Home Blog Page 37

ಭೀಕರ ಅಪಘಾತ: ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗೂಡ್ಸ್ ವಾಹನ ಡಿಕ್ಕಿ, ಓರ್ವ ಸಾವು!

ರಾಮನಗರ:- ರಾಮನಗರ ತಾಲೂಕಿನ ಮಾಯಗಾನಹಳ್ಳಿ ಬಳಿಯ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಭೀಕರ ಅಪಘಾತ ಸಂಭವಿಸಿದೆ.

ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರ ಗಾಯಗೊಂಡಿದ್ದಾನೆ. 25 ವರ್ಷದ ಅಮೀರ್ ಮೃತ ದುರ್ದೈವಿ. ಗೂಡ್ಸ್ ವಾಹನ ಮೈಸೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿತ್ತು. ಈ ವೇಳೆ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

ಅಪಘಾತದ ರಭಸಕ್ಕೆ ಗೂಡ್ಸ್ ವಾಹನ ಸಂಪೂರ್ಣ ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ರಾಮನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.‌

ತೆಂಗಿನ ಹೂವು ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಮುಖ ಪ್ರಯೋಜನಗಳೇನು ಗೊತ್ತಾ..?

0

ಸಾಮಾನ್ಯವಾಗಿ ನಾವು ತೆಂಗಿನಕಾಯಿ ಒಡೆದಾಗ ಅದರೊಳಗೆ ಬಿಳಿ ಬಣ್ಣದ ಹೂವಿನಂತೆ ಕಾಣುವ ಭಾಗ ಕಂಡುಬರುತ್ತದೆ. ಇದನ್ನು ‘ತೆಂಗಿನ ಹೂವು’ ಅಥವಾ ‘ತೆಂಗಿನ ಮೊಳಕೆ’ ಎಂದು ಕರೆಯಲಾಗುತ್ತದೆ.

ಹಲವರು ಇದನ್ನು ರುಚಿಗಾಗಿ ತಿನ್ನುತ್ತಾರೆ, ಆದರೆ ಇದು ಆರೋಗ್ಯಕ್ಕೆ ಎಷ್ಟು ಉಪಕಾರಿ ಎಂಬುದು ಎಲ್ಲರಿಗೂ ತಿಳಿದಿಲ್ಲ. ತಜ್ಞರ ಪ್ರಕಾರ, ಇದು ಒಂದು ಪ್ರಾಕೃತಿಕ ‘ಸೂಪರ್ ಫುಡ್’ ಆಗಿದೆ.

ತೆಂಗಿನ ಹೂವು ತಿನ್ನುವುದರಿಂದ ಸಿಗುವ ಪ್ರಮುಖ ಪ್ರಯೋಜನಗಳು:

1. ಪೋಷಕಾಂಶಗಳ ಭಂಡಾರ:

ತೆಂಗಿನ ಹೂವಿನಲ್ಲಿ ವಿಟಮಿನ್ C, B1, B5, B6 ಮತ್ತು E ಸಮೃದ್ಧವಾಗಿವೆ. ಜೊತೆಗೆ ಪೊಟ್ಯಾಸಿಯಮ್, ಮೆಗ್ನೀಷಿಯಂ ಮತ್ತು ಕಬ್ಬಿಣದಂತಹ ಖನಿಜಾಂಶಗಳು ದೇಹಕ್ಕೆ ಅಗತ್ಯವಾದ ಪೋಷಣೆಯನ್ನು ಒದಗಿಸುತ್ತವೆ.

2. ರೋಗನಿರೋಧಕ ಶಕ್ತಿ ಹೆಚ್ಚಳ:

ಇದರಲ್ಲಿರುವ ಆಂಟಿ-ವೈರಲ್, ಆಂಟಿ-ಬ್ಯಾಕ್ಟೀರಿಯಲ್ ಮತ್ತು ಆಂಟಿ-ಫಂಗಲ್ ಗುಣಗಳು ದೇಹವನ್ನು ವಿವಿಧ ಸೋಂಕುಗಳಿಂದ ರಕ್ಷಿಸಿ, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.

3. ತೂಕ ಇಳಿಕೆಗೆ ಸಹಕಾರಿ:

ಕಡಿಮೆ ಕ್ಯಾಲೊರಿ ಮತ್ತು ಹೆಚ್ಚಿನ ನಾರಿನಂಶ ಇರುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದರಿಂದ ಅತಿಯಾಗಿ ತಿನ್ನುವುದನ್ನು ತಡೆದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

4. ಜೀರ್ಣಕ್ರಿಯೆಗೆ ಉತ್ತಮ:

ನಾರಿನಂಶವು ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡಿ ಜೀರ್ಣಾಂಗ ವ್ಯವಸ್ಥೆ ಸರಾಗವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ.

5. ಹೃದಯದ ಆರೋಗ್ಯ:

ಇದರಲ್ಲಿರುವ ಆರೋಗ್ಯಕರ ಕೊಬ್ಬುಗಳು (MCTs) ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡುತ್ತವೆ.

6. ಮಧುಮೇಹ ನಿಯಂತ್ರಣ:

ಇನ್ಸುಲಿನ್ ಕಾರ್ಯಕ್ಷಮತೆಯನ್ನು ಸುಧಾರಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಸಹಕಾರಿ ಎಂದು ಹೇಳಲಾಗುತ್ತದೆ.

7. ಚರ್ಮ ಮತ್ತು ಕೂದಲಿನ ಆರೈಕೆ:

ಆಂಟಿ-ಆಕ್ಸಿಡೆಂಟ್‌ಗಳು ಚರ್ಮದ ವಯೋ ಲಕ್ಷಣಗಳನ್ನು ಕಡಿಮೆ ಮಾಡಿ, ನೈಸರ್ಗಿಕ ಕಾಂತಿಯನ್ನು ನೀಡುತ್ತವೆ. ಕೂದಲಿನ ಆರೋಗ್ಯಕ್ಕೂ ಸಹಾಯಕ.

8. ತ್ವರಿತ ಶಕ್ತಿ ನೀಡುತ್ತದೆ:

ಸುಸ್ತಾಗಿರುವಾಗ ತೆಂಗಿನ ಹೂವು ಸೇವಿಸಿದರೆ ತಕ್ಷಣ ಶಕ್ತಿ ದೊರೆಯುತ್ತದೆ. ಕ್ರೀಡಾಪಟುಗಳು ಮತ್ತು ದೈಹಿಕ ಶ್ರಮ ಮಾಡುವವರಿಗೆ ಇದು ಉತ್ತಮ ಆಯ್ಕೆ.

ತೆಂಗಿನ ಹೂವು ಕೇವಲ ರುಚಿಕರವಾದದ್ದೇ ಅಲ್ಲ, ಆರೋಗ್ಯಕ್ಕೂ ಅನೇಕ ರೀತಿಯಲ್ಲಿ ಉಪಕಾರಿಯಾಗುತ್ತದೆ. ಪ್ರಕೃತಿಯ ಈ ಸಣ್ಣ ಕೊಡುಗೆಯನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಗಲ್ಫ್ ಯುದ್ಧದ ಎಫೆಕ್ಟ್: ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಭಾರಿ ಹೊಡೆತ, 20 ಲಕ್ಷ ಪ್ರಾಡಕ್ಟ್‌ಗಳ ರಫ್ತು ಸ್ಥಗಿತ!

ಬಳ್ಳಾರಿ:ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧ ಸಂಘರ್ಷ ಬಳ್ಳಾರಿಯ ಜೀನ್ಸ್ ಉದ್ಯಮ ಮೇಲೆ ಭಾರೀ ಪರಿಣಾಮ ಬೀರಿದೆ. ಉದ್ಯಮಕ್ಕೆ ಬೇಕಾಗುತ್ತಿದ್ದ ಕೆಮಿಕಲ್ಸ್ ಸರಬರಾಜು ಸ್ಥಗಿತವಾಗಿದ್ದು, ಉತ್ಪಾದನೆ ಕುಸಿತವಾಗಿದೆ.

ಪ್ರಮುಖವಾಗಿ, ಯುಗಾದಿ ಮತ್ತು ರಂಜಾನ್ ಹಬ್ಬದ ಸಂದರ್ಭದಲ್ಲಿ ಬಳ್ಳಾರಿಯ ಜೀನ್ಸ್ ಪ್ರಾಡಕ್ಟ್‌ಗಳು ಗಲ್ಫ್ ರಾಷ್ಟ್ರಗಳಿಗೆ ರಫ್ತಾಗುತ್ತಿದ್ದು, ಹಬ್ಬದ ಸೀಸನ್‌ನಲ್ಲಿ 20 ಲಕ್ಷ ಜೀನ್ಸ್ ಪ್ಯಾಂಟ್‌ಗಳು ರಫ್ತಿಗೆ ತಡೆ ಬಿದ್ದು ಸಂಕಷ್ಟ ಉಂಟಾಗಿದೆ. ಜೀನ್ಸ್ ಲೇಪನಕ್ಕೆ ಬೇಕಾಗುವ ಕಲರ್ ಕೆಮಿಕಲ್ಸ್ ಕೊರತೆಯಾಗಿ ಶೇ.50ರಷ್ಟು ಉತ್ಪಾದನೆ ಕುಸಿತವಾಗಿದೆ. ಹೈಡ್ರೋಜನ್ ಪೆರಾಕ್ಸೈಡ್, ಸೋಡಿಯಂ ಹೈಪೋಕ್ಲೋರೈಟ್ಸ್, ಪೊಟ್ಯಾಸಿಯಮ್ ಪರ್ಮಾಂಗನೇಟ್ ಮೊದಲ ಕೆಮಿಕಲ್ಸ್ ಸರಬರಾಜು ಸ್ಥಗಿತವಾಗಿರುವುದು ಉದ್ಯಮಕ್ಕೆ ಮತ್ತೊಂದು ಹೊಡೆತ ತಂದುಕೊಂಡಿದೆ.

ಈ ಕೊರತೆಯಿಂದ ಹಬ್ಬದ ಸೀಸನ್‌ನಲ್ಲಿ ಉದ್ಯಮ ನಲುಗುತ್ತಿದೆ ಮತ್ತು ಬೆಲೆ ಏರಿಕೆ, ರಫ್ತು ಕುಸಿತ, ಉದ್ಯೋಗ ಸಮಸ್ಯೆಗಳಿಗೆ ದಾರಿ ತೆರೆಯುತ್ತಿದೆ.

ಚಾಮರಾಜನಗರ: ಧಾರಾಕಾರ ಮಳೆಗೆ ರೈತರಿಗೆ ಭಾರಿ ನಷ್ಟ – ನೆಲಕಚ್ಚಿದ ಬಾಳೆ, ಅಪಾರ ಹಾನಿ!

ಚಾಮರಾಜನಗರ: ನಿನ್ನೆ ಸುರಿದ ಧಾರಾಕಾರ ಮಳೆ ಚಾಮರಾಜನಗರದ ರೈತರಿಗೆ ಅಪಾರ ನಷ್ಟವನ್ನು ಉಂಟುಮಾಡಿದೆ.

ಸುಮಾರು 300 ಕ್ಕೂ ಹೆಚ್ಚು ಪ್ರದೇಶದ ರೈತರಿಗೆ ಬೆಳೆ ನಷ್ಟವಾಗಿದೆ. ಪ್ರಮುಖವಾಗಿ ಬಾಳೆ, ಮೆಣಸಿನಕಾಯಿ, ಟೊಮ್ಯಾಟೊ ಮತ್ತು ಇತರ ತರಕಾರಿ ಬೆಳೆಗಳು ಹಾನಿಗೀಡಾಗಿವೆ.

ಚಾಮರಾಜನಗರ ತಾಲ್ಲೂಕಿನ ಅಮಚವಾಡಿ, ಕಡುವಿನಕಟ್ಟೆ ಹುಂಡಿ, ವೀರನಪುರ, ನಂಜೇದೇವನಪುರ ಸೇರಿದಂತೆ ಹಲವೆಡೆ ಬಾಳೆ ನೆಲಕ್ಕೆ ಅಪ್ಪಳಿಸಿರುವುದು ವರದಿಯಾಗಿದೆ. ರೈತ ವೀರಭದ್ರನಾಯಕ ಅಮಚವಾಡಿ ಗ್ರಾಮದಲ್ಲಿ ಎರಡು ಎಕರೆ ಪ್ರದೇಶದಲ್ಲಿ ಬಾಳೆ ಬೆಳೆದಿದ್ದರು, ಅದರಲ್ಲಿ ಸುಮಾರು 300 ಕ್ಕೂ ಹೆಚ್ಚು ಕಟ್ಟೆ ಮಳೆ, ಗಾಳಿಗೆ ಉರುಳಿ ಬಿದ್ದಿದೆ. ಇದರಿಂದ ಸಾವಿರಾರು ರೂಪಾಯಿ ನಷ್ಟವಾಗಿದೆ.

ಸೂಕ್ತ ಬೆಳೆ ನಷ್ಟ ಭರಿಸುವಂತೆ ರೈತರು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ಯುಗಾದಿ ಹಬ್ಬದ ಸಂಭ್ರಮದ ಸಮಯದಲ್ಲಿ ಈ ಮಳೆಯು ರೈತರಿಗೆ ಸಾಕಷ್ಟು ಆರ್ಥಿಕ ತೊಂದರೆ ಉಂಟುಮಾಡಿದೆ.

ಮಧ್ಯಪ್ರಾಚ್ಯದ ಯುದ್ಧದ ಎಫೆಕ್ಟ್: ತೈಲ ಬಿಕ್ಕಟ್ಟು, ಪಾಕಿಸ್ತಾನದಲ್ಲಿ ಗಣರಾಜ್ಯೋತ್ಸವ ಮೆರವಣಿಗೆ ರದ್ದು!

0

ಇಸ್ಲಾಮಾಬಾದ್: ಮಧ್ಯಪ್ರಾಚ್ಯದ ಯುದ್ಧ ಪರಿಣಾಮವಾಗಿ ಉಂಟಾದ ತೈಲ ಬಿಕ್ಕಟ್ಟಿನಿಂದ ಪಾಕಿಸ್ತಾನವು ಗಂಭೀರ ತೊಂದರೆಯನ್ನು ಎದುರಿಸಿದೆ.

ಈ ಕಾರಣದಿಂದಾಗಿ ಮಾರ್ಚ್ 23 ರಂದು ನಡೆಯಬೇಕಿದ್ದ ಗಣರಾಜ್ಯೋತ್ಸವ ಪರೇಡ್ ರದ್ದುಗೊಂಡಿದೆ ಎಂದು ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಕಚೇರಿ ಮಂಗಳವಾರ ಪ್ರಕಟಿಸಿದೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದ ಉಂಟಾದ ಗಲ್ಫ್ ತೈಲ ಬಿಕ್ಕಟ್ಟೇ ಈ ನಿರ್ಧಾರದ ಪ್ರಮುಖ ಕಾರಣವಾಗಿದೆ.

ಸರ್ಕಾರಿ ಹೇಳಿಕೆಯ ಪ್ರಕಾರ, ಮಾರ್ಚ್ 23 ರಂದು ನಡೆಯಬೇಕಾಗಿದ್ದ ಗಣರಾಜ್ಯೋತ್ಸವ ಪರೇಡ್ ಸೇರಿ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದ್ದು, ಬದಲಾಗಿ ಸರಳ ಧ್ವಜಾರೋಹಣ ಸಮಾರಂಭ ಮಾತ್ರ ನಡೆಯಲಿದೆ. ದೇಶದ ಎಲ್ಲಾ ಸಚಿವಾಲಯಗಳು, ಇಲಾಖೆಗಳು ಮತ್ತು ಘಟಕಗಳಿಗೆ ಈ ಸಂದರ್ಭವನ್ನು ಸರಳ ಹಾಗೂ ಘನತೆಯಿಂದ ಆಚರಿಸಲು ನಿರ್ದೇಶಿಸಲಾಗಿದೆ.

ಪಾಕಿಸ್ತಾನವು ಗಲ್ಫ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲ ಮತ್ತು ಸಂಸ್ಕರಿಸಿದ ಇಂಧನದ ಮೇಲೆ ಹೆಚ್ಚು ಅವಲಂಬಿತವಾಗಿದೆ, ಹೆಚ್ಚಾಗಿ ಹಾರ್ಮುಜ್ ಜಲಸಂಧಿಯ ಮೂಲಕವೇ ಆಗಿತ್ತು. ಪಾಕಿಸ್ತಾನ ಸರ್ಕಾರ ಸೀಮೆಎಣ್ಣೆ ಮತ್ತು ಲಘು ಡೀಸೆಲ್ ಎಣ್ಣೆ ಬೆಲೆಗಳನ್ನು ಹೆಚ್ಚಿಸಿದೆ. ರಂಜಾನ್ ಸಮಯದಲ್ಲಿ ಇಂಧನ ಬೆಲೆಗಳಲ್ಲಿನ ತೀವ್ರ ಏರಿಕೆ ಇನ್ನಷ್ಟು ನೋವಿನಿಂದ ಕೂಡಿದೆ. ಪಾಕಿಸ್ತಾನದ ಬಜೆಟ್ ಈಗಾಗಲೇ ಬಿಕ್ಕಟ್ಟಿನಲ್ಲಿದೆ ಮತ್ತು ಮೂಲಭೂತ ಅವಶ್ಯಕತೆಗಳ ಬೆಲೆಗಳ ಏರಿಕೆ ಮಧ್ಯಮ ವರ್ಗದ ಕುಟುಂಬಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.

ಹೊಸ ವರ್ಷಕ್ಕೆ ದೇಶದ ಜನತೆಗೆ ಶುಭಾಶಯ ಕೋರಿದ ಪಿಎಂ ಮೋದಿ: ಕನ್ನಡಿಗರಿಗೆ ಕನ್ನಡದಲ್ಲೇ ವಿಶ್!

ದೆಹಲಿ: ಯುಗಾದಿ ಮತ್ತು ಹೊಸ ವರ್ಷದ ಶುಭ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.

ದೇಶದ ಜನರಿಗೆ ಪತ್ರ ಬರೆದಿರುವ ಅವರು, ವಸಂತ ಋತುವಿನ ಆಗಮನವು ಹೊಸ ಚೈತನ್ಯ ಮತ್ತು ಅವಕಾಶಗಳನ್ನು ತರಲಿ. ಪವಿತ್ರ ಯುಗಾದಿಯ ಸಂದರ್ಭದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸುಖಮಯ ಹೊಸ ವರ್ಷದ ಶುಭಾಶಯಗಳು” ಎಂದು ಉಲ್ಲೇಖಿಸಿದ್ದಾರೆ.

ಯುಗಾದಿಯು ಹೊಸ ಕೃಷಿ ಚಟುವಟಿಕೆಗಳ ಆರಂಭದ ಕಾಲವಾಗಿರುವುದನ್ನು ಶ್ಲಾಘಿಸಿ, ನಮ್ಮ ದೇಶದ ರೈತರು ಹೊಸ ಆಶಾವಾದದೊಂದಿಗೆ ಮುಂದಿನ ಕೃಷಿ ಚಕ್ರಕ್ಕೆ ಸಜ್ಜಾಗುತ್ತಿರುವುದನ್ನು ಮೋದಿ ಮೆಚ್ಚಿಸಿದ್ದಾರೆ. ಜೀವನದ ಸಿಹಿ-ಕಹಿಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಯುಗಾದಿಯ ಸಾಂಪ್ರದಾಯಿಕ ಸಂದೇಶವನ್ನು ಅವರು ನೆನಪಿಸಿದ್ದಾರೆ. ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಯಶಸ್ಸನ್ನು ಕೃತಜ್ಞತೆಯಿಂದ ಸ್ವೀಕರಿಸಲು ಯುಗಾದಿ ಪ್ರೇರಣೆ ನೀಡುತ್ತದೆ ಎಂದಿದ್ದಾರೆ.

ಇದಲ್ಲದೆ, ಪ್ರಧಾನಿಯವರು ಕರ್ನಾಟಕದ ಜನತೆಗೆ ವಿಶೇಷ ಸಂದೇಶ ನೀಡಿದ್ದಾರೆ. ಸಾಮಾಜಿಕ ಜಾಲತಾಣ X ಮಾಡಿರುವ ಅವರು, “ಕರ್ನಾಟಕದ ನನ್ನ ಎಲ್ಲಾ ಸಹೋದರ-ಸಹೋದರಿಯರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.” ಯುಗಾದಿಯು ಹೊಸ ಭರವಸೆ ಮತ್ತು ಚೈತನ್ಯದ ಹಬ್ಬವಾಗಿದ್ದು, ಇದು ಪ್ರತಿಯೊಬ್ಬರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲಿ ಎಂದು ಅವರು ಹಾರೈಸಿದ್ದಾರೆ.

ಮುಂಬರುವ ವರ್ಷವು ಎಲ್ಲರ ಮನೆಮನಗಳಲ್ಲಿ ಸುಖ, ಶಾಂತಿ, ಆರೋಗ್ಯ ಮತ್ತು ಐಶ್ವರ್ಯ ತುಂಬಲಿ ಎಂದು ಪ್ರಧಾನಿ ಮೋದಿ ಪ್ರಾರ್ಥಿಸಿದ್ದಾರೆ.

KMFಗೂ ಎದುರಾದ ಸಂಕಷ್ಟ! ಇನ್ನೆರಡು ದಿನ ಕಳೆದ್ರೆ ಸಿಗಲ್ಲ ನಂದಿನಿ ಉತ್ಪನ್ನಗಳು; ಕಾರಣ?

ಬೆಂಗಳೂರು: ಯುಗಾದಿ ಹಬ್ಬದ ವೇಳೆಯೇ ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ KMF ಕ್ಕೂ ಸಂಕಷ್ಟ ಎದುರಾಗಿದೆ.

ಇತ್ತೀಚಿನ ಇರಾನ್-ಇಸ್ರೇಲ್ ಸೇನಾ ಸಂಘರ್ಷ ಹಾಗೂ ದೇಶಾದ್ಯಂತ ಉಂಟಾಗಿರುವ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಕೊರತೆ ಪರಿಣಾಮ ನಂದಿನಿ ಉತ್ಪನ್ನಗಳ ಮೇಲೂ ತಟ್ಟತೊಡಗಿದೆ. ಕಳೆದ ಕೆಲ ದಿನಗಳಿಂದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳ ಸರಬರಾಜು ವ್ಯತ್ಯಯಗೊಂಡಿರುವುದರಿಂದ, ಕೆಎಂಎಫ್ ಉತ್ಪಾದನಾ ಘಟಕಗಳು ಒತ್ತಡಕ್ಕೆ ಸಿಲುಕಿವೆ. ಸಾಮಾನ್ಯವಾಗಿ ತಿಂಗಳಿಗೆ 450 ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಳಸುವ ಕೆಎಂಎಫ್, ಇತ್ತೀಚೆಗೆ ಅಗತ್ಯ ಪ್ರಮಾಣದಲ್ಲಿ ಸಿಲಿಂಡರ್‌ಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.

ಅಧಿಕಾರಿಗಳ ಮಾಹಿತಿ ಪ್ರಕಾರ, ಸದ್ಯ ಲಭ್ಯವಿರುವ ಗ್ಯಾಸ್ ಸಂಗ್ರಹವು ಮತ್ತೆರಡು ದಿನಗಳಿಗೆ ಮಾತ್ರ ಸಾಕಾಗಲಿದೆ. ಮಾರ್ಚ್ 20ರೊಳಗೆ ಪೂರೈಕೆ ಆಗದಿದ್ದರೆ, ನಂದಿನಿ ಬ್ರ್ಯಾಂಡ್‌ನ ಹಾಲು, ಸಿಹಿ-ಖಾರದ ತಿಂಡಿಗಳ ತಯಾರಿಕೆ ಮೇಲೆ ನೇರ ಪರಿಣಾಮ ಬೀಳುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.

ದಕ್ಷಿಣ ಭಾರತದ ಪ್ರಮುಖ ಹಾಲು ಸಹಕಾರ ಒಕ್ಕೂಟವಾಗಿರುವ ಕೆಎಂಎಫ್, ವಾರ್ಷಿಕವಾಗಿ ₹25,000–30,000 ಕೋಟಿ ವಹಿವಾಟು ನಡೆಸುತ್ತದೆ. ದಿನಕ್ಕೆ ಸರಾಸರಿ 85–90 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, 40 ಲಕ್ಷ ಲೀಟರ್‌ಗಿಂತ ಹೆಚ್ಚು ಹಾಲು ಮಾರಾಟವಾಗುತ್ತದೆ. ಉಳಿದ ಹಾಲನ್ನು ಮೊಸರು, ಮಜ್ಜಿಗೆ, ತುಪ್ಪ, ಬೆಣ್ಣೆ ಮತ್ತು ನಂದಿನಿ ಸ್ವೀಟ್ಸ್‌ಗಳಂತೆ ಮೌಲ್ಯವರ್ಧಿತ ಉತ್ಪನ್ನಗಳಾಗಿ ಪರಿವರ್ತಿಸಿ ಮಾರಾಟ ಮಾಡಲಾಗುತ್ತದೆ.

ನಂದಿನಿ ಬ್ರ್ಯಾಂಡ್ ಅಡಿಯಲ್ಲಿ 140ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಲಾಗುತ್ತಿದ್ದು, ಅರಬ್ ರಾಷ್ಟ್ರಗಳು, ಸಿಂಗಾಪುರ ಮತ್ತು ಅಮೆರಿಕದಂತಹ ದೇಶಗಳಿಗೂ ರಫ್ತಾಗುತ್ತದೆ. ಹಬ್ಬದ ಸಮಯದಲ್ಲಿ ಸಿಹಿ ತಿಂಡಿಗಳ ಮಾರಾಟ ಹೆಚ್ಚಾಗುವುದರಿಂದ, ಪ್ರಸ್ತುತ ಗ್ಯಾಸ್ ಕೊರತೆ ಈ ಬೃಹತ್ ವಹಿವಾಟಿನ ಮೇಲೆ ನೇರ ಪರಿಣಾಮ ಬೀರುವ ಆತಂಕವನ್ನು ಉಂಟುಮಾಡುತ್ತಿದೆ.

ಯುಗಾದಿ ಸಂಭ್ರಮ: ಬೆಂಗಳೂರಲ್ಲಿ ಖರೀದಿ ಭರಾಟೆ ಜೋರು!

ಬೆಂಗಳೂರು: ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆಮಾಡಿದೆ.

ಬೆಂಗಳೂರಿನಲ್ಲಿ ಹಬ್ಬದ ಖರೀದಿ ಜೋರಾಗಿ ನಡೆಯುತ್ತಿದೆ. ಕೆಆರ್ ಮಾರುಕಟ್ಟೆಯಲ್ಲಿ ಕಿಕ್ಕಿರಿದು ಜನ ತುಂಬಿದ್ದಾರೆ. ಹೂವು,ಹಣ್ಣು, ಮಾವಿನ ಸೊಪ್ಪು, ಬೇವಿನಸೊಪ್ಪು ಖರೀದಿಸಲು ಜನರು ಮುಗಿಬಿದ್ದಿದ್ದಾರೆ. ಮಧ್ಯರಾತ್ರಿಯಿಂದಲೇ ಕೆ.ಆರ್ ಮಾರ್ಕೆಟ್ ನಲ್ಲಿ ವ್ಯಾಪಾರ ಆರಂಭಗೊಂಡಿದೆ.

ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿಗರು ಆಗಮಿಸಿ ಹೂವು, ಹಣ್ಣು, ಮಾವಿನ ಸೊಪ್ಪು, ಬೇವಿನ ಸೊಪ್ಪು ಖರೀದಿಸಲು ಮುಗಿಬಿದ್ದಿದ್ದಾರೆ. ಹಬ್ಬದ ಪ್ರಯುಕ್ತ ಹೂವಿಗೆ ಬೇಡಿಕೆ ಹೆಚ್ಚಾಗಿದೆ. ಕನಕಾಂಬರ, ಮಲ್ಲಿಗೆ, ಗುಲಾಬಿ, ಸುಗಂಧರಾಜ, ಸೇವಂತಿಗೆ ಸೇರಿದಂತೆ ಹೂವಿನ ದರಗಳು ಏರಿಕೆಯಾಗಿವೆ.

ಹೂವು ದರಗಳು:

  • ಮಲ್ಲಿಗೆ: 1,500–1,800 ರೂ.
  • ಮಲ್ಲಿಗೆ ಹಾರ: 300–500 ರೂ.
  • ಸೇವಂತಿಗೆ: 200–250 ರೂ.
  • ಗುಲಾಬಿ: 250 ರೂ.
  • ಚೆಂಡು ಹೂ: 40–50 ರೂ.

ಸೊಪ್ಪು ದರಗಳು:

  • ಒಂದು ಕಟ್ಟು ಬೇವಿನ ಸೊಪ್ಪು: 20 ರೂ.
  • ಒಂದು ಕಟ್ಟು ಮಾವಿನ ಸೊಪ್ಪು: 25 ರೂ.

ಯುಗಾದಿ ಎರಡು ದಿನಗಳ ಹಬ್ಬ. ಮೊದಲ ದಿನ ಸಿಹಿ ಖಾದ್ಯಗಳನ್ನು ಸವಿಯುತ್ತಾರೆ. ಎರಡನೇ ದಿನ ಹೊಸ ತೊಡಕು ಅಂಗವಾಗಿ ಮಾಂಸದ ತರಹೇವಾರಿ ಖಾದ್ಯಗಳೊಂದಿಗೆ ಹಬ್ಬ ಸಂಪನ್ನಗೊಳಿಸುತ್ತಾರೆ. ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಹೊಸ ತೊಡಕು ವಿಜೃಂಭಣೆಯಿಂದ ನಡೆಯುತ್ತದೆ.

ಭಾರೀ ಪ್ರಮಾಣದಲ್ಲಿ ಒಡೆದ ತುಂಗಭದ್ರಾ ಎಡದಂಡೆ ಕಾಲುವೆ, ಬೃಹತ್ ಗಾತ್ರದ ಮೀನು ಕಂಡು ಅಚ್ಚರಿಗೊಂಡ ಜನ!

ಕೊಪ್ಪಳ: ನಾಲ್ಕೈದು ಜಿಲ್ಲೆಗಳ ಕೃಷಿ ಹಾಗೂ ಕುಡಿಯುವ ನೀರಿನ ಜೀವನಾಡಿಯಾಗಿರುವ ತುಂಗಭದ್ರ ಜಲಾಶಯದ ಎಡದಂಡೆ ಮುಖ್ಯ ಕಾಲುವೆ ಭಾರಿ ಪ್ರಮಾಣದಲ್ಲಿ ಒಡೆದು ಆತಂಕ ಸೃಷ್ಟಿಸಿದೆ.

ಜಲಾಶಯದ ಅಧಿಕಾರಿಗಳು ಕುಡಿಯುವ ನೀರಿನ ಉದ್ದೇಶಕ್ಕಾಗಿ ಕಾಲುವೆಗೆ ನೀರು ಬಿಡಲಾಗಿತ್ತು. ನಾಲ್ಕು ಜಿಲ್ಲೆಗಳಿಗೆ ನೀರು ಪೂರೈಸುವ ಈ ಕಾಲುವೆ ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಬಳಿ ಒಡೆದ ಪರಿಣಾಮ, ನೀರು ಪಕ್ಕದ ಜಮೀನುಗಳು ಹಾಗೂ ರೆಸಾರ್ಟ್ ಪ್ರದೇಶಗಳಿಗೆ ನುಗ್ಗಿ ಹಾನಿ ಉಂಟುಮಾಡಿದೆ.

ಘಟನೆ ತಿಳಿದು ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತುರ್ತು ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಇದೇ ವೇಳೆ ಕಾಲುವೆ ಒಡೆದ ಪರಿಣಾಮ ಸ್ಥಳೀಯರ ಬಲೆಗೆ ಬೃಹತ್ ಮೀನುಗಳು ಸಿಕ್ಕಿವೆ. ಅದರಲ್ಲಿ ವಿಶೇಷವಾಗಿ ಸುಮಾರು 15ರಿಂದ 20 ಕೆಜಿ ತೂಕದ ಮೀನು ಸಿಕ್ಕಿದ್ದು, ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ಕಾಲುವೆ ಒಡೆತದಿಂದ ಒಂದು ಕಡೆ ಹಾನಿ ಉಂಟಾದರೆ, ಇನ್ನೊಂದು ಕಡೆ ಅಪರೂಪದ ಮೀನು ಸಿಕ್ಕಿದ್ದು ಗ್ರಾಮಸ್ಥರ ಗಮನ ಸೆಳೆದಿದೆ.

ಒಣ ಕೆಮ್ಮಿನ ಸಮಸ್ಯೆ ಹೆಚ್ಚಾಗಿದ್ಯಾ!? ನಿರ್ಲಕ್ಷ್ಯ ಬೇಡ, ಮುನ್ನೆಚ್ಚರಿಕೆ ವಹಿಸಿ!

0

ದೇಶದ ಹಲವು ರಾಜ್ಯಗಳಲ್ಲಿ ಇತ್ತೀಚೆಗೆ ಹವಾಮಾನದಲ್ಲಿ ತೀವ್ರ ಬದಲಾವಣೆ ಕಂಡುಬರುತ್ತಿದ್ದು, ಇದರಿಂದ ಒಣ ಕೆಮ್ಮಿನ ಸಮಸ್ಯೆ ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ.

ಬೆಳಿಗ್ಗೆ ಬಿಸಿಲು ಮತ್ತು ಸಂಜೆ ತಂಪಾದ ವಾತಾವರಣದ ನಡುವಿನ ವ್ಯತ್ಯಾಸದಿಂದ ದೇಹ ಹೊಂದಿಕೊಳ್ಳಲು ಕಷ್ಟವಾಗುತ್ತಿದ್ದು, ಅನೇಕರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ವೈದ್ಯರ ಪ್ರಕಾರ, ಹವೆಯಲ್ಲಿ ಇರುವ ಧೂಳು, ಹೊಗೆ, ಸಣ್ಣ ಕಣಗಳು ಹಾಗೂ ಮಾಲಿನ್ಯ ಒಣ ಕೆಮ್ಮಿಗೆ ಪ್ರಮುಖ ಕಾರಣಗಳಾಗಿವೆ. ವಿಶೇಷವಾಗಿ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ಸಮಸ್ಯೆ ಹೆಚ್ಚು ಕಂಡುಬರುತ್ತಿದೆ.

ಒಣ ಕೆಮ್ಮಿನ ಲಕ್ಷಣಗಳಾಗಿ ಗಂಟಲಿನಲ್ಲಿ ಉರಿ ಭಾವನೆ, ನಿರಂತರ ಕೆಮ್ಮು, ಗಂಟಲು ಒಣಗುವುದು ಹಾಗೂ ಮಾತನಾಡುವಾಗ ತೊಂದರೆ ಅನುಭವಿಸುವುದು ಕಾಣಿಸಬಹುದು. ಕೆಲವರಲ್ಲಿ ರಾತ್ರಿ ವೇಳೆ ಕೆಮ್ಮು ಹೆಚ್ಚಾಗಿ ನಿದ್ರೆ ವ್ಯತ್ಯಯ ಉಂಟಾಗುತ್ತದೆ. ಕೆಲ ಸಂದರ್ಭಗಳಲ್ಲಿ ಎದೆ ಭಾಗದಲ್ಲಿ ಒತ್ತಡ ಅಥವಾ ಜಡತ್ವವೂ ಕಾಣಿಸಬಹುದು.

ಸಾಮಾನ್ಯವಾಗಿ ಒಣ ಕೆಮ್ಮು ಒಂದರಿಂದ ಎರಡು ವಾರಗಳವರೆಗೆ ಮುಂದುವರಿಯಬಹುದು. ಆದರೆ ದೀರ್ಘಕಾಲ ಮುಂದುವರಿದರೆ ಅಥವಾ ಜ್ವರ, ಉಸಿರಾಟದ ತೊಂದರೆ ಹಾಗೂ ದುರ್ಬಲತೆ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ತಜ್ಞರು ಸೂಚಿಸಿದ್ದಾರೆ.

ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಮುಖ್ಯ. ಸಮತೋಲನ ಆಹಾರ ಸೇವನೆ, ವಿಟಮಿನ್ ಹಾಗೂ ಖನಿಜಾಂಶಗಳಿರುವ ಆಹಾರಗಳನ್ನು ತೆಗೆದುಕೊಳ್ಳುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ಗಂಟಲು ಒಣಗದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ.

ಇದಲ್ಲದೆ, ತಣ್ಣನೆಯ ಪದಾರ್ಥಗಳನ್ನು ತಗ್ಗಿಸುವುದು, ಧೂಳು ಮತ್ತು ಮಾಲಿನ್ಯದಿಂದ ದೂರವಿರುವುದು, ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು ಸಹಕಾರಿ. ಬಿಸಿ ನೀರಿನ ಆವಿ ತೆಗೆದುಕೊಳ್ಳುವುದು ಮತ್ತು ಉಪ್ಪು ನೀರಿನಿಂದ ಗಾರ್ಗ್ಲ್ ಮಾಡುವುದರಿಂದಲೂ ಒಣ ಕೆಮ್ಮು ನಿಯಂತ್ರಣಕ್ಕೆ ಸಹಾಯವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

error: Content is protected !!