Home Blog Page 3361

ಗದಗ ಸಬ್ ಜೈಲಿನಲ್ಲಿ ವಿಚಾರಣಾಧೀನ ಖೈದಿ ಆತ್ಮಹತ್ಯೆ

ಜಾಮೀನು ಸಿಕ್ಕ ಬೆನ್ನಲ್ಲೇ ಗದಗ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿ ಆತ್ಮಹತ್ಯೆ; ಕುಟುಂಬಸ್ಥರ ಆಕ್ರಂದನ

ವಿಜಯಸಾಕ್ಷಿ ಸುದ್ದಿ, ಗದಗ:

ಪೋಕ್ಸೋ ಕಾಯ್ದೆಯಡಿ ಗದಗ ಜಿಲ್ಲಾ ಕಾರಾಗೃಹದ ಪಾಲಾಗಿದ್ದ ವಿಚಾರಣಾಧೀನ ಖೈದಿಯೊಬ್ಬ ಕಟ್ಟಡದ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಗದಗ ತಾಲೂಕಿನ ಅಡವಿ ಸೋಮಾಪುರ ತಾಂಡಾದ ನಿವಾಸಿ ರಾಜು ಪಾಂಡಪ್ಪ ಲಮಾಣಿ (19) ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದಾನೆ. ಶುಕ್ರವಾರ ಮಧ್ಯರಾತ್ರಿ 1.30ರ ಸುಮಾರಿಗೆ ಕಾರಾಗೃಹದಲ್ಲಿರುವ ಇನ್ನಿತರ ಖೈದಿಗಳ ಟವೆಲ್ ತೆಗೆದುಕೊಂಡು ಮೊದಲ ಬಾರಿಗೆ ಪ್ರಯತ್ನಿಸುತ್ತಾನೆ. ಸಾಧ್ಯವಾಗದಿದ್ದಾಗ ಪುನಃ ಎರಡನೇ ಬಾರಿಗೆ ಪ್ರಯತ್ನಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಕಾರಾಗೃಹದ ಸಿಸಿ ಕ್ಯಾಮೆರಾದಲ್ಲಿ ರಾಜು ಆತ್ಮಹತ್ಯೆಯ ಯತ್ನದ‌ ವಿಡಿಯೋ ದಾಖಲಾಗಿವೆ.

ಹುಡುಗಿಯ ಮನೆಯವರು ಗುರುವಾರ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ, ಜಾಮೀನು ಮೇಲೆ ಬಿಡುಗಡೆಯಾದರೂ ನಿನ್ನನ್ನು ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಆತ್ಮಹತ್ಯೆಗೆ ಜೈಲು ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿದ ಮೃತ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಅಡವಿ ಸೋಮಾಪುರ ಗ್ರಾಮದ ರಾಜು ಪಾಂಡಪ್ಪ ಲಮಾಣಿ ಅದೇ ಊರಿನ‌ ಹುಡುಗಿಯನ್ನು ಪ್ರೀತಿಸಿದ್ದ. ಹುಡುಗಿ‌ ಕಾಣೆಯಾಗಿದ್ದಾಳೆಂದು ಗ್ರಾಮೀಣ‌ ಪೊಲೀಸ್ ಠಾಣೆ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ದಾಖಲಾದ 8 ದಿನಗಳ ಬಳಿಕ ಸಿಕ್ಕ ಹುಡುಗಿಯನ್ನು ಗ್ರಾಮೀಣ ಪೊಲೀಸ್ ಠಾಣೆಗೆ ಕರೆದುಕೊಂಡು 161 ಹೇಳಿಕೆಯನ್ನು ದಾಖಲಿಸಿದ್ದಾರೆ.

ಈ ಹೇಳಿಕೆಯಲ್ಲಿ
‘ರಾಜು ನಾನು ಬೆಂಗಳೂರು, ಗೊವಾ ಹೋಗಿದ್ವಿ‌. ಹೋದಲ್ಲೆಲ್ಲಾ ಜೊತೆಗಿದ್ವಿ’ ಎಂದು ಹೇಳಿದ್ದಾಳೆ.
ನ್ಯಾಯಾಧೀಶರ ಮುಂದೆ 164ರಡಿ ಹೇಳಿಕೆ ದಾಖಲಿಸಿದ್ದು, ‘ನಾನು ಗೆಳತಿಯರೊಂದಿಗೆ ಹೋಗಿದ್ದೆ. ರಾಜು ಮೇಲೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ’ ಎಂದು ಹೇಳಿದ್ದಳು. ಇದಾದ ಬಳಿಕ ನಾವು ಜಾಮೀನು ಅರ್ಜಿ ಸಲ್ಲಿಸಿದ ಬಳಿಕ ಸಾಕ್ಷಿದಾರರಿಗೆ ನೋಟಿಸ್ ನೀಡಲಾಗಿದೆ.

ರಾಜು ಲಮಾಣಿಯ ಪಿಯುಸಿ ಪರೀಕ್ಷೆ ಮತ್ತು ಆರೋಪಿಯ ವಿರುದ್ಧ ಅಂತಹ ಯಾವುದೇ ಗಂಭೀರ ಆರೋಪವಿಲ್ಲ. ಇದೊಂದು ಸುಳ್ಳು ಪ್ರಕರಣವಾಗಿದೆ ಎಂಬ ವಾದ ಮಂಡನೆಯ ಬಳಿಕ ಎರಡು ದಿನಕ್ಕೊಮ್ಮೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಹಿ‌ ಹಾಕಿ ಬರಬೇಕೆಂದು ಷರತ್ತು ವಿಧಿಸಿ ಗುರುವಾರ(ಏ.07)ದಂದು 5.25ಕ್ಕೆ ಜಾಮೀನು ಆದೇಶವಾಗಿತ್ತು. ಆದರೆ, ನಿನ್ನೆ ನ್ಯಾಯಾಲಯದ ಸಮಯ ಮುಗಿದಿದ್ದರಿಂದ ಕಾರಾಗೃಹಕ್ಕೆ ಮಾಹಿತಿ ಬಂದಿರಲಿಲ್ಲವಾದರೂ, ನಾನು ಕರೆ ಮಾಡಿ ಜಾಮೀನು ಸಿಕ್ಕಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆ. ಜಾಮೀನು ಸಿಕ್ಕಿರುವ ಮಾಹಿತಿ ಮೃತ ಯುವಕನಿಗೆ ಸಿಕ್ಕಿದ್ದರೆ ಹೀಗಾಗುತ್ತಿರಲಿಲ್ಲವೇನೋ’ ಎಂದು ಗದಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು ಹಾಗೂ ಯುವಕನ ಪರ ವಕೀಲರಾದ ಎಂ.ಎ.ಮೌಲ್ವಿ ಮಾಹಿತಿ ನೀಡಿದ್ದಾರೆ.


ಏನಿದು ಪ್ರಕರಣ?

ಅಡವಿ ಸೋಮಾಪುರ ಗ್ರಾಮದ ರಾಜು ಪಾಂಡಪ್ಪ ಲಮಾಣಿ‌ ಗದಗನ ಜೆಟಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಅಲ್ಲದೆ, ಅದೇ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಅಡವಿ ಸೋಮಾಪುರ ಗ್ರಾಮದ ಅಪ್ರಾಪ್ತ ವಯಸ್ಸಿನ ಯುವತಿಯನ್ನು (16ವರ್ಷ 7 ತಿಂಗಳು) ಪ್ರೀತಿಸುತ್ತಿದ್ದ. ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಗೋವಾಗೆ ಕರೆದುಕೊಂಡು ಹೋಗಿದ್ದನಂತೆ. ಈ ಬಗ್ಗೆ ಹುಡುಗಿಯ ಮನೆಯವರು ಗದಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಾಣೆ ಪ್ರಕರಣ ದಾಖಲಿಸಿದ್ದರಂತೆ. ನಂತರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಕಳೆದ 20-25 ದಿನಗಳ ಹಿಂದೆಯಷ್ಟೇ ರಾಜು ಲಮಾಣಿ ಜೈಲು ಪಾಲಾಗಿದ್ದ.

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಯಾರು?

 ವಿಜಯಸಾಕ್ಷಿ ಸುದ್ದಿ, ನವಲಗುಂದ:

ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವರು ಬದಲಾಗಿ ಮೂರು ತಿಂಗಳೇ ಗತಿಸಿದ್ದರೂ ಇಲ್ಲಿಯ ತಾಲ್ಲೂಕಾ ಪಂಚಾಯತಿ ಆವರಣದಲ್ಲಿರುವ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಜನ ಸಂಪರ್ಕ ಕಾರ್ಯಾಲಯದ ನಾಮಪಲಕದಲ್ಲಿ ಬದಲಾವಣೆಯಾಗದಿರುವುದು ಕಾರ್ಯಾಲಯಕ್ಕೆ ಬರುವ ಜನ ಸಾಮಾನ್ಯರಲ್ಲಿ ಗೊಂದಲ ಸೃಷ್ಟಿಯಾಗಿದೆ.

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಂಕರ ಪಾಟೀಲ ಮುನೇನಕೊಪ್ಪ ಜನೇವರಿ 24 ರಂದೇ ಬದಲಾಗಿ ರಾಯಚೂರ ಹಾಗೂ ಬೀದರ ಜಿಲ್ಲಾ ಉಸ್ತುವಾರಿಗಳಾಗಿದ್ದಾರೆ.

ಧಾರವಾಡ ಜಿಲ್ಲೆಗೆ ಹಾಲಪ್ಪ ಆಚಾರ್ಯ ಉಸ್ತುವಾರಿಗಳಾಗಿ ನೇಮಕವಾಗಿದ್ದಾರೆ. ಆದರೆ ಶಂಕರ ಪಾಟೀಲ ಮುನೇನಕೊಪ್ಪರ ಜನಸಂಪರ್ಕ ಕಾರ್ಯಾಲಯದ ನಾಮಫಲಕವನ್ನು ಅಪಡೆಟ್ ಮಾಡದಿರುವುದು ಅಧಿಕಾರಿಗಳ ನಿರ್ಲಕ್ಷವೊ? ಅಥವಾ ಸಚಿವರ ನಿರ್ಲಕ್ಷವೊ ಎಂಬುದು ಯಕ್ಷಪ್ರಶ್ನೆಯಾಗಿದ್ದು, ಆದಷ್ಟು ಬೇಗನೆ ನಾಮಫಲಕವನ್ನು ಬದಲಿಸಿ ಜನಸಾಮಾನ್ಯರಿಗಾಗುತ್ತಿರುವ ಗೊಂದಲವನ್ನು ನಿವಾರಣೆ ಮಾಡಬೇಕೆಂಬುದು ಜನಸಾಮಾನ್ಯರ ಒತ್ತಾಸೆಯಾಗಿದೆ. 

ಗದಗ ಜಿಲ್ಲಾ ಪಂಚಾಯತಿ ಸಿಇಒ ಭರತ್ ವರ್ಗಾವಣೆ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಭರತ್ ಎಸ್. ಅವರನ್ನು ರಾಜ್ಯ ಸರ್ಕಾರ ಬುಧವಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಸರ್ಕಾರದ ಮುಂದಿನ ಆದೇಶದವರೆಗೆ ಡಾ.ಸುಶೀಲಾ ಬಿ. ಅವರನ್ನು ತಕ್ಷಣ ಜಾರಿಗೆ ಬರುವಂತೆ ಗದಗ ಜಿಪಂ ಸಿಇಒ ಆಗಿ ನೇಮಕ ಮಾಡಿ ಸರ್ಕಾರ ಆದೇಶಿಸಿದೆ.

ಜವಳಗಲ್ಲಿ ತೆರವುಗೊಳಿಸಲು ಮುಂದಾದರೆ ಅನಿಲ‌ ಮೆಣಸಿನಕಾಯಿ ಗದಗನಲ್ಲಿ ಎಚ್ಚರಿಕೆಯಿಂದ ಬಾಳಬೇಕಾಗುತ್ತದೆ

ವಿಜಯಸಾಕ್ಷಿ ಸುದ್ದಿ, ಗದಗ:

‘ಅನಿಲ್ ಮೆಣಸಿನಕಾಯಿ ಸಾಹೇಬ್ರೇ ನೀವು ನ್ಯಾಯ ಕೊಡಿಸುವ ಹಾಗಿದ್ದರೆ ಜನತಾ ಬಜಾರ್‌ನಲ್ಲಿ ಬನ್ಸಾಲಿಯವು ಮೂರು ಅಂಗಡಿ ಇವೆ. ನಗರಸಭೆ ಆಸ್ತಿ ಬಹಳಷ್ಟಿದೆ. ಟಾಂಗಾಕೂಟದಿಂದ ಕರಿದೇವರ ಗುಡಿಯವರೆಗೆ ಒಬ್ಬರು ಬಂದರೆ ಇನ್ನೊಬ್ಬರು ಹೋಗಲಾಗುವುದಿಲ್ಲ. ಇಂತಹವುಗಳನ್ನು ತೆರವುಗೊಳಿಸಿ ನಿಮ್ಮ ಹೆಸರು ಗಳಿಸಿಕೊಳ್ಳಿ. ಸ್ಲಂ ಏರಿಯಾದಲ್ಲಿ ಬಂದು ಹೆಸರು ಗಳಿಸಿದರೆ ಉಪಯೋಗವಿಲ್ಲ ಎಂದು ವಾಲ್ಮೀಕಿ ಸಮಾಜದ ಮುಖಂಡ ಬಸವರಾಜ ಬೆಳದಡಿ ಅವರು ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಅವರ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಅವರ ಹೇಳಿಕೆ ಖಂಡಿಸಿ ಗದಗನ ಜವಳಗಲ್ಲಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದ ಅವರು ‘ವಕಾರ ಸಾಲು ಮಾಡಿದ ಹಾಗೆ ಇಲ್ಲಿ ಮಾಡಲು ಬಂದರೆ, ಕೇಳುವುದಿಲ್ಲ. ಹಾಗೇನಾದರೂ ಮಾಡಲು ಬಂದರೆ ಚುನಾವಣೆ ವೇಳೆ ನಿಮ್ಮನ್ನು ಒಳಗೆ ಬಿಡುವುದಿಲ್ಲ, ಇದು ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ.

‘ಜವಳಗಲ್ಲಿಯಲ್ಲಿರುವ ಹಿಂದೂ ಮುಸ್ಲಿಂರು ಬೇರೆ ಅಲ್ಲ, ಎಲ್ಲರೂ ಒಂದೇ ಎಂಬ ಭಾವದಿಂದ ಬದುಕುತ್ತಿದ್ದೇವೆ. ಓಟಿನ ಆಸೆಗೆ ಹಿಂದೂ ಮುಸ್ಲಿಂರ ಮಧ್ಯೆ ಜಗಳ ಹಚ್ಚಲು ಹೊರಟಿರುವ ಅನಿಲ್ ಮೆಣಸಿನಕಾಯಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಷ್ಟಕ್ಕೆ ಅನಿಲ್ ಮೆಣಸಿನಕಾಯಿ ಸುಮ್ಮನೆ ಕುಳಿತರೆ ಚೊಲೋ ಆಯಿತು. ಇಲ್ಲದಿದ್ದರೆ ಗದಗನಲ್ಲಿ ಎಚ್ಚರಿಕೆಯಿಂದ ಬಾಳಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿರುವ ಬಸವರಾಜ ಬೆಳದಡಿ, ಜವಳಗಲ್ಲಿಯಲ್ಲಿ ದುಡಿದು ತಿನ್ನುವವರಿದ್ದು, ಜೀವ ಹೋದರೂ ಜಾಗ ಬಿಟ್ಟು ಕೊಡುವುದಿಲ್ಲ ಎಂದಿದ್ದಾರೆ.

ಏಪ್ರಿಲ್ 2ರಂದು ಸುದ್ದಿಗೋಷ್ಠಿ ನಡೆಸಿದ್ದ ಅನಿಲ್ ಮೆಣಸಿನಕಾಯಿ, ಜವಳಗಲ್ಲಿಯ ರಾಜ ಕಾಲುವೆ ಮೇಲೆ ಅನಧಿಕೃತವಾಗಿ ನಿರ್ಮಾಣವಾಗಿರುವ ಚಿಕನ್, ಮಟನ್, ಮೀನು ಸೇರಿದಂತೆ ಮಾಂಸದ ಅಂಗಡಿಗಳನ್ನು ತೆರವುಗೊಳಿಸಬೇಕು. ಏಕೆಂದರೆ, ಜೈನ ಮಂದಿರಕ್ಕೆ ಬರುವ ಭಕ್ತರಿಗೆ ಇದರಿಂದ ತೊಂದರೆಯಾಗಲಿದೆ. ಅಲ್ಲದೆ, ಜವಳಿಗಲ್ಲಿಯ 16 ಎಕರೆ ಜಾಗ ವೀರನಾರಾಯಣ ದೇವಸ್ಥಾನಕ್ಕೆ ಸೇರಿದ್ದು, ಅನಧಿಕೃತವಾಗಿ ವಾಸವಾಗಿರುವವರನ್ನು ಖಾಲಿ ಮಾಡಿಸಬೇಕು ಎಂದು ಒತ್ತಾಯಿಸಿದ್ದರು. ಅನಿಲ್ ಮೆಣಸಿನಕಾಯಿ ಅವರ ಈ ಹೇಳಿಕೆಯಿಂದ ಆಕ್ರೋಶಗೊಂಡ ಜವಳಗಲ್ಲಿಯ ನಿವಾಸಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷ ಯುಸೂಫ್ ನಮಾಜಿ, ನಗರಸಭೆ ಸದಸ್ಯ ಜೂನ್‌ಸಾಬ ನಮಾಜಿ, ಕಾಂಗ್ರೆಸ್ ಮುಖಂಡ ಮುನ್ನಾ ರೇಶ್ಮಿ ಸೇರಿದಂತೆ ಸ್ಥಳೀಯರು ಇದ್ದರು.

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: ಇಬ್ಬರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ:

ಇಂಡಿಯನ್ ಪ್ರಿಮೀಯರ್ ಲೀಗ್ ಆರಂಭಗೊಂಡಿದ್ದು, ಬೆಟ್ಟಿಂಗ್ ದಂಧೆ ಸದ್ದು ಮಾಡುತ್ತಿದೆ. ಜಿಲ್ಲೆಯ ಎಲ್ಲೆಂದರಲ್ಲಿ ಬೆಟ್ಟಿಂಗ್ ಮಾತುಗಳೇ ಕೇಳಿ ಬರುತ್ತಿವೆ. ಸುಲಭವಾಗಿ ಹಣ ಸಂಪಾದಿಸಲು ಜನ ಜೂಜಾಟಕ್ಕೆ ಇಳಿಯುತ್ತಿದ್ದಾರೆ. ಹೀಗೆ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿಕೊಂಡಿದ್ದವರ ಮೇಲೆ ರೋಣ ಹಾಗೂ ಗಜೇಂದ್ರಗಡ ಪೊಲೀಸರು ಪ್ರತ್ಯೇಕ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ರೋಣ ತಾಲೂಕಿನ ಹೊಳೆಆಲೂರ ಕ್ರಾಸ್‌ನಲ್ಲಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಕೊಂಡಿದ್ದ ಸೋಡಾ ವ್ಯಾಪಾರಿ ಹೊಳೆಆಲೂರ ಗ್ರಾಮದ ಹರೀಶ ತನುಷಾ ಪವಾರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸನ್‌ರೈಜರ್ಸ್ ಹೈದರಾಬಾದ್ ಹಾಗೂ ಲಕ್ನೋ ಸೂಪರ್ ಜೇಂಟ್ಸ್ ನಡುವಿನ ಪಂದ್ಯಕ್ಕೆ ಕ್ರಿಕೆಟ್ ಬೆಟ್ಟಿಂಗ್ ವಿಧವಾದ ಒನ್ ಟು ಡಬಲ್ ರೇಟ್ 500 ರೂ. ಆಡಿದರೆ 1,000 ರೂ. ಹಣ ಕೊಡುವುದಾಗಿ ಹೇಳಿ ಜನರಿಂದ ಹಣ ಪಡೆದುಕೊಳ್ಳುವ ವೇಳೆ ಹರೀಶ ಸಿಕ್ಕಿ ಬಿದ್ದಿದ್ದಾನೆ. ಈ ವೇಳೆ ಬೆಟ್ಟಿಂಗ್‌ಗೆ ಬಳಸಲಾಗಿದ್ದ 10 ಸಾವಿರ ರೂ. ಮೌಲ್ಯದ ಮೊಬೈಲ್, 2360 ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅದರಂತೆ, ಗಜೇಂದ್ರಗಡ ಪಟ್ಟಣದ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಮುಂದೆ ಸನ್‌ರೈಜರ್ಸ್ ಹೈದರಾಬಾದ್ ಹಾಗೂ ಲಕ್ನೋ ಸೂಪರ್ ಜೇಂಟ್ಸ್ ನಡುವಿನ ಪಂದ್ಯದ ವೇಳೆ ಬೆಟ್ಟಿಂಗ್ ಆಡುವ ವೇಳೆ ಪೊಲೀಸರ ಬಲೆಗೆ ಬಿದ್ದ ಮೀನು ವ್ಯಾಪಾರಿ ಮಂಜುನಾಥ ಹಂಪಣ್ಣ ರಾಠೋಡ ಅವನಿಂದ 3,200 ರೂ. ನಗದು ಹಾಗೂ ಮೊಬೈಲ್ ಜಪ್ತಿ ಮಾಡಿದ್ದಾರೆ. ಮಂಜುನಾಥ ರಾಥೋಡ 1,000ಕ್ಕೆ 1,200 ರೂ. ಕೊಡುವುದಾಗಿ ಕ್ರಿಕೆಟ್ ಬೆಟ್ಟಿಂಗ್‌ಗೆ ಜನರನ್ನು ಆಹ್ವಾನಿಸುವ ವೇಳೆ ತಗುಲು ಹಾಕಿಕೊಂಡಿದ್ದಾನೆ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೇರೆ ಯುವಕನೊಂದಿಗೆ ಮದುವೆ ಫಿಕ್ಸ್ ; ಪ್ರೇಮಿಗಳು ಆತ್ಮಹತ್ಯೆಗೆ ಶರಣು

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಹದಿ ಹರೆಯದ ಹುಡುಗ ಹುಡುಗಿಯ ನಡುವೆ ಪ್ರೇಮಾಂಕುರವಾಗಿ ಇನ್ನೇನು ಮದುವೆ ಮಾಡಿಕೊಳ್ಳೊಣ ಎನ್ನುವಷ್ಟರಲ್ಲಿ ಹುಡುಗಿಯ ಮನೆಯವರು ಬೇರೊಬ್ಬ ಯುವಕನೊಂದಿಗೆ ಮದುವೆಗೆ ಮೂಹುರ್ತ ನಿಗದಿ ಮಾಡಿದ್ದನ್ನು ಸಹಿಸಿಕೊಳ್ಳಲಾಗದೇ ಪ್ರೇಮಿಗಳಿಬ್ಬರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಮಂಗಳವಾರ ನಡೆದಿದೆ.

ನವಲಗುಂದ ತಾಲ್ಲೂಕಿನ ತಡಹಾಳ ಗ್ರಾಮದ ಕುರುಬ ಜಾತಿಗೆ ಸೇರಿದ ಸಾವಿತ್ರಿ ಮುತ್ತಪ್ಪ ನರಗುಂದ (20) ಪರಿಶಿಷ್ಟ ಜಾತಿಗೆ ಸೇರಿದ ಯುವಕ ಮಲ್ಲಪ್ಪ ದುರ್ಗಪ್ಪ ಮಾದರ (23) ವಿಷ ಸೇವಿಸಿದ ಅನ್ಯಜಾತಿಯ ಪ್ರೇಮಿಗಳಾಗಿದ್ದಾರೆ.

ಸೋಮವಾರ ರಾತ್ರಿ ಇಬ್ಬರನ್ನು ಇಲ್ಲಿಯ ಸರ್ಕಾರಿ ಆಸ್ಪತೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹುಬ್ಬಳ್ಳಿಯ ಕಿಮ್ಸಗೆ ಕಳುಹಿಸಿಕೊಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಸೋಮವಾರ ರಾತ್ರಿ ಮೃತಪಟ್ಟರೇ, ಯುವಕ ಮಂಗಳವಾರ ಬೆಳಿಗ್ಗೆ ಸಾವನ್ನಪ್ಪಿದ್ದಾನೆ. ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ಗಂಡ ಹೆಂಡತಿ ಜಗಳ; ಗಂಡನ ಠಾಣೆಗೆ ಕರೆಯಿಸಿ ಹಿಗ್ಗಾಮುಗ್ಗಾ ಥಳಿಸಿದ ಗದಗ ಪೊಲೀಸರು

ವಿಜಯಸಾಕ್ಷಿ ಸುದ್ದಿ, ಗದಗ:

ಪತಿ ಕಿರುಕುಳ, ದೌರ್ಜನ್ಯ ನೀಡುತ್ತಿದ್ದಾನೆಂಬ ಪತ್ನಿಯ ಮೌಖಿಕ ದೂರಿನ ಮೇಲೆ ಗಂಡನನ್ನು ವಿಚಾರಣೆಗೆಂದು ಠಾಣೆಗೆ ಕರೆಯಿಸಿ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗದಗನಲ್ಲಿ ನಡೆದಿದೆ. ಇದರಿಂದಾಗಿ ಗದಗ ಪೊಲೀಸರ ಮತ್ತೊಂದು ಅಮಾನವೀಯ ಕೃತ್ಯ ಬೆಳಕಿಗೆ‌ ಬಂದಂತಾಗಿದೆ.

ದಾವಲಸಾಬ್ ಕುಮನೂರು ಎಂಬ ವ್ಯಕ್ತಿಯನ್ನು ಮಹಿಳಾ ಠಾಣೆಯ ಪಿಎಸ್ಐ ನೂರಾಜಾನ್ ಸಬರ್ ಸಮ್ಮುಖದಲ್ಲಿ ನಾಲ್ವರ ಪೊಲೀಸರು ಥಳಿಸಿದ್ದಾರೆ. ಮಹಿಳಾ ಠಾಣೆಯ ಪೊಲೀಸರು ಥಳಿಸಿದ್ದರ ಪರಿಣಾಮ ಜಿಮ್ಸ್ ಆಸ್ಪತ್ರೆಯಲ್ಲಿ ಗಾಯಗೊಂಡಿರುವ ದಾವಲಸಾಬ್ ಚಿಕಿತ್ಸೆ ಪಡೆಯುತ್ತಿದ್ದಾನೆ.

ಪೊಲೀಸರ ಲಾಟಿ ಹಾಗೂ ಬೂಟೇಟಿನಿಂದ ದಾವಲಸಾಬ್ ಮೈ ಮೇಲೆ ಬಾಸುಂಡೆ ಬಂದಿವೆ. ದಾವಲಸಾಬ್ ಗೆ ಪೊಲೀಸರು ಹೊಡೆದಿರುವ ಪರಿಣಾಮ ಕುಂತರೆ ಕುಳಿತುಕೊಳ್ಳಲಾಗುವುದಿಲ್ಲ. ನಿಂತರೆ ನಿಲ್ಲಲು ಬರದ ಹಾಗೆ ಹೊಡೆದಿದ್ದು, ಜಿಮ್ಸ್ ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದಿದ್ದಾನೆ. ಪೊಲೀಸರು ವಿಚಾರಣೆಯ ನೆಪದಲ್ಲಿ ಮಾನವೀಯತೆಯ ಮರೆತು ಮೃಗಗಳಂತೆ ವರ್ತಿಸಿದ್ದಾರೆ. ಅಲ್ಲದೆ, ದಾವಲಸಾಬ್ ಬಳಿ ಇದ್ದ ಹಣವನ್ನು ‌ಕಸಿದುಕೊಂಡು‌ ಕಳುಹಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಪೊಲೀಸರ ದಬ್ಬಾಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ‌. ಅಲ್ಲದೆ, ನ್ಯಾಯ ಒದಗಿಸಿ ಕೊಡುವಂತೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಐದು ತಿಂಗಳಲ್ಲಿ ನಾಲ್ಕೈದು ಬಾರಿ ಪೊಲೀಸ್ ಠಾಣೆ‌ ಮೆಟ್ಟಿಲೇರಿಸಿದ್ದಾಳೆ. ಸಂತೆಗೆ ಹೋದ ಮಗನನ್ನು ಕರೆಯಿಸಿ ನಮಗೆ ಗೊತ್ತಿರದ ಹಾಗೆ ಪೊಲೀಸರು ಬಡಿದಿದ್ದಾರೆ. ಸಮಯವಾದರೂ ಮನೆಗೆ ಬರದ ಮಗನ ಪೋನ್ ಗೆ ಕರೆ ಮಾಡಿದರೆ ರಿಸೀವ್ ಮಾಡಿಲ್ಲ. ಸಂಜೆ ಆರು ಗಂಟೆಗೆ ಮಗ ಫೋನ್ ಮಾಡಿ ಪೊಲೀಸರ ಹೊಡೆದ ವಿಚಾರ ತಿಳಿಸಿದ್ದಾ‌ನೆ. ಪೊಲೀಸರಿಗೆ ದುಡ್ಡು ಕೊಟ್ಟು ಹೊಡೆಸಿದ್ದಾರೆ. ಹೊಡೆದದ್ದಕ್ಕೆ ದೇಹದ ತುಂಬೆಲ್ಲಾ ಗಾಯಗಳಾಗಿವೆ. ಠಾಣೆಗೆ ಕರೆದು ಈ ರೀತಿಯಾಗಿ ಹೊಡೆದು ಏನಾದರೂ ಆಗಿ ಸತ್ತರೆ ಯಾರನ್ನು ಕೇಳಬೇಕು ಎಂದು ದಾವಲಸಾಬ್ ನ ತಾಯಿ ಕಣ್ಣೀರು ಹಾಕುತ್ತಿದ್ದಾರೆ.

ಏನಿದು ಪ್ರಕರಣ?

ದಾವಲಸಾಬ್ ಇಬ್ಬರನ್ನು ಮದುವೆಯಾಗಿದ್ದ. ಇಬ್ಬರು ಹೆಂಡತಿಯರನ್ನು ಪ್ರತ್ಯೇಕವಾಗಿ ಇರಿಸಿದ್ದ. ಆದರೆ, ಮೊದಲ ಹೆಂಡತಿ ಬಸೀರಾಬೇಗಂ ಪತಿ ದಾವಲಸಾಬ್ ನನಗೆ ಕಿರುಕುಳ, ನನ್ನ ಮೇಲೆ ದೌರ್ಜನ್ಯ ನೀಡುತ್ತಿದ್ದಾನೆಂದು ಗದಗನ ಮಹಿಳಾ ಪೊಲೀಸ್ ಠಾಣೆಯಲ್ಲಿ ಮೌಖಿಕ ದೂರು ನೀಡಿದ್ದಳು. ಮೌಖಿಕ ದೂರನ್ನೇ ಬಂಡವಾಳ ಮಾಡಿಕೊಂಡ ಮಹಿಳಾ ಠಾಣೆಯ ಪೊಲೀಸರು ವಿಚಾರಣೆಗೆ ಬಸೀರಾಬೇಗಂಳ ಗಂಡ ದಾವಲಸಾಬ್ ನನ್ನು ಠಾಣೆಗೆ ಕರಿಸಿ ವಿಚಾರಣೆಯ ನೆಪದಲ್ಲಿ ಥಳಿಸಿದ್ದಾರೆ. ಓರ್ವ ಮಹಿಳಾ ಪೊಲೀಸ್ ಹಾಗೂ ಮೂರು ಜನ ಪುರಷ‌ ಪೊಲೀಸರು ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಥಳಿಸಿದ್ದಲ್ಲದೆ, ಮಹಿಳಾ ಠಾಣೆಯ ಪಿಎಸ್ಐ ನೂರಾಜಾನ್ 20 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಆಗ ದಾವಲಸಾಬ್ ನನ್ನ ಬಳಿ ಹಣವಿಲ್ಲ ಎಂದಿದ್ದಕ್ಕೆ ಕಿರಾಣಿ ಸಾಮಾನು ತರಲು ಇಟ್ಟುಕೊಂಡಿದ್ದ 40 ಸಾವಿರ ರೂ.ನಲ್ಲೇ ಐದು ಸಾವಿರ ರೂಪಾಯಿ ಕಿತ್ತುಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಒಟ್ಟಿನಲ್ಲಿ ಗದಗ‌ ನಗರದ ಹುಡ್ಕೋ ಕಾಲನಿಯ ನಿವಾಸಿ ದಿ.ಸಂತೋಷ ಕರ್ಕಿಕಟ್ಟಿ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದ್ದು, ಗದಗ ಪೊಲೀಸರ ದಬ್ಬಾಳಿಕೆಗೆ ಮತ್ತೊಂದು ಪ್ರಕರಣ ಸೇರ್ಪಡೆಯಾದಂತಾಗಿದೆ.

ಶಾಸಕ ಎಚ್.ಕೆ.ಪಾಟೀಲರಿಗೆ ಮಾತೃವಿಯೋಗ; ಅನಿಲ ಮೆಣಸಿನಕಾಯಿ ಸಂತಾಪ

ವಿಜಯಸಾಕ್ಷಿ ಸುದ್ದಿ, ಗದಗ:

ಸಹಕಾರ ರಂಗದ ಭೀಷ್ಮ ದಿ.ಕೆ.ಎಚ್.ಪಾಟೀಲರ ಧರ್ಮಪತ್ನಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಎಚ್.ಕೆ.ಪಾಟೀಲರ ಮಾತೋಶ್ರೀಯವರಾದ ದಿ.ಪದ್ಮಾವತಿ ಕೆ. ಪಾಟೀಲರು ಸೋಮವಾರ ಸ್ವರ್ಗವಾಸಿಗಳಾಗಿದ್ದಾರೆ.

88 ವಸಂತಗಳ ತುಂಬುಜೀವನ ನಡೆಸಿದ ಪದ್ಮಾವತಿ ಅಮ್ಮನವರು ಕೆಲಕಾಲದಿಂದ ವಯೋಸಹಜ ತೊಂದರೆಗಳಿಂದ ಬಳಲುತ್ತಿದ್ದರು. ಮೃತರು ಪುತ್ರರಾದ ಎಚ್.ಕೆ.ಪಾಟೀಲ ಹಾಗೂ ಪಿ.ಕೆ.ಪಾಟೀಲ, ಸೊಸೆಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಹುಲಕೋಟಿಯ ಮುಕ್ತಿಧಾಮದಲ್ಲಿ ಮಂಗಳವಾರ 2 ಗಂಟೆಗೆ ನೆರವೇರಲಿದೆ.

ಸಂತಾಪ: ಶಾಸಕ ಎಚ್.ಕೆ.ಪಾಟೀಲ್ ಅವರ ತಾಯಿ ಪದ್ಮಾವತಿ ಕೃಷ್ಣಗೌಡ ಪಾಟೀಲ ಅವರ ನಿಧನಕ್ಕೆ ಹಲವು ನಾಯಕರು ಶೋಕ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್.ಪಾಟೀಲ್ ಸಂತಾಪ ವ್ಯಕ್ತಪಡಿಸಿದ್ದು, ತಾಯಿ ಪದ್ಮಾವತಿ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬ ವರ್ಗಕ್ಕೆ ದುಃಖ ಸಹಿಸುವ ಶಕ್ತಿ ದಯಪಾಲಿಸಲಿ ಎಂದಿದ್ದಾರೆ.

ಒತ್ತಡ ಸಹಿಸಲಾರದೆ ಪುರಸಭೆ ಉಪಾಧ್ಯಕ್ಷೆ ಖೈರುನಬಿ ರಾಜೀನಾಮೆ

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಕಳೆದ  ಒಂದು ವಾರದಿಂದ ನಡೆಯುತ್ತಿದ್ದ ಸ್ಥಳೀಯ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ರಾಜೀನಾಮೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರು ಉಪಾಧ್ಯಕ್ಷೆ ಖೈರುನಬಿ ನಾಶಿಪುಡಿ ಅವರಿಗೆ ರಾಜೀನಾಮೆ ಸಲ್ಲಿಸುವಂತೆ ಬಿಗಿಪಟ್ಟು ಹಿಡಿದಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿಯು ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಇದ್ದ ಕಾರಣ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವ ಅವಶ್ಯಕತೆ ಇರಲಿಲ್ಲ. ಆದರೆ ಬಿಜೆಪಿ ಸದಸ್ಯರ ಒತ್ತಡಕ್ಕೆ ಮಣಿದು ಹಾಗೂ ರಂಜಾನ ತಿಂಗಳಲ್ಲಿ ಜಗಳ ಬೆಡವೆಂದು ತುಂಬಾ ನೊಂದುಕೊಂಡಿದ್ದ ಅವರು ಸೋಮವಾರ ಸಂಜೆ ಧಾರವಾಡ ಜಿಲ್ಲೆಯ ಉಪವಿಭಾಗಾಧಿಕಾರಿ ಅಶೋಕ ತೇಲಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. 

ಭಜರಂಗದಳದ ಕಾರ್ಯಕರ್ತರಿಂದ ನಿವೃತ್ತ ಯೋಧ ಬಸವನಗೌಡಗೆ ಅದ್ಧೂರಿ ಸ್ವಾಗತ

ವಿಜಯಸಾಕ್ಷಿ ಸುದ್ದಿ, ರಟ್ಟೀಹಳ್ಳಿ:

ಸುಧೀರ್ಘ 21 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿದ ತಾಲ್ಲೂಕಿನ ಚಿಕ್ಕಯಡಚಿ ಗ್ರಾಮದ ಬಸವನಗೌಡ ಗುಬ್ಬೇರ ಅವರನ್ನು ಪಟ್ಟಣದ ಭಜರಂಗದಳ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತ ಕೋರಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಲವು ವಾದ್ಯಮೇಳದ ಜೊತೆಗೆ ಪಟಾಕಿ ಸಿಡಿಸಿ ಹೂವಿನ ಸುರಿಮಳೆಗೈದು ನಿವೃತ್ತ ಯೋಧನ ಮೆರವಣಿಗೆ ಮಾಡಲಾಯಿತು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಮಾಜಿ ಶಾಸಕ ಯು. ಬಿ. ಬಣಕಾರ ಯೋಧನಿಗೆ ಸನ್ಮಾನಿಸಿ ಅಭಿನಂದಿಸಿದರು.

ಈ ಸಂಧರ್ಭದಲ್ಲಿ ಭಜರಂಗದಳದ ಕಾರ್ಯಕರ್ತರಾದ ಮೃತ್ಯುಂಜಯ ಬೆಣ್ಣಿ, ಆಕಾಶ್ ಹುಲ್ಲತ್ತಿ, ರಾಜು ಕುಪ್ಪೆಲೂರ, ಸಿದ್ದು ಪಾಟೀಲ್, ನಾಗಪ್ಪ ದೊಡ್ಡಗೌಡ್ರ, ರಾಜು ಕೋಣ್ತಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರಗೌಡ ಚನ್ನಗೌಡ್ರ, ರುದ್ರೇಶ್ ಬೆಣ್ಣಿ, ವೀರನಗೌಡ ಮಕರಿ, ಹನುಮಂತಪ್ಪ ಬಳಿಗಾರ, ಗೋಪಾಲ್ ಮಡಿವಾಳರ, ಶ್ರೀನಿವಾಸ್ ಭೈರೋಜಿಯವರ್, ದೇವರಾಜ್ ನಾಗಣ್ಣನವರ್ ಇದ್ದರು.