ಗದಗ: ಕರ್ನಾಟಕ ಉಚ್ಛ ನ್ಯಾಯಾಲಯ ಹಾಗೂ ಆಡಳಿತಾತ್ಮಕ ನ್ಯಾಯಾಧೀಶರಾದ ನ್ಯಾ.ಮೂ. ಜಿ. ಬಸವರಾಜ ಅವರು ಶನಿವಾರ ಲಕ್ಕುಂಡಿಯಲ್ಲಿ ವಸ್ತು ಸಂಗ್ರಹಾಲಯ, ಜೈನ್ ಬಸದಿ, ಕೋಟೆ ವೀರಭದ್ರೇಶ್ವರ ದೇವಸ್ಥಾನ ಹಾಗೂ ಉತ್ಖನನದ ಸ್ಥಳಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಗದಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ನಾಗವೇಣಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಜಿ. ಕಲ್ಲೂರ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಡಾ. ಶರಣು ಗೋಗೇರಿ, ಸಮಿತಿ ಸದಸ್ಯರಾದ ಅ.ದ. ಕಟ್ಟಿಮನಿ, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಸಮಾವೇಶದ ಯಶಸ್ಸಿಗೆ ಇಲಾಖೆಗಳ ಸಹಕಾರ ಅಗತ್ಯ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್
ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಗದಗ ಜಿಲ್ಲಾ ಮಟ್ಟದ ಸಮಾವೇಶ ಕಾರ್ಯಕ್ರಮವನ್ನು ಫೆಬ್ರವರಿ 18ರಂದು ನಗರದ ವಿವೇಕಾನಂದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಮಾವೇಶವನ್ನು ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ನಿರ್ವಹಿಸಿ ಯಶಸ್ವಿಗೊಳಿಸಲು ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಪಂಚ ಗ್ಯಾರಂಟಿ ಯೋಜನೆಗಳ ಗದಗ ಜಿಲ್ಲಾ ಮಟ್ಟದ ಸಮಾವೇಶ ಏರ್ಪಡಿಸುವ ಕುರಿತು ಜರುಗಿದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮವು ಅರ್ಥಪೂರ್ಣವಾಗಿ ಜರುಗಲು ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಆಯಾ ಸಮಿತಿಯ ಅಧಿಕಾರಿಗಳು ತಮಗೆ ವಹಿಸಿದ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಕಾರ್ಯಕ್ರಮದ ಸ್ಥಳವು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಶಿಷ್ಟಾಚಾರದನ್ವಯ ಆಮಂತ್ರಣ ಪತ್ರಿಕೆ ಮುದ್ರಣಕ್ಕೆ ಕ್ರಮ ವಹಿಸಬೇಕು. ಕಾರ್ಯಕ್ರಮದ ಸ್ಥಳದಲ್ಲಿ ಸೂಕ್ತ ಆಸನದ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಇರುವಂತೆ ನೋಡಿಕೊಳ್ಳಬೇಕು. ಪಂಚ ಗ್ಯಾರಂಟಿ ಯೋಜನೆಗಳ ಹಾಗೂ ವಿವಿಧ ಇಲಾಖೆಗಳ ಯೋಜನೆಗಳ ಕುರಿತು ಬಿಂಬಿಸುವ ಮಳಿಗೆಗಳನ್ನು (ಸ್ಟಾಲ್‌ಗಳನ್ನು) ನಿರ್ಮಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ನಿರ್ದೇಶನ ನೀಡಿದರು.
ಸಭೆಯಲ್ಲಿ ಬ್ಯಾನರ್‌ಗಳ ಅಳವಡಿಕೆ, ಕಲಾ ತಂಡಗಳ ಆಯ್ಕೆ, ಊಟ-ಉಪಹಾರದ ವ್ಯವಸ್ಥೆ, ಸೂಕ್ತ ಬಂದೋಬಸ್ತ್, ತುರ್ತು ವೈದ್ಯಕೀಯ ಸೇವೆ, ಫಲಾನುಭವಿಗಳ ಯಶೋಗಾಥೆ, ಸಾರಿಗೆ ವ್ಯವಸ್ಥೆ, ಎಲ್.ಇ.ಡಿ ಅಳವಡಿಕೆ, ವೇದಿಕೆ ವ್ಯವಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮ ಕುರಿತಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ ಯೋಜನಾ ನಿರ್ದೇಶಕ ಎಂ.ವಿ. ಚಳಗೇರಿ, ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ, ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ ಮಲ್ಲೂರ ಬಸವರಾಜ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಮಾತನಾಡಿ, ಸಮಾವೇಶ ಕಾರ್ಯಕ್ರಮವು ಯಾವುದೇ ಲೋಪದೋಷಗಳಿಲ್ಲದಂತೆ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಜರುಗುವಂತೆ ನೋಡಿಕೊಳ್ಳಬೇಕು ಎಂದರು.
ಅಂಡರ್ 19ನಲ್ಲಿ ಶ್ರೀಲಂಕಾ ಕ್ಲಬ್ ತಂಡ ಜೊತೆಗೆ ಆಡಿ ಸೈ ಎನ್ನಿಸಿದ ಗದುಗಿನ ಶಶಾಂಕ ಮೆಣಸಿನಕಾಯಿ
ಗದುಗಿನ 17 ವರ್ಷದ ಹುಡುಗ ಈಗ ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಹಲವು ಪಂದ್ಯಗಳನ್ನು ಆಡಿದ ನಂತರ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದಾರೆ. ಗದಗ ಪಟ್ಟಣದ ಶಶಾಂಕ್ ಮೆಣಸಿನಕಾಯಿ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಮತ್ತು 19 ವರ್ಷದೊಳಗಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ ಮತ್ತು ಇದುವರೆಗೆ ಆಡಿದ ಪಂದ್ಯಗಳಲ್ಲಿನ ಸ್ಕೋರ್ ಅಂಕಿ-ಅಂಶಗಳು ಅವರಿಗೆ ಭರವಸೆಯ ಎಲ್ಲಾ ಅವಕಾಶಗಳಿವೆ ಎಂದು ಸಾರಿ ಹೇಳುತ್ತವೆ.
ಅವರು ಬೆಂಗಳೂರಿನ ರೈಸಿಂಗ್ ಸ್ಟಾರ್ ಕ್ರಿಕೆಟ್ ಅಕಾಡೆಮಿಯ ತಂಡದಲ್ಲಿದ್ದಾರೆ. ಇತ್ತೀಚೆಗೆ ಶಶಾಂಕ್ ಬೆಂಗಳೂರಿನಲ್ಲಿ ಶ್ರೀಲಂಕಾ ಕ್ಲಬ್ ತಂಡ ವಿರುದ್ಧ ಅಂಡರ್ 19 ಪಂದ್ಯವನ್ನು ಆಡಿದ್ದಾರೆ. ಅವರ ತರಬೇತುದಾರರು ಈಗ ಬೆಂಗಳೂರಿನಲ್ಲಿ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಶಶಾಂಕ್ ಓರ್ವ ಉತ್ತಮ ಬ್ಯಾಟ್ಸ್‌ಮನ್ ಮತ್ತು ಉತ್ತಮ ಫೀಲ್ಡರ್ ಕೂಡ ಹೌದು. ಅವರ ವೃತ್ತಿಜೀವನದಲ್ಲಿ ಅರ್ಧ ಶತಕ ಮತ್ತು ಹಲವಾರು ಶತಕಗಳನ್ನು ಬಾರಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ರೈಸಿಂಗ್ ಸ್ಟಾರ್ ಜೊತೆ ಆಟವಾಡಲು ಪ್ರಾರಂಭಿಸಿದ್ದಾರೆ. ಶಶಾಂಕ್ ಅವರಂಥ ಇನ್ನೂ ಹೆಚ್ಚು ಪ್ರತಿಭೆಗಳು ರಾಜ್ಯ ಮಟ್ಟದಲ್ಲಿ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿಂಚಲಿ ಎಂಬುದು ಗದಗ ಜನರ ಆಶಯ.
ಶಶಾಂಕ್ 9ನೇ ತರಗತಿಯಲ್ಲಿದ್ದಾಗ ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಬಾಲ್ಯದಲ್ಲಿ ಉತ್ತಮ ಆಟಗಾರರಾಗಿದ್ದರು. ಆದರೆ ಅವರು ಶಾಲಾ ಮಟ್ಟದ ಮತ್ತು ಸ್ನೇಹಿತರ ಮಟ್ಟದ ಪಂದ್ಯಗಳನ್ನು ಆಡುತ್ತಿದ್ದರು. ಅವರ ಕುಟುಂಬವು ಬೆಂಗಳೂರಿಗೆ ಸ್ಥಳಾಂತರಗೊಂಡ ನಂತರ ಅವರು ಪ್ರಾದೇಶಿಕ ಪಂದ್ಯಗಳಿಗೆ ಆಡಲು ಪ್ರಾರಂಭಿಸಿದರು. ಶಶಾಂಕ್ ತಮ್ಮ ಕ್ರಿಕೆಟ್ ಮೇಲಿನ ಕ್ರೇಜ್ ಬಗ್ಗೆ ಪೋಷಕರಿಗೆ ತಿಳಿಸಿ, ಅಕಾಡೆಮಿಗೆ ಸೇರಲು ಆಶಯ ವ್ಯಕ್ತಪಡಿಸಿದರು. ಪೋಷಕರು ಶೈಕ್ಷಣಿಕವಾಗಿ ಉತ್ತಮನಾಗುವ ಭರವಸೆಯೊಂದಿಗೆ ಒಪ್ಪಿಕೊಂಡರು. ಶಶಾಂಕ್ ಗದಗದಿಂದ ಶಾಸಕ ಆಕಾಂಕ್ಷಿಯಾಗಿ ಸ್ಪರ್ಧಿಸಿದ್ದ ಅನಿಲ್ ಮೆಣಸಿನಕಾಯಿ ಅವರ ಪುತ್ರ.
ಆಟದ ಬಗ್ಗೆ ಶಶಾಂಕ್ ಹೇಳಿದ್ದು ಹೀಗೆ, “ನಾನು ಚೆನ್ನಾಗಿ ಆಡಲು ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇನೆ. ಅವಕಾಶ ಸಿಕ್ಕರೆ ಖಂಡಿತವಾಗಿಯೂ ಚೆನ್ನಾಗಿ ಆಡುತ್ತೇನೆ. ನನಗೆ ಮಾರ್ಗದರ್ಶನ ನೀಡುವ ಉತ್ತಮ ತರಬೇತುದಾರ, ಪೋಷಕರು ಮತ್ತು ಬೆಂಬಲ ನೀಡುವ ಸ್ನೇಹಿತರು ಸಿಕ್ಕಿರುವುದು ನನ್ನ ಅದೃಷ್ಟ. ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ ಮತ್ತು ಪ್ರತಿದಿನ ಅಭ್ಯಾಸ ಮಾಡುತ್ತೇನೆ”.
ಶಶಾಂಕ್ ಅವರ ತರಬೇತುದಾರ ವಿದ್ಯಾಸಾಗರ್ “ಕ್ರಿಕೆಟ್ ವಿದ್ಯಾರ್ಥಿಯಾಗಿ, ಶಶಾಂಕ್ ಅತ್ಯುತ್ತಮ ಬದ್ಧತೆ ಮತ್ತು ಸ್ಥಿರತೆಯನ್ನು ತೋರಿಸುತ್ತಾನೆ. ಅವನು ಪ್ರತಿ ಅವಧಿಯನ್ನು ಗಮನದಿಂದ ಸಮೀಪಿಸುತ್ತಾನೆ, ಆಟವನ್ನು ಗೌರವಿಸುತ್ತಾನೆ. ನಿರಂತರವಾಗಿ ತನ್ನ ಕೌಶಲ್ಯಗಳನ್ನು ಸುಧಾರಿಸುವಲ್ಲಿ ಕೆಲಸ ಮಾಡುತ್ತಾನೆ. ಅವನು ಶೀಘ್ರದಲ್ಲೇ ಕೆಪಿಎಲ್‌ನಲ್ಲಿ ಆಯ್ಕೆಯಾಗುತ್ತಾನೆ ಎಂಬ ಭರವಸೆಯಿದೆ” ಎಂದಿದ್ದಾರೆ.
ತಂದೆ ಅನಿಲ್ ಮೆಣಸಿನಕಾಯಿ, “ಕ್ರಿಕೆಟ್‌ನಲ್ಲಿ ಅವನ ಆಸಕ್ತಿಯ ಬಗ್ಗೆ ನಮಗೆ ತಿಳಿದಾಗ, ನಾವು ಅವನ ಸ್ನೇಹಿತರೊಂದಿಗೆ ಚರ್ಚಿಸಿ ಉತ್ತಮ ತರಬೇತುದಾರನನ್ನು ಹುಡುಕಿ ಅಕಾಡೆಮಿಗೆ ಸೇರಲು ಹೇಳಿದೆವು. ನಂತರ ಅವನು ರೈಸಿಂಗ್ ಸ್ಟಾರ್ ಕ್ರಿಕೆಟ್ ಅಕಾಡೆಮಿಗೆ ಸೇರಿದ. ಅವನು ಇಷ್ಟು ಚೆನ್ನಾಗಿ ಆಡುತ್ತಾನೆಂದು ನಮಗೆ ತಿಳಿದಿರಲಿಲ್ಲ. ಅವನು ಶೀಘ್ರದಲ್ಲೇ ಕೆಪಿಎಲ್ ಅಥವಾ ಐಪಿಎಲ್‌ನಲ್ಲಿ ಆಯ್ಕೆಯಾಗುತ್ತಾನೆ” ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
-
ಮೌನೇಶ್ ಭಜಂತ್ರಿ, ಗದಗ.
ನಿಗಮ ಮಂಡಳಿ ಕುರ್ಚಿ ಸಚಿವ ಕನಸಿಗೆ ಶಾಂತಿಯ ಮದ್ದೇ, ರಾಜಕೀಯ ಸಮಾಧಾನವೇ?!
ರೋಣ ಶಾಸಕ ಜಿ.ಎಸ್. ಪಾಟೀಲರಿಗೆ ಮತ್ತೊಮ್ಮೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ ಸರ್ಕಾರದ ನಿರ್ಧಾರ ಗದಗ ಜಿಲ್ಲೆಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಕೆಲವರಿಗೆ ಇದು ಗೌರವದ ಹುದ್ದೆ ಎಂದು ಕಾಣಿಸಿದರೂ, ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಇದು ಸ್ಪಷ್ಟ ಸಂದೇಶವಾಗಿದೆ. ಸಚಿವ ಸ್ಥಾನಕ್ಕೆ ಬಾಗಿಲು ಮುಚ್ಚಿದಂತಾಗಿದೆ ಎಂಬ ಅಸಮಾಧಾನ, ತಿಂಗಳುಗಟ್ಟಲೆ ನಡೆದ ಹೋರಾಟ, ಮನವಿ, ಪ್ರತಿಭಟನೆಗಳ ನಡುವೆಯೇ ಬಂದ ಈ ನೇಮಕ ರಾಜಕೀಯ ಸಮಾಧಾನಕ್ಕೆ ನೀಡಿದ ಮದ್ದೇ ಹೊರತು ನಿಜವಾದ ಉತ್ತರವಲ್ಲ ಎಂಬ ಮಾತು ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿದೆ.
ಹೋರಾಟದ ಉರಿ: ರೋಣ ಮತಕ್ಷೇತ್ರದಲ್ಲಿ ನಡೆದ ಪ್ರತಿಭಟನೆಗಳು ಸಾಮಾನ್ಯ ರಾಜಕೀಯ ಪ್ರದರ್ಶನಗಳಾಗಿರಲಿಲ್ಲ. ಗಜೇಂದ್ರಗಡ ಪಟ್ಟಣದಲ್ಲಿ ಕಾರ್ಯಕರ್ತನೊಬ್ಬ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಾರ್ಯಕರ್ತರ ನೋವನ್ನು ತೀವ್ರವಾಗಿ ತೋರಿಸಿತು. ರೋಣ ನಗರದಲ್ಲಿ ನಡೆದ ರ‍್ಯಾಲಿಗಳಲ್ಲಿ ತಲೆ ಬೋಳಿಸಿಕೊಂಡು ಪ್ರತಿಭಟನೆ ನಡೆಸಿದ ಘಟನೆಗಳು ಪಕ್ಷದೊಳಗಿನ ಬೇಸರದ ಪ್ರತಿಬಿಂಬವಾಗಿದ್ದವು. ಸ್ಥಳೀಯ ಸಂಸ್ಥೆಗಳ ಕೆಲ ಜನಪ್ರತಿನಿಧಿಗಳು ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದು ಕಾರ್ಯಕರ್ತರ ನಿರಾಶೆ ಎಷ್ಟರ ಮಟ್ಟಿಗೆ ತಲುಪಿತ್ತು ಎಂಬುದನ್ನು ತೋರಿಸಿತು. ಇಷ್ಟೆಲ್ಲ ಹೋರಾಟದ ಬಳಿಕವೂ ಸಚಿವ ಸ್ಥಾನ ಸಿಗದೆ ನಿಗಮ ಮಂಡಳಿ ಹುದ್ದೆ ನೀಡಿರುವುದು ಕಾರ್ಯಕರ್ತರ ಹೃದಯಕ್ಕೆ ನೀಡಿದ ಹೊಡೆತವಾಗಿದೆ.
ಅವಕಾಶ ಕೈತಪ್ಪಿದೇಕೆ?: ಜಿ.ಎಸ್. ಪಾಟೀಲರು ಅನುಭವಸಂಪನ್ನ ರಾಜಕಾರಣಿ. ಬಡವರ, ದೀನ-ದಲಿತರ ಪರ ನಿಂತ ನಾಯಕ ಎಂಬ ಹೆಸರಿದೆ. ಸಾವಿರ ಕೆರೆಗಳ ಸರದಾರ ಎಂಬ ಜನಪ್ರಿಯ ಬಿರುದು ಕೂಡ ಅವರಿಗಿದೆ. ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿ ಹೈಕಮಾಂಡ್ ನೀಡಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ. ಪಕ್ಷಕ್ಕಾಗಿ ಹಗಲಿರುಳು ದುಡಿದಿದ್ದಾರೆ ಎಂಬ ಮಾತು ಕಾರ್ಯಕರ್ತರಲ್ಲಿ ಸಾಮಾನ್ಯ. ಇಂತಹ ನಾಯಕನಿಗೆ ಸಚಿವ ಸ್ಥಾನ ದೊರೆಯಬೇಕೆಂದು ಅಭಿಮಾನಿಗಳು ನಿರೀಕ್ಷೆ ಇಟ್ಟಿದ್ದರು. ಆದರೆ ರಾಜಕೀಯದಲ್ಲಿ ಸೇವೆ ಮಾತ್ರ ಸಾಕಾಗುವುದಿಲ್ಲ. ಒಳರಾಜಕೀಯದ ಸಮೀಕರಣಗಳು, ಪ್ರಭಾವ ಮತ್ತು ಸಮಯವೇ ಮುಖ್ಯ ಎಂಬುದನ್ನು ಈ ನೇಮಕ ಮತ್ತೆ ನೆನಪಿಸಿದೆ.
ಸಮೀಕರಣದ ನಿಜ ಮುಖ: ಗದಗ ಜಿಲ್ಲೆಯ ರಾಜಕೀಯದಲ್ಲಿ ಎಚ್.ಕೆ. ಪಾಟೀಲರ ಪ್ರಭಾವ ಎಲ್ಲರಿಗೂ ತಿಳಿದ ವಿಷಯ. ರಾಜ್ಯ ಮಟ್ಟದಲ್ಲಿ ಹಿರಿಯ ನಾಯಕತ್ವ, ಆಡಳಿತದೊಳಗಿನ ಹಿಡಿತ ಮತ್ತು ನಿರ್ಣಯಗಳಲ್ಲಿ ಅವರ ಮಾತಿನ ತೂಕ ಇವೆಲ್ಲವೂ ಜಿಲ್ಲೆಯ ರಾಜಕೀಯ ಸಮೀಕರಣಗಳನ್ನು ಬದಲಿಸುವ ಸಾಮರ್ಥ್ಯ ಹೊಂದಿವೆ. ಸಚಿವ ಸ್ಥಾನ ಹಂಚಿಕೆಯಲ್ಲಿ ಎಚ್.ಕೆ. ಪಾಟೀಲರ ಪ್ರಭಾವ ಸ್ಪಷ್ಟವಾಗಿ ಕೆಲಸ ಮಾಡಿದೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ. ರೋಣ ಕ್ಷೇತ್ರದ ಹೋರಾಟಗಳಿಗಿಂತ ಗದಗ ರಾಜಕೀಯದ ಸಮತೋಲನವೇ ಸರ್ಕಾರದ ಅಂತಿಮ ನಿರ್ಧಾರವನ್ನು ನಿರ್ಧರಿಸಿತು ಎಂಬ ಅನುಮಾನದ ಅಭಿಪ್ರಾಯ ಬಲವಾಗುತ್ತಿದೆ.
ಸಮತೋಲನದ ಹೆಸರಿನಲ್ಲಿ ಸಮಾಧಾನ: ಸರ್ಕಾರಕ್ಕೆ ಸಚಿವ ಸಂಪುಟದಲ್ಲಿ ಜಾತಿ, ಪ್ರದೇಶ, ಪಕ್ಷದ ಒಳಸಮಾಧಾನ ಎಲ್ಲವೂ ಮುಖ್ಯ. ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಸರ್ಕಾರ ನಿಗಮ ಮಂಡಳಿ ಹುದ್ದೆಗಳ ಮೂಲಕ ಸಮಾಧಾನಪಡಿಸುತ್ತದೆ. ಆದರೆ ಈ ಸಮಾಧಾನ ಕಾರ್ಯಕರ್ತರ ಮನಸ್ಸಿಗೆ ಶಾಂತಿ ತರಬಹುದೇ ಎಂಬುದು ಪ್ರಶ್ನೆ. ಹುದ್ದೆ ನೀಡಿದರೂ ನಿರೀಕ್ಷೆ ಮುರಿದ ನೋವು ಕಡಿಮೆಯಾಗುವುದಿಲ್ಲ. ಸರ್ಕಾರಕ್ಕೆ ಇದು ರಾಜಕೀಯ ಸಮತೋಲನವಾಗಬಹುದು, ಆದರೆ ಕ್ಷೇತ್ರದ ಮಟ್ಟದಲ್ಲಿ ಇದು ಅಸಮಾಧಾನದ ಬೀಜವಾಗುವ ಸಾಧ್ಯತೆ ಇದೆ.
ಶಾಸಕರಿಗೆ ಆತ್ಮಪರಿಶೀಲನೆಯ ಸಮಯ: ಜಿ.ಎಸ್. ಪಾಟೀಲರಿಗೂ ಇದು ಮಹತ್ವದ ಕ್ಷಣ. ತಮ್ಮ ಬೆಂಬಲಿಗರ ಹೋರಾಟದ ನಡುವೆಯೂ ಸಚಿವ ಸ್ಥಾನ ಸಿಗದಿದ್ದರೆ ನಾಯಕತ್ವದ ಒಳಗಿನ ಮಾತುಕತೆಗಳಲ್ಲಿ ಎಲ್ಲಿ ಕೊರತೆ ಉಂಟಾಯಿತು ಎಂಬುದನ್ನು ಪರಿಶೀಲಿಸಬೇಕಾಗಿದೆ. ನಿಗಮ ಮಂಡಳಿ ಹುದ್ದೆಯನ್ನು ಕೇವಲ ಸಮಾಧಾನ ಹುದ್ದೆಯಾಗಿ ನೋಡುವುದೇ ಅಥವಾ ಅದನ್ನೇ ಪರಿಣಾಮಕಾರಿ ಕಾರ್ಯದ ಮೂಲಕ ತಮ್ಮ ರಾಜಕೀಯ ಬಲವಾಗಿ ರೂಪಿಸಿಕೊಳ್ಳುವುದೇ? ಎಂಬುದೇ ಮುಂದಿನ ಸವಾಲು. ಹುದ್ದೆಯನ್ನು ಸಾಧನೆಯ ವೇದಿಕೆಯಾಗಿಸಿದರೆ ಭವಿಷ್ಯದಲ್ಲಿ ಮತ್ತೆ ಅವಕಾಶ ಸಿಗಬಹುದು.
ಕಾರ್ಯಕರ್ತರಿಗೆ ಕಠಿಣ ಪಾಠ: ಭಾವನಾತ್ಮಕ ಪ್ರತಿಭಟನೆಗಳು ರಾಜಕೀಯದಲ್ಲಿ ಶಾಶ್ವತ ಫಲ ನೀಡುವುದಿಲ್ಲ. ತಲೆ ಮುಂಡಿಸುವುದು, ಆತ್ಮಹತ್ಯೆ ಯತ್ನ ಇವೆಲ್ಲವೂ ಸುದ್ದಿಯ ವಿಷಯವಾಗಬಹುದು. ಆದರೆ ನಿರ್ಧಾರಗಳ ಮೇಲೆ ಶಾಶ್ವತ ಪ್ರಭಾವ ಬೀರುವುದಿಲ್ಲ. ಪಕ್ಷದೊಳಗಿನ ಸಂಘಟನೆ ಬಲಪಡಿಸುವುದು, ತಂತ್ರಜ್ಞಾನಪೂರಿತ ಹೋರಾಟ, ನಾಯಕತ್ವದೊಂದಿಗೆ ನಿರಂತರ ಸಂವಾದ ಇವೆಲ್ಲ ಪರಿಣಾಮಕಾರಿ ಮಾರ್ಗಗಳು. ಇಲ್ಲದಿದ್ದರೆ ಕಾರ್ಯಕರ್ತರ ನೋವು ಕೇವಲ ರಾಜಕೀಯ ಸುದ್ದಿಯಾಗಿ ಉಳಿಯುತ್ತದೆ.
ಕುರ್ಚಿಗಿಂತ ಪ್ರಭಾವ ಮುಖ್ಯ: ಈ ನೇಮಕ ಸರ್ಕಾರದ ರಾಜಕೀಯ ಲೆಕ್ಕಾಚಾರದ ಸ್ಪಷ್ಟ ಉದಾಹರಣೆ. ಜಿ.ಎಸ್. ಪಾಟೀಲರ ಸೇವೆಯನ್ನು ಗೌರವಿಸುವ ಹೆಸರಿನಲ್ಲಿ ನೀಡಿದ ಹುದ್ದೆ. ಆದರೆ, ಸಚಿವ ಸ್ಥಾನಕ್ಕೆ ಹಾಕಿದ ಅಂತರದ ಗಡಿ ಎಂಬ ಸಂದೇಶವೂ ಇದೆ. ಗದಗ ಜಿಲ್ಲೆಯ ರಾಜಕೀಯದಲ್ಲಿ ಎಚ್.ಕೆ. ಪಾಟೀಲರ ಪ್ರಭಾವ ಮತ್ತೊಮ್ಮೆ ಗೋಚರಿಸಿದೆ. ಈಗ ಜಿ.ಎಸ್. ಪಾಟೀಲರು ಈ ಹುದ್ದೆಯನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದೇ ಮುಖ್ಯ. ಸರ್ಕಾರದ ಶಾಂತಿ ಮದ್ದನ್ನು ಒಪ್ಪಿಕೊಂಡು ಮೌನವಾಗುತ್ತಾರಾ ಅಥವಾ ತಮ್ಮ ಕಾರ್ಯದ ಮೂಲಕ ಮತ್ತೆ ಸಚಿವ ಸ್ಥಾನಕ್ಕಾಗಿ ರಾಜಕೀಯ ನೆಲೆ ನಿರ್ಮಿಸುತ್ತಾರಾ? ಎಂಬುದನ್ನು ಜಿಲ್ಲೆಯ ಜನ ಗಮನದಿಂದ ನೋಡುತ್ತಿದ್ದಾರೆ. ರಾಜಕೀಯದಲ್ಲಿ ಕುರ್ಚಿ ಸಿಗುವುದು ಒಂದು ಹಂತ. ಆದರೆ ಪ್ರಭಾವ ಕಟ್ಟುವುದು ನಾಯಕನ ಕೈಯಲ್ಲೇ ಇದೆ ಎಂಬುದು ರಾಜಕೀಯ ವಿಶ್ಲೇಷಕರ ಮಾತು.
-
ಸಿಕಂದರ ಎಂ. ಆರಿ.
ಪತ್ರಕರ್ತರು.
BCCI Contracts: ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ 21 ಆಟಗಾರ್ತಿಯರಿಗೆ ಕೇಂದ್ರ ಒಪ್ಪಂದ!
ಬಿಸಿಸಿಐ ಶೀಘ್ರದಲ್ಲೇ ಭಾರತೀಯ ಪುರುಷರ ಮತ್ತು ಮಹಿಳೆಯರ ಕ್ರಿಕೆಟ್ ತಂಡದ ಹೊಸ ಕೇಂದ್ರ ಒಪ್ಪಂದವನ್ನು ಪ್ರಕಟಿಸಲು ತಯಾರಾಗಿದ್ದು, ಈ ಬಾರಿ ಮಹಿಳಾ ತಂಡದಲ್ಲಿ ಒಟ್ಟು 21 ಆಟಗಾರ್ತಿಯರಿಗೆ ಕೇಂದ್ರ ಒಪ್ಪಂದ ದೊರೆಯಲಿದೆ.
ಹಿಂದೆ 16 ಆಟಗಾರ್ತಿಯರಿದ್ದರು, ಆದರೆ ಈಗ ಅವಕಾಶಗಳನ್ನು ಹೆಚ್ಚಿಸಲಾಗಿದೆ. ನಾಯಕಿ ಹರ್ಮನ್‌ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂಧಾನ ಮತ್ತು ಆಲ್‌ರೌಂಡರ್ ದೀಪ್ತಿ ಶರ್ಮಾ ಇನ್ನುಜೆಮಿಮಾ ರೋಡ್ರಿಗಸ್ ಅವರಿಗೆ ಎ ಗ್ರೇಡ್‌ನೊಂದಿಗೆ ವಾರ್ಷಿಕ 50 ಲಕ್ಷ ರೂಪಾಯಿ ವೇತನ ನೀಡಲಾಗಿದೆ.
ರೇಣುಕಾ ಠಾಕೂರ್, ಶೆಫಾಲಿ ವರ್ಮಾ, ರಿಚಾ ಘೋಷ್ ಮತ್ತು ಸ್ನೇಹ ರಾಣಾ ಬಿ ಗ್ರೇಡ್‌ನಲ್ಲಿ 30 ಲಕ್ಷ ರೂ. ಪಡೆಯುತ್ತಾರೆ. ಗ್ರೇಡ್ C ಯಲ್ಲಿ 13 ಆಟಗಾರ್ತಿಗಳು ಸೇರಿದ್ದಾರೆ, ಇವರಿಗೆ ವಾರ್ಷಿಕ 10 ಲಕ್ಷ ರೂ. ವೇತನ ನೀಡಲಾಗುತ್ತದೆ. ಈ ಗ್ರೇಡ್‌ನಲ್ಲಿ ಪ್ರತೀಕಾ ರಾವಲ್, ಕ್ರಾಂತಿ ಗೌಡ್, ಶ್ರೀ ಚರಣಿ, ಕಶ್ವಿ ಗೌತಮ್, ಜಿ. ಕಮಲಿನಿ, ವೈಷ್ಣವಿ ಶರ್ಮಾ ಮತ್ತು ತೇಜಲ್ ಮೊದಲ ಬಾರಿಗೆ ಒಪ್ಪಂದ ಪಡೆದಿದ್ದಾರೆ, ಆದರೆ ಪೂಜಾ ವಸ್ತ್ರಾಕರ್, ಶ್ರೇಯಾಂಕಾ ಪಾಟೀಲ್ ಮತ್ತು ಟಿಟಾಸ್ ಸಾಧು ಕೇಂದ್ರ ಒಪ್ಪಂದದಿಂದ ಹೊರಗುಳುಯುತ್ತಿದ್ದಾರೆ.
ಕೇಂದ್ರ ಒಪ್ಪಂದದ ಜೊತೆಗೆ ಆಟಗಾರ್ತಿಯರಿಗೆ ಪಂದ್ಯಗಳ ಶುಲ್ಕವೂ ನೀಡಲಾಗುತ್ತದೆ: ಟೆಸ್ಟ್‌ಗಾಗಿ 15 ಲಕ್ಷ, ಏಕದಿನಕ್ಕೆ 6 ಲಕ್ಷ ಮತ್ತು ಟಿ20ಕ್ಕೆ 3 ಲಕ್ಷ ರೂ.ರೂಪಾಯಿ ವೇತನ ಪಡೆಯುತ್ತಾರೆ.
ಮೆಟ್ರೋ ದರ ಏರಿಕೆ ರಾಜ್ಯ ಸರ್ಕಾರದ ತೀರ್ಮಾನ, ಕೇಂದ್ರದ ಮೇಲೆ ಆರೋಪ ಸರಿಯಲ್ಲ: ತೇಜಸ್ವಿ ಸೂರ್ಯ!
ಬೆಂಗಳೂರು: ಮೆಟ್ರೋ ಟಿಕೆಟ್ ದರ ಏರಿಕೆ ರಾಜ್ಯ ಸರ್ಕಾರದ ತೀರ್ಮಾನವೇ ಹೊರತು ಕೇಂದ್ರ ಸರ್ಕಾರದ್ದಲ್ಲ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವೇ ಪದೇಪದೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಫೇರ್ ಫಿಕ್ಸ್ ಕಮಿಟಿ ರಚನೆಗೆ ಒತ್ತಾಯಿಸಿದೆ. ಅದರಂತೆ ಕೇಂದ್ರ ಸರ್ಕಾರ ಸಮಿತಿಯನ್ನು ರಚಿಸಿದೆ. ಈಗ ಆ ಸಮಿತಿಯೇ ದರ ಏರಿಕೆ ಮಾಡಿದ್ದು, ಇದಕ್ಕೂ ಕೇಂದ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಮೆಟ್ರೋ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಒಪ್ಪಂದ ಇದೆ. ರಾಜ್ಯ ಸರ್ಕಾರದ ಒತ್ತಾಯದ ಮೇರೆಗೆ ದರ ಏರಿಕೆ ಆಗಿದೆ. ಆದರೆ ಇದೀಗ ಕೇಂದ್ರದ ಮೇಲೆ ಆರೋಪ ಮಾಡಿ ಸಿಎಂ ಹಾಗೂ ಡಿಸಿಎಂ ನಿತ್ಯ ರಾಜಕೀಯ ಡ್ರಾಮಾ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ರಾಜ್ಯ ಸರ್ಕಾರ ದಿವಾಳಿ ಸ್ಥಿತಿಗೆ ತಲುಪಿದ್ದು, ಅದರ ಹೊರೆ ಜನರ ಮೇಲೆ ಹಾಕುತ್ತಿದೆ. ದರ ಏರಿಕೆಯಿಂದ ಬಡವರು ಮೆಟ್ರೋ ಪ್ರಯಾಣ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸೋಮವಾರದಿಂದ ಜಾರಿಯಾಗಲಿರುವ ಮೆಟ್ರೋ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಈ ಸಂಬಂಧ ಫೆಬ್ರವರಿ 8ರಂದು ಹೋರಾಟ ನಡೆಸುವುದಾಗಿ ತಿಳಿಸಿದರು.
ಕೇಂದ್ರದ ಸಚಿವರಿಗೆ ಈ ಬಗ್ಗೆ ಮನವಿ ಮಾಡಲಾಗಿದೆ. ರಾಜ್ಯ ಸರ್ಕಾರ ಫೇರ್ ಫಿಕ್ಸ್ ಕಮಿಟಿಗೆ ಸಂಬಂಧಿಸಿದಂತೆ ಪತ್ರ ಬರೆದರೆ ಅದನ್ನು ತಾತ್ಕಾಲಿಕವಾಗಿ ಹೋಲ್ಡ್‌ನಲ್ಲಿ ಇಡಬೇಕು. ರಾಜ್ಯ ಸರ್ಕಾರ ಹೊಸ ಸಮಿತಿ ಬೇಕೆಂದು ಪತ್ರ ಬರೆದರೆ ತಕ್ಷಣವೇ ಹೊಸ ಫೇರ್ ಫಿಕ್ಸ್ ಕಮಿಟಿ ರಚಿಸಬೇಕು ಎಂದು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದು, ಅದಕ್ಕೆ ಅವರು ಸಮ್ಮತಿಸಿದ್ದಾರೆ ಎಂದರು. ದರ ಏರಿಕೆ ವಿರುದ್ಧ ಕೇಂದ್ರ ಸರ್ಕಾರ ಸುಮೋಟೋ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ರಾಜ್ಯ–ಕೇಂದ್ರ ನಡುವೆ ಇರುವ MOU ಕಾರಣದಿಂದ ಏಕಪಕ್ಷೀಯ ನಿರ್ಧಾರ ಸಾಧ್ಯವಿಲ್ಲ. ಆದರೆ ಸಿಎಂ ಹಾಗೂ ಡಿಸಿಎಂ ಮೀಡಿಯಾದಲ್ಲಿ ನಿತ್ಯ ಸುಳ್ಳು ಹೇಳುತ್ತಿದ್ದಾರೆ. ಅವರಿಗೆ ನಾಚಿಕೆ ಇಲ್ಲವೇ ಎಂದು ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಜನರು ಸಿಎಂ ಮತ್ತು ಡಿಸಿಎಂ ಮೇಲೆ ಒತ್ತಡ ಹಾಕಬೇಕು. ಹೊಸ ಫೇರ್ ಫಿಕ್ಸ್ ಕಮಿಟಿ ರಚನೆಗಾಗಿ ಕೇಂದ್ರಕ್ಕೆ ಪತ್ರ ಬರೆಯುವಂತೆ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಸಾರ್ವಜನಿಕರಿಗೆ ಕರೆ ನೀಡಿದರು. ಸಂಸದನಾಗಿ ತಾವು ಕೇಂದ್ರದ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ, ಮೆಟ್ರೋ ಮುಂದೆ ಪ್ರತಿಭಟನೆ ಮಾಡಿದ್ದೇನೆ, ಡಿಸಿಎಂರನ್ನು ಭೇಟಿ ಮಾಡಿ ದರ ಕಡಿಮೆ ಮಾಡುವಂತೆ ಮನವಿ ಮಾಡಿದ್ದೇನೆ, ಕೋರ್ಟ್‌ನಲ್ಲೂ ಹೋರಾಟ ನಡೆಸಿದ್ದೇನೆ ಎಂದು ತಿಳಿಸಿದರು.
ಎಲ್ಲವೂ ಕೋರ್ಟ್‌ನಿಂದಲೇ ಆಗುವುದಿಲ್ಲ. ರಾಜ್ಯ ಸರ್ಕಾರ ಮೊದಲು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ತಕ್ಷಣವೇ ಹೊಸ ಫೇರ್ ಫಿಕ್ಸ್ ಕಮಿಟಿ ರಚನೆಗೆ ಸಿಎಂ ಮತ್ತು ಡಿಸಿಎಂ ಕೇಂದ್ರಕ್ಕೆ ಪತ್ರ ಬರೆಯಬೇಕು ಎಂದು ಆಗ್ರಹಿಸಿದರು.
ಅಳಿಯನ ಕೊಲೆಯ ಪಶ್ಚಾತ್ತಾಪ, ದೇವಾಲಯಗಳ ಸುತ್ತಾಟ, ಕೊನೆಗೆ ಸಾಮೂಹಿಕ ಆತ್ಮಹತ್ಯೆ
ಬೆಂಗಳೂರು: ಫ್ರೀಫೈರ್ ಗೇಮ್ ವ್ಯಸನದಿಂದ ಆರಂಭವಾದ ಒಂದು ಕೊಲೆ ಪ್ರಕರಣ, ಇಡೀ ಕುಟುಂಬದ ಅಂತ್ಯಕ್ಕೆ ಕಾರಣವಾದ ಘಟನೆ ಸೋಲದೇವನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಅಕ್ಕನ ಮಗ ಅಮೋಘಕೀರ್ತಿಯನ್ನು ಕೊಲೆ ಮಾಡಿದ್ದ ಮಾವ ನಾಗಪ್ರಸಾದ್ ಸೇರಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವುದು ನಗರವನ್ನೇ ಬೆಚ್ಚಿಬೀಳಿಸಿದೆ.
ಅಮೋಘಕೀರ್ತಿಯ ಸಾವಿನ ಬಳಿಕ ಕುಟುಂಬ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿತ್ತು. ಕೊಲೆಯ ಪಾಪ ಪರಿಹಾರಕ್ಕಾಗಿ ದೇವಾಲಯಗಳಿಗೆ ಭೇಟಿ, ತೀರ್ಥಯಾತ್ರೆಗಳು ನಡೆಸುತ್ತಿದ್ದ ಕುಟುಂಬ, ಕೊನೆಗೆ ಬಿಹಾರದ ಪ್ರವಾಸದ ವೇಳೆ ಒಟ್ಟಿಗೆ ಸಾವಿನ ದಾರಿ ಹಿಡಿದಿದೆ ಎನ್ನಲಾಗಿದೆ. ಮೃತರ ಬಳಿ ನಿದ್ದೆ ಮಾತ್ರೆಗಳು ಪತ್ತೆಯಾಗಿದ್ದು, ಓವರ್ ಡೋಸ್‌ನಿಂದ ಸಾವಾಗಿರುವ ಶಂಕೆ ವ್ಯಕ್ತವಾಗಿದೆ.
ನಾಗಪ್ರಸಾದ್, ತಾಯಿ ಸುಮಂಗಲಾ (78), ಸಹೋದರಿ ಶಿಲ್ಪಾ (48) ಮತ್ತು ಶ್ರುತಾ (43) ಮೃತಪಟ್ಟಿದ್ದಾರೆ. ಈ ದುರಂತದ ಮೂಲ ಆಗಸ್ಟ್ 8ರಂದು ನಡೆದ ಅಮೋಘಕೀರ್ತಿಯ ಕೊಲೆ ಪ್ರಕರಣ. ಫ್ರೀಫೈರ್ ಗೇಮ್‌ಗೆ ಅಡಿಕ್ಟ್ ಆಗಿದ್ದ ಬಾಲಕ ಹಣಕ್ಕಾಗಿ ಪದೇ ಪದೇ ಕಿರುಕುಳ ನೀಡುತ್ತಿದ್ದ. ಹಲ್ಲೆಗೂ ಮುಂದಾದ ಹಿನ್ನೆಲೆಯಲ್ಲಿ ನಾಗಪ್ರಸಾದ್ ಅತಿರೇಕದ ಹೆಜ್ಜೆ ಇಟ್ಟು ಬಾಲಕನನ್ನು ಕೊಲೆ ಮಾಡಿದ್ದ.
ಕೊಲೆ ಬಳಿಕ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ನಾಗಪ್ರಸಾದ್, ನಂತರ ಸೋಲದೇವನಹಳ್ಳಿ ಠಾಣೆಗೆ ಶರಣಾಗಿ ಜೈಲು ಸೇರಿದ್ದ. ಕೆಲ ದಿನಗಳ ಬಳಿಕ ಬೇಲ್ ಪಡೆದು ಹೊರಬಂದ ಆತ ಕುಟುಂಬದೊಂದಿಗೆ ಬಿಹಾರ ಪ್ರವಾಸ ಕೈಗೊಂಡಿದ್ದ. ಇದೀಗ ಇಡೀ ಕುಟುಂಬ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಪ್ರಶ್ನೆಗಳನ್ನು ಎತ್ತಿದೆ.
ಗೇಮಿಂಗ್ ವ್ಯಸನ, ಮಾನಸಿಕ ಅಪರಾಧ ಭಾರ, ಕುಟುಂಬದ ಒತ್ತಡ ಸೇರಿ ಸಂಭವಿಸಿದ ಈ ದುರಂತವು ಸಮಾಜಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಗಾಳಿ ಸ್ವಲ್ಪ ಹಸಿರಾಯ್ತು, ಕರಾವಳಿಯಲ್ಲಿ ಆತಂಕ: ಮಂಗಳೂರು–ಉಡುಪಿಯಲ್ಲಿ AQI ಭಾರೀ ಕುಸಿತ
ಬೆಂಗಳೂರು: ಕಳೆದ ಕೆಲವು ದಿನಗಳಿಂದ ತೀವ್ರ ಕಳಪೆ ಮಟ್ಟಕ್ಕೆ ಕುಸಿದಿದ್ದ ಬೆಂಗಳೂರಿನ ವಾಯು ಗುಣಮಟ್ಟದಲ್ಲಿ ಸದ್ಯಕ್ಕೆ ಸ್ವಲ್ಪ ಮಟ್ಟಿನ ಸುಧಾರಣೆ ಕಂಡುಬಂದಿದೆ. ನಿನ್ನೆಯೂ ತಕ್ಕಮಟ್ಟಿಗೆ ಉತ್ತಮಗೊಂಡಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು ಮತ್ತಷ್ಟು ಎಚ್ಚೆತ್ತುಕೊಂಡಿದ್ದು, ನಗರದ Air Quality Index (AQI) 127ಕ್ಕೆ ತಲುಪಿದೆ.
ಆದರೆ ಇದೇ ಸಮಯದಲ್ಲಿ ರಾಜ್ಯದ ಕರಾವಳಿ ನಗರಗಳಾದ ಮಂಗಳೂರು ಮತ್ತು ಉಡುಪಿಯಲ್ಲಿ ವಾಯು ಗುಣಮಟ್ಟ ಆತಂಕಕಾರಿ ರೀತಿಯಲ್ಲಿ ಹದಗೆಡುತ್ತಿದೆ. ಕೆಲ ದಿನಗಳ ಹಿಂದೆ 100ರ ಆಸುಪಾಸಿನಲ್ಲಿ ಇದ್ದ ಮಂಗಳೂರಿನ AQI ಇಂದು 173ಕ್ಕೆ ತಲುಪಿದ್ದು, ಉಡುಪಿಯ AQI 172 ದಾಖಲಾಗಿದೆ. ದಿನದಿಂದ ದಿನಕ್ಕೆ ಈ ನಗರಗಳಲ್ಲಿ ಗಾಳಿಯ ಗುಣಮಟ್ಟ ಕುಸಿಯುತ್ತಿರುವುದು ತಜ್ಞರಲ್ಲಿ ಚಿಂತೆ ಮೂಡಿಸಿದೆ.
WHO ಮಾನದಂಡಗಳ ಪ್ರಕಾರ, ಬೆಂಗಳೂರಿನ AQI 127 ಮಟ್ಟವೂ ಆರೋಗ್ಯಕ್ಕೆ ಹಾನಿಕರವೇ ಆಗಿದೆ. ಇನ್ನು ಮಂಗಳೂರು, ಉಡುಪಿ ಸೇರಿದಂತೆ ಹಲವೆಡೆ AQI 150ರ ಗಡಿ ದಾಟಿರುವುದು ‘ಅನಾರೋಗ್ಯಕರ’ ವಲಯಕ್ಕೆ ಸೇರಿದೆ. ಈ ಸ್ಥಿತಿ ಮುಂದುವರೆದರೆ ದೆಹಲಿಯಂತಹ ತೀವ್ರ ವಾಯು ಮಾಲಿನ್ಯ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ.
ಕಲುಷಿತ ಗಾಳಿಯಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಉಸಿರಾಟ ಸಮಸ್ಯೆ ಇರುವವರು ಮುನ್ನೆಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿತನಾಗಿದ್ದ ಶಂಕಿತ ಉಗ್ರನ ಸಾವು
ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿತನಾಗಿದ್ದ ಶಂಕಿತ ಭಯೋತ್ಪಾದಕನೊಬ್ಬ ಅನಾರೋಗ್ಯದ ಕಾರಣ ಮೃತಪಟ್ಟಿರುವ ಘಟನೆ ನಡೆದಿದೆ. ಸುದ್ದಗುಂಟೆಪಾಳ್ಯ ಸ್ಫೋಟಕ ವಸ್ತು ಸಂಗ್ರಹ ಪ್ರಕರಣದಲ್ಲಿ ಬಂಧಿತನಾಗಿದ್ದ ಸಾಧಿಕ್ ಪಾಷಾ (47) ನಿನ್ನೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಕಳೆದ ಆರು ತಿಂಗಳಿಂದ ಲೋ ಬಿಪಿ, ಹೈ ಶುಗರ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಸಾಧಿಕ್ ಪಾಷಾರ ಆರೋಗ್ಯದಲ್ಲಿ ಇತ್ತೀಚೆಗೆ ತೀವ್ರ ಹಿನ್ನಡೆ ಉಂಟಾಗಿತ್ತು. ಈ ಹಿನ್ನೆಲೆ ಜೈಲು ಅಧಿಕಾರಿಗಳು ಅವರನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ 06ರ ಮಧ್ಯರಾತ್ರಿ ಸಾಧಿಕ್ ಪಾಷಾ ಕೊನೆಯುಸಿರು ಎಳೆದಿದ್ದಾನೆ.
ಸಾಧಿಕ್ ಪಾಷಾ 2020ರಲ್ಲಿ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಸ್ಫೋಟಕ ವಸ್ತು ಸಂಗ್ರಹ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯಿಂದ ಬಂಧಿತನಾಗಿದ್ದ. ಈ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳನ್ನು ಎನ್‌ಐಎ ಬಂಧಿಸಿತ್ತು. ಆಗಿನಿಂದಲೂ ಸಾಧಿಕ್ ಪಾಷಾ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿಯೇ ನ್ಯಾಯಾಂಗ ಬಂಧನದಲ್ಲಿದ್ದ.
ಸದ್ಯ ಸಾಧಿಕ್ ಪಾಷಾ ಸಾವಿನ ಕುರಿತು ಜೈಲು ಹಾಗೂ ವಿಕ್ಟೋರಿಯಾ ಆಸ್ಪತ್ರೆ ಅಧಿಕಾರಿಗಳು ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ. ಸಾವಿನ ಕುರಿತು ಮುಂದಿನ ತನಿಖೆ ನಡೆಯುತ್ತಿದೆ.

