Home Blog Page 3360

ವಿಜಯಸಾಕ್ಷಿ ಇಂಪ್ಯಾಕ್ಟ್; ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರ ನಾಮಫಲಕ ಬದಲಾವಣೆ

ಕೆಲಸದ ಒತ್ತಡದಲ್ಲಿ ನಾಮಫಲಕದ ಬಗ್ಗೆ ಗಮನಹರಿಸಿರಲಿಲ್ಲ; ಕಾಂಬಳೆ

ವಿಜಯಸಾಕ್ಷಿ ಸುದ್ದಿ, ನವಲಗುಂದ: ಈ ಮೊದಲು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಂಕರ ಪಾಟೀಲ ಮುನೇನಕೊಪ್ಪ ಅವರು, ನಮಗೆಲ್ಲಾ ಪ್ರತಿ ಗ್ರಾಮಕ್ಕೂ ಶುದ್ದ ಕುಡಿಯುವ ನೀರು ಪೂರೈಸಬೇಕೆಂದು ಗಡುವು ಕೊಟ್ಟಿದ್ದರು. ಆ ಕೆಲಸದಲ್ಲಿ ನಾವೆಲ್ಲರೂ ಮಗ್ನರಾಗಿದ್ದೇವು, ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಬದಲಾಗಿದ್ದ ನಾಮಫಲಕವನ್ನು ಬದಲಿಸುವಲ್ಲಿ ಸ್ವಲ್ಪ ವಿಳಂಭವಾಗಿದ್ದು ನಿಜ. ವಿಜಯಸಾಕ್ಷಿ ಪತ್ರಿಕೆಯವರು ಗಮನಕ್ಕೆ ತಂದ ತಕ್ಷಣ ತಪ್ಪನ್ನು ತಿದ್ದುಕೊಂಡಿದ್ದೇವೆಂದು ತಾಲ್ಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ.ಕಾಂಬಳೆ ಅನಿಸಿಕೆ ವ್ಯಕ್ತಪಡಿಸಿದರು.
 

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಂಕರ ಪಾಟೀಲ ಮುನೇನಕೊಪ್ಪ ಅವರು ಬೇರೆ ಜಿಲ್ಲೆಯ ಉಸ್ತುವಾರಿಗಳಾಗಿದ್ದರೂ  ಅವರ ಜನಸಂಪರ್ಕ ಕಾರ್ಯಾಲಯದ ನಾಮಫಲಕದಲ್ಲಿ ಇನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದು ಏಪ್ರಿಲ್ 8 ರಂದು ವಿಜಯಸಾಕ್ಷಿ ವೆಬ್ ಪೋರ್ಟಲ್ ಹಾಗೂ ಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸಲಾಗಿತ್ತು.

ಮೊದಲಿನ ನಾಮಫಲಕ
ತಿದ್ದುಪಡಿಯಾದ ನಾಮಫಲಕ

ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು, ಈಗ ಶಂಕರ ಪಾಟೀಲ ಮುನೇನಕೊಪ್ಪ ಅವರು ರಾಯಚೂರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆಂದು ಬದಲಾಯಿಸಿ ಹೊಸದಾಗಿ ನಾಮಫಲಕನ್ನು ಅಳವಡಿಸಿದ್ದಾರೆ.
 

ಈ ತಪ್ಪಿನ ಕುರಿತು ತಾಲ್ಲೂಕಾ ಬಿಜೆಪಿ ಅಧ್ಯಕ್ಷರಾದ ಎಸ್.ಬಿ.ದಾನಪ್ಪಗೌಡರ ಪತ್ರಿಕೆಗೆ ಸ್ಪಷ್ಟನೆ ನೀಡಿದ್ದು, ನಮ್ಮ ಶಂಕರ ಪಾಟೀಲ ಮುನೇನಕೊಪ್ಪ ಅವರು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬದಲಾಗಿದ್ದು ನಮಗೆಲ್ಲರಿಗೂ ತಿಳಿದಿತ್ತು. ಆದರೆ ಅವರು ನಮಗೆ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆ ನಮಗೆ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ನಾವು ನಾಮ ಫಲಕ ಬದಲಾಯಿಸುವಲ್ಲಿ ಮೈಮರೆತಿದ್ದೇವು. ಆದರೆ ಅದನ್ನು ಸೂಕ್ಷ್ಮವಾಗಿ ಗಮನಿಸಿದ ವಿಜಯಸಾಕ್ಷಿ ಪತ್ರಿಕೆಯವರು ನಮ್ಮ ಗಮನಕ್ಕೆ ತಂದ ತಕ್ಷಣ ಅಧಿಕಾರಿಗಳಿಗೆ ಸೂಚನೆ ನೀಡಿದ ಫಲವಾಗಿ ಹೊಸದಾಗಿ ನಾಮಫಲಕವನ್ನು ಬದಲಾಯಿಸಲಾಗಿದೆ.

ತಪ್ಪು ಯಾರೇ ಮಾಡಿದರೂ ತಪ್ಪೇ, ಆದರೆ ಅದನ್ನು ಗಮನಕ್ಕೆ ತಂದ ವಿಜಯಸಾಕ್ಷಿ ಪತ್ರಿಕೆಯವರಿಗೆ ನಾವು ಅಭಿನಂದನೆಯನ್ನು ಸಲ್ಲಿಸುತ್ತೇವೆ. ಮುಂದೆ ಇಂತಹ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸುತ್ತೇವೆಂದು ತಾಲ್ಲೂಕಾ ಬಿಜೆಪಿ ಅಧ್ಯಕ್ಷ ಎಸ್.ಬಿ.ದಾನಪ್ಪಗೌಡರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಅಪ್ರಾಪ್ತೆಯ ಮೇಲೆ ಅತ್ಯಾಚಾರ ಆರೋಪ ಸಾಬೀತು; ಆರೋಪಿ ಲಕ್ಷ್ಮಣ ದೋನಿ 20 ವರ್ಷ ಜೈಲಿಗೆ!

0

ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಲಕ್ಷ್ಮಣ ಚಂದ್ರಪ್ಪ ದೋನಿ ಎಂಬ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.30 ಸಾವಿರಗಳ ದಂಡವನ್ನು ವಿಧಿಸಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರಾದ(ಪೋಕ್ಸೋ) ಶಂಕರ ಎಂ. ಜಾಲವಾದಿ ಅವರು ತೀರ್ಪು ಪ್ರಕಟಿಸಿದ್ದಾರೆ.


2020 ರ ಸೆಪ್ಟೆಂಬರ್ 11 ರಂದು ಲಕ್ಷö್ಮಣ ಚಂದ್ರಪ್ಪ ದೋನಿ ಎಂಬ ಆರೋಪಿಯು ಕಿಡದಾಳ ಗ್ರಾಮದಲ್ಲಿ ವಾಸಿಸುವ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪವು ತನಿಖೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಕೊಪ್ಪಳ ಮಹಿಳಾ ಪೊಲೀಸ್ ಠಾಣೆ ಪಿಐ ಮೌನೇಶ್ವರ ಮಾಲಿಪಾಟೀಲ್ ಅವರು ಆರೋಪಿಯ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.


ಪ್ರಕರಣದಲ್ಲಿ ಆರೋಪಿಯ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.30 ಸಾವಿರಗಳ ದಂಡವನ್ನು ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ ರೂ.25000 ಗಳನ್ನು ಬಾಧಿತಳಿಗೆ ಪರಿಹಾರದ ರೂಪದಲ್ಲಿ ವಿತರಿಸುವಂತೆ ನ್ಯಾಯಾಧೀಶರು ತೀರ್ಪಿನಲ್ಲಿ ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

ನಗರಸಭೆಯ ಅಸಹಕಾರದ ವಿರುದ್ಧ ಅನು ಅಕ್ಕನ ಬಳಗದಿಂದ ವಿನೂತನ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ಕೆಚ್ಚೆದೆಯ ಕನ್ನಡಿಗರು ಎನ್ನುವ ಸಂಘಟನೆ ಮೂಲಕ ರಾಜ್ಯಾದ್ಯಂತ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಅನು ಅಕ್ಕನ ಬಳಗಕ್ಕೆ ಇಲ್ಲಿನ ನಗರಸಭೆ ಅಸಹಕಾರ ತೋರಿದ್ದು, ಬಳಗವು ವಿನೂತನವಾಗಿ ಪ್ರತಿಭಟಿಸಿದ ಘಟನೆ ಮಂಗಳವಾರ ನಗರಸಭೆ ಎದುರು ನಡೆದಿದೆ.

ನಗರದ ಗವಿಮಠದ ಹಿಂದಿರುವ ಸ್ಮಶಾನವನ್ನು ಸ್ವಚ್ಛಗೊಳಿಸುವ ಮೂಲಕ ಜನತೆಯ ಮೆಚ್ಚುಗೆ ಗಳಿಸಿರುವ ಅನು ಅಕ್ಕ ಮತ್ತು ಬಳಗದವರು ಕಸವನ್ನು ವಿಲೇವಾರಿ ಮಾಡಲು ಟ್ರ್ಯಾಕ್ಟರ್ ಕಳಿಸಿಕೊಡುವಂತೆ ನಗರಸಭೆಗೆ ಕಳೆದ ಮೂರ್ನಾಲ್ಕು ದಿನಗಳಿಂದಲೂ ಮನವಿ ಮಾಡುತ್ತಲೇ ಇದ್ದಾರೆ. ದಪ್ಪ ಚರ್ಮದ ಕೊಪ್ಪಳ ನಗರಸಭೆಯ ಅಧಿಕಾರಿಗಳು ಮೊದಲೆಲ್ಲ ಕ್ಯಾರೆ ಎಂದಿಲ್ಲ. ಮಂಗಳವಾರ ಟ್ರ್ಯಾಕ್ಟರ್ ಕಳಿಸಿಕೊಡಲು ಆಗಲ್ಲ ಎಂದು ನಿಷ್ಕಾಳಜಿ ತೋರಿದ್ದಾರೆ.

ಕೂಡಲೇ ಅನು ಅಕ್ಕನ ನಳಗದ ಸದಸ್ಯರು ಬಾಡಿಗೆ ಟ್ರ್ಯಾಕ್ಟರ್‌ನಲ್ಲಿ ಸ್ಮಶಾನದ ಕಸ ತುಂಬಿ ನಗರಸಭೆ ಎದುರು ವಿಲೇವಾರಿ ಮಾಡಲು ಸಿದ್ಧಗೊಂಡಿದ್ದಾರೆ. ಇಲ್ಲಾದರೂ ನಗರಸಭೆಯವರು ಟ್ರ್ಯಾಕ್ಟರ್‌ ತೋರಿಸಿದರೆ ಕಸವನ್ನು ನಗರಸಭೆಯ ವಾಹನಕ್ಕೆ ತುಂಬುವುದಾಗಿ ಅನು ವಿಜಯಸಾಕ್ಷಿಗೆ ತಿಳಿಸಿದರು.

ಟ್ರ್ಯಾಕ್ಸ್ ಡಿಕ್ಕಿ; ವೃದ್ದೆ ಸಾವು

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಹುಬ್ಬಳ್ಳಿ ಕಡೆಯಿಂದ ಬರುತ್ತಿದ್ದ ಟ್ರ್ಯಾಕ್ಸ್ ವಾಹನ ನಡೆದುಕೊಂಡು ಹೋಗುತ್ತಿದ್ದ ವೃದ್ದೆಗೆ ಡಿಕ್ಕಿ ಹೊಡೆದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಆರೇಕುರಹಟ್ಟಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಆರೇಕುರಹಟ್ಟಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ವೃದ್ದೆ ದೇವಕ್ಕ ಗೌಡಪ್ಪ ಕರಿ (70) ನಡೆದುಕೊಂಡು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ತೀವ್ರ ರಕ್ತಸ್ರಾವವಾಗಿ ಚಿಕಿತ್ಸೆಗೆಂದು ಹುಬ್ಬಳ್ಳಿಯ ಕಿಮ್ಸಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ದೇವಕ್ಕ ಮೃತಪಟ್ಟಿದ್ದಾಳೆ.

ಘಟನಾ ಸ್ಥಳಕ್ಕೆ ಪಿಎಸ್‍ಐ ಕಲ್ಮೇಶ ಬೆನ್ನೂರ ಹಾಗೂ ಸಿಪಿಐ ಚಂದ್ರಶೇಖರ ಮಠಪತಿ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಮೃತ ದೇವಕ್ಕಳ ಮಗ ಶಿವಾನಂದ ಕರಿ ದೂರು ನೀಡಿದ್ದು, ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇವತ್ತೇ ಉಸ್ತುವಾರಿ ಚೇಂಜ್ ಮಾಡಿ ಹೋಗ್ತಿರಿರ್ತಿನಿ; ಶಾಸಕ ಕಳಕಪ್ಪ ಬಂಡಿಗೆ ಕೌರವ ಡಿಚ್ಚಿ!

ವಿಜಯಸಾಕ್ಷಿ ಸುದ್ದಿ, ಗದಗ:

ಸೋಮವಾರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಗರಂ ಆದ ಪ್ರಸಂಗ ನಡೆಯಿತು.

ರೋಣ ಶಾಸಕ ಕಳಕಪ್ಪ ಬಂಡಿ ವಿರುದ್ಧ ಸಚಿವ ಬಿ.ಸಿ.ಪಾಟೀಲ ಹರಿಯಾಯ್ದರು. ಮರಳು ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಬಂಡಿ ಮತ್ತು ಉಸ್ತುವಾರಿ ಸಚಿವ ಬಿಸಿಪಾ ಮಧ್ಯೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಾಗ್ಯುದ್ಧ ನಡೆಯಿತು.

ಅಕ್ರಮ ಮರಳು ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರಿಗೆ ಬಿ.ಸಿ‌.ಪಾಟೀಲ್ ಸೂಚಿಸಿದರು.

ಸಚಿವರ ಸೂಚನೆಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ‌ ಕಳಕಪ್ಪ ಬಂಡಿ, ‘ಮರಳು ಬಂದ್ ಮಾಡಿದರೆ ಮನೆ ಕಟ್ಟುವುದು ಹೇಗೆ?. ಬೇರೆ ಕಡೆಯಿಂದ ಬಂದು ಏನೇನೋ ಆದೇಶ ಕೊಟ್ಟು ಹೋಗ್ತೀರಿ. ಆದರೆ, ಇಲ್ಲಿಯ ಜನರಿಗೆ ಉತ್ತರ ಕೊಡಬೇಕಾದವರು ನಾವು’ ಎಂದು ತರಾಟೆಗೆ ತೆಗೆದುಕೊಂಡರು.

ಸಚಿವ, ಶಾಸಕರ ಮಧ್ಯೆ ವಾಕ್ಸಮರ ನಡೆಯುತ್ತಿದ್ದರೂ ಲೋಕೋಪಯೊಗಿ ಸಚಿವ ಸಿ.ಸಿ.ಪಾಟೀಲ ಮೂಕ ಪ್ರೇಕ್ಷಕಂತೆ ಕೂತಿದ್ದರು. ಬೇರೆ ವಿಷಯ ಚರ್ಚೆ ಮಾಡಿ ಎಂದರೂ ಬಂಡಿ ಪಟ್ಟು ಬಿಡದೆ ಗಟ್ಟಿಯಾಗಿ ನಿಲ್ಲುವ ಮೂಲಕ ಸ್ವ ಪಕ್ಷದ ಸಚಿವರಿಗೆ ಮುಜುಗರವನ್ನುಂಟು ಮಾಡಿದರು.

ಶಾಸಕ ಕಳಕಪ್ಪ ಬಂಡಿ ನಡೆಗೆ ಕೆಂಡಾಮಂಡಲರಾದ ಸಚಿವ ಬಿ.ಸಿ.ಪಾಟೀಲ ‘ನಾನೇನು ಗದಗ ಜಿಲ್ಲಾ ಉಸ್ತುವಾರಿ ಮಾಡಿ ಎಂದು ಕೇಳಿಕೊಂಡು ಬಂದಿಲ್ಲ. ಚೇಂಜ್ ಮಾಡ್ಸಿ ಹೋಗ್ತಿರ್ತಿನಿ. ಮರಳು ಸಮಸ್ಯೆಯಾಗಿದ್ದರೆ ಮುಖ್ಯಮಂತ್ರಿಗೆ ಹೇಳಿ. ನನಗೆ ವಹಿಸಿದ ಕೆಲಸವನ್ನು ನಾನು ಮಾಡೇ ಮಾಡ್ತೀನಿ’ ಎಂದು ತಿರುಗೇಟು ನೀಡಿದರು.

ಒಟ್ಟಿನಲ್ಲಿ ಗದಗ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ವಪಕ್ಷದ ಸಚಿವರನ್ನೇ ಮುಜುಗರವನ್ನಂಟು ಮಾಡಿದ ಘಟನೆ ನಡಯಿತು.

ಸಿಡಿಲಿನ ಹೊಡೆತಕ್ಕೆ ಕುರಿಗಾಹಿ ಬಲಿ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ವಿಜಯಸಾಕ್ಷಿ ಸುದ್ದಿ, ಕುಂದಗೋಳ:

ಸಿಡಿಲು ಬಡಿದು ಕುರಿಗಾಹಿಯೊಬ್ಬ ಮೃತಪಟ್ಟ
ಘಟನೆ ತಾಲೂಕಿನ ಹಿರೇಹರಕುಣಿ ಗ್ರಾಮದ ಹೊರವಲಯದಲ್ಲಿ ನಿನ್ನೆ ಸಂಜೆ ನಡೆದಿದೆ.

ಮೃತ ಕುರಿಗಾಹಿ ದೇವೆಂದ್ರ ಮುದುಕಪ್ಪ ಮಚಿನಹಳ್ಳಿ ವಯಸ್ಸು (19) ಎಂದು ತಿಳಿದು ಬಂದಿದ್ದು. ಎಂದಿನಂತೆ ಕುರಿ ಕಾಯಲು ಹೋದಾಗ ಸಿಡಿಲು ಬಡಿದ ಪರಿಣಾಮ ಕುರಿಗಾಹಿ ಸಾವನ್ನಪ್ಪಿದ್ದಾನೆ.

ಕುರಿಗಾಹಿ ಸಾವನ್ನಪ್ಪಿದ್ದನ್ನು ತಿಳಿದ ಕುಟುಂಬಸ್ಥರು ಶೋಕ ಸಾಗರದಲ್ಲಿ ಮುಳಗಿದ್ದು ಆಕ್ರಂದನ ಕರುಳು ಕಿತ್ತು ಬರುವಂತಿದೆ.

ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ತಹಶೀಲ್ದಾರ ಹಾಗೂ ಗುಡಗೇರಿ ಗ್ರಾಮೀಣ ಪೊಲೀಸ್ ಅಧಿಕಾರಿಗಳು ಭೇಟಿ ಮಾಡಿದ್ದಾರೆ.

ವರದಿ. ಡಾ. ಅಬ್ದುಲ್ ರಜಾಕ್

ನವಲಗುಂದ ಪುರಸಭೆ ಅಧ್ಯಕ್ಷರು ಯಾರಾಗಲಿದ್ದಾರೆ?; ಕಾಂಗ್ರೆಸ್‌ನ ಎ, ಬಿ ಟೀಮ್‍ನಲ್ಲಿ ಭಾರಿ ಪೈಪೋಟಿ

ವಿಜಯಸಾಕ್ಷಿ ಸುದ್ದಿ, ನವಲಗುಂದ:

ತೀವ್ರ ಕುತೂಹಲ ಮೂಡಿಸಿದ್ದ ಸ್ಥಳೀಯ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ. ಅಧ್ಯಕ್ಷ ಮಂಜುನಾಥ ಜಾಧವ ಅವರ ರಾಜೀನಾಮೆ ಅಂಗಿಕಾರವಾಗಿದ್ದು, ಈಗ ಹೊಸದಾಗಿ ಅಧ್ಯಕ್ಷರು ಯಾರಾಗಬೇಕೆಂದು ಕಾಂಗ್ರೆಸ್‌ನ ಎ ಮತ್ತು ಬಿ ಟೀಮ್‍ಗಳಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದೆ.

ಒಟ್ಟು 23 ಸ್ಥಾನಗಳಲ್ಲಿ ಈಗ ಕಾಂಗ್ರೆಸ್ 17, ಬಿಜೆಪಿಯ 6 ಸದಸ್ಯರಿದ್ದಾರೆ.  ಈ ಹಿಂದೆ ಚುನಾವಣೆ ನಡೆದ ಸಂದರ್ಭದಲ್ಲಿ ಜೆ.ಡಿ.ಎಸ್.9, ಕಾಂಗ್ರೆಸ್ 7, ಬಿಜೆಪಿ 6 ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್‍ನ 9 ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಕಾರಣ ಈಗ ಕಾಂಗ್ರೆಸ್ ಬಲ 17 ಸ್ಥಾನಕ್ಕೇರಿದ್ದು ನಿಚ್ಚಳ ಬಹುಮತ ಹೊಂದಿದೆ.

ಈ ಹಿಂದೆ ಮಾಡಿಕೊಂಡ ಒಳ ಒಪ್ಪಂದದ ಪ್ರಕಾರ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 15 ತಿಂಗಳು ಅಧಿಕಾರ ನಡೆಸಬೇಕಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು ಬಿಜೆಪಿಗೆ ಕಾಂಗ್ರೆಸ್ ಕೈಕೊಟ್ಟಿದೆ.

ಇದರಿಂದಾಗಿ ಈಗ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಸದ್ಯದಲ್ಲಿಯೇ ನಡೆಯಲಿದ್ದು ಅಧ್ಯಕ್ಷ ಗಾದೆಗೆ ಕಾಂಗ್ರೆಸ್ ಎ ಟೀಮ್ (ಮೂಲ ಕಾಂಗ್ರೆಸ್ಸಿಗರು) ಮತ್ತು ಕಾಂಗ್ರೆಸ್ ಬಿ ಟೀಮ್ (ಜೆಡಿಎಸ್ ನಿಂದ ಬಂದವರು) ನಡುವೆ ಭಾರಿ ಪೈಪೋಟಿ ಎದುರಾಗಿದೆ. ಎ ಟೀಮ್‍ನಲ್ಲಿ ಕುರುಬ ಸಮಾಜದ ಶಿವಾನಂದ ತಡಸಿ ಹಾಗೂ ಬಿ.ಟೀಮ್‍ನಲ್ಲಿ ಒಕ್ಕಲಿಗ ಸಮಾಜದ ಪ್ರಕಾಶ ಶಿಗ್ಲಿ, ಅಪ್ಪಣ್ಣ ಹಳ್ಳದ ಹಾಗೂ ಮರಾಠಾ ಸಮಾಜದ ಜೀವನ ಪವಾರ ನಡುವೆ  ಭಾರಿ ಪೈಪೋಟಿ ಎದುರಾಗಿದೆ. ಈಗಾಗಲೇ ಮರಾಠಾ ಸಮಾಜದವರಾದ ಮಂಜುನಾಥ ಜಾಧವ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದಾರೆ.

ಸದ್ಯಕ್ಕಂತು ಎರಡು ಬಣದವರು ತಮ್ಮ ತಮ್ಮ ಬೆಂಬಲಿತ ಸದಸ್ಯರೊಂದಿಗೆ ನಾಯಕರ ಮನೆಗಳಿಗೆ ಅಲೆದಾಡುತ್ತಿದ್ದಾರೆ. ಅಂತಿಮವಾಗಿ ಮಾಜಿ ಸಚಿವ ಕೆ.ಎನ್.ಗಡ್ಡಿ, ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಒಗ್ಗೂಡಿಕೊಂಡು ಒಮ್ಮತದ ನಿರ್ಣಯ ತೆಗೆದುಕೊಂಡರೆ ಕಾಂಗ್ರೆಸ್ ನಿಚ್ಚಳ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ.

ಒಂದು ವೇಳೆ ಕಾಂಗ್ರೆಸ್ ನಾಯಕರಲ್ಲಿ ನಾನು ಎ ಟೀಮ್, ನೀನು ಬಿ ಟೀಮ್ ಎಂದು ಕಚ್ಚಾಟ ಮಾಡಿಕೊಂಡರೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಲಿದೆ. ಇವರಿಬ್ಬರ ನಡೆಯನ್ನು ಕಾದು ನೋಡುತ್ತಿರುವ ಬಿಜೆಪಿ ಹೊಂಚು ಹಾಕುವ ಪ್ರಯತ್ನದಲ್ಲಿದೆ. ಹೇಗಾದರೂ ಮಾಡಿ ಜೆಡಿಎಸ್‍ನಿಂದ ಬಂದ ಸದಸ್ಯರನ್ನು ಹೊರಗಿಟ್ಟು ಮೂಲ ಕಾಂಗ್ರೆಸ್ ಸದಸ್ಯರ ಜೊತೆ ಇನ್ನೊಮ್ಮೆ ಹೊಂದಾಣಿಕೆ ಮಾಡಿಕೊಂಡು ಆಡಳಿತ ಮಾಡುವುದಕ್ಕೂ ಯೋಜನೆ ರೂಪಿಸಿದಂತೆ ಕಾಣುತ್ತಿದೆ ಬಿಜೆಪಿ.

ಒಟ್ಟಾರೆ ಅಧ್ಯಕ್ಷ ಗಾದೆಯ ಕೀಲಿ ಕೈ ಮಾತ್ರ ಮೂಲ ಕಾಂಗ್ರೆಸ್ಸಿರ ಬಳಿ ಇದ್ದು ಯಾರು ಅಧ್ಯಕ್ಷರಾಗಲಿದ್ದಾರೆಂಬುದನ್ನು ಕಾದು ನೋಡಬೇಕಾಗಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಅಧ್ಯಕ್ಷರಾಗಲು ಮ್ಯಾಜಿಕ್ ನಂ.13 ಪಡೆಯಬೇಕಾಗಿದೆ.

ಹಾಡುಹಗಲೇ ಜನರ ಮಧ್ಯೆಯೇ 10 ಲಕ್ಷ ರೂ. ಎಗರಿಸಿದ ಖದೀಮ; ಕಳ್ಳತನದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಪೊಲೀಸರ ಮುಂದೆ ಕಣ್ಣೀರಿಟ್ಟ ರಾಮನಗೌಡ್ರ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ:

ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್‌ನಿಂದ ೧೦ ಲಕ್ಷ ರೂ.ಗಳ ಹಣವನ್ನು ತೆಗೆದುಕೊಂಡು(ಡ್ರಾ) ಬೈಕ್ ಸೈಡ್ ಬ್ಯಾಗ್‌ನಲ್ಲಿರಿಸಿಕೊಂಡು ಹೋಗುವಾಗ ಕಳ್ಳನೋರ್ವ ಹಣ ದೋಚಿಕೊಂಡು ಹೋಗಿರುವ ಘಟನೆ ಶುಕ್ರವಾರ ನಡೆದಿದೆ.

ಪಟ್ಟಣದ ರಾಜೇಂದ್ರ ಕಾಟನ್ ಇಂಡಸ್ಟ್ರೀಜ್‌ನಲ್ಲಿ ಹಲವಾರು ವರ್ಷಗಳಿಂದ ಕಾರ್ಖೂನನಾಗಿ ಸೇವೆ ಸಲ್ಲಿಸುತ್ತಿರುವ ರಾಮನಗೌಡ್ರ ಫಕ್ಕೀರಗೌಡ ಪಾಟೀಲ ಎನ್ನುವವರು ಹಣ ಕಳೆದುಕೊಂಡಿದ್ದಾರೆ.

ರಾಮನಗೌಡ್ರ ರಾಜೇಂದ್ರ ಕಾಟನ್ ಇಂಡಸ್ಟ್ರೀಜ್ ಅಕೌಂಟ್‌ನಿಂದ ಹಣ ಡ್ರಾ ಮಾಡಿ ಚೀಲದಲ್ಲಿ ಹಾಕಿಕೊಂಡು ಬೈಕ್ ಸೈಡ್ ಬ್ಯಾಗ್‌ನಲ್ಲಿರಿಸಿಕೊಂಡು ಹೊರಟಿದ್ದಾರೆ. ಹೊಂಚು ಹಾಕಿಯೇ ಕುಳಿತಿದ್ದ ಖದೀಮರು ಬೈಕ್ ಹಿಂಬಾಲಿಸಿದ್ದಾರೆ. ಈ ವೇಳೆ ಎದುರಿಗೆ ವಾಹನವೊಂದು ಬಂದಾಗ ರಾಮನಗೌಡ್ರ ಬೈಕ್‌ನ್ನು ನಿಧಾನ ಮಾಡಿದ್ದು, ಆಗ ಕಳ್ಳನೋರ್ವ ಕ್ಷಣ ಮಾತ್ರದಲ್ಲಿ ಹಣ ಲಪಟಾಯಿಸಿ ಪರಾರಿಯಾಗಿದ್ದಾನೆ. ಬ್ಯಾಂಕಿನಿಂದ ಕೆಲವೇ ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ.

ಎಪಿಎಂಸಿ ಎದುರುಗಡೆಯ ರಸ್ತೆಯಲ್ಲಿಯೇ ಈ ಘಟನೆ ನಡೆದಿರುವುದರಿಂದ ವ್ಯಾಪಾರಸ್ಥರು ಭಯಭೀತರಾಗಿದ್ದಾರೆ. ಹಣ ಕಳೆದುಕೊಂಡ ವ್ಯಕ್ತಿ ರಾಮನಗೌಡ್ರ ಅವರು ಹೇಳಿಕೆ ನೀಡಿ, ಪ್ರತಿ ದಿನದಂತೆ ಬ್ಯಾಂಕ್‌ಗೆ ಹಣ ಪಾವತಿಸುವುದು, ಬ್ಯಾಂಕ್‌ನಿಂದ ಹಣ ತೆಗೆದುಕೊಂಡು ಹೋಗುವುದು ಮಾಡುತ್ತೇನೆ. ಎಂದಿನಂತೆ ಇವತ್ತೂ ಹಣವನ್ನು ಡ್ರಾ ಮಾಡಿ ವಾಹನದ ಬ್ಯಾಗ್‌ನಲ್ಲಿ ಇಟ್ಟುಕೊಂಡು ಹೋಗುತ್ತಿರುವಾಗ ನನಗೆ ತಿಳಿಯದಂತೆ ಬ್ಯಾಗ್‌ನಿಂದ ಹಣ ಎಗರಿಸಿದ್ದಾರೆ. ಇದರಿಂದ ನನಗೆ ಏನು ಮಾಡಬೇಕೆಂದು ದಿಕ್ಕು ತೋಚದಂತಾಗಿದೆ ಎಂದು ಹಣ ಕಳೆದುಕೊಂಡ ರಾಮನಗೌಡ್ರ ಪೊಲೀಸರ ಮುಂದೆ ಕಣ್ಣೀರಿಟ್ಟರು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಾಹಿತಿ ಪಡೆದು ಸುತ್ತಮುತ್ತಲಿನ ಸಿಸಿ ಟಿವ್ಹಿಯಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಪರಿಶೀಲಿಸಿದರು. ಸಿಸಿ ಟಿವಿಯಲ್ಲಿ ಬೈಕ್‌ನಿಂದ ಓರ್ವ ಹಣ ಎಗರಿಸುತ್ತಿರುವ ದೃಶ್ಯಗಳು ಸೆರೆಯಾಗಿವೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿ ಟಿವಿಯಲ್ಲಿನ ದೃಶ್ಯ ಅಸ್ಪಷ್ಟವಾಗಿದ್ದು ಬಲ್ಲ ಮೂಲಗಳಿಂದ ಕಳ್ಳರ ಮಾಹಿತಿ ಕಲೆ ಹಾಕುತ್ತಿದ್ದೇವೆ. ಆದಷ್ಟು ಶೀಘ್ರವೇ ಖದೀಮರನ್ನು ಸೆರೆಹಿಡಿಯಲಾಗುವುದು ಎಂದು ತಿಳಿಸಿದರು.

ಜವಳಗಲ್ಲಿ ಜಗಳದಲ್ಲಿ ಏಕಾಂಗಿಯಾದರೇ ಅನಿಲ್ ಮೆಣಸಿನಕಾಯಿ!; ಗಪ್‌ಚುಪ್ ಆದ ಬಿಜೆಪಿ ಸದಸ್ಯರು

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ಅವಳಿ ನಗರದ ಜವಳಗಲ್ಲಿ ಜಗಳದಲ್ಲಿ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಏಕಾಂಗಿಯಾಗಿದ್ದಾರೆ. ಜವಳಗಲ್ಲಿಯ ರಾಜಕಾಲುವೆ ಮೇಲೆ ಅನಧಿಕೃತವಾಗಿ ಚಿಕನ್, ಮಟನ್, ಮೀನು ಸೇರಿದಂತೆ ಮಾಂಸದ ಅಂಗಡಿಗಳನ್ನು ತೆರವುಗೊಳಿಸಬೇಕೆಂಬ ಅನಿಲ್ ಮೆಣಸಿನಕಾಯಿ ಹೇಳಿಕೆ ಬೆನ್ನಲ್ಲೆ, ಕೆಲ ಮುಖಂಡರು, ನಗರಸಭೆಯ ಕಾಂಗ್ರೆಸ್ ಸದಸ್ಯರು ಮುಗಿಬಿದ್ದಿದ್ದು, ಯಾವೊಬ್ಬ ಬಿಜೆಪಿ ನಾಯಕರು ಅನಿಲ್ ನೆರವಿಗೆ ಬಾರದಿರುವುದು ಚರ್ಚೆಗೆ ಕಾರಣವಾಗಿದೆ.

ಏ.೨ರಂದು ಸುದ್ದಿಗೋಷ್ಠಿ ನಡೆಸಿ ಜವಳಗಲ್ಲಿ ತೆರವುಗೊಳಿಸುವಂತೆ ಹೇಳಿಕೆ ನೀಡಿದ ಬೆನ್ನಲ್ಲೇ, ವಾಲ್ಮೀಕಿ ಸಮಾಜದ ಮುಖಂಡ ಬಸವರಾಜ್ ಬೆಳದಡಿ, ನಗರಸಭೆಯ ಕಾಂಗ್ರೆಸ್ ಪಕ್ಷದ ಸದಸ್ಯರು ಅನಿಲ್ ಮೆಣಸಿಕಾಯಿ ವಿರುದ್ಧ ಸರಣಿಯಾಗಿ ಪ್ರತಿಭಟನೆ, ಪತ್ರಿಕಾಗೋಷ್ಟಿ ನಡೆಸಿ ಏಕವಚನದಲ್ಲಿ ಪದಪ್ರಯೋಗ ಮಾಡಿದರೂ ನಗರಸಭೆ ಬಿಜೆಪಿ ಅಧ್ಯಕ್ಷರು, ಸದಸ್ಯರು, ಪಕ್ಷದ ಮುಖಂಡರು ತುಟಿ ಬಿಚ್ಚಿ ಮಾತನಾಡುತ್ತಿಲ್ಲ. ಅಲ್ಲದೆ, ನೆರವಿಗೆ ಬರುತ್ತಿಲ್ಲ, ಅನಿಲ್ ಮೆಣಸಿನಕಾಯಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳದಿರುವುದು ಬಿಜೆಪಿ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಸುಮಾರು ಮೂರು ವರ್ಷಗಳ ಬಳಿಕ ಕಳೆದ ಡಿಸೆಂಬರ್‌ನಲ್ಲಿ ನಡೆದ ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂದು ಟೊಂಕಕಟ್ಟಿ ನಿಂತಿದ್ದ ಅನಿಲ್ ಮೆಣಸಿನಕಾಯಿ, ಹದಿನಾಲ್ಕು ವರ್ಷಗಳ ಬಳಿಕ ಕಾಂಗ್ರೆಸ್ ಭದ್ರಕೋಟೆಯನ್ನು ಬೇಧಿಸಿ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಸದ್ಯ ಅನಿಲ್ ಮೆಣಸಿನಕಾಯಿ ಅವರ ಹೇಳಿಕೆಯನ್ನು ಕಮಲ ಪಾಳಯದಲ್ಲಿ ಸಮರ್ಥಿಸಿಕೊಳ್ಳದೆ ಸುಮ್ಮನಿರುವುದು ವಿರೋಧ ಪಕ್ಷಕ್ಕೆ ವರವಾಗಿ ಪರಿಣಮಿಸಿದೆ.

ಅನಿಲ್ ಮೆಣಸಿನಕಾಯಿ ಮತ್ತು ನಗರಸಭೆ ಕಾಂಗ್ರೆಸ್ ಸದಸ್ಯರ ವಿರುದ್ಧ ವಾಗ್ಯುದ್ಧ ಶುರುವಾಗಿದೆ. ಇಷ್ಟೆಲ್ಲಾ ಕಣ್ಮುಂದೆಯೇ ನಡೆಯುತ್ತಿದ್ದರೂ ಶುಕ್ರವಾರ ನಗರಸಭೆ ಅಧ್ಯಕ್ಷರ ಪತಿ ಮಹೇಶ್ ದಾಸರ ದೇವರ ಹೆಸರಿನಲ್ಲಿ ಕೊಟ್ಟ ಪಾರ್ಟಿಯಲ್ಲಿ ಬಂದಿದ್ದ ಕೆಲ ಕಾಂಗ್ರೆಸ್‌ನ ಸದಸ್ಯರ ಜೊತೆಗೆ ಬಿಜೆಪಿಯ ಬಹುತೇಕ ಸದಸ್ಯರು ಇದ್ದದ್ದು ಅವಳಿ ನಗರದ ಜನರ ಹುಬ್ಬೇರುವಂತೆ ಮಾಡಿದೆ.

ನಗರಸಭೆ ಚುನಾವಣೆ ಸಂದರ್ಭದಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡು ಅವಳಿ ನಗರದ ೩೫ ವಾರ್ಡ್‌ಗಳಲ್ಲೂ ಅನಿಲ್ ಮೆಣಸಿನಕಾಯಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಂಡಿದ್ದರು. ಅಲ್ಲದೆ, ಪ್ರಚಾರದ ವೇಳೆ ಗೆದ್ದೇ ಗೆಲ್ಲುತ್ತೇವೆಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಅದರಂತೆ, ೧೪ ವರ್ಷಗಳ ಬಳಿಕ ನಗರಸಭೆ ಗದ್ದುಗೆ ಹಿಡಿದು ಕಾಂಗ್ರೆಸ್‌ನ ಭದ್ರಕೋಟೆಯಲ್ಲಿಯೇ ಕಾಂಗ್ರೆಸ್‌ಗೆ ಮಣ್ಣು ಮುಕ್ಕಿಸಿದ್ದು, ಈಗ ಸ್ವಪಕ್ಷದ ಸದಸ್ಯರೇ ಅನಿಲ್ ಬೆನ್ನಿಗೆ ನಿಲ್ಲದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.

ನಗರಸಭೆ ಚುನಾವಣೆ ಸಂದರ್ಭದಲ್ಲಿ ಮೊದಲು ಟಿಕೆಟ್‌ಗಾಗಿ, ನಂತರ ಗೆಲುವಿಗಾಗಿ ದುಂಬಾಲು ಬಿದ್ದಿದ್ದ ಕೆಲ ನಗರಸಭೆ ಸದಸ್ಯರೇ ಇದೀಗ ಅನಿಲ್ ಮೆಣಸಿನಕಾಯಿ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲ. ಕಾರ್ಯವಾಸಿ ಕತ್ತೆ ಕಾಲು ಹಿಡಿಯಬೇಕೆಂಬ ಗಾದೆ ಮಾತಿನಂತೆ ಬಿಜೆಪಿಯ ಸದಸ್ಯರು ಚುನಾವಣೆಯಲ್ಲಿ ಗೆಲ್ಲುವವರೆಗೆ ಅನಿಲ್ ದುಂಬಾಲು ಬಿದ್ದು, ಇದೀಗ ಕಡೆಗಣಿಸುತ್ತಿದ್ದಾರೆ ಎಂಬ ಮಾತಿದೆ. ಹೀಗಾಗಿ ಚುನಾವಣೆಯಲ್ಲಿ ಅತ್ಯವಶ್ಯಕವಾಗಿ ಬೇಕಿರುವ ಅನಿಲ್ ಮೆಣಸಿಕಾಯಿ ಇನ್ನುಳಿದ ಸಮಯದಲ್ಲಿ ಬೇಡವೆಂಬ ಮನಸ್ಥಿತಿ ಬಿಜೆಪಿ ನಾಯಕರದ್ದೇ ಎಂಬ ಮಾತುಗಳು ಅವಳಿ ನಗರದಲ್ಲಿ ಕೇಳಿ ಬರುತ್ತಿವೆ.

ಗದಗ ಸಬ್ ಜೈಲಿನಲ್ಲಿ ವಿಚಾರಣಾಧೀನ ಖೈದಿ ಆತ್ಮಹತ್ಯೆ

ಜಾಮೀನು ಸಿಕ್ಕ ಬೆನ್ನಲ್ಲೇ ಗದಗ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿ ಆತ್ಮಹತ್ಯೆ; ಕುಟುಂಬಸ್ಥರ ಆಕ್ರಂದನ

ವಿಜಯಸಾಕ್ಷಿ ಸುದ್ದಿ, ಗದಗ:

ಪೋಕ್ಸೋ ಕಾಯ್ದೆಯಡಿ ಗದಗ ಜಿಲ್ಲಾ ಕಾರಾಗೃಹದ ಪಾಲಾಗಿದ್ದ ವಿಚಾರಣಾಧೀನ ಖೈದಿಯೊಬ್ಬ ಕಟ್ಟಡದ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಗದಗ ತಾಲೂಕಿನ ಅಡವಿ ಸೋಮಾಪುರ ತಾಂಡಾದ ನಿವಾಸಿ ರಾಜು ಪಾಂಡಪ್ಪ ಲಮಾಣಿ (19) ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದಾನೆ. ಶುಕ್ರವಾರ ಮಧ್ಯರಾತ್ರಿ 1.30ರ ಸುಮಾರಿಗೆ ಕಾರಾಗೃಹದಲ್ಲಿರುವ ಇನ್ನಿತರ ಖೈದಿಗಳ ಟವೆಲ್ ತೆಗೆದುಕೊಂಡು ಮೊದಲ ಬಾರಿಗೆ ಪ್ರಯತ್ನಿಸುತ್ತಾನೆ. ಸಾಧ್ಯವಾಗದಿದ್ದಾಗ ಪುನಃ ಎರಡನೇ ಬಾರಿಗೆ ಪ್ರಯತ್ನಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಕಾರಾಗೃಹದ ಸಿಸಿ ಕ್ಯಾಮೆರಾದಲ್ಲಿ ರಾಜು ಆತ್ಮಹತ್ಯೆಯ ಯತ್ನದ‌ ವಿಡಿಯೋ ದಾಖಲಾಗಿವೆ.

ಹುಡುಗಿಯ ಮನೆಯವರು ಗುರುವಾರ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ, ಜಾಮೀನು ಮೇಲೆ ಬಿಡುಗಡೆಯಾದರೂ ನಿನ್ನನ್ನು ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಆತ್ಮಹತ್ಯೆಗೆ ಜೈಲು ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿದ ಮೃತ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಅಡವಿ ಸೋಮಾಪುರ ಗ್ರಾಮದ ರಾಜು ಪಾಂಡಪ್ಪ ಲಮಾಣಿ ಅದೇ ಊರಿನ‌ ಹುಡುಗಿಯನ್ನು ಪ್ರೀತಿಸಿದ್ದ. ಹುಡುಗಿ‌ ಕಾಣೆಯಾಗಿದ್ದಾಳೆಂದು ಗ್ರಾಮೀಣ‌ ಪೊಲೀಸ್ ಠಾಣೆ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ದಾಖಲಾದ 8 ದಿನಗಳ ಬಳಿಕ ಸಿಕ್ಕ ಹುಡುಗಿಯನ್ನು ಗ್ರಾಮೀಣ ಪೊಲೀಸ್ ಠಾಣೆಗೆ ಕರೆದುಕೊಂಡು 161 ಹೇಳಿಕೆಯನ್ನು ದಾಖಲಿಸಿದ್ದಾರೆ.

ಈ ಹೇಳಿಕೆಯಲ್ಲಿ
‘ರಾಜು ನಾನು ಬೆಂಗಳೂರು, ಗೊವಾ ಹೋಗಿದ್ವಿ‌. ಹೋದಲ್ಲೆಲ್ಲಾ ಜೊತೆಗಿದ್ವಿ’ ಎಂದು ಹೇಳಿದ್ದಾಳೆ.
ನ್ಯಾಯಾಧೀಶರ ಮುಂದೆ 164ರಡಿ ಹೇಳಿಕೆ ದಾಖಲಿಸಿದ್ದು, ‘ನಾನು ಗೆಳತಿಯರೊಂದಿಗೆ ಹೋಗಿದ್ದೆ. ರಾಜು ಮೇಲೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ’ ಎಂದು ಹೇಳಿದ್ದಳು. ಇದಾದ ಬಳಿಕ ನಾವು ಜಾಮೀನು ಅರ್ಜಿ ಸಲ್ಲಿಸಿದ ಬಳಿಕ ಸಾಕ್ಷಿದಾರರಿಗೆ ನೋಟಿಸ್ ನೀಡಲಾಗಿದೆ.

ರಾಜು ಲಮಾಣಿಯ ಪಿಯುಸಿ ಪರೀಕ್ಷೆ ಮತ್ತು ಆರೋಪಿಯ ವಿರುದ್ಧ ಅಂತಹ ಯಾವುದೇ ಗಂಭೀರ ಆರೋಪವಿಲ್ಲ. ಇದೊಂದು ಸುಳ್ಳು ಪ್ರಕರಣವಾಗಿದೆ ಎಂಬ ವಾದ ಮಂಡನೆಯ ಬಳಿಕ ಎರಡು ದಿನಕ್ಕೊಮ್ಮೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಹಿ‌ ಹಾಕಿ ಬರಬೇಕೆಂದು ಷರತ್ತು ವಿಧಿಸಿ ಗುರುವಾರ(ಏ.07)ದಂದು 5.25ಕ್ಕೆ ಜಾಮೀನು ಆದೇಶವಾಗಿತ್ತು. ಆದರೆ, ನಿನ್ನೆ ನ್ಯಾಯಾಲಯದ ಸಮಯ ಮುಗಿದಿದ್ದರಿಂದ ಕಾರಾಗೃಹಕ್ಕೆ ಮಾಹಿತಿ ಬಂದಿರಲಿಲ್ಲವಾದರೂ, ನಾನು ಕರೆ ಮಾಡಿ ಜಾಮೀನು ಸಿಕ್ಕಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆ. ಜಾಮೀನು ಸಿಕ್ಕಿರುವ ಮಾಹಿತಿ ಮೃತ ಯುವಕನಿಗೆ ಸಿಕ್ಕಿದ್ದರೆ ಹೀಗಾಗುತ್ತಿರಲಿಲ್ಲವೇನೋ’ ಎಂದು ಗದಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು ಹಾಗೂ ಯುವಕನ ಪರ ವಕೀಲರಾದ ಎಂ.ಎ.ಮೌಲ್ವಿ ಮಾಹಿತಿ ನೀಡಿದ್ದಾರೆ.


ಏನಿದು ಪ್ರಕರಣ?

ಅಡವಿ ಸೋಮಾಪುರ ಗ್ರಾಮದ ರಾಜು ಪಾಂಡಪ್ಪ ಲಮಾಣಿ‌ ಗದಗನ ಜೆಟಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಅಲ್ಲದೆ, ಅದೇ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಅಡವಿ ಸೋಮಾಪುರ ಗ್ರಾಮದ ಅಪ್ರಾಪ್ತ ವಯಸ್ಸಿನ ಯುವತಿಯನ್ನು (16ವರ್ಷ 7 ತಿಂಗಳು) ಪ್ರೀತಿಸುತ್ತಿದ್ದ. ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಗೋವಾಗೆ ಕರೆದುಕೊಂಡು ಹೋಗಿದ್ದನಂತೆ. ಈ ಬಗ್ಗೆ ಹುಡುಗಿಯ ಮನೆಯವರು ಗದಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಾಣೆ ಪ್ರಕರಣ ದಾಖಲಿಸಿದ್ದರಂತೆ. ನಂತರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಕಳೆದ 20-25 ದಿನಗಳ ಹಿಂದೆಯಷ್ಟೇ ರಾಜು ಲಮಾಣಿ ಜೈಲು ಪಾಲಾಗಿದ್ದ.