Home Blog Page 3431

ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾದ ಸಂಚಾರಿ ಡಿಸಿಪಿ ವರ್ತನೆ

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪುತ್ರಿಯ ವಿವಾಹ ಕಾರ್ಯಕ್ರಮಕ್ಕೆ ವಿಐಪಿಗಳ ಆಗಮನದಿಂದ ಹುಬ್ಬಳ್ಳಿಯ ಬಹುತೇಕ ರಸ್ತೆಗಳು ವಾಹನಗಳ ದಟ್ಟಣೆಯಿಂದ ಸವಾರರು ಪರದಾಡುವಂತಾಯಿತು.

ಈ ಮಧ್ಯೆ ಕೆಲ ಮಾರ್ಗಗಳ ಸಂಚಾರ ಬದಲಾವಣೆಯಿಂದ ಉಂಟಾದ ವಾಹನ ದಟ್ಟಣೆಯ ಕಿರಿಕಿರಿ ನಡುವೆ ಸಾರ್ವಜನಿಕರ ಸಂಚಾರಕ್ಕೆ ಸೂಕ್ತ ಅವಕಾಶ ಕಲ್ಪಿಸಬೇಕಿದ್ದ ಸಂಚಾರಿ ಡಿಸಿಪಿ ಬಸರಗಿ ಅವರು ರಸ್ತೆ ದಾಟುವ ಜನರ ಮೇಲೆ ಮನಸೋ ಇಚ್ಚೆ ಲಾಠಿ ಬೀಸುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾದರು.

ನೈಟ್ ಕರ್ಫ್ಯೂ ಜಾರಿಯ ಹಿನ್ನಲೆ ಬೇಗ ಮನೆ ಸೇರುವ ಧಾವಂತದಲ್ಲಿ ಜನರು ರಸ್ತೆಯಲ್ಲಿ ಲಗುಬಗೆಯಿಂದ ಹೊರಟರೆ ಸಂಬರಗಿಯವರು ಮಾತ್ರ ತಮ್ಮ ಅಧಿಕಾರದ ದರ್ಪ ತೋರಿಸಿ ವಾಹನ ಸವಾರರು, ಪಾದಚಾರಿಗಳ ಜೊತೆಗೆ ಒರಟಾಗಿ ವರ್ತಿಸಿದ್ದು, ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಯಿತು.

ಅಣತಿ ದೂರದಲ್ಲೇ ಮನೆ ಇದ್ದರೂ ಮನೆಗೆ ಹೋಗಲು ಅಡ್ಡಿಪಡಿಸಿದ ಪೊಲೀಸರ ವರ್ತನೆಗೆ ಜನರು ಹಿಡಿಶಾಪ ಹಾಕಿದರು. ಇನ್ನು ಮುಂದಾದರೂ ಪೊಲೀಸರು ಎಚ್ಚೆತ್ತು ದರ್ಪದ ವರ್ತನೆ ಬಿಟ್ಟು ಸಾರ್ವಜನಿಕರೊಂದಿಗೆ ಸೌಹಾರ್ದತೆಯಿಂದ ವರ್ತಿಸಬೇಕು ಎಂದು ಜನರ ಆಗ್ರವಾಗಿದೆ.

ಉಗುರಿಗಾಗಿ ಚಿರತೆ ಕೊಂದಿದ್ದ ಇಬ್ಬರು ಖದೀಮರು ಅಂದರ್

0

ವಿಜಯಸಾಕ್ಷಿ ಸುದ್ದಿ, ಹಾವೇರಿ

ಉಗುರಿಗಾಗಿ ಚಿರತೆ ಕೊಂದ ಆರೋಪದಲ್ಲಿ ಇಬ್ಬರನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಾಮನಹಳ್ಳಿಯಲ್ಲಿ ನಡೆದಿದೆ.
ಸಂತೋಷ ಲಮಾಣಿ (50)
ಮಂಜುನಾಥ ಪೀರಪ್ಪ ಲಮಾಣಿ (30) ಬಂಧನಕ್ಕೊಳಗಾದ ಆರೋಪಿಗಳು.

ಒಂದು ವರ್ಷ ಪ್ರಾಯದ ಚಿರತೆಯನ್ನು ಕೊಂದು ಕಾಲುಗಳ ಕತ್ತರಿಸಿ ತಂದು ಮನೆಯ ಹಿತ್ತಲಿನಲ್ಲಿ ಬಚ್ಚಿಟ್ಟಿದ್ದರು.

ಖಚಿತ ಮಾಹಿತಿ ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿ, ಚಿರತೆ ಕಾಲು ವಶಕ್ಕೆ ಪಡೆದಿದ್ದಾರೆ. ಉಗುರು ಪಡೆಯಲು ಚಿರತೆ ಕೊಂದಿದ್ದಾಗಿ ಒಪ್ಪಿಕೊಂಡಿದ್ದಾರೆ.

ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭಕ್ಕೆ ಚಿಂತನೆ

  • ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿಕೆ

ವಿಜಯಸಾಕ್ಷಿ ಸುದ್ದಿ, ಗದಗ

ಆ.23ರಿಂದ 9ರಿಂದ12 ತರಗತಿಗಳನ್ನು ಆರಂಭಿಸಿದ್ದು, ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಸೋಮವಾರ 6,7,8 ನೇ ತರಗತಿ ಪ್ರಾರಂಭವಾಗಲಿದ್ದು, ಹತ್ತು ದಿನ ನೋಡಿಕೊಂಡು ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪೋಷಕರು ಶಾಲೆಗಳಿಗೆ ಬಂದು ಒಂದನೇ ತರಗತಿಯಿಂದಲೇ ಶಾಲೆ ಪ್ರಾರಂಭಿಸಿ ಎಂದು ಹೇಳುತ್ತಿದ್ದಾರೆ. ಆನ್ ಲೈನ್ ಕ್ಲಾಸ್ ನಿಂದ ನಮಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ. ಪೂರ್ಣ ಪ್ರಮಾಣದ ಶಾಲೆ ಆರಂಭಿಸಿ ಎಂದು ವಿದ್ಯಾರ್ಥಿಗಳೂ ಹೇಳುತ್ತಿದ್ದಾರೆ.

ಕೋವಿಡ್ ಮೂರನೇ ಅಲೆ ಬಗ್ಗೆ ಚರ್ಚೆ ಆಗುತ್ತಿದೆ. ಹೀಗಾಗಿ ಮಕ್ಕಳ ಆರೋಗ್ಯದ ಮೇಲೆ ಕಾಳಜಿ ವಹಿಸಲಾಗುತ್ತಿದೆ. ಮಕ್ಕಳ ಇಚ್ಚೆ ನೋಡಿಕೊಂಡೇ ಮುಂದಿನ ದಿನಗಳಲ್ಲಿ 1 ರಿಂದ 5 ರವರಗೆ ಶಾಲೆ ಆರಂಭ ಮಾಡುತ್ತೇವೆ ಎಂದು ಹೇಳಿದರು.

ಕೆಲವು ಖಾಸಗಿ ಶಾಲೆಗಳು ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿವೆ. ಅರ್ಬನ್ ಏರಿಯಾಗಳಲ್ಲಿ ಖಾಸಗಿ ಶಾಲೆಗಳಿಂದ ಈ ರೀತಿ ಸಮಸ್ಯೆ ಆಗುತ್ತಿದೆ. ಆಂಧ್ರದಲ್ಲಿ ಈಗಾಗಲೇ ಕಾನೂನು ತಂದಿದ್ದಾರೆ. ಅದೇ ಮಾದರಿಯಲ್ಲಿ ಕಾನೂನು ರೂಪಿಸುವ ಬಗ್ಗೆ
ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುವುದಾಗಿ ಸಚಿವ ನಾಗೇಶ್ ತಿಳಿಸಿದರು.

ಶಾಲೆಗಳಲ್ಲಿ ಶೌಚಾಲಯಗಳು, ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಕೋವಿಡ್ ಮಾರ್ಗಸೂಚಿ ಪ್ರಕಾರ ಗಣೇಶ ಹಬ್ಬಕ್ಕೆ ಅನುಮತಿ ನೀಡಲು ಚಿಂತನೆ

  • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶ್ರೀನಿವಾಸ ಪೂಜಾರಿ ಹೇಳಿಕೆ

ವಿಜಯಸಾಕ್ಷಿ ಸುದ್ದಿ, ಗದಗ

ಕೋವಿಡ್ ಮಾರ್ಗಸೂಚಿ ಅನುಸರಿಸಿ ರಾಜ್ಯದಲ್ಲಿ ಗಣೇಶ ಚತುರ್ಥಿ ಆಚರಣೆಗೆ ಅವಕಾಶ ಮಾಡಿಕೊಡಲು ಚಿಂತನೆ ನಡೆದಿದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಣೇಶ ಹಬ್ಬ ಆಚರಣೆ ಬಗ್ಗೆ ಮುಖ್ಯಮಂತ್ರಿ ಈಗಾಗಲೆ ಸಭೆ ನಡೆಸುವುದಾಗಿ ಹೇಳಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಸೂತ್ರ ತರುವುದಾಗಿ ತಿಳಿಸಿದ್ದಾರೆ.
ಸಮಾರಂಭ ಮಾಡುವಾಗ ಕೋವಿಡ್ ಮಾರ್ಗಸೂಚಿ ಪ್ರಕಾರ ಮಾಡಬೇಕಾಗುತ್ತದೆ ಎಂದು ಹೇಳಿದರು.

ಅರುಣ್ ಸಿಂಗ್ ದುಡ್ಡು ವಸೂಲಿಗೆ ರಾಜ್ಯಕ್ಕೆ ಬಂದಿದ್ದಾರೆಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ಆರೋಪ ಮಾಡುವವರಿಗೆ ಆ ವಿಚಾರ ಗೊತ್ತಿರಬಹುದು. ಆದರೆ, ನಮ್ಮ ಪಕ್ಷದಲ್ಲಿ ಆ ಸಿಸ್ಟಮ್ ಇಲ್ಲ. ಕುಮಾರಸ್ವಾಮಿ, ಸಿದ್ಧರಾಮಯ್ಯ ನವರು ನಮ್ಮ ಪಕ್ಷವನ್ನು ಹೊಗಳುತ್ತಾರೆ ಎಂಬ ಭ್ರಮೆ ನಮಗಿಲ್ಲ.

ಅವರ ಅನಾರೋಗ್ಯಕರ ಟೀಕೆಗೆ ಅದೇ ವೇದಿಕೆಯಲ್ಲಿ ಉತ್ತರ ನೀಡುತ್ತೇವೆ. ಸರ್ಕಾರಿ ಕೆಲಸ ಇಲ್ಲಿ ಉತ್ತರ ಬೇಡ ಬೇರೆ ಸಂದರ್ಭದಲ್ಲಿ ಉತ್ತರಿಸುವೆ ಎಂದರು.

ವಿದ್ಯಾರ್ಥಿ ವೇತನ ಬಿಡುಗಡೆಯಾಗದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಶ್ರೀನಿವಾಸ ಪೂಜಾರಿ, ಪ್ರೋತ್ಸಾಹ ಧನ ಬಂದಿಲ್ಲ ಎಂಬುದು ತಿಳಿದು ಬಂದಿದೆ. ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಜಿಲ್ಲಾವಾರು ಪ್ರೋತ್ಸಾಹ ಧನ ಬಿಡುಗಡೆಗೆ ಸಮಸ್ಯೆಯಾಗಿದೆ. ಸಭೆ ನಡೆಸಿ ಬಗೆಹರಿಸುತ್ತೇನೆ ಎಂದು ತಿಳಿಸಿದರು.

ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರ ದಾಳಿ; 15 ಜನರ ಬಂಧನ, ಪುರಸಭೆ ಸದಸ್ಯ ಪರಾರಿ?

ವಿಜಯಸಾಕ್ಷಿ ಸುದ್ದಿ, ಗದಗ

ಎರಡು ಪ್ರತ್ಯೇಕ ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರು ದಾಳಿ ಮಾಡಿ 15 ಜನರನ್ನು ಬಂಧಿಸಿ 25 ಸಾವಿರಕ್ಕೂ ಹೆಚ್ಚು ಹಣವನ್ನು ವಶಪಡಿಸಿಕೊಂಡ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕಿನ ಮುಕ್ತಿಮಂದಿರದ ಬಳಿ ಇರುವ ಸೂಫಿ ಸ್ಕೂಲ್ ಬಳಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್- ಬಾಹರ್ ಜೂಜಾಟದಲ್ಲಿ ತೊಡಗಿದ್ದ ಮಲ್ಲಿಕ್ ಖಾದರಸಾಬ್ ಛೋಪದಾರ, ದಾದಾಪೀರ ಹಜರೇಸಾಬ್ ನಾಲಬಂದಿ, ಸಲ್ಮಾನ್ ನೂರ ಅಹ್ಮದ್ ಮುನಕೇರಿ, ಅಬ್ದುಲ್ ಜಾಫರ್ ಸಾಬ್ ಹುಬ್ಬಳ್ಳಿ, ಶಫೀಯುಲ್ಲಾ ಅಲ್ಲಿಸಾಬ್ ಸಿದ್ದಿ, ಮೆಹಬೂಬ್ ಸಾಬ್ ರಾಜೇಸಾಬ್ ಗುತ್ತಲ್ಲ, ಮಾಬುಸಾಬ್ ಇಬ್ರಾಹಿಮಸಾಬ್ ತಾಡಪತ್ರಿ, ಶಿಕ್ಕೂರಹ್ಮದ್ ಯಾಸಿನಸಾಬ್ ನಾಲಬಂದಿ ಎಂಬ ಎಂಟು ಜನರ ತಂಡದ ಮೇಲೆ ಜಿಲ್ಲಾ ಅಪರಾಧ ದಳದ ಇನ್ಸ್‌ಪೆಕ್ಟರ್ ಟಿ ಮಹಾಂತೇಶ್ ಹಾಗೂ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ.

ಬಂಧಿತರಿಂದ 22780 ರೂಪಾಯಿ ಹಣ ವಶಪಡಿಸಿಕೊಳ್ಳಲಾಗಿದೆ. ದಾಳಿಯ ಕಾಲಕ್ಕೆ ಪುರಸಭೆ ಸದಸ್ಯನೊಬ್ಬ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಶಿಗ್ಲಿ ಬಳಿಯ ಅಣ್ಣಿಗೇರಿ ಅವರ ಕೆರೆ ಹತ್ತಿರ ಜೂಜಾಟದಲ್ಲಿ ತೊಡಗಿದ್ದ
ಶಿಗ್ಲಿಯ ಮಂಜುನಾಥ್ ಬಸಪ್ಪ ಯಲವಿಗೆ, ಮಹ್ಮದಸಾಬ್ ನದಾಫ್, ಆನಂದ ಈರಪ್ಪ ಮುದಗಲ್ಲ, ಆನಂದ ಯಲ್ಲಪ್ಪ ಮಹೇಂದ್ರಕರ್, ತುಳಚಪ್ಪ ಬಸಪ್ಪ ಮಡಿವಾಳರ, ಬಸಪ್ಪ ಮುರಿಗೆಪ್ಪ ಹೊನಕೇರಿ, ಬೆಳಗಾವಿ ಜಿಲ್ಲೆಯ ರಾಮದುರ್ಗದ ಗಂಗಾಧರ ಪಂಚಪ್ಪ ಯಲಗಂಟಿ ಎಂಬುವವರನ್ನು ಲಕ್ಷ್ಮೇಶ್ವರ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಬಂಧಿತರಿಂದ 2800 ರೂಪಾಯಿ ಹಣವನ್ನು ಜಪ್ತಿ ಮಾಡಿದ್ದು, ಈ ಕುರಿತಂತೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾಲಿಕೆ ಚುನಾವಣೆ ಮೂಲಕವೇ ಬಿಜೆಪಿಯ ಅವನತಿ ಆರಂಭ

  • ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿಕೆ

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಕಲಬುರಗಿ ಜನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದುರಾಳಿತಕ್ಕೆ ಬೇಸತ್ತಿದ್ದಾರೆ.‌ ಪಾಲಿಕೆ ಚುನಾವಣೆ ಮೂಲಕವೇ ಬಿಜೆಪಿಯ ಅವನತಿ ಶುರುವಾಗಲಿದೆ‌ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎನ್‌ಡಿಎ ಸರ್ಕಾರ ಕಾರ್ಮಿಕರು ಮತ್ತು ಶೋಷಿತರ ಮೇಲೆ ಗದಾಪ್ರಹಾರ ಮಾಡುತ್ತಿದೆ.‌ ಸರ್ಕಾರದ ತಪ್ಪು ನೀತಿಗಳಿಂದ ಜನರು ತೀವ್ರ ಸಂಕಷ್ಟಕ್ಕಿಡಾಗಿದ್ದಾರೆ.

ಸ್ವರ್ಗವನ್ನೇ ಧರೆಗೆ ತರ್ತಿವಿ ಎಂದು ಹೇಳಿದ್ದ ಬಿಜೆಪಿ ಇದೀಗ ನರಕ ಸೃಷ್ಟಿಸಿದೆ ಎಂದು ಆರೋಪಿಸಿದ ಅವರು, ಬಿಜೆಪಿಯ ಅವನತಿ ಕಲ್ಯಾಣ ಕರ್ನಾಟಕ ಭಾಗದಿಂದಲೇ ಆರಂಭವಾಗಲಿದೆ ಎಂದರು.

ಮಲ್ಲಿಕಾರ್ಜುನ ‌ಖರ್ಗೆ ಮತ್ತು ದಿ. ಎನ್. ಧರ್ಮಸಿಂಗ್ ಈ ಭಾಗಕ್ಕೆ ಅನೇಕ ಕೊಡುಗೆ ನೀಡಿದ್ದಾರೆ.‌ ‌ಪಾಲಿಕೆ ಚುನಾವಣೆಯಲ್ಲಿ
ಮತ ಕೇಳುವ ನೈತಿಕ ಹಕ್ಕನ್ನು ಬಿಜೆಪಿ‌ ಸಂಪೂರ್ಣ ಕಳೆದುಕೊಂಡಿದೆ. ಜಾತ್ಯತೀತತೆ ಬಗ್ಗೆ ಮಾತನಾಡುವ ಜೆಡಿಎಸ್ ಜಾತಿ ರಾಜಕಾರಣದ ಮೊರೆ ಹೋಗಿದೆ. ಅಧಿಕಾರಕ್ಕಾಗಿ ಜೆಡಿಎಸ್ ಯಾರ ಜೊತೆಯಾದರೂ ಹೋಗಲು ಸಿದ್ಧವಿದೆ ಎಂದು ಟೀಕಿಸಿದರು.

ಕಲಬುರಗಿ ಪಾಲಿಕೆಯಲ್ಲಿ ಕಾಂಗ್ರೆಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ‌‌ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಸವಕಲ್ಯಾಣದ ಅನುಭವ ಮಂಟಪ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದು ಕಾಂಗ್ರೆಸ್, ಬಿಜೆಪಿ ಸರ್ಕಾರ ತನ್ನ ಸಾಧನೆ ಎಂದು ಚುನಾವಣೆ ಪ್ರಣಾಳಿಕೆಯಲ್ಲಿ ಹಾಕಿಕೊಂಡಿದೆ‌ ಎಂದು ಈಶ್ವರ ಖಂಡ್ರೆ ಆರೋಪಿಸಿದರು.

ಅರುಣ್‌ ಸಿಂಗ್ ಬಂದಿರೋದು ದುಡ್ಡು ವಸೂಲಿಗೆ, ಆತನಿಗೇನು ಗೊತ್ತು ಸ್ಥಳೀಯ ರಾಜಕೀಯ

  • ಜೆಡಿಎಸ್ ಮುಳುಗುತ್ತಿರುವ ಹಡಗು ಹೇಳಿಕೆಗೆ ಮಾಜಿ ಸಿಎಂ ಎಚ್ಡಿಕೆ ಕೆಂಡಾಮಂಡಲ

ವಿಜಯಸಾಕ್ಷಿ ಸುದ್ದಿ, ಮೈಸೂರು

ಜೆಡಿಎಸ್ ಮುಳುಗುತ್ತಿರುವ ಹಡಗು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರಣ್‌ಸಿಂಗ್ ಹೇಳಿಕೆಗೆ ಕೆಂಡಮಂಡಲಾರದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಪಾಪ ಅವನಿಗೆ ಏನ್ ಗೊತ್ತು. ಕರ್ನಾಟಕ ಹಾಗೂ ಇಲ್ಲಿನ ಸ್ಥಳೀಯ ಪಕ್ಷದ ಬಗ್ಗೆ ಆತನಿಗೆ ಮಾಹಿತಿ ಇಲ್ಲ. ಆತ ಬಂದಿರೋದು ದುಡ್ಡ ವಸೂಲಿ ಮಾಡುವುದಕ್ಕೆ. ನಾವೇನು ಬೆಂಬಲ ಕೋರಿ ಅವರ ಮನೆ ಬಾಗಿಲಿಗೆ ಹೋಗಿದ್ವಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಮೇಯರ್ ಚುನಾವಣೆಯಲ್ಲಿ ಬೆಂಬಲ ಕೋರಿ ಶಾಸಕ ಸಾ.ರಾ. ಮಹೇಶ್ ಕಚೇರಿಗೆ ಬಿಜೆಪಿ ನಾಯಕರು ಏಕೆ ಬಂದಿದ್ರು? ನಾವೇನು ಬೆಂಬಲ ಕೋರಿ ಅವರ ಬಳಿಗೆ ಹೋಗಿಲ್ಲ. ಅರುಣ್ ಸಿಂಗ್ ರಾಜ್ಯದ ವಾಸ್ತವ ಪರಿಸ್ಥಿತಿ ಗೊತ್ತಿಲ್ಲ. ಇಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ವಸೂಲಿಗಾಗಿ ಆಗಾಗ್ಗೆ ಭೇಟಿ ನೀಡುತ್ತಾರೆ. ಜೆಡಿಎಸ್ ಬಗ್ಗೆ ಯಾರೂ ಕೂಡ ಹಗುರವಾಗಿ ಮಾತನಾಡಬಾರದು ಎಂದು ಎಚ್ಚರಿಕೆ ನೀಡಿದರು.

ಮೇಕೆದಾಟು ಯೋಜನೆ ಆರಂಭಿಸಲಿ

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಯ ಆದೇಶ ಕುರಿತಂತೆ ಪ್ರತಿಕ್ರಿಯಿಸಿದ ಎಚ್ಡಿಕೆ, ಇದೇ ಕಾರಣಕ್ಕೆ ನಾವು ಮೇಕೆದಾಟು ಯೋಜನೆ ಆರಂಭಿಸಬೇಕು ಅನ್ನುತ್ತಿರೋದು.

ಸಮುದ್ರಕ್ಕೆ ಹರಿದುಹೋಗುವ ಹೆಚ್ಚುವರಿ ನೀರನ್ನು ಸಂಗ್ರಹಿಸಬಹುದು. ಇದನ್ನು ಕೇಂದ್ರ ಮತ್ತು ತಮಿಳುನಾಡು ಅರ್ಥ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರ ಕೂಡಲೇ ಮಧ್ಯಸ್ಥಿಕೆ ವಹಿಸಿ ಪ್ರಾಧಿಕಾರದ ಮನವೊಲಿಸಬೇಕು.

ಎಲ್ಲಾ ರಾಜ್ಯಗಳನ್ನು ಸರಿಸಮಾನಾಗಿ ನೋಡಬೇಕು. ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಕರ್ನಾಟಕದ ಸಂಸದರಿಗೆ ಮೂಳೆ, ಎಲುಬು ಎರಡೂ ಇಲ್ಲ. ಅರುಣ್ ಸಿಂಗ್ ಸೂಟ್‌ಕೇಸ್ ತಗೊಂಡು ಹೋದ್ರೆ ಸಾಲದು. ಇಂತಹ ಸಮಸ್ಯೆಯನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಬಾಗಿಲು ದೊಡ್ಡದಿದೆ

ಜಿ.ಟಿ.ದೇವೇಗೌಡ ಪಕ್ಷ ತೊರೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಜೆಡಿಎಸ್ ಬಾಗಿಲು ದೊಡ್ಡದಾಗಿ ತೆರೆದಿದೆ. ಬರುವವರು ಬರಬಹುದು, ಹೋಗೋರು ಹೋಗಬಹುದು. ಎರಡು ವರ್ಷದ ಹಿಂದೆಯೇ ಪಕ್ಷದಿಂದ ದೂರ ಸರಿದಿದ್ದೇನೆ ಎಂದು ಅವರೇ ಹೇಳಿದ್ದಾರೆ. ಈಗ ಒಂದು ನೆಪ ಹೇಳಿ ಹೋಗೋಕೆ ಮುಂದಾಗಿದ್ದಾರೆ.

ದ್ರಾಕ್ಷಿ ಕೈಗೆಟುಕದಿದ್ದಾಗ ನರಿ ಹೇಳುವ ಕತೆಯಂತಾಗಿದೆ. ಈಗ ಹೊರಹೋಗುವುದಾದರೆ 2008ರಲ್ಲಿ ಯಾವ ಕಾರಣಕ್ಕಾಗಿ ಬಿಜೆಪಿಗೆ ಹೋದರು ಎಂದು ಶಾಸಕ ಜಿಟಿ ದೇವೇಗೌಡರಿಗೆ ಕುಮಾರಸ್ವಾಮಿ ಟಾಂಗ್ ನೀಡಿದರು.

ಮಾದರಿ ಕ್ಷೇತ್ರವಾಗಿಸುವ ಕನಸು ನನಸು ಮಾಡುವೆ: ಸಿಎಂ ಬಸವರಾಜ ಬೊಮ್ಮಾಯಿ

ವಿಜಯಸಾಕ್ಷಿ ಸುದ್ದಿ, ಹಾವೇರಿ

ನಿಮ್ಮೆಲ್ಲರ ಸಹಕಾರ, ಆಶೀರ್ವಾದದಿಂದ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಈ ಸ್ಥಾನ ಪಡೆಯಲು ನಿಮ್ಮ ಪಾತ್ರ ಪ್ರಮುಖವಿದೆ. ಈಡಿ ರಾಜ್ಯದ ಜವಾಬ್ದಾರಿ ನನಗಿದೆ. ಆದರೆ ಎಂದೂ ನನ್ನ ತವರು ಮನೆಯನ್ನು ಮರೆಯೋದಿಲ್ಲ.

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧನಾಗಿದ್ದೇನೆ. ಕ್ಷೇತ್ರದ ಬಗೆಗಿನ ಕಂಡ ಕನಸುಗಳು ನನಸಾಗುವ ಕಾಲ ಬಂದಿದೆ. ಮಾದರಿ ಕ್ಷೇತ್ರವಾಗಿಸುವ ಕನಸು ನನಸು ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮದಲ್ಲಿ ಮಾತನಾಡಿದ ಅವರು, ಬರುವ ಶೈಕ್ಷಣಿಕ ವರ್ಷಕ್ಕೆ ಸರಕಾರಿ ಪದವಿ ಕಾಲೇಜು ಆರಂಭಿಸಲಾಗುವುದು. ಇಲ್ಲಿ ಅತಿದೊಡ್ಡ ಗ್ರಾಮ ಪಂಚಾಯತಿ ಇದೆ. ವಿಶೇಷ ಅನುದಾನ ಕೊಟ್ಟು ಅಭಿವೃದ್ಧಿ ಮಾಡುತ್ತೇನೆ. ಜಾತಿ ಬೇಧವಿಲ್ಲದೆ ಎಲ್ಲರ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.

ನನ್ನ ಜೊತೆಗೆ ಹಿರಿಯರಾದ ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ, ಬೈರತಿ ಬಸವರಾಜ್ ಬಂದಿದ್ದಾರೆ. ಕ್ಯಾಬಿನೆಟ್‌ನಲ್ಲಿ ಪ್ರತಿಭಾವಂತರಿದ್ದಾರೆ. ನಮ್ಮದು ಒಳ್ಳೆಯ ಟೀಂ ಇದೆ. ಅವರೆಲ್ಲರ ಕಾರ್ಯಕ್ಷಮತೆ ಬಳಸಿಕೊಂಡು ರಾಜ್ಯದ ಅಭಿವೃದ್ಧಿ ಮಾಡುತ್ತೇನೆ. ಹೊರಗಡೆ ನಾನು ಮುಖ್ಯಮಂತ್ರಿ ಆಗಿರಬಹುದು, ಇಲ್ಲಿಗೆ ಬಂದಾಗ ನಿಮ್ಮ ಬಸವರಾಜ ಬೊಮ್ಮಾಯಿ ಎಂದು ಹೇಳಿದರು.

ರೈತರ ಆದಾಯ ದುಪ್ಪಟ್ಟುಗೊಳಿಸಲು ಯೋಜನೆ

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ರಾಜೀವ ಗ್ರಾಮದ ಬಳಿ 39 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರೈತರ ಆದಾಯ ದುಪ್ಪಟ್ಟುಗೊಳಿಸುವ ಕೆಲಸ ಮಾಡುತ್ತಿದ್ದೇನೆ.

ಭೂಮಿಯ ಪ್ರಮಾಣ ಕಡಿಮೆ ಆಗುತ್ತಿದೆ. ರೈತರ ಮಕ್ಕಳು ಬೇರೆಯವರಂತೆ ಮುಂದೆ ಬರಬೇಕು. ನಾನು ಸಿಎಂ ಆಗುತ್ತಿದ್ದಂತೆ ರೈತರ ಮಕ್ಕಳಿಗೆ ಶಿಷ್ಯವೇತನ ಕೊಡುವ ನಿರ್ಧಾರ ಮಾಡಿದೆ. ಇಡೀ ದೇಶದಲ್ಲಿ ಇಂಥ ಯೋಜನೆ ಇರುವುದು ಕರ್ನಾಟಕದಲ್ಲಿ ಮಾತ್ರ.

ರೈತರಿಗೆ ಬೇರೆ ಬೇರೆ ರೀತಿಯ ತರಬೇತಿ ಕೊಟ್ಟು ಅವರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ನೌಕರಿ ಮಾಡೋರಿಗೆ ಮಾತ್ರ ಆರ್‌ಸಿಸಿ ಮನೆಗಳು ಇವೆ. ಹೀಗಾಗಿ ರೈತರ ಮಕ್ಕಳಿಗಾಗಿ ಯೋಜನೆ ರೂಪಿಸಿದ್ದೇನೆ. ಸಂಧ್ಯಾ ಸುರಕ್ಷಾ, ವಿಧವಾ ವೇತನ, ವಿಕಲಚೇತನರ ವೇತನ ಹೆಚ್ಚಳ ಮಾಡಿದ್ದೇನೆ.

ಅಧಿಕಾರಿಗಳು ಬಹಳ ದುಡ್ಡು ಆಗುತ್ತದೆ ಎಂದರು. ಅದು ಬಡವರ ದುಡ್ಡು, ಅವರಿಗೆ ಕೊಡಲು ನಿಮಗೇನು ಕಷ್ಟ ಎಂದು ಕೇಳಿದೆ. ಒಬ್ಬ ಆಡಳಿತಗಾರನಿಗೆ ಜನರ ನಾಡಿಮಿಡಿತ ಗೊತ್ತಿರಬೇಕು.

ದುಡಿಮೆ ಇದ್ದ ನಾಡು ಶ್ರೀಮಂತ ಆಗಿರಬೇಕು. ನಾಡಿನ ಜನತೆ ಶ್ರೀಮಂತರಾದರೆ ಸರಕಾರಗಳು ಶ್ರೀಮಂತ ಆಗುತ್ತವೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಇನ್ನಷ್ಟು ಕಲ್ಪನೆಗಳನ್ನು ಇಟ್ಟುಕೊಂಡಿದ್ದೆ. ಅವೆಲ್ಲವನ್ನೂ ಮುಂಬರುವ ದಿನಗಳಲ್ಲಿ ಮಾಡಿಕೊಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಪೆಟ್ರೋಲ್ ಕಳ್ಳತನ; ಮರ್ಯಾದೆಗೆ ಅಂಜಿ ಯುವಕನ ಕೊಲೆ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಪೆಟ್ರೋಲ್ ಕಳ್ಳತನ ಮಾಡುವುದನ್ನು ನೋಡಿದ ಯುವಕನನ್ನು ಕೊಲೆಗೈದು ತಿಪ್ಪೆಗುಂಡಿಯಲ್ಲಿ ಹೂತಿಟ್ಟ ಘಟನೆ ಗೋಕಾಕನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕಿನ ಬಳೋಬಾಳ ಗ್ರಾಮದ ನಿವಾಸಿ ಮಹಾದೇವ ಕಿಚಡಿ(28) ಕೊಲೆಯಾದ ಯುವಕ.
ಗೋಕಾಕ ಬಳೋಬಾಳ ಗ್ರಾಮದ‌ ನಿವಾಸಿಯಾಗಿರುವ ಕೊಲೆ ಆರೋಪಿ ಪ್ರವೀಣ ಸುಣದೋಳಿ ಕೆಲವು ದಿನಗಳ ಹಿಂದೆ‌ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನದಿಂದ ಪೆಟ್ರೋಲ್‌ ಕಳ್ಳತನ ಮಾಡಲು ಯತ್ನಿಸುತ್ತಿರುವುದನ್ನು ಮಹಾದೇವ ನೋಡಿದ್ದಾನೆ.

ಇದರಿಂದ ಆತಂಕಕ್ಕೆ ಒಳಗಾದ ಪ್ರವೀಣ್ ಕಳ್ಳತನದ ವಿಷಯ ಗ್ರಾಮದ ಜನರಿಗೆ ಗೊತ್ತಾಗಿ ತನ್ನ ಮರ್ಯಾದೆ ಹೋಗುತ್ತದೆಂಬ ಭಯದಿಂದ ಅಲ್ಲಿಯೇ ಇದ್ದ ಕಬ್ಬಿಣದ ರಾಡ್‌ನಿಂದ ಮಹಾದೇವನಿಗೆ ಹೊಡೆದು ಕೊಲೆ ಮಾಡಿದ್ದಾನೆ.

ಬಳಿಕ ಮೃತದೇಹವನ್ನು ತಿಪ್ಪೆಯೊಂದರಲ್ಲಿ ತೆಗ್ಗು ತೆಗೆದು ಮುಚ್ಚಿದ್ದಾನೆ. ನಾಲ್ಕು ದಿನಗಳ ಬಳಿಕ ಶವ ಕೊಳೆತು ವಾಸನೆ ಬರತೊಡಗಿದ್ದು, ಅನುಮಾನಗೊಂಡ ಗ್ರಾಮಸ್ಥರು ತಿಪ್ಪೆಯಲ್ಲಿ ಅಗೆದು ನೋಡಿದಾಗ ಮೃತದೇಹ ಕಂಡಿದೆ.

ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ ಘಟಪ್ರಭಾ ಪೊಲೀಸರು ಪರಿಶೀಲನೆ ನಡೆಸಿ ಆರೋಪಿ ಪ್ರವೀಣ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಡೆದ ಘಟನೆ ವಿವರಿಸಿದ್ದಾನೆ. ಘಟಪ್ರಭಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಪ್ಟೆಂಬರ್ 13 ರವರೆಗೆ ಗದಗ ಜಿಲ್ಲೆಯಲ್ಲಿ ನಿಷೇಧಾಜ್ಞೆ, ನೈಟ್ ಕರ್ಫ್ಯೂ

0

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯ ಸರ್ಕಾರ ಪ್ರಸ್ತುತ ರಾಜ್ಯದಲ್ಲಿನ ಕೋವಿಡ್-19 ಪರಿಸ್ಥಿತಿಯನ್ನು ಅವಲೋಕಿಸಿ ವೈದ್ಯಕೀಯ ಪರಿಣಿತರು ನೀಡಿರುವ ಸಲಹೆ ಮೇರೆಗೆ ಕಣ್ಗಾವಲು ನಿಯಂತ್ರಣ ಮತ್ತು ಜಾಗೃತಿ ಮಾರ್ಗಸೂಚಿಗಳನ್ನು ಸೆ.13 ಬೆಳಿಗ್ಗೆ 6 ಗಂಟೆಯವರೆಗೆ ಮುಂದುವರೆಸಲಾಗಿದೆ.

ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕ ಆರೋಗ್ಯ, ಕಾನೂನು ಸುವ್ಯವಸ್ಥೆ ಕಾಪಾಡಲು ಕೋವಿಡ್-19 ಮಾರ್ಗಸೂಚಿಗಳನ್ವಯ ಜು.13 ರಿಂದ ಆ.30 ವರೆಗೆ ಇದ್ದ ಪ್ರತಿಬಂಧಕಾಜ್ಞೆಯನ್ನು ಸೆ.13 ಬೆಳಿಗ್ಗೆ 6 ಗಂಟೆಯವರೆಗೆ ಮುಂದುವರೆಸಿ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಅವರು ಆದೇಶ ಹೊರಡಿಸಿದ್ದಾರೆ.

ಆ.31 ರಿಂದ ಸೆ.13 ವರೆಗೆ ಪ್ರತಿ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿದ್ದು, ಜಿಲ್ಲೆಯಲ್ಲಿ ಸಾರ್ವಜನಿಕರು ಮುಖಗವಸು ಧರಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.

ಸಾರ್ವಜನಿಕರು ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸದೇ ಇದ್ದಲ್ಲಿ ಸಾಂಕ್ರಾಮಿಕ ರೋಗ ಕಾಯ್ದೆ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ ಪ್ರಕಾರ ನಗರ ಪಾಲಿಕೆ ಪ್ರದೇಶಗಳಲ್ಲಿ 250.ರೂ ಮತ್ತು ಇನ್ನಿತರ ಪ್ರದೇಶಗಳಲ್ಲಿ 100.ರೂ ದಂಡವನ್ನು ವಿಧಿಸುವುದರ ಜೊತೆಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.