Home Blog Page 37

ದೇಶ ಹಾಗೂ ರಾಜ್ಯದ ಬೆಳವಣಿಗೆಗೆ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ: ಡಿ.ಕೆ. ಶಿವಕುಮಾರ್

ಬೆಂಗಳೂರು: ಅನೇಕ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳು ಈ ದೇಶ ಹಾಗೂ ರಾಜ್ಯದ ಶಿಕ್ಷಣ ವ್ಯವಸ್ಥೆಗೆ ಸಾಕಷ್ಟು ಕೊಡುಗೆ ನೀಡಿವೆ. ಅನೇಕ ನಾಯಕರನ್ನು ಹುಟ್ಟುಹಾಕಿವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಣ್ಣಿಸಿದರು. ಜ್ಯೋತಿ ನಿವಾಸ್ ಶಿಕ್ಷಣ ಸಂಸ್ಥೆ ಶುಕ್ರವಾರ ಆಯೋಜಿಸಿದ್ದ ‘ಕಾಲೇಜು ದಿವಸ’ ದಲ್ಲಿ ಭಾಗವಹಿಸಿ ಮಾತನಾಡಿದರು.

“60 ವರ್ಷಗಳ ಕಾಲ ಅತ್ಯುತ್ತಮ ಸೇವೆಯನ್ನು ಜ್ಯೋತಿ ನಿವಾಸ ಸಂಸ್ಥೆ ಮಾಡಿದೆ. ಈ ಕಾಲೇಜಿನ ಅನೇಕ ವಿದ್ಯಾರ್ಥಿಗಳನ್ನು ನಾನು ಬೇರೆ,‌ ಬೇರೆ ದೇಶಗಳಲ್ಲಿ ಭೇಟಿ ಮಾಡಿದ್ದೇನೆ. ಗ್ಲೋಬಲ್ ಮಟ್ಟದಲ್ಲಿ ಅನೇಕ ಪ್ರತಿಭಾವಂತರನ್ನು ಈ ಸಂಸ್ಥೆ ಕೊಡುಗೆಯಾಗಿ ಕೊಟ್ಟಿದೆ” ಎಂದರು.

“ಪ್ರತಿಭೆಯ ಜೊತೆಗೆ ಸಂವಹನ ಮುಖ್ಯವಾದುದು. ನಾನು ರಾಜಕಾರಣಿ ಇರಬಹುದು‌ ಆದರೆ ನಾನು ಶಿಕ್ಷಣ ಪ್ರೇಮಿ. ಅಂತಿಮವಾಗಿ ನಮ್ಮನ್ನೆಲ್ಲಾ ಕಾಪಾಡುವುದೇ ಶಿಕ್ಷಣ. ನೀವು ಉದಾಹರಣೆ ಕೊಡುವುದು ತುಂಬಾ ಸುಲಭ. ಅದೇ ಎಲ್ಲರಿಗೂ ಉದಾಹರಣೆಯಾಗಿ ಬೆಳೆಯುವುದು ಕಠಿಣ ಕೆಲಸ” ಎಂದರು.

“ನಾನು ಕನಕಪುರದ ಸಣ್ಣ ಹಳ್ಳಿಯಿಂದ ಬಂದವನು. ಮೊದಲು ಸೆಂಟ್ ಥಾಮಸ್ ಶಾಲೆಯಲ್ಲಿ ಕಲಿತೆ. ನಂತರ ಎನ್ ಪಿಎಸ್ ಸೇರಿದೆ ಅಲ್ಲಿಂದ ನನ್ನ ಕಿತ್ತು ಹಾಕಿದರು. ಪದವಿ ಓದುವಾಗ ಎಲೆಕ್ಷನ್ ಗೆ ನಿಂತ ಕಾರಣಕ್ಕೆ ಪೂರ್ಣಗೊಳಿಸಲು ಆಗಲಿಲ್ಲ. ಕಡಿಮೆ ವಯಸ್ಸಿಗೆ ಶಾಸಕನಾದೇ. ಸದನದಲ್ಲಿ ಘಟಾನುಘಟಿ ನಾಯಕರ ಮಾತನ್ನು ಕೇಳಿ ನಾನು ಓದಬೇಕು ಎಂದು 46 ನೇ ವಯಸ್ಸಿನಲ್ಲಿ ಪದವಿ ಓದಿದೆ” ಎಂದರು.

“ಹೊಸ ಮಹಿಳಾ ನಾಯಕಿಯರು ಬೆಳೆಯಬೇಕು. ಶೇ 33 ರಷ್ಟು ಮೀಸಲಾತಿ ರಾಜಕೀಯ ಕ್ಷೇತ್ರದಲ್ಲಿದೆ. ಸ್ಥಳೀಯ ಸಂಸ್ಥೆಗಳಲ್ಲಿ 50 ರಷ್ಟು ಮೀಸಲಾತಿ ನೀಡಲಾಗಿದೆ. ಭವಿಷ್ಯದಲ್ಲಿ ಈ ಕಾಲೇಜಿನಿಂದ ನಾಯಕಿಯರು ಹೊರಬರಬೇಕು ಎಂದು ಆಶಿಸುತ್ತೇನೆ” ಎಂದರು.

“ಮೂಲವನ್ನು ಮರೆತರೆ ಫಲ ದೊರೆಯುವುದಿಲ್ಲ. ಬೇರು ಗಟ್ಟಿಯಾಗಿರಬೇಕು ಆಗ ಮಾತ್ರ ಸಾಧನೆ ಮಾಡಲು ಸಾಧ್ಯ. ನಾನು ಡಿಸಿಎಂ ಇರಬಹುದು ಆದರೆ ನನ್ನ ಗುರುಗಳು ಎದುರಾದಾಗ ಅವರಿಗೆ ನಮಸ್ಕರಿಸುತ್ತೇನೆ. “ನಾವೆಲ್ಲರೂ ಒಬ್ಬರಿಗೊಬ್ಬರು ಆಧಾರವಾಗಿದ್ದು ಬೆಳೆಯಬೇಕು. ಪ್ರತಿಭೆಯನ್ನು ಬಚ್ಚಿಟ್ಟುಕೊಳ್ಳಬಾರದು. ಜ್ಞಾನವನ್ನು ಹಂಚಬೇಕು. ಹಂಚಿದಾಗ ಮಾತ್ರ ಪ್ರಗತಿ ಸಾಧ್ಯ” ಎಂದರು.

ಎಲ್ಲರೂ ಜ್ಞಾನ ಹಂಚಿಕೊಂಡು ಬಾಳಬೇಕು

ನಾವೆಲ್ಲರೂ ಜ್ಞಾನ, ಸಂಪತ್ತನ್ನು ಹಂಚಿಕೊಂಡು ಬಾಳಬೇಕು. ಪ್ರತಿಯೊಬ್ಬ ಶಿಕ್ಷಕನೂ ವಿದ್ಯಾರ್ಥಿಯೇ ಏಕೆಂದರೆ ಶಿಕ್ಷಕ ಜ್ಞಾನವನ್ನ ತುಂಬಿಕೊಳ್ಳದೇ ಹೋದರೆ ಜ್ಞಾನವನ್ನು ಹಂಚಲು ಸಾಧ್ಯವಿಲ್ಲ. ಈಗ ಎಐ ಯುಗ ದಿನದಿಂದ ದಿನಕ್ಕೆ ಎಲ್ಲವೂ ಬದಲಾಗುತ್ತಿದೆ. ನನ್ನ ಮಾಧ್ಯಮ ಸಲಹೆಗಾರರು ಭಾಷಣ ನೀಡಲು ಬಂದಾಗ ನನ್ನ ಮಗಳು ಚಾಟ್ ಜಿಪಿಟಿ ಮೂಲಕ ಯಾವ ಮಾಹಿತಿ ಬೇಕಾದರೂ ನೀನು ಪಡೆಯಬಹುದು ಎಂದು ತೋರಿಸಿಕೊಟ್ಟಳು. ಇಂದಿನ ಜನಾಂಗ ತಾಂತ್ರಿಕವಾಗಿ ಬಹಳ ಮುಂದಿದ್ದಾರೆ. ನನಗೆ ಅಷ್ಟಾಗಿ ಕಂಪ್ಯೂಟರ್ ಬಳಕೆ ಅಷ್ಟಾಗಿ ತಿಳಿದಿಲ್ಲ. ಮೊಬೈಲ್ ಬಳಕೆಯೂ ಕಡಿಮೆ” ಎಂದರು.

“ಇದು ವಿದ್ಯಾರ್ಥಿಗಳ‌ ಕಾಲ ಅವರು ತಮಗೆ ಬೇಕಾದ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯುತ್ತಾರೆ. ಗುರುಗಳಿಗಿಂತ ಮುಂಚಿತವಾಗಿಯೇ ತಿಳಿದುಕೊಂಡಿರುತ್ತಾರೆ. ಇತ್ತೀಚೆಗೆ ದಾವೋಸ್ ನಲ್ಲಿ ನಡೆದ ಸಮ್ಮೇಳನಕ್ಕೆ ತೆರಳಿದ್ದೆ. ಅಲ್ಲಿ ಅನೇಕ ದೇಶಗಳ ಪ್ರತಿನಿಧಿಗಳ ಜೊತೆ ಮಾತನಾಡುವಾಗ ಎಲ್ಲರಿಗೂ ಬೆಂಗಳೂರು ಬಗ್ಗೆ ಜ್ಞಾನವಿದೆ.‌ ಬೆಂಗಳೂರು ಅತ್ಯುತ್ತಮ ಹವಾಗುಣ, ಸಂಸ್ಕೃತಿ, ಪ್ರತಿಭಾವಂತರನ್ನು ಹೊಂದಿರುವ ನಗರ” ಎಂದರು.

“ಬೆಂಗಳೂರಿನ ಮೂಲಕ ಭಾರತವನ್ನು ನೋಡಲಾಗುತ್ತದೆ ಎಂದು ಅಟಲ್ ಬಿಹಾರಿ ವಾಜಪೇಯಿ ಅವರು ಈ ಹಿಂದೆ ಹೇಳಿದ್ದರು. ಏಕೆಂದರೆ ಅಷ್ಟೊಂದು ಜ್ಞಾನವಂತರು, ಪ್ರತಿಭಾವಂತರು ಇಲ್ಲಿದ್ದಾರೆ. ಪ್ರತಿವರ್ಷ ಕರ್ನಾಟಕದಿಂದ ಅಂದಾಜು 1.6 ಲಕ್ಷ ಎಂಜಿನಿಯರ್ ಮುಗಿಸಿದವರು ಹೊರ ಬರುತ್ತಿದ್ದಾರೆ. 270 ಕ್ಕೂ ಹೆಚ್ಚು ಎಂಜಿನಿಯರಿಂಗ್, 1160 ಐಟಿಐ ಕಾಲೇಜುಗಳಿವೆ. 72 ಮೆಡಿಕಲ್ ಕಾಲೇಜುಗಳಿದ್ದು 13 ಸಾವಿರಕ್ಕೂ ಮಿಗಿಲಾಗಿ ವೈದ್ಯರನ್ನು ಕರ್ನಾಟಕ ತಯಾರು ಮಾಡುತ್ತಿದೆ. 26 ಲಕ್ಷ ಐಟಿ ಉದ್ಯೋಗಿಗಳಿದ್ದಾರೆ. 2 ಲಕ್ಷ ವಿದೇಶಿಗರು ಕೆಲಸ ಮಾಡುತ್ತಿದ್ದಾರೆ. ಇದೆಲ್ಲಾ ಸಾಧ್ಯವಾಗಿದ್ದು ಜ್ಯೋತಿ ನಿವಾಸ, ಸೆಂಟ್ ಜೋಸೆಫ್, ಮೌಂಟ್ ಕಾರ್ಮೆಲ ನಂತಹ ಸಂಸ್ಥೆಗಳಿಂದ” ಎಂದು ಬಣ್ಣಿಸಿದರು.

“ನಾನು ತಂದೆಯಾಗಿ ಮಕ್ಕಳ ಹುಟ್ಟುಹಬ್ಬವನ್ನ ಮನೆಯಲ್ಲಿ ಆಚರಿಸುತ್ತೇನೆ. ಆದರೆ ನನಗೆ ನನ್ನ ಹುಟ್ಟುಹಬ್ಬ ಎಂದರೆ ಸ್ವಲ್ಪ ಹಿಂಜರಿಕೆ. ಇಪ್ಪತ್ತೈದು ವರ್ಷಗಳ ಹಿಂದೆ ಒಂದು ಸಮ್ಮೇಳನದಲ್ಲಿ ಭಾಗವಹಿಸುವ ಸಲುವಾಗ ಪ್ಯಾರಿಸ್ ಗೆ ತೆರಳಿದ್ದೆ. ಆ ದಿನ ನನ್ನ ಹುಟ್ಟುಹಬ್ಬ ಎಂದು ಹೇಗೋ ಅಲ್ಲಿದ್ದವರಿಗೆ ತಿಳಿದು ಹೋಯಿತು. ಆಗ ನನ್ನನ್ನು ವೇದಿಕೆ ಮೇಲೆ ಕರೆದರು. ನಾನು ಹಳ್ಳಿಗಾಡಿನಿಂದ ಬಂದ ವ್ಯಕ್ತಿ.‌ ಹುಟ್ಟುಹಬ್ಬ ಆಚರಿಸುವ ಸಂಸ್ಕೃತಿ ನಮ್ಮ ಕಡೆ ಇರಲಿಲ್ಲ. ಆದರೂ ಕೇಕ್ ತಂದು ಅದರ‌ ಮೇಲೆ ಮೇಣದಬತ್ತಿಯಿಟ್ಟು ಹಚ್ಚಿದ ನಂತರ ಅದನ್ನು ನಂದಿಸುವಂತೆ ತಿಳಿಸಿದರು.

“ಶಿವನ ಅವತಾರ” ಎಂದು ನಂಬಿಸಿ ಮಹಿಳೆ ಮೇಲೆ ರೇಪ್: ಸ್ವಯಂ ಘೋಷಿತ ದೇವಮಾನವ ಬಂಧನ

0

ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ತಾನು ಶಿವನ ಅವತಾರ ಎಂದು ಹೇಳಿಕೊಂಡಿದ್ದ ಸ್ವಯಂ ಘೋಷಿತ ದೇವಮಾನವನೊಬ್ಬ 35 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಬಂಧಿತನನ್ನು ಋಷಿಕೇಶ್ ವೈದ್ಯ (40) ಎಂದು ಗುರುತಿಸಲಾಗಿದೆ. ಪುಣೆಯ ಮಹಿಳೆ 2023ರಲ್ಲಿ ಫೇಸ್ಬುಕ್ ಮೂಲಕ ಆರೋಪಿಗೆ ಪರಿಚಯವಾಗಿದ್ದಳು. ಅದೇ ವರ್ಷದ ಡಿಸೆಂಬರ್‌ನಲ್ಲಿ, ಆರೋಪಿಯು ಮಹಿಳೆಯನ್ನು ಭೇಟಿಯಾಗಲು ಪುಣೆಗೆ ಬಂದು, ಮಂಜರಿ ಪ್ರದೇಶದ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಈ ವೇಳೆ ಮಹಿಳೆಗೆ ಮಂಪರು ತರಿಸುವ ಔಷಧ ನೀಡಲಾಗಿದ್ದು, ದೌರ್ಜನ್ಯ ನಡೆಸುವ ದೃಶ್ಯಗಳನ್ನು ಚಿತ್ರಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಆ ಚಿತ್ರಗಳನ್ನು ಬಳಸಿಕೊಂಡು ಆರೋಪಿಯು ಮಹಿಳೆಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನೆಂದು ತಿಳಿದುಬಂದಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ವಸೈಯಲ್ಲಿರುವ ಹೋಟೆಲ್‌ಗೆ ಕರೆದು ಮತ್ತೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.

ನಾಸಿಕ್‌ನ ‘ಕ್ಯಾಪ್ಟನ್ ಖರತ್’ ಪ್ರಕರಣದ ನಂತರ ಧೈರ್ಯ ಪಡೆದು ಮಹಿಳೆ ದೂರು ನೀಡಲು ಮುಂದಾಗಿದ್ದಾಳೆ ಎಂದು ಮಾಣಿಕ್ಪುರ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ಹೀರಾಲಾಲ್ ಜಾಧವ್ ತಿಳಿಸಿದ್ದಾರೆ.

ಆರೋಪಿ ಇದೇ ರೀತಿಯಲ್ಲಿ ಇನ್ನೂ ಹಲವಾರು ಮಹಿಳೆಯರನ್ನು ಮೋಸಗೊಳಿಸಿ ಲೈಂಗಿಕವಾಗಿ ಶೋಷಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಪ್ರಾಥಮಿಕ ಅಪರಾಧ ಪುಣೆಯಲ್ಲಿ ನಡೆದಿರುವುದರಿಂದ, ಮಾಣಿಕ್ಪುರ ಪೊಲೀಸರು ‘ಶೂನ್ಯ ಎಫ್‌ಐಆರ್’ ದಾಖಲಿಸಿ, ಪ್ರಕರಣವನ್ನು ಪುಣೆಯ ಹಡಪ್ಸರ್ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.

SSLC ವಿದ್ಯಾರ್ಥಿಗಳೇ ಗಮನಿಸಿ.. ಇನ್ಮುಂದೆ 625 ಅಲ್ಲ, 525 ಅಂಕಗಳಿಗೆ ಮಾತ್ರ ರಿಸಲ್ಟ್!

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಬಾರದು ಹಾಗೂ ಅಂಕಪಟ್ಟಿಯಿಂದ ಹೊರಗಿಡಬೇಕು ಎಂಬ ಕನ್ನಡ ಪರ ಸಂಘಟನೆಗಳ ಒತ್ತಾಯದ ಹಿನ್ನೆಲೆ, ರಾಜ್ಯ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.

ಇದರಿಂದ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಒಟ್ಟು ಅಂಕಗಳನ್ನು 625ರಿಂದ 525ಕ್ಕೆ ಇಳಿಕೆ ಮಾಡಲಾಗಿದೆ. ತೃತೀಯ ಭಾಷೆಯ ಅಂಕಗಳನ್ನು ಒಟ್ಟು ಅಂಕಗಳಲ್ಲಿ ಪರಿಗಣಿಸದೆ, ಗ್ರೇಡ್ ರೂಪದಲ್ಲಿ ನೀಡಲಾಗುತ್ತದೆ.

ಇನ್ನು ಮುಂದೆ ತೃತೀಯ ಭಾಷೆಗಳಾದ ಹಿಂದಿ, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಮತ್ತು ಮರಾಠಿ ವಿಷಯಗಳ ಅಂಕಗಳನ್ನು ಫಲಿತಾಂಶದಲ್ಲಿ ಸೇರಿಸಲಾಗುವುದಿಲ್ಲ. ಆದರೆ, ಈ ವಿಷಯಗಳ ಪರೀಕ್ಷೆ ಬರೆಯುವುದು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿರುತ್ತದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಈ ನಿಯಮ ಹೊಸ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

“ತ್ರಿಭಾಷಾ ನೀತಿ ಮುಂದುವರಿಯುತ್ತದೆ. ಆದರೆ, ಎಸ್‌ಎಸ್‌ಎಲ್‌ಸಿಯಲ್ಲಿ ಹಿಂದಿ ವಿಷಯದ ಅಂಕಗಳನ್ನು ಗ್ರೇಡ್ ರೂಪದಲ್ಲಿ (A, B, C, D) ನೀಡಲಾಗುತ್ತದೆ. ಒಟ್ಟು ಫಲಿತಾಂಶವನ್ನು 525 ಅಂಕಗಳ ಆಧಾರದ ಮೇಲೆ ಪರಿಗಣಿಸಲಾಗುತ್ತದೆ” ಎಂದು  ಹೇಳಿದರು.

ಈಗವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ 625 ಅಂಕಗಳಿಗೆ ನಡೆಯುತ್ತಿತ್ತು. ಇನ್ನು ಮುಂದೆ ಹಿಂದಿ ವಿಷಯದ 100 ಅಂಕಗಳನ್ನು ಫಲಿತಾಂಶದಲ್ಲಿ ಸೇರಿಸಲಾಗುವುದಿಲ್ಲ. ಈ ಬದಲಾವಣೆಗಳಿಂದ ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಉಳಿದ ತರಗತಿಗಳ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಉಪಚುನಾವಣೆ: ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಲಿಖಿತ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ವಿಧಾನಸಭೆಯ ಎರಡು ಕ್ಷೇತ್ರಗಳಿಗೆ ಏ.9ರಂದು ಉಪ ಚುನಾವಣೆ ಘೋಷಣೆಯಾಗಿರುವ ಕಾರಣ ಅಂದು ನಡೆಸಬೇಕಾಗಿದ್ದ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿನ ವಿವಿಧ ಖಾಲಿ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಏ.10ರಂದು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತೀರ್ಮಾನಿಸಿದೆ.

ಒಟ್ಟು‌ 33 ಹುದ್ದೆಗಳಿಗೆ ಬೆಂಗಳೂರು ಮತ್ತು ಧಾರವಾಡ ಕೇಂದ್ರಗಳಲ್ಲಿ ಅಂದು ಲಿಖಿತ ಪರೀಕ್ಷೆ ನಡೆಯಲಿದೆ. ಸದ್ಯದಲ್ಲೇ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡುತ್ತಿದ್ದು,

ಅಭ್ಯರ್ಥಿಗಳು ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಪರೀಕ್ಷೆಗೆ ಹಾಜರಾಗಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. ಒಟ್ಟು 2,500 ಮಂದಿ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಟಿಕೆಟ್ ಬೇಡಿಕೆ ತಪ್ಪಲ್ಲ: RCB, KSCA ತೀರ್ಮಾನಕ್ಕೆ ಗೃಹ ಸಚಿವ ಪರಮೇಶ್ವರ್ ಸೂಚನೆ

ಬೆಂಗಳೂರು: ಶಾಸಕರು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ಆದರೆ ಈ ಬಗ್ಗೆ ಅಂತಿಮ ನಿರ್ಧಾರವನ್ನು RCB ಮತ್ತು KSCA ತೆಗೆದುಕೊಳ್ಳಬೇಕು ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕರಿಂದ RCB ಟಿಕೆಟ್ ಬೇಡಿಕೆಯ ವಿಚಾರವಾಗಿ ಪ್ರತಿಕ್ರಿಯಿಸಿ, “ಸರ್ಕಾರ ಈ ವಿಷಯದಲ್ಲಿ ಎಷ್ಟು ಮಟ್ಟಿಗೆ ಭಾಗಿಯಾಗಬಹುದು ಎಂಬುದನ್ನು ಪರಿಶೀಲಿಸುತ್ತೇವೆ. ಇದುವರೆಗೆ ಸರ್ಕಾರ ಮಧ್ಯಪ್ರವೇಶಿಸಿಲ್ಲ. ದುರಂತದ ಹಿನ್ನೆಲೆಯಲ್ಲಿ ಸಮಿತಿ ರಚಿಸಿ, ಅದರ ಶಿಫಾರಸುಗಳ ಆಧಾರದಲ್ಲಿ ಪಂದ್ಯಕ್ಕೆ ಅನುಮತಿ ನೀಡಿದ್ದೇವೆ” ಎಂದು ಹೇಳಿದರು.

ಒಳಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು, ಎಲ್ಲಾ ಸಮುದಾಯಗಳೂ ನ್ಯಾಯಕ್ಕಾಗಿ ಬೇಡಿಕೆ ಇಡುತ್ತಿವೆ. ಸರ್ಕಾರ ಕಾನೂನು ಚೌಕಟ್ಟಿನೊಳಗೆ ತೀರ್ಮಾನ ತೆಗೆದುಕೊಳ್ಳಲಿದೆ ಹಾಗೂ ಸಾಮಾಜಿಕ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಒಳಮೀಸಲಾತಿ ಕುರಿತ ವಿಶೇಷ ಸಂಪುಟ ಸಭೆಯನ್ನು ಮುಂದೂಡಿರುವ ಕುರಿತು ಮಾತನಾಡಿದ ಸಚಿವರು, ಅಟಾರ್ನಿ ಜನರಲ್ ಸಲಹೆ ಮೇರೆಗೆ ಸಭೆಯನ್ನು ಮುಂದೂಡಲಾಗಿದೆ ಎಂದು ಹೇಳಿದರು. “ಈಗ ತೀರ್ಮಾನ ಕೈಗೊಂಡರೆ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ” ಎಂದು ಅವರು ತಿಳಿಸಿದರು.

ಸಂಪುಟ ಪುನರ್‌ರಚನೆ ಕುರಿತು ಪ್ರತಿಕ್ರಿಯಿಸಿದ ಅವರು, “ಈ ಬಗ್ಗೆ ಅಂತಿಮವಾಗಿ ಮುಖ್ಯಮಂತ್ರಿ ಹೇಳಬೇಕು. ಹಲವರು ಸಭೆ ನಡೆಸಿ, ಚರ್ಚೆ ಮಾಡುತ್ತಿದ್ದಾರೆ. ಸಚಿವರಾಗಲು ಹಲವರು ಸಮರ್ಥರಾಗಿದ್ದು, ಅವಕಾಶ ಯಾರಿಗೆ ಸಿಗುತ್ತದೋ ಅವರು ಸಚಿವರಾಗುತ್ತಾರೆ” ಎಂದು ಹೇಳಿದರು.

ಚಿನ್ನಸ್ವಾಮಿ ಪಂದ್ಯಕ್ಕೆ ಶಾಸಕರಿಗೆ ವಿಶೇಷ ಸೌಲಭ್ಯ: ಕೆಎಸ್‌ಸಿಎ 1+1 ಟಿಕೆಟ್ ಘೋಷಣೆ!

0

ಬೆಂಗಳೂರು: ನಗರದ ಚಿನ್ನಸ್ವಾಮಿ ಮೈದಾನದಲ್ಲಿ ಶನಿವಾರ ರಾತ್ರಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕೆ ಸಂಬಂಧಿಸಿದ ಟಿಕೆಟ್ ವಿಚಾರ ಇದೀಗ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕೆಎಸ್‌ಸಿಎ ಶಾಸಕರಿಗೆ 1+1 ಟಿಕೆಟ್ ನೀಡಲು ಒಪ್ಪಿಕೊಂಡಿದೆ. ಪಂದ್ಯಕ್ಕೆ ಆಹ್ವಾನ ನೀಡುವ ಉದ್ದೇಶದಿಂದ ವೆಂಕಟೇಶ್ ಪ್ರಸಾದ್ ನೇತೃತ್ವದ ತಂಡವು ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಹಾಗೂ ಡಿಕೆ ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿತು.

ಈ ವೇಳೆ ಸಿಎಂ ನಾಲ್ಕು ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದು, ಅದಕ್ಕೆ ಕೆಎಸ್‌ಸಿಎ ಸಮ್ಮತಿಸಿದೆ. ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿರುವ ಹಿನ್ನೆಲೆ, ನಾಳಿನ ಪಂದ್ಯಕ್ಕೆ 1+1 ಟಿಕೆಟ್ ಮತ್ತು ಮುಂದಿನ ಪಂದ್ಯಗಳಿಗೆ ನಾಲ್ಕು ಟಿಕೆಟ್ ನೀಡುವ ಭರವಸೆ ನೀಡಲಾಗಿದೆ.

ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಶಾಸಕರಿಗೆ ಟಿಕೆಟ್ ಕೇಳುವ ಹಕ್ಕು ಇದೆ, ಏಕೆಂದರೆ ಅವರು ಸರ್ಕಾರದ ಭಾಗವಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ಈ ವಿಷಯದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ತೇಜಸ್ವಿ ಸೂರ್ಯ ಹೇಳಿಕೆಗೆ ತಿರುಗೇಟು ನೀಡುತ್ತಾ, ತಮ್ಮ ಪಕ್ಷದ ನಾಯಕರಿಗೆ ಜ್ಞಾನ ನೀಡಲಿ ಎಂದು ಪ್ರತಿಕ್ರಿಯಿಸಿದ್ದಾರೆ.

ಡ್ರಿಫ್ಟಿಂಗ್ ಬಳಿಕ ಮತ್ತೊಂದು ಶಾಕ್: ರಿಕ್ಕಿ ರೈ ವಿರುದ್ಧ ವಂಚನೆ ಆರೋಪದಲ್ಲಿ ಹೊಸ ಎಫ್‌ಐಆರ್!

ಬೆಂಗಳೂರು: ಡ್ರಿಫ್ಟಿಂಗ್ ಪ್ರಕರಣದ ಬೆನ್ನಲ್ಲೇ, ರಿಕ್ಕಿ ರೈ ವಿರುದ್ಧ ಮತ್ತೊಂದು ಗಂಭೀರ ಪ್ರಕರಣ ದಾಖಲಾಗಿದೆ. ಕಾರು ರಿಜಿಸ್ಟರ್ ಮಾಡದೇ, ಅದರ ಬಣ್ಣ ಬದಲಿಸಿ, ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆ ತಪ್ಪಿಸಿದ ಆರೋಪ ಕೇಳಿ ಬಂದಿದೆ.

ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ಡ್ರಿಫ್ಟಿಂಗ್ ಪ್ರಕರಣದ ತನಿಖೆ ವೇಳೆ ದಾಖಲೆಗಳನ್ನು ಪರಿಶೀಲಿಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ. ದೆಹಲಿಯ ಆರ್‌ಟಿಓ ಹರಾಜಿನಲ್ಲಿ ಖರೀದಿಸಿದ ಲ್ಯಾಂಬೋರ್ಗಿನಿ ಕಾರಿಗೆ ನಂತರ ಬಣ್ಣ ಬದಲಿಸಿ, KA 05 XX 0009 ರೀತಿಯ ಫ್ಯಾನ್ಸಿ ನಂಬರ್ ಪಡೆದುಕೊಂಡಿರುವುದು ತಿಳಿದುಬಂದಿದೆ. ಆದರೆ, ಸರಿಯಾದ ರೀತಿಯಲ್ಲಿ ರಿಜಿಸ್ಟ್ರೇಶನ್ ಮಾಡಿಸಿಕೊಂಡಿದ್ದರೆ ಲಕ್ಷಾಂತರ ರೂಪಾಯಿ ತೆರಿಗೆ ಪಾವತಿಸಬೇಕಾಗಿತ್ತು.

ಈ ಕ್ರಮವನ್ನು ತಪ್ಪಿಸಲು ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ವಂಚನೆ ಮಾಡಿದ ಆರೋಪ ಕೇಳಿಬಂದಿದೆ. ಇದೇ ಕಾರಣದಿಂದ ಕಾರಿನ ನಂಬರ್ ಪತ್ತೆಯಾಗಿದ್ದರೂ ಸಹ ಆರಂಭದಲ್ಲಿ ಮಾಲೀಕರ ಗುರುತು ಪತ್ತೆಯಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ನೀಡಿದ ದೂರಿನನ್ವಯ ಕಾನೂನು ಸುವ್ಯವಸ್ಥೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ನಡೆದ ಡ್ರಿಫ್ಟಿಂಗ್ ಸ್ಥಳ ಪರಿಶೀಲನೆಗೆ ಪೊಲೀಸರು ನೋಟಿಸ್ ನೀಡಿದರೂ, ಈವರೆಗೆ ರಿಕ್ಕಿ ರೈ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಸ್ತುತ ಕಾನೂನು ಸುವ್ಯವಸ್ಥೆ ಪೊಲೀಸರು ತನಿಖೆ ಮುಂದುವರಿಸಿದ್ದು, ಸಂಬಂಧಿತ ಕಾರು ಸಂಚಾರ ಪೊಲೀಸರ ವಶದಲ್ಲಿದೆ.

ಸೇವಾ ನಿಯಮ ತಿದ್ದುಪಡಿ ಇಲ್ಲದೆ ವೃಂದ ರದ್ದು ಅಸಾಧ್ಯ: ಹೈಕೋರ್ಟ್

ಬೆಂಗಳೂರು: ಸೇವಾ ನಿಯಮಗಳಲ್ಲಿ ತಿದ್ದುಪಡಿ ಮಾಡದೇ, ಕಾನೂನುಬದ್ಧವಾಗಿ ರಚಿಸಲಾದ ವೃಂದ ನಿಯಮಗಳನ್ನು ಸರ್ಕಾರದ ಆದೇಶದ ಮೂಲಕ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಇದೇ ವೇಳೆ, 2016ರ ಅಧಿಸೂಚನೆಯ ಆಧಾರದಲ್ಲಿ ವರ್ಕ್ ಇನ್ಸ್‌ಪೆಕ್ಟರ್ ಹುದ್ದೆಗೆ ಆಯ್ಕೆಯಾದ ಅರ್ಜಿದಾರ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವಂತೆ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಈ ಸಂಬಂಧ, ಹೆಚ್.ಪಿ. ಹರೀಶ್ ಕುಮಾರ್, ವಿಶ್ವನಾಥ್ ಮತ್ತು ಹಂಪಣ್ಣ ಕೊಲಾಕರ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಿಸಿದ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಎಸ್. ರಾಚಯ್ಯ ಅವರ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ನ್ಯಾಯಪೀಠದ ಅಭಿಪ್ರಾಯದಂತೆ, ಸರ್ಕಾರಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನೀಡದಿರುವ ಅಧಿಕಾರ ಇದ್ದರೂ, ಅದು ಸಂವಿಧಾನಾತ್ಮಕ ತತ್ವಗಳು ಮತ್ತು ಕಾನೂನುಬದ್ಧ ನಿಯಮಗಳ ವ್ಯಾಪ್ತಿಯೊಳಗೇ ಇರಬೇಕು. ನೇಮಕಾತಿ ನಿರಾಕರಣೆ ನ್ಯಾಯಸಮ್ಮತವಾಗಿರಬೇಕು ಹಾಗೂ ಸಮರ್ಪಕ ಕಾರಣಗಳ ಆಧಾರದಲ್ಲಿರಬೇಕು; ದುರುದ್ದೇಶದಿಂದ ಆಗಿರಬಾರದು ಎಂದು ತಿಳಿಸಿದೆ.

ಇನ್ನೂ, 2021ರಲ್ಲಿ ಸರ್ಕಾರ ಹೊರಡಿಸಿದ ವರ್ಕ್ ಇನ್ಸ್‌ಪೆಕ್ಟರ್ ವೃಂದ ರದ್ದುಪಡಿಸುವ ಆದೇಶ ಕೇವಲ ನೀತಿ ನಿರ್ಧಾರವಾಗಿದ್ದು, ಸಂಬಂಧಿತ ನಿಯಮಗಳಲ್ಲಿ ತಿದ್ದುಪಡಿ ಆಗುವವರೆಗೆ ಅದು ಜಾರಿಗೆ ಬರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಹೀಗಾಗಿ, ನಿಯಮ ತಿದ್ದುಪಡಿ ಆಗುವವರೆಗೆ ವರ್ಕ್ ಇನ್ಸ್‌ಪೆಕ್ಟರ್ ಹುದ್ದೆಗಳು ಜಾರಿಯಲ್ಲೇ ಇರುತ್ತವೆ. ಆಯ್ಕೆಯಾದವರಿಗೆ ನೇಮಕಾತಿ ಹಕ್ಕು ಸಂಪೂರ್ಣ ಖಚಿತವಲ್ಲದಿದ್ದರೂ, ನೇಮಕಾತಿ ನಿರಾಕರಣೆಗೆ ಕಾನೂನುಬದ್ಧ ಕಾರಣಗಳಿರಬೇಕು ಎಂದು ಪೀಠ ಒತ್ತಿ ಹೇಳಿದೆ.

ಅಲ್ಲದೆ, 211 ಹುದ್ದೆಗಳಿದ್ದರೂ ಕೆಲವರು ಮಾತ್ರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಅವರ ನೇಮಕಾತಿಯನ್ನು ಪರಿಗಣಿಸಬೇಕು ಎಂದು ಸೂಚಿಸಿದೆ. ಭವಿಷ್ಯದಲ್ಲಿ ಈ ವೃಂದವನ್ನು ಕಾನೂನುಬದ್ಧವಾಗಿ ರದ್ದುಪಡಿಸಿದರೆ, ಅರ್ಜಿದಾರರನ್ನು ಸಮಾನ ಹುದ್ದೆಗಳಿಗೆ ವರ್ಗಾಯಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

LPG ಬಿಕ್ಕಟ್ಟು ನಿವಾರಿಸಲು ಲಾಕ್ ಡೌನ್ ಕೇವಲ ವದಂತಿ, ಆತಂಕ ಬೇಡ: ಕೇಂದ್ರ ಸರ್ಕಾರ ಸ್ಪಷ್ಟನೆ

0

ನವದೆಹಲಿ: ದೇಶದಲ್ಲಿ ತೈಲ ಬಿಕ್ಕಟ್ಟು ಉಲ್ಭಣಗೊಂಡ ಹಿನ್ನೆಲೆಯಲ್ಲಿ ವಿವಿಧ ವದಂತಿಗಳು ಹರಿದಾಡುತ್ತಿವೆ. ತೈಲ ಸಂಕಷ್ಟದಿಂದ ದೇಶದಲ್ಲಿ ಲಾಕ್‌ಡೌನ್ ಜಾರಿಯಾಗಬಹುದು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಪ್ರತಿಕ್ರಿಯಿಸಿ, ದೇಶದಲ್ಲಿ ಲಾಕ್‌ಡೌನ್ ಜಾರಿಗೊಳಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಹೇಳಿದ್ದಾರೆ.

ಜಾಗತಿಕ ಪರಿಸ್ಥಿತಿ ಅಸ್ಥಿರವಾಗಿದ್ದರೂ, ಇಂಧನ ಪೂರೈಕೆಯನ್ನು ಸರ್ಕಾರ ನಿಕಟವಾಗಿ ಗಮನಿಸುತ್ತಿದೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧವಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಲಾಕ್‌ಡೌನ್ ಕುರಿತು ಹರಿದಾಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿರುವ ಅವರು, ಇಂತಹ ವದಂತಿಗಳು ಸಮಾಜಕ್ಕೆ ಹಾನಿಕಾರಕವಾಗುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರೂ ಶಾಂತವಾಗಿದ್ದು, ಒಗ್ಗಟ್ಟಿನಿಂದ ನಡೆಯಬೇಕು ಎಂದು ಮನವಿ ಮಾಡಿದ್ದಾರೆ.

ಇದೇ ವೇಳೆ, ಕಮರ್ಷಿಯಲ್ ಗ್ಯಾಸ್ ಪೂರೈಕೆಯ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ರಾಜ್ಯ ಸರ್ಕಾರಗಳ ಮನವಿಯ ಮೇರೆಗೆ ಗ್ಯಾಸ್ ಪೂರೈಕೆಯನ್ನು ಶೇ.20ರಷ್ಟು ಹೆಚ್ಚಿಸಲಾಗಿದೆ. ಈಗಿರುವ ಮಿತಿಯನ್ನು ಶೇ.50ರಿಂದ ಶೇ.70ಕ್ಕೆ ಹೆಚ್ಚಿಸಲಾಗಿದ್ದು, ಕೈಗಾರಿಕೆ, ಜವಳಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಇದರಿಂದ ನೆರವು ದೊರೆಯಲಿದೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ನಾಲ್ಕನೇ ವಾರಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಸಂಜೆ 6.30ಕ್ಕೆ ನಡೆಯಲಿರುವ ಈ ಸಭೆಯಲ್ಲಿ, ಉಂಟಾಗಿರುವ ಬಿಕ್ಕಟ್ಟನ್ನು ಎದುರಿಸಲು ಅಗತ್ಯ ಸಲಹೆಗಳನ್ನು ನೀಡುವ ಸಾಧ್ಯತೆ ಇದೆ.

ಅಯೋಧ್ಯೆಯಲ್ಲಿ ಶ್ರೀರಾಮನವಮಿ ಸಂಭ್ರಮ: ಬಾಲರಾಮನಿಗೆ ಸೂರ್ಯರಶ್ಮಿ ತಿಲಕ

0

ಅಯೋಧ್ಯೆ: ರಾಮನವಮಿ ಹಬ್ಬದ ಪವಿತ್ರ ಸಂದರ್ಭದಲ್ಲಿ ಅಯೋಧ್ಯೆ ರಾಮ ಮಂದಿರದಲ್ಲಿ ನಡೆದಸೂರ್ಯ ತಿಲಕಆಚರಣೆ ಬಾರಿ ವಿಶೇಷ ವೈಭವದಿಂದ ನೆರವೇರಿತು. ಬಾಲ ರಾಮನ ಮೂರ್ತಿಯ ಹಣೆ ಮೇಲೆ ನೇರವಾಗಿ ಸೂರ್ಯ ಕಿರಣಗಳು ತಿಲಕದ ರೂಪದಲ್ಲಿ ಹೊಳೆಯುವ ಕ್ಷಣ ಭಕ್ತರಲ್ಲಿ ಅಪಾರ ಭಕ್ತಿ ಮತ್ತು ಆನಂದವನ್ನು ಮೂಡಿಸಿತು.

ಅಧಿಕಾರಿಗಳ ಮಾಹಿತಿ ಪ್ರಕಾರ, ಶ್ರೀರಾಮನ ಮೂರ್ತಿಯ ಹಣೆಯ ಮೇಲಿನ ಸೂರ್ಯ ತಿಲಕವು ಮಧ್ಯಾಹ್ನ 12 ಗಂಟೆಗೆ ಆರಂಭವಾಗಿ ಸುಮಾರು 3 ರಿಂದ 4 ನಿಮಿಷಗಳವರೆಗೆ ಸ್ಪಷ್ಟವಾಗಿ ಕಾಣಿಸಿಕೊಂಡಿತು.

ಅದ್ಭುತ ದೃಶ್ಯದ ಹಿಂದೆ ಸುಧಾರಿತ ವೈಜ್ಞಾನಿಕ ತಂತ್ರಜ್ಞಾನ ಕಾರ್ಯನಿರ್ವಹಿಸಿದೆ. ದೇವಸ್ಥಾನದ ಮೇಲ್ಭಾಗದಲ್ಲಿ ಅಳವಡಿಸಿದ ವಿಶೇಷ ಲೆನ್ಸ್ಗಳು ಮತ್ತು ಕನ್ನಡಿಗಳ ವ್ಯವಸ್ಥೆಯ ಮೂಲಕ ಸೂರ್ಯನ ಕಿರಣಗಳನ್ನು ನಿಖರವಾಗಿ ಗರ್ಭಗುಡಿಯೊಳಗೆ ಹರಿಸುವ ವ್ಯವಸ್ಥೆ ಮಾಡಲಾಗಿದೆ.

ತಂತ್ರಜ್ಞಾನವು ಸೂರ್ಯನ ಸ್ಥಿತಿಯನ್ನು ಲೆಕ್ಕಹಾಕಿ, ಸರಿಯಾದ ಸಮಯದಲ್ಲಿ ಕಿರಣಗಳು ರಾಮನ ಮೂರ್ತಿಯ ಹಣೆಯ ಮೇಲೆ ಬೀಳುವಂತೆ ವಿನ್ಯಾಸಗೊಳಿಸಲಾಗಿದೆ. ಸಂದರ್ಭದಲ್ಲಿ ಇಡೀ ಅಯೋಧ್ಯೆ ನಗರ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದು, ಎಲ್ಲೆಡೆ ಶ್ರೀರಾಮನ ಜಯಘೋಷ ಮೊಳಗಿತು.

error: Content is protected !!