Home Blog Page 3435

ಆ. 23 ರಿಂದ 9-12 ತರಗತಿಗಳು ಆರಂಭ

  • ಚಿತ್ರದುರ್ಗದಲ್ಲಿ ಪ್ರಾಥಮಿಕ & ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿಕೆ

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

23 ರಿಂದ 9 ರಿಂದ 12ನೇ ತರಗತಿಗಳು ಆರಂಭಕ್ಕೆ ಸರ್ಕಾರ ತೀರ್ಮಾನಿಸಿದೆ. 30 ರಂದು ಸಿಎಂ ಜೊತೆ ಸಭೆ ನಡೆಸಿ ಚರ್ಚಿಸಿ 1-8ನೇ ತರಗತಿಗಳ ಆರಂಭಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿದರು.

ಚಿತ್ರದುರ್ಗದಲ್ಲಿ‌ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮಕ್ಕಳ ತಜ್ಞರು ಸಹಿತ ಮಕ್ಕಳಿಗೆ ಇನ್ಪೆಕ್ಷನ್ ಕಡಿಮೆ ಎಂದು ವರದಿ ನೀಡಿದ್ದಾರೆ. ಆನ್ ಲೈನ್ ಶಿಕ್ಷಣ ಪ್ರಯತ್ನವನ್ನೂ ಸರ್ಕಾರ ಮಾಡಿತ್ತು, ಆದರೆ ಶೇ.40ರಷ್ಟು ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಸಿಕ್ಕಿಲ್ಲ ಎಂದು ವರದಿ ನೀಡಿದ್ದಾರೆ.‌


ಮಕ್ಕಳು ಭಯದಿಂದ ಶಾಲೆಗೆ ಬರಲಿಲ್ಲ ಎಂದರೆ ಶಿಕ್ಷಕರು ಮನವೊಲಿಸಬೇಕು. ಯಾವುದೇ ಕಾರಣಕ್ಕೂ ಶಿಕ್ಷಕರು ಬಲವಂತ ಮಾಡಬಾರದು. ಆನ್ ಲೈನ್ ಶಿಕ್ಷಣಕ್ಕೂ ನಮ್ಮ ಇಲಾಖೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಯಾವುದಾದರೂ ಶಾಲೆಯಲ್ಲಿ ಪಾಸಿಟಿವ್ ಕಂಡು ಬಂದರೆ ಒಂದು ವಾರ ಸೀಲ್ ಡೌನ್ ಗೆ ನಿರ್ಧಾರ ಮಾಡಿದ್ದೇವೆ. 12 ಲಕ್ಷ ಪಿಯುಸಿ ಸೀಟ್ ಗಳು ನಮ್ಮ ಬಳಿ ಇದೆ, ಯಾವುದೇ ಸಮಸ್ಯೆ ಇಲ್ಲ. ಅನೇಕ ಕಡೆ ಸ್ವಲ್ಪ ವ್ಯತ್ಯಾಸಗಳಿದೆ. ಎಲ್ಲಿ ಅವಕಾಶ ಇದೆ ಆ ಕಡೆ ಸ್ಥಳೀಯ ಡಿಡಿಪಿಐ ವ್ಯವಸ್ಥೆ ಮಾಡುತ್ತಾರೆ.

ಪ್ರತಿ ದಿನವೂ ಅಡ್ಮೀಷನ್ ಮೇಲೆ ನಿಗಾವಹಿಸಿದ್ದೇವೆ ಎಂದು ಹೇಳಿದರು.
16 ಸಾವಿರ ಮಕ್ಕಳು ಮಾತ್ರ, ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಾರೆ. ಪರೀಕ್ಷೆ ನಡೆಸಲು ಕಷ್ಟವಾಗುವುದಿಲ್ಲ. ತೃಪ್ತಿ ಇಲ್ಲ ಎಂಬ ಮಕ್ಕಳಿಗೆ ಎಕ್ಸಾಂಗೆ ಅವಕಾಶ ಮಾಡಿದ್ದೇವೆ. ನಾಳೆ ಪರೀಕ್ಷೆ ಶುರುವಾಗುತ್ತದೆ ಎಂದು ಹೇಳಿದರು.

ಮಗಳನ್ನು ಕಳುಹಿಸದ ಮಾವನ ಕತ್ತು ಸೀಳಿದ ಅಳಿಯ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಮಗಳನ್ನು ತನ್ನ ಜೊತೆಗೆ ಕಳುಹಿಸಲು ನಿರಾಕರಿಸಿದ ಕಾರಣಕ್ಕಾಗಿ ಸಿಟ್ಟಿಗೆದ್ದ ಅಳಿಯನೊಬ್ಬ ಮಾವನ ಕತ್ತು ಸೀಳಿದ ಘಟನೆ ಸಮೀಪದ ಹಳ್ಳಿಕೇರಿ ಗ್ರಾಮದಲ್ಲಿ ನಡೆದಿದೆ.

ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದ ಶಿವಪ್ಪ ದಳವಾಯಿ ಎಂಬಾತನೇ ತೀವ್ರ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ದಾಖಲಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಕಳೆದ ಕೆಲವು ವರ್ಷಗಳ ಹಿಂದೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಜಗದೀಶ್ ಕಂಬಳಿ ಎನ್ನುವವನ ಜೊತೆ ಶಿವಪ್ಪ ದಳವಾಯಿ ಅವರ ಮಗಳ ಜೊತೆಗೆ ಲಗ್ನವಾಗಿತ್ತು.

ಆದರೆ ಕೆಲವು ದಿನಗಳಿಂದ ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ತವರು ಮನೆ ಹಳ್ಳಿಕೇರಿಯಲ್ಲಿಯೇ ಉಳಿದುಕೊಂಡಿದ್ದ ಪತ್ನಿಯನ್ನು ಅಳಿಯ ಜಗದೀಶ್ ಕಂಬಳಿ ಕರೆಯಲು ಗ್ರಾಮಕ್ಕೆ ಬಂದಿದ್ದ. ಆದರೆ ಮಗಳನ್ನು ಕಳುಹಿಸಲು ಶಿವಪ್ಪ ನಿರಾಕರಿಸಿದ.

ಇದು ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿದೆ. ಆಗ ಸಿಟ್ಟಿಗೆದ್ದ ಜಗದೀಶ್ ಕಂಬಳಿ ಬ್ಲೇಡ್ ನಿಂದ ದಾಳಿ ನಡೆಸಿದ್ದಾನೆ. ತಂದೆಯ ಜೀವ ಉಳಿಸಲು ಬಂದ ಮಗ ಪ್ರವಿಣ ದಳವಾಯಿ ಯ ಕುತ್ತಿಗೆಗೂ ಬ್ಲೇಡ್ ನಿಂದ ದಾಳಿ ನಡೆಸಿದ್ದಾನೆ.

ಈ ಘಟನೆಯಿಂದ ಹಳ್ಳಿಕೇರಿ ಗ್ರಾಮದಲ್ಲಿ ಕೆಲಕಾಲ ಆತಂಕದ‌ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ಮಾಹಿತಿ ತಿಳಿದ ಅಣ್ಣಿಗೇರಿ ಠಾಣೆಯ ಪಿಎಸ್ಐ ಎಲ್ ಕೆ ಜೂಲಕಟ್ಟಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿ ಜಗದೀಶ್ ಕಂಬಳಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಶೀಘ್ರ ರಸಗೊಬ್ಬರ ಸಮಸ್ಯೆಗೆ ಪರಿಹಾರ

  • ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭರವಸೆ

ವಿಜಯಸಾಕ್ಷಿ ಸುದ್ದಿ, ಮೈಸೂರು

ರಾಜ್ಯದ ಕೆಲವೆಡೆ ರಸಗೊಬ್ಬರ ಕೊರತೆಯಿದೆ ಎಂಬ ಮಾಹಿತಿಯಿದೆ. ಆ ಇಲಾಖೆಯ ಗಮನಕ್ಕೆ ತರಲಾಗಿದ್ದು, ಶೀಘ್ರ ರಸಗೊಬ್ಬರ ಕೊರತೆ ನೀಗಿಸಲಿದ್ದಾರೆ ಎಂದು ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರದ್ಲಾಂಜೆ ಹೇಳಿದರು.

ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಸದ್ಯಕ್ಕೆ ಬಿತ್ತನೆ ಬೀಜಗಳ ಕೊರತೆಯಿಲ್ಲ ಎಂದು ಹೇಳಿದರು.

ಬರುವ ಸೆಪ್ಟೆಂಬರ್ ನಲ್ಲಿ ಕೃಷಿಗೆ ಸಂಬಂಧಿಸಿದ
ಕಾರ್ಯಕ್ರಮ ಆಯೋಜನೆ ಮಾಡುವಂತೆ ಸುತ್ತೂರು ಶ್ರೀಗಳು ಸಲಹೆ ನೀಡಿದ್ದು, ಕೃಷಿಕರಿಗೆ ಪೂರಕವಾಗುವಂತೆ ಕಾರ್ಯಾಗಾರ, ಸಂವಾದ ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.

ಕೊರೊನಾ ಕಾಣಿಸಿಕೊಂಡ ಬಳಿಕ ವಿದ್ಯಾವಂತ ಯುವಕರು ಕೃಷಿಯತ್ತ ಮುಖ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಯುವಕರು ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಯೋಜನೆಗಳನ್ನು ರೂಪಿಸಲಾಗುತ್ತದೆ ಎಂದು ಹೇಳಿದರು.
ಮರಳಿ ರಾಜ್ಯ ರಾಜಕಾರಣಕ್ಕೆ ಬರುವಿರಾ.? ಎಂಬ‌ ಪ್ರಶ್ನೆಗೆ ಇಲ್ಲ ಎಂದು ಸಚಿವೆ ಸ್ಪಷ್ಟವಾಗಿ ನಿರಾಕರಿಸಿದರು.

ಕಂದಕಕ್ಕೆ ಉರುಳಿದ ಸಾರಿಗೆ ಸಂಸ್ಥೆ ಬಸ್; ಗ್ಲಾಸ್ ಒಡೆದು ಹೊರ ಬಂದ ಪ್ರಯಾಣಿಕರು

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ತಾಲೂಕಿನ ಕದಾಂಪುರ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕೆಎಸ್ ಆರ್ ಟಿಸಿ ಬಸ್ ಉರುಳಿ ಬಿದ್ದಿದ್ದು, ಪ್ರಾಣ ಉಳಿಸಿಕೊಳ್ಳಲು ಪ್ರಯಾಣಿಕರು ಕಿಡಕಿ ಗ್ಲಾಸ್ ಒಡೆದು ಹೊರ ಬಂದ ಘಟನೆ ಜರುಗಿದೆ.

ಬಸ್ ನಲ್ಲಿ ಸುಮಾರು 45 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.

ಬಸ್ ಗೆ ಬೈಕ್ ಅಡ್ಡಬಂದಿದ್ದು, ಚಾಲಕ ಬೈಕ್ ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಬಸ್ ನ್ನು ರಸ್ತೆ ಬದಿಗೆ ತಿರುಗಿಸಿದಾಗ ಬಸ್ ಉರಳಿ ಬಿದ್ದಿದೆ.

ಸ್ಥಳೀಯರು ಬಸ್ ನ ಗ್ಲಾಸ್ ಒಡೆದು ಪ್ರಯಾಣಿಕರು ಹೊರಬರಲು ಸಹಾಯ ಮಾಡಿದರು.

ಕೆಲವು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಭಾರೀ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ. ಮುಂಡರಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಲ್ಲೋಲ, ಕಲ್ಲೋಲ; ಗುಂಡಿನ ಚಕಮಕಿಯಲ್ಲಿ ಐವರು ನಾಗರಿಕರ ಸಾವು

ವಿಜಯಸಾಕ್ಷಿ ಸುದ್ದಿ, ನವದೆಹಲಿ

ತಾಲಿಬಾನ್ ಉಗ್ರರಿಗೆ ಹೆದರಿ ವಿದೇಶಿಯರು ದೇಶದಿಂದ ಪರಾರಿಯಾಗಲು ಕಾಬೂಲ್ ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುಗಿಬಿದ್ದಿರುವ ಕಾರಣ ನಿಲ್ದಾಣದಲ್ಲಿ ಅಲ್ಲೋಲ, ಕಲ್ಲೋಲ ಉಂಟಾಗಿದೆ.

ತಾಲಿಬಾನ್ ಉಗ್ರರು ಅಪಘಾನಿಸ್ಥಾನ್ ರಾಜ್ಯಧಾನಿ ಕಾಬೂಲ್ ವಶಕ್ಕೆ ಪಡೆದಿದ್ದರೂ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಬಂದಿಲ್ಲ. ಆದರೂ ನಿಲ್ದಾಣದಲ್ಲಿ ಗುಂಡಿನ ಚಕಮಕಿಯ ಶಬ್ದ ಕೇಳಿಬರುತ್ತಿದ್ದು, ಐವರು ನಾಗರಿಕರು ಮೃತಪಟ್ಟಿದ್ದಾರೆ.

ತನ್ನ ನಾಗರಿಕರನ್ನು ಮರಳಿ ಸ್ವದೇಶಕ್ಕೆ ಸುರಕ್ಷಿತವಾಗಿ ಕರೆಸಿಕೊಳ್ಳಲು ಅಮೇರಿಕದ 3ಸಾವಿರಕ್ಕೂ ಅಧಿಕ ಸೈನಿಕರನ್ನು ರವಾನಿಸಿದೆ. ಈ ಸೈನಿಕರು ಕಾಬೂಲ್ ವಿಮಾನ ನಿಲ್ದಾಣದಲ್ಲಿ
ಬೀಡುಬಿಟ್ಟಿದ್ದಾರೆ.

ಅಮೆರಿಕ ವಿಮಾನಗಳು ನಿಲ್ದಾಣಕ್ಕೆ ಬಂದಿಳಿಯುತ್ತಿದ್ದು, ವಿಮಾನ ಹತ್ತಲು ಜನರು ಮುಗಿಬೀಳುತ್ತಿದ್ದಾರೆ. ರನ್ ವೇ ಗೆ ವಿಮಾನ ಆಮಿಸುತ್ತಿದ್ದಂತೆ ಅಮೆರಿಕನ್ನರು ಎದ್ದೆವೊ ಬಿದ್ದೆವೋ ಎಂದು ವಿಮಾನ ಬೆನ್ನಟ್ಟಿ ಓಡುತ್ತಿದ್ದಾರೆ.

ವಿಮಾನ ನಿಲ್ಲುತ್ತಿದ್ದಂತೆಯೇ ಜನರು ಒಬ್ಬರ ಮೇಲೊಬ್ಬರು ಬಿದ್ದು ಮೇಲೇರುತ್ತಿದ್ದಾರೆ.
ಈ ಮಧ್ಯೆ ಕಾಬೂಲ್ ವಿಮಾನ ನಿಲ್ದಾಣದ ಚಿಂತಾಜನಕ ಸ್ಥಿತಿ ಕಂಡು ಭಾರತ ತನ್ನ ಪ್ರಜೆಗಳನ್ನು ಕರೆತರಲು ಕಾಬೂಲ್ ಗೆ ಕಳಿಸಲು ನಿರ್ಧರಿಸಿದ್ದ ಎರಡು ವಿಮಾನಗಳ ಸೇವೆ ರದ್ದುಗೊಳಿಸಿದೆ.

ಮತ್ತೊಂದೆಡೆ ಪ್ರಧಾನಿ ನಿವಾಸದಲ್ಲಿ ತಾಲಿಬಾನ್ ಉಗ್ರರು ಮುಖಂಡರು ಬೀಡು ಬಿಟ್ಟು ಮುಂದಿನ ಹೆಜ್ಜೆಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಕಾಬೂಲ್ ನ ಬೀದಿ ಬೀದಿಗಳಲ್ಲಿ ಜನರು ಲಗೇಜ್ ತೆಗೆದುಕೊಂಡು ಪಲಾಯಣ ಮಾಡುತ್ತಿರುವ ದೃಶ್ಯಗಳು ಕಂಡುಬರುತ್ತಿದೆ.

ಅಪಘಾನ್ ಸೈನಿಕರ ಸ್ಥಾನದಲ್ಲಿ ಈಗ ತಾಲಿಬಾನ್ ಉಗ್ರರು ನಿಂತಿದ್ದು, ಕಾಬೂಲ್ ನಿಂದ ಹೊರಹೋಗುವ ಪ್ರತಿಯೊಂದು ವಾಹನ ತಪಾಸಣೆ ನಡೆಸಿ ಬಿಡುತ್ತಿದ್ದಾರೆ. ಒಟ್ಟಾರೆ ಅಪಘಾನಿಸ್ಥಾನದ ಸ್ಥಿತಿ ಚಿಂತಾಜನಕವಾಗಿದ್ದು, ಮುಂದೇನು ಮಾಡುವುದು ಎಂಬ ಚಿಂತೆ ಅಲ್ಲಿನ ಜನರನ್ನು ಕಾಡುತ್ತಿದೆ.

ನೆಹರೂ ಬಗ್ಗೆ ಸಿ.ಟಿ.ರವಿಗೆ ಏನು ಗೊತ್ತು ? ಸ್ವಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಗುಡುಗಿದ ಹಳ್ಳಿಹಕ್ಕಿ

ವಿಜಯಸಾಕ್ಷಿ ಸುದ್ದಿ, ಮೈಸೂರು

ಮಾಜಿ ಪ್ರಧಾನಿ ನೆಹರೂ ಆಸ್ಮಿತೆ, ಭಾರತದ ಗರ್ವದ ಸಂಕೇತ. ಅವರ ಬಗ್ಗೆ ಇಷ್ಟು ಲಘುವಾಗಿ ಮಾತನಾಡುವುದು ಸರಿಯಲ್ಲ. ನಿಮಗೆ ನೆಹರೂ ಬಗ್ಗೆ ಏನೂ ಗೊತ್ತಿದೆ ? ಎಂದು ತಮ್ಮದೇ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಬಿಜೆಪಿ ಎಂಎಲ್ ಸಿ ಎಚ್. ವಿಶ್ವನಾಥ್ ಗುಡುಗಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ನೆಹರೂ ಅಧಿಕಾರದ ಅವಧಿಗಿಂತ ಹೆಚ್ಚಿನ ಅವಧಿ ಜೈಲಲ್ಲಿ ಕಳೆದವರು.

ಇಡೀ ಕುಟುಂಬವೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿತ್ತು. ಸಿ.ಟಿ.‌ ರವಿ ನೆಹರೂ ಬಗ್ಗೆ ಓದಿಕೊಂಡು ಮಾತನಾಡಲಿ. ಸಿ.ಟಿ. ರವಿಗೂ ಮತ್ತು ಬಿಜೆಪಿಗೂ ಈ ಮಾತು ಶೋಭೆ ತರುವುದಿಲ್ಲ ಎಂದು ತಿಳಿಸಿದರು.

ನೆಹರೂ ಅವರ ತಂದೆ ತಮ್ಮ ಇಡೀ ಆಸ್ತಿಯನ್ನು ದೇಶಕ್ಕೆ ಬರೆದು ಕೊಟ್ಟರು. ಸಿ.ಟಿ. ರವಿ ಏನು ಕೊಟ್ಟಿದ್ದಾರೆ. ಐದು ಪೈಸೆಯನ್ನು ದೇಶಕ್ಕೆ ಕೊಟ್ಟಿದ್ದೀರಾ? ಎಂದು ಪ್ರಶ್ನಿಸಿದರು.

ವಾಜಪೇಯಿ ಅವರು ನೆಹರೂ ನಿಧಾನರಾದಾಗ ಏನು ಭಾಷಣ ಮಾಡಿದ್ದರು ಎಂಬುದನ್ನು ಸಿ.ಟಿ. ರವಿ ಓದಿಕೊಳ್ಳಬೇಕು. ನೆಹರೂ ಅವರ ಬಗ್ಗೆ ಚರಿತ್ರಾರ್ಹ ಭಾಷಣ ಮಾಡಿದ್ದಾರೆ. ಇಂತಹ ನೆಹರೂ ಬಗ್ಗೆ ನೀವು ಕೀಳಾಗಿ ಮಾತಾಡುವುದು ತಪ್ಪು.

ಯಾರನ್ನೋ ಓಲೈಸಲು ಈ ರೀತಿ ಮಾತಾಡಬೇಡಿ ಎಂದು ಸಲಹೆ ನೀಡಿದರು. ಕರ್ನಾಟಕದಲ್ಲಿ ಐದು ಜನ ಮಾಜಿ ಸಿಎಂ ಗಳಿದ್ದಾರೆ. ನೀವು ಯಾಕೆ ಇದನ್ನು ಖಂಡಿಸುತ್ತಿಲ್ಲ.?

ನಿಮ್ಮ ಪಕ್ಷದ ನಾಯಕರಿಗೆ ಬಾಯಿ ಮುಚ್ಚಿಕೊಂಡಿರಿ ಎಂದು ಹೇಳುವಷ್ಟು ನೈತಿಕತೆ ಕಳೆದು ಕೊಂಡಿದ್ದೀರಾ ? ರಾಜಕಾರಣವನ್ನು ಎಲ್ಲಿಗೆ ತಂದು ನಿಲ್ಲಿಸುತ್ತಿದ್ದೀರಿ ? ಎಂದು ಪ್ರಶ್ನಿಸಿದರು.

ವಾಜಪೇಯಿ ಅವರನ್ನು ಕಾಂಗ್ರೆಸ್ ನಾಯಕರು ಕುಡುಕ ಎಂದಿರುವುದು ಖಂಡನೀಯ. ನೆಹರೂ, ವಾಜಪೇಯಿ ಇಬ್ಬರು ಈ ದೇಶದ ಶ್ರೇಷ್ಠ ಆಡಳಿತಗಾರರು. ಪ್ರಿಯಾಂಕ ಖರ್ಗೆ ತಮ್ಮ ತಂದೆಯನ್ನು ನೋಡಿ ಮಾತಾಡುವುದನ್ನು ಕಲಿಯಲಿ ಎಂದು ಬುದ್ದಿವಾದ ಹೇಳಿದರು.

ಹೇಳಿಕೆಗಳಿಂದ ನಾಯಕತ್ವ ಬೆಳೆಯಲ್ಲ, ಕೆಲಸದಿಂದ ಬೆಳೆಸಿಕೊಳ್ಳಬೇಕು

  • ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರೋಧಿಗಳಿಗೆ ತಿರುಗೇಟು

ವಿಜಯಸಾಕ್ಷಿ ಸುದ್ದಿ, ಶಿವಮೊಗ್ಗ

ಈಚೆಗೆ ಬಹಳಷ್ಟು ಜನರನ್ನು ನೋಡುತ್ತಿದ್ದೇವೆ. ಎಲುಬಿಲ್ಲದ ನಾಲಿಗೆಯಂತೆ ಮಾತನಾಡುತ್ತಿದ್ದಾರೆ.‌ ಹೇಳಿಕೆ ಕೊಡುವ ಮೂಲಕ ನಾಯಕರಾಗಿ ಬೆಳೆಯುತ್ತೇವೆ ಎಂದುಕೊಂಡಿದ್ದಾರೆ.

ಹೇಳಿಕೆಗಳಿಂದ ನಾಯಕರಾಗಲ್ಲ. ಜನಪರ ಕೆಲಸ ಮಾಡಿ ನಾಯಕರಾಗಬೇಕು ಎಂದು ಬಿ.ವೈ. ವಿಜಯೇಂದ್ರ ಎದುರಾಳಿಗಳಿಗೆ ಚಾಟಿ ಬೀಸಿದರು.

ಬಿ.ವೈ. ರಾಘವೇಂದ್ರ ಹುಟ್ಟುಹಬ್ಬ ಹಿನ್ನೆಲೆ ಇಂದು ಶಿವಮೊಗ್ಗದ ರವೀಂದ್ರ ನಗರ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
ವಾಜಪೇಯಿ ಅವರ ಬಗ್ಗೆ ಮಾತನಾಡುವುದು ಯಾವ ಪಕ್ಷದವರಿಗೂ ಶೋಭೆ ತರಲ್ಲ.

ಮಾತಿನಿಂದ ನಮ್ಮನ್ನು ಗುರುತಿಸಿಕೊಳ್ಳುವುದಲ್ಲ. ನಮ್ಮ ಕೆಲಸ ನೋಡಿ ಜನರು ಗುರುತಿಸಬೇಕು ಎಂದು ಕಿವಿಮಾತು ಹೇಳಿದರು.

ಯಡಿಯೂರಪ್ಪನವರು ಹೋರಾಟ ಮಾಡುವಾಗ ಶಿಕಾರಿಪುರದಿಂದ ಸೈಕಲ್ ಜಾಥಾ, ಪಾದಯಾತ್ರೆ ಹಮ್ಮಿಕೊಂಡಿದ್ದರು. ಮುಖ್ಯಮಂತ್ರಿ ಆಗಬೇಕೆಂದು ಈ ಹೋರಾಟ ಮಾಡ್ಲಿಲ್ಲ. ಜನರ ಸಮಸ್ಯೆ ಮುಂದಿಟ್ಟುಕೊಂಡು ಹೋರಾಟ ಮಾಡಿದರು.

ಯಡಿಯೂರಪ್ಪನವರು ಅಂದ್ರೆ ಅಭಿವೃದ್ಧಿ ಅಂತ ಜನರು ಮಾತನಾಡಿತ್ತಿದ್ದರು ಎಂದು ಹೇಳಿದರು.
ರಾಘಣ್ಣ ಇರಬಹುದು, ನಾನಿರಬಹುದು. ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಯಾವುದೇ ಸ್ಥಾನಕ್ಕಾಗಿ ಕೆಲಸ‌ ಮಾಡುತ್ತಿಲ್ಲ. ಯಡಿಯೂರಪ್ಪ ನವರು ಹೇಳಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದೇವೆ.

ರಾಘಣ್ಣ ಸಹ ಅದೇ ದಾರಿಯಲ್ಲಿ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದ್ದಾರೆ. ಹೀಗಾಗಿ ರಾಘಣ್ಣನವರನ್ನು ಎಲ್ಲರೂ ಮೆಚ್ಚಿದ್ದಾರೆ ಎಂದರು.

ನಮ್ಮದು ರಾಷ್ಟ್ರೀಯ ಪಕ್ಷ. ಪ್ರಾದೇಶಿಕ ಪಕ್ಷವಲ್ಲ. ಯಾರಿಗೆ ಯಾವ ಸ್ಥಾನ ನೀಡಬೇಕು ಎಂಬುದರ ಬಗ್ಗೆ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಅಪಘಾನಿಸ್ಥಾನದಲ್ಲಿ ತಾಲಿಬಾನ್ ಎರಡನೇ ಇನ್ನಿಂಗ್ಸ್ ಆರಂಭ

  • ದೇಶದ ಪ್ರಧಾನಿ ಅಶ್ರಫ್ ಘನಿ ದೇಶ ಬಿಟ್ಟು ಪಲಾಯನ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ತಿಂಗಳ ಕಾಲದ ಸುದೀರ್ಘ ಸಂಘರ್ಷದ ಬಳಿಕ ಕೊನೆಗೂ ತಾಲಿಬಾನ್ ಉಗ್ರರು ಅಪಘಾನಿಸ್ತಾನವನ್ನು ಸಂಪೂರ್ಣ ವಶಕ್ಕೆ ಪಡೆದಿದ್ದು, ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.

ತಾಲಿಬಾನ್ ಉಗ್ರರು ಕಾಬೂಲ್ ಮೇಲೆ ದಾಳಿ ಮಾಡುತ್ತಿದ್ದಂತೆಯೇ ಅಪಘಾನಿಸ್ಥಾನ್ ಪ್ರಧಾನಿ ಅಶ್ರಫ್ ಘನಿ ಹಾಗೂ ಸೇನೆಯ ಪ್ರಮುಖರು
ದೇಶದಿಂದ ಪಲಾಯನಗೈದಿದ್ದಾರೆ.

ಆಗಸ್ಟ್ ಮೊದಲ ವಾರದಿಂದ ದೇಶದ ಒಂದೊಂದೇ ಪ್ರಾಂತೀಯ ರಾಜಧಾನಿಗಳನ್ನು ವಶಕ್ಕೆ ಪಡೆಯುತ್ತಾ ಬಂದಿದ್ದ ತಾಲಿಬಾನ್ ಉಗ್ರರು ಎಲ್ಲ ದೊಡ್ಡ ಪ್ರಾಂತಗಳನ್ನು ವಶಕ್ಕೆ ಪಡೆದು ದೇಶದ ರಾಜಧಾನಿ ಕಾಬೂಲ್ ಬಾಗಿಲಿಗೆ ಬಂದು ನಿಂತಿದ್ದರು.

ಕಾಬೂಲ್ ವಶಪಡಿಸಿಕೊಳ್ಳಲು ಭಾರಿ ಸಂಘರ್ಷ ಏರ್ಪಡಲಿದೆ ಎಂದು ಭಾವಿಸಿದ್ದ ವಿಶ್ವ ಸಮುದಾಯದ ಲೆಕ್ಕಾಚಾರವನ್ನು ಉಲ್ಟಾ ಮಾಡಿರುವ ಅಪ್ಘಾನ್ ಸೇನೆ ಶಸ್ತ್ರಾಸ್ತ್ರ ಒಪ್ಪಿಸಿ ಶರಣಾಗಿದೆ.

ಸುಮಾರು 3 ಲಕ್ಷದಷ್ಟು ಸೇನಾ ಬಲ ಹಾಗೂ ಆಧುನಿಕ ಶಸ್ತ್ರಾಸ್ತ್ರ, ವಾಯುಸೇನೆ, ಯುದ್ಧವಿಮಾನ ಹೊಂದಿದ್ದ ಅಪಘಾನ್ ಸೇನೆ ಕೇವಲ ಹತ್ತು ಸಾವಿರದಷ್ಟಿದ್ದ ತಾಲಿಬಾನ್ ಉಗ್ರರ ಎದುರು ಮಂಡಿಯೂರಿ ಅಚ್ಚರಿ ಮೂಡಿಸಿದೆ.

ಕಾಬೂಲ್ ತಾಲಿಬಾನ್ ವಶಕ್ಕೆ ಪಡೆದಿದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಅಪ್ಘನ್ ರಾಜಧಾನಿಯಲ್ಲಿ ಅಲ್ಲೋಲ ಕಲ್ಲೋಲ ಆರಂಭವಾಗಿದೆ.

ತಾಲಿಬಾನ್ ಉಗ್ರರಿಗೆ ಹೆದರಿ ಜನರು ವಾಹನ, ಕಾಲ್ನಡಿಗೆ ಮೂಲಕ ಪಲಾಯನ ಮಾಡಲು ಆರಂಭಿಸಿದ್ದು, ರಸ್ತೆಗಳೆಲ್ಲ ಜಾಮ್ ಆಗಿವೆ.

ಈ ಮಧ್ಯೆ ತಾಲಿಬಾನ್ ಆಡಳಿತ ಜನರ ಪಲಾಯನ ತಡೆಯಲು ಕರ್ಫ್ಯೂ ಜಾರಿಗೊಳಿಸಿದೆ.
ಭಾರತ ಸರ್ಕಾರ ಅಪಘಾನಿಸ್ತಾನದಲ್ಲಿರುವ ರಾಜತಾಂತ್ರಿಕರು ಹಾಗೂ ಭಾರತೀಯರನ್ನು ದೇಶಕ್ಕೆ ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದು, ವಿಶೇಷ ವಿಮಾನಗಳು ಕಾಬೂಲ್ ತಲುಪಿವೆ‌.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಗೌರವ ಸನ್ಮಾನ

ವಿಜಯಸಾಕ್ಷಿ ಸುದ್ದಿ, ಗದಗ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಗದಗ ಜಿಲ್ಲಾ ಘಟಕದ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಜಿಲ್ಲಾಡಳಿತ ವತಿಯಿಂದ ಭಾನುವಾರ 75ನೇ ಸ್ವಾತಂತ್ರ‍್ಯೋತ್ಸವದ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ. ಎಮ್.ಡಿ. ಸಾಮುದ್ರಿ, ಜಿಲ್ಲಾಡಳಿತ ಮಂಡಳಿ ಹಾಗೂ ರಾಜ್ಯ ನಿರ್ದೇಶಕ ಮಂಡಳಿ ಸದಸ್ಯರಾದ ಡಾ. ಆರ್ ಎನ್ ಗೋಡಬೋಲೆ ಅವರಿಗೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಅವರ ಸಮ್ಮುಖದಲ್ಲಿ ನೆನಪಿನ ಕಾಣಿಕೆ, ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ ಇತರರು ಇದ್ದರು.

ರೆಡ್ ಕ್ರಾಸ್ ಸಂಸ್ಥೆ ಕೋವಿಡ್ ಒಂದನೇ ಅಲೆ ಹಾಗೂ ಎರಡನೇ ಅಲೆಯಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಹಾಗೂ ಹಲವಾರು ದಾನಿಗಳ ಸಹಕಾರದಿಂದ ಜಿಲ್ಲಾದ್ಯಂತ ಸಾಮಾಜಿಕ ಕಾರ್ಯಗಳನ್ನ ಮಾಡುತ್ತಾ ಬಂದಿದೆ.

ಲಾಕ್‌ಡೌನ್ ಅವಧಿಯಲ್ಲಿ ಸ್ಯಾನಿಟೈಸರ್, ಮಾಸ್ಕ್ ವಿತರಣೆ, ಬಡವರು ಹಾಗೂ ಬಡ ಕೂಲಿ ಕಾರ್ಮಿಕರಿಗೆ ಆಹಾರ ಪೊಟ್ಟಣಗಳ ವಿತರಣೆ, ದಿನಸಿ ಕಿಟ್, ಆಸ್ಪತ್ರೆಗಳಿಗೆ ಆಕ್ಸಿಜನ್ ಕಾನ್ಸ್ಂಟ್ರೇಟರ್ ವಿತರಣೆ ಸೇರಿದಂತೆ ಜನರಲ್ಲಿ ಕೋವಿಡ್ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ.

ಸಿ.ಟಿ.ರವಿ, ಈಶ್ವರಪ್ಪರಿಗೆ ಬಿಜೆಪಿ ವರಿಷ್ಠರು ಬುದ್ದಿವಾದ ಹೇಳಲಿ; ಸತೀಶ ಜಾರಕಿಹೊಳಿ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಸಿ.ಟಿ.ರವಿ, ಈಶ್ವರಪ್ಪ ದೊಡ್ಡ ಹುದ್ದೆಯಲ್ಲಿದ್ದಾರೆ. ಆದರೆ, ಬಾಯಿಗೆ ಬಂದಂತೆ ಹೇಳಿಕೆ ನೀಡಿ‌‌‌‌ ಚಿಕ್ಕವರಾಗುತ್ತಿದ್ದಾರೆ. ಆ ಪಕ್ಷದ ವರಿಷ್ಠರು ಅವರಿಗೆ ಬುದ್ದಿ ಹೇಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಅಥಣಿಯಲ್ಲಿ ರವಿವಾರ ಮಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹುಕ್ಕಾ ಬಾರ್ , ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.

ನಮ್ಮದು ಶಿಸ್ತಿನ, ಸಂಸ್ಕೃತಿಯ ಪಕ್ಷ ಎಂದು ಹೇಳುವ ಬಿಜೆಪಿಯವದು ಇದೇ ಸಂಸ್ಕೃತಿನಾ ಎಂದು ಪ್ರಶ್ನಿಸಿದರು.

ಕಳೆದ ಇಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಪ್ರೀತಿ ವಿಶ್ವಾಸ ಸಿಕ್ಕಿರಲಿಲ್ಲ, ಸಂಘ ಪರವಾರ ಮತ್ತು ಬಿಜೆಪಿ ಹೈಕಮಾಂಡ್‌ನಿಂದ ನನಗೆ ಹೆಚ್ಚಿನ ಪ್ರೀತಿ ಸಿಕ್ಕಿದೆ ಎಂಬ ರಮೇಶ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ ಸತೀಶ ಜಾರಕಿಹೊಳಿ, ಎಷ್ಟು ಲವ್ ಆಗಿದೆ ಎಂದು ಅವರನ್ನೇ ಕೇಳಿ, ಎಷ್ಟು ಅಪ್ಪಿಕೊಂಡಿದ್ದಾರೆ, ಎಷ್ಟು ಪ್ರೀತಿ ವಿಶ್ವಾಸ ಸಿಕ್ಕಿದೆ. ಅದಕ್ಕಾಗಿಯೆ ಗೋಕಾಕನಿಂದ ಬೆಂಗಳೂರಿಗೆ ಬೆಂಗಳೂರಿನಿಂದ ದೆಹಲಿಗೆ ಅಲೆದಾಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ, ಶಶಿಕಲಾ ಜೊಲ್ಲೆ ನೈತಿಕತೆ ಇದ್ದರೆ ರಾಜೀನಾಮೆ ನೀಡಲಿ. ಇಂತಹ ಆರೋಪ ಹೊತ್ತವರು ಸಾಕಷ್ಟು ಜನ ಬಿಜೆಪಿಯಲ್ಲಿದ್ದಾರೆ ಎಂದರು.

ಈ ವೇಳೆ ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ ರಾಜು ಕಾಗೆ, ಕಾಂಗ್ರೆಸ್ ಚಿಕ್ಕೋಡಿ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಗಜಾನನ ಮಂಗಸೂಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.