Home Blog Page 3355

ಪಾಲಾ-ಬಾದಾಮಿ ರಸ್ತೆ ಕಾಯಕಲ್ಪಕ್ಕೆ ಕೂಡಿ ಬಂದ ಕಾಲ; ರಸ್ತೆಗಳ ಡಾಂಬರೀಕರಣಕ್ಕೆ ಹಣದ ಹೊಳೆ

ರಸ್ತೆ ಮರು ಡಾಂಬರೀಕರಣ, ಸುಧಾರಣಾ ಕಾಮಗಾರಿ ಕೈಗೊಳ್ಳಲು ಲೋಕೋಪಯೋಗಿ ಇಲಾಖೆ ಅನುಮೋದನೆ | ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಅಭಿನಂದನೆ

ರಸ್ತೆ ಅಭಿವೃದ್ಧಿಗೆ ೧೨ ಕೋಟಿ ಮಂಜೂರು

ವಿಜಯಸಾಕ್ಷಿ ಸುದ್ದಿ, ಗದಗ:

ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಗದಗ ಜಿಲ್ಲೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹಣದ ಹೊಳೆ ಹರಿಸುತ್ತಿದೆ. ಗದಗ ವಿಧಾನಸಭಾ ಮತಕ್ಷೇತ್ರಕ್ಕೆ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ಕೇಳಿದಷ್ಟು ಅನುದಾನ ಕೊಡುತ್ತಿದ್ದು, ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಅವರ ಕನಸಿಗೆ ನೀರೆರೆಯುತ್ತಿದ್ದಾರೆ.

ಹೌದು, ಗದಗ ಮತಕ್ಷೇತ್ರದ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ೧೨.೬೦ ಕೋಟಿ ರೂ. ಮಂಜೂರು ಮಾಡಿದ್ದು, ಗದಗ-ಬೆಟಗೇರಿ ಅವಳಿ ನಗರದ ಅಭಿವೃದ್ಧಿಗೆ ಆದ್ಯತೆ ನೀಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸಿ.ಸಿ.ಪಾಟೀಲರಿಗೆ ಅನಿಲ್ ಮೆಣಸಿನಕಾಯಿ ಅಭಿನಂದನೆ ತಿಳಿಸಿದ್ದಾರೆ.

ಗದಗ ತಾಲ್ಲೂಕಿನ ಕಾರವಾರ ಇಳಕಲ್ ರಾಜ್ಯ ಹೆದ್ದಾರಿ-06 ರಸ್ತೆಯ ಆಯ್ದ ಭಾಗಗಳಲ್ಲಿ ಮರು ಡಾಂಬರೀಕರಣ ಹಾಗೂ ಎನ್‌ಎಚ್-63ದಿಂದ ಗದಗ ಮುಂಡರಗಿ 1.30 ಕಿ.ಮೀ.ವರೆಗಿನ ರಸ್ತೆ ಸುಧಾರಣೆ ಕೈಗೊಳ್ಳಲು ಲೋಕೋಪಯೋಗಿ ಇಲಾಖೆ ಅನುಮೋದನೆ ನೀಡಿದೆ.

ಸುಮಾರು 3.60 ಕೋಟಿ ರೂ. ವೆಚ್ಚದಲ್ಲಿ ಕಾರವಾರ-ಇಳಕಲ್ ರಾಜ್ಯ ಹೆದ್ದಾರಿಯ ಗದಗ ಬೆಟಗೇರಿ ಅವಳಿ ನಗರದ ಕಿತ್ತೂರು ಚೆನ್ನಮ್ಮ ವೃತ್ತದಿಂದ ಭೂಮರೆಡ್ಡಿ ಸರ್ಕಲ್‌ವರೆಗೆ ಹಾಗೂ ತುಳಜಾಭವಾನಿ ಸರ್ಕಲ್‌ನಿಂದ ನರಸಾಪೂರದವರೆಗೆ ಮರು ಡಾಂಬರೀಕರಣ ಕಾಮಗಾರಿ ಕೈಗೊಳ್ಳಲು ಪಿಡಬ್ಲ್ಯೂಡಿ ಇಲಾಖೆ ಸಮ್ಮತಿಸಿದೆ.

ಅದರಂತೆ, ಗದಗ-ಮುಂಡರಗಿ 1.30 ಕಿ.ಮೀ.ವರೆಗಿನ ರಸ್ತೆ ಸುಧಾರಣೆಗೆ 9 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಕಳೆದ ಎರಡ್ಮೂರು ತಿಂಗಳ ಹಿಂದೆಯಷ್ಟೇ ರಾಜ್ಯ ಸರ್ಕಾರ ಗದಗ ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 1,306.5 ಕೋಟಿ ರೂ. ಅನುದಾನ ಬಿಡುಗಡೆ ಮಾಡುವ ಮೂಲಕ ಗದಗ ಮತಕ್ಷೇತ್ರಕ್ಕೆ ಭರಪೂರ ಕೊಡುಗೆ ನೀಡಿತ್ತು. ಇದಕ್ಕಾಗಿ ಮುಖಂಡ ಅನೀಲ್ ಮೆಣಸಿನಕಾಯಿ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನಾ ಸಮಾರಂಭವನ್ನೂ ಏರ್ಪಡಿಸಿತ್ತು. ಇದಾದ ಬೆನ್ನಲ್ಲೇ ಗದಗನ ರಸ್ತೆಗಳ ಅಭ್ಯುದಯಕ್ಕಾಗಿ 12.60 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿ ಕೈಗೊಳ್ಳಲು ಅನುಮೋದಿಸಿರುವುದು ಕ್ಷೇತ್ರದ ಜನರಿಗೆ, ಬಿಜೆಪಿ ಕಾರ್ಯಕರ್ತರಿಗೆ ಸಂತಸವನ್ನುಂಟು ಮಾಡಿದೆ.

ಶಾಶ್ವತ ಪರಿಹಾರ ಸಿಗಬಹುದೇ?

ಕಳೆದ ಹಲವು ದಿನಗಳಿಂದ ಗದಗ-ಬೆಟಗೇರಿ ಅವಳಿ ನಗರದ ಮಧ್ಯೆ ಭಾಗದಲ್ಲಿರುವ ಪಾಲಾ ಬಾದಾಮಿ ರಸ್ತೆ ದುರಸ್ತಿ ಕೈಗೊಳ್ಳಬೇಕೆಂಬ ಕೂಗು ಕೇಳಿ ಬರುತ್ತಿತ್ತು. ಈ ರಸ್ತೆಯನ್ನು ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಚಿವರು ಆಗಮಿಸುವ ವೇಳೆ ಹಲವು ಬಾರಿ ಅಭಿವೃದ್ಧಿಗೊಳಿಸಿದ್ದರೂ ವಾಹನ ದಟ್ಟಣೆ, ಕಳಪೆ ಕಾಮಗಾರಿಯಿಂದಾಗಿ ರಸ್ತೆ ಕಿತ್ತು ಹೋಗಿದೆ. ಇದರಿಂದಾಗಿ ಹಳೇ ಡಿಸಿ ಆಫೀಸ್ ಸರ್ಕಲ್‌ನಿಂದ ಗದಗ ತಹಸೀಲ್ದಾರ್ ಕಚೇರಿವರೆಗೆ ಗುಂಡಿಗಳಿಂದ, ಧೂಳಿನಿಂದ ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ. ಇದೀಗ ಇದೇ ರಸ್ತೆಯ ಮರು ಡಾಂಬರೀಕರಣಕ್ಕೆ ಅನುದಾನ ಮಂಜೂರಾಗಿದ್ದು, ರಸ್ತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬಹುದೆಂಬ ಆಶಾಭಾವನೆ ಅವಳಿ ನಗರದ ಜನರದ್ದಾಗಿದೆ.

ಗದಗ ಮತಕ್ಷೇತ್ರದ ಅಭಿವೃದ್ಧಿಗೆ ಸಚಿವ ಸಿ.ಸಿ.ಪಾಟೀಲ, ಸಂಸದ ಶಿವಕುಮಾರ್ ಉದಾಸಿ, ಶಾಸಕ ಕಳಕಪ್ಪ ಬಂಡಿಯವರು ಸಾಕಷ್ಟು ಅನುದಾನ ನೀಡಿದ್ದು, ಅವರಿಗೆ ಅಭಿನಂದನೆಗಳು. ಇವರೆಲ್ಲರ ಸಹಕಾರದಿಂದ ಮುಂಬರುವ ದಿನಗಳಲ್ಲಿ ಗದಗ ವಿಧಾನಸಭಾ ಕ್ಷೇತ್ರದ ಚಿತ್ರಣ ಬದಲಾಗಲಿದೆ.

ಅನಿಲ್ ಮೆಣಸಿನಕಾಯಿ, ಬಿಜೆಪಿ ಯುವ ಮುಖಂಡ

ಗದಗ-ಬೆಟಗೇರಿ ಅವಳಿ ನಗರದ ಅಭ್ಯುದಯಕ್ಕಾಗಿ ಜಿಲ್ಲೆಯ ಸಚಿವರು, ಪಕ್ಷದ ಶಾಸಕರು ಮುತುವರ್ಜಿ ವಹಿಸಿ ಅನುದಾನ ನೀಡುತ್ತಿರುವುದು ಬಹಳಷ್ಟು ಸಂತಸ ತಂದಿದೆ. ಅಲ್ಲದೆ, ಅವಳಿ ನಗರದ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಅನಿಲ್ ಮೆಣಸಿನಕಾಯಿ ಅವರ ಕಾರ್ಯ ಶ್ಲಾಘನೀಯ.

ರಾಘವೇಂದ್ರ ಯಳವತ್ತಿ, ನಗರಸಭೆ ಸದಸ್ಯ

ರಣತೂರ ಗ್ರಾ.ಪಂಚಾಯತಿ ಉಪ ಚುನಾವಣಾ ಫಲಿತಾಂಶ; ಶರೀಫ್ ಛಬ್ಬಿ ಭರ್ಜರಿ ಗೆಲುವು

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ರಣತೂರ ಗ್ರಾಮ ಪಂಚಾಯತಿಯ 2ನೇ ವಾರ್ಡ್ ಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫಸಾಬ್ ರಾಜೇಸಾಬ್ ಛಬ್ಬಿ 126 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಶರೀಫಸಾಬ್ ಛಬ್ಬಿ 391ಮತಗಳ‌ನ್ನು ಪಡೆದರೆ,
ಪ್ರತಿಸ್ಪರ್ಧಿ ಅಜ್ಜಪ್ಪ ಕೃಷ್ಣಪ್ಪ ಛಬ್ಬಿ 265 ಮತಗಳನ್ನು ಪಡೆದು ಪರಾಭವಗೊಂಡರು.

ಚುನಾವಾಣಾಧಿಕಾರಿಯಾಗಿದ್ದ ತಹಶೀಲ್ದಾರ ಕಲ್ಲಗೌಡ ಪಾಟೀಲ್ ಗೆಲುವು ಸಾಧಿಸಿದ ಶರೀಫಸಾಬ್ ಛಬ್ಬಿಗೆ ಪ್ರಮಾಣಪತ್ರ ವಿತರಣೆ ಮಾಡಿದರು.

ಹಿಂದುಳಿದ ಎ‌ ವರ್ಗಕ್ಕೆ ಮೀಸಲಿದ್ದ ಸದಸ್ಯ ಸ್ಥಾನಕ್ಕೆ ಕಳೆದ ಶುಕ್ರವಾರ ಮೇ 20 ರಂದು ಮತದಾನ ನಡೆದಿತ್ತು.

ಬೆಣ್ಣೆಹಳ್ಳದ ನಡುನೀರಿನಲ್ಲಿ ಸಿಲುಕಿದ್ದ ಕಾರ್ಮಿಕನ ರಕ್ಷಣೆ

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಸತತ ಮೂರು ದಿನದಿಂದ ಮುಂಗಾರು ಪೂರ್ವದಲ್ಲಿಯೇ ಧಾರವಾಡ ಜಿಲ್ಲೆಯಾದ್ಯಂತ ಸುರಿದ ಮಳೆಯಿಂದ ಬೆಣ್ಣೆಹಳ್ಳ ಉಕ್ಕಿ ಹರಿಯುತ್ತಿದ್ದು, ತಾಲ್ಲೂಕಿನ ಕಡದಳ್ಳಿ ಗ್ರಾಮದ ಬಳಿ  ಪ್ರವಾಹದಲ್ಲಿ ಸಿಲುಕಿದ್ದ ಆಂದ್ರ ಮೂಲಕ ಕಾರ್ಮಿಕನೊಬ್ಬನನ್ನು ರಕ್ಷಣೆ ಮಾಡುವಲ್ಲಿ ತಾಲ್ಲೂಕಾ ಆಡಳಿತ ಶನಿವಾರ ಯಶಸ್ವಿಯಾಗಿದೆ.

ಆಂದ್ರ ಮೂಲದ ಕಾರ್ಮಿಕನಾದ ಮದನ್ ರೆಡ್ಡಿ (29) ಈತ ಕೆಲಸ ಹುಡುಕಿಕೊಂಡು ಹೊಲಕ್ಕೆ ಹೋಗಿದ್ದ. ಈತನಿಗೆ ಈ ಭಾಗದಲ್ಲಿ ಬೆಣ್ಣೆ ಹಳ್ಳದ ಪ್ರವಾಹ ಹೇಗಿರುತ್ತದೆ ಎಂಬುದು ಗೊತ್ತಾಗದೇ ಹೊಲದ ಶೆಡ್ಡೊಂದರಲ್ಲಿ ರಕ್ಷಣೆ ಪಡೆದು ನಿಂತಿದ್ದಾನೆ.  ಆದರೆ ಒಮ್ಮಿಂದೊಮ್ಮೆಲೆ ಬೆಣ್ಣೆಹಳ್ಳದ ಪ್ರವಾಹ ಹೆಚ್ಚಾಗಿ ಕೆಲಸ ಮಾಡುತ್ತಿದ್ದ ಹೊಲ ನಡುಗಡ್ಡೆಯಾಗಿದೆ. ಈತ ಭಯದಿಂದ ಜೋರಾಗಿ ಕೂಗಿಕೊಂಡಿದ್ದನ್ನು ಗ್ರಾಮಸ್ಥರು ಕೆಳಿಸಿಕೊಂಡು ತಾಲ್ಲೂಕಾ ಆಡಳಿತಕ್ಕೆ ಸುದ್ದಿ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ತಹಶೀಲ್ದಾರ್ ಅನಿಲ ಬಡಿಗೇರ, ಸಿ.ಪಿ.ಐ ಚಂದ್ರಶೇಖರ ಮಠಪತಿ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ ಮೇಲೆ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಆಗಮಿಸಿದ ರಕ್ಷಣಾ ಸಿಬ್ಬಂದಿ ಸತತ ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ಕಾರ್ಮಿಕನನ್ನು ರಕ್ಷಣೆ ಮಾಡಿ ಸಂಜೆ ಯಶಸ್ವಿಯಾಗಿ ಕರೆ ತಂದಿದ್ದರಿಂದ ರಕ್ಷಣೆಯಲ್ಲಿ ತೊಡಗಿದ್ದ ಎಲ್ಲರೂ ನಿಟ್ಟುಸಿರು ಬಿಡುವಂತಾಯಿತು.

ಈ ಸಂದರ್ಭದಲ್ಲಿ ಅಲ್ಲಿಯೇ ಉಪಸ್ಥಿತರಿದ್ದ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕಾರ್ಮಿಕನ ಜೊತೆ ಮಾತನಾಡಿ, ತಕ್ಷಣವೇ ಈತನಿಗೆ ಪ್ರಾಥಮಿಕ ಚಿಕಿತ್ಸೆ ಕೊಡುವಂತೆ ಸೂಚಿಸಿದ್ದರಿಂದ ಸ್ಥಳದಲ್ಲಿಯೇ ಇದ್ದ ಅಂಬ್ಯುಲೆನ್ಸನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನವಲಗುಂದ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡುತ್ತಿದ್ದಾರೆ.


ತುಂಬಾ ಹಸಿದುಕೊಂಡಿದ್ದ ಆತನಿಗೆ ವೈದ್ಯಾಧಿಕಾರಿಗಳು ಮೊದಲು ಊಟ ಕೊಟ್ಟು ಉಪಚರಿಸುತ್ತಿದ್ದಾರೆ. ಈತನಿಗೆ ಕನ್ನಡ ಭಾಷೆ ಬರದೆ ಇರುವುದು ಸ್ವಲ್ಪ ತೊಂದರೆಯಾಗುತ್ತಿದೆ.

ನೀರಿನ ಟ್ಯಾಂಕ್‍ನಲ್ಲಿ ಕಾಲು ಜಾರಿ ಬಿದ್ದು ಕಾರ್ಮಿಕ ಸಾವು

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಇಲ್ಲಿಯ ಇಬ್ರಾಹಿಂಪೂರ ರಸ್ತೆಯಲ್ಲಿರುವ ಪುರಸಭೆಯ ಕಸ ಸಂಗ್ರಹ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕನೊಬ್ಬ ಕಾಲು ಜಾರಿ ನೀರಿನ ಟ್ಯಾಂಕ್‍ನಲ್ಲಿ ಬಿದ್ದ ಪರಿಣಾಮ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.

ಗುತ್ತಿಗೆದಾರರ ಕೈಕೆಳಗೆ ಕೆಲಸ ಮಾಡುತ್ತಿದ್ದ ಈತ ಪಟ್ಟಣದ ಜಟಗಾ ಗಲ್ಲಿಯ ನಿವಾಸಿ ಗೂಡುಸಾಬ ಮಾಬುಸಾಬ ಶಿರೂರ (38) ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಮುಖ್ಯಾಧಿಕಾರಿ ಈರಪ್ಪ ಹಸಬಿ ಆಗಮಿಸಿ ಪ್ರಾಥಮಿಕ ವಿಚಾರಣೆ ಮಾಡಿದ್ದು, ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮೃತ ವ್ಯಕ್ತಿಯ ಶವವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದ್ದು ದುಡಿಯುವ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಹೃದಯವಿದ್ರಾವಕವಾಗಿತ್ತು.

ನಿರಂತರ ಮಳೆಗೆ ಬೈಕ್ ಸಮೇತ ಕೊಚ್ಚಿ ಹೋದ ಯುವಕ; ಗದಗ ಜಿಲ್ಲೆಯಲ್ಲಿ ಮೊದಲ ಬಲಿ!

ವಿಜಯಸಾಕ್ಷಿ ಸುದ್ದಿ, ಮುಂಡರಗಿ:

ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ವರ್ಷಧಾರೆ ಜನಜೀವನ ಅಸ್ತವ್ಯಸ್ತಗೊಳಿಸಿದ್ದಲ್ಲದೇ, ಸಾಕಷ್ಟು ಅವಾಂತರ ಸೃಷ್ಟಿಸುತ್ತಿದೆ. ಅಕಾಲಿಕ ಮಳೆ ಜನರ ಜೀವಕ್ಕೆ ಕುತ್ತು ತರುತ್ತಿದೆ.

ಹೌದು, ಉಪ್ಪಿನ ಬೆಟಗೇರಿಗೆ ಹೋಗಿ ಕನ್ಯೆ ನೋಡಿ ಮರಳಿ ಊರಿಗೆ ಬರುತ್ತಿದ್ದ ಮುಂಡರಗಿ ತಾಲ್ಲೂಕಿನ ಯಕ್ಲಾಸಪುರ ಗ್ರಾಮದ ಟಿಪ್ಪುಸುಲ್ತಾನ್ (೨೬) ಎಂಬ ಯುವಕ ಹಳ್ಳ ದಾಟುವ ವೇಳೆ ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

ಮೃತ ಟಿಪ್ಪುಸುಲ್ತಾನ್ ಗುರುವಾರ ವಧು(ಕನ್ಯೆ) ನೋಡಲು ಉಪ್ಪಿನ ಬೆಟಗೇರಿಗೆ ಹೋಗಿದ್ದ. ಕನ್ಯೆ ನೋಡಿ ವಾಪಸ್ ಬರುವಷ್ಟೊತ್ತಿಗೆ ಹೊತ್ತು ಮುಳುಗಿದೆ. ಹೀಗಾಗಿ ಉಪ್ಪಿನ ಬೆಟಗೇರಿಯಿಂದ ಮುಂಡರಗಿಗೆ ವಾಪಸ್ ಬಂದು ತಂದೆಗೆ ಯಕ್ಲಾಸಪುರದಲ್ಲಿ ಮಳೆ ಬರುತ್ತಿರುವ ಬಗ್ಗೆ ಕೇಳಿದ್ದನಂತೆ. ಆಗ ಟಿಪ್ಪು ತಂದೆ ‘ಇಲ್ಲಿ ತುಂಬಾ ಮಳೆ ಬರುತ್ತಿದೆ. ಹೀಗಾಗಿ ಇವತ್ತು ಬರಬೇಡ. ಇವತ್ತೊಂದಿನ ಮುಂಡರಗಿಯಲ್ಲಿದ್ದು ಶುಕ್ರವಾರ ಬೆಳಿಗ್ಗೆದ್ದು ಬಾ ಎಂದು ಹೇಳಿದ್ದರಂತೆ.

ತಂದೆ ಮಾತಿಗೆ ಒಲ್ಲೆನಲ್ಲದೇ ಮುಂಡರಗಿಯಲ್ಲಿ ಇರದೇ ‘ಹೂಂ ಎಂದಿದ್ದ ಟಿಪ್ಪು ಯಕ್ಲಾಸಪುರಕ್ಕೆ ಹೊರಟಿದ್ದಾನೆ. ನಿರಂತರ ಸುರಿಯುತ್ತಿರುವ ಮಳೆಗೆ ಯಕ್ಲಾಸಪುರದ ಕೋತಿ ಹಳ್ಳ ಮೈದುಂಬಿ ಹರಿಯುತ್ತಿದ್ದರೂ ಟಿಪ್ಪು ಬೈಕ್‌ನಲ್ಲಿ ಹಳ್ಳ ದಾಟುವ ದುಸ್ಸಾಹಸಕ್ಕೆ ಮುಂದಾಗಿದ್ದಾನೆ. ಈ ವೇಳೆ ನೀರಿನ ರಭಸಕ್ಕೆ, ನೀರಿನ ಸೆಳುವಿಗೆ ಸಿಲುಕಿ ಕೊಚ್ಚಿಕೊಂಡು ಹೋಗಿ ಅಸುನೀಗಿದ್ದಾನೆ.

ಮೃತ ಟಿಪ್ಪುಸುಲ್ತಾನ ಮೃತದೇಹ ಹಳ್ಳದ ದಂಡೆಯಲ್ಲಿರುವ ಮುಳ್ಳಿನ ಕಂಟೆಗೆ ಸಿಲುಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಎಎಸ್‌ಐ ಮಾರುತಿ ಜೋಗಂದಂಡಕರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗದಗ ಜಿಲ್ಲೆಯಲ್ಲಿ ನಿರಂತರ ಮಳೆ; ಇಂದು ಅಂಗನವಾಡಿ, ಶಾಲೆಗಳಿಗೆ ರಜೆ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದ ಎಲ್ಲಾ ಅಂಗನವಾಡಿ, ಶಾಲೆಗಳಿಗೆ ಮೇ 20ರಂದು(ಇಂದು) ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ರಜೆ ಘೋಷಿಸಿದ್ದಾರೆ.

ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಮತ್ತು ಹವಾಮಾನ ಇಲಾಖೆಯು ಮಳೆ ಮುಂದುವರೆಯುವ ಸಾಧ್ಯತೆಯ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮೇ 20ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ ಹಾಗೂ ಶಾಲೆಗಳಿಗೆ ರಜೆ ನೀಡಲಾಗಿದೆ.

ನಿನ್ನೆ ಮೇ 19 ರಿಂದ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಮಳೆಯಾಗುತ್ತಿದ್ದು, ಶುಕ್ರವಾರವೂ ಮುಂದುವರೆದಿದೆ. ಜನ ಹಾಗೂ ಜಾನುವಾರುಗಳ ಸುರಕ್ಷತೆಗೆ ಜಿಲ್ಲೆಯ ಸಾರ್ವಜನಿಕರು ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ಕಾರು ಸಮೇತ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ನಾಲ್ವರು; ಗ್ರಾಮಸ್ಥರು, ಪೊಲೀಸರಿಂದ ಬಚಾವ್

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ:

ಗದಗ ಜಿಲ್ಲೆಯ ಹಲವೆಡೆ ಮುಂಗಾರು
ಪೂರ್ವ ಮಳೆಯ ಆರ್ಭಟ ಶುರುವಾಗಿದ್ದು, ಅವಾಂತರ ಸೃಷ್ಟಿಸುತ್ತಿದೆ. ಅಕಾಲಿಕ‌ ಮಳೆಗೆ ಮನೆಗಳು ನೆಲಕಚ್ಚುತ್ತಿದ್ದು, ಮರಗಳು ಧರೆಗುರುಳುತ್ತಿವೆ. ಅಲ್ಲದೆ, ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ.

ಅದರಂತೆ, ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಮಳೆರಾಯನ ಸಿಂಚನ ಜೋರಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.

ಹೀಗೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಲಕ್ಷ್ಮೇಶ್ವರ ತಾಲ್ಲೂಕಿನ ನೆಲೊಗಲ್ ಗ್ರಾಮದ ಹಳ್ಳವೊಂದು ಹರಿಯುತ್ತಿದ್ದು, ಹಳ್ಳದಾಟಲು ಹೋದ ಕಾರು ಸಮೇತ ನಾಲ್ವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಬದುಕುಳಿದ ಘಟನೆ ಗುರುವಾರ ರಾತ್ರಿ ಸಂಭವಿಸಿತು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಲಕ್ಷ್ಮೇಶ್ವರ ಪೊಲೀಸರು ಹಾಗೂ ಸಿಪಿಐ ವಿಕಾಸ್ ಲಮಾಣಿ ಅವರು ನೀರಿನಲ್ಲಿ ಕೊಚ್ಚಿ ಹೋಗಿದ್ದ ನಾಲ್ವರನ್ನು ನೆಲೊಗಲ್ ಗ್ರಾಮಸ್ಥರ ಸಹಕಾರದಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೆಬ್ಬಾಳ ಗ್ರಾಮದವರಾದ ಚನ್ನವೀರಗೌಡ ಪಾಟೀಲ (40), ಡಾ.ಪ್ರಭು ಮನ್ಸೂರ್ (40), ಬಸವನಗೌಡ ತೆಗ್ಗಿನಮನಿ (40) ಹಾಗೂ ಕನಕವಾಡದ ವೀರೇಶ್ ಡಂಬಳ (30) ಕೊಚ್ಚಿ ಹೋಗಿದ್ದರು. ಇನ್ನು ನೀರಿನಲ್ಲಿ ಕೊಚ್ಚಿ ಹೋಗಿದ್ದವರನ್ನು ರಕ್ಷಿಸಿದ ಪೊಲೀಸರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್‌ಎಸ್‌ಎಲ್‌ಸಿ ಫಲಿತಾಂಶ, ಮೂವರು ವಿದ್ಯಾರ್ಥಿಗಳು ಜಿಲ್ಲೆಗೆ ಪ್ರಥಮ, ನರಗುಂದ ಫಸ್ಟ್, ಗದಗ ತಾಲ್ಲೂಕು ಲಾಸ್ಟ್!

ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ | ಮೂವರು ವಿದ್ಯಾರ್ಥಿಗಳು ಜಿಲ್ಲೆಗೆ ಪ್ರಥಮ | 88 ವಿದ್ಯಾರ್ಥಿಗಳು ಟಾಪ್‌ಟೆನ್‌ನಲ್ಲಿ ತೇರ್ಗಡೆ | ರಾಜ್ಯದ ಫಲಿತಾಂಶಕ್ಕಿಂತ ಶೇ.4ರಷ್ಟು ಹೆಚ್ಚಳ | ಗದಗ ಇತಿಹಾಸದಲ್ಲಿಯೇ ಉತ್ತಮ ಫಲಿತಾಂಶ: ಬಸವಲಿಂಗಪ್ಪ

ವಿಜಯಸಾಕ್ಷಿ ಸುದ್ದಿ, ಗದಗ;

ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು, ಗದಗ ಜಿಲ್ಲೆಯು ಶೇ.89.13ರಷ್ಟು ಸಾಧನೆ ಮಾಡುವ ಮೂಲಕ ‘ಎ ಗ್ರೇಡ್ ಪಡೆದುಕೊಂಡಿದೆ.

ಗದಗ ಜಿಲ್ಲೆಯಲ್ಲಿ ಪರೀಕ್ಷೆಗೆ ಗಂಡು 7,447, ಹೆಣ್ಣು 7,956 ಸೇರಿ 15,403 ವಿದ್ಯಾರ್ಥಿಗಳು ಹಾಜರಾಗಿದ್ದರು. ಅದರಲ್ಲಿ 6,381 ಗಂಡು ಹಾಗೂ 7,348 ಹೆಣ್ಣು ಸೇರಿ 13,729 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಮಾರ್ಚ್ 28 ರಿಂದ ಏಪ್ರಿಲ್ 11ರವರೆಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 22 ಸರ್ಕಾರಿ, 06 ಅನುದಾನಿತ ಹಾಗೂ 27 ಅನುದಾನ ರಹಿತ ಸೇರಿ 55 ಪ್ರೌಢಶಾಲೆಗಳು ಶೇ.100ರಷ್ಟು ಫಲಿತಾಂಶ ಸಾಧಿಸಿವೆ. ಅದರಂತೆ, ಸರ್ಕಾರಿ ಹಾಗೂ ಅನುದಾನಿತ 3 ಶಾಲೆಗಳು ಶೇ.40ಕ್ಕಿಂತ ಕಡಿಮೆ ಫಲಿತಾಂಶ ಬಂದಿವೆ.

ಗದಗ ಜಿಲ್ಲೆಯ ಮೂವರು ವಿದ್ಯಾರ್ಥಿಗಳು 625ಕ್ಕೆ 624 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು, ಶಾಲೆಗಳಿಗೆ ಕೀರ್ತಿ ತಂದಿದ್ದಾರೆ. ನರಗುಂದ ತಾಲ್ಲೂಕಿನ ಬೆನಕನಕೊಪ್ಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಾದ ನವೀನಗೌಡ ಮಲ್ಲನಗೌಡರ, ವಾಣಿಶ್ರೀ ಲಕ್ಷ್ಮಣಗೌಡ ಕುಲಕರ್ಣಿ ಹಾಗೂ ಗದಗನ ಲೊಯೊಲಾ ಆಂಗ್ಲ ಮಾಧ್ಯಮ ಶಾಲೆಯ ಮಹೇಕ್ ಆಫ್ರೀನ್ ಜಕ್ಕಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.

ಅದರಂತೆ, 625 ಅಂಕಗಳಿಗೆ 623 ಅಂಕ ಪಡೆಯುವ ಮೂಲಕ 9 ವಿದ್ಯಾರ್ಥಿಗಳು ದ್ವಿತೀಯ ಹಾಗೂ 07 ವಿದ್ಯಾರ್ಥಿಗಳು 622 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಇನ್ನು ಜಿಲ್ಲೆಯಲ್ಲಿಯೇ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರ ಸ್ವಕ್ಷೇತ್ರ ನರಗುಂದ ತಾಲ್ಲೂಕು ಶೇ.91.36ರಷ್ಟು ಫಲಿತಾಂಶದ ಮೂಲ ಉತ್ತಮ ಸಾಧನೆಗೈದಿದ್ದು, ಪ್ರಥಮ ಸ್ಥಾನ ಪಡೆದಿದೆ. ರೋಣ ಶೇ.90.10, ಶಿರಹಟ್ಟಿ ಶೇ.89.93, ಮುಂಡರಗಿ ಶೇ.89.73, ಗದಗ ಗ್ರಾಮೀಣ ಶೇ.88.47 ಹಾಗೂ ಗದಗ ಶಹರ 85.76ರಷ್ಟು ಫಲಿತಾಂಶ ಪಡೆದಿದ್ದು, ಗದಗ ತಾಲ್ಲೂಕು ಅತ್ಯಂತ ಕಳಪೆ ಮಟ್ಟದ ಸಾಧನೆ ಮಾಡುವ ಮೂಲಕ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟಿದೆ.

ರಾಜ್ಯಕ್ಕಿಂತ ಶೇ.4ರಷ್ಟು ಫಲಿತಾಂಶ ಹೆಚ್ಚಳ!

ಗದಗ ಜಿಲ್ಲೆಯಲ್ಲಿ ಒಟ್ಟು 1,873 ವಿದ್ಯಾರ್ಥಿಗಳು ‘ಎ+, 3,235 ‘ಎ, 3,140 ‘ಬಿ+, 2,992 ‘ಬಿ, 2053 ‘ಸಿ+ ಹಾಗೂ 436 ವಿದ್ಯಾರ್ಥಿಗಳು ‘ಸಿ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇನ್ನು 88 ವಿದ್ಯಾರ್ಥಿಗಳು ಟಾಪ್‌ಟೆನ್ 616 ರಿಂದ 624ವರೆಗೆ ಅಂಕ ಪಡೆಯುವ ಮೂಲಕ ಟಾಪ್‌ಟೆನ್‌ನಲ್ಲಿ ತೇರ್ಗಡೆಯಾಗಿದ್ದಾರೆ. ಟಾಪ್‌ಟೆನ್ ವಿದ್ಯಾರ್ಥಿಗಳ ಫೈಕಿ ಕನ್ನಡ ಮಾಧ್ಯಮದಲ್ಲಿ 17, ಆಂಗ್ಲ ಮಾಧ್ಯಮದಲ್ಲಿ 71ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಲ್ಲದೆ, ಗದಗ ಜಿಲ್ಲೆ ಶೇ.89.13ರಷ್ಟು ಫಲಿತಾಂಶ ದಾಖಲಿಸುವ ಮೂಲಕ ರಾಜ್ಯದ ಫಲಿತಾಂಶಕ್ಕಿಂತ ಶೇ.4ರಷ್ಟು ಹೆಚ್ಚಾಗಿದೆ.

ಗದಗ ಜಿಲ್ಲೆಯ ಇತಿಹಾಸದಲ್ಲಿಯೇ ಗದಗ ಜಿಲ್ಲೆ ಈ ಬಾರಿ ಉತ್ತಮ ಫಲಿತಾಂಶ ದಾಖಲಿಸಿದೆ. ರಾಜ್ಯದ ಫಲಿತಾಂಶಕ್ಕಿಂತ ಶೇ.೪ರಷ್ಟು ಹೆಚ್ಚಾಗಿದ್ದು, ಜಿಲ್ಲೆಯ ಯಾವ ತಾಲ್ಲೂಕುಗಳು ರಾಜ್ಯದ ಫಲಿತಾಂಶಕ್ಕಿಂತ ಕಡಿಮೆ ಬಂದಿಲ್ಲ.

ಜಿ.ಎಂ ಬಸವಲಿಂಗಪ್ಪ, ಡಿಡಿಪಿಐ. ಗದಗ

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ಮಗಳ ಸಾಧನೆ ಅಭಿಮಾನ ತರಿಸಿದೆ.

ಮಹಮ್ಮದ್ ಸೈಯದ್ ಜಕ್ಕಲಿ, ಮಹೇಕ್ ಆಫ್ರೀನ್ ತಂದೆ

ಉತ್ತಮ ಫಲಿತಾಂಶದಲ್ಲಿ ಶಾಲೆಯ ಶಿಕ್ಷಕರ ಸಹಕಾರದಿಂದ ಉತ್ತಮ ಫಲಿತಾಂಶ ತೆಗೆಯುವಲ್ಲಿ ಯಶಸ್ವಿಯಾಗಿದ್ದು ಹೆತ್ತವರ ಆಸೆ ಈಡೇರಿಸಿದ ಖುಷಿ ಇದೆ. ಪರೀಕ್ಷೆ ಎದುರಿಸುವುದಕ್ಕಾಗಿ ಪ್ರತಿನಿತ್ಯ ೧೦ ಗಂಟೆಗಳ ಕಾಲ ಅಧ್ಯಯನ ಮಾಡಿದ ಶ್ರಮವಿಂದು ಜಿಲ್ಲೆಗೆ ಪ್ರಥಮ ಸ್ಥಾನ ಬರುವಂತೆ ಮಾಡಿದ್ದು, ಮುಂದೆ ವೈದ್ಯನಾಗಬೇಕೆಂಬ ಕನಸು ಕಂಡಿರುವೆ.

ನವೀನಗೌಡ್ ಮಲ್ಲನಗೌಡರ್. ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ

ಜಿಲ್ಲೆಗೆ ಪ್ರಥಮ ಸ್ಥಾನ ಬಂದಿರುವುದು ತುಂಬಾ ಸಂತಸ ತಂದಿದೆ. ಸಮಯ ವ್ಯರ್ಥ ಮಾಡದೆ ದಿನಕ್ಕೆ ೮ರಿಂದ ೧೦ ಗಂಟೆಗಳವರೆಗಿನ ನಿರಂತರ ಅಭ್ಯಾಸ, ಪಾಲಕರ, ಶಿಕ್ಷಕರ ಸಹಕಾರ ಉತ್ತಮ ಫಲಿತಾಂಶ ಬರಲು ಕಾರಣೀಭೂತವಾಗಿದೆ. ಐಎಎಸ್ ಮಾಡುವ ಕನಸು ಕಂಡಿದ್ದು, ಅದಕ್ಕಾಗಿ ಪಿಯುಸಿಯಿಂದಲೇ ಅಗತ್ಯ ತಯಾರಿ ನಡೆಸುವೆ.

ಮಹೇಕ್ ಆಫ್ರೀನ್ ಜಕ್ಕಲಿ. ಪ್ರಥಮ ಸ್ಥಾನ ಪಡೆದ ವಿಧ್ಯಾರ್ಥಿನಿ

ಪಂ.ಪಂಚಾಕ್ಷರಿ ಗವಾಯಿಗಳ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪನೆ; ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

ವಿಜಯಸಾಕ್ಷಿ ಸುದ್ದಿ, ಗದಗ:

ಗದುಗಿನ ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ಥಾಪಿಸಿ ಆದೇಶಿಸಿದ್ದು, ಸದರಿ ಪ್ರಶಸ್ತಿ ಆಯ್ಕೆ ಉಪ ಸಮಿತಿಗೆ ಅಳವಡಿಸಬೇಕಾದ ಅಂಶ ಹಾಗೂ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.

ಈ ಪ್ರಶಸ್ತಿಯು ರಾಷ್ಟ್ರೀಯ ಪ್ರಶಸ್ತಿಯಾಗಿದ್ದು, ದಕ್ಷಿಣಾಧಿ ಮತ್ತು ಹಿಂದುಸ್ತಾನಿ ಸಂಗೀತಗಳಲ್ಲಿ ಪರಿಣಿತಿಯನ್ನು ಹೊಂದಿ ಉಭಯಗಾನ ವಿಶಾರದರೆಂಬ ಖ್ಯಾತಿಯನ್ನು ಪಡೆದಿದ್ದ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಹೆಸರಿನಲ್ಲಿ ಸ್ಥಾಪಿಸಲಾಗಿದೆ ಎಂದು ರಾಜ್ಯ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.

ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯನ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕನಿಷ್ಟ ೨೫ ರಿಂದ ೩೦ ವರ್ಷ ಮೇಲ್ಪಟ್ಟು ಸಾಧನೆ ಮಾಡಿದ ಕಲಾವಿದರಿಗೆ ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತದೆ. ಅಲ್ಲದೆ, ಈ ಪ್ರಶಸ್ತಿಯನ್ನು ಒಂದು ವರ್ಷ ರಾಜ್ಯದ ಕಲಾವಿದರಿಗೆ, ನಂತರದ ಒಂದು ವರ್ಷ ರಾಜ್ಯದ ಯಾವುದೇ ಹೊರ ರಾಜ್ಯದ ಕಲಾವಿದರಿಗೆ ನೀಡಿ ಪುರಸ್ಕರಿಸಲಾಗುತ್ತದೆ.

ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿಯು ೧೦ಲಕ್ಷ ರೂ. ಮೊತ್ತಗಳನ್ನೊಳಗೊಂಡಿರಲಿದ್ದು, ಪ್ರಶಸ್ತಿ ಸ್ಮರಣಿಕೆ, ಪ್ರಶಸ್ತಿ ಫಲಕ ಒಳಗೊಂಡಿರಲಿದೆ.

ಸದರಿ ಪ್ರಶಸ್ತಿಯನ್ನು ಪ್ರತಿವರ್ಷ ಫೆಬ್ರುವರಿ ೨ರಂದು ಶ್ರೀಗಳ ಜನ್ಮದಿನದಂದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸರ್ಕಾರದ ನಿರ್ಧರಿಸುವ ಸ್ಥಳಗಳಲ್ಲಿ ಸಮಾರಂಭ ಏರ್ಪಡಿಸುವ ಮೂಲಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅಲ್ಲದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ ಇತರ ವಾರ್ಷಿಕ ಪ್ರಶಸ್ತಿಗಳ ಸಾಮಾನ್ಯ ನಿಯಮಾವಳಿಗಳು ಈ ಪ್ರಶಸ್ತಿಗಳಿಗೂ ಅನ್ವಯವಾಗಲಿದೆ ಎಂದು ರಾಜ್ಯ ಸರ್ಕಾರ ಆದೇಶಿಸಿದೆ.

ಇನ್ನು ರಾಜ್ಯ ಸರ್ಕಾರ ಪಂಚಾಕ್ಷರಿ ಗವಾಯಿಗಳ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪಿಸಿ ಆದೇಶಿಸಿದ್ದಕ್ಕೆ, ವೀರೇಶ್ವರ ಪುಣ್ಯಾಶ್ರಮದ ಮಠದ ಭಕ್ತರಲ್ಲಿ ಹರ್ಷವನ್ನುಂಟು ಮಾಡಿದ್ದು, ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅವರು ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪ್ರಶಸ್ತಿ ಆಯ್ಕೆ ಉಪಸಮಿತಿಯ ಅಂಶಗಳು

  • ಹಿಂದೂಸ್ಮಾನಿ ಶಾಸ್ತ್ರೀಯ ಸಂಗೀತ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸಾಧನೆಗೈದ ಹಿರಿಯ ಸಾಧಕರು ಅಧ್ಯಕ್ಷರಾಗಿರಬೇಕು.
  • ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಿದ ಹಿರಿಯ ಇಬ್ಬರು ಸಾಧಕರು ಸದಸ್ಯರಾಗಿರಬೇಕು.
  • ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿರುತ್ತಾರೆ.
  • ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರು ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ.
  • ಸಮಿತಿಯಲ್ಲಿ ಒಬ್ಬರು ಮಹಿಳಾ ಸದಸ್ಯರು ಕಡ್ಡಾಯವಾಗಿರಬೇಕು.
  • ಸಭೆಯ ಕನಿಷ್ಠ ಕೋರಮ್ ೧/೩ ಆಗಿರಬೇಕು.

ನೀರು ಕುಡಿಯಲು ಹೋಗಿ ಕೃಷಿ ಹೊಂಡದಲ್ಲಿ ಮುಳುಗಿ ಮೂವರು ಬಾಲಕಿಯರ ಸಾವು

ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ

ವಿಜಯಸಾಕ್ಷಿ ಸುದ್ದಿ, ಮುಂಡರಗಿ:

ನೀರು ಕುಡಿಯಲು ಹೋಗಿದ್ದರು ಎನ್ನಲಾದ ಮೂವರು ಬಾಲಕಿಯರು ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಅಸುನೀಗಿರುವ ದುರ್ಘಟನೆ ಮುಂಡರಗಿ ತಾಲ್ಲೂಕಿನ ಅತ್ತಿಕಟ್ಟಿ ತಾಂಡಾದಲ್ಲಿ ನಡೆದಿದೆ. ಬಸವರಾಜ ನೂರಪ್ಪ ಲಮಾಣಿ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ಸಂಭವಿಸಿದೆ.

ಅತ್ತಿಕಟ್ಟಿ ತಾಂಡಾದ ಒಂದೇ ಕುಟುಂಬದ ಸುನೀತಾ(೧೩), ಅಂಕಿತಾ(೧೦) ಹಾಗೂ ಡೋಣಿ ತಾಂಡಾದ ಸುನೀತಾ ಲೋಕೇಶ್ ಲಮಾಣಿ(೧೦) ಮೃತ ದುರ್ದೈವಿಗಳಾಗಿದ್ದಾರೆ.

ಈ ಮೂವರು ಮೃತ ಬಾಲಕಿಯರು ಕುರಿ ಮರಿ ಮೇಯಿಸಲು ಜಮೀನಿಗೆ ತೆರಳಿದ್ದರು. ಈ ವೇಳೆ ಬಿಸಿಲಿನ ಬೇಗೆಗೆ ನೀರಿನ ದಾಹ ನೀಗಿಸಿಕೊಳ್ಳಲು ಕೃಷಿ ಹೊಂಡದಲ್ಲಿ ನೀರು ಕುಡಿಯಲು ತೆರಳಿದ್ದಾಗ ಕಾಲು ಜಾರಿ ಬಿದ್ದು ಬಾಲಕಿಯರು ಅಸುನೀಗಿರಬಹುದು ಎಂದು ಶಂಕಿಸಲಾಗಿದೆ.

ತಂದೆ-ತಾಯಿ ಜೊತೆ ಗೋವಾದಲ್ಲಿ ವಾಸವಿರುವ ಅತ್ತಿಕಟ್ಟಿ ತಾಂಡಾದ ಸುನೀತಾ ಹಾಗೂ ಅಂಕಿತಾ ಚಿಕ್ಕಪ್ಪನ ಮದುವೆಗೆ ಬಂದಿದ್ದರು. ಸೋಮವಾರ ನೀರು ಕುಡಿಯಲು ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ನೀರಿನಲ್ಲಿ ಮುಳುಗಿದ್ದ ಬಾಲಕಿಯರ ಮೃತದೇಹಗಳನ್ನು ಸ್ಥಳೀಯರ ಸಹಾಯದಿಂದ ಹೊರತೆಗೆದಿದ್ದು, ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಮುಂಡರಗಿ ತಹಸೀಲ್ದಾರ ಆಶಪ್ಪ ಪೂಜಾರ ಭೇಟಿ ನೀಡಿ ಪರಿಶೀಲಿಸಿದರು. ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.