Home Blog Page 36

ಪತಿಯ ಕಣ್ಣೆದುರಲ್ಲೇ ಪತ್ನಿ ನೇಣಿಗೆ ಶರಣು: ತಮಾಷೆ ಎಂದು ವಿಡಿಯೋ ಮಾಡಿದ ಗಂಡ!

ಅಮರಾವತಿ:- ಆಂಧ್ರಪ್ರದೇಶ ಕಡಪ ಜಿಲ್ಲೆಯ ಬೋಯಿನಪಲ್ಲಿ ಗ್ರಾಮದಲ್ಲಿ ಪತಿಯ ಕಣ್ಣೆದುರಲ್ಲೇ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.

ಕೃಷ್ಣವೇಣಿ ನೇಣಿಗೆ ಶರಣಾದ ಮಹಿಳೆ. ಹೆಂಡ್ತಿ ನೇಣು ಬಿಗಿದುಕೊಳ್ಳುವಾಗ ಪತಿ ಕಾಪಾಡದೇ ತನ್ನ ಮೊಬೈಲ್‍ನಲ್ಲಿ ವಿಡಿಯೋ ಸೆರೆಹಿಡಿದಿದ್ದಾನೆ. ಕೌಟುಂಬಿಕ ಕಲಹದಿಂದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ವೇಳೆ ಪತಿ ಶ್ರೀರಾಮ್ ಶ್ರೀನಿವಾಸ್ ತಡೆಯಲು ಪ್ರಯತ್ನಿಸುವ ಬದಲು, ಘಟನೆಯ ವಿಡಿಯೋವನ್ನು ರೆಕಾರ್ಡ್ ಮಾಡಿ, ನೀನು ಹಾಗೆ ಕುಣಿಕೆ ಕಟ್ಟಬಾರದು. ಅದನ್ನು ಹೀಗೆ ಮಾಡಬೇಕು ಎಂದು ಅವಳಿಗೆ ಸೂಚನೆ ನೀಡಿದ್ದ ಎಂದು ತಿಳಿದು ಬಂದಿದೆ.

ಆರಂಭದಲ್ಲಿ ತಮಾಷೆ ಮಾಡುತ್ತಿದ್ದಾಳೆ ಎಂದು ಗ್ರಹಿಸಿದ್ದರಿಂದ ಶ್ರೀನಿವಾಸ್ ತನ್ನ ಹೆಂಡತಿಯ ಪ್ರಾಣ ಉಳಿಸಲು ವಿಫಲನಾಗಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಪತ್ನಿ ಕೃಷ್ಣವೇಣಿ ಮೃತಪಟ್ಟಿದ್ದು, ಪತಿಯನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

KSRTC ರಾಜಹಂಸ- ಕಾರು ಮುಖಾಮುಖಿ ಡಿಕ್ಕಿ: ಮೂವರು ಸಾವು, ಓರ್ವನ ಸ್ಥಿತಿ ಗಂಭೀರ!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಶಿರಾಡಿಘಾಟ್ನ ಗುಂಡ್ಯ ಸಮೀಪ KSRTC ರಾಜಹಂಸ ಬಸ್ ಹಾಗೂ ಕಾರಿನ ನಡುವೆ ಭೀಕರ ಮುಖಾಮುಖಿ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರು ಉಜಿರೆ ನಿವಾಸಿಗಳಾದ ಶ್ರೀಧರ ಮರಕಡ, ಜನಾರ್ದನ ಕೆರಿಮಾರ್ ಮತ್ತು ಕೊಕ್ಕಡ ನಿವಾಸಿ ಚಂದ್ರಶೇಖರ ಗೌಡರಾಗಿದ್ದಾರೆ. ಕಾರಿನಲ್ಲಿ ಮತ್ತೊಬ್ಬ ಸುರೇಶ್ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ನಾಲ್ವರು ಕಾರಿನಲ್ಲಿ ಸಕಲೇಶಪುರದಲ್ಲಿ ಮದುವೆ ಮುಗಿಸಿಕೊಂಡು ಉಜಿರೆ ಕಡೆಗೆ ವಾಪಸ್ ಪ್ರಯಾಣಿಸುತ್ತಿದ್ದರು. ಬಸ್ ಮಂಗಳೂರು ಕಡೆಯಿಂದ ಧರ್ಮಸ್ಥಳ-ತಿರುಪತಿ ಮಾರ್ಗದಲ್ಲಿ ಬಂದಿದ್ದು, ಶಿರಾಡಿಘಾಟ್ನ ಗುಂಡ್ಯ ಸಮೀಪ ಕಾರಿನೊಂದಿಗೆ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದೆ. ಅಪಘಾತದಿಂದ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ತಕ್ಷಣ ಸ್ಥಳಕ್ಕೆ ಉಪ್ಪಿನಂಗಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ಬೆನ್ನಲ್ಲೇ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು, ನಂತರ ಪೊಲೀಸರು ವಾಹನ ಸಂಚಾರಕ್ಕೆ ಪುನಃ ಅನುಮತಿ ನೀಡಿದ್ದಾರೆ.

ರಾಜ್ಯದಲ್ಲಿ ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ ಇಳಿಕೆ: ಸಚಿವ ಡಾ.ಜಿ. ಪರಮೇಶ್ವರ್

ಬೆಂಗಳೂರು: ಇತ್ತೀಚೆಗೆ ಕರ್ನಾಟಕದಲ್ಲಿ ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, 2023ರಲ್ಲಿ ದಾಖಲಾಗಿದ್ದ 22,225 ಪ್ರಕರಣಗಳು 2025 ರ ವೇಳೆಗೆ 14,899ಕ್ಕೆ ಇಳಿಕೆಯಾಗಿವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಪೊಲೀಸ್ ಇಲಾಖೆ ಕೈಗೊಂಡ ಪರಿಣಾಮಕಾರಿ ಕ್ರಮಗಳು, ಪ್ರಕರಣಗಳ ತ್ವರಿತ ಪತ್ತೆ ಮತ್ತು ಸಾರ್ವಜನಿಕರಲ್ಲಿ ಮೂಡಿಸಿದ ಜಾಗೃತಿ ಇದರ ಪ್ರಮುಖ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೂ, ಸೈಬರ್ ಖದೀಮರು ತಮ್ಮ ವಂಚನೆ ಕಾರ್ಯವನ್ನು ಇನ್ನೂ ತಂತ್ರಜ್ಞಾನದ ಹೊಸ ಮಾರ್ಗಗಳಲ್ಲಿ ಮುಂದುವರೆಸುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಘಟನೆ ಇದರ ತಾಜಾ ಉದಾಹರಣೆಯಾಗಿದೆ. ಮಹಿಳೆಯೊಬ್ಬರಿಗೆ ನಯನಾ ಪ್ರಕಾಶ್ ಎಂಬ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕರೆಮಾಡಿದ ಖದೀಮರು, ಮೊದಲು ಆಡಿಯೋ ಕಾಲ್ ಮೂಲಕ “ನಿಮ್ಮ ತಾಯಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ” ಎಂದು ಭಯಪಟ್ಟು ಹೇಳಿದರು. ನಂತರ ಕರೆಯನ್ನು ವಿಡಿಯೋ ಕಾಲ್‌ಗೆ ಪರಿವರ್ತಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಅವರ ಧೈರ್ಯ ಎಷ್ಟೆಂದರೆ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರ ನಕಲಿ ಸೀಲ್ ಮತ್ತು ಸಹಿ, ಕರ್ನಾಟಕ ಸಿಐಡಿ ಹೆಸರಲ್ಲಿ ಅರೆಸ್ಟ್ ವಾರಂಟ್, ಹಾಗೂ ಸುಪ್ರೀಂ ಕೋರ್ಟ್ ಆದೇಶ ಎನ್ನುವ ನಕಲಿ ದಾಖಲೆಗಳನ್ನು ಸಹ ಬಳಸಿದರು. ಮಹಿಳೆಯು ದಾಖಲೆಗಳನ್ನು ಪರಿಶೀಲಿಸಿ ಅನುಮಾನಗೊಂಡು ಎಚ್ಚೆತ್ತುಕೊಂಡರು ಮತ್ತು ತಕ್ಷಣ ಬೆಂಗಳೂರು ಸೈಬರ್ ಕ್ರೈಂ ವಿಭಾಗದ ಅಧಿಕೃತ ಮೇಲ್ ಐಡಿಗೆ ಹಾಗೂ ಸೈಬರ್ ಕ್ರೈಂ ಪೋರ್ಟಲ್‌ನಲ್ಲಿ ದೂರು ದಾಖಲಿಸಿದರು.

“ಪೋಲಿಸ್ ಎಂದಿಗೂ ವಿಡಿಯೋ ಕಾಲ್ ಮೂಲಕ ಹಣ ಕೇಳುವುದಿಲ್ಲ ಅಥವಾ ಡಿಜಿಟಲ್ ಅರೆಸ್ಟ್ ಮಾಡುವುದಿಲ್ಲ. ಯಾವುದೇ ನಕಲಿ ಆದೇಶ ಪತ್ರಗಳಿಗೆ ಸಾರ್ವಜನಿಕರು ಮರುಳಾಗಬಾರದು. ಅನುಮಾನ ಬಂದರೆ ಕೂಡಲೇ 1930 ಗೆ ಕರೆ ಮಾಡಿ ದೂರು ಸಲ್ಲಿಸಬೇಕು.” ಇಂತಹ ಸೈಬರ್ ವಂಚನೆ ಜಾಲಕ್ಕೆ ಅನೇಕರು ಈಗಾಗಲೇ ಹಣ ಕಳೆದುಕೊಂಡಿದ್ದಾರೆ. ಪೊಲೀಸ್ ಹೆಸರಲ್ಲೇ ವಂಚನೆ ನಡೆಸುತ್ತಿರುವ ಸೈಬರ್ ಖದೀಮರ ವಿರುದ್ಧ ಸಾರ್ವಜನಿಕರು ಹೆಚ್ಚು ಜಾಗ್ರತೆ ವಹಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಡಿಸಿಪಿ ರಾಜಾ ಇಮಾಮ್ ಖಾಸಿಂ ಹೇಳಿದ್ದಾರೆ.

 

ನೀವು ಕೂಡ ಹೆಚ್ಚು ಯೋಚಿಸ್ತಿದ್ದೀರಾ? ಹೀಗೆ ಮಾಡೋದ್ರಿಂದ ಆರೋಗ್ಯ ಹಾಳಾಗುತ್ತೆ!

0

ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಹೆಚ್ಚು ಯೋಚಿಸುವ ಅಭ್ಯಾಸ ಹೆಚ್ಚುತ್ತಿದೆ. ದೈನಂದಿನ ಕೆಲಸದ ಒತ್ತಡ, ಭವಿಷ್ಯದ ಬಗ್ಗೆ ಚಿಂತೆ, ಕುಟುಂಬದ ಜವಾಬ್ದಾರಿಗಳು ಮತ್ತು ನಿತ್ಯದ ಸಮಸ್ಯೆಗಳು ವ್ಯಕ್ತಿಗಳನ್ನು ಅನವಶ್ಯವಾಗಿ ಹೆಚ್ಚು ಯೋಚಿಸಲು ಪ್ರೇರೇಪಿಸುತ್ತಿವೆ.

ಅತಿಯಾದ ಯೋಚನೆಯಿಂದ ಮನಸ್ಸಿಗೆ ಶಾಂತಿ ಸಿಗದೆ, ದೇಹದ ಮೇಲೆ ನಾನಾ ರೀತಿಯ ದುಷ್ಪರಿಣಾಮ ಉಂಟಾಗುತ್ತವೆ. ತಲೆನೋವು, ದಣಿವು, ನಿದ್ರೆ ಸಮಸ್ಯೆ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಸಾಮಾನ್ಯವಾಗಿ ಕಾಣಿಸಬಹುದು. ಕೆಲವು ವ್ಯಕ್ತಿಗಳಲ್ಲಿ ಕೇಂದ್ರೀಕರಣ ಶಕ್ತಿಯ ಕುಸಿತ, ನಿರಂತರ ಆತಂಕ ಮತ್ತು ಚಿಡಿಚಿಡಿ ಸಹ ಉಂಟಾಗಬಹುದು. ದೆಹಲಿ ನ್ಯೂರಾಲಜಿಸ್ಟ್ ಡಾ. ರಾಜೇಶ್ ಕುಮಾರ್ ಅವರ ಪ್ರಕಾರ, “ಅತಿಯಾದ ಯೋಚನೆಯು ಮಾನಸಿಕ ಒತ್ತಡವನ್ನು ಹೆಚ್ಚಿಸಿ ದೇಹದ ಹಾರ್ಮೋನ್ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ.”

ತಜ್ಞರು ಹೇಳುವುದೇನೆಂದರೆ, ನಿಯಮಿತ ವ್ಯಾಯಾಮ, ಯೋಗ, ಧ್ಯಾನ, ಸಮತೋಲನಯುತ ದಿನಚರಿ ಮತ್ತು ಸಾಕಷ್ಟು ನಿದ್ರೆ ಪಡೆದು ಈ ಅಭ್ಯಾಸವನ್ನು ನಿಯಂತ್ರಿಸಬಹುದು. ದೀರ್ಘಕಾಲದ ಒತ್ತಡದ ಸಂದರ್ಭಗಳಲ್ಲಿ ವೈದ್ಯರ ಸಲಹೆ ಪಡೆಯುವುದು ಅತ್ಯವಶ್ಯಕ.

 

ಸೋಮವಾರದಿಂದ ತಂಬಾಕು ಖರೀದಿ ಆರಂಭ: ಕೇಂದ್ರ ಸಚಿವ ಪಿಯೂಷ್ ಗೋಯಲ್ ರಿಂದ ಕುಮಾರಸ್ವಾಮಿಗೆ ಭರವಸೆ

0

ನವದೆಹಲಿ: ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ತಂಬಾಕು ಬೆಳೆಗಾರರ ನೆರವಿಗೆ ಕೇಂದ್ರ ಸರಕಾರ ಧಾವಿಸಿದೆ. ಈ ಸಂಬಂಧ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವರಾದ ಪಿಯೂಷ್ ಗೋಯಲ್ ಅವರ ಜತೆ ಮಾತುಕತೆ ನಡೆಸಿದರು.

ಸಚಿವ ಗೋಯಲ್ ಅವರಿಗೆ ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಮನವರಿಕೆ ಮಾಡಿ ಕೊಡಲಾಯಿತು. ಎಲ್ಲ ಮನವಿಗಳನ್ನು ಸಚಿವರು ಆಲಿಸಿದರಲ್ಲದೆ, ಅವುಗಳನ್ನು ಕೂಡಲೇ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ಸೋಮವಾರದಿಂದಲೇ ತಂಬಾಕು ಖರೀದಿ, ವಿದೇಶ ಮಾರುಕಟ್ಟೆಗಳಿಗೆ ರಫ್ತು, ಹೊಸ ವಿದೇಶಿ ಮಾರುಕಟ್ಟೆಗಳ ಅನ್ವೇಷಣೆ ಸೇರಿದಂತೆ ಬೆಳೆಗಾರ ಬೇಡಿಕೆಗಳಿಗೆ ಸಚಿವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದರು. ಅಲ್ಲದೆ, ಈ ಸಂದರ್ಭದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಶಮನಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಚಿವ ಗೋಯಲ್ ಅವರು ತಮ್ಮ ಸಚಿವಾಲಯದ ಉನ್ನತ ಅಧಿಕಾರಿಗಳು ಹಾಗೂ ತಂಬಾಕು ಖರೀದಿಸುವ ಉದ್ಯಮದ ಪ್ರಮುಖರ ಜತೆ ಮಾತನಾಡಿ ಬೆಳೆಗಾರರ ನೆರವಿಗೆ ಬರುವಂತೆ ಸೂಚಿಸಿದರು ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.

ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡ ಅವರ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಮಾಜಿ ಸಚಿವರಾದ ಸಾ.ರಾ. ಮಹೇಶ್, ಮೈಸೂರು -ಕೊಡಗು ಸಂಸದರಾದ ಯದುವೀರ್ ಚಾಮರಾಜೇಂದ್ರ ಕೃಷ್ಣದತ್ತ ಒಡೆಯರ್, ಶಾಸಕರಾದ ಎ. ಮಂಜು, ಜಿ.ಡಿ. ಹರೀಶ್ ಗೌಡ, ಸಿ.ಎನ್. ಮಂಜೇಗೌಡ, ಮಾಜಿ ಶಾಸಕರಾದ ಮಹದೇವು, ಅಶ್ವಿನ್ ಕುಮಾರ್ , ಜೆಡಿಎಸ್ ಹಿರಿಯ ಮುಖಂಡ ಕೃಷ್ಣನಾಯಕ ಹಾಗೂ ಕೋಲಾರ ಸಂಸದ ಮಲ್ಲೇಶ್ ಬಾಬು ಅವರು ಹಾಗೂ ವಾಣಿಜ್ಯ ಸಚಿವಾಲಯದ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು.

ಮುಟ್ಟಿನ ರಜೆ ಕಡ್ಡಾಯ ಮಾಡಿದರೆ ಮಹಿಳೆಯರ ಉದ್ಯೋಗಕ್ಕೆ ಪರಿಣಾಮ: ಸುಪ್ರೀಂ ಕೋರ್ಟ್ ಅಭಿಪ್ರಾಯ

0

ನವದೆಹಲಿ: ಮಹಿಳೆಯರಿಗೆ ಕಡ್ಡಾಯವಾಗಿ ಮುಟ್ಟಿನ ರಜೆ ನೀಡುವ ಕಾನೂನು ಜಾರಿಗೆ ತಂದರೆ ಅದು ಮಹಿಳೆಯರ ಉದ್ಯೋಗಾವಕಾಶಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ವಕೀಲ ಶೈಲೇಂದ್ರ ಮಣಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಿಜೆಐ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠದಲ್ಲಿ ನಡೆಯಿತು. ಅರ್ಜಿಯಲ್ಲಿ ಮಹಿಳೆಯರಿಗೆ ಸಂಬಳದೊಂದಿಗೆ ಮುಟ್ಟಿನ ರಜೆ ನೀಡುವಂತೆ ರಾಜ್ಯಗಳಿಗೆ ನಿಯಮ ರೂಪಿಸಲು ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಗಿತ್ತು.

ವಿಚಾರಣೆ ವೇಳೆ ಪೀಠವು, ಇಂತಹ ಕಾನೂನು ಜಾರಿಗೆ ತಂದರೆ ಮಹಿಳೆಯರು ಪುರುಷರಿಗಿಂತ ಕಡಿಮೆ ಸಾಮರ್ಥ್ಯ ಹೊಂದಿದ್ದಾರೆ ಎಂಬ ಭಾವನೆ ಉಂಟಾಗಬಹುದು ಎಂದು ಅಭಿಪ್ರಾಯಪಟ್ಟಿತು. ಉದ್ಯೋಗದಾತರ ಮನೋಭಾವವನ್ನು ಗಮನಿಸಿದರೆ, ಕಡ್ಡಾಯ ರಜೆ ನಿಯಮ ತಂದರೆ ಅವರು ಮಹಿಳೆಯರನ್ನು ನೇಮಿಸಿಕೊಳ್ಳುವುದೇ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಕೋರ್ಟ್ ತಿಳಿಸಿತು.

ಪ್ರತಿ ತಿಂಗಳು ಮುಟ್ಟಿನ ರಜೆಯನ್ನು ಕಾನೂನುಬದ್ಧ ಹಕ್ಕಾಗಿ ಮಾಡುವುದು ಮಹಿಳೆಯರ ವೃತ್ತಿಜೀವನದ ಬೆಳವಣಿಗೆಗೆ ಅಡ್ಡಿಯಾಗಬಹುದು. ಖಾಸಗಿ ವಲಯದಲ್ಲಿ ತಿಂಗಳಿಗೆ ಹೆಚ್ಚುವರಿ ರಜೆ ಕಡ್ಡಾಯವಾದರೆ ಉದ್ಯೋಗದಾತರು ಮಹಿಳೆಯರನ್ನು ತಾತ್ಸಾರದಿಂದ ನೋಡುವ ಸಾಧ್ಯತೆಯಿದೆ ಎಂದು ನ್ಯಾಯಮೂರ್ತಿ ಬಾಗ್ಚಿ ಅಭಿಪ್ರಾಯಪಟ್ಟರು.

ಈ ಕಾರಣದಿಂದ ಪೀಠವು ಅರ್ಜಿಯನ್ನು ವಜಾಗೊಳಿಸಿತು. ಆದರೆ ಮಹಿಳೆಯರ ಮುಟ್ಟಿನ ಆರೋಗ್ಯದ ಬಗ್ಗೆ ಸೂಕ್ತ ನೀತಿ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತು.

ಕೇರಳ ಮತ್ತು ಕರ್ನಾಟಕ ಸರ್ಕಾರಗಳು ಸ್ವಯಂಪ್ರೇರಿತವಾಗಿ ಮುಟ್ಟಿನ ರಜೆ ನೀಡುತ್ತಿರುವುದನ್ನು ವಕೀಲರು ಗಮನಕ್ಕೆ ತಂದಾಗ, ಸ್ವಯಂಪ್ರೇರಿತವಾಗಿ ನೀಡುವ ಕ್ರಮ ಉತ್ತಮ ಎಂದು ಕೋರ್ಟ್ ಹೇಳಿತು. ಆದರೆ ಕಾನೂನಿನಲ್ಲಿ ಕಡ್ಡಾಯ ಮಾಡಿದರೆ ಅದು ಮಹಿಳೆಯರ ವೃತ್ತಿಜೀವನಕ್ಕೆ ಹಾನಿ ಉಂಟುಮಾಡಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಅರ್ಜಿದಾರರು ಇದೇ ವಿಷಯದ ಕುರಿತು ಮೂರನೇ ಬಾರಿ ಅರ್ಜಿ ಸಲ್ಲಿಸಿದ್ದು, 2023 ಮತ್ತು 2024ರಲ್ಲಿ ನಡೆದ ಹಿಂದಿನ ವಿಚಾರಣೆಗಳಲ್ಲಿಯೂ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಈ ವಿಷಯವನ್ನು ಪರಿಗಣಿಸಲು ಸೂಚಿಸಿತ್ತು.

ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ಕಳೆದ ನಾಲ್ಕೈದು ದಶಕಗಳ ನನ್ನ ರಾಜಕೀಯ ಬದುಕಿನಲ್ಲಿ ಅನೇಕ ಸೋಲುಗೆಲುವುಗಳನ್ನು ಕಂಡಿದ್ದರೂ, ಜನಸೇವೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವರಕೋಡು ಗಡಿ ಗುರುಮಠ ವರುಣದಲ್ಲಿ ಆಯೋಜಿಸಲಾಗಿದ್ದ ಶ್ರೀ ಬೀರೇಶ್ವರಸ್ವಾಮಿ ದೇವಸ್ಥಾನದ ಸಂಪ್ರೊಕ್ಷಣ ಪುನರ್ ಪ್ರತಿಷ್ಠಾಪನೆ ಕುಂಭಾಭಿಷೇಕ ಹಾಗೂ ಮಹಾದ್ವಾರ ಪೂಜಾ ಮಹೋತ್ಸವ ಭಾಗವಹಿಸಿ ಮಾತನಾಡಿದರು.

ಭಕ್ತಿ ಪರಿಶುದ್ಧವಾಗಿರಬೇಕಲ್ಲದೇ, ಮಾನವೀಯತೆ ಹಾಗೂ ಪರರ ಹಿತಚಿಂತನೆಯಿಂದ ಮಾತ್ರ ದೇವರು ಒಲಿಯುತ್ತಾನೆ. ದೇವರು ಸರ್ವಾಂತರ್ಯಾಮಿಯಾಗಿದ್ದಾನೆ. ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ. ಶ್ರೀ ಬೀರೇಶ್ವರಸ್ವಾಮಿ ದೇವಸ್ಥಾನದ ಪೂಜಾ ಮಹೋತ್ಸವಗಳು, ಜಾತ್ರೆಗಳಲ್ಲಿ ಜನರು ಸಂತೋಷದಿಂದ ಭಾಗವಹಿಸಿದ್ದಾರೆ. ಶ್ರೀ ಬೀರೇಶ್ವರಸ್ವಾಮಿ , ನಾಡಿನ ಸಮಸ್ತ ಜನತೆಗೆ ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

1978 ರಲ್ಲಿ ಈ ಪ್ರದೇಶದಿಂದಲೇ ನನ್ನ ರಾಜಕೀಯ ಜೀವನ ಪ್ರಾರಂಭವಾಗಿದ್ದು, ಅಪಾರ ಜನಬೆಂಬಲ ನನಗೆ ದೊರೆತಿದೆ. ಅಲ್ಲಿಂದ ಇಲ್ಲಿಯವರೆಗೆ ಚಾಮುಂಡೇಶ್ವರಿ ಮತ್ತು ವರುಣಾ ಕ್ಷೇತ್ರದ ಜನರು ನನ್ನನ್ನು ಬೆಂಬಲಿಸುತ್ತಲೇ ಬಂದಿದ್ದಾರೆ. ಇಲ್ಲಿನ ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿ, ಆರ್ಥಿಕ ಸಚಿವನಾಗಿ 17 ಬಾರಿ ಆಯವ್ಯಯಗಳನ್ನು ಮಂಡಿಸುವ ಅವಕಾಶ ದೊರೆತಿದೆ. 13 ಬಾರಿ ಚುನಾವಣೆಗಳನ್ನು ಎದುರಿಸಿದ್ದು, ನಾಲ್ಕು ಬಾರಿ ಸೋತ ಸಂದರ್ಭದಲ್ಲಿಯೂ , ಈ ಭಾಗದ ಜನರು ನನ್ನನ್ನೇ ಬೆಂಬಲಿಸಿದ್ದೇನೆ. ನನ್ನ ರಾಜಕೀಯ ಬದುಕಿಗೆ ಇಲ್ಲಿನ ಜನರ ಕೊಡುಗೆ ಅನನ್ಯವಾಗಿದೆ ಎಂದರು.

ನನ್ನ ಗುರುಗಳ ಮಾರ್ಗದರ್ಶನದಿಂದ ಶಿಕ್ಷಣ ಪಡೆದು, ವಕೀಲನಾಗಿ, ರಾಜಕಾರಣಿಯಾಗಿ ಜನರ ಸೇವೆ ಮಾಡುವ ಅವಕಾಶ ದೊರೆತಿದೆ. ನನ್ನ ರಾಜಕೀಯ ಜೀವನ ಸೋಲುಗೆಲುವುಗಳನ್ನು ಕಂಡಿದ್ದರೂ, ಜನಸೇವೆಯನ್ನು ಎಂದಿಗೂ ಮರೆಯುವುದಿಲ್ಲ. ನನ್ನ ಕೊನೆ ಉಸಿರುವವರೆಗೆ ಜನ ಸೇವೆಯಲ್ಲಿ ಸದಾ ತೊಡಗಿರುತ್ತೇನೆ. ಯತೀಂದ್ರ ಸಿದ್ದರಾಮಯ್ಯ ಈ ಕ್ಷೇತ್ರದ ಅಭಿವೃದ್ಧಿಗೆ ಸೇವೆ ಸಲ್ಲಿಸುತ್ತಿದ್ದು, ಜನರು ಅವರನ್ನು ಬೆಂಬಲಿಸಬೇಕು ಎಂದರು.ರಾಜ್ಯದ ವಿವಿಧ ಜಾತಿ, ಧರ್ಮ, ವರ್ಗಗಳ ಬಡಜನರಿಗೆ ಅನೇಕ ಭಾಗ್ಯಗಳು ಹಾಗೂ ಗ್ಯಾರಂಟಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದೇನೆ ಎಂದರು.

ಗ್ಯಾರಂಟಿ ಯೋಜನೆ ಹಿಂಪಡೆಯುವ ಬಗ್ಗೆ ಬಿಜೆಪಿಯಿಂದ ಅಧಿಕೃತ ನಿರ್ಣಯ ಮಂಡಿಸಿ, ಚರ್ಚಿಸೋಣ: ಡಿ.ಕೆ. ಶಿವಕುಮಾರ್

ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ಹಿಂಪಡೆಯಿರಿ, ಮರುಪರಿಶೀಲನೆ ಮಾಡಿ ಎಂದು ಬಿಜೆಪಿಯಿಂದ ಅಧಿಕೃತ ತೀರ್ಮಾನ ಮಾಡಿ ಸದನದಲ್ಲಿ ನಿರ್ಣಯ ಮಂಡಿಸಿ, ಆನಂತರ ಜನರ ಮುಂದೆ ಸದನದಲ್ಲಿ ಇದರ ಬಗ್ಗೆ ಚರ್ಚೆ ನಡೆಸೋಣ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸವಾಲೆಸೆದರು.

ವಿಧಾನಸಭೆಯಲ್ಲಿ 2026-27ನೇ ಸಾಲಿನ ಬಜೆಟ್ ಕುರಿತು ಚರ್ಚೆ ವೇಳೆ ಬಿಜೆಪಿ ಶಾಸಕ ಸುರೇಶ್ ಗೌಡ ಅವರು ಗ್ಯಾರಂಟಿ ಯೋಜನೆಗಳನ್ನು ರದ್ದುಗೊಳಿಸಬೇಕು ಎಂದು ಹೇಳಿದಾಗ, ಶಿವಕುಮಾರ್ ಅವರು ತಿರುಗೇಟು ನೀಡಿದರು.

“ಸುರೇಶ್ ಅವರೇ ನೀವು ಹಿರಿಯ ನಾಯಕರಿದ್ದೀರಿ, ಮಾಜಿ ನಿಮ್ಮ ಜತೆ ಮಾಜಿ ಡಿಸಿಎಂ ಇದ್ದಾರೆ. ಈ ಅಭಿಪ್ರಾಯ ಕೇವಲ ನಿಮ್ಮ ವೈಯಕ್ತಿಕವಲ್ಲ. ಅದು ಪಕ್ಷದ ಅಭಿಪ್ರಾಯ. ನೀವು ಏನು ಹೇಳುವಿರೋ ಅದರ ಬಗ್ಗೆ ಚಿಂತನೆ ನಡೆಸೋಣ. ನೀವು ಹೇಳುತ್ತಿರುವುದು ಸರಿಯಿಲ್ಲ ಎಂದು ಹೇಳುತ್ತಿಲ್ಲ. ಈ ಬಜೆಟ್ ಅಧಿವೇಶನದ ಒಳಗೆಯೇ ನಿಮ್ಮ ತೀರ್ಮಾನ ತಿಳಿಸಿ” ಎಂದು ಹೇಳಿದರು.

ಕೋಳಿ ಕೇಳಿ ಖಾರ ಅರೆದಂತಿದೆ, ಗ್ಯಾರಂಟಿ ಕೊಡುವಾಗ ನಮ್ಮನ್ನು ನೀವು ಕೇಳಿದ್ರ ಎಂದು ಸುರೇಶ್ ಅವರು ಪ್ರತಿಕ್ರಿಯೆ ನೀಡಿದಾಗ, “ಯಡಿಯೂರಪ್ಪ ಅವರು ಒಂದು ಕಾಳು ಕಡಿಮೆ ಆದರೂ ಬಿಡುವುದಿಲ್ಲ ಎಂದು ಹೇಳಿದ್ದರು. ಆನಂತರ ಅದು ಕಡಿಮೆ ಆಯಿತು, ಇದು ಕಡಿಮೆ ಆಯಿತು ಎಂದವರು ನೀವು. ಅದಕ್ಕೆ ಆರು ತಿಂಗಳಲ್ಲಿ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆವು. ನಿಮ್ಮ ಮಾತನ್ನೂ ಕೇಳಿ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ” ಎಂದು ತಿರುಗೇಟು ನೀಡಿದರು.

“ಇತ್ತೀಚೆಗೆ ಅಸ್ಸಾಂ ರಾಜ್ಯಕ್ಕೆ ಹೋಗಿದ್ದೆ. ಅಸ್ಸಾಂನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ಇಲ್ಲ. ಈಗ ಚಾಟ್ ಜಿಪಿಟಿಯಲ್ಲಿ ಹೌ ಟು ವಿನ್ ಗುಜರಾತ್ ಎಲೆಕ್ಷನ್ ಎಂದು ಹಾಕು, ಕರ್ನಾಟಕ ಮಾದರಿ ಅನುಸರಿಸಿ ಎಂದು ಬರಲಿಲ್ಲ ಎಂದರೆ ಕೇಳಿ. ಸರ್ಕಾರಿ ಅಧಿಕಾರಿಗಳಿಗೆ, ಉಳ್ಳವರಿಗೆ ಗ್ಯಾರಂಟಿ ಯೋಜನೆಗಳು ಬೇಕಿಲ್ಲ. ನಾವು ಒಂದು ತೀರ್ಮಾನ ಮಾಡಿದ್ದೇವೆ. ಅದೇ ರೀತಿ ನೀವು ಒಂದು ತೀರ್ಮಾನಕ್ಕೆ ಬನ್ನಿ” ಎಂದರು.

ಮರುಚಿಂತನೆ ಮಾಡಿ ಎಂದು ಮುಖ್ಯಮಂತ್ರಿಯವರಿಗೆ ಹೇಳಿದ್ದೇ ಎಂದು ಸುರೇಶ್ ಗೌಡ ಅವರು ಹೇಳಿದಾಗ, “ಪಕ್ಕದಲ್ಲಿ, ಡಿನ್ನರ್ ಮೀಟಿಂಗ್, ಡೇ ಲೈಟ್ ಮೀಟಿಂಗ್ ಅಲ್ಲಿ, ಬೇರೆ, ಬೇರೆ ಮೀಟಿಂಗ್ ಅಲ್ಲಿ ಹೇಳಿರುವುದು ಬೇಡ. ನಿಮ್ಮ ತೀರ್ಮಾನವನ್ನ ವಿಧಾನಸಭೆ, ಜನ, ದೇಶ ನೋಡಬೇಕು” ಎಂದರು.

ಬಾಗಲಕೋಟೆಯಲ್ಲಿ ಯುವಕನ ಮೇಲೆ ಹಲ್ಲೆ: ಚಿಕಿತ್ಸೆ ಫಲಿಸದೆ ಸಾವು!

0

ಬಾಗಲಕೋಟೆ: ಮೂವರು ಯುವಕರು ಸೇರಿ ಹಲ್ಲೆ ನಡೆಸಿದ ಪರಿಣಾಮ ಯುವಕನೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಾವಳಗಿ ಗ್ರಾಮದಲ್ಲಿ ಕಳೆದ ಮಂಗಳವಾರ (ಮಾರ್ಚ್ 11) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆ ನಡೆಸಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಮೃತ ಯುವಕನನ್ನು ಸುದೀಪ್ ಪಾಂಗೆ (19) ಎಂದು ಗುರುತಿಸಲಾಗಿದೆ. ಹಲ್ಲೆಯ ನಂತರ ಸುದೀಪ್‌ಗೆ ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಶಾಲೆಯ ವಾರ್ಷಿಕ ಕಾರ್ಯಕ್ರಮದ ವೇಳೆ ಸುದೀಪ್ ಶಾಲೆಯ ಮೇಲ್ಛಾವಣಿಯ ಮೇಲೆ ಕುಳಿತು ಕಲ್ಲೆಸೆದಿದ್ದಾನೆ ಎಂದು ಆರೋಪಿಸಿ ಕೆಲ ಯುವಕರು ಅವನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗಂಭೀರವಾಗಿ ಗಾಯಗೊಂಡ ಸುದೀಪ್ ಅನ್ನು ಜಮಖಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ.

ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಲ್ಲೆಗೈದ ಆರೋಪದ ಮೇಲೆ ರಾಜು ಮಾಳೆ, ವಿಜಯ್ ಸಾವಳಗಿ ಮತ್ತು ಮಲ್ಲಿಕಾರ್ಜುನ ಮಾಳೆ ವಿರುದ್ಧ ಎಫ್‌ಐಆರ್ ದಾಖಲಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ ಎಂಬ ಆರೋಪದಡಿ ಮೃತನ ಸಹೋದರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಭಿಕ್ಷಾಟನೆ ಮಾಫಿಯಾ: ಸರ್ಕಾರ ಕ್ರಮಕ್ಕೆ ಡಾ. ಕೆ. ಗೋವಿಂದರಾಜು ಆಗ್ರಹ

ಬೆಂಗಳೂರು: ಬೆಂಗಳೂರಿನಲ್ಲಿ ಭಿಕ್ಷಾಟನೆ ಹಿಂದೆ ದೊಡ್ಡ ಮಾಫಿಯಾ ಕಾರ್ಯನಿರ್ವಹಿಸುತ್ತಿದ್ದು, ಅದರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಡಾ. ಕೆ. ಗೋವಿಂದರಾಜು ಆಗ್ರಹಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು, ಭಿಕ್ಷಾಟನೆ ನಿಷೇಧ ಕಾಯ್ದೆ ಜಾರಿಗೆ ಬಂದು 50 ವರ್ಷಗಳಾದರೂ ರಾಜ್ಯದಲ್ಲಿ ಭಿಕ್ಷಾಟನೆ ನಿಲ್ಲಿಲ್ಲ ಎಂದು ಹೇಳಿದರು. ಬೆಂಗಳೂರಿನ ಮಾರ್ಕೆಟ್ ಪ್ರದೇಶಗಳು, ಎಂ.ಜಿ.ರೋಡ್ ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಭಿಕ್ಷಾಟನೆ ಹೆಚ್ಚಾಗಿದೆ ಎಂದು ಅವರು ಗಮನಕ್ಕೆ ತಂದರು.

ಭಿಕ್ಷಾಟನೆ ಹಿಂದೆ ಸಂಘಟಿತ ಮಾಫಿಯಾ ಕಾರ್ಯನಿರ್ವಹಿಸುತ್ತಿದ್ದು, ಏಜೆಂಟ್‌ಗಳು ಜನರನ್ನು ಕರೆದುಕೊಂಡು ಬಂದು ನಗರದಲ್ಲಿ ಬಿಟ್ಟು ಭಿಕ್ಷಾಟನೆ ಮಾಡಿಸುತ್ತಿದ್ದಾರೆ. ಚಿಕ್ಕ ಮಕ್ಕಳನ್ನೂ ಸಹ ಇದರಲ್ಲಿಗೆ ತಳ್ಳಲಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಈ ಸಮಸ್ಯೆ ತಡೆಯಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ, ಭಿಕ್ಷಾಟನೆ ಹಿಂದೆ ಮಾಫಿಯಾ ಇರುವುದಾಗಿ ಮಾಹಿತಿ ದೊರೆತರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಭಿಕ್ಷಾಟನೆ ಮಾಡುತ್ತಿರುವುದು ಕಂಡುಬಂದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಈ ಸಂಬಂಧ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

error: Content is protected !!