Home Blog Page 3469

ಕೂಡಲೇ ಎಸ್ಸೆಸ್ಸೆಲ್ಸಿ ಪರೀಕ್ಷೆಯ ನಿರ್ಧಾರ ಕೈ ಬಿಡಬೇಕು – ವಿಶ್ವನಾಥ್!

ವಿಜಯಸಾಕ್ಷಿ ಸುದ್ದಿ, ಮೈಸೂರು

ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿಯಬೇಕು ಎಂದು ಶಾಸಕ ಎಚ್. ವಿಶ್ವನಾಥ್ ಒತ್ತಾಯ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಇದು ಅವೈಜ್ಞಾನಿಕ ನಿರ್ಧಾರ. ಇದರಿಂದ ಅಕ್ಷರ, ಆರೋಗ್ಯ ಎರಡೂ ಹಾಳಾಗಲಿದೆ. ಪರೀಕ್ಷೆಯಿಂದ ಮಕ್ಕಳ ಆರೋಗ್ಯಕ್ಕೆ ತೊಂದರೆಯಾದರೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ.

ಜುಲೈನಲ್ಲಿ ಕೋವಿಡ್ ಮೂರನೇ ಅಲೆ ಅಪ್ಪಳಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರವೇ ಸಿಬಿಎಸ್ ಇಯಲ್ಲಿ ಪಿಯುಸಿ ಪರೀಕ್ಷೆ ನಡೆಸುವುದು ಬೇಡ ಎಂದು ಆದೇಶಿಸಿದೆ. ಆದರೂ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಹೊರಟಿರುವುದು ಸರಿಯಾದ ಕ್ರಮವಲ್ಲ. ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ತಲೆ ಬಾಗಿದೆ. ಕೋವಿಡ್ ಆತಂಕದ ಜೊತೆಗೆ ಇಡೀ ಶಿಕ್ಷಣ ವ್ಯವಸ್ಥೆ ಹಾಳಾಗಿ ಹೋಗಿದೆ. ಪರೀಕ್ಷೆ ನಡೆಸಲು ಹೊರಟಿರುವುದು ಆತುರ, ಅವೈಜ್ಞಾನಿಕ ತೀರ್ಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಕ್ಕಳಿಗೆ ಪಾಠವನ್ನೇ ಮಾಡದೆ ಪರೀಕ್ಷೆ ಮಾಡುವುದು ಅವೈಜ್ಞಾನಿಕವಾದುದು. ಅವೈಜ್ಞಾನಿಕ ತೀರ್ಮಾನವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ರಾಜ್ಯದಲ್ಲಿ ಯಾವ ಪುರುಷಾರ್ಥಕ್ಕೆ ಪರೀಕ್ಷೆ ನಡೆಸಲು ಸರ್ಕಾರ ಹೊರಟಿದೆ. ಜೀವ ಮತ್ತು ಜೀವನ ಎರಡನ್ನು ತೆಗೆಯಲು ಸುರೇಶ್ ಕುಮಾರ್ ಮುಂದಾಗಿದ್ದಾರೆ. ಪ್ರಧಾನಿ ಮೋದಿ ಜೀವ ಮುಖ್ಯ ನಂತರ ಜೀವನ ಅಂತ ಎಂದು ಹೇಳಿದ್ದಾರೆ. ಆದರೆ, ಸುರೇಶ್ ಕುಮಾರ್ ಗೆ ನನಗೆ ಎಲ್ಲವೂ ಗೊತ್ತು ಎಂಬ ಇಗೋ ಇದೆ. ಈ ಇಗೋ ಇಂತಹ ಸಂದರ್ಭದಲ್ಲಿ ಬಳಕೆಯಾಗಬಾರದು ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಮನೆಯೊಂದು ನೂರು ಬಾಗಿಲು ಆಗಿದೆ; ಪ್ರಿಯಾಂಕ್ ಖರ್ಗೆ!

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲು ಅಲ್ಲ, ಮನೆಯೊಂದು ನೂರು ಬಾಗಿಲು ಇದೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ವಿಚಾರ ಈಗ ಅಪ್ರಸ್ತುತ. ನಮ್ಮ ಪಕ್ಷ ಬಹುಮತ ಗಳಿಸಿದಾಗ ಸಿಎಲ್ ಪಿಯಲ್ಲಿರುವ ಶಾಸಕರು ಹೈಕಮಾಂಡ್ ಗೆ ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಆಗ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಸದ್ಯ ನಾವು ಜನರಿಗೆ ನೆರವಾಗುವ ಕುರಿತು ಯೋಚನೆ ಮಾಡಬೇಕಿದೆ ಎಂದು ಹೇಳಿದ್ದಾರೆ.

ನಮ್ಮಲ್ಲಿ ಅರ್ಹರು ಬಹಳ ಜನ ಇದ್ದಾರೆ. ಹೀಗಾಗಿಯೇ ಸಿಎಂ ಅಭ್ಯರ್ಥಿ ಬಗ್ಗೆ ಚರ್ಚೆ ನಡೆಯುತ್ತಿದೆ. ಬಿಜೆಪಿಯಲ್ಲಿ ಯಡಿಯೂರಪ್ಪ ಬಿಟ್ಟರೆ ಯಾರೂ ಇಲ್ಲ. ಹೀಗಾಗಿ ಬಿಜೆಪಿಯವರು ಮೊದಲು ಅವರ ಮನೆಯಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ.

ಶಾಸಕ ಜಮೀರ್ ತಮ್ಮ ವ್ಯೆಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಆದರೆ, ಪಕ್ಷ ಕಟ್ಟುವ ಸಾಮರ್ಥ್ಯ, ಜವಾಬ್ದಾರಿ ಇರುವ ನಾಯಕ ಈ ತರಹ ಮಾತನಾಡುವುದಿಲ್ಲ ಎಂದು ಜಮೀರ್ ಗೆ ಟಾಂಗ್ ಕೊಟ್ಟಿದ್ದಾರೆ.
ದಲಿತ ಸಿಎಂ ವಿಚಾರ ಇಂತಹ ಸಂದರ್ಭದಲ್ಲಿ ಕೇಳಿ ಬರುತ್ತದೆ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅವರಿಗೆ ಸಿಎಂ ಆಗುವ ಅರ್ಹತೆ ಇರಲ್ವಾ? ಮೀಡಿಯಾದಲ್ಲಿ ಬಂದಾಗಲೆ ದಲಿತ ಸಿಎಂ ವಿಚಾರ ಚರ್ಚೆಗೆ ಬರುತ್ತದೆ. ಆದರೆ, ನಮ್ಮ ಸಮಾಜದವರು ಎಚ್ಚೆತ್ತಕೊಂಡಿಲ್ಲವೋ ಗೊತ್ತಿಲ್ಲ. ಮುಖ್ಯಮಂತ್ರಿ ವಿಚಾರ ಬಂದಾಗ ದಲಿತ ಮುಖ್ಯಮಂತ್ರಿ ಅಂತಾ ಹೆಡ್ ಲೈನ್ ಹೊಡಿತ್ತಾರೆ. ಬೇರೆ ಸಮಾಜದವರು ಆದಾಗ ಏಕೆ ಈ ರೀತಿ ಹೆಡ್ ಲೈನ್ ಕೊಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

ಈಗ ನಾವು ಜಡ್ಜಮೆಂಟ್ ಹಂತದಲ್ಲಿದ್ದೇವೆ; ಬಾಂಬ್ ಸಿಡಿಸಿದ ಯೋಗೇಶ್ವರ್!

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ನಮ್ಮಲ್ಲಿನ ವಾದ – ವಿವಾದ ಮುಗಿದಿದೆ. ಸದ್ಯ ನಾವು ಜಡ್ಜಮೆಂಟ್ ನಿರೀಕ್ಷೆಯಲ್ಲಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.
ನಗರದಲ್ಲಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕೊರೊನಾ ಮಾರ್ಗಸೂಚಿಯಂತೆಯೇ ನಮ್ಮ ಹೈಕಮಾಂಡ್ ಮಾರ್ಗಸೂಚಿ ನೀಡುತ್ತದೆ ಎಂಬ ಆಶಾಭಾವನೆ ಇದೆ. ನನ್ನ ಭಾವನೆಗಳನ್ನು ನಾನು ಹೈಕಮಾಂಡ್ ಮುಂದೆ ಹೇಳಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಜಡ್ಜ್ ಮೆಂಟ್ ಏನು ಬರುತ್ತದೆಯೋ ಕಾಯ್ದು ನೋಡಬೇಕಿದೆ. ಸದ್ಯಕ್ಕೆ ನಮ್ಮ ಪಕ್ಷದಲ್ಲಿ ಯಾವ ರೀತಿ ಗೊಂದಲಗಳಿಲ್ಲ. ಏನಾದರೂ ಸಮಸ್ಯೆಗಳಿದ್ದರೆ ನಾವೆಲ್ಲ ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ಹೇಳಿದ್ದಾರೆ.

ಅಕ್ಕನಿಗೆ ಹಿಂಸೆ ನೀಡಿದ್ದಕ್ಕೆ ಭಾವನ ಕೊಲೆ!

ವಿಜಯಸಾಕ್ಷಿ ಸುದ್ದಿ, ಮೈಸೂರು

ಅಕ್ಕನಿಗೆ ಚಿತ್ರಹಿಂಸೆ ನೀಡಿದ್ದಾನೆ ಎಂಬ ಕಾರಣಕ್ಕೆ ಬಾಮೈದನೇ ಭಾವನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಕೆಂಪಶೆಟ್ಟಿ(40) ಮೃತ ದುರ್ದೈವಿ. ಬಾಮೈದ ಕೆಂಡಗಣ್ಣ ಶೆಟ್ಟಿ ಕೊಲೆ ಮಾಡಿರುವ ಆರೋಪಿ ಎನ್ನಲಾಗಿದೆ. ಕಳೆದ 10 ವರ್ಷಗಳ ಹಿಂದೆ ಶಶಿರೇಖಾ ಎಂಬುವವರನ್ನು ಕೆಂಪಶೆಟ್ಟಿಯೊಂದಿಗೆ ಮದುವೆ ಮಾಡಲಾಗಿತ್ತು. ಆದರೆ, ಇತ್ತೀಚೆಗೆ ಕೆಂಪಶೆಟ್ಟಿ ಕುಡಿತದ ದಾಸನಾಗಿದ್ದ.

ನಿತ್ಯವೂ ಕುಡಿದು ಬಂದು ಪತ್ನಿ ಶಶಿರೇಖಾಗೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದ. ಈ ಕುರಿತು ಹಲವು ಬಾರಿ ನ್ಯಾಯ ಪಂಚಾಯ್ತಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇತ್ತೀಚೆಗಷ್ಟೇ ಕುಡಿಯಲು ಹಣ ನೀಡುವಂತೆ ಪತ್ನಿಯನ್ನು ಕೆಂಪಶೆಟ್ಟಿ ಪೀಡಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಬಾಮೈದ ಕೆಂಡಗಣ್ಣ ಶೆಟ್ಟಿ, ಕೆಂಪಶೆಟ್ಟಿಗೆ ಚಾಕು ಇರಿದು ಕೊಲೆ ಮಾಡಿದ್ದಾನೆ.
ಚಾಕು ಇರಿಯುತ್ತಿದ್ದಂತೆ ಕೆಂಪಶೆಟ್ಟಿಯನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತು. ಆದರೆ, ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು ಕೆಂಡಗಣ್ಣ ಶೆಟ್ಟಿ, ಪತ್ನಿ ಶಶಿರೇಖಾ, ಷಡ್ಕ ರಮೇಶ್‌ ನನ್ನು ಬಂಧಿಸಿದ್ದಾರೆ. ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಫುಟ್ ಪಾತ್ ಅಂಗಡಿಗಳ ತೆರವಿಗೆ ತಹಸೀಲ್ದಾರ ಸೂಚನೆ

ವಿಜಯಸಾಕ್ಷಿ ಸುದ್ದಿ, ಕೊಟ್ಟೂರು

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಫುಟ್ಪಾತನ್ನು ಆಕ್ರಮಿಸಿಕೊಂಡು ಅಂಗಡಿಗಳನ್ನಿಟ್ಟುಕೊಂಡವರು ಸೋಮವಾರದೊಳಗೆ ತೆರವುಗೊಳಿಸುವಂತೆ ತಹಸೀಲ್ದಾರ್ ಜಿ. ಅನಿಲ್ ಕುಮಾರ್ ಸೂಚಿಸಿದ್ದಾರೆ. ಪಟ್ಟಣದ ತಹಸೀಲ್ದಾರ್ ಕಛೇರಿಯ ಮಹಾತ್ಮಗಾಂಧಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಪಟ್ಟಣದ ಎಪಿಎಂಸಿ ರಸ್ತೆ, ಸರ್ಕಾರಿ ಬಸ್ ನಿಲ್ದಾಣ, ಗಾಂಧಿ ಸರ್ಕಲ್ ಮುಂಭಾಗ, ಇಟಗಿ ರಸ್ತೆ, ಉಜ್ಜಿನಿ ಸರ್ಕಲ್ ನ ಚಿರಬಿ ರಸ್ತೆ ಸೇರಿದಂತೆ ಫುಟ್ ಪಾತ್ ಅಕ್ರಮಿಸಿಕೊಂಡು ಡಬ್ಬಾ ಅಂಗಡಿ, ಸ್ಟಾಲ್ ಗಳನ್ನು ನಿರ್ಮಿಸಿಕೊಂಡವರು ಸೋಮವಾರದೊಳಗೆ ತೆರವುಗೊಳಿಸಬೇಕು ಎಂದರು.

ಜಿಲ್ಲಾಧಿಕಾರಿಗಳು ಈ ಕುರಿತು ಆದೇಶ ಹೊರಡಿಸಿದ್ದು, ಅತಿಕ್ರಮಣ ಮಾಡಿಕೊಂಡ ರಸ್ತೆಗಳನ್ನು ತೆರವುಗೊಳಿಸದಿದ್ದರೆ ಜೆಸಿಬಿ ಮೂಲಕ ತೆರವುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ತಕ್ಷಣ ಈ ಅಂಗಡಿಗಳಿಗೆ ಕಲ್ಪಿಸಿರುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಜೆಸ್ಕಾಂ ಇಂಜಿನಿಯರ್ ಎಸ್. ಚೇತನ್ ಕುಮಾರ್ ಗೆ ಆದೇಶಿಸಿದರು. ಪೊಲೀಸ್, ಅಗ್ನಿ ಶಾಮಕ ದಳ, ಕಂದಾಯ, ಪಟ್ಟಣ ಪಂಚಾಯಿತಿ, ಲೋಕೋಪಯೋಗಿ ಇಲಾಖೆ ಜಂಟಿಯಾಗಿ ಜೆಸಿಬಿ, ಕ್ರೈನ್ ಮೂಲಕ ಅತಿಕ್ರಮಣ ತೆರವುಗೊಳಿಸುವುದಾಗಿ ಎಚ್ಚರಿಸಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಟಿ.ಎಸ್. ಗಿರೀಶ್ ಮಾತನಾಡಿ, ಕೊಟ್ಟೂರು ಐತಿಹಾಸಿಕವಾದ ಧಾರ್ಮಿಕ ಕ್ಷೇತ್ರವಾಗಿದೆ. ಪಟ್ಟಣವನ್ನು ಸ್ಚಚ್ಚವಾಗಿ ಇಟ್ಟುಕೊಳ್ಳಬೇಕು. ಇದು ನಮ್ಮ ನಿಮ್ಮೆಲ್ಲರ ಕರ್ತವ್ಯ. ನಾನು ಈಗಾಗಲೇ ವರ್ಗಾವಣೆ ಆದರೂ ಚಿಂತೆ ಇಲ್ಲ. ತೆರವು ಕಾರ್ಯಚರಣೆ ನಿಲ್ಲಿಸುವುದಿಲ್ಲವೆಂದು ಖಡಕ್ಕಾಗಿ ಹೇಳಿದರು.

ಸಭೆಯಲ್ಲಿ ಎಎಸ್ ಐ ರುದ್ರಮುನಿ, ಲೋಕೋಪಯೋಗಿ ಇಲಾಖೆ ಖಾಜಸಾಹೇಬ್, ಆರೋಗ್ಯ ಕಿರಿಯ ಸಹಾಯಕಿ ಅನುಷಾ, ಅಗ್ನಿಶಾಮಕದಳದ ವಾಸುದೇವಪ್ಪ ಸೇರಿದಂತೆ ನೂರಕ್ಕೂ ಹೆಚ್ಚು ವ್ಯಾಪಾರಿಗಳು ಸಭೆಯಲ್ಲಿ ಹಾಜರಿದ್ದರು.

ಸಿಎಂ ಗುದ್ದಾಟದ ಮಧ್ಯೆ ಕೇಳಿ ಬರುತ್ತಿದೆ ಎಚ್.ಕೆ. ಹೆಸರು!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು/ಗದಗ

ಅಧಿಕಾರದಲ್ಲಿ ಇಲ್ಲದಿದ್ದರೂ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಯಾಗಲು ಪೈಪೋಟಿ ನಡೆದಿದೆ. ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಂಬಲಿಗರು ಬಹಿರಂಗವಾಗಿಯೇ ತಮ್ಮ ನಾಯಕರ ಪರವಾಗಿ ಹೇಳಿಕೆಗಳನ್ನು ಕೊಡುತ್ತಿದ್ದರೆ, ಇನ್ನೂ ಕೆಲವರು ದಲಿತರು ಮುಖ್ಯಮಂತ್ರಿಯಾಗಲಿ, ಅದಕ್ಕೆ ಮಲ್ಲಿಕಾರ್ಜುನ ಖರ್ಗೆಯವರೇ ಸೂಕ್ತ ಎನ್ನುತ್ತಿದ್ದಾರೆ. ಈ ಇಬ್ಬರೂ ನಾಯಕರು ನಾವು ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಸಿಲ್ಲ ಎಂದು ಹೇಳಿದ್ದರೂ ಅವರ ಬೆಂಬಲಿಗರು ಮಾತ್ರ ತಮ್ಮ ನಾಯಕರ ಪರ ಬ್ಯಾಟಿಂಗ್ ಮಾಡುವುದನ್ನು ನಿಲ್ಲಿಸಿಲ್ಲ. ಹಲವು ಶಾಸಕರು ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಹೇಳಿದ್ದಾರೆ. ಹಲವರು ಡಿಕೆಶಿ ಪರ ಮಾತನಾಡಿದ್ದಾರೆ. ಸ್ವತಃ ಡಿಕೆಶಿ, ಇದನ್ನೆಲ್ಲ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ಜತೆಗೆ, ಸಿದ್ದು ಆಂಡ್ ಟೀಂಗೆ ಟಾಂಗ್ ಕೊಟ್ಟಿದ್ದಾರೆ. ಅಲ್ಲದೆ, ಕಾಂಗ್ರೆಸ್ ಶಿಸ್ತುಸಮಿತಿಯ ಅಧ್ಯಕ್ಷ ರಹೆಮಾನ್ ಕಾನ್ ಅವರು, ನಾಯಕತ್ವದ ಬಗ್ಗೆ ಯಾರೂ ಬಹಿರಂಗವಾಗಿ ಹೇಳಿಕೆ ನೀಡದಂತೆ ಎಚ್ಚರಿಕೆಯನ್ನೂ ನೀಡಿದ್ದಾರೆ.

ಮುನ್ನೆಲೆಗೆ ಬಂದ ಉತ್ತರ ಕರ್ನಾಟಕದ ಹುಲಿ

ಇದೆಲ್ಲರದರ ಮಧ್ಯೆ ಈಗ ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ. ಪಾಟೀಲರ ಹೆಸರೂ ಮುನ್ನೆಲೆಗೆ ಬಂದಿದೆ. ಎಚ್.ಕೆ. ಪಾಟೀಲರ ತಂದೆ ಕೆ.ಎಚ್. ಪಾಟೀಲರೂ ಶಾಸಕರು ಹಾಗೂ ಸಚಿವರಾಗಿ ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದರು. ಅಂದು ಅವರು ಕಾಂಗ್ರೆಸ್‌ನ ಸಿಎಂ ರೇಸ್‌ನಲ್ಲಿದ್ದರು. ಆದರೆ, ಆಸೆ ಕೈಗೂಡಿರಲಿಲ್ಲ.
ಈ ಮೊದಲು ಗ್ರಾಮೀಣಾಭಿವೃದ್ಧಿ, ಜಲಸಂಪನ್ಮೂಲ ಸಹಿತ ಹಲವು ಖಾತೆಗಳ ಸಚಿವರಾಗಿ ಅನುಭವ ಹೊಂದಿರುವ ಎಚ್.ಕೆ. ಪಾಟೀಲ ಹಿರಿಯರಾಗಿದ್ದು, ಪಕ್ಷದಲ್ಲೂ ಸಕ್ರಿಯರಾಗಿದ್ದಾರೆ. ಕಾಂಗ್ರೆಸ್ ಮುಂದಿನ ಬಾರಿ ಅಧಿಕಾರಕ್ಕೆ ಬಂದರೆ ಎಚ್.ಕೆ. ಪಾಟೀಲ್ ರನ್ನು ಸಿಎಂ ಮಾಡಬೇಕೆಂದು ಅವರ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಡುತ್ತಿರುವ ಒತ್ತಾಯ ಸಾಕಷ್ಟು ವೈರಲ್ ಆಗುತ್ತಿದೆ.

ಅಭಿಮಾನಿಗಳ ಅಭಿಮತವೇನು?

ರಾಜ್ಯದ ಸಂಭಾವಿತ ರಾಜಕಾರಣಿಗಳಲ್ಲಿ ಎಚ್.ಕೆ. ಪಾಟೀಲ್ ಕೂಡ ಒಬ್ಬರು. ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿ ಸುದೀರ್ಘ ಕಾಲ ಕಾರ್ಯ ನಿರ್ವಹಿಸಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಉತ್ತರ ಕರ್ನಾಟಕದ ಹುಲಿ ಎಂದೇ ಬಿಂಬಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

1985ರ ಚುನಾವಣೆ ಸಂದರ್ಭದಲ್ಲಿ ಎಚ್.ಕೆ. ಪಾಟೀಲರ ತಂದೆ ಕೆ.ಎಚ್. ಪಾಟೀಲ್ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಭಾವೀ ಸಿಎಂ ಎಂದೇ ಬಿಂಬಿತವಾಗಿದ್ದರು. ಆದರೆ, ಅದೃಷ್ಟ ಒದಗಿ ಬರಲಿಲ್ಲ. 1989ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಕೆ.ಎಚ್. ಪಾಟೀಲರು ಸಚಿವ ಸ್ಥಾನಕ್ಕಷ್ಟೇ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಸದ್ಯ ತಂದೆಯ ಬಯಕೆಯನ್ನು ಅವರ ಮಗ ಎಚ್.ಕೆ. ಪಾಟೀಲರು ಸಿಎಂ ಆಗಿ ಈಡೇರಿಸಬಲ್ಲರು ಎಂಬ ನಂಬಿಕೆ ರಾಜ್ಯದ ಜನತೆಗೆ ಇದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಸಾಕಷ್ಟು ಚರ್ಚೆಯಾಗುತ್ತಿದೆ.

ಪಾಠ ಕೇಳೋಣ ಅಂದ್ರೆ ನೆಟ್ವರ್ಕ್ ಇಲ್ಲ; ಯಾರಿಗೆ ಹೇಳೋಣ?

ವಿಜಯಸಾಕ್ಷಿ ಸುದ್ದಿ, ಗದಗ

ಕೊರೊನಾ ಮಹಾಮಾರಿ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿ ಜನರ ಬದುಕನ್ನು ತಲ್ಲಣಿಸುತ್ತಿದೆ. ಶಿಕ್ಷಣ ವ್ಯವಸ್ಥೆ ಇನ್ನೂ ದಾರಿಗೆ ಬರುತ್ತಿಲ್ಲ. ಸರ್ಕಾರ ಕಳೆದ ವರ್ಷದಿಂದಲೂ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುತ್ತಿದೆ. ಆದರೆ, ನೆಟ್‌ವರ್ಕ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳ ಪಾಡು ಹೇಳತೀರದಾಗಿದೆ.

ನೆಟ್‌ವರ್ಕ್ ಸಮಸ್ಯೆಯಿಂದಾಗಿ ಆನ್‌ಲೈನ್ ಶಿಕ್ಷಣದಿಂದ ಹಳ್ಳಿಯ ವಿದ್ಯಾರ್ಥಿಗಳು ವಂಚಿತವಾಗುವಂತೆ ಆಗಿದೆ. ವಿದ್ಯಾರ್ಥಿಗಳು ಮಹಡಿ ಏರಿ ಕುಳಿತರು, ಗುಡ್ಡ ಹತ್ತಿದರು, ರಸ್ತೆಗೆ ಬಂದು ನಿಂತರು, ಮರ ಏರಿದರು,. ಆದರೂ ನೆಟ್‌ವರ್ಕ್ ಮಾತ್ರ ಅವರಿಗೆ ಸಿಗುತ್ತಿಲ್ಲ!

ಹಲವು ವಿದ್ಯಾರ್ಥಿಗಳು ಮನೆ ಮಹಡಿಯ ಮೇಲೆ ಮೊಬೈಲ್ ಹಿಡಿದು ನೆಟ್‌ವರ್ಕ್‌ಗಾಗಿ ಹುಡುಕಾಡುತ್ತಿದ್ದಾರೆ. ಬಿಸಿಲು, ಚಳಿ, ಮಳೆ ಗಾಳಿ ಎನ್ನದೆ ಆನ್‌ಲೈನ್ ಶಿಕ್ಷಣಕ್ಕಾಗಿ ಪರದಾಟ ನಡೆಸಿದ್ದಾರೆ.

ಸದ್ಯ ಕೊರೊನಾ ಎರಡನೇ ಅಲೆ ತಹಬದಿಗೆ ಬರುತ್ತಿದೆ. ಇದರ ಮಧ್ಯೆ ಮೂರನೇ ಅಲೆಯ ಭಯ ಜನರನ್ನು ಕಾಡುತ್ತಿದೆ. ಅದರಲ್ಲಿಯೂ ಈ ಅಲೆ ಮಕ್ಕಳಲ್ಲಿ ಹೆಚ್ಚಾಗಿ ವಕ್ಕರಿಸುತ್ತದೆ ಎಂಬ ಆತಂಕ ಎಲ್ಲೆಡೆ ಮನೆ ಮಾಡಿದೆ. ಹೀಗಾಗಿ ಸರ್ಕಾರ ಶಾಲಾ – ಕಾಲೇಜುಗಳನ್ನು ತೆರೆಯುವ ಗೋಜಿಗೆ ಹೋಗದೆ, ಆನ್‌ಲೈನ್ ಮೂಲಕ ಮಕ್ಕಳಿಗೆ ಶಿಕ್ಷಣ ಒದಗಿಸಲು ಹೆಚ್ಚು ಆಸಕ್ತಿ ವಹಿಸಲಾಗುತ್ತಿದೆ.

ಆನ್‌ಲೈನ್ ಶಿಕ್ಷಣಕ್ಕೆ ಮೊಬೈಲ್ ಹಾಗೂ ಇಂಟರ್ನೆಟ್ ಸೇವೆ ಅತೀ ಅವಶ್ಯ. ಆದರೆ, ಗ್ರಾಮೀಣ ಭಾಗಗಳಲ್ಲಿ ಮತ್ತೊಬ್ಬರ ಜೊತೆಗೆ ಫೋನ್‌ನಲ್ಲಿ ಮಾತನಾಡಬೇಕೆಂದರೂ ಸರಿಯಾದ ನೆಟ್‌ವರ್ಕ್ ಸಿಗುತ್ತಿಲ್ಲ. ಈ ಸಂದರ್ಭದಲ್ಲಿಯೇ ಆನ್‌ಲೈನ್‌ನಲ್ಲಿಯೇ ತಾಸಿಗೂ ಹೆಚ್ಚು ಕಾಲ ಪಾಠ ಆಲಿಸುವುದು ಸವಾಲಿನ ಕೆಲಸವಾಗಿದೆ. ಅದರಲ್ಲಿಯೂ ಗದಗ ತಾಲೂಕಿನ ಕಬಲಾಯತಕಟ್ಟಿ ಹಾಗೂ ಸುತ್ತಲಿನ ಹಲವು ಗ್ರಾಮಗಳಲ್ಲಿನ ವಿದ್ಯಾರ್ಥಿಗಳ ಪಾಡು ಚಿಂತಾಜನಕವಾಗಿದೆ. ಇಲ್ಲಿನ ವಿದ್ಯಾರ್ಥಿಗಳು ನೆಟ್‌ವರ್ಕ್ ಸಲುವಾಗಿ ಹೊಲ, ಗದ್ದೆ, ಮನೆ ಮಹಡಿ ಸುತ್ತಾಡುವುದು ಸಾಮಾನ್ಯವಾಗಿ ಬಿಟ್ಟಿದೆ.

ಕಬಲಾಯತಕಟ್ಟಿ ಗ್ರಾಮ ಗದಗ ನಗರದಿಂದ ಕೇವಲ 14 ಕಿ.ಮೀ. ದೂರದಲ್ಲಿದೆ. ಆದರೂ ಇಲ್ಲಿನ ವಿದ್ಯಾರ್ಥಿಗಳು ನೆಟ್‌ವರ್ಕ್‌ಗಾಗಿ ಪರಿತಪಿಸುವಂತಾಗಿದೆ. ಈ ಗ್ರಾಮದಲ್ಲಿನ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ಸದ್ಯ ಆನ್‌ಲೈನ್ ಶಿಕ್ಷಣದ ಮೂಲಕ ಪಾಠ ಕೇಳಲು ಹರಸಾಹಸ ಪಡುತ್ತಿದ್ದಾರೆ. ಜತೆಗೆ, ಆಗಾಗ ಕೈಕೊಡುವ ವಿದ್ಯುತ್ ಮೊಬೈಲ್‌ಗಳಲ್ಲಿ ಚಾರ್ಜ್ ಇಲ್ಲದೆ ಸ್ವಿಚ್ ಆಫ್ ಆಗುವಂತೆ ಮಾಡುತ್ತಿದೆ.

ನಗರಕ್ಕೆ ಪಕ್ಕ ವಾಸ್ತವ್ಯ

ಹೀಗಾಗಿ ಹಲವು ಕುಟುಂಬಗಳು ತಮ್ಮ ವೃದ್ಧ ತಂದೆ, ತಾಯಿಗಳನ್ನು ಬಿಟ್ಟು ಪಕ್ಕದ ನಗರಗಳಲ್ಲಿ ವಾಸ ಮಾಡುವ‌ ಅನಿವಾರ್ಯತೆಗೆ ಬಂದು ಸಿಲುಕಿವೆ. ಇತ್ತ ತುರ್ತಾಗಿ ಯಾವುದೇ ಕಚೇರಿ ಹಾಗೂ ಆರೋಗ್ಯ ಸಮಸ್ಯೆಗಳಿಗೆ ಸಂಪರ್ಕಿಸಬೇಕೆಂದರೂ ನೆಟ್‌ವರ್ಕ್ ಇಲ್ಲದಾಗಿದೆ. ಈ‌ ಸಮಸ್ಯೆ ಕುರಿತು ಶಾಸಕರಿಗೆ ಹಾಗೂ ಸಂಬಂಧಪಟ್ಟವರಿಗೂ ಹಲವಾರು ಬಾರಿ ಮನವಿ ಮಾಡಲಾಗಿದೆ. ಆದರೆ, ಯಾರೊಬ್ಬರೂ ಈ ಕುರಿತು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಪರೀಕ್ಷೆ ಸಮಯದಲ್ಲಿ ತೊಂದರೆ

ಹಾವೇರಿಯಲ್ಲಿ ಬಿ.ಟೆಕ್. ಓದುತ್ತಿದ್ದೇನೆ. ಸದ್ಯ ಕೊರೊನಾದಿಂದಾಗಿ ಊರಲ್ಲಿಯೇ ಇದ್ದೇನೆ. ಆನ್‌ಲೈನ್‌ನಲ್ಲಿಯೇ ಓದಬೇಕು. ಆದರೆ, ಊರಲ್ಲಿ ನೆಟ್‌ವರ್ಕ್ ಬಾರದ ಕಾರಣ ಹೊಲಕ್ಕೆ, ಮನೆಯ ಮಾಳಿಗೆಯ ಮೇಲೆ ಓಡಬೇಕಾಗಿದೆ. ಪರೀಕ್ಷೆಯ ಸಮಯದಲ್ಲಿ ತುಂಬಾ ತೊಂದರೆಯಾಗುತ್ತಿದೆ.

ವಿಶ್ವನಾಥ್ ದೊಡ್ಡಮನಿ, ಬಿ.ಟೆಕ್. ವಿದ್ಯಾರ್ಥಿ

ಎಲ್ಲಿದೆ ಡಿಜಿಟಲ್ ಇಂಡಿಯಾ?
ಸರ್ಕಾರ ಡಿಜಿಟಲ್ ಇಂಡಿಯಾ ಎಂದು ಹೇಳುತ್ತಿದೆ. ಆದರೆ, ನಮ್ಮಲ್ಲಿ ಅದು ಕಾಣಿಸುತ್ತಿಲ್ಲ. ನಾನು ಬಿಎಸ್ಸಿ ಅಗ್ರಿ ಓದುತ್ತಿದ್ದೇನೆ. ನೆಟ್‌ವರ್ಕ್ ಇಲ್ಲದ ಕಾರಣ ತುಂಬಾ ತೊಂದರೆಯಾಗುತ್ತಿದೆ. ಹೊಲಕ್ಕೆ ಹೋಗಿ ಓದಬೇಕಾದ ಪರಿಸ್ಥಿತಿ ಇದೆ. ಆದರೆ, ಮಳೆಯ ಕಾಟ ಇರುವುದರಿಂದ ತುಂಬಾನೆ ತೊಂದರೆಯಾಗುತ್ತಿದೆ.

ವಿಜಯಲಕ್ಷ್ಮೀ ದೊಡ್ಡಮನಿ, ವಿದ್ಯಾರ್ಥಿನಿ

ಪರದಾಡುತ್ತಲೇ ಇದ್ದೇವೆ

ಆನ್‌ಲೈನ್ ತರಗತಿಗಳು ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ನಡೆಯುತ್ತಿವೆ. ಆದರೆ, ಅಲ್ಲಿಂದ ಇಲ್ಲಿಯವರೆಗೂ ನಾವು ತುಂಬಾ ಪರದಾಡುತ್ತಿದ್ದೇವೆ. ನೆಟ್‌ವರ್ಕ್ ಸಮಸ್ಯೆ ನಮಗೆ ಕ್ಲಾಸ್ ಕೇಳಲು ತುಂಬಾನೆ ತೊಂದರೆ ಮಾಡುತ್ತಿದೆ. ನಮಗೆ ದಿಕ್ಕು ತೋಚದಂತಾಗಿದೆ.

– ಸುಮಿತಾ ದೊಡ್ಡಮನಿ, ವಿದ್ಯಾರ್ಥಿನಿ

ಮನವಿ ಮಾಡಿದರೂ ಸ್ಪಂದಿಸಿಲ್ಲ

ನಮ್ಮ ಮಕ್ಕಳು ಹಾಗೂ ಗ್ರಾಮದ ಆಸುಪಾಸಿನ ವಿದ್ಯಾರ್ಥಿಗಳು ನೆಟ್‌ವರ್ಕ್ ಸಮಸ್ಯೆಯಿಂದ ಒದ್ದಾಡುತ್ತಿದ್ದಾರೆ. ಈ ಕುರಿತು ಹಲವು ಬಾರಿ ಮನವಿ ಮಾಡಿದರೂ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೊರೊನಾದಿಂದಾಗಿ ಎರಡು ವರ್ಷಗಳಿಂದ ಈ ಭಾಗದ ವಿದ್ಯಾರ್ಥಿಗಳು ಮನೆಯಲ್ಲಿಯೇ ಆನ್‌ಲೈನ್‌ನಲ್ಲಿ ಓದುತ್ತಿದ್ದಾರೆ. ಆದರೆ, ನೆಟ್‌ವರ್ಕ್ ಇಲ್ಲದಿರುವುದರಿಂದಾಗಿ ಅವರು ಹೊಲ, ಮಹಡಿ, ರಸ್ತೆಯ ಮೇಲೆ ಕುಳಿತು ಓದುತ್ತಿದ್ದಾರೆ. ಇಲ್ಲಿಯೂ ನೆಟ್‌ವರ್ಕ್ ಸಮಸ್ಯೆ ಸರಿಯಿದೆ ಅಂತಲ್ಲ. ಕೂಡಲೇ ಸಂಬಂಧಪಟ್ಟವರು ವಿದ್ಯಾರ್ಥಿಗಳ ತೊಂದರೆ ಬಗೆಹರಿಸಬೇಕಿದೆ.

ಮುನೇಂದ್ರಪ್ಪ ದೊಡ್ಡಮನಿ, ಕಬಲಾಯತಕಟ್ಟಿ ತಾಂಡಾ.

ಒಂದೇ ಕುಟುಂಬದ 6 ಜನ ದುರ್ಮರಣ!

ವಿಜಯಸಾಕ್ಷಿ ಸುದ್ದಿ, ಯಾದಗಿರಿ

ಒಂದೇ ಕುಟುಂಬದ 6 ಜನ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ನಾಲ್ಕು ಮಕ್ಕಳೊಂದಿಗೆ ಪೋಷಕರು ನೀರಿನ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ತಂದೆ ಭೀಮರಾಯ ಹಾಗೂ ತಾಯಿ ಶಾಂ ತಮ್ಮ ತನ್ನ ನಾಲ್ಕು ಮಕ್ಕಳೊಂದಿಗೆ ನೀರಿನ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಕ್ಕಳಾದ ಸುಮಿತ್ರಾ, ಶ್ರೀದೇವಿ, ಲಕ್ಷ್ಮೀ ಹಾಗೂ ಶಿವರಾಜ ಪೋಷಕರೊಂದಿಗೆ ಇಹಲೋಕ ತ್ಯಜಿಸಿದ ದುರ್ದೈವಿ ಮಕ್ಕಳು. ಸ್ಥಳಕ್ಕೆ ಶಹಾಪುರ ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಭೇಟಿ ನೀಡಿದ್ದಾರೆ. ಸದ್ಯ ನಾಲ್ವರ ಶವ ಹೊರ ತೆಗೆಯಲಾಗಿದೆ.

ಶಹಾಪುರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕೊರೊನಾ; ಸೋಮವಾರ ಗದಗ ಜಿಲ್ಲೆಯಲ್ಲಿ 17 ಜನರಿಗೆ ಸೋಂಕು, ಇಬ್ಬರ ಸಾವು

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಸೋಮವಾರ 17 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಸೋಮವಾರವೂ ಕೂಡ ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.

ಇಂದು 17 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 25770 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -10, ಮುಂಡರಗಿ-01, ನರಗುಂದ-01, ರೋಣ-03, ಶಿರಹಟ್ಟಿ-01, ಹೊರಜಿಲ್ಲೆಯ-01 ಸೇರಿದಂತೆ 17 ಪ್ರಕರಣಗಳು ದೃಢಪಟ್ಟಿವೆ.

ಸೋಮವಾರ ಕೋವಿಡ್ ನಿಂದ ಇಬ್ಬರು ಮೃತಪಟ್ಟ ಕುರಿತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತ ಹೊರಡಿಸಿದ ವರದಿಯಲ್ಲಿ ಮಾಹಿತಿ ಇದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ನಿಂದಾಗಿ 300 ಜನರು ಮೃತಪಟ್ಟಂತಾಗಿದೆ.

ಜಿಲ್ಲೆಯ ನರಗುಂದ ಪಟ್ಟಣದ ಗುರ್ಲಕಟ್ಟಿ ನಿವಾಸಿ 60 ವರ್ಷದ ವ್ಯಕ್ತಿ ಜೂನ್ 13 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಕೋವಿಡ್ ದೃಢಪಟ್ಟಿತ್ತು. ಜೂನ್ 27 ರಂದು ಮೃತಪಟ್ಟಿದ್ದಾರೆ.

ಗದಗ ನಗರದ ವಿವೇಕಾನಂದ ರಸ್ತೆಯ ನಿವಾಸಿ 54 ವರ್ಷದ ಮಹಿಳೆ ಜೂನ್ 06 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಕೋವಿಡ್ ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜೂನ್ 26 ರಂದು ಮೃತಪಟ್ಟಿದ್ದಾರೆ.

ಇವರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನೆರವೇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇಂದು 24 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 25250 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 220 ಜನ ಸೋಂಕಿತರು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 93 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಲಸಿಕೆ ಪಡೆದರೆ ಮಾತ್ರ ಕಟಿಂಗ್, ಶೇವಿಂಗ್!

ವಿಜಯಸಾಕ್ಷಿ ಸುದ್ದಿ, ಭೋಪಾಲ್

ಸರ್ಕಾರ ಎಷ್ಟೇ ಸೂಚಿಸಿದರು ಹಾಗೂ ತಿಳುವಳಿಕೆ ಮೂಡಿಸಿದರೂ ಜನರು ಮಾತ್ರ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹಲವು ಗಿಫ್ಟ್ ಗಳ ಆಮಿಷವೊಡ್ಡಿದರೂ ಹಲವು ಕಡೆ ಲಸಿಕೆ ಹಾಕಿಸುವಂತೆ ಜನರನ್ನು ಪ್ರೇರೇಪಿಸಲಾಗುತ್ತಿದೆ. ಆದರೆ, ಮಧ್ಯಪ್ರದೇಶದ ಛಿಂದ್ವಾಡಾ ಸಲೂನ್ ಮಾಲೀಕರು ಕೊರೊನಾ ಲಸಿಕೆ ಪಡೆದುಕೊಳ್ಳದವರಿಗೆ ಹೇರ್ ಕಟ್ಟಿಂಗ್ ಮತ್ತು ಶೇವಿಂಗ್ ಮಾಡಬಾರದಂತೆ ನಿರ್ಧರಿಸಿದ್ದಾರೆ.

ಕೊರೊನಾ ಲಸಿಕೆ ಪಡೆಯದವರಿಗೆ ಕ್ಷೌರ ಸೇರಿದಂತೆ ಯಾವುದೇ ಸೇವೆಗಳನ್ನು ನೀಡಲ್ಲ. ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಅಥವಾ ಮೆಸೇಜ್ ತೋರಿಸಿದ ಮೇಲೆಯೇ ಸೇವೆ ಒದಗಿಸಲು ನಿರ್ಧರಿಸಿದ್ದಾರೆ. ಕೊರೊನಾ ಲಸಿಕೆ ಅಭಿಯಾನಕ್ಕೆ ನಾವು ಸಾಥ್ ನೀಡಿದ್ದೇವೆ ಎಂದು ಸಲೂನ್ ಮಾಲೀಕರು ಹೇಳಿದ್ದಾರೆ.

ಕ್ಷೌರ ಮಾಡುವಾಗ ಗ್ರಾಹಕರ ಸಮೀಪಕ್ಕೆ ಹೋಗಬೇಕಾಗುತ್ತದೆ. ಇದರಿಂದಾಗಿ ನಮಗೂ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಹೀಗಾಗಿಯೇ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮಾಲೀಕರು ಹೇಳಿದ್ದಾರೆ.