Home Blog Page 3451

ದಿಢೀರ್ ಬೆಂಗಳೂರಿಗೆ ಹಾರಿದ ಕೇಂದ್ರ ಸಚಿವ ಪ್ರಹ್ಲಾದ ಜೋಷಿ

  • ಹುಬ್ಬಳ್ಳಿಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಸಿಎಂ ಯಡಿಯೂರಪ್ಪ ಪದತ್ಯಾಗ‌ ಕುರಿತಂತೆ ಇಂದು ಸಂಜೆ ದೆಹಲಿ ವರಿಷ್ಠರಿಂದ ಬರುವ ಸಂದೇಶಕ್ಕಾಗಿ ರಾಜ್ಯದ ಜನತೆ ಕಾತರರಾಗಿದ್ದು, ಈ ಮಧ್ಯೆ ಸಿಎಂ ಸ್ಥಾನದ ರೇಸ್ ನಲ್ಲಿ ಮೊದಲ ಸಾಲಿನಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ದಿಢೀರ್ ರಾಜಧಾನಿ ಬೆಂಗಳೂರಿಗೆ ಹಾರಿದ್ದಾರೆ.

ಇಂದು ಬಿಎಸ್ ವೈ ಪದತ್ಯಾಗ ನಿಟ್ಟಿನಲ್ಲಿ ಹೈಕಮಾಂಡ್ ಸಂದೇಶ ಬರಲಿದ್ದು, ಈ ಹಿನ್ನಲೆ
ಹುಬ್ಬಳ್ಳಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿ ಗೆದರಿವೆ. ನಿನ್ನೆ ರಾತ್ರಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಪ್ರಹ್ಲಾದ್ ಜೋಶಿ ಭೇಟಿಯಾಗಿ ಚರ್ಚೆ ನಡೆಸಿದ್ದರು. ಇದೇ ವೇಳೆ ಸಚಿವ ಜಗದೀಶ್ ಶೆಟ್ಟರ್ ಕೂಡ ಆರ್.ಎಸ್.ಎಸ್. ನಾಯಕರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಇಂದು ಜೋಶಿ ಬೆಂಗಳೂರಿಗೆ ಹೋಗಿದ್ದು, ಆರ್.ಎಸ್.ಎಸ್ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಎನ್ನಲಾಗುತ್ತಿದ್ದರೂ ಸಂಜೆ ನಡೆಯುವ ಮಹತ್ವದ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜಧಾನಿಗೆ ಬಂದಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ.

ಇಂದು ಸಂಜೆಯ ಸಂದೇಶಕ್ಕೆ ಕಾದಿರುವೆ

  • ವರಿಷ್ಠರಿಂದ ಬರುವ ಸಂದೇಶ ಪಾಲಿಸುವೆ
  • ಬೆಳಗಾವಿಯಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಪದತ್ಯಾಗ ಕುರಿತಂತೆ ಇಂದು ಸಂಜೆಯೊಳಗೆ ಹೈಕಮಾಂಡ್ ನಿಂದ ಸಂದೇಶ ಬರಲಿದ್ದು, ಅದರಂತೆ ನಡೆಯುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳು ನನ್ನ ಪರವಾಗಿ ಯಾವುದೇ ಸಭೆ ನಡೆಸುವ, ಹೇಳಿಕೆ ನೀಡುವುದು ಬೇಡ. ನಮ್ಮ ಪಕ್ಷ ವರಿಷ್ಠರಾದ ಅಮಿತ್ ಶಾ, ಜೆಪಿ ನಡ್ಡಾ ಅವರ ಮೇಲೆ ನನಗೆ ಸಂಪೂರ್ಣ ವಿಶ್ವಾಸ ಇದೆ. ಅವರ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದರು.

ಮೊಟ್ಟೆ ಟೆಂಡರ್ ನಲ್ಲಿ ಕಿಕ್ ಬ್ಯಾಕ್ ಕೇಳಿರುವ
ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಕ್ರಮ ಜರುಗಿಸುವಿರಾ ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮಾಧ್ಯಮಗಳಲ್ಲಿ ನೋಡಿದ್ದೇನೆ. ಇದರ ಸತ್ಯಾಸತ್ಯತೆ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕಳೆದ ಎರಡ್ಮೂರು ದಿನಗಳಿಂದ ಜಿಲ್ಲೆಯಲ್ಲಿ ಉದ್ಭವಿಸಿದ ಪ್ರವಾಹ ಪರಿಸ್ಥಿತಿ ಅವಲೋಕಿಸಲು ಜಿಲ್ಲೆಗೆ ಬಂದಿದ್ದೇನೆ. ನೆರೆಯಿಂದ ನೆಲೆ ಕಳೆದುಕೊಂಡು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿರುವ ಜನರನ್ನು ಭೇಟಿಯಾಗಿ ಸಮಸ್ಯೆ ಆಲಿಸುವೆ. ಅದೃಷ್ಟವಶಾತ್ ನಿನ್ನೆಯಿಂದ ಮಳೆ ಬಿಡುವು ನೀಡಿದೆ. ಮಹಾರಾಷ್ಟ್ರ ಭಾಗದಲ್ಲೂ ಮಳೆ ಕಡಿಮೆಯಾಗಿದೆ. ಹಾಗಾಗಿ ನದಿಗಳ ನೀರಿನ ಮಟ್ಟ ಕಡಿಮೆಯಾಗಿದ್ದು, ಜನರು ಸಂಕಷ್ಟದಿಂದ ಹೊರಬರಲಿದ್ದಾರೆ ಎಂದವರು ತಿಳಿಸಿದರು.

ತ್ಯಾಜ್ಯ ತಂದು ಆಯುಕ್ತರ ಮನೆ ಮುಂದೆ ಸುರಿದ ಶಾಸಕ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

  • ನಗರದ ಸ್ವಚ್ಛತೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪ…. ಟ್ರ್ಯಾಕ್ಟರ್ ನಲ್ಲಿ ತ್ಯಾಜ್ಯ ತುಂಬಿಕೊಂಡು ಸುರಿದ ಪಾಟೀಲ್

ನಗರದ ಸ್ವಚ್ಛತೆ ಸರಿಯಾಗಿ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಬೆಂಬಲಿಗರೊಂದಿಗೆ ಸ್ವತಃ ತ್ಯಾಜ್ಯ ಟ್ರ್ಯಾಕ್ಟರ್ ನಲ್ಲಿ ತುಂಬಿಕೊಂಡು ಪಾಲಿಕೆ ಆಯುಕ್ತರ ಮನೆ ಮುಂದೆ ಚೆಲ್ಲಿದ್ದಾರೆ.
ಇಂದು ಬೆಳಗ್ಗೆಯೇ ಬೆಂಬಲಿಗರೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಂಡ ಅಭಯ ಪಾಟೀಲ, ಕಸ ತುಂಬಿಕೊಂಡು ಟ್ರ್ಯಾಕ್ಟರ್ ನಲ್ಲಿ ತುಂಬಿ ನೇರವಾಗಿ ತಾವೇ ಟ್ರ್ಟಾಕ್ಟರ್ ಚಲಾಯಿಸಿಕೊಂಡು ವಿಶ್ವೇಶ್ವರ ನಗರದಲ್ಲಿರುವ ಪಾಲಿಕೆ ಆಯುಕ್ತರ ಮನೆ ಮುಂದೆ ತಂದು ಚೆಲ್ಲಿದ್ದಾರೆ.

ಕಳೆದ ಹಲವಾರು ತಿಂಗಳಿನಿಂದ ಎಚ್ಚರಿಕೆ ನೀಡುತ್ತ ಬಂದಿದ್ದೇನೆ. ಸ್ವಚ್ಛ ಮಾಡದಿದ್ದರೆ ನಿಮ್ಮ ಮನೆಯ ಮುಂದೆ ಹಾಕುತ್ತೇನೆ ಎಂದು ಎಚ್ಚರಿಕೆ ನೀಡಿದ್ದೆ. ಆದರೆ ಎಚ್ಚರಿಕೆಗೂ ಕ್ಯಾರೇ ಎನ್ನದ್ದರಿಂದ ಅವರ ಮನೆ ಮುಂದೆ ತಂದು ಹಾಕಿದ್ದೇನೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಪ್ರತಿ ರವಿವಾರ ಇಲ್ಲೇ ತಂದು ಹಾಕುತ್ತೇನೆ ಎಂದು ಎಚ್ಚರಿಕೆ ನೀಡಿದರು.

ನಾಳೆ ಬೆಳಗಾವಿಗೆ ಸಿಎಂ ಭೇಟಿ; ಪ್ರವಾಹ ಪರಿಸ್ಥಿತಿ ಅವಲೋಕನ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಪದತ್ಯಾಗ ಖಾತ್ರಿಯಾಗಿರುವ ಮಧ್ಯೆಯೇ ಸಿಎಂ ಯಡಿಯೂರಪ್ಪ ಮತ್ತಷ್ಟು ಆ್ಯಕ್ಟಿವ್ ಆಗಿದ್ದು, ಭಾನುವಾರ ಬೆಳಗಾವಿ ಜಿಲ್ಲೆಯ ಪ್ರವಾಸ ಕೈಗೊಂಡು ಪ್ರವಾಹ ಪರಿಸ್ಥಿತಿ ಅವಲೋಕನ ನಡೆಸುವರು. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ನಾಲ್ಕೈದು ದಿನದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಬೆಳಗಾವಿಗೆ ಆಗಮಿಸಿ ನಂತರ ಅವರು ವಿವಿಧ ಪ್ರದೇಶಗಳ ವೈಮಾನಿಕ ಸಮೀಕ್ಷೆ ಬಳಿಕ ಪರಿಶೀಲನಾ ಸಭೆಯನ್ನೂ ನಡೆಸಲಿದ್ದಾರೆ‌ ಎಂದು ತಿಳಿದುಬಂದಿದೆ. ಡಿಸಿಎಂ ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜಿಲ್ಲೆಯ ಸಚಿವರು ಸೇರಿದಂತೆ ಕೆಲವು ಸಚಿವರು ಸಿಎಂಗೆ ಸಾಥ್ ನೀಡಲಿದ್ದಾರೆ.

ಶುಕ್ರವಾರ ಜಿಲ್ಲಾಧಿಕಾರಿಗಳ ಜೊತೆ ಅವರು ವಿಡಿಯೋ ಸಂವಾದ ನಡೆಸಿದ್ದರು.
ಸೋಮವಾರ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜಿನಾಮೆ ನೀಡಲಿದ್ದಾರೆ ಎನ್ನುವ ಸುದ್ದಿ ಹರಡಿರುವುದರಿಂದ ಅದು ನಿಜವಾದಲ್ಲಿ ಸಿಎಂ ಆಗಿ ಬೆಳಗಾವಿ ಜಿಲ್ಲೆಗೆ ಅವರ ಕೊನೆಯ ಭೇಟಿಯಾಗಲಿದೆ ಎಂಬ ಮಾತು ಕೇಳಿಬರುತ್ತಿವೆ.

ಕೃಷ್ಣಾ ಪ್ರವಾಹದಲ್ಲಿ ಸಿಲುಕಿದವರ ನೆರವಿಗೆ ಧಾವಿಸಿದ ಎನ್ ಡಿಆರ್ ಎಫ್

  • ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀತಿ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಿಂದ ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು, ನದಿತೀರದಲ್ಲಿ ನೀರಿನಲ್ಲಿ ಸಿಲುಕಿದ್ದ ಹಲವರನ್ನು ಎನ್‍ಡಿಆರ್‍ಎಫ್ ತಂಡ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.

ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಕಮತೆ ತೋಟದಲ್ಲಿ ಕೃಷ್ಣಾ ನದಿಯ ನೀರು ಆವರಿಸಿ ಮನೆಯೊಂದರ ಸುತ್ತುವರಿದ ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಎನ್‍ಡಿಆರ್‍ಎಫ್ ಸಿಬ್ಬಂದಿ ಹಾಗೂ ಅಂಕಲಿ ಪೊಲೀಸರು ಬೋಟ್ ಮೂಲಕ ತೆರಳಿ ಸಾಜನೆ ಕುಟುಂಬದ ನಾಲ್ವರನ್ನು ಯಡೂರ ಗ್ರಾಮಕ್ಕೆ ತಂದು ಸುರಕ್ಷಿತ ಸ್ಥಳಕ್ಕೆ ರವಾನಿಸಿದರು.

ಮುಳವಾಡದಲ್ಲಿ ಪ್ರವಾಹದಲ್ಲಿ ಸಿಲುಕಿದ್ದವರನ್ನು ರಕ್ಷಿಸಿ ಮುಳವಾಡದಿಂದ ಶಿರಗುಪ್ಪಿಗೆ ಸ್ಥಳಾಂತರಿಸಿದರು. ಮಾಂಗೂರ ಪಾಟಾದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಂತ್ರಸ್ತರನ್ನು ಯಮಗರ್ಣಿಗೆ ಸ್ಥಳಾಂತರಿಸಿದರು. ಹುಬ್ಬಳ್ಳಿಗೆ ಶಸ್ತ್ರ ಚಿಕಿತ್ಸೆಗೆ ಹೋಗಬೇಕಿದ್ದ ಓರ್ವ ರೋಗಿಯನ್ನು ಆಂಬುಲೆನ್ಸ್ ಮೂಲಕ ಹುಬ್ಬಳ್ಳಿಗೆ ಕಳಿಸಿಕೊಟ್ಟರು.

ಡಾ. ಅಂಬೇಡ್ಕರ್ ಗೆ ಅತಿಹೆಚ್ಚು ಅವಮಾನ ಮಾಡಿದ್ದು ಕಾಂಗ್ರೆಸ್

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

ಡಾ. ಅಂಬೇಡ್ಕರ್ ಗೆ ಅತಿಹೆಚ್ಚು ಅವಮಾನ ಮಾಡಿದ್ದು ಕಾಂಗ್ರೆಸ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ತಾಕತ್ತಿದ್ದರೆ ದಲಿತ ಸಿಎಂ ಮಾಡಲಿ ಎಂದ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯಗೆ
ಚಿತ್ರದುರ್ಗದಲ್ಲಿ ತಿರುಗೇಟು ನೀಡಿದರು.

ದೇಶದ ಮೊದಲ ಸಚಿವ ಸಂಪುಟದಲ್ಲಿ ನೋವಾಗಿ ಡಾ.ಅಂಬೇಡ್ಕರ್ ರಾಜೀನಾಮೆ ನೀಡಿದ್ದರು. ಲೋಕಸಭೆ ಚುನಾವಣೆಗೆ ನಿಂತಾಗ ಅವರನ್ನು ಸೋಲಿಸಿದ್ದು ಇದೇ ಕಾಂಗ್ರೆಸ್ ನವರು, 2ನೇ ಬಾರಿ ಅವರ ಸಹಾಯಕನನ್ನೇ ಎದುರು‌ ನಿಲ್ಲಿಸಿ ಸೋಲಿಸಿದರು. ಅಂಬೇಡ್ಕರ್ ಅಂತ್ಯ ಸಂಸ್ಕಾರಕ್ಕೂ ಜಾಗ ಕೊಡಲಿಲ್ಲ. ಭಾರತರತ್ನವೂ ಕೊಡಲಿಲ್ಲ, ಅವರಿಗೆ ಭಾರತ ರತ್ನ ಕೊಟ್ಟಿದ್ದು ನಾವು. ಕಾಂಗ್ರೆಸ್ ನವರು ಜಗಜೀವನ್ ರಾಮ್ ರನ್ನು ಪ್ರಧಾನಿ ಮಾಡಲಿಲ್ಲ ಎಂದು ಕುಟುಕಿದರು.

ಸಿದ್ದರಾಮಣ್ಣನ ಇತಿಹಾಸ ಹೇಳಬೇಕೆಂದರೆ ಕಾಂಗ್ರೆಸ್ ಗೆ ಬಂದು ಸಿಎಂ ಆದರು. ಪರಮೇಶ್ವರ್ ಅವರನ್ನು ಡಿಸಿಎಂ ಮಾಡಲಿಲ್ಲ, ಕ್ಷೇತ್ರದಲ್ಲಿ ಸೋಲಿಸಿದರು. ಮಲ್ಲಿಕಾರ್ಜುನ ಖರ್ಗೆ, ಚಂದ್ರಪ್ಪ, ದೃವನಾರಾಯಣ ಸೇರಿ ದಲಿತ ಮುಖಂಡರನ್ನು ಸೋಲಿಸಿದರು. ಇವತ್ತಿಗೂ ಖರ್ಗೆ, ಪರಮೇಶ್ವರ್ ರಾಜಕೀಯವಾಗಿ ಬೆಳೆಯಲು ಸಿದ್ದರಾಮಯ್ಯ ಬಿಡಲ್ಲ‌ ಎಂದರು.

ಬಿಜೆಪಿ ಕಡಿಮೆ ಸಮಯ ಅಧಿಕಾರ ನಡೆಸಿದರೂ ಮುಸ್ಲಿಂ, ದಲಿತರಿಗೆ ಅಧಿಕಾರ ನೀಡಿದೆ. ಮುಸ್ಲಿಂ ಸಮುದಾಯದ ಅಬ್ದುಲ್ ಕಲಾಂರನ್ನು, ದಲಿತ ಸಮಾಜದ ಕೋವಿಂದ್ ರನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ. ಕೇಳದಿದ್ದರೂ ಗೋವಿಂದ ಕಾರಜೋಳರನ್ನು ಡಿಸಿಎಂ ಮಾಡಿದ್ದೇವೆ. ಆನೇಕಲ್ ವಿಧಾನಸಭೆಯಲ್ಲಿ ಸೋತ ಎ.ನಾರಾಯಣಸ್ವಾಮಿಗೆ ಚಿತ್ರದುರ್ಗದ ಸಂಸದರನ್ನಾಗಿಸಿದ್ದಲ್ಲದೆ ಕೇಂದ್ರ ಸಚಿವರನ್ನಾಗಿಸಿದ್ದೇವೆ ಎಂದು ಸಮರ್ಥಿಸಿಕೊಂಡರು.

ನನ್ನ ಹೆಸರಿನ ಫೇಕ್ ಆಡಿಯೋ ಪ್ರಕರಣ ತನಿಖೆ ನಡೆಯುತ್ತಿದೆ. ಸಿದ್ದರಾಮಯ್ಯ ಸರ್ಕಾರ ಮಾಡಿದಷ್ಟು ಭ್ರಷ್ಟಾಚಾರ ಯಾರೂ ಮಾಡಲು ಸಾಧ್ಯವಿಲ್ಲ. ಸಿದ್ದರಾಮಣ್ಣ ಅರ್ಕಾವತಿ ಬಡಾವಣೆ ಪ್ರಕರಣ ಮುಚ್ಚಿ ಹಾಕಿದ್ದಾರೆ ಎಂದು ಆರೋಪಿಸಿದರು.

ವಲಸೆ ಬಂದ ಶಾಸಕರ ಆತಂಕ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮಲ್ಲಿ ಮಿತ್ರ ಮಂಡಳಿ, ವಲಸಿಗ ಪದ ಸರಿಯಲ್ಲ. ಅವರೆಲ್ಲ
ಬಿಜೆಪಿಯಿಂದ ಶಾಸಕರಾಗಿದ್ದಾರೆ, ಪಕ್ಷದ ಒಂದು ಭಾಗ ಎಂದ ಅವರು, ರಾಷ್ಟ್ರೀಯ ನಾಯಕರ ಸೂಚನೆ ಪಾಲಿಸುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಈಗವರು ನೆರೆ ವೀಕ್ಷಣೆ, ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬದಲಾವಣೆ ಬಗ್ಗೆ ವರಿಷ್ಠರು ನಿರ್ಧರಿಸಲಿದ್ದಾರೆ ಎಂದು ನಳೀನ್ ಕುಮಾರ ಕಟೀಲ್ ಹೇಳಿದರು.

ಪತಿ, ಪತ್ನಿ‌ ಕಿರುಕುಳ; ಯುವಕ ನೇಣಿಗೆ ಶರಣು

ವಿಜಯಸಾಕ್ಷಿ ಸುದ್ದಿ, ಗದಗ

ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವಿವಾಹಿತ ಯುವಕನೊಬ್ಬ ಮಹಿಳೆ ಮತ್ತು ಆಕೆಯ ಪತಿಯ ಕಿರುಕುಳ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ರೋಣ ತಾಲೂಕಿನ ಕರಮುಡಿ ಗ್ರಾಮದಲ್ಲಿ ನಡೆದಿದೆ.

ಸ್ವಜಾತಿಯ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾದ ಅರ್ಜುನ ಶಿವರಾಯಪ್ಪ ಚಲವಾದಿಯ ವರ್ತನೆಯಿಂದ ಬೇಸತ್ತು ಆತನ ಪತ್ನಿ ಲಕ್ಷ್ಮಿ ತವರು ಮನೆಗೆ ಮರಳಿದ್ದಳು. ಇನ್ನು, ವಿವಾಹಿತೆ ಹಾಗೂ ಆಕೆಯ ಪತಿ ನಿರಂತರ ಕಿರುಕುಳ ನೀಡುತ್ತಿದ್ದುದರಿಂದ ಬೇಸತ್ತು ಆತ ಮನೆಯಲ್ಲೇ ಪಂಚೆಯಿಂದ ನೇಣು ಹಾಕಿಕೊಂಡಿದ್ದಾನೆ ಎಂದು ಮೃತನ ಸಹೋದರ ಹನುಮಂತಪ್ಪ ಚಲವಾದಿ ರೋಣ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಶಸಸ್ತ್ರ ಮೀಸಲು ಪೊಲೀಸ್ ಪಡೆ ಅಧಿಕಾರಿ ನೇಣಿಗೆ ಶರಣು

ವಿಜಯಸಾಕ್ಷಿ ಸುದ್ದಿ, ಕಲಬುರಗಿ

  • ಕಲಬುರಗಿಯ ಪೊಲೀಸ್ ಕ್ವಾಟರ್ಸ್ ನಲ್ಲಿ ಆತ್ಮಹತ್ಯೆ

ಪೊಲೀಸ್ ಕ್ವಾಟರ್ಸ್ ನಲ್ಲೇ ನೇಣು ಬಿಗಿದುಕೊಂಡು ಶಸಸ್ತ್ರ ಮೀಸಲು ಪೊಲೀಸ್ ಪಡೆಯ ಎಆರ್ ಎಸ್ಐ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಜಗನ್ನಾಥ್ ಮುತ್ತಂಗಿ (54) ಆತ್ಮಹತ್ಯೆಗೆ ಶರಣಾದವರು. ಕಲಬುರಗಿಯ ಶಸಸ್ತ್ರ ಮೀಸಲು ಪಡೆಯ ಎಆರ್ ಎಸ್ಐ ಆಗಿದ್ದ ಜಗನ್ನಾಥ್ ಪ್ಯಾರಲೇಸಸ್ ನಿಂದ ಬಳಲುತ್ತಿದ್ದರು. ಕಳೆದ ಒಂದುವರೆ ತಿಂಗಳಿನಿಂದ ರಜೆ ಹಾಕಿ ಮನೆಯಲ್ಲೇ ಇದ್ದರು.

ಮಾನಸಿಕವಾಗಿ ಕುಗ್ಗಿ ಹೋಗಿದ್ದರಿಂದ ಇಂದು ನೆಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐವರು ಶ್ರೀಗಂಧ ಮರಗಳ್ಳರು ಅರೆಸ್ಟ್

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

  • ರಾತ್ರಿಹೊತ್ತು ಶ್ರೀಗಂಧ ಮರ ಕಳ್ಳತನ ಮಾಡುತ್ತಿದ್ದ ಆರೋಪಿಗಳು
  • 2.81 ಲಕ್ಷ ಮೌಲ್ಯದ ಶ್ರೀಗಂಧ, ವಾಹನ ವಶ

ಚಿಕ್ಕಜಾಜೂರು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಐವರು ಶ್ರೀಗಂಧ ಮರ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ 2.80 ಲಕ್ಷ ಮೌಲ್ಯದ 51 ಶ್ರೀಗಂಧ ಮರದ ತುಂಡು, 1 ಬೈಕ್ ವಶಪಡಿಸಿಕೊಂಡಿದ್ದಾರೆ.

ಹೊಳಲ್ಕೆರೆ ತಾಲೂಕಿನ ಕಾಗಳಗೆರೆ ಗ್ರಾಮದ
ಪಾಂಡುರಂಗ, ಮಹಂತೇಶ್, ಬಸವರಾಜ್, ರಾಜಪ್ಪ, ಮುನ್ನಾ ಬಂಧಿತ ಆರೋಪಿಗಳು.
ಚಿಕ್ಕಜಾಜೂರು ವ್ಯಾಪ್ತಿಯ ಸಾಸಲು ಗ್ರಾಮದ ಪ್ರಶಾಂತಕುಮಾರ ಬಿ.ಜೆ. ಎಂಬುವವರ 4 ಎಕರೆ ಜಮೀನಿನಲ್ಲಿ 50 ಶ್ರೀಗಂಧದ ಮರಗಳನ್ನು ಬೆಳೆದಿದ್ದರು.‌ ಆರೋಪಿಗಳು ಜು.9ರಂದು ರಾತ್ರಿ 8 ಮರಗಳನ್ನು ಕಡಿದು ಐದು ಮರಗಳನ್ನು ಕಡಿದು ಮೂರು ಮರಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಕುರಿತು ಪ್ರಶಾಂತಕುಮಾರ್ ಚಿಕ್ಕಜಾಜೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪಿಎಸ್ಐ ಬಾಹುಬಲಿ ನೇತೃತ್ವದಲ್ಲಿ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಲೋನ್ ಕೊಡುವುದಾಗಿ ಖಾಸಗಿ ನೌಕರನಿಗೆ ವಂಚನೆ; ಲಕ್ಷಾಂತರ ರೂ. ಪಂಗನಾಮ

ವಿಜಯಸಾಕ್ಷಿ ಸುದ್ದಿ, ಗದಗ

ಬ್ಯಾಂಕ್ ಅಕೌಂಟ್, ಪಿನ್, ಎಟಿಎಮ್ ಕಾರ್ಡ್ ಬ್ಲಾಕ್ ಆಗಿದೆ ಅಂತ ಯಾರಾದರೂ ಅಪರಿಚಿತರು ಕರೆ ಮಾಡಿದರೆ ಅವರಿಗೆ ಉತ್ತರ ನೀಡಬೇಡಿ ಅಂತ ಪೊಲೀಸರು ಎಷ್ಟೇ ಎಚ್ಚರಿಕೆ, ಜಾಗೃತಿ ನೀಡಿದರೂ ಜನ ಮಾತ್ರ ಅದರ ಗಮನ ಹರಿಸುತ್ತಿಲ್ಲ. ಅದರಲ್ಲೂ ವಿದ್ಯಾವಂತರೇ ಅರ್ಥಮಾಡಿಕೊಳ್ಳುತ್ತಿಲ್ಲ. ಇದಕ್ಕೆ ಉದಾಹರಣೆ ಲಕ್ಷ್ಮೇಶ್ವರನ ಖಾಸಗಿ ಉದ್ಯೋಗಿಯೊಬ್ಬ ಲಕ್ಷಾಂತರ ರೂ. ಕಳೆದುಕೊಂಡ ಪ್ರಕರಣ.

ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಬಸ್ತಿ ಬಣದ ನಿವಾಸಿ ವಿಕಾಸ್ ಪಾಟೀಲ್ ಎಂಬುವವರಿಗೆ ಬೆಂಗಳೂರಿನ ಇಂಡಸ್ ಇಂಡ್ ಬ್ಯಾಂಕ್ ಕಷ್ಟ್ ಮರ್ ಕೇರ್ ನಿಂದ ಮಾತಾಡೋದು ಅಂತ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ನಿಮಗೆ ಲೋನ್ ಕೊಡುವುದಾಗಿ ಹೇಳಿದ್ದಾನೆ. ಇದಕ್ಕೆ ಮರುಳಾದ ವಿಕಾಸ್ ಪಾಟೀಲ್, ತಮ್ಮ ಜಕ್ಕಸಂದ್ರ ಶಾಖೆಯ ಅಕೌಂಟ್ ನಂಬರ್ ಕೊಟ್ಟಿದ್ದಾರೆ. ಅಕೌಂಟ್ ನಂಬರ್ ಕೊಟ್ಟಿದ್ದೇ ತಡ ಖದೀಮ ಅದರಲ್ಲಿದ್ದ ಸುಮಾರು 1ಲಕ್ಷ 29 ಸಾವಿರ ಡ್ರಾ ಮಾಡಿಕೊಂಡಿದ್ದಾನೆ.

ಜುಲೈ 11 ರಂದು 49 ಸಾವಿರದಂತೆ ಎರಡು ಸಲ ಹಾಗೂ 30 ಸಾವಿರ ರೂ.ಗಳನ್ನು ಕ್ರೆಡಿಟ್ ಕಾರ್ಡ್ ಬಳಸಿ ಆನ್‌ಲೈನ್ ಮೂಲಕ ವಂಚಿಸಿ ಹಣ ಪಡೆದಿದ್ದಾನೆ. ಇದು ಒಂದು ವಾರದ ನಂತರ ವಿಕಾಸ್ ಪಾಟೀಲ್ ಗೆ ಗೊತ್ತಾಗಿದ್ದು, ವಂಚನೆ ಮಾಡಿದ ಆರೋಪಿಯನ್ನು ಪತ್ತೆ ಮಾಡಿ ಅಂತ ಲಕ್ಷ್ಮೇಶ್ವರ ಠಾಣೆಗೆ ದೂರು ನೀಡಿದ್ದು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.