Home Blog Page 3629

ಮಾಸ್ಕ್ ಹಾಕಿಕೊಂಡೇ ಊಟ, ತಿಂಡಿ ತಿನ್ನಬೇಕಾ? ಹೋಟೆಲ್ ನಲ್ಲಿ ಕುಳಿತಿದ್ದರೂ ಬೀಳುತ್ತೆ ದಂಡ!

0

-ಬಸವರಾಜ ಕರುಗಲ್.

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ,
ಕೊಪ್ಪಳ: ಕೊರೋನಾ ಹಾವಳಿ ಜಿಲ್ಲೆಯಲ್ಲಿ ವಿಪರೀತವಾಗಿದೆ. ರಾಜ್ಯದಲ್ಲಿಯೇ ಗ್ರೀನ್ ಜೋನ್ ಆಗಿದ್ದ ಕೊಪ್ಪಳ ಜಿಲ್ಲೆ ಇದೀಗ ರಾಜ್ಯದ ಪ್ರಮುಖ ಕೊರೋನಾ ಹಾಟ್ ಸ್ಪಾಟ್ ಜಿಲ್ಲೆಯಾಗಿ ಪರಿವರ್ತನೆ ಹೊಂದಿದೆ‌. ಹಾಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಕಟ್ಟುಪಾಡು ಜಿಲ್ಲಾಡಳಿತದ ಹೆಗಲೇರಿದೆ. ಹಾಗೆಂದ ಮಾತ್ರಕ್ಕೆ ಮನಸೋ ಇಚ್ಛೆ ಕ್ರಮ ಅಮಾನವೀಯ. ಇಂಥ ಕ್ರಮಕ್ಕೆ ಇಲ್ಲಿದೆ ನೋಡಿ ತಾಜಾ ಉದಾಹರಣೆ.

ಇತ್ತೀಚೆಗೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಅವರ ಆದೇಶ ಹಾಗೂ ಸೂಚನೆಗೆ ಮಾಸ್ಕ್ ಹಾಕಿಕೊಳ್ಳದ ಸಾರ್ವಜನಿಕರಿಗೆ ಪೊಲೀಸರು ದಂಡ ಹಾಕುತ್ತಿದ್ದಾರೆ. ವಿಪರ್ಯಾಸವೆಂದರೆ ಹೊಟೇಲ್‌ನಲ್ಲಿ ಟಿಫಿನ್, ಊಟ ಮಾಡುತ್ತಿರುವ ಗ್ರಾಹಕರಿಗೆ ಡಿಸಿ ಸೂಚನೆ ಮೇರೆಗೆ ಪೊಲೀಸರು ದಂಡ ಹಾಕಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹೌದು… ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಕ್ಕೆ ಶನಿವಾರ ಜಿಲ್ಲಾಧಿಕಾರಿ ವಿಕಾಸ ಕಿಶೋರ್ ದಿಢೀರ್ ಭೇಟಿ ನೀಡಿದರು. ಇದೇ ವೇಳೆ ಸ್ವತಃ ಅವರೇ ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಧರಿಸದೇ ಓಡಾಡುತ್ತಿದ್ದ ಜನರಿಗೆ ದಂಡ ಹಾಕುವಂತೆ ಟ್ರಾಫಿಕ್ ಪೊಲೀಸರಿಗೆ ಸೂಚಿಸಿದರು.

ಇನ್ನು ಕೆಲವೊಂದು ಹೊಟೇಲ್ ಒಳಗೂ ಮಾಸ್ಕ್ ಧರಿಸದೇ ಕುಳಿತಿದ್ದ ಜನರಿಗೆ ದಂಡ ಹಾಕುವಂತೆ ಸೂಚನೆ ನೀಡಿದರು. ಇದರಿಂದ ಅನಿವಾರ್ಯವಾಗಿಯೇ ಪೊಲೀಸರು ಹೊಟೇಲ್ ಗ್ರಾಹಕರಿಗೆ ದಂಡ ಹಾಕಿದರು. ಇದರಿಂದಾಗಿ ಅದೇಷ್ಟೋ ಗ್ರಾಹಕರು ಜಿಲ್ಲಾಡಳಿತ ಮತ್ತು ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಮಾಸ್ಕ್ ಧರಿಸಿ ಟಿಫಿನ್ ಮತ್ತು ಊಟ ಹೇಗೆ ಮಾಡಬೇಕು ಅನ್ನೋದು ಕನಿಷ್ಟ ಜ್ಞಾನ ಜಿಲ್ಲಾಡಳಿತಕ್ಕೆ ಇಲ್ವಾ? ಹೊಟೇಲ್‌ಗೆ ಬರೋರು ತಿಂಡಿ ತಿನ್ನೋಕೊ? ಊಟ ಮಾಡೋಕೋ? ಅಥವಾ ಚಹಾ-ಕಾಫಿ ಕುಡಿಯೊಕೊ ಬರ್ತಾರೆ ಎನ್ನುವ ಸಾಮಾನ್ಯ ತಿಳುವಳಿಕೆಯೂ ಜಿಲ್ಲಾಡಳಿತಕ್ಕೆ ಇಲ್ಲವೇ? ಎಂದು ಪ್ರಶ್ನೆ ಮಾಡಿದರು.

ಕೊರೋನಾ ತಡೆಗಟ್ಟುವ ನೆಪದಲ್ಲಿ ಕಂಡ ಕಂಡವರಿಗೆ ಜಿಲ್ಲಾಡಳಿತ ದಂಡ ಹಾಕಿ, ಸಾಮಾನ್ಯ ಜನರ ಬಳಿ ಹಣ ಪಡೆದು ನಮ್ಮ ರಕ್ತ ಹೀರುತ್ತಿದೆ. ಪೊಲೀಸರಿಗೆ, ಸ್ಥಳೀಯ ಸಂಸ್ಥೆಗಳ ಅಧಿಕಾರಿ, ಸಿಬ್ಬಂದಿಗೆ ದಂಡದ ಹೆಸರಿನಲ್ಲಿ ಇದೊಂದು ದೊಡ್ಡ ಹಬ್ಬವಾಗಿದೆ.

-ರಮೇಶ, ಹೊಟೇಲ್ ಗ್ರಾಹಕ.

ಅರೇ, ಊಟ ಮಾಡೋರಿಗೆ, ತಿಂಡಿ ತಿನ್ನೋರಿಗೆ ದಂಡ ಹಾಕ್ತಾರೆ ಅಂದ್ರೆ ಹೇಂಗೆ? ವಿಷಯ ಅದಲ್ಲ‌. ನಾವು ಆ ರೀತಿ ಮಾಡಿಲ್ಲ. ಹೋಟೇಲ್ ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ಮಾಸ್ಕ್ ಇಲ್ಲದೇ ಗಂಟೆಗಟ್ಟಲೇ ಹರಟೆ ಹೊಡೆಯುತ್ತಿರುವವರನ್ನು ವಾಚ್ ಮಾಡಿ ಅಂಥವರಿಗೆ ದಂಡ ಹಾಕಿದ್ದೇವೆ. ನಾನೇ ಅಂಥವರನ್ನು ಗುರುತಿಸಿ ದಂಡ ಹಾಕಲು ಸೂಚಿಸಿದ್ದೇನೆ. ಊಟ ಮಾಡೋರಿಗೂ ದಂಡ ಹಾಕ್ತಾರೆ ಅನ್ನೋದು ನ್ಯೂಸ್ ಅಲ್ಲ.


-ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾಧಿಕಾರಿ, ಕೊಪ್ಪಳ.

ಅಮಿತ್ ಶಾ ಮತ್ತೆ ಏಮ್ಸ್ ಆಸ್ಪತ್ರೆಗೆ ದಾಖಲು: ಕೊವಿಡ್‌ನಿಂದ ಗುಣಮುಖರಾದ ನಂತರ ಇದು 2ನೇ ಬಾರಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಕೊವಿಡ್ ಬಾಧಿತರಾಗಿದ್ದ ಗೃಹ ಸಚಿವ ಅಮಿತ್ ಶಾ ದೆಹಲಿ ಹೊರವಲಯದ ಗುರುಗಾಂವ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ನಂತರ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದು ಬಂದಿದ್ದರು. ಈಗ ಮತ್ತೆ ಅವರು ಏಮ್ಸ್ಗೆ ದಾಖಲಾಗಿದ್ದಾರೆ.

ಆಗಸ್ಟ್ 2ರಂದು ಅಮಿತ್ ಶಾರಿಗೆ ಪಾಸಿಟಿವ್ ದೃಢಪಟ್ಟಿತ್ತು. ಗುರುಗಾಂವ್‌ನ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ನಂತರ ಆಗಸ್ಟ್ 18ರಂದು ದೈಹಿಕ ನೋವು ಎಂದು ಏಮ್ಸ್ಗೆ ದಾಖಲಾಗಿದ್ದ ಅವರಿಗೆ 13 ದಿನದ ಚಿಕಿತ್ಸೆ ನೀಡಿದ್ದ ವೈದ್ಯರು, ಇದು ಕೊವಿಡ್ ನಂತರದ ಸುಸ್ತಿಗೆ ನೀಡುವ ಚಿಕಿತ್ಸೆ ಎಂದು ಹೇಳಿದ್ದರು. ಆಗಸ್ಟ್ 31ರಂದು ಡಿಸ್‌ಚಾರ್ಜ್ ಮಾಡಿದ್ದರು.

ಡಿಸ್‌ಚಾರ್ಜ್ ಆದ 12 ದಿನದ ನಂತರ ಶನಿವಾರ ರಾತ್ರಿ 11ಕ್ಕೆ ಮತ್ತೆ ಅವರನ್ನು ಅದೇ ಏಮ್ಸ್ಗೆ ದಾಖಲಿಸಲಾಗಿದೆ. ಯಾವ ಕಾರಣಕ್ಕೆ ಎಂಬುದು ತಿಳಿದು ಬಂದಿಲ್ಲ.

ನಡೆಯುತ್ತಿದೆ ಈಗ ನೀಟ್ ಪರೀಕ್ಷೆ: ಮೂವರು ಅಭ್ಯರ್ಥಿಗಳ ಮನೆಯಲ್ಲಿ ಸೂತಕ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಚೆನ್ನೈ: ಭಾನುವಾರ ದೇಶದಾದ್ಯಂತ ನೀಟ್ ಪರೀಕ್ಷೆ ನಡೆಯುತ್ತಿದೆ. ಆದರೆ ನೀಟ್‌ನ ತೀವ್ರ ಗೊಂದಲ, ಭಯದಲ್ಲಿದ್ದ ಮೂವರು ಅಭ್ಯರ್ಥಿಗಳು ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದು, ಅವರ ಮನೆಯಲ್ಲೀಗ ಸೂತಕದ ವಾತಾವರಣವಿದೆ.
ಮೆಡಿಕಲ್ ಪದವಿಗೆ ಪ್ರವೇಶ ಪಡೆಯಲು ನಡೆಸುವ ತೀವ್ರ ಸ್ಪರ್ಧೆಯ ನೀಟ್ ಪರೀಕ್ಷೆಯನ್ನು ಕೊರೋನಾ ಕಾರಣಕ್ಕಾಗಿ ಮುಂದೂಡಿ ಎಂದು ನೂರಾರು ಸಂಘಟನೆಗಳು, ವಿದ್ಯಾರ್ಥಿಗಳು ಮತ್ತು ಕೆಲವು ರಾಜಕೀಯ ಪಕ್ಷಗಳು ಮಾಡಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು.

ಶನಿವಾರವೂ ಕೋರ್ಟ್ ಈ ಕುರಿತಾದ ಅರ್ಜಿಗಳನ್ನು ತಳ್ಳಿ ಹಾಕಿದ ನಂತರ ತಮಿಳುನಾಡಿನ ಮೂವರು ಅಭ್ಯರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ವರ್ಷದ ನೀಟ್‌ನಲ್ಲಿ ವಿಫಲನಾಗಿದ್ದ ಧರ್ಮಪುರಿಯ ಯುವಕ. ನಮಕ್ಕಲ್ ಜಿಲ್ಲೆಯ ಮತ್ತೊಬ್ಬ ಯುವ ಅಭ್ಯರ್ಥಿ ಮತ್ತು ಕಳೆದ ಸಲದ ನೀಟ್ ಪರೀಕ್ಷೆಯಲ್ಲಿ ವೇಟಿಂಗ್ ಸ್ಥಾನದಲ್ಲಿದ್ದು ಪ್ರವೇಶ ಪಡೆಯಲು ವಿಫಲಳಾಗಿದ್ದ ಮಧುರೈನ ಯುವತಿ-ಈ ಮೂವರೂ ಈ ವರ್ಷದ ನೀಟ್ ಪರೀಕ್ಷೆಗೆ ನೋಂದಾಯಿಸಿದ್ದು ಭಾನುವಾರ ಪರೀಕ್ಷೆ ಬರೆಯಬೇಕಿತ್ತು.

ಪರೀಕ್ಷೆ ಮುಂದೂಡಲಾಗುವುದಿಲ್ಲ ಎಂಬ ಸುದ್ದಿ ಗೊತ್ತಾದ ನಂತರ ಪರೀಕ್ಷೆಯ ಆತಂಕ ಮತ್ತು ಭಯದಲ್ಲಿ ಈ ಮೂವರು‌ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೊದಲಿನಿಂದಲೂ ಪರೀಕ್ಷೆ ಮುಂದೂಡಲು ಆಗ್ರಹಿಸುತ್ತ ಬಂದಿರುವ ಡಿಎಂಕೆ ಮತ್ತು ಪಿಎಂಕೆ ಪಕ್ಷಗಳು ಶನಿವಾರವೂ ಮುಂದೂಡಲು ಆಗ್ರಹಿಸಿದ್ದವು.

ಅಮೆರಿಕ ಚುನಾವಣೆ: ಆನೆಗೆ ಬೀಳಲಿದೆಯೆ ಕತ್ತೆ ಒದೆ?

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ; ನವೆಂಬರ್ 3ಕ್ಕೆ ನಡೆಯಲಿರುವ ಅಮೆರಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯ ಪ್ರಚಾರ ತೀವ್ರಗೊಂಡಿದೆ. ವಿವಿಧ ದೇಶಗಳ ಮೇಲೆ ಅಮೆರಿಕ ಪ್ರಭಾವ ಸಾಕಷ್ಟಿರುವುದರಿಂದ ಈ ಚುನಾವಣೆ ವಿಶ್ವದ ಇತರ ಭಾಗಗಳಲ್ಲೂ ಕುತೂಹಲಕ್ಕೆ ಕಾರಣವಾಗಿದೆ.

ಟ್ರಂಪ್ ಪ್ರತಿನಿಧಿಸುವ ರಿಪಬ್ಲಿಕ್ ಪಕ್ಷದ ಚಿಹ್ನೆ ಆನೆಗೆ ಡೆಮಾಕ್ರಟಿಕ್ ಪಕ್ಷದ ಚಿಹ್ನೆ ಕತ್ತೆ ಈ ಸಲ ಒದೆ ನೀಡಬಹುದೇ ಎಂಬ ಚರ್ಚೆ ಶುರುವಾಗಿದೆ. ಡೊನಾಲ್ಡ್ ಟ್ರಂಪ್ ಮರು ಆಯ್ಕೆ ಬಯಸಿದ್ದರೆ, ಹಿಂದೊಮ್ಮೆ ಉಪಾಧ್ಯಕ್ಷರಾಗಿದ್ದ ಜೊ ಬಿಡೆನ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

ಭಾರತೀಯ ಮೂಲದ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದಿಂದ ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧೆಯಲ್ಲಿದ್ದರೆ, ರಿಪಬ್ಲಿಕ್ ಪಕ್ಷದಿಂದ ಮೈಕ್ ಪೆನ್ಸೆ ಕಣದಲ್ಲಿದ್ದಾರೆ. ಟ್ರಂಪ್ ಕಾನೂನು ಮತ್ತು ಸುವ್ಯವಸ್ಥೆ ವಿಷಯವನ್ನು ಮುಂದೆ ಇಟ್ಟುಕೊಂಡು, ಅಮೆರಿಕದಲ್ಲಿ ಶಾಂತಿ ನೆಲೆಸಲು ತಮ್ಮಿಂದ ಮಾತ್ರ ಸಾಧ್ಯ ಎಂದು ಪ್ರಚಾರ ಮಾಡುತ್ತಿದ್ದಾರೆ.

ಡೆಮಾಕ್ರಟಿಕ್ ಪಕ್ಷ ‘ಟ್ರಂಪ್ ಅಸಮರ್ಥ ನಾಯಕತ್ವ’ ವಿಷಯವನ್ನು ಮುಖ್ಯ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡಿದೆ. ಅಮೆರಿಕದಲ್ಲಿ ಇತ್ತೀಚೆಗೆ ಕಪ್ಪು ಜನಾಂಗದವರ ಮೇಲೆ ಹೆಚ್ಚಿರುವ ದೌರ್ಜನ್ಯದ ಸಂಗತಿಯೂ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎನ್ನಲಾಗಿದೆ.

ಈಗ ಅಲ್ಲಿ ಬ್ಲಾಂಕ್ ಲೈವ್ಸ್ ಮ್ಯಾಟರ್ ಎಂಬ ಅಭಿಯಾನವೂ ಶುರುವಾಗಿದ್ದು, ಟ್ರಂಪ್ ನೀತಿಗಳೇ ದೌರ್ಜನ್ಯಕ್ಕೆ ಕಾರಣ ಎಂದು ಆರೋಪಿಸಲಾಗಿದೆ.
ಸಮೀಕ್ಷೆಗಳ ಪ್ರಕಾರ, ಸದ್ಯಕ್ಕೆ ಬಿಡೆನ್ ಟ್ರಂಪ್ ಗಿಂತ ಕೊಂಚ ಮುಂದಿದ್ದಾರೆ. ಹೀಗಾಗಿಕೊಬ್ಬಿದ ಆನೆಗೆ ಕತ್ತೆ ಒದೆ ಬೀಳಬಹುದು ಎನ್ನಲಾಗಿದೆ.

ಭಾನುವಾರ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನದ ದರ: ಬೆಂಗಳೂರಿಗಿಂತ ಹುಬ್ಬಳ್ಳಿಯಲ್ಲಿ 600 ರೂ. ದುಬಾರಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ರಾಜ್ಯದ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಏಕರೂಪದ ದರವಿದೆ. ದೆಹಲಿ, ಜೈಪುರ, ಲಕ್ನೋಗಳಲ್ಲಿ ಗರಿಷ್ಠ 54,390 ರೂ. ಇದೆ. ಮುಂಬೈನಲ್ಲಿ ಕನಿಷ್ಠ 50,450 ರೂ. ಇದೆ.

ಬೆಂಗಳೂರು, ಮೈಸೂರು, ಮಂಗಳೂರು: 22 ಕ್ಯಾರಟ್: 48,410 ರೂ., 24 ಕ್ಯಾರಟ್:52,810 ರೂ.
ಹುಬ್ಬಳ್ಳಿ: 22 ಕ್ಯಾರಟ್:48,908 ರೂ., 24 ಕ್ಯಾರಟ್: 53,420 ರೂ.

ಜಿಲ್ಲೆಯಲ್ಲಿ ಶನಿವಾರ 49 ಜನರಿಗೆ ಸೋಂಕು; 206 ಜನ ಗುಣಮುಖ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯಲ್ಲಿ ಶನಿವಾರ ದಿ 12 ರಂದು 49 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

49 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 7359 ಕ್ಕೇರಿದೆ. ಶನಿವಾರ 206 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಇದುವರೆಗೂ 6077 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. 1177 ಜನ ಸಕ್ರಿಯ ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಶನಿವಾರದ ಮಾಹಿತಿಯಂತೆ ಒಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ 105 ಕ್ಕೇರಿದೆ.

ಗದಗ-23, ಮುಂಡರಗಿ-12, ನರಗುಂದ-02, ರೋಣ-03, ಶಿರಹಟ್ಟಿ-01, ಹೊರ ಜಿಲ್ಲೆಯ 08 ಪ್ರಕರಣ ಸೇರಿದಂತೆ ಒಟ್ಟು 49 ಜನರಿಗೆ ಸೋಂಕು ದೃಢಪಟ್ಟಿದೆ.

ಕೊವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು ಈ ರೀತಿ ಇವೆ…

ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಆಶ್ರಯ ಕಾಲೋನಿ, ಕೆ.ಸಿ.ರಾಣಿ ರಸ್ತೆ, ಕುಲಕರ್ಣಿ ಗಲ್ಲಿ, ಹೊಸಪೇಟ ಚೌಕ, ಬಜಾರ ರಸ್ತೆ, ಜಿಮ್ಸ್ ಆಸ್ಪತ್ರೆ, ಕಾಶಿ ವಿಶ್ವನಾಥ ನಗರ, ಜವಳ ಗಲ್ಲಿ, ಹಾತಲಗೇರಿ ರಸ್ತೆ, ಬಸ್ ನಿಲ್ದಾಣದ ಹತ್ತಿರ, ಸರ್ವೋದಯ ಕಾಲೋನಿ, ಬಸವನ ಬಾವಿ ಓಣಿ, ಗದಗ ತಾಲೂಕಿನ ಹೊಂಬಳ, ಮುಳಗುಂದ, ಹಲಗಲಿ, ಹರ್ತಿ, ನಾಗಾವಿ, ಕಿರಟಗೇರಿ.

ಮುಂಡರಗಿ ಪಟ್ಟಣ, ಮುಂಡರಗಿ ತಾಲೂಕಿನ ರಾಮೇನಹಳ್ಳಿ, ಹಿರೇವಡ್ಡಟ್ಟಿ, ವೆಂಕಟಾಪುರ, ನರಗುಂದ ಪಟ್ಟಣದ ಹೊಸೂರ ಓಣಿ, ನರಗುಂದ ತಾಲೂಕಿನ ದಂಡಾಪುರ, ರೋಣ ತಾಲೂಕಿನ ಸೂಡಿ, ಬೊಮ್ಮಸಾಗರ, ಜಕ್ಕಲಿ ರಸ್ತೆ, ಶಿರಹಟ್ಟಿ.

ಅಯೋಗ್ಯ ಸಚಿವ ಬಿ.ಸಿ.ಪಾಟೀಲ ಕಣ್ತೆರೆದು ನೋಡಲಿ; ಕಳಪೆ ಗೊಬ್ಬರ ಮುಂದಿಟ್ಟು ಪಾಟೀಲ ಪ್ರತಿಕೃತಿ ದಹನ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ರೈತರಿಗೆ ಕಳಪೆ ಬೀಜ, ಗೊಬ್ಬರ ಪೂರೈಕೆ ಮಾಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿರುವ ಕೃಷಿ ಸಚಿವ ಬಿ.ಸಿ.ಪಾಟೀಲ ವಿರುದ್ಧ ಕೊಪ್ಪಳದಲ್ಲಿ ಶನಿವಾರ ಹಸಿರು ಸೇನೆ ಸಂಘಟನೆಯ ರೈತರು ಪ್ರತಿಭಟನೆ ನಡೆಸಿ, ಪಾಟೀಲ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಸೆಪ್ಟೆಂಬರ್ 10 ರಂದು ಬೂದಗುಂಪಾ ರೈತನೊಬ್ಬ ಕೊಪ್ಪಳದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 50 ಕೆಜಿ ಗೊಬ್ಬರ ಖರೀದಿಸಿದ್ದಾನೆ. ಗೊಬ್ಬರವನ್ನು ಹೊಲಕ್ಕೆ ಹಾಕುವ ವೇಳೆ ಅನುಮಾನಗೊಂಡ ರೈತ ಅದನ್ನು ಪರೀಕ್ಷಿಸಿ ಪ್ರತಿ ಕೆಜಿಯಲ್ಲಿ 200 ಗ್ರಾಮನಷ್ಟು ಬೂದಿ ಮತ್ತು ಮಣ್ಣು ಕಂಡು ಬಂದಿದೆ. ಕೂಡಲೇ ರೈತ ಸಂಘಟನೆಯ ಮುಖಂಡರಿಗೆ ವಿಷಯ ತಿಳಿಸಿದ್ದು, ಗೊಬ್ಬರ ಸಮೇತ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಅವರನ್ನು, ಅಜ್ಞಾನಿ, ಅಯೋಗ್ಯ ಎಂದು ಜರಿದ ರೈತರು ಆಕ್ರೋಶ ವ್ಯಕ್ತಪಡಿಸಿದರು. ಗೊಬ್ಬರವನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಫಲಿತಾಂಶ ಬಂದ ನಂತರ ಕ್ರಮದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪಿಎಸ್‌ಐ ಆದ ಕುಗ್ರಾಮದ ಯುವತಿ; ರಾಜ್ಯಕ್ಕೆ 26ನೇ ರ‍್ಯಾಂಕ್| ಕೋಚಿಂಗ್ ಇಲ್ಲ| ತನಗೆ ತಾನೇ ರೋಲ್ ಮಾಡೆಲ್

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಮನೆಯಲ್ಲಿ ಹೈಸ್ಕೂಲ್‌ ಗಿಂತ ಜಾಸ್ತಿ ಓದಿದವರಿಲ್ಲ. ಸಾಮಾನ್ಯ ರೈತ ಕುಟುಂಬ. ಅತಿ ಹಿಂದುಳಿದ ತಾಲೂಕಿನ ಹಿಂದುಳಿದ ಗ್ರಾಮದ ನಿವಾಸಿ.
ಇವು ಯಾವುದೂ ಸಹನಾ ಎಂಬ ಯುವತಿಗೆ ಅಡ್ಡಿಯಾಗಲಿಲ್ಲ. ಶುಕ್ರವಾರ ಪ್ರಕಟವಾದ ಪಿಎಸ್‌ಐ ನೇಮಕಾತಿ ಪಟ್ಟಿಯಲ್ಲಿ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ 26ನೇ ರ‍್ಯಾಂಕ್ ಗಳಿಸುವ ಮೂಲಕ ಪಿಎಸ್‌ಐ ಆಗುತ್ತಿದ್ದಾಳೆ ಸಹನಾ.

ಜಿಲ್ಲೆಯ ಶಿರಹಟ್ಟಿ ತಾಲೂಕಿನ ತೆಗ್ಗಿನ ಭಾವನೂರು ಗ್ರಾಮದ ಸಹನಾ ಫಕ್ಕೀರಗೌಡ ಪಾಟೀಲ್ ಈ ಸಾಧನೆ ಮಾಡುವ ಮೂಲಕ ಗ್ರಾಮೀಣ ಭಾಗದ ಯುವಜನರಿಗೆ ಅದರಲ್ಲೂ ಯುವತಿಯರಿಗೆ ಸ್ಪೂರ್ತಿಯಾಗಿದ್ದಾರೆ.

ಇಬ್ಬರು ಅಕ್ಕಂದಿರು ಹೈಸ್ಕೂಲ್‌ವರೆಗೆಷ್ಟೇ ಓದಿ ಮದುವೆಯಾಗಿ ಹೋದರು. ಅಣ್ಣಂದಿರು ಕಾಲೇಜ್ ಮೆಟ್ಟಿಲು ಹತ್ತದೇ, ಕೃಷಿಯಲ್ಲಿ ನಿರತರಾದರು. ಗ್ರಾಮಗಳ ಬಹುಪಾಲು ಕುಟುಂಬಗಳು ಹೆಣ್ಣು ಮಕ್ಕಳನ್ನು ಬಹಳವೆಂದರೆ ಪಿಯುಸಿವರೆಗೆ ಓದಿಸಿ, ಮದುವೆ ಮಾಡಿ ಗಂಡನ ಮನೆಗೆ ಕಳಿಸುತ್ತಾರೆ. ಆದರೆ ಸಹನಾ ಮನೆಯವರು ಎಂದೂ ಓದಿಗೆ ತಡೆ ಹಾಕಲಿಲ್ಲ.

‘ನಮ್ ಮನಿಮಂದಿ ಸಪೋರ್ಟೆ ಇದಕ್ಕೆಲ್ಲ ಕಾರಣ ನೋಡ್ರಿ. ಎಂಎ ಓದಲು ಧಾರವಾಡಕ್ಕೆ ಕಳಿಸಿದರು. ವಿದ್ಯಾಭಾಸದ ಖರ್ಚಿಗೆ ಹಿಂದೆಮುಂದೆ ನೋಡಲಿಲ್ಲ’ ಎಂದು ತನ್ನ ಮನೆಯವರ ಪ್ರೋತ್ಸಾಹವನ್ನು ನೆನೆಯುತ್ತಾರೆ ಸಹನಾ.

ಪಿಯುಸಿ ಹೊರತುಪಡಿಸಿ ಸಹನಾ ಓದಿದ್ದೆಲ್ಲ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿಯೇ. ಅವರ ಪೂರ್ತಿ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ಆಗಿದೆ. ಇದು ಕೂಡ ನಮ್ಮ ಯುವಜನತೆಗೆ ಹೊಸ ಪ್ರೇರಣೆ ನೀಡಬಹುದು. ತೆಗ್ಗಿನ ಭಾವನೂರಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪಕ್ಕದ ಮಾಚೇನಹಳ್ಳಿ ಸರ್ಕಾರಿ ಹೈಸ್ಕೂಲ್‌ನಲ್ಲಿ ಪೌಢ ಶಿಕ್ಷಣ ಪಡೆದ ಸಹನಾ ಪಿಯುಸಿಯನ್ನು ಶಿರಹಟ್ಟಿಯ ಡಬಾಲಿ ಕಾಲೇಜಿನಲ್ಲಿ ಓದಿದರು. ನಂತರ ಶಿರಹಟ್ಟಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಎ ಓದಿದರು. ಐದು ವರ್ಷ ಸತತವಾಗಿ ತಮ್ಮೂರಿನಿಂದ ಶಿರಹಟ್ಟಿಗೆ ಬಸ್ ಪ್ರಯಾಣ ಮಾಡಿ ಕಾಲೇಜು ಮುಗಿಸಿದರು.
ಆಕೆಯ ಬಹುಪಾಲು ಸಹಪಾಠಿಗಳು ಪದವಿ ನಂತರ ಓದನ್ನು ನಿಲ್ಲಿಸಿದರೆ, ಸಹನಾ ಎಂಎ ಓದಲು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಸೇರಿದರು.

ಎಕನಾಮಿಕ್ಸ್ ನಲ್ಲಿ ಎಂಎ ಮುಗಿಸಿದ ನಂತರ ತೆಗ್ಗಿನ ಭಾವನೂರಿಗೆ ಮರಳಿದ ಸಹನಾ, ಮನೆಯಲ್ಲೇ ಕುಳಿತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದತೊಡಗಿದರು. ಇದು ಪಿಎಸ್‌ಐ ಪರೀಕ್ಷೆಯಲ್ಲಿ ಅವರ 2ನೇ ಪ್ರಯತ್ನ. ಮಾರ್ಚ್ 8ರಂದು ಕೊರೋನಾ ಸಂಕಷ್ಟದ ನಡುವೆ 300 ಹುದ್ದೆಗಳಿಗಾಗಿ ನಡೆದ ಪಿಎಸ್‌ಐ ಪರೀಕ್ಷೆಯನ್ನು ಲಕ್ಷಾಂತರ ಅಭ್ಯರ್ಥಿಗಳು ಬರೆದಿದ್ದರು. ತೀವ್ರ ಸ್ಪರ್ಧೆಯ ನಡುವೆಯೂ ಸಹನಾ ಮಹಿಳಾ ಕೆಟಗರಿಯಲ್ಲಿ 26ನೇ ರ‍್ಯಾಂಕ್ ಪಡೆಯುವ ಮೂಲಕ ಮಹತ್ತರ ಸಾಧನೆ ಮಾಡಿದ್ದಾರೆ.

ಈ ಕುರಿತು ವಿಜಯಸಾಕ್ಷಿ ಜೊತೆ ಮಾತನಾಡಿದ ಅವರು, ‘ಮೊದಲಿನಿಂದಲೂ ಪೊಲೀಸ್ ಇಲಾಖೆ ಸೇರುವ ಬಯಕೆ ಇತ್ತು. ಈಗ ಅದು ಈಡೇರಿದೆ’ ಎಂದರು. ಯಾವುದೇ ಕೋಚಿಂಗ್ ಕೇಂದ್ರಕ್ಕೆ ಹೋಗದ ಸಹನಾ ಹಳೆ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿದರು. ಹಲವಾರು ಪುಸ್ತಕಗಳನ್ನು ರೆಫರ್ ಮಾಡಿದರು. ಮೊಬೈಲ್ ನೆರವಿನಿಂದ ಆನ್‌ಲೈನ್ ಮಾಹಿತಿಯನ್ನು ಅಭ್ಯಾಸ ಮಾಡಿದರು. ನಿಯತಕಾಲಿಕೆಗಳನ್ನು ತರಿಸಿ ಓದಿ ಅಪ್ಡೇಟ್ ಆದರು.
‘ನನಗೆ ಸದ್ಯಕ್ಕೆ ನಾನೇ ರೋಲ್ ಮಾಡೆಲ್. ಹಲವು ಅಧಿಕಾರಿಗಳ ಸಾಧನೆ ನೋಡಿದಾಗ ಅದರಿಂದ ಸ್ಪೂರ್ತಿ ಪಡೆದಿದ್ದೇನೆ. ನನ್ನ ಹೈಸ್ಕೂಲ್ ಶಿಕ್ಷಕರು ಸಾಕಷ್ಟು ಬೆಂಬಲ ನೀಡಿದರು’ ಎಂದು ಸಹನಾ ಹೇಳುತ್ತಾರೆ.

‘ಪೊಲೀಸ್ ಠಾಣೆಯಲ್ಲಿ ಗ್ರಾಮೀಣ ಭಾಗದ ಪ್ರಕರಣಗಳೇ ಜಾಸ್ತಿ. ಗ್ರಾಮಭಾಗದ ಸಾಮಾಜಿಕ ಸಂರಚನೆ ಮತ್ತು ಕುಟುಂಬಗಳ ಸಂಬಂಧಗಳನ್ನು ಹತ್ತಿರದಿಂದ ಬಲ್ಲ ನಮ್ಮಂಥವರು ಪಿಎಸ್‌ಐ ಹುದ್ದೆಯಲ್ಲಿದ್ದರೆ ಸಮಸ್ಯೆ ಬಗೆಹರಿಸುವುದು ಸುಲಭವಾಗುತ್ತದೆ. ಗ್ರಾಮೀಣ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಇಲಾಖೆ ಸೇರಬೇಕು’ ಎಂದು ಸಹನಾ ಸಲಹೆ ನೀಡುತ್ತಾರೆ.

‘ಮಹಿಳೆಯರು ಪೊಲೀಸ್ ಇಲಾಖೆಯಲ್ಲಿ ಹೆಚ್ಚಿದಷ್ಠೂ ಒಳ್ಳೆಯದೇ. ಒಬ್ಬ ಮಹಿಳಾ ಅಧಿಕಾರಿ ಮಹಿಳಾ ಸಂತ್ರಸ್ತರ ನೋವುಗಳನ್ನು ಸರಿಯಾಗಿ ಗ್ರಹಿಸಬಲ್ಲಳು. ನೊಂದ ಮಹಿಳೆಯರಿಗೆ ರಕ್ಷಣೆ, ನೆರವು ನೀಡುವುದೇ ನನ್ನ ಉದ್ದೇಶ’ ಎಂದು ಸಹನಾ ತಮ್ಮ ಮನದಾಳದ ಮಾತು ಹೇಳಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ವ್ಯಾಪಕ ವಿರೋಧ: ತೀವ್ರಗೊಂಡ ರೈತರ ಪ್ರತಿಭಟನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಹರಿಯಾಣದಲ್ಲಿ ಶನಿವಾರವೂ ರೈತರು ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡುವ ಮೂಲಕ ಗುರುವಾರ ಆರಂಭಗೊಂಡಿರುವ ಹೋರಾಟವನ್ನು 3ನೇ ದಿನವೂ ಮುಂದುವರೆಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಕೃಷಿ ಸಂಬಂಧಿತ 3 ಮಸೂದೆಗಳನ್ನು, ಅದರಲ್ಲಿ ಮುಖ್ಯವಾಗಿ ಎಪಿಎಂಸಿ ತಿದ್ದಪಡಿ ಮಸೂದೆಯನ್ನು ಭಾರತೀಯ ಕಿಸಾನ್ ಯುನಿಯನ್(ಬಿಕೆಯು) ಸಂಘಟನೆಯ ಅಡಿ ವಿರೋಧಿಸಲಾಗುತ್ತಿದೆ. ಶುಕ್ರವಾರ ಸಂಘಟನೆಯ ನಾಯಕ ಗುರ್ನಮ್ ಸಿಂಗ್ ಚದುಲಿ ಅವರನ್ನು ಬಂಧಿಸಲಾಗಿದ್ದು, ಅವರ ಮೇಲೆ ಸಾಕಷ್ಟು ಕೇಸುಗಳನ್ನು ದಾಖಲಿಸಿರುವುದು ರೈತರಲ್ಲಿ ಆಕ್ರೋಶ ಮೂಡಿಸಿದೆ.

ಸೋಮವಾರದಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದಲ್ಲಿ ಈ 3 ಮಸೂದೆಗಳಿಗೆ ಅಂಗೀಕಾರ ಪಡೆದುಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ‘ಎಪಿಎಂಸಿಗಳನ್ನು ದುರ್ಬಲಗೊಳಸುವ ಹುನ್ನಾರದ ಹಿಂದೆ ಇನ್ನಷ್ಟು ಸಂಚುಗಳಿವೆ. ಮುಂದೆ ಕನಿಷ್ಠ ಬೆಂಬಲ ಬೆಲೆಯಡಿ ರೈತರ ಉತ್ಪನ್ನಗಳನ್ನು ಕೊಳ್ಳುವ ಯೋಜನೆಯನ್ನು ಕೈಬಿಡಲಿದ್ದಾರೆ’ ಎಂದು ರೈತ ಸಂಘಟನೆಗಳು ಆರೋಪಿಸಿವೆ.

ಹರಿಯಾಣದ ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಜನ್‌ನಾಯಕ್ ಜನತಾ ಪಾರ್ಟಿ(ಜೆಜೆಪಿ) ಕೂಡ ಮಸೂದೆ ವಿರೋಧಿಸಿದ್ದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ರೈತರ ಹೋರಾಟಕ್ಕೆ ಹರಿಯಾಣ ಕಾಂಗ್ರೆಸ್ ಸೇರಿದಂತೆ ಇತರ ವಿಪಕ್ಷಗಳು ಬೆಂಬಲಿಸಿವೆ.

ಅಭಿಮಾನಿಗಳ ಹುಚ್ಚೆಬ್ಬಿಸಿದ ಪ್ರಿಯಾಂಕಾ ಫೋಟೊ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಲಾಸ್ ಎಂಜಲೀಸ್‌ನಲ್ಲಿ ‘ಬಾಳ್ವೆ’ ಮಾಡುತ್ತಿರುವ ಪ್ರಿಯಾಂಕಾ ಚೋಪ್ರಾ ಆಗಾಗ ತನ್ನ ಫಾರಿನ್ ಗಂಡ ನಿಕ್ ಜೊತೆಗಿನ ನವಿರಾದ ಫೋಟೊಗಳನ್ನು ಹಾಕುತ್ತಿರುತ್ತಾಳೆ.
ಆದರೆ ಈ ಸಲ ‘ಕಿಸ್ಸಿಂಗ್ ದಿ ಸನ್’ ಎಂಬ ಅಡಿಬರಹದ ಫೋಟೊವೊಂದನ್ನು ಪ್ರಿಯಾಂಕಾ ಇನ್‌ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದು, ಸೂರ್ಯನೆಡೆಗೆ ಮುಖ ಮಾಡಿ, ಮೋಹಿತಳಾಗಿ ಒಂದು ಮುತ್ತನ್ನು ವರ್ಗಾಯಿಸಿದ್ದಾಳೆ.

ಆಕೆಯ ಅಭಿಮಾನಿಗಳು ಥ್ರಿಲ್ ಆಗಿದ್ದು, ‘ನಮ್ಮ ಪಿಂಕಿನೇ ಹಾಟ್ ಹುಡುಗಿ. ಸೂರ್ಯನ ಉರಿ ಆಕೆಗೆ ತಟ್ಟಲ್ಲ’ ಎಂದಿದ್ದಾರೆ. ಹೇರ್‌ಸ್ಟೈಲ್ ಬದಲಿಸಿರುವ ಫೋಟೊವನ್ನೂ ಪಿಂಕಿ ಶೇರ್ ಮಾಡಿಕೊಂಡಿದ್ದಾಳೆ. ಒಟ್ಟು ನ್ಯೂಸ್‌ನಲ್ಲಿರಲು ಏನಾದರೂ ಮಾಡುತ್ತಲೇ ಇರಬೇಕು ಅಲ್ಲವಾ?