Home Blog Page 36

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜತೆ ಚರ್ಚೆ – HDK

0

ಕೋಲಾರ: ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು ತರುವ ಬಗ್ಗೆ ಶೀಘ್ರದಲ್ಲಿಯೇ ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ಕೋಲಾರದಲ್ಲಿ ಶನಿವಾರ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು; ಈ ಜಿಲ್ಲೆಗಳಿಗೆ ನದಿಯ ನೀರು ಕೊಡುತ್ತೇವೆಂದು ಹೇಳಿ ಎತ್ತಿನಹೊಳೆ ಯೋಜನೆ ಮಾಡಿದರು. ಆದರೆ ಬೆಂಗಳೂರಿನ ರೊಚ್ಚು ನೀರು ಕೊಟ್ಟರು. ಮೂರನೇ ಹಂತದ ಶುದ್ಧೀಕರಣ ಮಾಡಿ ಎಂದರೂ ಮಾಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕೃಷ್ಣಾ ನದಿಯ ನೀರು ಬಿಟ್ಟರೆ ನಮಗೆ ಬೇರೆ ದಾರಿ ಇಲ್ಲ ಎಂದು ಎಂದರು.

ಈ ಜಿಲ್ಲೆಗೆ ಕೃಷ್ಣಾ ನೀರು ತರುವ ಬಗ್ಗೆ ಸಂಸದರಾದ ಮಲ್ಲೇಶ್ ಬಾಬು ಅವರು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ನನ್ನ ಬೆಂಬಲವೂ ಇದೆ. ಕೃಷ್ಣ ನದಿ‌ ನೀರನ್ನು ಹರಿಸುವ ಕುರಿತು ಮಲ್ಲೇಶ್ ಬಾಬು ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಆಂಧ್ರದ ಮುಖ್ಯಮಂತ್ರಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಕೆಲಸ ಸಾಧಿಸಬೇಕಿದೆ. ಅದಕ್ಕಾಗಿ ಅವರನ್ನು‌ ಭೇಟಿ ಮಾಡುತ್ತೇನೆ.

ಅವರ ರಾಜ್ಯದ ಜನರ ಭಾವನೆಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಅವರ ಸಹಕಾರ ತೆಗೆದುಕೊಳ್ಳುವ ಕೆಲಸ‌ ಮಾಡುತ್ತೇವೆ. ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಮಲ್ಲೇಶ್ ಬಾಬು ಅವರನ್ನು ಗೆಲ್ಲಿಸಿದ ರುಣ ನಮ್ಮ‌ಮೇಲಿದೆ. ಅದನ್ನು ತೀರಿಸುವ ಕೆಲಸ ಮಾಡುವ ಪ್ರಯತ್ನ ಮಾಡುತ್ತೇವ ಎಂದು ಕೇಂದ್ರ ಸಚಿವರು ಹೇಳಿದರು.

2014ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆಆಡಿದ ದಿನವೇ ನಾನು ಕೋಲಾರದಲ್ಲಿದ್ದೆ. ಅವತ್ತೇ ಹೇಳಿದ್ದೆ. ಇಲ್ಲಿ ನೀರು ಸಿಗುವುದಿಲ್ಲ, ಸರಕಾರ ಸುಳ್ಳು ಹೇಳುತ್ತಿದೆ ಎಂದು ಹೇಳಿದ್ದೆ. ಆದರೂ ಐದೇ ವರ್ಷದಲ್ಲಿ ನೀರು ಕೊಡುತ್ತೇವೆ ಎಂದು ಹೇಳಿದರು. ನಾನು ನಮ್ಮ ಕಡೆಯ ಹಳ್ಳಿ ಭಾಷೆಯಲ್ಲಿ ಅವತ್ತೇ ಹೇಳಿದ್ದೆ. ಎತ್ತಿನಹೊಳೆಯಿಂದ ಎರಡು ವರ್ಷಗಳಲ್ಲಿ‌ ನೀರು ಕೊಟ್ಟರೆ ತಲೆ ಬೋಳಿಸಿಕೊಳ್ಳುವೆ ಎಂದು‌ ಹೇಳಿದ್ದೆ. ನನ್ನ ತಲೆಯಲ್ಲಿ ಕೂದಲು ಹೋಯಿತೇ ಹೊರತು ಈ ಜಿಲ್ಲೆಗಳಿಗೆ ನೀರು ಹರಿಯಲಿಲ್ಲ ಎಂದು ಅವರು ಲೇವಡಿ ಮಾಡಿದರು.

ಅವತ್ತಿನ ಕಾಂಗ್ರೆಸ್ ಸರ್ಕಾರ ನೀರು ಕೊಡುವುದಾಗಿ ಹೇಳಿ‌ ಹತ್ತು ವರ್ಷ ಆಗಿದೆ. ಆ ಯೋಜನೆಯ ಹೆಸರಿನಲ್ಲಿ ಎಷ್ಟೆಲ್ಲಾ ಲೂಟಿ ಆಗಿದೆ ಎನ್ನುವುದು ಗೊತ್ತಿದೆ. ಸಿಎಜಿ ವರದಿಯಲ್ಲಿ ಇದೆಲ್ಲವೂ ಇದೆ. ಅನರ್ಹ ಗುತ್ತಿಗೆದಾರರಿಗೆ ಕಾಮಗಾರಿ ಕೊಟ್ಟಿದ್ದಾರೆ, ಕಳಪೆ ಕಾಮಗಾರಿ ಆಗಿ ಹಣ ದುರುಪಯೋಗ ಆಗಿದೆ ಎಂದು ವರದಿಯಲ್ಲಿ ಉಲ್ಲೇಖವಿದೆ. ಈಗ ₹30,000 ಕೋಟಿಗೆ ಎತ್ತಿನಹೊಳೆ ಯೋಜನಾ ವೆಚ್ಚ ತಲುಪಿದೆ. ಇದೆಲ್ಲಾ ನಮ್ಮ ಶ್ರೀನಿವಾಸಪುರದ ಬುದ್ದಿವಂತ ಮಾಜಿ ಶಾಸಕರಿಗೆ ಗೊತ್ತಿರಲಿಲ್ಲವೇ? ಎಂದು ಪ್ರಶ್ನಿಸಿದರು.

ಬೆಂಗಳೂರಿನ ರೊಚ್ಚು ನೀರಿನಿಂದಾಗಿ ಸಣ್ಣ ಮಕ್ಕಳು ಕೂಡ ಕಾಯಿಲೆಗೆ ತುತ್ತಾಗುತ್ತಿವೆ. ನದಿಯ ನೀರು ಕೊಡುತ್ತೇವೆ ಎಂದವರು ರೊಚ್ಚು ನೀರು ಕೊಟ್ಟು ಮೋಸ ಮಾಡಿದರು. ಈ ಜಿಲ್ಲೆಗಳ ಜನ ಕಾಂಗ್ರೆಸ್ಸಿಗರಿಗೆ ಏನು ದ್ರೋಹ ಮಾಡಿದ್ದರು? ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ವರದಿ ನೀಡಿವೆ. ಅವುಗಳನ್ನು ನೋಡಿದರೆ ಈ ಜಿಲ್ಲೆಗಳಿಗೆ ಆಗಿರುವ ಹಾನಿ ಏನೆಂಬುದು ಗೊತ್ತಾಗುತ್ತದೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಮೊದಲು ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಬೆಳೆಯುತ್ತಿದ್ದ ತರಕಾರಿಗಳನ್ನು ದೇಶ ವಿದೇಶಗಳಲ್ಲಿ ಪೈಪೋಟಿಗೆ ಬಿದ್ದು ಖರೀದಿ ಮಾಡುತ್ತಿದ್ದರು. ಇವತ್ತು ಈ ಭಾಗದ ತರಕಾರಿಯನ್ನು ಕೇಳುವವರೇ ಇಲ್ಲ. ಈಗ ನೋಡಿದರೆ 2027ಕ್ಕೆ ಎತ್ತಿನಹೊಳೆ ನೀರು ಕೊಡುತ್ತೇವೆ ಎಂದು ಸಬೂಬು ಹೇಳುತ್ತಿದ್ದಾರೆ! ಎತ್ತಿನಹೊಳೆಯ ಯಂತ್ರೋಪಕರಣಗಳು ಈಗಾಗಲೇ ತುಕ್ಕು ಹಿಡಿಯುತ್ತಿವೆ. ಕೋಲಾರ, ಚಿಕ್ಕಬಳ್ಳಾಪುರ ಜನರೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ನಾಲಗೆ ಹರಿಬಿಟ್ಟ ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ವಾಣಿಜ್ಯ ಮಂಡಳಿಗೆ ದೂರು ನೀಡಿದ ಪ್ರೇಮ್

ಬೆಂಗಳೂರು: ಸಿನಿಮಾ ಕಾರ್ಯಕ್ರಮವೊಂದರಲ್ಲಿ ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ನಿರ್ದೇಶಕ ಪ್ರೇಮ್ ವಿರುದ್ಧ ‘ಹಣ ಪಡೆದು ಸಿನಿಮಾ ಮಾಡಿಕೊಡಲಿಲ್ಲ’ ಎಂಬರ್ಥದ ಆರೋಪಗಳನ್ನು ಮಾಡಿದ್ದ ವಿಚಾರ ಇದೀಗ ತೀವ್ರ ತಿರುವು ಪಡೆದುಕೊಂಡಿದೆ. ತಮ್ಮ ವಿರುದ್ಧದ ಆರೋಪಗಳಿಗೆ ಪ್ರತಿಯಾಗಿ ನಿರ್ದೇಶಕ ಪ್ರೇಮ್ ಅವರು ಕರ್ನಾಟಕ ಫಿಲಂ ಚೇಂಬರ್ ಆಫ್ ಕಾಮರ್ಸ್‌ಗೆ ಅಧಿಕೃತ ದೂರು ನೀಡಿದ್ದಾರೆ.

ಫಿಲಂ ಚೇಂಬರ್‌ಗೆ ಖುದ್ದಾಗಿ ತೆರಳಿದ ಪ್ರೇಮ್, ಅಧ್ಯಕ್ಷೆ ಜಯಮಾಲ ಅವರನ್ನು ಭೇಟಿಯಾಗಿ ಲಿಖಿತ ದೂರನ್ನು ಸಲ್ಲಿಸಿದ್ದಾರೆ. ದೂರಿನಲ್ಲಿ ತಮ್ಮ ವೃತ್ತಿಜೀವನದ ಹಿನ್ನೆಲೆಯನ್ನು ವಿವರಿಸಿರುವ ಅವರು, 25 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿದ್ದು, ತಮ್ಮ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರೇಮ್ ಅವರ ಪ್ರಕಾರ, 2004ರಲ್ಲಿ ನಿರ್ಮಾಪಕ ಆರ್.ಎಸ್. ಶ್ರೀನಿವಾಸ್ ಅವರು ಸಿನಿಮಾ ನಿರ್ದೇಶನ ಮಾಡುವಂತೆ ಕೇಳಿಕೊಂಡು ₹9 ಲಕ್ಷ ಮುಂಗಡ ಹಣ ನೀಡಿದ್ದಾರೆ. ಆ ಬಳಿಕ ನಿರ್ಮಾಪಕರಿಗಾಗಿ ವಿಶೇಷ ಆಫೀಸ್ ತೆರೆಯಲಾಗಿದ್ದು, ತಂಡ ರಚಿಸಿ ಕಥೆ ಹಾಗೂ ಚಿತ್ರಕಥೆ ಬರವಣಿಗೆ ಪೂರ್ಣಗೊಳಿಸಲಾಗಿದೆ. ಆದರೆ ನಂತರ ನಿರ್ಮಾಪಕರಿಂದ ಯಾವುದೇ ಪ್ರತಿಕ್ರಿಯೆ ಸಿಗದೇ, ಒಂದು ವರ್ಷಕ್ಕೂ ಹೆಚ್ಚು ಕಾಲ ಚಿತ್ರ ಯೋಜನೆ ಸ್ಥಗಿತಗೊಂಡಿತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಅವಧಿಯಲ್ಲಿ ಆಫೀಸ್ ಹಾಗೂ ತಂಡದ ಸಂಪೂರ್ಣ ವೆಚ್ಚವನ್ನು ತಾವೇ ಭರಿಸಿದ್ದು, ಇದರಿಂದ ₹15 ರಿಂದ ₹20 ಲಕ್ಷದವರೆಗೆ ವೈಯಕ್ತಿಕ ನಷ್ಟ ಅನುಭವಿಸಿದ್ದೇನೆ. ಅಲ್ಲದೇ, ಈ ಕಾರಣದಿಂದಾಗಿ ಬೇರೆ ನಿರ್ಮಾಪಕರಿಂದ ಬಂದಿದ್ದ ಹಲವು ಅವಕಾಶಗಳನ್ನು ಕಳೆದುಕೊಂಡು ಕೋಟಿಗಟ್ಟಲೆ ನಷ್ಟ ಎದುರಿಸಬೇಕಾಯಿತು ಎಂದು ಪ್ರೇಮ್ ಆರೋಪಿಸಿದ್ದಾರೆ.

ಇನ್ನೊಂದೆಡೆ, ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಕಾರ್ಯಕ್ರಮವೊಂದರಲ್ಲಿ ಪ್ರೇಮ್ ಜೊತೆ ಸಿನಿಮಾ ಮಾಡಿದವರು ಹಣ ಕಳೆದುಕೊಂಡಿದ್ದಾರೆ, ಆದರೆ ಪ್ರೇಮ್ ಮಾತ್ರ ಚೆನ್ನಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗಳೇ ತಮ್ಮ ಗೌರವಕ್ಕೆ ಧಕ್ಕೆ ತಂದಿವೆ ಎಂದು ಪ್ರೇಮ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಪ್ರಕರಣ ಇದೀಗ ಫಿಲಂ ಚೇಂಬರ್ ಮಟ್ಟಕ್ಕೆ ತಲುಪಿದ್ದು, ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಹಾಸನ: ಕೆರೆಗೆ ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲು!

0

ಹಾಸನ: ಕೆರೆಗೆ ಈಜಲು ತೆರಳಿದ್ದ ವಿದ್ಯಾರ್ಥಿಯೊಬ್ಬರು ನೀರುಪಾಲಾದ ದುರ್ಘಟನೆ ಹಾಸನ ಹೊರವಲಯದ ಉದ್ದೂರು ಗ್ರಾಮದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಪ್ರಜ್ವಲ್ (18) ಎಂದು ಗುರುತಿಸಲಾಗಿದೆ. ಅವರು ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಇಂದು ಮಧ್ಯಾಹ್ನ ನಾಲ್ವರು ಸ್ನೇಹಿತರೊಂದಿಗೆ ಉದ್ದೂರು ಕೆರೆಗೆ ಈಜಲು ತೆರಳಿದ್ದರು.

ಐವರಲ್ಲಿ ಇಬ್ಬರು ಸ್ನೇಹಿತರು ಈಜಲು ನೀರಿಗೆ ಇಳಿದಿದ್ದರು. ಕೆರೆಯ ಆಳವಾದ ಪ್ರದೇಶಕ್ಕೆ ಈಜುತ್ತಾ ಹೋಗಿದ್ದ ಪ್ರಜ್ವಲ್ ವಾಪಾಸ್ ಬರಲು ಆಗದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಅಗ್ನಿಶಾಮಕದಳದ ಸಿಬ್ಬಂದಿ ಕೆರೆಯಿಂದ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ.

ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಗಂಡನ ಅಕಾಲಿಕ ಸಾವಿನಿಂದ ಮನನೊಂದು ಪತ್ನಿ ಆತ್ಮಹತ್ಯೆ: ನೆಲಮಂಗಲದಲ್ಲಿ ಹೃದಯ ವಿದ್ರಾವಕ ಘಟನೆ

0

ನೆಲಮಂಗಲ: ನೆಲಮಂಗಲದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಗಂಡನ ಅಕಾಲಿಕ ಸಾವಿನ ಸುದ್ದಿ ಕೇಳಿ ಮನನೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ರಾಜು (48) ಹಾಗೂ ಅವರ ಪತ್ನಿ ಮೀನಾ (40) ಮೃತ ದುರ್ಧೈವಿಗಳಾಗಿದ್ದು, ದಂಪತಿಗಳು ಮೂಲತಃ ಕುಣಿಗಲ್ ನಿವಾಸಿಗಳಾಗಿದ್ದು, ಕಳೆದ 20 ವರ್ಷಗಳಿಂದ ನೆಲಮಂಗಲ ನಗರದಲ್ಲಿ ವಾಸವಿದ್ದರು.

ನೆಲಮಂಗಲದ ಜಕ್ಕಸಂದ್ರದಲ್ಲಿ ಮನೆ ಲೀಸ್ ಪಡೆದು ವಾಸವಾಗಿದ್ದ ಈ ದಂಪತಿಯ ಜೀವನದಲ್ಲಿ ದುರಂತ ಮಂಗಳವಾರ ಸಂಜೆ ಸಂಭವಿಸಿದೆ. ಸ್ನಾನ ಮಾಡಲು ಬಾತ್‌ರೂಮ್‌ಗೆ ತೆರಳಿದ್ದ ರಾಜು, ಗ್ಯಾಸ್ ಗೀಸರ್‌ನಿಂದ ಉಸಿರುಗಟ್ಟಿದ ಪರಿಣಾಮ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಒಂದು ಗಂಟೆಗೂ ಹೆಚ್ಚು ಸಮಯವಾದರೂ ಬಾತ್‌ರೂಮ್‌ನಿಂದ ಹೊರಬರದ ಹಿನ್ನೆಲೆಯಲ್ಲಿ ಮಗ ಬಾಗಿಲು ಒಡೆದು ನೋಡಿದಾಗ ರಾಜು ಕುಸಿದು ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ, ವೈದ್ಯರು ರಾಜು ಸಾವನ್ನಪ್ಪಿರುವುದನ್ನು ದೃಢಪಡಿಸಿದ್ದಾರೆ.

ತಂದೆಯ ಸಾವಿನ ವಿಷಯವನ್ನು ಮಗ ತನ್ನ ತಾಯಿ ಮೀನಾಗೆ ತಿಳಿಸಿದ್ದಾನೆ. ಈ ಸುದ್ದಿ ಕೇಳಿ ತೀವ್ರವಾಗಿ ಮನನೊಂದ ಮೀನಾಗೆ ಗಂಡನ ಶವದ ಮುಖವನ್ನು ಕೂಡ ನೋಡಲು ಮನಸ್ಸಾಗಿಲ್ಲ ಎನ್ನಲಾಗಿದೆ. ನಂತರ ಕೆಲಸದಿಂದ ನೇರವಾಗಿ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಜಿ.ಶ್ರೀನಿವಾಸಪುರದ ಮನೆಯೊಂದರಲ್ಲಿ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡೆತ್ ನೋಟ್‌ನಲ್ಲಿ, “ನನ್ನ ಗಂಡನನ್ನು ಬಿಟ್ಟು ಒಂದು ನಿಮಿಷವೂ ನಾನು ಬದುಕಿರುವುದಿಲ್ಲ” ಎಂದು ಉಲ್ಲೇಖಿಸಿರುವ ಮೀನಾ, ತಮ್ಮ ಬಳಿಯಿರುವ ವಸ್ತುಗಳನ್ನು ಯಾರ್ಯಾರಿಗೆ ಕೊಡಬೇಕೋ ಅವರಿಗೆ ಕೊಟ್ಟುಬಿಡಿ, ನನ್ನನ್ನು ಕ್ಷಮಿಸಿಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಂಡ–ಹೆಂಡತಿಯ ಮೃತದೇಹಗಳನ್ನು ನೆಲಮಂಗಲ ಸರ್ಕಾರಿ ಶವಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.

 

ಕಾಂಗ್ರೆಸ್ ತಂತ್ರ- ಕುತಂತ್ರದ ನಡುವೆ GBAಯಲ್ಲೂ BJP ಜಯಭೇರಿ ಬಾರಿಸಲು ಒಳ್ಳೆಯ ಅವಕಾಶ: ಬಿ.ವೈ.ವಿಜಯೇಂದ್ರ

0

ಬೆಂಗಳೂರು: ಇಂದು ಬೆಳಿಗ್ಗೆಯಿಂದ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಚುನಾವಣೆಯ ಹಿನ್ನೆಲೆಯಲ್ಲಿ ಮಹತ್ವದ ಸಭೆ ಆಯೋಜಿಸಲಾಗಿತ್ತು ಎಂದು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾವತ್ತೇ ಜಿಬಿಎ ಚುನಾವಣೆ ನಡೆದರೂ ನಾವು ಗೆದ್ದೇ ಗೆಲ್ಲುತ್ತೇವೆ.

ಕಾಂಗ್ರೆಸ್ ಪಕ್ಷದ ತಂತ್ರ- ಕುತಂತ್ರದ ನಡುವೆಯೂ 5 ಜಿಬಿಎಯಲ್ಲೂ ಬಿಜೆಪಿ ಜಯಭೇರಿ ಬಾರಿಸಲು ಒಳ್ಳೆಯ ಅವಕಾಶವಿದೆ. ಹಾಗಾಗಿ ಅತಿ ಶೀಘ್ರದಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನೂ ಆರಂಭಿಸಬೇಕು. ಜೆಡಿಎಸ್ ಜೊತೆ ಚರ್ಚಿಸಿ ಅವರ ಅಭಿಪ್ರಾಯ ಪಡೆದುಕೊಂಡು ಚುನಾವಣೆಗೆ ಸಜ್ಜಾಗಲು ನಿರ್ಧರಿಸಿದ್ದಾಗಿ ವಿವರಿಸಿದರು.

ಫೆ. 28 ಮತ್ತು ಮಾರ್ಚ್ 1ರಂದು 5 ಜಿಬಿಎಗಳ ಪ್ರತ್ಯೇಕ ಸಭೆ ಕರೆಯಬೇಕು. ಆ ಸಭೆಯಲ್ಲಿ ನಮ್ಮ ಪಕ್ಷದ ಹಿರಿಯರೆಲ್ಲರೂ ಇರುತ್ತಾರೆ. ಸ್ಥಳೀಯವಾಗಿ ನಮ್ಮ ಕಾರ್ಯಕರ್ತರ ಅಭಿಪ್ರಾಯ, ಸಲಹೆ ಪಡೆಯಲಾಗುವುದು. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕುರಿತು ಚರ್ಚೆ ಮಾಡಿ, ಮುನ್ನಡೆಯುವ ನಿಟ್ಟಿನಲ್ಲಿ ಪ್ರಮುಖ ನಿರ್ಧಾರ ಮಾಡಿದ್ದಾಗಿ ತಿಳಿಸಿದರು.

ಬೆಂಗಳೂರು ಮಹಾನಗರ ಗಾರ್ಡನ್ ಸಿಟಿ ಇದೀಗ ಗಾರ್ಬೇಜ್ ಸಿಟಿಯಾಗಿ ಪರಿವರ್ತನೆಯಾಗಿದೆ. ಉಸ್ತುವಾರಿ ಸಚಿವರು ಅಥವಾ ಕಾಂಗ್ರೆಸ್ ಸರಕಾರವು ಅಭಿವೃದ್ಧಿ ವಿಚಾರದಲ್ಲಿ ಬೆಂಗಳೂರು ಮಹಾನಗರಕ್ಕೆ ಆದ್ಯತೆ ನೀಡಿಲ್ಲ ಎಂಬುದು ಚರ್ಚೆಗೆ ಒಳಪಟ್ಟಿದೆ. ಬೆಂಗಳೂರು ಮಹಾನಗರ ಕೇವಲ ಭಾರತದಲ್ಲಷ್ಟೇ ಅಲ್ಲ; ಜಗತ್ತಿನಲ್ಲಿ ಹೆಸರುವಾಸಿಯಾಗಿದೆ. ಆದ್ದರಿಂದ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ನುಡಿದರು.

ಟನೆಲ್ ರೋಡ್ ಬಗ್ಗೆ ಮಾತನಾಡುತ್ತಾರೆ. ಈ ಸರಕಾರಕ್ಕೆ ಒಂದು ಗುಂಡಿ ಮುಚ್ಚಲೂ ಆಗುತ್ತಿಲ್ಲ ಎಂದು ಟೀಕಿಸಿದರು. ಭ್ರಷ್ಟಾಚಾರ, ಬೆಲೆ ಏರಿಕೆ ನಡೆದಿದೆ. ಇದೆಲ್ಲದರ ಪರಿಣಾಮವಾಗಿ ಬೆಂಗಳೂರು ಮಹಾನಗರದ ಜನತೆ ಕಾಂಗ್ರೆಸ್ ಸರಕಾರದ ಬಗ್ಗೆ ಬೇಸತ್ತಿದ್ದಾರೆ. ಮತ್ತೊಂದು ಕಡೆ ಡಿಕೆ ಶಿವಕುಮಾರ್ ಅವರ ನಡವಳಿಕೆಯನ್ನು ತಾವೇ ಗಮನಿಸಿದ್ದೀರಿ. ಅಪಾರ್ಟ್‍ಮೆಂಟ್ ವೆಲ್ಫೇರ್ ಅಸೋಸಿಯೇಷನ್‍ನವರು ಭೇಟಿ ಮಾಡಿದಾಗ ಅವರು ಮಾತನಾಡಿದ ಧಾಟಿ- ಇವೆಲ್ಲವನ್ನೂ ಜನರು ಗಮನಿಸುತ್ತಿದ್ದಾರೆ ಎಂದು ಗಮನ ಸೆಳೆದರು.

ವಯನಾಡಿನಲ್ಲಿ ಕುಟುಂಬ ಸಮೇತ ಆತ್ಮಹತ್ಯೆ ಯತ್ನ: ಕೊಡಗು ಮೂಲದ ಉದ್ಯಮಿ ಸಾವು, ಪತ್ನಿ ಗಂಭೀರ

0

ಕೊಡಗು: ಕೇರಳದ ವಯನಾಡು ಜಿಲ್ಲೆಯ ಮಾನಂದವಾಡಿ ವ್ಯಾಪ್ತಿಯಲ್ಲಿ ಕರ್ನಾಟಕ ಮೂಲದ ಉದ್ಯಮಿಯೊಬ್ಬರು ಕುಟುಂಬ ಸಮೇತ ಆತ್ಮಹತ್ಯೆಗೆ ಯತ್ನಿಸಿರುವ ದುರ್ಘಟನೆ ನಡೆದಿದೆ. ಈ ಘಟನೆಯಲ್ಲಿ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದ ನಿವಾಸಿ, ಉದ್ಯಮಿ ಸಜೀರ್ ಮೃತಪಟ್ಟಿದ್ದಾರೆ.

ಸಜೀರ್ ಅವರ ಪತ್ನಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕಲ್ಲಿಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಇಬ್ಬರು ಮಕ್ಕಳನ್ನು ಸ್ಥಳೀಯ ನಿವಾಸಿಗಳು ಸಮಯಕ್ಕೆ ಸರಿಯಾಗಿ ರಕ್ಷಿಸಿದ್ದಾರೆ. ಈ ಸಂಬಂಧ ಮಾನಂದವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊ.ಲೀಸರು ತನಿಖೆ ಕೈಗೊಂಡಿದ್ದಾರೆ.

ಮೃತ ಉದ್ಯಮಿ ಸಜೀರ್ ಕೊಡಗು ಜಿಲ್ಲೆಯ ಕುಟ್ಟ ಗ್ರಾಮದಲ್ಲಿ ಹಲವು ವ್ಯಾಪಾರ ಮಳಿಗೆಗಳನ್ನು ಹೊಂದಿದ್ದರು ಎನ್ನಲಾಗಿದೆ. ತನಿಖೆಯ ಪ್ರಾಥಮಿಕ ಮಾಹಿತಿ ಪ್ರಕಾರ, ಬಾಪು ಎಂಬ ವ್ಯಕ್ತಿ ಸಜೀರ್‌ಗೆ ಸುಮಾರು 20 ಲಕ್ಷ ರೂ. ಹಣ ನೀಡಬೇಕಾಗಿತ್ತು. ಸಾಲ ಪಡೆದಿದ್ದ ಬಾಪುನ ಮನೆಯ ಎದುರಲ್ಲೇ ಸಜೀರ್ ಈ ಕೃತ್ಯಕ್ಕೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.

ಇದೇ ವೇಳೆ ಆತ್ಮಹತ್ಯೆಗೂ ಮುನ್ನ ಸಜೀರ್ ಕಾರಿನಲ್ಲೇ ಕುಳಿತು ವಿಡಿಯೋ ರೆಕಾರ್ಡ್ ಮಾಡಿದ್ದು, ತಮ್ಮ ಆತ್ಮಹತ್ಯೆಗೆ ಬಾಪು ಕಾರಣ ಎಂದು ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ವಿಡಿಯೋವನ್ನು ತನಿಖೆಯ ಭಾಗವಾಗಿ ಪರಿಶೀಲಿಸಲಾಗುತ್ತಿದೆ. ಘಟನೆಯ ಹಿನ್ನಲೆ ಹಾಗೂ ಆತ್ಮಹತ್ಯೆಗೆ ಕಾರಣಗಳ ಕುರಿತು ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ಜನರ ಉಳಿತಾಯದ ಹೂಡಿಕೆಗಳು ಸುಭದ್ರವಾಗಿರುವುದು ಗ್ಯಾರಂಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ

0

ಬೆಂಗಳೂರು: ಜನರು ಉಳಿತಾಯದ ಹೂಡಿಕೆಗಳು ಸರ್ಕಾರದ ಎಂ ಎಸ್ ಐ ಎಲ್ ಸಂಸ್ಥೆಯಲ್ಲಿ ಸುಭದ್ರವಾಗಿರುವ ಗ್ಯಾರಂಟಿ ಇದೆಯೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ವತಿಯಿಂದ ಆಯೋಜಿಸಲಾಗಿದ್ದ MSIL ಚಿಟ್ಸ್ ಹೊಸ ಸಾಫ್ಟ್ ವೆರ್ ಹಾಗೂ ಮೊಬೈಲ್ ಆಪ್ ಬಿಡುಗಡೆಗೊಳಿಸಿ ಮಾತನಾಡಿದರು.

ಎಂಎಸ್ ಐ ಎಲ್ ಸರ್ಕಾರಿ ಸಂಸ್ಥೆಯು ಹಲವು ದಶಕಗಳಿಂದ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. 2005 ರಿಂದ ಚಿಟ್ ಫಂಡ್ ವ್ಯವಸ್ಥೆ ಪ್ರಾರಂಭವಾಗಿದೆ. ಉಳಿತಾಯದ ಸಂಸ್ಕೃತಿ ಅತ್ಯವಶ್ಯ.ವಾಗಿದ್ದು, ಅಗತ್ಯ ಸಂದರ್ಭದಲ್ಲಿ ಉಳಿತಾಯದ ಹಣ ನೆರವಿಗೆ ಬರುತ್ತದೆ. ಜಾತಿವರ್ಗಗಳ ಬೇಧವಿಲ್ಲದೇ ಜಾರಿಯಾಗುವ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮಿ, ಗೃಹಲಕ್ಷ್ಮಿ, ಯುವನಿಧಿ, ಅನ್ನಭಾಗ್ಯ ದಿಂದ ಉಳಿತಾಯವಾಗುವ ಹಣವನ್ನು ಜನರು ವಿಶೇಷವಾಗಿ ಮಹಿಳೆಯರು ಹೂಡಿಕೆ ಮಾಡಬೇಕು ಎಂದರು.

ಜನರ ಹೂಡಿಕೆ ಭದ್ರತೆಯ ಖಾತ್ರಿ

ಹೂಡಿಕೆ ಹಣವನ್ನು ಸುರಕ್ಷಿತವಾಗಿರುವುದು ಅತ್ಯಂತ ಅಗತ್ಯವಾಗಿದ್ದು, ಎಂಎಸ್ ಐ ಎಲ್ ನ ಚಿಟ್ ಫಂಡ್ ಈ ಭರವಸೆಯನ್ನು ನೀಡುತ್ತದೆ. ಸಾಮಾನ್ಯವಾಗಿ ನಡೆಯುವ ಚೀಟಿ ವ್ಯವಹಾರಗಳಲ್ಲಿ ಮೋಸವಾಗುವ ಸಾಧ್ಯವಿರುತ್ತದೆ. ಆದರೆ ಎಂಎಸ್ ಐ ಎಲ್, ಸರ್ಕಾರಿ ಸಂಸ್ಥೆಯಾಗಿದ್ದು, ಜನರ ಹೂಡಿಕೆಗೆ ಭದ್ರತೆಯನ್ನು ಒದಗಿಸುತ್ತದೆ. ತಮ್ಮ ಹೂಡಿಕೆಯ ಕೇವಲ ಶೇ.5 ರಷ್ಟು ಲಾಭ ಪಡೆಯುವ ಸಂಸ್ಥೆ ಜನರ ಆರ್ಥಿಕ ಭದ್ರತೆಗೆ ನೆರವಾಗಿದೆ ಎಂದರು.

ಚಿಟ್ ಫಂಡ್ ವಹಿವಾಟು 10000 ಕೋಟಿ ಗೆ ಏರಿಸುವ ಗುರಿ

ಕೇರಳ ರಾಜ್ಯದಲ್ಲಿ ಈ ಕ್ಷೇತ್ರದಲ್ಲಿ 47000 ಕೋಟಿ ವಹಿವಾಟು ನಡೆಯುತ್ತದೆ. ಕರ್ನಾಟಕದಲ್ಲಿ ಕೇವಲ 500 ಕೋಟಿ ವ್ಯವಹಾರ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಈ ಮೊತ್ತವನ್ನು 10000 ಕೋಟಿ ಯಷ್ಟು ವಹಿವಾಟು ನಡೆಸುವ ಗುರಿಯನ್ನು ಸಂಸ್ಥೇ ಹೊಂದಿದೆ.

ಶಿಕ್ಷಣ, ಆರೋಗ್ಯ, ಮದುವೆ, ಮನೆ ಹೀಗೆ, ಜನರು ತಮ್ಮ ಅಗತ್ಯಗಳಿಗಾಗಿ ಹೂಡಿಕೆ ಮಾಡುವ ಉಳಿತಾಯದ ಮೊತ್ತ ಸುಭದ್ರವಾಗಿರುವ ಗ್ಯಾರಂಟಿ ಇದೆ. ಹಣ ಗಳಿಸುವುದು ಹಾಗೂ ಸುಭದ್ರವಾಗು ಹೂಡಿಕೆ ಮಾಡುವುದೂ ಮುಖ್ಯ ಎಂದರು.

ಕಿರುಸಾಲ ಪಡೆದ ಜನರ ರಕ್ಷಣೆಗಾಗಿ ಕಾಯ್ದೆ

ಎಂಎಸ್ ಐ ಎಲ್ ನ ಚಿಟ್ ಫಂಡ್ ವ್ಯವಹಾರದಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಆಧುನಿಕ ತಂತ್ರಾಂಶವನ್ನು ಇಂದು ಲೋಕಾರ್ಪಣೆಗೊಳಿಸಲಾಗಿದೆ. ಮೈಕ್ರೋ ಫೈನಾನ್ಸ್ ಗಳು ನೀಡುವ ಸಾಲದ ಸುಳಿಯಲ್ಲಿ ಅನೇಕ ಜನರು ಸಿಲುಕುತ್ತಾರೆ. ಆದ್ದರಿಂದ ಕಿರು ಸಾಲ ಮತ್ತು ಸಣ್ಣ ಸಾಲ ಅಧ್ಯಾದೇಶ 2025 ನ ರಕ್ಷಣೆ ನೀಡಲಾಗಿದೆ. ಸಾಲ ಪಡೆದ ಕಿರುಕುಳ ಅನುಭವಿಸುತ್ತಿರುವ ಜನರ ರಕ್ಷಣೆಗಾಗಿ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಎಂದರು.

ಇದೊಂದು ಹಗಲು ದರೋಡೆ, ದರ ಏರಿಕೆಗೆ ರಾಜ್ಯ ಸರ್ಕಾರವೇ ನೇರ ಕಾರಣ: ನಿಖಿಲ್ ಕುಮಾರಸ್ವಾಮಿ ಆರೋಪ

0

ಬೆಂಗಳೂರು: BMRCL ಮೇಲೆ ಒತ್ತಡ ಹಾಕಿ, ಮೆಟ್ರೋ ದರ ಏರಿಕೆ ಮಾಡಿಸಿದ್ದೇ ರಾಜ್ಯ ಸರ್ಕಾರ. ಇದೊಂದು ಹಗಲು ದರೋಡೆ, ದರ ಏರಿಕೆಗೆ ರಾಜ್ಯ ಸರ್ಕಾರವೇ ನೇರ ಕಾರಣ. ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ನಿಖಿಲ್ ಕುಮಾರಸ್ವಾಮಿ ಅವರು ಟಾಂಗ್ ಕೊಟ್ಟರು.

ಈ ಬಗ್ಗೆ ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದವರು ಅವರು, ಬೆಂಗಳೂರು ಮೆಟ್ರೋ ದರ ಏರಿಕೆ ಜನ ಸಾಮಾನ್ಯರಿಗೆ ಕತ್ತರಿ ಹಾಕುತ್ತಿದೆ. ಇದೊಂದು ಹಗಲು ದರೋಡೆ. ಹತ್ತು ತಿಂಗಳಲ್ಲಿ ಎರಡು ಬಾರಿ ದರ ಏರಿಸಿರುವುದು ಖಂಡನೀಯ. ಮೆಟ್ರೋ ದರ ಏರಿಕೆಗೆ ರಾಜ್ಯ ಸರ್ಕಾರವೇ ಕಾರಣ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆರೋಪಿಸಿದರು.

BMRCLಗೆ 13 ಕೋಟಿಗೂ ಹೆಚ್ಚು ಸಾಲವಿದೆ.ಅದರ ಮರು ಪಾವತಿಗೆ ಮಾಡಬೇಕಿದೆ. ಜತೆಗೆ ಇದರ ಕಾರ್ಯಾಚರಣೆಗೆ ವೆಚ್ಚ ಕೊಡಬೇಕಿದೆ. ಟಿಕೆಟ್ ಮತ್ತು ಟಿಕೆಟ್ ಯೆತರ ಮೂಲಗಳಿಂದ ಆದಾಯ ಬರುತ್ತಿಲ್ಲ. ಈಗ ಸರ್ಕಾರದಿಂದ BMRCLಗೆ ಹಣ ಕೊಡಲು ಆಗ್ತಿಲ್ಲ ಅದಿಕ್ಕೆ ಸರ್ಕಾರ ಈ ಮೂಲಕ ವಸೂಲಿಗೆ ಇಳಿದಿದೆ.

ಪ್ರತಿ ವರ್ಷ ಸ್ವಯಂ ಚಾಲಿತವಾಗಿ ಮೆಟ್ರೋ ಪ್ರಯಾಣದರ ಏರಿಕೆಯಾಗುವ ಸೂತ್ರ ರೂಪಿಸುವಂತೆ ದರ ನಿಗದಿ ಸಮಿತಿಯನ್ನು ರಾಜ್ಯ ಸರ್ಕಾರ ಕೋರಿದೆ. ದೇಶದ ದೆಹಲಿ, ಮುಂಬೈ, ಹೈದರಾಬಾದ್‌ ಹಾಗೂ ಚೆನ್ನೈ ನಗರಗಳಿಂದ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣದರ ದುಬಾರಿಯಾಗಿದೆ. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ತನ್ನ ಮೇಲಿನ ಹೊರೆಯನ್ನು ಜನರ ಮೇಲೆ ಹೊರಿಸುತ್ತಿದೆ ಎಂದು ಅವರು ನಿಖಿಲ್ ಅವರು ಟೀಕಿಸಿದರು.

ಸಾರ್ವಜನಿಕರ ಮಾಹಿತಿಗಾಗಿ ದರ ನಿಗದಿ ಸಮಿತಿಯ ವರದಿಯನ್ನು ನೀಡಿರಲಿಲ್ಲ. ಆ ವರದಿಯಲ್ಲಿ ನಗರಾಭಿವೃದ್ಧಿ ಇಲಾಖೆ, ಹಣಕಾಸು ಇಲಾಖೆ ಅಧಿಕಾರಿಗಳೇ ರಾಜ್ಯ ಸರ್ಕಾರ ಆರ್ಥಿಕ ಹೊರೆ ಭರಿಸುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಮೆಟ್ರೋ ಪ್ರಯಾಣದ ದರ ಹೆಚ್ಚಳ ಮಾಡುವಂತೆ ಪ್ರಸ್ತಾಪಿಸಿದ್ದಾರೆ. 1126 ಮಂದಿ ಪ್ರಯಾಣದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ಶೇ.51ರಷ್ಟು ಮಂದಿ ಮೆಟ್ರೋ ಪ್ರಯಾಣದರ ವಿರೋಧಿಸಿದ್ದಾರೆ ಎಂದು ತಿಳಿಸಿದರು.

ಪ್ರಯಾಣಿಕರಿಂದಲ್ಲದ ಪಾರ್ಕಿಂಗ್‌, ಬಾಡಿಗೆ, ಜಾಹೀರಾತು ಮೂಲಕ ಸಂಗ್ರಹಿಸುವ ಆದಾಯ ಕಡಿಮೆಯಾಗಿದ್ದು, ಪ್ರಯಾಣಿಕರಿಂದ ಸಂಗ್ರಹಿಸುವ ಆದಾಯ ಹೆಚ್ಚಳವಾಗಿದೆ. ಶ್ಯಾಡೋ ಕಾಸ್ಟ್‌ ಸಪೋರ್ಟ್‌ ಅನ್ನು ರಾಜ್ಯ ಸರ್ಕಾರ ಕಳೆದ ಎರಡು ವರ್ಷದಿಂದ ನಿಲ್ಲಿಸಿದೆ. ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಎಸ್‌‍ಸಿಎಸ್‌‍ ಮುಂದುವರೆಸಲಾಗದು, ವಾರ್ಷಿಕ ಶೇ.5ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಕೋರಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕಳೆದ ವರ್ಷ ಶೇ.105ರಷ್ಟು ದುಪ್ಪಟ್ಟು ಮೆಟ್ರೋ ಪ್ರಯಾಣದರ ಪರಿಷ್ಕರಣೆ ಮಾಡಲಾಗಿತ್ತು. ಅಧಿಕಾರಿಗಳು ನೀಡಿರುವ ಮಾಹಿತಿ ನೋಡಿದರೆ, ರಾಜ್ಯ ಸರ್ಕಾರ ಆರ್ಥಿವಾಗಿ ದಿವಾಳಿಯಾಗಿದೆ. ತನ್ನ ಲೋಪ ಮುಚ್ಚಿಕೊಳ್ಳಲು ಜನರನ್ನು ದಾರಿತಪ್ಪಿಸುತ್ತಿದೆ ಎಂದು ಅವರು ಆರೋಪಿಸಿದರು.

ಮಾಗಡಿ ರಸ್ತೆ ಪತ್ನಿ ಹತ್ಯೆ ಪ್ರಕರಣ: ಪಿಸ್ತೂಲ್ ಖರೀದಿಗೆ ನೆರವಾಗಿದ್ದ ಮತ್ತೋರ್ವ ಆರೋಪಿ ಅರೆಸ್ಟ್!

0

ಬೆಂಗಳೂರು: ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತಿಯೋರ್ವ ತನ್ನ ಪತ್ನಿಯನ್ನು ಪಿಸ್ತೂಲ್ನಿಂದ ಗುಂಡಿಟ್ಟು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪತಿ ಬಾಲಮುರುಗನ್ಗೆ ಪಿಸ್ತೂಲ್ ಖರೀದಿಗೆ ನೆರವಾಗಿದ್ದ ಉತ್ತರ ಪ್ರದೇಶ ಮೂಲದ ಅಭಿಮನ್ಯು ಸಿಂಗ್ನನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಡಿಸೆಂಬರ್ 23ರಂದು ಸಂಜೆ ಮಾಗಡಿ ರಸ್ತೆ ಠಾಣಾ ವ್ಯಾಪ್ತಿಯಲ್ಲಿ ಪತಿ ಬಾಲಮುರುಗನ್ ತನ್ನ ಪತ್ನಿ ಭುವನೇಶ್ವರಿಯನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದ. ಪ್ರಕರಣದ ತನಿಖೆ ವೇಳೆ ಹತ್ಯೆಯ ಹಿಂದೆ ಪೂರ್ವಯೋಜನೆ ಹಾಗೂ ಸಹಚರರು ಇದ್ದುದು ಬೆಳಕಿಗೆ ಬಂದಿದೆ.

ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಭಿಮನ್ಯು ಸಿಂಗ್ಗೆ ಬಾಲಮುರುಗನ್ ಪರಿಚಯವಾಗಿದ್ದು, ಮೃತ ಭುವನೇಶ್ವರಿ ಕೆಲಸ ಮಾಡುತ್ತಿದ್ದ ಬ್ಯಾಂಕ್ ಸಮೀಪದ ಜಿಮ್ಗೆ ಅಭಿಮನ್ಯು ಸಿಂಗ್ ಬರುತ್ತಿದ್ದ. ಈ ಸಂದರ್ಭ ಭುವನೇಶ್ವರಿಯ ಚಲನವಲನಗಳ ಬಗ್ಗೆ ಅಭಿಮನ್ಯು ಸಿಂಗ್ ಬಾಲಮುರುಗನ್ಗೆ ಮಾಹಿತಿ ನೀಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ ಬಾಲಮುರುಗನ್ ಮತ್ತು ಅಭಿಮನ್ಯು ಸಿಂಗ್ ಇಬ್ಬರೂ ಬಿಹಾರಕ್ಕೆ ತೆರಳಿ ಎರಡು ಪಿಸ್ತೂಲ್ಗಳನ್ನು ಖರೀದಿಸಿಕೊಂಡು ಬಂದಿದ್ದರು. ನಂತರ ಆ ಪೈಕಿ ಒಂದು ಪಿಸ್ತೂಲ್ ಅನ್ನು ತಮಿಳುನಾಡಿನ ಸೇಲಂ ಮೂಲದ ಮೌಳೇಶ್ ಎಂಬ ಆರೋಪಿಗೆ ನೀಡಿ ಭುವನೇಶ್ವರಿಯನ್ನು ಹತ್ಯೆ ಮಾಡುವ ಸುಪಾರಿ ನೀಡಲಾಗಿತ್ತು.

ಸುಪಾರಿ ಪಡೆದ ಮೌಳೇಶ್ ಬೆಂಗಳೂರಿಗೆ ಬಂದು ಭುವನೇಶ್ವರಿ ಕೆಲಸ ಮಾಡುತ್ತಿದ್ದ ಸ್ಥಳ ಹಾಗೂ ಓಡಾಡುವ ರಸ್ತೆಗಳಲ್ಲಿ ಕೆಲವು ದಿನಗಳ ಕಾಲ ಚಲನವಲನ ಗಮನಿಸಿದ್ದ. ಆದರೆ ಕೃತ್ಯ ಎಸಗುವ ದಿನ ಆತ ಕೈಕೊಟ್ಟು ತಮಿಳುನಾಡಿಗೆ ಮರಳಿದ್ದಾನೆ. ಇದರಿಂದ ಬೇಸತ್ತ ಬಾಲಮುರುಗನ್, ಬೇರೆಯವರಿಗೆ ಹಣ ಕೊಟ್ಟು ಕಾಯುವ ಬದಲು ತಾನೇ ಹತ್ಯೆ ನಡೆಸಲು ನಿರ್ಧರಿಸಿ ಪಿಸ್ತೂಲ್ ಹಿಡಿದು ಪತ್ನಿಯನ್ನು ಗುಂಡಿಟ್ಟು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆ ನಂತರ ಬಾಲಮುರುಗನ್ ತಾನೇ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದಾಗ ಪಿಸ್ತೂಲ್ ಮೂಲ, ಸಹಚರರು ಹಾಗೂ ಸುಪಾರಿ ವಿಚಾರಗಳು ಬೆಳಕಿಗೆ ಬಂದಿವೆ.

ಸುಪಾರಿ ಪಡೆದಿದ್ದ ಮೌಳೇಶ್ ಈಗಾಗಲೇ ತಮಿಳುನಾಡಿನಲ್ಲಿ ಮತ್ತೊಂದು ಪ್ರಕರಣದಲ್ಲಿ ಬಂಧನಕ್ಕೊಳಗಾ ಗಿದ್ದರಿಂದ, ಮಾಗಡಿ ರಸ್ತೆ ಠಾಣೆ ಪೊಲೀಸರು ಇತ್ತೀಚಿಗೆ ಬಾಡಿ ವಾರಂಟ್ ಮೂಲಕ ಆತನನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಮುಂದಿನ ತನಿಖೆ ಮುಂದುವರಿದಿದೆ.

ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣ ವಿಧಿವಶ.! ರಾಜಕೀಯ ಗಣ್ಯರಿಂದ ಸಂತಾಪ

0

ದಾವಣಗೆರೆ: ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದಾವಣಗೆರೆಯ ಮಾಜಿ ಶಾಸಕ, ಹಿರಿಯ ಕಾಂಗ್ರೆಸ್ ನಾಯಕ ಯಜಮಾನ್ ಮೋತಿ ವೀರಣ್ಣ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ರಾಜಕೀಯ ನಾಯಕರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಕಂಬನಿ ಮಿಡಿದಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಮೋತಿ ವೀರಣ್ಣ ಅವರು, ದಾವಣಗೆರೆ ಜಿಲ್ಲೆಯಲ್ಲಿ ಪಕ್ಷವನ್ನು ಗಟ್ಟಿಯಾಗಿ ನೆಲೆನಿಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಶಾಸಕರಾಗಿ ಆಯ್ಕೆಯಾಗುವ ಮೂಲಕ “ದಾವಣಗೆರೆ ಯಜಮಾನ್” ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಸಮಾಜ ಸೇವಕ ಹಾಗೂ ಉದ್ಯಮಿಯಾಗಿಯೂ ಅವರು ಗುರುತಿಸಿಕೊಂಡಿದ್ದರು.

ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮೋತಿ ವೀರಣ್ಣ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಶುಕ್ರವಾರ ತಡರಾತ್ರಿ ತಮ್ಮ ನಿವಾಸದಲ್ಲೇ ಅವರು ನಿಧನರಾಗಿದ್ದಾರೆ. ದಾನ-ಧರ್ಮ ಹಾಗೂ ಸಮಾಜ ಸೇವೆಯ ಮೂಲಕ ಜೀವನ ನಡೆಸಿದ್ದ ಯಜಮಾನ್ ಮೋತಿ ವೀರಣ್ಣ ಇದೀಗ ನೆನಪು ಮಾತ್ರ ಎಂದು ಕುಟುಂಬಸ್ಥರು ಹಾಗೂ ಅಭಿಮಾನಿಗಳು ದುಃಖ ವ್ಯಕ್ತಪಡಿಸಿದ್ದಾರೆ.

ಚಿತ್ರ ನಿರ್ಮಾಪಕ ಯಜಮಾನ್ ಮೋತಿ ರಾಜೇಂದ್ರ ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿ, ನಾಲ್ವರು ಮೊಮ್ಮಕ್ಕಳು, ಓರ್ವ ಮರಿಮೊಮ್ಮಗಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತದೇಹವನ್ನು ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿದ್ದು, ಇಂದು ಸಂಜೆ 4 ಗಂಟೆಗೆ ಹದಡಿ ರಸ್ತೆಯಲ್ಲಿರುವ ಮೋತಿ ಟ್ರಸ್ಟ್ ನಿವೇಶನದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

error: Content is protected !!