Home Blog Page 34

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿ.ಕೆ. ಶಿವಕುಮಾರ್

ಬಾಗಲಕೋಟೆ: ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದಾದ ಯುಕೆಪಿ 3ನೇ ಹಂತಕ್ಕೆ ತಕರಾರು ಎತ್ತಿರುವ ಹಾಗೂ ತುಂಗಭದ್ರಾ ಅಣೆಕಟ್ಟಿನ ನೀರು ಪೋಲು ತಡೆಯಲು ಸಹಕಾರ ನೀಡದಿರುವ ಆಂಧ್ರ ಪ್ರದೇಶದ ನಡೆ ವಿರುದ್ಧ ಧ್ವನಿ ಎತ್ತಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಹಿನ್ನೆಲೆಯಲ್ಲಿ ರಾಜ್ಯದ ಸಂಸದರ ಜತೆ ದೆಹಲಿಯ ಕರ್ನಾಟಕ ಭವನದಲ್ಲಿ ಬರುವ ಮಂಗಳವಾರ ಸಭೆ ನಡೆಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಬಾಗಲಕೋಟೆಯಲ್ಲಿ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು. ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನ ಹಾಗೂ ಭೂಸ್ವಾಧೀನ ಪ್ರಕ್ರಿಯೆ ಮಾಡಬಾರದು ಎಂದು ಆಂಧ್ರ ಪ್ರದೇಶದವರು ಕೇಂದ್ರ ಸರ್ಕಾರಕ್ಕೆ ಆಕ್ಷೇಪಣಾ ಪತ್ರ ಬರೆದಿದ್ದು,

ಈ ವಿಚಾರವಾಗಿ ಕೇಂದ್ರ ಸರ್ಕಾರ ನಮಗೆ ಪತ್ರ ಬರೆದು ಸ್ಪಷ್ಟನೆ ಕೇಳಿದೆ. ನ್ಯಾಯಾಧೀಕರಣ ಆದೇಶದ ಪ್ರಕಾರ ನಮ್ಮ ಪಾಲಿನ ನೀರಿನ ಬಳಕೆಗೆ ಯೋಜನೆ ಮಾಡುತ್ತಿದ್ದು, ಈಗಾಗಲೇ 26 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಆರಂಭಿಸಿದ್ದೇವೆ” ಎಂದು ಡಿಸಿಎಂ ಅವರು ವಿವರಿಸಿದರು.

“ನಾವು ಈಗಲೇ ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳ ಮಾಡುತ್ತಿಲ್ಲ. 2010 ರಲ್ಲಿ ಆಗಿರುವ ಆದೇಶದ ಅನುಸಾರ ನಮ್ಮ ಪಾಲಿನ ನೀರು ಬಳಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಇದಕ್ಕೆ ಆಂಧ್ರ ಪ್ರದೇಶ ಸರ್ಕಾರ ತಗಾದೆ ತೆಗೆದಿದೆ. ಇದರ ಜತೆಗೆ, ತುಂಗಭದ್ರಾ ಅಣೆಕಟ್ಟೆಯಿಂದ ನಮಗೆ 30 ಟಿಎಂಸಿ ನೀರು ವ್ಯರ್ಥವಾಗುತ್ತಿದ್ದು,

ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಲು ಆಂಧ್ರ ಸರಕಾರ ನಮಗೆ ಸಹಕಾರ ನೀಡುತ್ತಿಲ್ಲ. ಈ ಎಲ್ಲಾ ವಿಚಾರಗಳ ಬಗ್ಗೆ ನಮ್ಮ ಸಂಸದರ ಜತೆ ಚರ್ಚೆ ಮಾಡಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ನಾನು, ಸಚಿವರಾದ ಹೆಚ್.ಕೆ ಪಾಟೀಲ್, ಎಂ.ಬಿ. ಪಾಟೀಲ್, ಬೋಸರಾಜು ಅವರು ಮಂಗಳವಾರ ದೆಹಲಿಗೆ ಹೋಗುತ್ತಿದ್ದೇವೆ” ಎಂದು ತಿಳಿಸಿದರು.

ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು; ಎಚ್.ವೈ.ಮೇಟಿಯವರ ಕನಸು ನನಸು – ಸಿದ್ದರಾಮಯ್ಯ

ಬಾಗಲಕೋಟೆ: ದಿವಂಗತ ಹೆಚ್.ವೈ.ಮೇಟಿಯವರ ಪ್ರಯತ್ನ ಮತ್ತು ಆಶಯದಂತೆ ಸರ್ಕಾರಿ ವೈದ್ಯಕೀಯ ಕಾಲೇಜು ಉದ್ಘಾಟಿಸುವ ಮೂಲಕ ಅವರ ಕನಸನ್ನು ನನಸು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನುಡಿದರು. ಅವರು ಇಂದು ಬಾಗಲಕೋಟೆಯ ನವನಗರ ಹೆಲಿ ಪ್ಯಾಡ್ ನಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದರು.

ಕೃಷ್ಣಾ ಮೇಲ್ದಂಡೆ ಯೋಜನೆ: ಸಂತ್ರಸ್ತರಿಗೆ ಪರಿಹಾರ ಚೆಕ್

ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ ಯಾವುದೇ ಅನುದಾನ ಮೀಸಲಿಟ್ಟಿಲ್ಲ ಎಂದು ವಿಪಕ್ಷ ನಾಯಕರು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಣಾ ಕಾರ್ಯವನ್ನು ಇಂದಿನಿಂದ ಪ್ರಾರಂಭಿಸಲಾಗುತ್ತಿದ್ದು, ಸಂತ್ರಸ್ತರೆಲ್ಲರಿಗೂ ಮೂರು ನಾಲ್ಕು ವರ್ಷಗಳ ಅವಧಿಯಲ್ಲಿ ವಿತರಣೆ ಮಾಡಲಾಗುವುದು ಎಂದರು.

ಇ ಸ್ವತ್ತು: ಕೂಡಲೇ ಸರಿಪಡಿಸಲಾಗುವುದು

ಇ ಸ್ವತ್ತು ರಾಜ್ಯದಲ್ಲಿ ಸಮಸ್ಯೆಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಇದನ್ನು ಕೂಡಲೇ ಸರಿಪಡಿಸಲಾಗುವುದು ಎಂದರು.

ಬಿಜೆಪಿ ವೈದ್ಯಕೀಯ ಕಾಲೇಜು ಏಕೆ ಸ್ಥಾಪಿಸಲಿಲ್ಲ

ಉಪಚುನಾವಣೆ ಸಂದರ್ಭದಲ್ಲಿ ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು ಸಮಾರಂಭ ಹಾಗೂ ಛತ್ರಪತಿ ಶಿವಾಜಿ ಹಾಗೂ ಬಸವಣ್ಣ ಅವರ ಮೂರ್ತಿಗೆ ತಲಾ 40 ಲಕ್ಷ ರೂಪಾಯಿ ಬಿಡುಗಡೆ ಮಾಡಲು ಸೂಚಿಸಿರುವುದು ಚುನಾವಣಾ ಗಿಮಿಕ್ ಎಂದು ಬಿಜೆಪಿ ಆರೋಪಿಸಿರುವ ಬಗ್ಗೆ ಮಾತನಾಡಿ ಬಿಜೆಪಿಯವರು ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ ವೈದ್ಯಕೀಯ ಕಾಲೇಜು ಏಕೆ ಮಾಡಲಿಲ್ಲ.. ಇದು ಗಿಮಿಕ್ ಹೇಗಾಗುತ್ತದೆ ಎಂದರು. ಈಗಾಗಲೇ ಟೆಂಡರ್ ಕರೆದು ಏಜೆನ್ಸಿ ನಿಗದಿಯಾಗಿದೆ. ಕೆಲಸ ಪ್ರಾರಂಭವಾಗಬೇಕಿದ್ದು ಅದಕ್ಕೆ ಅಡಿಗಲ್ಲು ಹಾಕಲಾಗುತ್ತಿದೆ ಎಂದರು.

ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ : ಹೈ ಕಮಾಂಡ್ ತೀರ್ಮಾನ

ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆಯನ್ನು ಹೈ ಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದ ಮುಖ್ಯಮಂತ್ರಿಗಳು ಹೆಚ್.ವೈ ಮೇಟಿ ಕುಟುಂಬದವರನ್ನೇ ಆಯ್ಕೆ ಮಾಡಲಾಗುವುದೇ ಎಂಬ ಮಾಧ್ಯಮಗಳ ಉತ್ತರ ನೀಡಿ ಅವರೂ ಒಬ್ಬ ಆಕಾಂಕ್ಷಿ ಎಂದರು.

ವಾರದೊಳಗೆ ಉಪಚುನಾವಣೆ ಘೋಷಣೆಯಾಗಬಹುದು

ಉಪಚುನಾವಣೆ ಒಂದು ವಾರದೊಳಗೆ ಘೋಷಣೆಯಾಗಬಹುದು ಎಂದರು. ಯಾರಾದರೂ ಆಕಾಂಕ್ಷಿಯಾಗಬಹುದು. ಒಂದೇ ಕುಟುಂಬದಿಂದ ಎಷ್ಟು ಜನ ಕೇಳಿದರೂ ಒಬ್ಬರಿಗೆ ಹೈ ಕಮಾಂಡ್ ಟಿಕೆಟ್ ನೀಡುವುದು ಎಂದರು. ಉಪಚುನಾವಣೆಗೆ ಎಲ್ಲಾ ತಯಾರಿ ನಡೆದಿದ್ದು, ನಾವು ಅದಕ್ಕೆ ಸಿದ್ಧರಿದ್ದೇವೆ ಎಂದರು.

ಸಿಲಿಂಡರ್ ಪೂರೈಕೆ : ಕೇಂದ್ರ ಸರ್ಕಾರದ ಜವಾಬ್ದಾರಿ

ಸಿಲಿಂಡರ್ ಸರಬರಾಜು ಸುಗಮಗೊಳಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಕೊಟ್ಟರೆ ವಿತರಣೆ ಮಾಡುತ್ತದೆ. ಆಹಾರ ಸಚಿವರು ಎರಡು ಸಭೆಗಳನ್ನು ಈಗಾಗಲೇ ನಡೆಸಿದ್ದು, ಕೇಂದ್ರ ಸಚಿವರಿಗೆ ಪಾತ್ರವನ್ನೂ ಬರೆಯಲಾಗಿದೆ. ಸಿಲಿಂಡರ್ ಅಭಾವವಾಗದಂತೆ ಎಚ್ಚರಿಕೆ ವಹಿಸಲು ಕೋರಲಾಗಿದೆ.

ಒಳಮೀಸಲಾತಿ: ಮಾರ್ಚ್ 27 ರಂದು ಸಭೆ

ಒಳಮೀಸಲಾತಿ ಕುರಿತು ಮಾರ್ಚ್ 27 ರಂದು ಸಭೆ ಕರೆಯಲಾಗಿದೆ. ಅಂದು ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ನೆಲಮಂಗಲ ಬಳಿ LPG ಗ್ಯಾಸ್ ಟ್ಯಾಂಕರ್ ಪಲ್ಟಿ: ತಪ್ಪಿದ ಭಾರೀ ಅನಾಹುತ

ಬೆಂಗಳೂರು: ಎಲ್‌ಪಿಜಿ ಗ್ಯಾಸ್ ತುಂಬಿದ ಟ್ಯಾಂಕರ್ ಪಲ್ಟಿಯಾದ ಘಟನೆ ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯ ಸೋಲೂರು ಬಳಿ ನಡೆದಿದೆ.

ಮಂಗಳೂರಿನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಮಾಗಡಿ ಅಗ್ನಿಶಾಮಕ ದಳದ ಸಿಬ್ಬಂದಿ, ಕುದೂರು ಪೊಲೀಸರು ಹಾಗೂ ರಾಷ್ಟ್ರೀಯ ಹೆದ್ದಾರಿ ಟೋಲ್ ಸಿಬ್ಬಂದಿ ಭೇಟಿ ನೀಡಿ ರಕ್ಷಣಾ ಕಾರ್ಯ ನಡೆಸಿದರು. ಬಳಿಕ ಎರಡು ಕ್ರೇನ್‌ಗಳ ಸಹಾಯದಿಂದ ಪಲ್ಟಿಯಾದ ಟ್ಯಾಂಕರ್ ಅನ್ನು ತೆರವುಗೊಳಿಸಲಾಗಿದೆ.

ಟ್ಯಾಂಕರ್‌ನಿಂದ ಗ್ಯಾಸ್ ಸೋರಿಕೆಯಾಗಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸದೆ ಜಾಗ್ರತೆಯಿಂದ ಟ್ಯಾಂಕರ್ ಅನ್ನು ಮೇಲಕ್ಕೆ ಎತ್ತಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ!

ಬೆಂಗಳೂರು: ಇರಾನ್-ಇಸ್ರೇಲ್ ಯುದ್ಧದ ಭೀತಿ ಇದೀಗ ಗ್ಯಾಸ್ ಸಿಲಿಂಡರ್‌ಗಳ ಬಳಿಕ ಅಡುಗೆ ಎಣ್ಣೆ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. ಯುಗಾದಿ ಮತ್ತು ರಂಜಾನ್ ಹಬ್ಬಗಳ ಮುನ್ನವೇ ಅಡುಗೆ ಎಣ್ಣೆಯ ದರ ಏರಿಕೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಯುದ್ಧದ ಪರಿಣಾಮವಾಗಿ ಅಡುಗೆ ಎಣ್ಣೆಯ ರಫ್ತು ಹಾಗೂ ಸರಬರಾಜು ವ್ಯತ್ಯಯಗೊಂಡಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಸಾಮಾನ್ಯವಾಗಿ 100–200 ಬಾಕ್ಸ್‌ಗಳು ಪೂರೈಕೆಯಾಗುತ್ತಿದ್ದರೆ, ಇದೀಗ ಕೇವಲ 10 ಶೇಕಡಾ ಮಟ್ಟಕ್ಕೆ ಮಾತ್ರ ಸರಕು ಬರುತ್ತಿದೆ ಎಂದು ಹೇಳಲಾಗಿದೆ.

ಬೆಂಗಳೂರಿನ ಅಡುಗೆ ಎಣ್ಣೆ ಅಂಗಡಿ ಮಾಲೀಕ ಅಜಯ್ ಮಾತನಾಡಿ, ಬ್ರಾಂಡೆಡ್ ಎಣ್ಣೆಯ ಪೂರೈಕೆ ತೀವ್ರವಾಗಿ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ. ಇದರ ಪರಿಣಾಮವಾಗಿ ಪ್ರತಿ ಲೀಟರ್ ಎಣ್ಣೆಯ ಬೆಲೆಯಲ್ಲಿ ಸುಮಾರು 20 ರೂಪಾಯಿ ಹೆಚ್ಚಳವಾಗಿದೆ ಎಂದು ಹೇಳಿದರು.

ಸರಕು ಕೊರತೆಯಿಂದ ವ್ಯಾಪಾರಕ್ಕೂ ಹಿನ್ನಡೆಯಾಗಿದ್ದು, ಗ್ರಾಹಕರು ಬ್ರಾಂಡೆಡ್ ಉತ್ಪನ್ನಗಳಿಗಾಗಿ ಒತ್ತಾಯಿಸುತ್ತಿದ್ದಾರೆ. ಪೂರೈಕೆ ಸಮಸ್ಯೆ ಮುಂದುವರಿದರೆ ಹಬ್ಬದ ಸಿದ್ಧತೆಗಳಿಗೂ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ವಿದೇಶಾಂಗ ನೀತಿಯ ವೈಫಲ್ಯದಿಂದಲೇ LPG ಸಿಲಿಂಡರ್ ಎಮರ್ಜೆನ್ಸಿ: ಪ್ರಿಯಾಂಕ್ ಖರ್ಗೆ

ಬೀದರ್: ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ರಾಜ್ಯ ಸೇರಿದಂತೆ ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ ಉಂಟಾಗಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯ ವೈಫಲ್ಯದಿಂದಲೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದರು.

ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯುದ್ಧ ಪ್ರಾರಂಭವಾಗುವುದಕ್ಕೂ ಮೊದಲು ಏಕಾಏಕಿ ಡೊಮೆಸ್ಟಿಕ್ ಹಾಗೂ ಕಮರ್ಷಿಯಲ್ ಸಿಲಿಂಡರ್ ಬೆಲೆ ಏರಿಕೆ ಮಾಡಲಾಗಿದೆ ಎಂದು ಪ್ರಶ್ನಿಸಿದರು. ಸಮಸ್ಯೆ ಇಲ್ಲ ಎಂದರೆ ಅಗತ್ಯ ಸರಕುಗಳ ಕಾಯ್ದೆ (ESMA) ಯಾಕೆ ಜಾರಿಗೊಳಿಸಲಾಗಿದೆ ಎಂದು ಅವರು ಪ್ರಶ್ನಿಸಿದರು.

ಹೋಟೆಲ್‌ಗಳಲ್ಲಿ ಸಿಲಿಂಡರ್ ಕೊರತೆ ಉಂಟಾಗಿ ಅಡುಗೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಸ್ಟೆಲ್‌ಗಳಲ್ಲೂ ಅಡುಗೆ ವ್ಯವಸ್ಥೆ ಅಸ್ತವ್ಯಸ್ತವಾಗಿದೆ ಎಂದು ಹೇಳಿದರು.

ಸಿಲಿಂಡರ್ ಕೊರತೆಯಿಂದ ಕೆಲವು ಕೈಗಾರಿಕೆಗಳೂ ಸಮಸ್ಯೆ ಎದುರಿಸುತ್ತಿವೆ. ಪುಣೆಯ ಟಾಟಾ ಕಾರು ತಯಾರಿಕಾ ಘಟಕದಲ್ಲಿ ಉತ್ಪಾದನೆ ಸುಮಾರು 60 ಶೇಕಡಾ ಮಟ್ಟಕ್ಕೆ ಕುಸಿದಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಇದಕ್ಕೆ ಯಾರು ಹೊಣೆ? ಬೇರೆ ದೇಶಗಳಲ್ಲಿ ಇಂತಹ ಸಮಸ್ಯೆ ಕಾಣಿಸಿಕೊಳ್ಳುತ್ತಿಲ್ಲ. ನಮ್ಮ ದೇಶದಲ್ಲೇ ಯಾಕೆ ಈ ಪರಿಸ್ಥಿತಿ ಉಂಟಾಗಿದೆ? ಯುದ್ಧ ನಮ್ಮ ದೇಶದಲ್ಲಿ ನಡೆಯುತ್ತಿದೆಯೇ ಎಂದು ಪ್ರಶ್ನಿಸಿದರು.

ಇರಾನ್‌ನಿಂದ ಕಚ್ಚಾ ತೈಲವನ್ನು ರಷ್ಯಾ ಮತ್ತು ಚೀನಾ ಹಡಗುಗಳು ಸಾಗಿಸುತ್ತಿವೆ. ಆದರೆ ಭಾರತದ ಹಡಗುಗಳ ಕುರಿತು ಸ್ಪಷ್ಟ ಮಾಹಿತಿ ಇಲ್ಲ ಎಂದು ಹೇಳಿದರು.

ಟ್ರಂಪ್ ಸೇರಿದಂತೆ ಹಲವು ರಾಷ್ಟ್ರ ನಾಯಕರನ್ನು ಮೋದಿ ತಮ್ಮ ಉತ್ತಮ ಸ್ನೇಹಿತರು ಎಂದು ಹೇಳುತ್ತಾರೆ. ಬಿಜೆಪಿ ನಾಯಕರು ಸಿಲಿಂಡರ್ ಕೊರತೆ ಇಲ್ಲ ಎನ್ನುತ್ತಾರೆ. ಹಾಗಾದರೆ ಅವರು ಸ್ವತಃ ಸಿಲಿಂಡರ್ ಬುಕ್ ಮಾಡಿ ತೋರಿಸಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.

ವಿದೇಶಿಗರು ಮತದಾರರ ಪಟ್ಟಿಗೆ ಸೇರಿದರೆ ಭದ್ರತೆಗೆ ಅಪಾಯ: ಆರ್. ಅಶೋಕ್

ಬೆಂಗಳೂರು: ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಪ್ರಜೆಗಳು ಮತದಾರರ ಪಟ್ಟಿಗೆ ಸೇರ್ಪಡೆಯಾದರೆ ಅದು ದೇಶದ ಭದ್ರತೆಗೆ ಅಪಾಯಕಾರಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಕಳ್ಳ ಮತದಾರರನ್ನು ಸೇರಿಸಲು ಅವಕಾಶ ನೀಡಬಾರದು ಎಂದು ಹೇಳಿದರು. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಹಲವು ಮಂದಿ ಕರ್ನಾಟಕಕ್ಕೆ ಬಂದಿದ್ದು,

ಅವರು ಮತದಾರರ ಪಟ್ಟಿಗೆ ಸೇರಿದ್ದರೆ ಖಾಯಂ ನಾಗರಿಕರಾಗುವ ಸಾಧ್ಯತೆ ಇದೆ. ಇದು ದೇಶದ ಭದ್ರತೆಗೆ ಗಂಭೀರ ಅಪಾಯ ಉಂಟುಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಈ ವಿಚಾರದ ಕುರಿತು ಕಾರ್ಯಾಗಾರದಲ್ಲಿ ಚರ್ಚೆ ನಡೆದಿದ್ದು, ಅದರಲ್ಲಿ ತಾವೂ ಭಾಗವಹಿಸಿದ್ದಾಗಿ ಅವರು ತಿಳಿಸಿದರು.

ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ್, ನಾನು ಸಮಾಜವಾದಿ, ಜಾತಿವಾದಿ ಅಲ್ಲ; ಕುಟುಂಬವಾದಿ ಅಲ್ಲ”ಎಂದು ಹೇಳಿದ ಸಿದ್ದರಾಮಯ್ಯ ಅವರು ತಮ್ಮ ಮಗನನ್ನೂ ನೋಡಿಕೊಳ್ಳುವಂತೆ ಕೇಳಿದ್ದಾರೆ ಎಂದು ಟೀಕಿಸಿದರು.

“ಇಷ್ಟು ದಿನ ಅವರನ್ನು ನೋಡಿಕೊಂಡಿದ್ದೇವೆ. ಈಗ ಅವರ ಮಗನನ್ನೂ ನೋಡಿಕೊಳ್ಳಬೇಕು. ನಾಳೆ ಮೊಮ್ಮಗನನ್ನೂ ನೋಡಿಕೊಳ್ಳಿ ಎಂದರೆ ಇದು ರಾಜರ ಆಡಳಿತವೇ?” ಎಂದು ಪ್ರಶ್ನಿಸಿದರು.

ಹಿಂದೆ ರಾಜರು ತಮ್ಮ ನಂತರ ಮಗನನ್ನೇ ಉತ್ತರಾಧಿಕಾರಿಯಾಗಿ ಘೋಷಿಸುತ್ತಿದ್ದರು. ಆದರೆ ಡಾ. ಬಿ.ಆರ್. ಅಂಬೇಡ್ಕರ್ ಅವರು ರಾಜಶಾಹಿ ವ್ಯವಸ್ಥೆಯನ್ನು ರದ್ದು ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ತಂದರು. ಈಗ ಕುಟುಂಬ ರಾಜಕಾರಣಕ್ಕೆ ಉತ್ತೇಜನ ನೀಡುವುದು ಅಂಬೇಡ್ಕರ್ ಅವರ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದರು.

ತಮ್ಮ ಕ್ಷೇತ್ರದ ಜಾತ್ರೆಗೆ ಪ್ರಭಾವ ಬಳಸಿ ಒಂದು ಲೋಡ್ ಸಿಲಿಂಡರ್ ಕೊಡಿಸಿದ CM ಸಿದ್ದರಾಮಯ್ಯ

ಮೈಸೂರು: ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದ ವರಕೊಡು ಗ್ರಾಮದಲ್ಲಿ ನಡೆದ ಜಾತ್ರೆಗಾಗಿ ಸುಮಾರು 200ರಿಂದ 250 ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳನ್ನು ಒದಗಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಶುಕ್ರವಾರ ವರುಣ ಕ್ಷೇತ್ರದ ವರಕೊಡು ಗ್ರಾಮದಲ್ಲಿ ಜಾತ್ರೆ ನಡೆಯಿತು. ಜಾತ್ರೆಗೆ ಆಗಮಿಸಿದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪ್ರಸಾದ ತಯಾರಿಕೆಗೆ ಅಗತ್ಯವಾದ ಗ್ಯಾಸ್ ಸಿಲಿಂಡರ್‌ಗಳನ್ನು ಸಿಎಂ ಸಿದ್ದರಾಮಯ್ಯ ಅವರ ಪ್ರಭಾವ ಬಳಸಿ ಒದಗಿಸಲಾಗಿದೆ ಎಂದು ಹೇಳಲಾಗಿದೆ.

ಈ ಕುರಿತು ಮೈಸೂರು ಹೋಟೆಲ್ ಸಂಘದ ಅಧ್ಯಕ್ಷ ನಾರಾಯಣಗೌಡ ಮಾಹಿತಿ ನೀಡಿ, ಸಿಎಂ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧ್ಯವಾಗುತ್ತದೆ. ಜಾತ್ರೆಗೆ ಎರಡು ದಿನಗಳ ಮೊದಲು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಸಿಲಿಂಡರ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಪ್ರತಿದಿನ ಸುಮಾರು 4,000 ವಾಣಿಜ್ಯ ಸಿಲಿಂಡರ್‌ಗಳ ಅಗತ್ಯವಿದ್ದು, ಹೋಟೆಲ್ ಉದ್ಯಮಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಷ್ಟು ಸಾಧ್ಯವಾಗದಿದ್ದರೂ ಕನಿಷ್ಠ 700ರಿಂದ 800 ಸಿಲಿಂಡರ್‌ಗಳು ಹೋಟೆಲ್‌ಗಳಿಗೆ ಲಭ್ಯವಾಗುವಂತೆ ಸಿಎಂ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ವಾಣಿಜ್ಯ LPG ಕೊರತೆ: ಪ್ರಧಾನಿ ಮೋದಿಗೆ ಪತ್ರ ಬರೆದ ಹೋಟೆಲ್ ಮಾಲಕಿ

ಬೆಂಗಳೂರು: ರಾಜ್ಯದಲ್ಲಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಕೊರತೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಮಹಿಳಾ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಸಮಸ್ಯೆಗೆ ತುರ್ತು ಪರಿಹಾರ ಒದಗಿಸುವಂತೆ ಬೆಂಗಳೂರಿನ ಗಾಂಧಿನಗರದ ‘ರಸಪಾಕ’ ಹೋಟೆಲ್ ಮಾಲಕಿ ರೂಪಾ ಶಾಸ್ತ್ರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕದ ‘ನಾರಿ ಶಕ್ತಿ’ ಪರವಾಗಿ ಪತ್ರ ಬರೆದಿರುವ ರೂಪಾ ಶಾಸ್ತ್ರಿ, ಕಳೆದ ಕೆಲವು ವಾರಗಳಿಂದ ವಾಣಿಜ್ಯ ಅಡುಗೆ ಅನಿಲದ ತೀವ್ರ ಕೊರತೆ ಹಾಗೂ ಬೆಲೆ ಏರಿಕೆ ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ ಎಂದು ತಿಳಿಸಿದ್ದಾರೆ.

ಸಿಲಿಂಡರ್ ಪೂರೈಕೆಯಲ್ಲಿ ಶೇ.50ಕ್ಕಿಂತ ಹೆಚ್ಚು ಕಡಿತವಾಗಿರುವುದರಿಂದ ಹೋಟೆಲ್‌ಗಳನ್ನು ನಿರ್ವಹಿಸುವುದು ಕಷ್ಟವಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಸಿಲಿಂಡರ್ ಬೆಲೆ ಏರಿಕೆಯ ಪರಿಣಾಮ ಮಹಿಳಾ ಉದ್ಯಮಿಗಳ ಅಲ್ಪ ಲಾಭಾಂಶವೂ ಸಂಪೂರ್ಣವಾಗಿ ಕುಸಿದಿದ್ದು, ಈ ಉದ್ಯಮವನ್ನು ನಂಬಿ ಬದುಕುತ್ತಿರುವ ಸಾವಿರಾರು ಮಹಿಳಾ ಕಾರ್ಮಿಕರ ಜೀವನೋಪಾಯಕ್ಕೂ ಹೊಡೆತ ಬಿದ್ದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆದ್ದರಿಂದ ಕರ್ನಾಟಕದ ಹೋಟೆಲ್ ಉದ್ಯಮಕ್ಕೆ ವಾಣಿಜ್ಯ ಎಲ್‌ಪಿಜಿ ಪೂರೈಕೆಯನ್ನು ತಕ್ಷಣ ಸುಗಮಗೊಳಿಸಬೇಕು. ಮಹಿಳಾ ಉದ್ಯಮಿಗಳು ನಡೆಸುವ ಹೋಟೆಲ್‌ಗಳಿಗೆ ಗ್ಯಾಸ್ ಹಂಚಿಕೆಯಲ್ಲಿ ವಿಶೇಷ ಆದ್ಯತೆ ನೀಡಬೇಕು ಹಾಗೂ ಸಣ್ಣ ಹೋಟೆಲ್‌ಗಳಿಗೆ ಸಬ್ಸಿಡಿ ಅಥವಾ ಆರ್ಥಿಕ ಪ್ಯಾಕೇಜ್ ಘೋಷಿಸಬೇಕೆಂದು ಅವರು ಪ್ರಧಾನಿಗೆ ಮನವಿ ಮಾಡಿದ್ದಾರೆ.

ಗಂಡು ಮಕ್ಕಳಿಲ್ಲದಿದ್ದರೇನು? ತಂದೆಗೆ ಅಗ್ನಿಸ್ಪರ್ಶ ಮಾಡಿದ ಇಬ್ಬರು ಹೆಣ್ಣುಮಕ್ಕಳು!

ಚಿಕ್ಕಮಗಳೂರು: ಪುರುಷ ಪ್ರಾಧಾನ್ಯತೆಯ ಸಂಪ್ರದಾಯಕ್ಕೆ ತಿಲಾಂಜಲಿ ನೀಡಿ, ಹೆಣ್ಣು ಮಕ್ಕಳೇ ತಮ್ಮ ತಂದೆಯ ಅಂತ್ಯಸಂಸ್ಕಾರ ನಡೆಸಿ ಲಿಂಗ ಸಮಾನತೆಯ ಸಂದೇಶ ಸಾರಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚಪಟ್ಟಣದಲ್ಲಿ ನಡೆದಿದೆ.

ಬೀರೂರು ಪಟ್ಟಣದ ಭಾವಸಾರ ಸಮಾಜದ ವಿಶ್ವನಾಥ ಅವರು ಗುರುವಾರ ನಿಧನರಾಗಿದ್ದರು. ಅವರಿಗೆ ಸ್ವಂತ ಮಕ್ಕಳಿರಲಿಲ್ಲ. ಅವರ ಸಹೋದರರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದರು.

ಈ ಹಿನ್ನೆಲೆಯಲ್ಲಿ ವಿಶ್ವನಾಥ ಅವರ ಸಹೋದರನ ಮಗಳು ಐಶ್ವರ್ಯ ಅವರು, “ಅವರು ನನಗೆ ತಂದೆಯಂತಿದ್ದರು. ಆದ್ದರಿಂದ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ನಾನು ನಡೆಸುತ್ತೇನೆ” ಎಂದು ಕುಟುಂಬದವರಿಗೆ ತಿಳಿಸಿದ್ದರು.

ಕುಟುಂಬದವರು ಹಾಗೂ ಭಾವಸಾರ ಸಮಾಜದ ಮುಖಂಡರು ಇದಕ್ಕೆ ಒಪ್ಪಿಗೆ ನೀಡಿದರು. ಅದರಂತೆ ಐಶ್ವರ್ಯ ಅವರು ತಮ್ಮ ಸಹೋದರಿ ಭಾವನಾ ಅವರೊಂದಿಗೆ ಸೇರಿ ಶುಕ್ರವಾರ ಅಂತ್ಯಕ್ರಿಯೆ ನೆರವೇರಿಸಿದರು.

ಹೆಗಲ ಮೇಲೆ ಕುಡಿಕೆ ಹೊತ್ತು ಮೃತದೇಹದ ಸುತ್ತ ಮೂರು ಸುತ್ತು ಹಾಕಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ ಅವರು, ಲಿಂಗ ಸಮಾನತೆಯ ಸಂದೇಶವನ್ನು ಸಮಾಜಕ್ಕೆ ಸಾರಿದರು.

ಸಿಲಿಂಡರ್ ಕೊರತೆ ಎಫೆಕ್ಟ್: ಬಯೋಗ್ಯಾಸ್ ಉತ್ಪಾದನೆಗೆ ಮುಂದಾದ GBA!

ಬೆಂಗಳೂರು: ನಗರದಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಬಯೋಗ್ಯಾಸ್ ಉತ್ಪಾದನೆಗೆ ಮಹತ್ವ ನೀಡಲು ಗ್ರೇಟರ್ ಬೆಂಗಳೂರು ಆಡಳಿತ (ಜಿಬಿಎ) ಮುಂದಾಗಿದೆ.

ಬಯೋಗ್ಯಾಸ್ ಉತ್ಪಾದನೆಯ ಮೂಲಕ ಹೋಟೆಲ್ ಸೇರಿದಂತೆ ವಾಣಿಜ್ಯ ಬಳಕೆಗೆ ಗ್ಯಾಸ್ ಒದಗಿಸುವ ಯೋಜನೆ ಕೈಗೊಳ್ಳಲಾಗಿದೆ. ಸದ್ಯ ಕೋರಮಂಗಲದ ಬಯೋಗ್ಯಾಸ್ ಕೇಂದ್ರದಿಂದ ಕೆಲ ಹೋಟೆಲ್‌ಗಳಿಗೆ ಗ್ಯಾಸ್ ಪೂರೈಕೆ ಮಾಡಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಜಿಬಿಎ ಮುಖ್ಯ ಆಯುಕ್ತರು ಕೋರಮಂಗಲದ ಬಯೋಗ್ಯಾಸ್ ಘಟಕಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ಘಟಕದ ಕಾರ್ಯವಿಧಾನ ಕುರಿತು ಮಾಹಿತಿ ಪಡೆದುಕೊಂಡ ಅವರು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಲಯಗಳಲ್ಲಿ ಬಯೋಗ್ಯಾಸ್ ಘಟಕಗಳನ್ನು ಸ್ಥಾಪಿಸುವ ಕುರಿತು ಚರ್ಚೆ ನಡೆಸಿದರು.

ನಗರದಲ್ಲಿ ಇತರೆ ಗ್ಯಾಸ್ ಸಮಸ್ಯೆಗಳು ಎದುರಾದಾಗ ಬಯೋಗ್ಯಾಸ್ ಪರ್ಯಾಯವಾಗಿ ಬಳಸಬಹುದು. ಹಸಿ ಘನತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದನೆ ಮಾಡಲಾಗುತ್ತಿದೆ.

ಈ ಮೊದಲು ಬಿಬಿಎಂಪಿ ವತಿಯಿಂದ 12 ಬಯೋಗ್ಯಾಸ್ ಘಟಕಗಳನ್ನು ನಿರ್ಮಿಸಲಾಗಿದ್ದು, ಅವುಗಳಲ್ಲಿ 6 ಘಟಕಗಳು (ವಾರ್ಡ್ ಸಂಖ್ಯೆ 94, 167, 168, 151, 35 ಮತ್ತು 112) ಕಾರ್ಯನಿರ್ವಹಿಸುತ್ತಿವೆ. ಪ್ರತಿ ಘಟಕದಲ್ಲಿ ದಿನಕ್ಕೆ 5 ಟನ್ ಸಾಮರ್ಥ್ಯದಲ್ಲಿ ಒಟ್ಟು 30 ಟನ್ ಹಸಿ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದಿಸಲಾಗುತ್ತಿದೆ.

ಇನ್ನೂ ಉಳಿದ 6 ಘಟಕಗಳಲ್ಲಿ (ವಾರ್ಡ್ ಸಂಖ್ಯೆ 190, 192, 149, 139, 198 ಮತ್ತು 11) ನವೀಕರಣ ಕಾಮಗಾರಿ ನಡೆಯುತ್ತಿದೆ.

ಪ್ರತಿ ಟನ್ ಹಸಿ ತ್ಯಾಜ್ಯದಿಂದ ಸುಮಾರು 30ರಿಂದ 50 ಕೆ.ಜಿ.ವರೆಗೆ ಬಯೋಗ್ಯಾಸ್ ಉತ್ಪಾದಿಸುವ ಸಾಮರ್ಥ್ಯವಿದ್ದು, ಪ್ರತಿ ಘಟಕದಲ್ಲಿ 5 ಟನ್ ತ್ಯಾಜ್ಯದಿಂದ ಸುಮಾರು 200 ಕೆ.ಜಿ. ಗ್ಯಾಸ್ ಉತ್ಪಾದನೆ ಸಾಧ್ಯವಾಗುತ್ತದೆ.

ಈ ಬಯೋಗ್ಯಾಸ್ ಅನ್ನು ಹೋಟೆಲ್‌ಗಳ ಅಡುಗೆಗೆ ಬಳಸುವುದರ ಜೊತೆಗೆ ಜನರೇಟರ್ ಮೂಲಕ ವಿದ್ಯುತ್ ಉತ್ಪಾದಿಸಿ ಸಮೀಪದ ಉದ್ಯಾನವನಗಳಲ್ಲಿ ದೀಪ ಬೆಳಗಲು ಬಳಸಲಾಗುತ್ತಿದೆ. ಇದರಿಂದ ಸುಮಾರು 8,400 ರೂ. ಆದಾಯವೂ ಲಭ್ಯವಾಗುತ್ತಿದೆ.

error: Content is protected !!