Home Blog Page 3470

ಯುಎಇಗೆ ಶಿಫ್ಟ್ ಆದ ಟಿ20 ವಿಶ್ವಕಪ್ ಟೂರ್ನಿ!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಕೊರೊನಾದಿಂದಾಗಿ ಟಿ-20 ವಿಶ್ವಕಪ್ ಕ್ರಿಕೆಟ್‌ ಪಂದ್ಯಾವಳಿ ಯುಎಇನಲ್ಲಿ ನಡೆಸಲು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.

ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗಳನ್ನು ಯುಎಇಗೆ ಸ್ಥಳಾಂತರ ಮಾಡಬೇಕೆಂದು ಇಂದು ನಡೆದ ಸಭೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಲ್ಲಿ ತೀರ್ಮಾನಿಸಲಾಗಿದೆ. ಭಾರತದಲ್ಲಿ ನಡೆಯಬೇಕಿದ್ದ ಈ ಪಂದ್ಯಾವಳಿಯನ್ನು ಯುಎಇಗೆ ಶಿಫ್ಟ್ ಮಾಡಲಾಗಿದೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಬಗ್ಗೆ ಒಪ್ಪಿಗೆ ನೀಡಿದ್ದು, ಇಂದು ಮಂಡಳಿಯು ಈ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಮಾಹಿತಿ ನೀಡಲಿದೆ. ಯುಎಇಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದರೂ, ಹೋಸ್ಟಿಂಗ್ ಹಕ್ಕುಗಳು ಬಿಸಿಸಿಐನೊಂದಿಗೆ ಉಳಿಯುತ್ತವೆ. ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗುವುದು ಎಂದು ತಿಳಿದು ಬಂದಿದೆ.

ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಭಾರತೀಯ ಮಂಡಳಿ ಈ ತಿಂಗಳು ಐಸಿಸಿಯಿಂದ ಸ್ವಲ್ಪ ಸಮಯ ಕೋರಿತ್ತು. ಅಲ್ಲದೇ, ಜೂ. 28ರೊಳಗೆ ಐಸಿಸಿಗೆ ತನ್ನ ನಿರ್ಧಾರ ತಿಳಿಸಬೇಕಾಗಿತ್ತು. ಈಗ ಬಿಸಿಸಿಐ ತನ್ನ ನಿರ್ಧಾರವನ್ನು ತೆಗೆದುಕೊಂಡಿದೆ. ಈ ವಿಶ್ವಕಪ್ ಸುಮಾರು ಒಂದು ತಿಂಗಳು ಕಾಲ ನಡೆಯಲಿದೆ.

ಸದ್ಯದ ಮಾಹಿತಿಯಂತೆ ಅ. 17ರಿಂದ ಪಂದ್ಯಾವಳಿ ಪ್ರಾರಂಭವಾಗಲಿದೆ. ಇದರಲ್ಲಿ ಮೊದಲ 8 ದೇಶಗಳ ನಡುವೆ ಅರ್ಹತಾ ಪಂದ್ಯಗಳು ನಡೆಯಲಿವೆ. ಪಂದ್ಯಾವಳಿಯ ಸ್ವರೂಪಕ್ಕೆ ಅನುಗುಣವಾಗಿ, ಈ ತಂಡಗಳಲ್ಲಿ 4 ತಂಡಗಳು ಸೂಪರ್ -12 ರಲ್ಲಿ ಈಗಾಗಲೇ ಶ್ರೇಯಾಂಕದ ಆಧಾರದ ಮೇಲೆ ಅರ್ಹತೆ ಪಡೆದ 8 ತಂಡಗಳೊಂದಿಗೆ ಆಡಲಿವೆ. ಇದು ಅಕ್ಟೋಬರ್ 24ರಿಂದ ಪ್ರಾರಂಭವಾಗಲಿದೆ.

ಕೌಟುಂಬಿಕ ಕಲಹ – ಇಬ್ಬರು ಮಕ್ಕಳನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ತಾಯಿ!

ವಿಜಯಸಾಕ್ಷಿ ಸುದ್ದಿ, ಬಳ್ಳಾರಿ

ಕೌಟುಂಬಿಕ ಕಲಹದಿಂದಾಗಿ ಮನನೊಂದ ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ನೀರಿನ ಟ್ಯಾಂಕ್ ನಲ್ಲಿ ಮುಳುಗಿಸಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಈ ಘಟನೆ ನಗರದ ಇಂದಿರಾ ನಗರದಲ್ಲಿ ವರದಿಯಾಗಿದೆ. ಮೃತರನ್ನು ಬಳ್ಳಾರಿ ಇಂದಿರಾ ನಗರದ ಏಳನೇ ಅಡ್ಡರಸ್ತೆಯ ನಿವಾಸಿ ಸಿದ್ದಪ್ಪ ಎಂಬುವವರ ಪತ್ನಿ ಸುನೀತಾ (25) ಮತ್ತು ಆಕೆಯ 2 ವರ್ಷದ ಮಗ ಹಾಗೂ 10 ತಿಂಗಳ‌ ಹೆಣ್ಣು ಮಗು ಎಂದು ಗುರುತಿಸಲಾಗಿದೆ.

ಯಾವಾಗಲೂ ಕ್ಷುಲ್ಲಕ ಕಾರಣಗಳಿಗೆ ಪತಿ ಹಾಗೂ ಪತ್ನಿಯ ಮಧ್ಯೆ ಜಗಳವಾಗುತ್ತಿತ್ತು. ನಿನ್ನೆ ಕೂಡ ಸಣ್ಣ ವಿಚಾರಕ್ಕೆ ಜಗಳವಾಗಿದೆ. ಇದರಿಂದ ಬೇಸರಗೊಂಡ ಸುನೀತಾ ಮನೆಯ ಮುಂಭಾಗದಲ್ಲಿರುವ ನೀರಿನ ಟ್ಯಾಂಕ್ ನಲ್ಲಿ ತನ್ನಿಬ್ಬರು ಮಕ್ಕಳನ್ನು ಮುಳುಗಿಸಿ ಕೊಲ ಮಾಡಿ ಕೊನೆಗೆ ತಾನೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ಈ ಕುರಿತು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಬಾಂಗ್ಲಾದೇಶದಲ್ಲಿ ಬ್ಲಾಸ್ಟ್ – 7 ಸಾವು!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಬಾಂಗ್ಲಾ ರಾಜಧಾನಿ ಢಾಕಾದ ಜನನಿ ಬಿಡ ಪ್ರದೇಶದಲ್ಲಿ ಪ್ರಬಲ ಸ್ಫೋಟ ಸಂಭವಿಸಿದ್ದು 7 ಜನ ಸಾವನ್ನಪ್ಪಿ, 400ಕ್ಕೂ ಅಧಿಕ ಜನ ಗಾಯಗೊಂಡಿರುವ ಘಟನೆ ನಡೆದಿದೆ.
ಗ್ಯಾಸ್ ಸಿಲಿಂಡರ್ ಇಲ್ಲವೇ ಗ್ಯಾಸ್ ಲೈನ್ ಸ್ಫೋಟಿಸಿ ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಿರುವ ಪೊಲೀಸರು ಘಟನೆ ಹಿಂದೆ ಯಾವುದೇ ಉಗ್ರ ಸಂಘಟನೆಯ ಕೈವಾಡವಿಲ್ಲ ಎಂದು ಹೇಳಿದ್ದಾರೆ.

ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಸುಮಾರು 12ಕ್ಕೂ ಹೆಚ್ಚು ಕಟ್ಟಡಗಳಿಗೆ ಹಾನಿಯಾಗಿದೆ. ಏಳು ಕಟ್ಟಡಗಳು ಹಾಗೂ ಎರಡು ಬಸ್‍ ಗಳು ಸಂಪೂರ್ಣವಾಗಿ ಹಾನಿಯಾಗಿವೆ. ಈ ಘಟನೆಯಲ್ಲಿ 7 ಜನ ಸಾವನ್ನಪ್ಪಿದ್ದು, 400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸುಮಾರು 50 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಸ್ಫೋಟದ ತೀವ್ರತೆಗೆ ಕಟ್ಟಡಗಳಿಗೆ ಅಳವಡಿಸಲಾಗಿದ್ದ ಗಾಜಿನ ಚೂರುಗಳು ಗಾಳಿಯಲ್ಲಿ ಚದುರಿ ಹೋಗಿದ್ದರಿಂದಾಗಿ ಹೆಚ್ಚಿನ ಜನರಿಗೆ ಹಾನಿಯಾಗಿದೆ ಎನ್ನಲಾಗಿದೆ.

ದೆಹಲಿಗೆ ಹಾರಿದ ಬೆಲ್ಲದ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬೇಗುದಿ ಬೂದಿಮುಚ್ಚಿದ ಕೆಂಡದಂತಿದ್ದು, ಆಗಾಗ ಬದಲಾವಣೆ ಕೂಗನ್ನು ಜೀವಂತವಾಗಿಡುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರೆದಿವೆ. ಇದೀಗ ಸಚಿವ ಸಿ.ಪಿ. ಯೋಗೇಶ್ವರ್ ಬೆನ್ನಲ್ಲೇ ಶಾಸಕ ಅರವಿಂದ್ ಬೆಲ್ಲದ್ ಸಹ ದೆಹಲಿಗೆ ದೌಡಾಯಿಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಎರಡು ಮೂರು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಸಚಿವ ಯೋಗೇಶ್ವರ್ ಇಂದು ರಾಜ್ಯಕ್ಕೆ ವಾಪಸ್ ಆಗಿದ್ದು, ಇದೀಗ ಶಾಸಕ ಅರವಿಂದ್ ಬೆಲ್ಲದ್ ದೆಹಲಿಗೆ ಪ್ರಯಾಣಿಸಿದ್ದಾರೆ. ಸಂಜೆ ವೇಳೆಗೆ ಹೈಕಮಾಂಡ್ ಭೇಟಿಯಾಗಿ ಚರ್ಚೆ ನಡೆಸಲಿದ್ದು, ಸರ್ಕಾರದ ಬಗ್ಗೆ ತಮ್ಮ ಅಸಮಾಧಾನವನ್ನು ಹೊರ ಹಾಕಲಿದ್ದಾರೆ ಎನ್ನಲಾಗಿದೆ.

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿ, ನಾಯಕತ್ವ ಬದಲಾವಣೆ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ಹಾಗೂ ಹಲವು ಗೊಂದಲಕ್ಕೆ ತೆರೆ ಎಳೆದು ಹೋಗಿದ್ದರೂ ತೆರೆ ಮರೆಯಲ್ಲಿ ಸಿಎಂ ಬದಲಾವಣೆ ಪ್ರಯತ್ನ ಮತ್ತೆ ಮುಂದುವರೆದಿದೆ.

ಮಾನವೀಯತೆಗೆ ಸಾಕ್ಷಿಯಾದ ಸಚಿವ ಸುಧಾಕರ್!

ವಿಜಯಸಾಕ್ಷಿ ಸುದ್ದಿ, ಚಿಕ್ಕಬಳ್ಳಾಪುರ

ಕೋವಿಡ್ ಸೋಂಕಿಗೆ ತುತ್ತಾಗಿ ಪೋಷಕರನ್ನು ಕಳೆದುಕೊಂಡಿರುವ 9 ಮಕ್ಕಳನ್ನು ಆರೋಗ್ಯ ಸಚಿವ ಡಾ. ಡಿ. ಸುಧಾಕರ್ ದತ್ತು ಪಡೆದಿದ್ದಾರೆ.
ಹುಟ್ಟು ಹಬ್ಬದ ಅಂಗವಾಗಿ ಸಚಿವ ಸುಧಾಕರ್ ದತ್ತು ಪಡೆದು ಮಾನವೀಯತೆ ಮೆರೆದಿದ್ದಾರೆ. ಜಿಲ್ಲಾಧಿಕಾರಿಗಳ ಮೂಲಕ ಅನಾಥರಾದ ಮಕ್ಕಳ ಕುರಿತು ಸಚಿವ ಸುಧಾಕರ್ ಸರ್ವೇ ನಡೆಸಿದ್ದರು. ಸರ್ವೇ ಸಂದರ್ಭದಲ್ಲಿ ಒಂಭತ್ತು ಮಕ್ಕಳು ತಂದೆ ಹಾಗೂ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದರು.

ದತ್ತು ಪಡೆದು ಅನಾಥ ಮಕ್ಕಳ ಶೈಕ್ಷಣಿಕ ಭವಿಷ್ಯದ ಹೊಣೆಯನ್ನು ಸಚಿವ ಸುಧಾಕರ್ ವಹಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಇಂದು 9 ಮಕ್ಕಳ ಭವಿಷ್ಯಕ್ಕೆ ತಲಾ ರೂ. 1 ಲಕ್ಷ ದೇಣಿಗೆ ನೀಡಿದ್ದಾರೆ.

ಈ ಮೂಲಕ ರಾಜ್ಯದಲ್ಲಿನ ಇನ್ನಿತರ ಮಂತ್ರಿಗಳಿಗೆ ಸುಧಾಕರ್ ಮಾದರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಆರ್ಥಿಕವಾಗಿ ಅನುಕೂಲವಿರುವ ಜನರು ಈ ರೀತಿ ಅನಾಥ ಮಕ್ಕಳ ಬಾಳಿಗೆ ಬೆಳಕಾಗಬೇಕು ಎಂದು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೇಗಿದೆ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಇಂದು ನಿನ್ನೆಗಿಂತಲೂ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಇಂದು 3,604 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, 89 ಜನ ಸಾವನ್ನಪ್ಪಿದ್ದಾರೆ. ಇಂದು ರಾಜ್ಯದಲ್ಲಿ 7,699 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ರಾಜ್ಯದಲ್ಲಿ 28,34,630 ಸೋಂಕಿನ ಪ್ರಕರಣಗಳು ವರದಿಯಾಗಿವೆ. ಒಟ್ಟು 34,743 ಜನ ಸಾವನ್ನಪ್ಪಿದ್ದಾರೆ.

ಬೆಂಗಳೂರು ನಗರದಲ್ಲಿ 788 ಜನಕ್ಕೆ ಸೋಂಕು ತಗುಲಿದ್ದು, 11 ಜನ ಸಾವನ್ನಪ್ಪಿದ್ದಾರೆ. ಸಿಲಿಕಾನ್ ಸಿ ಟಿಯಲ್ಲಿ 63,473 ಸಕ್ರಿಯ ಪ್ರಕರಣಗಳಿವೆ.
ಇಂದು ರಾಜ್ಯದ ಬಾಗಲಕೋಟೆ 7, ಬಳ್ಳಾರಿ 26, ಬೆಳಗಾವಿ 143, ಬೆಂಗಳೂರು ಗ್ರಾಮಾಂತರ 77, ಬೆಂಗಳೂರು ನಗರ 788, ಬೀದರ್ 8, ಚಾಮರಾಜನಗರ 54, ಚಿಕ್ಕಬಳ್ಳಾಪುರ 40, ಚಿಕ್ಕಮಗಳೂರು 126, ಚಿತ್ರದುರ್ಗ 22, ದಕ್ಷಿಣ ಕನ್ನಡ 454, ದಾವಣಗೆರೆ 118, ಧಾರವಾಡ 46,

ಗದಗ 18, ಹಾಸನ 322, ಹಾವೇರಿ 13, ಕಲಬುರಗಿ 36, ಕೊಡಗು 115, ಕೋಲಾರ 101, ಕೊಪ್ಪಳ 9, ಮಂಡ್ಯ 109, ಮೈಸೂರು 478, ರಾಯಚೂರು 19, ರಾಮನಗರ 15, ಶಿವಮೊಗ್ಗ 177, ತುಮಕೂರು 116, ಉಡುಪಿ 97, ಉತ್ತರ ಕನ್ನಡ 57, ವಿಜಯಪುರ 9 ಮತ್ತು ಯಾದಗಿರಿಯಲ್ಲಿ 4ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

ಕೊರೊನಾ; ಭಾನುವಾರ ಜಿಲ್ಲೆಯಲ್ಲಿ 18 ಜನರಿಗೆ ಸೋಂಕು, ಇಬ್ಬರ ಸಾವು

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಭಾನುವಾರ 18 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇಂದು ಕೂಡ ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.

ಇಂದು 18 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 25753 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -07, ಮುಂಡರಗಿ-02, ನರಗುಂದ-01, ರೋಣ-01, ಶಿರಹಟ್ಟಿ-07, ಹೊರಜಿಲ್ಲೆಯ-00 ಸೇರಿದಂತೆ 18 ಪ್ರಕರಣಗಳು ದೃಢಪಟ್ಟಿವೆ.

ಭಾನುವಾರ ಕೋವಿಡ್ ನಿಂದ ಇಬ್ಬರು ಮೃತಪಟ್ಟ ಕುರಿತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತ ಹೊರಡಿಸಿದ ವರದಿಯಲ್ಲಿ ಮಾಹಿತಿ ಇದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ನಿಂದಾಗಿ ಇದುವರೆಗೂ 298 ಜನರು ಮೃತಪಟ್ಟಂತಾಗಿದೆ.

ಜಿಲ್ಲೆಯ ನರಗುಂದ ತಾಲೂಕಿನ ಗುರ್ಲಕಟ್ಟಿ ನಿವಾಸಿ 67 ವರ್ಷದ ಮಹಿಳೆ ಜೂನ್ 10 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಕೋವಿಡ್ ದೃಢಪಟ್ಟಿತ್ತು. ಜೂನ್ 27 ರಂದು ಮೃತಪಟ್ಟಿದ್ದಾರೆ.

ಗದಗ ನಗರದ ಹುಡ್ಕೋ ಕಾಲೋನಿ ನಿವಾಸಿ 85 ವರ್ಷದ ವ್ಯಕ್ತಿ ಜೂನ್ 03 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಕೋವಿಡ್ ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜೂನ್ 25 ರಂದು ಮೃತಪಟ್ಟಿದ್ದಾರೆ.

ಇವರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನೆರವೇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇಂದು 28 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 25226 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 229 ಜನ ಸೋಂಕಿತರು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 80 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಮಂತ್ರಾಲಯದಲ್ಲಿ ನೀರೋ ನೀರು!

ವಿಜಯಸಾಕ್ಷಿ ಸುದ್ದಿ, ರಾಯಚೂರು

ರಾತ್ರಿಯಿಡಿ ಸುರಿದ ಮಳೆಯಿಂದಾಗಿ ಮಂತ್ರಾಲಯ ಗ್ರಾಮ ಜಲಾವೃತವಾಗಿದೆ.
ಇಲ್ಲಿನ ಕಲ್ಲುದೇವಕುಂಟ ಹಳ್ಳ ತುಂಬಿ ಮಂತ್ರಾಲಯಕ್ಕೆ ನೀರು ನುಗ್ಗಿದೆ. ಕರ್ನಾಟಕ ಭವನ, ಕಲ್ಯಾಣ ಮಂಟಪ, ಬಸ್ ನಿಲ್ದಾಣಕ್ಕೆ ನೀರು ನುಗ್ಗಿ ಸಂಪೂರ್ಣ ಜಲಾವೃತವಾಗಿದೆ. ಬೆಳಿಗ್ಗೆ ಮಳೆ ಸ್ವಲ್ಪ ತಗ್ಗಿರುವುದರಿಂದ ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ.

ಎಮ್ಮಿಗನೂರು ರಸ್ತೆಯ ಹಳ್ಳ ಉಕ್ಕಿಹರಿದ ಪರಿಣಾಮ ಮಂತ್ರಾಲಯದಲ್ಲಿ ನೀರು ತುಂಬಿದೆ. ಮಂತ್ರಾಲಯ – ಬೆಂಗಳೂರು ರಸ್ತೆ ಮಾರ್ಗ ಬಂದ್ ಆಗಿದೆ. ಮಂತ್ರಾಲಯ ಗ್ರಾಮದ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸಂಚಾರ ಸ್ಥಗಿತವಾಗಿವೆ.
ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿರುವುದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಪರಿಣಾಮವಾಗಿ ಮನೆಯಲ್ಲಿಟ್ಟಿದ್ದ ದವಸ- ಧಾನ್ಯ ಸೇರಿದಂತೆ ಮನೆಯಲ್ಲಿ ವಸ್ತುಗಳೆಲ್ಲಾ ಹಾಳಾಗಿವೆ.

ಮಂತ್ರಾಲಯದಲ್ಲಿನ ಕರ್ನಾಟಕ ಭವನದಲ್ಲಿಯೂ ನೀರು ಹೊಕ್ಕಿದೆ. ಅಲ್ಲಿ ನಿಲ್ಲಿಸಿದ್ದ ಕಾರು ಹಾಗೂ ಬೈಕ್ ಗಳು ನೀರಿನಲ್ಲಿ ತೇಲಾಡುತ್ತಿವೆ. ಕಲ್ಯಾಣ ಮಂಟಪಕ್ಕೆ ನೀರು ಹೊಕ್ಕ ಪರಿಣಾಮ ಕುರ್ಚಿಗಳೆಲ್ಲ ನೀರಿನಲ್ಲಿ ತೇಲಾಡುತ್ತಿವೆ.

ಕೊರೊನಾದಿಂದ ಸತ್ತವರ ಕುಟುಂಬಗಳಿಗೆ ಪರಿಹಾರ ಘೋಷಿಸಬೇಕು! ಡಿಕೆಶಿ

ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ

ಜಿಲ್ಲೆಯಲ್ಲಿ ನಡೆದಿದ್ದ ಆಕ್ಸಿಜನ್ ದುರಂತ ಸರ್ಕಾರ ಮಾಡಿರುವ ಕೊಲೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ರೂ. 10 ಲಕ್ಷ ಪರಿಹಾರ ನೀಡಿದ್ದಾರೆ. ಆದರೆ, ಇಲ್ಲಿ ರೂ. ಎರಡು ಲಕ್ಷ ಕೊಟ್ಟು, ಕೇಂದ್ರ ಸರ್ಕಾರದ ರೂ. ನಾಲ್ಕು ಲಕ್ಷ ವಾಪಾಸ್ ಪಡೆದಿದೆ.
ಇಲ್ಲಿಯವರೆಗೂ ಈ ದುರಂತದ ಬಗ್ಗೆ ಯಾರ ಮೇಲೆಯೂ ಕ್ರಮ ಕೈಗೊಂಡಿಲ್ಲ. ಇಲ್ಲಿ ಯಾವ ರಾಜಕಾರಣಿ, ಮಂತ್ರಿ ಕೂಡ ಲೆಕ್ಕಕ್ಕೆ ಇಲ್ಲದಾಗಿದೆ. ಈ ಘಟನೆಗೆ ತಪ್ಪಿತಸ್ಥರ ಮೇಲೆ ಕ್ರಮವಾಗಿಲ್ಲ. ಬದಲಿಗೆ ಜನಸಾಮಾನ್ಯರ ತಲೆ ದಂಡವಾಗಿದೆ. ಇಲ್ಲಿಯವರೆಗೂ ಮೃತರ ಮನೆಗೆ ಸಿಎಂ, ಮಂತ್ರಿಗಳು ಸೇರಿದಂತೆ ಯಾವೊಬ್ಬ ಬಿಜೆಪಿ ಮುಖಂಡರು ಕೂಡ ಭೇಟಿ ನೀಡಿ ಕಷ್ಟ ಆಲಿಸುವ ಕೆಲಸ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.

ಎಲ್ಲರೂ ಬೆಂಗಳೂರಿನಲ್ಲಿ ಕುಳಿತು ಪಾಲು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಯಾರೂ ಇಲ್ಲಿಗೆ ಬಂದು ನೋಡುವ ಕೆಲಸ ಮಾಡಿಲ್ಲ. ನಾವು ನೋಡಿ ನೋಡಿ ಕಾದು ನಂತರ ಈಗ ಕೊವೀಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಮೂವತ್ತು ಸಾವಿರ ಮಂದಿ ಕೊವೀಡ್ ಗೆ ತುತ್ತಾಗಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ, ಮಾಹಿತಿಯಂತೆ 3 ಲಕ್ಷ ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯದ್ಯಂತ ನಮ್ಮ ಕಾರ್ಯಕರ್ತರಿಂದ ಮಾಹಿತಿ ಪಡೆದು ಆಯಾ ಜಿಲ್ಲಾಧಿಕಾರಿ, ತಹಸೀಲ್ದಾರ್ ಗೆ ಅರ್ಜಿ ಸಲ್ಲಿಸುವ ಕೆಲಸ ಮಾಡುತ್ತೇವೆ ಎಂದು ಗುಡುಗಿದ್ದಾರೆ.
ಸಿಎಂಗೆ ಕುರ್ಚಿ ಬಹಳ ಮುಖ್ಯ. ಹೀಗಾಗಿ ಚಾಮರಾಜನಗರಕ್ಕೆ ಅವರು ಬಂದಿಲ್ಲ. ಈ ವೇಳೆ ಜನರ ಬಳಿ ಹೋದರೆ ರೊಚ್ಚಗೆದ್ದು, ಹೊಡೆಯುತ್ತಾರೆ ಎನ್ನುವ ಭಯವಿದೆ. ಇಂಟೆಲಿಜೆನ್ಸ್ ನವರಿಂದ ಮಾಹಿತಿ ಪಡೆದು ಭಯದಿಂದ ಅವರು ಜನರ ಬಳಿ ಹೋಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಸಂಪುಟ ವಿಸ್ತರಣೆ ಮಾಧ್ಯಮ ಸೃಷ್ಟಿ ಜೋಶಿ

ವಿಜಯಸಾಕ್ಷಿ ಸುದ್ದಿ, ಧಾರವಾಡ

ಕೇಂದ್ರದ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂಬ ವಿಚಾರವನ್ನು ಮಾಧ್ಯಮಗಳು ಸೃಷ್ಟಿ ಮಾಡಿವೆ. ಆ ಬಗ್ಗೆ ಪ್ರಧಾನಿಗಳು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಯಾರನ್ನು ಬಿಡಬೇಕು ಎನ್ನುವ ವಿಚಾರ ತಿಳಿಯುವುದಿಲ್ಲ, ಇದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ ಎಂದರು.

ಸಿ.ಪಿ.ಯೋಗೀಶ್ವರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯೋಗೀಶ್ವರ ಅವರು ಯಾವ ಯುನಿವರ್ಸಿಟಿಯಲ್ಲಿ ಪರೀಕ್ಷೆ ಬರೆದಿದ್ದಾರೋ ಗೊತ್ತಿಲ್ಲ. ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ಮುಗಿದಿದೆ. ಎಲ್ಲವೂ ಸರಿ ಹೋಗಿದೆ. ದೆಹಲಿಗ ಹೋಗೋದು, ಸುತ್ತೂರು ಮಠಕ್ಕೆ ಹೋಗೋದು ರಾಜ್ಯ ರಾಜಕೀಯದಲ್ಲಿ ಬದಲಾವಣೆ ಎಂದು ಮಾಧ್ಯಮಗಳು ಸೃಷ್ಟಿ ಮಾಡಿದರೆ ಏನು ಮಾಡೋದು? ಎಂದು ಜೋಶಿ ತಿಳಿಸಿದರು.