಡೆಯುವ ಮೂಲಕ ಟಾಪ್‌ಟೆನ್‌ನಲ್ಲಿ ತೇರ್ಗಡೆಯಾಗಿದ್ದಾರೆ. ಟಾಪ್‌ಟೆನ್ ವಿದ್ಯಾರ್ಥಿಗಳ ಫೈಕಿ ಕನ್ನಡ ಮಾಧ್ಯಮದಲ್ಲಿ 17, ಆಂಗ್ಲ ಮಾಧ್ಯಮದಲ್ಲಿ 71ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಲ್ಲದೆ, ಗದಗ ಜಿಲ್ಲೆ ಶೇ.89.13ರಷ್ಟು ಫಲಿತಾಂಶ ದಾಖಲಿಸುವ ಮೂಲಕ ರಾಜ್ಯದ ಫಲಿತಾಂಶಕ್ಕಿಂತ ಶೇ.4ರಷ್ಟು ಹೆಚ್ಚಾಗಿದೆ.

ಗದಗ ಜಿಲ್ಲೆಯ ಇತಿಹಾಸದಲ್ಲಿಯೇ ಗದಗ ಜಿಲ್ಲೆ ಈ ಬಾರಿ ಉತ್ತಮ ಫಲಿತಾಂಶ ದಾಖಲಿಸಿದೆ. ರಾಜ್ಯದ ಫಲಿತಾಂಶಕ್ಕಿಂತ ಶೇ.೪ರಷ್ಟು ಹೆಚ್ಚಾಗಿದ್ದು, ಜಿಲ್ಲೆಯ ಯಾವ ತಾಲ್ಲೂಕುಗಳು ರಾಜ್ಯದ ಫಲಿತಾಂಶಕ್ಕಿಂತ ಕಡಿಮೆ ಬಂದಿಲ್ಲ.

ಜಿ.ಎಂ ಬಸವಲಿಂಗಪ್ಪ, ಡಿಡಿಪಿಐ. ಗದಗ

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ಮಗಳ ಸಾಧನೆ ಅಭಿಮಾನ ತರಿಸಿದೆ.

ಮಹಮ್ಮದ್ ಸೈಯದ್ ಜಕ್ಕಲಿ, ಮಹೇಕ್ ಆಫ್ರೀನ್ ತಂದೆ

ಉತ್ತಮ ಫಲಿತಾಂಶದಲ್ಲಿ ಶಾಲೆಯ ಶಿಕ್ಷಕರ ಸಹಕಾರದಿಂದ ಉತ್ತಮ ಫಲಿತಾಂಶ ತೆಗೆಯುವಲ್ಲಿ ಯಶಸ್ವಿಯಾಗಿದ್ದು ಹೆತ್ತವರ ಆಸೆ ಈಡೇರಿಸಿದ ಖುಷಿ ಇದೆ. ಪರೀಕ್ಷೆ ಎದುರಿಸುವುದಕ್ಕಾಗಿ ಪ್ರತಿನಿತ್ಯ ೧೦ ಗಂಟೆಗಳ ಕಾಲ ಅಧ್ಯಯನ ಮಾಡಿದ ಶ್ರಮವಿಂದು ಜಿಲ್ಲೆಗೆ ಪ್ರಥಮ ಸ್ಥಾನ ಬರುವಂತೆ ಮಾಡಿದ್ದು, ಮುಂದೆ ವೈದ್ಯನಾಗಬೇಕೆಂಬ ಕನಸು ಕಂಡಿರುವೆ.

ನವೀನಗೌಡ್ ಮಲ್ಲನಗೌಡರ್. ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ

ಜಿಲ್ಲೆಗೆ ಪ್ರಥಮ ಸ್ಥಾನ ಬಂದಿರುವುದು ತುಂಬಾ ಸಂತಸ ತಂದಿದೆ. ಸಮಯ ವ್ಯರ್ಥ ಮಾಡದೆ ದಿನಕ್ಕೆ ೮ರಿಂದ ೧೦ ಗಂಟೆಗಳವರೆಗಿನ ನಿರಂತರ ಅಭ್ಯಾಸ, ಪಾಲಕರ, ಶಿಕ್ಷಕರ ಸಹಕಾರ ಉತ್ತಮ ಫಲಿತಾಂಶ ಬರಲು ಕಾರಣೀಭೂತವಾಗಿದೆ. ಐಎಎಸ್ ಮಾಡುವ ಕನಸು ಕಂಡಿದ್ದು, ಅದಕ್ಕಾಗಿ ಪಿಯುಸಿಯಿಂದಲೇ ಅಗತ್ಯ ತಯಾರಿ ನಡೆಸುವೆ.

ಮಹೇಕ್ ಆಫ್ರೀನ್ ಜಕ್ಕಲಿ. ಪ್ರಥಮ ಸ್ಥಾನ ಪಡೆದ ವಿಧ್ಯಾರ್ಥಿನಿ

ಪಂ.ಪಂಚಾಕ್ಷರಿ ಗವಾಯಿಗಳ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪನೆ; ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

ವಿಜಯಸಾಕ್ಷಿ ಸುದ್ದಿ, ಗದಗ:

ಗದುಗಿನ ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ಥಾಪಿಸಿ ಆದೇಶಿಸಿದ್ದು, ಸದರಿ ಪ್ರಶಸ್ತಿ ಆಯ್ಕೆ ಉಪ ಸಮಿತಿಗೆ ಅಳವಡಿಸಬೇಕಾದ ಅಂಶ ಹಾಗೂ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.

ಈ ಪ್ರಶಸ್ತಿಯು ರಾಷ್ಟ್ರೀಯ ಪ್ರಶಸ್ತಿಯಾಗಿದ್ದು, ದಕ್ಷಿಣಾಧಿ ಮತ್ತು ಹಿಂದುಸ್ತಾನಿ ಸಂಗೀತಗಳಲ್ಲಿ ಪರಿಣಿತಿಯನ್ನು ಹೊಂದಿ ಉಭಯಗಾನ ವಿಶಾರದರೆಂಬ ಖ್ಯಾತಿಯನ್ನು ಪಡೆದಿದ್ದ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಹೆಸರಿನಲ್ಲಿ ಸ್ಥಾಪಿಸಲಾಗಿದೆ ಎಂದು ರಾಜ್ಯ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.

ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯನ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕನಿಷ್ಟ ೨೫ ರಿಂದ ೩೦ ವರ್ಷ ಮೇಲ್ಪಟ್ಟು ಸಾಧನೆ ಮಾಡಿದ ಕಲಾವಿದರಿಗೆ ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತದೆ. ಅಲ್ಲದೆ, ಈ ಪ್ರಶಸ್ತಿಯನ್ನು ಒಂದು ವರ್ಷ ರಾಜ್ಯದ ಕಲಾವಿದರಿಗೆ, ನಂತರದ ಒಂದು ವರ್ಷ ರಾಜ್ಯದ ಯಾವುದೇ ಹೊರ ರಾಜ್ಯದ ಕಲಾವಿದರಿಗೆ ನೀಡಿ ಪುರಸ್ಕರಿಸಲಾಗುತ್ತದೆ.

ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿಯು ೧೦ಲಕ್ಷ ರೂ. ಮೊತ್ತಗಳನ್ನೊಳಗೊಂಡಿರಲಿದ್ದು, ಪ್ರಶಸ್ತಿ ಸ್ಮರಣಿಕೆ, ಪ್ರಶಸ್ತಿ ಫಲಕ ಒಳಗೊಂಡಿರಲಿದೆ.

ಸದರಿ ಪ್ರಶಸ್ತಿಯನ್ನು ಪ್ರತಿವರ್ಷ ಫೆಬ್ರುವರಿ ೨ರಂದು ಶ್ರೀಗಳ ಜನ್ಮದಿನದಂದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸರ್ಕಾರದ ನಿರ್ಧರಿಸುವ ಸ್ಥಳಗಳಲ್ಲಿ ಸಮಾರಂಭ ಏರ್ಪಡಿಸುವ ಮೂಲಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅಲ್ಲದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ ಇತರ ವಾರ್ಷಿಕ ಪ್ರಶಸ್ತಿಗಳ ಸಾಮಾನ್ಯ ನಿಯಮಾವಳಿಗಳು ಈ ಪ್ರಶಸ್ತಿಗಳಿಗೂ ಅನ್ವಯವಾಗಲಿದೆ ಎಂದು ರಾಜ್ಯ ಸರ್ಕಾರ ಆದೇಶಿಸಿದೆ.

ಇನ್ನು ರಾಜ್ಯ ಸರ್ಕಾರ ಪಂಚಾಕ್ಷರಿ ಗವಾಯಿಗಳ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪಿಸಿ ಆದೇಶಿಸಿದ್ದಕ್ಕೆ, ವೀರೇಶ್ವರ ಪುಣ್ಯಾಶ್ರಮದ ಮಠದ ಭಕ್ತರಲ್ಲಿ ಹರ್ಷವನ್ನುಂಟು ಮಾಡಿದ್ದು, ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅವರು ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪ್ರಶಸ್ತಿ ಆಯ್ಕೆ ಉಪಸಮಿತಿಯ ಅಂಶಗಳು

  • ಹಿಂದೂಸ್ಮಾನಿ ಶಾಸ್ತ್ರೀಯ ಸಂಗೀತ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸಾಧನೆಗೈದ ಹಿರಿಯ ಸಾಧಕರು ಅಧ್ಯಕ್ಷರಾಗಿರಬೇಕು.
  • ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಿದ ಹಿರಿಯ ಇಬ್ಬರು ಸಾಧಕರು ಸದಸ್ಯರಾಗಿರಬೇಕು.
  • ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿರುತ್ತಾರೆ.
  • ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರು ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ.
  • ಸಮಿತಿಯಲ್ಲಿ ಒಬ್ಬರು ಮಹಿಳಾ ಸದಸ್ಯರು ಕಡ್ಡಾಯವಾಗಿರಬೇಕು.
  • ಸಭೆಯ ಕನಿಷ್ಠ ಕೋರಮ್ ೧/೩ ಆಗಿರಬೇಕು.

ನೀರು ಕುಡಿಯಲು ಹೋಗಿ ಕೃಷಿ ಹೊಂಡದಲ್ಲಿ ಮುಳುಗಿ ಮೂವರು ಬಾಲಕಿಯರ ಸಾವು

ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ

ವಿಜಯಸಾಕ್ಷಿ ಸುದ್ದಿ, ಮುಂಡರಗಿ:

ನೀರು ಕುಡಿಯಲು ಹೋಗಿದ್ದರು ಎನ್ನಲಾದ ಮೂವರು ಬಾಲಕಿಯರು ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಅಸುನೀಗಿರುವ ದುರ್ಘಟನೆ ಮುಂಡರಗಿ ತಾಲ್ಲೂಕಿನ ಅತ್ತಿಕಟ್ಟಿ ತಾಂಡಾದಲ್ಲಿ ನಡೆದಿದೆ. ಬಸವರಾಜ ನೂರಪ್ಪ ಲಮಾಣಿ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ಸಂಭವಿಸಿದೆ.

ಅತ್ತಿಕಟ್ಟಿ ತಾಂಡಾದ ಒಂದೇ ಕುಟುಂಬದ ಸುನೀತಾ(೧೩), ಅಂಕಿತಾ(೧೦) ಹಾಗೂ ಡೋಣಿ ತಾಂಡಾದ ಸುನೀತಾ ಲೋಕೇಶ್ ಲಮಾಣಿ(೧೦) ಮೃತ ದುರ್ದೈವಿಗಳಾಗಿದ್ದಾರೆ.

ಈ ಮೂವರು ಮೃತ ಬಾಲಕಿಯರು ಕುರಿ ಮರಿ ಮೇಯಿಸಲು ಜಮೀನಿಗೆ ತೆರಳಿದ್ದರು. ಈ ವೇಳೆ ಬಿಸಿಲಿನ ಬೇಗೆಗೆ ನೀರಿನ ದಾಹ ನೀಗಿಸಿಕೊಳ್ಳಲು ಕೃಷಿ ಹೊಂಡದಲ್ಲಿ ನೀರು ಕುಡಿಯಲು ತೆರಳಿದ್ದಾಗ ಕಾಲು ಜಾರಿ ಬಿದ್ದು ಬಾಲಕಿಯರು ಅಸುನೀಗಿರಬಹುದು ಎಂದು ಶಂಕಿಸಲಾಗಿದೆ.

ತಂದೆ-ತಾಯಿ ಜೊತೆ ಗೋವಾದಲ್ಲಿ ವಾಸವಿರುವ ಅತ್ತಿಕಟ್ಟಿ ತಾಂಡಾದ ಸುನೀತಾ ಹಾಗೂ ಅಂಕಿತಾ ಚಿಕ್ಕಪ್ಪನ ಮದುವೆಗೆ ಬಂದಿದ್ದರು. ಸೋಮವಾರ ನೀರು ಕುಡಿಯಲು ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ನೀರಿನಲ್ಲಿ ಮುಳುಗಿದ್ದ ಬಾಲಕಿಯರ ಮೃತದೇಹಗಳನ್ನು ಸ್ಥಳೀಯರ ಸಹಾಯದಿಂದ ಹೊರತೆಗೆದಿದ್ದು, ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಮುಂಡರಗಿ ತಹಸೀಲ್ದಾರ ಆಶಪ್ಪ ಪೂಜಾರ ಭೇಟಿ ನೀಡಿ ಪರಿಶೀಲಿಸಿದರು. ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೋಣ ತಹಶೀಲ್ದಾರ ಜಕ್ಕಣಗೌಡ್ರ ಎತ್ತಂಗಡಿ; ಕುಮಾರಿ ವಾಣಿ ಅಧಿಕಾರ ಸ್ವೀಕಾರ

ವಿಜಯಸಾಕ್ಷಿ ಸುದ್ದಿ, ರೋಣ:

ಎಸಿಬಿ ಡಿವೈಎಸ್ಪಿ ಹೆಸರಲ್ಲಿ ಬ್ಲಾಕ್ ಮೇಲ್ ಒಳಗಾಗಿದ್ದ
ರೋಣ ತಾಲ್ಲೂಕಿನ ತಹಶೀಲ್ದಾರ ಜೆ. ಬಿ ಜಕ್ಕಣಗೌಡ್ರ ಎತ್ತಂಗಡಿಯಾಗಿದ್ದಾರೆ. ನೂತನ ತಹಶೀಲ್ದಾರ ಆಗಿ ಬಳ್ಳಾರಿ ಜಿಲ್ಲೆಯ ಶಿರಗುಪ್ಪದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕುಮಾರಿ ವಾಣಿ ಎಂಬುವವರು ಸೋಮವಾರ ಮುಂಜಾನೆ ಅಧಿಕಾರ ಸ್ವೀಕರಿಸಿದರು.

ಇಂದು ಮುಂಜಾನೆ ಏಕಾಏಕಿ ನಡೆದ ಈ ಬೆಳವಣಿಗೆಯಿಂದಾಗಿ ಸಾರ್ವಜನಿಕರಲ್ಲಿ ಹಾಗೂ ಸಿಬ್ಬಂದಿಗಳಿಗೆ ಅಚ್ಚರಿ ಮೂಡಿದೆ. ಉಪತಹಶೀಲ್ದಾರ ಜೆ.ಟಿ.ಕೊಪ್ಪದ ಹಾಗೂ ಇಲಾಖೆಯ ಸಿಬ್ಬಂದಿ ನೂತನ ದಂಡಾಧಿಕಾರಿಗಳನ್ನು ಬರಮಾಡಿಕೊಂಡರು.

ತಂದೆಯನ್ನೇ ಚಾಕುವಿನಿಂದ ಇರಿದು ಕೊಲೆಗೈದ ಪಾಪಿ ಮಗ

ವಿಜಯಸಾಕ್ಷಿ ಸುದ್ದಿ, ಗದಗ:

ಕ್ಷುಲ್ಲಕ ಕಾರಣಕ್ಕಾಗಿ ತಂದೆ-ಮಗನ ಮಧ್ಯೆ ಉಂಟಾದ ಜಗಳ ತಂದೆಯ ಕೊಲೆಯಲ್ಲಿ ಅಂತ್ಯಗೊಂಡಿದೆ.

ಗದಗ ತಾಲ್ಲೂಕಿನ ಹಾತಲಗೇರಿ ಗ್ರಾಮದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಭರಮಪ್ಪ ದೊಡ್ಡಮನಿ (56) ಎಂಬಾತ ಮಗ ಸುರೇಶನ ಕೈಯಲ್ಲಿ ಕೊಲೆಗೀಡಾಗಿದ್ದಾನೆ.

ಭರಮಪ್ಪ ಹಾಗೂ ಸುರೇಶ್ ನ ಮಧ್ಯೆ ನಿತ್ಯವೂ ಕಲಹ ನಡೆಯುತ್ತಿತ್ತು ಎಂದು ಪೊಲೀಸ ಮೂಲಗಳು ತಿಳಿಸಿವೆ.

ಶನಿವಾರ ರಾತ್ರಿಯೂ ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ. ಜಗಳ ವಿಕೋಪಕ್ಕೆ ಹೋಗಿದೆ. ಕುಪಿತನಾದ ಸುರೇಶ್ ತಕ್ಷಣವೇ ಮನೆಯಲ್ಲಿದ್ದ ಚಾಕು ತಂದವನೇ ತಂದೆ ಭರಮಪ್ಪನಿಗೆ ಹೊಟ್ಟೆಗೆ, ಎದೆಗೆ ಮನ ಬಂದಂತೆ ಚುಚ್ಚಿದ್ದಾನೆ. ಇದರಿಂದಾಗಿ ತೀವ್ರ ರಕ್ತಸ್ರಾವವಾಗಿ ಭರಮಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ತಂದೆಯ ಸಾವಿನಿಂದಾಗಿ ಹೆದರಿದ ಸುರೇಶ್ ಸದ್ಯಕ್ಕೆ ಪರಾರಿಯಾಗಿದ್ದು, ಸುದ್ದಿ ತಿಳಿದ ಇನ್ಸ್‌ಪೆಕ್ಟರ್ ರವಿ ಕಪ್ಪತನವರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿರಣ ಉಳ್ಳಿಗೇರಿಗೆ ಕಾಂಗ್ರೆಸ್ ಪಕ್ಷದಿಂದ ಪ್ರಶಂಸೆ

ವಿಜಯಸಾಕ್ಷಿ ಸುದ್ದಿ, ನವಲಗುಂದ:

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸಾಮಾಜಿಕ ಜಾಲತಾಣ ಬೆಳೆಯುತ್ತಿರುವ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯಲ್ಲಿಯೇ ಉತ್ತಮ ಕಾರ್ಯ ನಿರ್ವಹಿಸಿದ ಯುವ ನಾಯಕ ಕಿರಣ ಉಳ್ಳಿಗೇರಿ ಅವರಿಗೆ ಪ್ರಶಂಸೆ ಲಭಿಸಿದೆ.

ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ, ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ರಾಮಯ್ಯನವರ ಸೂಚನೆ ಮೇರೆಗೆ ರಾಜ್ಯ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಬಿ.ಆರ್.ನಾಯ್ಡು ಅವರು ಧಾರವಾಡ ಜಿಲ್ಲೆಯ ಜಾಲತಾಣ ಕಾರ್ಯಧ್ಯಕ್ಷರಾದ ನವಲಗುಂದ ವಿಧಾನಸಭಾ ಕ್ಷೇತ್ರದ ಕಿರಣ ಉಳ್ಳಿಗೇರಿ ಅವರ ಕಾರ್ಯ ಕ್ಷಮತೆ, ಸಮರ್ಪಣಾ ಮನೊಭಾವ ಮತ್ತು ಅವರ ಹೋರಾಟವನ್ನು ಪರಿಗಣಿಸಿ ಉತ್ತಮ ಸಾಮಾಜಿಕ ಜಾಲತಾಣದ ಕಾರ್ಯಕರ್ತ ಎಂದು ಪ್ರಶಂಸನಾ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದ್ದಾರೆ.

ಇವರಿಗೆ ಮಾಜಿ ಸಚಿವರಾದ ಕೆ.ಎನ್.ಗಡ್ಡಿ. ಸಂತೋಷ ಲಾಡ್, ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ಧಾರವಾಡ ಜಿಲ್ಲಾಧ್ಯಕ್ಷರಾದ ಅನಿಲಕುಮಾರ ಪಾಟೀಲ ಶುಭ ಹಾರೈಸಿದ್ದಾರೆ. 

ಡಿಸೇಲ್ ಟ್ಯಾಂಕರ್ ಹಾಯ್ದು ಪಾದಚಾರಿ ಸ್ಥಳದಲ್ಲಿಯೇ ಸಾವು

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಇಲ್ಲಿಯ ಹುಬ್ಬಳ್ಳಿ ವಿಜಯಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿನ ನವೀನ ಹೊಟೇಲ್ ಎದುರುಗಡೆ ನಡೆದು ಹೋಗುತ್ತಿದ್ದ ಪಾದಚಾರಿಯ ಮೇಲೆ ಡಿಸೇಲ್ ಟ್ಯಾಂಕರ್ ಹರಿದ ಪರಿಣಾಮ ಒರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ಸಂಜೆ ಸಂಭವಿಸಿದೆ.
       

ಟ್ಯಾಂಕರ್ ನವಲಗುಂದದಿಂದ ನರಗುಂದ ಕಡೆಗೆ ಹೊರಟಿತ್ತು, ಪಾದಚಾರಿ ಅಂದಾನಗೌಡ ವೆಂಕನಗೌಡ ಕಲ್ಲನಗೌಡರ (64) ಎಂಬಾತ ಟ್ಯಾಂಕರ್ ಹಿಂಬದಿಯ ಗಾಲಿಗೆ ಸಿಲುಕಿದ ಪರಿಣಾಮ ತಲೆಯಲ್ಲಿನ ಮೆದುಳು ಹೊರಬಂದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಇದಾಗಿದೆ.
 

ಘಟನಾ ಸ್ಥಳಕ್ಕೆ ಸಿಪಿಐ ಚಂದ್ರಶೇಖರ ಮಠಪತಿ, ಪಿಎಸ್‍ಐ ಕಲ್ಮೇಶ ಬೆನ್ನೂರ ಆಗಮಿಸಿ ತನಿಖೆ ಕೈಗೊಂಡಿದ್ದಾರೆ. ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಟ್ಯಾಂಕರ್ ಚಾಲಕ ಪರಾರಿಯಾಗಿದ್ದಾನೆ.

ಇಲ್ಲಿಯ ಹುಬ್ಬಳ್ಳಿ ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮೇಲೆ ಮೇಲಿಂದ ಮೇಲೆ ಅಪಘಾತಗಳ ಸಂಭವಿಸುತ್ತಲೇ ಇವೆ. ದಿನನಿತ್ಯ ವಾಹನ ದಟ್ಟಣೆಯಿಂದ ಜನ ಬೇಸತ್ತು ಹೋಗಿದ್ದಾರೆ.

ಬೈಪಾಸ್ ರಸ್ತೆ ಮಾಡಿ ಪಟ್ಟಣದಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಬೇಕೆಂದು ಬೈಪಾಸ್ ಹೋರಾಟ ಸಮಿತಿಯವರು ಮೇಲಿಂದ ಮೇಲೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಪೊಲೀಸ್ ಇಲಾಖೆಯವರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗುತ್ತಿಲ್ಲವಾದ ಕಾರಣ ಅಫಘಾತಗಳು ಹೆಚ್ಚಾಗುತ್ತಿವೆ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನವಲಗುಂದ ಪುರಸಭೆ ಕಾಂಗ್ರೆಸ್ ಮಡಿಲಿಗೆ; ಅಧ್ಯಕ್ಷರಾಗಿ ಅಪ್ಪಣ್ಣ ಹಳ್ಳದ, ಉಪಾಧ್ಯಕ್ಷರಾಗಿ ಪದ್ಮಾವತಿ ಪೂಜಾರ ಆಯ್ಕೆ

ವಿಜಯಸಾಕ್ಷಿ ಸುದ್ದಿ, ನವಲಗುಂದ:

ತೀವ್ರ ಕುತೂಹಲ ಮೂಡಿಸಿದ್ದ ಸ್ಥಳೀಯ ಪುರಸಭೆಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಅಪ್ಪಣ್ಣ ಹಳ್ಳದ ಹಾಗೂ ಉಪಾಧ್ಯಕ್ಷರಾಗಿ ಪದ್ಮಾವತಿ ಪೂಜಾರ ಶುಕ್ರವಾರ ಆಯ್ಕೆಯಾದರು.

ಅಧ್ಯಕ್ಷ ಅಪ್ಪಣ್ಣ ಹಳ್ಳದ

ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಅಪ್ಪಣ್ಣ ಹಳ್ಳದ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪದ್ಮಾವತಿ ಪೂಜಾರ ನಾಮಪತ್ರ ಸಲ್ಲಿಸಿದರೆ, ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಮಹಾಂತೇಶ ಕಲಾಲ, ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ಗೊಲ್ಲರ ನಾಮಪತ್ರ ಸಲ್ಲಿಸಿದ್ದರು.

ಉಪಾಧ್ಯಕ್ಷೆ ಪದ್ಮಾವತಿ ಪೂಜಾರ

ಒಟ್ಟು 23 ಸ್ಥಾನಗಳಲ್ಲಿ ಕಾಂಗ್ರೆಸ್ 17 ಹಾಗೂ ಬಿಜೆಪಿ 6 ಸದಸ್ಯರನ್ನು ಹೊಂದಿತ್ತು. ಗೆಲುವಿಗಾಗಿ ಮ್ಯಾಜಿಕ್ ಸಂಖ್ಯೆ 13 ಪಡೆಯಬೇಕಾಗಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ ಶಿಗ್ಲಿ ಹಾಗೂ ಅಪ್ಪಣ್ಣ ಹಳ್ಳದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೊನೆಗಳಿಗೆಯಲ್ಲಿ ಪಕ್ಷದ ಹಿರಿಯರು ಅಪ್ಪಣ್ಣ ಹಳ್ಳದ ಹೆಸರು ಸೂಚಿಸಿದ್ದರಿಂದ ಅದೃಷ್ಟ ಖುಲಾಯಿಸಿತು.

ಅಪ್ಪಣ್ಣ ಹಳ್ಳದ ವಾರ್ಡ ನಂ.6 ರಿಂದ ಪಕ್ಷೇತರರರಾಗಿ ಗೆದ್ದು ಬಂದು ನಂತರ ಜೆ.ಡಿ.ಎಸ್ ಸೇರ್ಪಡೆಯಾಗಿದ್ದರು. ಬದಲಾದ ರಾಜಕಾರಣದಲ್ಲಿ ಜೆಡಿಎಸ್ ಮುಖಂಡ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರಿಂದ ಜೆ.ಡಿ.ಎಸ್.ನ 9 ಹಾಗೂ ಪಕ್ಷೇತರರಾದ ಅಪ್ಪಣ್ಣ ಹಳ್ಳದ ಈಚೆಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದರಿಂದ ಕಾಂಗ್ರೆಸ್ ಬಲ 17 ಕ್ಕೆ ಏರಿಕೆಯಾಗಿ ನಿಚ್ಚಳ ಬಹುಮತ ಇತ್ತು.

ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಹಶೀಲ್ದಾರ್ ಅನೀಲ ಬಡಿಗೇರ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಪ್ಪಣ್ಣ ಹಳ್ಳದ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪದ್ಮಾವತಿ ಪೂಜಾರ ಅವರು 13 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದರು.  ಬಿಜೆಪಿಯ ಮಹಾಂತೇಶ ಕಲಾಲ ಹಾಗೂ ಜ್ಯೋತಿ ಗೊಲ್ಲರ ಅವರು ಕೇವಲ 6 ಮತಗಳನ್ನು ಪಡೆದು ಪರಾಜಿತರಾದರು. ಮುಖ್ಯಾಧಿಕಾರಿ ಈರಪ್ಪ ಹಸಬಿ ಉಪಸ್ಥಿತರಿದ್ದರು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಮಡಿಲಿಗೆ ಬರುತ್ತಿದ್ದಂತೆಯೇ ಕಾರ್ಯಕರ್ತರು ಬಣ್ಣ ಎರಚಿ ಪಟಾಕಿ ಸಿಡಿಸುವ ಮೂಲಕ ವಿಜಯೋತ್ಸವ ಆಚರಿಸಿದರು.

ನಾಲ್ವರು ಸದಸ್ಯರು ಗೈರು

ಪ್ರಕಾಶ ಶಿಗ್ಲಿಗೆ ಅಧ್ಯಕ್ಷ ಸ್ಥಾನ ಕೈತಪ್ಪಿದ್ದರಿಂದ ಅಸಮಾದಾನಗೊಂಡ ಅವರ ಬೆಂಬಲಿಗ ಸದಸ್ಯರಾದ ಹುಸೇನಬಿ ಧಾರವಾಡ, ಹನಮಂತ ವಾಲ್ಮೀಕಿ, ಬಾಬಾಜಾನ ಮಕಾನದಾರ ಸೇರಿದಂತೆ ಒಟ್ಟು ನಾಲ್ವರು ಸದಸ್ಯರು ಗೈರಾದರು. ನವಲಗುಂದ ವಿಧಾನಸಭಾ ಕ್ಷೇತ್ರದ ನವಲಗುಂದ ಹಾಗೂ ಅಣ್ಣಿಗೇರಿ ಪುರಸಭೆ ಎರಡರಲ್ಲೂ ನಿಚ್ಚಳ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿದುಕೊಂಡಿದ್ದು ಬಿಜೆಪಿಗೆ ಹಿನ್ನಡೆಯಾದಂತಾಗಿದೆ.  

ಹೃದಯಾಘಾತದಿಂದ ಸ್ವಾತಿ ಸಾವು; ಸ್ವಾತಿಯ ಸೇವೆ ನೆನೆದು ಕಂಬನಿ ಮಿಡಿದ ಪೊಲೀಸ್ ಇಲಾಖೆ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ಜಿಲ್ಲಾ ಪೊಲೀಸ್ ಇಲಾಖೆಯ ಕಣ್ಮನಿಯಾಗಿ ಸುಮಾರು 11 ವರ್ಷ 07 ತಿಂಗಳುಗಳ ಕಾಲ ಸೇವೆ ಸಲ್ಲಿಸಿ, ವಿವಿಧ ಪ್ರಕರಣಗಳನ್ನು ಪತ್ತೆ ಮಾಡಿ ಇಲಾಖೆಯ ಗೌರವ ಹೆಚ್ಚಿಸಿದ್ದ ‘ಸ್ವಾತಿ ಎಂಬ ಹೆಸರಿನ ಶ್ವಾನವು ಸೋಮವಾರ ಹೃದಯಾಘಾತದಿಂದ ಸಾವನ್ನಪ್ಪಿದೆ.

ಸ್ವಾತಿಯ ಅಗಲಿಕೆಗೆ ಪೊಲೀಸ್ ಇಲಾಖೆ ಕಂಬನಿ ಮಿಡಿದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಸ್ವಾತಿಗೆ ಅಂತಿಮ ಗೌರವ ನಮನ ಸಲ್ಲಿಸಿದರು. ಗಾಳಿಯಲ್ಲಿ ಒಂದು ಸುತ್ತಿನ ಗುಂಡು ಹಾರಿಸುವ ಮೂಲಕ ಪೊಲೀಸ್ ಇಲಾಖೆ ಸ್ವಾತಿಗೆ ಗೌರವ ವಂದನೆ ಸಲ್ಲಿಸಿತು.

‘ಲ್ಯಾಬ್ರಡರ್’ ಜಾತಿಯ ಸ್ವಾತಿ ಎಂಬ ಹೆಸರಿನ ಹೆಣ್ಣು ಶ್ವಾನವು 2011 ಸೆಪ್ಟಂಬರ್ 01 ರಂದು ಜನಿಸಿದ್ದು, 2013 ಜನೇವರಿ 01ರಂದು ಪೊಲೀಸ್ ಇಲಾಖೆಯ ಕರ್ತವ್ಯಕ್ಕೆ ಸೇರ್ಪಡೆಗೊಂಡಿತ್ತು. 11 ವರ್ಷ 07 ತಿಂಗಳ ಕಾಲ ಸ್ಫೋಟಕ ವಸ್ತು ಶ್ವಾನವಾಗಿ ಕರ್ತವ್ಯ ನಿರ್ವಹಿಸಿದ್ದ ಸ್ವಾತಿಯನ್ನು ಜಿಲ್ಲಾ ಪೊಲೀಸ್ ಇಲಾಖೆ ಅನೇಕ ಬಾರಿ ಶ್ಲಾಘಿಸಿತ್ತು.

ಗದಗನ ನಿವೃತ್ತ ಇಂಜನೀಯರ್ ಅಶೋಕ ಬರಗುಂಡಿ ಅವರು ಪೊಲೀಸ್ ಇಲಾಖೆಗೆ ಕೊಡುಗೆಯಾಗಿ ನೀಡಿದ್ದ ಸ್ವಾತಿಯ ಮೇಲುಸ್ತುವಾರಿಯನ್ನು ಡಿಎಸ್‌ಪಿ ಡಿಎಆರ್ ಮತ್ತು ಆರ್‌ಪಿಐ ಡಿಎಆರ್‌ನವರು ವಹಿಸಿದ್ದರು. ಅಲ್ಲದೆ,ಎಂ.ಎಸ್.ಕುಂಬಾರ (ಎಎಚ್‌ಸಿ-229), ಎನ್.ಆರ್.ಕಂದಗಲ್ (ಎಪಿಸಿ-214) ಸ್ವಾತಿಯ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸಿದ್ದರು.

ಸ್ವಾತಿಯು ಸುಮಾರು 10 ತಿಂಗಳುಗಳ ಕಾಲ ಬೆಂಗಳೂರಿನ ಆಡುಗೋಡಿಯಲ್ಲಿರುವ ಪೊಲೀಸ್ ಶ್ವಾನದಳ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಿತ್ತು. ಅಲ್ಲದೆ, ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಗೃಹ ಸಚಿವ, ಗೋವಾ ಚಿಕ್ ಶೃಂತ ಸಭೆ, ಮುಖ್ಯಮಂತ್ರಿಗಳು ಸೇರಿದಂತೆ ವಿವಿಐಪಿ ಹಾಗೂ ವಿಐಪಿಗಳ ಅನೇಕ ಭದ್ರತಾ ಕರ್ತವ್ಯ ನಿರ್ವಹಿಸಿದ ಕೀರ್ತಿ ಸ್ವಾತಿಯದ್ದಾಗಿದೆ.

ಸ್ವಾತಿಯ ಕೊನೆಯದಾಗಿ ನಿನ್ನೆ ಅಂದರೆ ಮೇ ೧ರಂದು ಗದಗ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದ ಆರ್‌ಎಸ್‌ಎಸ್ ಸರಸಂಚಾಲಕ ಮೋಹನ್ ಭಾಗವತ್‌ರವರ ಭದ್ರತಾ ಕರ್ತವ್ಯ ನಿರ್ವಹಿಸಿದ್ದ ಸ್ವಾತಿಯು ಇಂದು ಕೊನೆಯುಸಿರೆಳೆದಿದ್ದು, ಪೊಲೀಸ್ ಇಲಾಖೆಗೆ ಅತ್ಯಂತ ದುಃಖವನ್ನುಂಟು ಮಾಡಿದ್ದಾಳೆ.

ಸ್ವಾತಿಯು ಗದಗ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಒಟ್ಟು 95 ವಿವಿಧ ಪ್ರಕರಣಗಳಲ್ಲಿ ಕರ್ತವ್ಯ ನಿರ್ವಹಿಸಿದೆ. ಹಲವಾರು ಪ್ರಕರಣಗಳಲ್ಲಿ ಭಾಗಿಯಾದ ಆರೋಪಿತರ ಸುಳಿವು ನೀಡಿ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದ ಸ್ವಾತಿ ಇನ್ನು ನೆನಪು ಮಾತ್ರ.