Home Blog Page 385

ಕೇಂದ್ರ ಬಜೆಟ್ ಮಹತ್ವದ ಹೆಜ್ಜೆ: ಮಂಜುನಾಥ ಎಸ್. ರಾಠೋಡ

0

ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆದಾಯ ತೆರಿಗೆ, ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಕ್ರೀಡಾ ಹಾಗೂ ಮೂಲಸೌಕರ್ಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ ಎಂದು ಕ್ರಾಂತಿಸೂರ್ಯ ಜೈಭೀಮ್ ಸೇನೆಯ ರಾಜ್ಯಾಧ್ಯಕ್ಷ ಮಂಜುನಾಥ ಎಸ್. ರಾಠೋಡ ಅಭಿಪ್ರಾಯಪಟ್ಟಿದ್ದಾರೆ.

ಆರೋಗ್ಯ ಮತ್ತು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಟಿಸಿಎಸ್ ದರವನ್ನು ಶೇ. 5ರಿಂದ ಶೇ. 2ಕ್ಕೆ ಇಳಿಸಿರುವುದು ಮಧ್ಯಮ ಹಾಗೂ ಬಡ ವರ್ಗದ ಜನರಿಗೆ ಮಹತ್ವದ ನಿರ್ಣಯವಾಗಿದೆ. ವಿದೇಶ ಯಾತ್ರೆಗಳ ಮೇಲಿನ ಟಿಸಿಎಸ್ ಕಡಿತ, ಅನಿವಾಸಿ ಭಾರತೀಯರ ಸ್ಥಿರಾಸ್ತಿಗೆ ಸಂಬಂಧಿಸಿದ ಟಿಡಿಎಸ್ ಸರಳೀಕರಣ ಹೂಡಿಕೆ ಉತ್ತೇಜನಕ್ಕೆ ಸಹಕಾರಿ ಆಗಲಿದೆ.

ಆದಾಯ ತೆರಿಗೆ ನಿಯಮಗಳ ಸರಳೀಕರಣ, ಫಾರ್ಮ್‌ಗಳ ಸುಲಭೀಕರಣ, ಸಣ್ಣ ತೆರಿಗೆ ಪಾವತಿದಾರರಿಗೆ ಹೊಸ ವ್ಯವಸ್ಥೆ, ಅಪಘಾತ ವಿಮೆ ಪರಿಹಾರಕ್ಕೆ ತೆರಿಗೆ ವಿನಾಯಿತಿ ಮತ್ತು ವಿದೇಶಿ ಆಸ್ತಿ ಘೋಷಣೆಗೆ ಆರು ತಿಂಗಳ ಸಮಯಾವಕಾಶ ನೀಡಿರುವುದು ಜನಪರ ನಿರ್ಧಾರಗಳಾಗಿವೆ.

ಶಿಕ್ಷಣ ಕ್ಷೇತ್ರದಲ್ಲಿ ಎಲ್ಲಾ ರಾಜ್ಯಗಳಿಗೆ ಯುನಿವರ್ಸಿಟಿ ಟೌನ್‌ಶಿಪ್‌ಗಳು, ಪ್ರತೀ ಜಿಲ್ಲೆಗೆ ವಿದ್ಯಾರ್ಥಿನಿ ನಿಲಯ, ಸ್ಕಿಲ್ ಸೆಂಟರ್‌ಗಳ ನಿರ್ಮಾಣ, ರಾಷ್ಟ್ರೀಯ ಹಾಸ್ಪಿಟಾಲಿಟಿ ಸಂಸ್ಥೆಯ ಸ್ಥಾಪನೆ, ಈಶಾನ್ಯ ಭಾರತದಲ್ಲಿ ಏಮ್ಸ್ ಆಸ್ಪತ್ರೆ ನಿರ್ಮಾಣ ಘೋಷಣೆಗಳು ಭವಿಷ್ಯದ ಭಾರತ ನಿರ್ಮಾಣಕ್ಕೆ ದಾರಿ ತೋರಿಸುತ್ತವೆ.

ಒಟ್ಟಾರೆ, ಈ ಘೋಷಣೆಗಳು ಸಾಮಾಜಿಕ ನ್ಯಾಯ, ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ತಿಳಿಸಿದ್ದಾರೆ.

ದೇಶದ ಅಭಿವೃದ್ಧಿಯ ಪಯಣಕ್ಕೆ ವೇಗ: ವಸಂತ ಪಡಗದ

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಎನ್.ಡಿ.ಎ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಕೇಂದ್ರ ಬಜೆಟ್ ಕೇವಲ ಆರ್ಥಿಕ ಪತ್ರವಲ್ಲ, ಅದು ದೇಶದ ಅಭಿವೃದ್ಧಿಯ ಪಯಣಕ್ಕೆ ವೇಗ ನೀಡಿದ ಬಜೆಟ್ ಆಗಿದೆ ಎಂದು ಬಿಜೆಪಿ ಯುವ ಮುಖಂಡ ವಸಂತ ಪಡಗದ ಹೇಳಿದ್ದಾರೆ.

ಜಾಗತಿಕ ಆರ್ಥಿಕ ಏರಿಳಿತಗಳ ನಡುವೆಯೂ ಭಾರತದ ಆರ್ಥಿಕತೆಯನ್ನು ಸದೃಢವಾಗಿ ಮುನ್ನಡೆಸುತ್ತಿರುವ ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್, ದೇಶದ ಪ್ರತಿಯೊಬ್ಬ ಪ್ರಜೆಯ ಆಶೋತ್ತರಗಳನ್ನು ಈಡೇರಿಸುವ ವಿಶ್ವಾಸ ಮೂಡಿಸಿದೆ. ಇದು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಪ್ರಧಾನಿ ಮೋದಿ ಸರ್ಕಾರದ ದೂರದರ್ಶಿತ್ವದ ದಿಕ್ಸೂಚಿಯಾಗಿದೆ.

ಯುವಶಕ್ತಿ, ಮೂಲಸೌಕರ್ಯ ಮತ್ತು ಕೃಷಿಗೆ ಆದ್ಯತೆ ನೀಡಲಾಗಿದ್ದು, ಈ ಬಜೆಟ್‌ನಲ್ಲಿ ನಮ್ಮ ದೇಶದ ಬೆನ್ನೆಲುಬಾದ ಅನ್ನದಾತ ರೈತರಿಗೆ, ದೇಶದ ಶಕ್ತಿಯಾದ ಯುವಜನತೆಗೆ ಮತ್ತು ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಿರುವುದು ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಅಳವಡಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ, ರಾಜ್ಯದ ರೈತರಿಗೆ ಅನುಕೂಲವಾಗುವಂತೆ ತೆಂಗು, ಗೋಡಂಬಿ ಬೆಳೆಗಾರರಿಗೆ ವಿಶೇಷ ಬೆಂಬಲ ಘೋಷಣೆ ರಾಜ್ಯ ಸೇರಿದಂತೆ ರೈಲ್ವೆ, ಹೆದ್ದಾರಿ ಮತ್ತು ಡಿಜಿಟಲ್ ಮೂಲಸೌಕರ್ಯದ ಮೇಲಿನ ಹೂಡಿಕೆ, ಉತ್ಪಾದನಾ ವಲಯಕ್ಕೆ ಹೊಸ ಚೈತನ್ಯ ನೀಡುವ ವಿಶ್ವಾಸ ಮೂಡಿಸಿದೆ.

ಒಟ್ಟಾರೆಯಾಗಿ, 2026-27ರ ಬಜೆಟ್ ವಿಕಸಿತ ಭಾರತದ ನಿರ್ಮಾಣದ ಸಂಕಲ್ಪವನ್ನು ಪುನರುಚ್ಚರಿಸಿದೆ. ದೇಶದ ಆರ್ಥಿಕತೆಯನ್ನು ವಿಶ್ವದ ಅಗ್ರಮಾನ್ಯ ಸ್ಥಾನಕ್ಕೆ ಏರಿಸುವ ಬದ್ಧತೆ, ಭಾರತೀಯರ ಆಶೋತ್ತರಗಳನ್ನು ಈ ಬಜೆಟ್ ಪ್ರತಿಬಿಂಬಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಣಿಪುರದ ಹೊಸ ಮುಖ್ಯಮಂತ್ರಿಯಾಗಿ ಬಿಜೆಪಿಯ ಯುಮ್ನಮ್ ಖೇಮ್ಚಂದ್ ಸಿಂಗ್ ನೇಮಕ!

0

ಮಣಿಪುರ:- ಮಣಿಪುರದ ಹೊಸ ಮುಖ್ಯಮಂತ್ರಿಯಾಗಿ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಸಚಿವ ಯುಮ್ನಮ್ ಖೇಮ್ಚಂದ್ ಸಿಂಗ್ ಅವರನ್ನು ಬಿಜೆಪಿ ಪಕ್ಷ ಆಯ್ಕೆ ಮಾಡಿದೆ.

2025ರ ಫೆಬ್ರವರಿ 9ರಂದು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಈ ಹುದ್ದೆ ಖಾಲಿಯಾಗಿತ್ತು. ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರದ ನಡುವೆ ನಡೆದ ರಾಜಕೀಯ ಪ್ರಕ್ರಿಯೆಯ ನಂತರ, ಕೇಂದ್ರದಿಂದ ರಾಷ್ರಪತಿ ಆಳ್ವಿಕೆ ಹೇರಲಾಗಿತ್ತು. ಬಿಜೆಪಿ ಶಾಸಕರ ಗುಂಪು ದೆಹಲಿಗೆ ತೆರಳಿ ಅಮಿತ್ ಶಾ ಸೇರಿದಂತೆ ಪಕ್ಷದ ಕೇಂದ್ರ ನಾಯಕತ್ವದೊಂದಿಗೆ ಸಭೆ ನಡೆಸಿ, ಮಣಿಪುರದಲ್ಲಿ ಸರ್ಕಾರ ರಚನೆ ಕುರಿತು ಸಮಾಲೋಚನೆ ನಡೆಸಿತು.

ನಂತರ ಯುಮ್ನಮ್ ಖೇಮ್ಚಂದ್ ಸಿಂಗ್ ಅವರನ್ನು ಪಕ್ಷದ ರಾಜ್ಯ ಶಾಸಕರ ನಾಯಕರಾಗಿ ಘೋಷಿಸಲಾಯಿತು. ಖೇಮ್ಚಂದ್ ಸಿಂಗ್ 2017 ಮತ್ತು 2022ರಲ್ಲಿ ಸಿಂಗ್ಜಮೈ ವಿಧಾನಸಭಾ ಸ್ಥಾನದಿಂದ ಎರಡು ಅವಧಿಗಳಿಗಾಗಿ ಚುನಾವಣೆಯಲ್ಲಿ ಜಯ ಸಾಧಿಸಿದ್ದರು. 2017ರಲ್ಲಿ ಅವರು ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದರು ಮತ್ತು ಪೂರ್ಣ 5 ವರ್ಷಗಳ ಅವಧಿ ಸೇವೆ ಸಲ್ಲಿಸಿದ್ದರು. 2022ರ ವಿಧಾನಸಭಾ ಚುನಾವಣೆಯ ನಂತರ, ಖೇಮ್ಚಂದ್ ಸಿಂಗ್ ಅವರನ್ನು ಎರಡನೇ ಬಾರಿಗೆ ಬಿರೇನ್ ಸಿಂಗ್ ಸಂಪುಟಕ್ಕೆ ಸಚಿವರನ್ನಾಗಿ ಸೇರಿಸಲಾಯಿತು. . ಗ್ರಾಮೀಣಾಭಿವೃದ್ಧಿ, ಪಂಚಾಯತಿ ರಾಜ್, ಪುರಸಭೆ ಆಡಳಿತ, ವಸತಿ ಅಭಿವೃದ್ಧಿ ಮತ್ತು ಶಿಕ್ಷಣ ಸೇರಿದಂತೆ ಹಲವಾರು ಖಾತೆಗಳನ್ನು ವಹಿಸಲಾಯಿತು. ರಾಷ್ಟ್ರಪತಿ ಆಳ್ವಿಕೆ ಹೇರಲಾಗುವವರೆಗೆ ಅವರು ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದರು.

ಬೆಂಗಳೂರು| ಹುಳಿಮಾವು ಸೈಟ್‌ನಲ್ಲಿ ಸ್ಫೋಟಕ ವಸ್ತು ಪತ್ತೆ; ಸ್ಥಳದಲ್ಲಿ ಆತಂಕ!

0

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಸ್ಥಳದಲ್ಲಿ ಆತಂಕ ವಾತಾವರಣ ಉಂಟಾಗಿದೆ.

ಪರಿಶೀಲನೆ ವೇಳೆ, ಬಂಡೆ ಒಡೆಯಲು ಬಳಸುವ ಜಿಲೆಟಿನ್, ಕೇಪ್‌ಗಳು ಮತ್ತು 13 ಜೆಲ್ ಪ್ಯಾಕೆಟ್‌ಗಳು, 23 ಎಲೆಕ್ಟ್ರಿಕ್ ಡಿವೈಸುಗಳು ವಶಕ್ಕೆ ಪಡೆದಿರುವುದು ತಿಳಿದುಬಂದಿದೆ. ಒಂದು ಟ್ರ್ಯಾಕ್ಟರ್ ಮತ್ತು ಜೆಸಿಬಿಯೂ ವಶಕ್ಕೆ ತೆಗೆದುಕೊಂಡಿದ್ದಾರೆ. ಪರಿಸ್ಥಿತಿಯಿಂದ ತಿಳಿದುಬಂದಂತೆ, ಸೈಟ್‌ನಲ್ಲಿ ಕಾರ್ಮಿಕರು ಕಳೆದ ಹದಿನೈದು ದಿನಗಳಿಂದ ಡ್ರಿಲ್ ಮಾಡುತ್ತಿದ್ದವರು. ಇಂದು ಒಂದೇ ಸಾರಿ ಬ್ಲಾಸ್ಟ್ ಮಾಡಲು ಯತ್ನಿಸುತ್ತಿದ್ದು, ಅಕ್ಕಪಕ್ಕದ ಮೂರು–ನಾಲ್ಕು ಮನೆಗಳಿಗೆ ಹಾನಿಯಾಗಿದೆ. ಸೈಟಿನಲ್ಲಿ ಹಿಂದೆ ಸಣ್ಣ ಪ್ರಮಾಣದ ಬ್ಲಾಸ್ಟ್ ಆಗಿರುವುದಕ್ಕೂ ಮಾಹಿತಿ ಲಭ್ಯವಿದೆ.

ಜಾಗದ ಮಾಲೀಕರು ಯಾರು ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ಸ್ಥಳದಲ್ಲಿ ಬಿಬಿಎಂಪಿ ಕೆಲಸ ನಡೆಯುತ್ತಿರುವ ಬಗ್ಗೆ ಶಂಕೆಗಳು ವ್ಯಕ್ತವಾಗಿವೆ. ಈ ಹಿಂದೆ ಎನ್‌ಸಿಐಆರ್‌ ದಾಖಲಿಸಿ ಕಾರ್ಮಿಕರಿಗೆ ವಾರ್ನಿಂಗ್ ನೀಡಲಾಗಿತ್ತು, “ಇನ್ಮುಂದೆ ಮಾಡೊದಿಲ್ಲ” ಎಂದು ಹೇಳಿದರು. ಆದರೆ, ಇಂದು ಅವರು ಜೆಸಿಬಿ ಮತ್ತು ಇಟಾಚಿ ಉಪಕರಣಗಳನ್ನು ಬಳಸಿಕೊಂಡು ಕೆಲಸ ಮುಂದುವರಿಸಿದ್ದನ್ನು ಪೊಲೀಸರು ಕಂಡಿದ್ದಾರೆ. ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ಮತ್ತು ಡಾಗ್ ಸ್ಕ್ವಾಡ್ ತಂಡಗಳು ಪರಿಶೀಲನೆ ನಡೆಸಿವೆ. ಪೊಲೀಸರು ಬರ್ತಿದ್ದಂತೆ ಕಾರ್ಮಿಕರು ಸ್ಥಳವನ್ನು ತೊರೆದು ಓಡಿದ್ದಾರೆ. ಸದ್ಯ, ಹುಳಿಮಾವು ಪೊಲೀಸರು ಸ್ಥಳವನ್ನು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು, ಸಂಪೂರ್ಣ ತನಿಖೆ ಕೈಗೊಂಡಿದ್ದಾರೆ.

ಗದಗ| ಮನೆಗೋಡೆ ಕುಸಿದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವು! ಇನ್ನಿಬ್ಬರಿಗೆ ಗಾಯ

0

ಗದಗ :-ಜಿಲ್ಲೆಯ ನರಗುಂದ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಮಂಗಳವಾರ ‌ಮಧ್ಯಾಹ್ನ ನಡೆದಿದೆ.

ಯಲ್ಲಪ್ಪ ಕೆಳಗೇರಿ ಅವರಿಗೆ ಸೇರಿರುವ ಹಳೆಯ ಮನೆಯ ಗೋಡೆಯನ್ನು ಕೆಡುವು ಸಂದರ್ಭದಲ್ಲಿ, ಗೋಡೆ ಏಕಾಏಕಿ ಕಾರ್ಮಿಕರ ಮೇಲೆ ಕುಸಿದಿದೆ. ಇದರಿಂದಾಗಿ ಮಣ್ಣಿನ ಅವಶೇಷದಡಿ ಸಿಲುಕಿದ ಪರಿಣಾಮ ನಾಗಪ್ಪ ದೊಡ್ಡಮನಿ (60) ಮತ್ತು ಶೇಖಪ್ಪ ಪರಸಪ್ಪನವರ್ (55) ಮೃತಪಟ್ಟಿದ್ದಾರೆ. ಗಾಯಗೊಂಡ ಸ್ಥಿತಿಯಲ್ಲಿದ್ದ ಇಬ್ಬರನ್ನೂ ತಕ್ಷಣ ನರಗುಂದ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಜಗನ್ನಾಥ್ ಶೇಗಜಿ ವಿರುದ್ಧ ಗಂಭೀರ ಆರೋಪ: ಹುದ್ದೆಯಿಂದ ಅಮಾನತು

0

ಬೆಂಗಳೂರು: ಕರ್ನಾಟಕ ರಾಜ್ಯ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್‌ನ ಗೌರವಾಧ್ಯಕ್ಷ ಜಗನ್ನಾಥ್ ಶೇಗಜಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದು, ಆಡಿಯೋ ಲೀಕ್ ಪ್ರಕರಣದ ಹಿನ್ನೆಲೆಯಲ್ಲಿ ಅವರನ್ನು ಗೌರವಾಧ್ಯಕ್ಷ ಸ್ಥಾನದಿಂದ ಅಮಾನತು ಮಾಡಲಾಗಿದೆ.

ಜಗನ್ನಾಥ್ ಶೇಗಜಿ ಅವರು ಬೇರೆ ಗುತ್ತಿಗೆದಾರರೊಂದಿಗೆ ಮಾತನಾಡಿರುವ ಆಡಿಯೋ ಒಂದು ಲೀಕ್ ಆಗಿದ್ದು, ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷರಾಗಿರುವುದರಲ್ಲೇ ಸಣ್ಣ ಗುತ್ತಿಗೆದಾರರಿಗೆ ಬಿಡ್ ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಆಡಿಯೋದಲ್ಲಿ ಸಣ್ಣ ಗುತ್ತಿಗೆದಾರರಿಂದ ಶೇ.3 ರಷ್ಟು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ.

ಈ ಪ್ರಕರಣದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಅವರು ಜಗನ್ನಾಥ್ ಶೇಗಜಿ ಅವರನ್ನು ಗೌರವಾಧ್ಯಕ್ಷ ಸ್ಥಾನದಿಂದ ಅಮಾನತು ಮಾಡಿದ್ದಾರೆ. ಗೌರವಾಧ್ಯಕ್ಷ ಸ್ಥಾನದಲ್ಲಿದ್ದುಕೊಂಡೇ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಘ ತಿಳಿಸಿದೆ.

ಆದರೆ, ತಮ್ಮ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಜಗನ್ನಾಥ್ ಶೇಗಜಿ ಅವರು, “ಬಿಡ್ ವಿತ್‌ಡ್ರಾ ಮಾಡಲು ನಾನು ಯಾರ ಮೇಲೂ ಒತ್ತಾಯ ಮಾಡಿಲ್ಲ. ಇಂಜಿನಿಯರ್‌ಗಳೇ ಗುತ್ತಿಗೆದಾರರ ನಡುವೆ ಕಾಂಪ್ರೋಮೈಸ್ ಮಾಡಿಸಿದ್ದಾರೆ. ವಿತ್‌ಡ್ರಾ ಮಾಡುವವರಿಗೆ ಶೇ.3 ರಷ್ಟು ಹಣ ನೀಡುವಂತೆ ಸ್ವತಃ ಮುಖ್ಯ ಇಂಜಿನಿಯರ್ ಹೇಳಿದ್ದಾರೆ” ಎಂದು ಸ್ಪಷ್ಟನೆ ನೀಡಿದ್ದಾರೆ.

“ಕೆಲವು ಗುತ್ತಿಗೆದಾರರು ನನ್ನ ಬಳಿ ಬಂದು ಶೇ.3 ಬೇಡ, ಶೇ.2.5 ಮಾಡಿ ಎಂದು ಕೇಳಿದ್ದರು. ನೀವು ಕಾಂಪ್ರೋಮೈಸ್ ಮಾಡಿಕೊಂಡಿದ್ದೀರಿ, ಮಾಡಿಕೊಂಡ ಮೇಲೆ ಮಾತಾಡಿದಷ್ಟು ಕೊಡಿ ಎಂದು ಮಾತ್ರ ಹೇಳಿದ್ದೇನೆ. ಇದರಲ್ಲಿ ನನ್ನದೇನೂ ತಪ್ಪಿಲ್ಲ” ಎಂದು ಅವರು ತಿಳಿಸಿದ್ದಾರೆ.ಇದಲ್ಲದೆ, “ಟೆಂಡರ್ ಬಾಕ್ಸ್ ಓಪನ್ ಮಾಡಲು ಮಾತ್ರ ನಾನು ಒತ್ತಾಯಿಸಿದ್ದೇನೆ. ನನ್ನ ಮುಖಕ್ಕೆ ಮಸಿ ಬಳಿಯುವ ಉದ್ದೇಶದಿಂದ ಈ ಕುತಂತ್ರ ನಡೆಸಲಾಗಿದೆ. ಹಣ ಕೊಡುವ ಈ ಪದ್ದತಿ ಹಿಂದಿನಿಂದಲೂ ಇದೆ. ಈ ಪದ್ದತಿ ಬಂದ್ ಆಗಬೇಕು ಎಂದು ನಾನು ಹೇಳುತ್ತಿದ್ದೇನೆ” ಎಂದು ಜಗನ್ನಾಥ್ ಶೇಗಜಿ ಹೇಳಿದರು.

ಚಿತ್ರದುರ್ಗ ಜಿಲ್ಲೆಯ 7,880 ರೈತರಿಗೆ 12.40 ಕೋಟಿ ರೂ. ಬೆಳೆ ವಿಮಾ ಪರಿಹಾರ ಬಿಡುಗಡೆ

0

ನವದೆಹಲಿ: ಚಿತ್ರದುರ್ಗ ಜಿಲ್ಲೆಯ ರೈತರು 2025ರ ಖರೀಫ್ ಹಂಗಾಮಿನಲ್ಲಿ ಎದುರಿಸಿದ ಪ್ರಕೃತಿ ವಿಕೋಪಗಳಿಂದ ಉಂಟಾದ ಬೆಳೆ ನಷ್ಟಕ್ಕೆ ಪರಿಹಾರವಾಗಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಸುಮಾರು 7,880 ರೈತರಿಗೆ ಒಟ್ಟು 12.40 ಕೋಟಿ ರೂ. ಮೊತ್ತದ ಬೆಳೆ ವಿಮಾ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ.

ಲೋಕಸಭೆಯಲ್ಲಿ ಸಂಸದ ಗೋವಿಂದ ಕಾರಜೋಳ ಅವರು ಕೇಳಿದ ಚುಕ್ಕೆರಹಿತ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವ ಆರ್.ಎನ್.ಕೆ. ಠಾಕೂರ್ ಅವರು ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ 2016ರಿಂದ ಕರ್ನಾಟಕದಲ್ಲಿ ಯಶಸ್ವಿಯಾಗಿ ಜಾರಿಯಲ್ಲಿದ್ದು, ಇದುವರೆಗೆ ರಾಜ್ಯದಲ್ಲಿ 1.34 ಕೋಟಿ ಅರ್ಜಿಗಳಿಗೆ ಒಟ್ಟು 18,783 ಕೋಟಿ ರೂ. ಮೊತ್ತದ ಬೆಳೆ ವಿಮಾ ಪರಿಹಾರವನ್ನು ರೈತರಿಗೆ ಪಾವತಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಗೆ ಬಿಡುಗಡೆಗೊಂಡಿರುವ 12.40 ಕೋಟಿ ರೂ. ಪರಿಹಾರವು ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಒಳಗಾಗಿದ್ದ ರೈತ ಕುಟುಂಬಗಳಿಗೆ ಮಹತ್ವದ ಆರ್ಥಿಕ ನೆರವಾಗಿದ್ದು, ಅವರ ಜೀವನೋಪಾಯಕ್ಕೆ ಹೊಸ ಭರವಸೆಯನ್ನು ನೀಡಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಮೂಲಕ ರೈತರಿಗೆ ಸಂಕಷ್ಟದ ಸಮಯದಲ್ಲಿ ರಕ್ಷಾಕವಚ ಒದಗಿಸಲಾಗುತ್ತಿದ್ದು, ಬೆಳೆ ನಷ್ಟದ ಭಾರವನ್ನು ತಗ್ಗಿಸಲು ಈ ಯೋಜನೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಜೈಲಿನಿಂದ ಬಂದು ಜೆಡಿಯು ಶಾಸಕನಾಗಿ ಅನಂತ್ ಸಿಂಗ್ ಪ್ರಮಾಣ ವಚನ: ಸಿಎಂ ನಿತೀಶ್ ಕುಮಾರ್ ಕಾಲಿಗೆ ಬಿದ್ದು ಆಶೀರ್ವಾದ

0

ಪಾಟ್ನಾ: ಕೋರ್ಟ್ ಅನುಮತಿಯೊಂದಿಗೆ ಜೈಲಿನಿಂದ ಹೊರಬಂದ ಜೆಡಿಯು ಮುಖಂಡ ಮೊಕಾಮಾ ಅನಂತ್ ಸಿಂಗ್ ಅವರು ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮದ ಬಳಿಕ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಅನಂತ್ ಸಿಂಗ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

ದುಲಾರ್ಚಂದ್ ಯಾದವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಂತ್ ಸಿಂಗ್ ಕಳೆದ ಮೂರು ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಲು ಮಾತ್ರ ಪಾಟ್ನಾ ಸಿವಿಲ್ ನ್ಯಾಯಾಲಯವು ಅವರಿಗೆ ತಾತ್ಕಾಲಿಕ ಅನುಮತಿ ನೀಡಿತ್ತು. ಜಾಮೀನು ಇನ್ನೂ ಅನುಮೋದನೆಯಾಗದ ಹಿನ್ನೆಲೆಯಲ್ಲಿ, ವಿಧಾನಸಭಾ ಕಲಾಪ ಮುಗಿದ ಕೂಡಲೇ ಅವರು ಮತ್ತೆ ಬೇವೂರ್ ಜೈಲಿಗೆ ಮರಳಬೇಕಾಗಿದೆ.

ಸಾಂವಿಧಾನಿಕ ನಿಯಮಾವಳಿಗಳ ಪ್ರಕಾರ, ಶಾಸಕರೊಬ್ಬರು ಸದನದಲ್ಲಿ ಭಾಗವಹಿಸುವುದನ್ನು 188ನೇ ವಿಧಿ ಕಡ್ಡಾಯಗೊಳಿಸಿದ್ದು, ಪ್ರಮಾಣ ವಚನ ಸ್ವೀಕರಿಸದೇ ಕಾರ್ಯನಿರ್ವಹಿಸುವುದನ್ನು 193ನೇ ವಿಧಿ ನಿಷೇಧಿಸುತ್ತದೆ. ಈ ಹಿನ್ನೆಲೆ, ಸಿಂಗ್ ಅವರಿಗೆ ಸದನದಲ್ಲಿ ಹಾಜರಾಗಲು ಕಾನೂನುಬದ್ಧ ಅವಕಾಶ ನೀಡಲಾಗಿತ್ತು.

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅನಂತ್ ಸಿಂಗ್ ಅವರು, “ನಾನು ನಿರಪರಾಧಿ. ನನಗೆ ನ್ಯಾಯ ಸಿಗುತ್ತದೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ವಿಧಾನಸಭೆ ಆವರಣದಲ್ಲಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಜಾರಿಗೊಳಿಸಲಾಗಿತ್ತು. ಹೆಚ್ಚುವರಿ ಪೊಲೀಸ್ ಸಿಬ್ಬಂದಿ, ಸಿಸಿಟಿವಿ ಕಣ್ಗಾವಲು, ತ್ವರಿತ ಪ್ರತಿಕ್ರಿಯೆ ಪಡೆಗಳು ಹಾಗೂ ಬೆಂಗಾವಲು ವಾಹನಗಳನ್ನು ನಿಯೋಜಿಸಲಾಗಿತ್ತು.

ಬೆಂಬಲಿಗರ ಸಭೆಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಎಲ್ಲಾ ಪ್ರವೇಶ ದ್ವಾರಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಯಿತು.  ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಅನಂತ್ ಸಿಂಗ್ ಅವರು ಆರ್ಜೆಡಿಯ ವೀಣಾ ದೇವಿ ಅವರನ್ನು 28,206 ಮತಗಳ ಅಂತರದಿಂದ ಸೋಲಿಸಿ ನಿರ್ಣಾಯಕ ಜಯ ಸಾಧಿಸಿದ್ದರು.

ಪತ್ನಿಯ ಮೇಲೆ ಪತಿ ಕ್ರೌರ್ಯ: ಕುಡಿತದ ಅಮಲಲ್ಲಿ ತಲೆ ಬೋಳಿಸಿ ಅವಮಾನ

0

ಬಾಗಲಕೋಟೆ: ಮಹಿಳೆಯರ ಮೇಲಿನ ಹಿಂಸಾಚಾರ ಮತ್ತೊಮ್ಮೆ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿರುವ ಘಟನೆ ಜಮಖಂಡಿ ತಾಲ್ಲೂಕಿನ ತೊದಲಬಾಗಿ ಗ್ರಾಮದಲ್ಲಿ ನಡೆದಿದೆ. ಮದ್ಯಪಾನ ಮಾಡಿ ಮನೆಗೆ ಬಂದ ವ್ಯಕ್ತಿಯೊಬ್ಬ, ತನ್ನ ಪತ್ನಿಯ ನಡತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿ, ಆಕೆಯನ್ನು ಮಾನಸಿಕ ಹಾಗೂ ದೈಹಿಕವಾಗಿ ಹಿಂಸಿಸಿರುವುದು ಬೆಳಕಿಗೆ ಬಂದಿದೆ.

ಉಮೇಶ್ ಕೊಟ್ಟಲಗಿ ಎಂಬಾತನೇ ಈ ಅಮಾನವೀಯ ಕೃತ್ಯ ನಡೆಸಿದ ಆರೋಪಿಯಾಗಿದ್ದು, ಪತ್ನಿಗೆ ಕಬ್ಬು ಕಡಿಯುವ ಕೊಯ್ತಾ ತೋರಿಸಿ ಬೆದರಿಕೆ ಹಾಕಿದ ಬಳಿಕ, ಆಕೆಯ ತಲೆ ಬೋಳಿಸಿ ವಿಕೃತಿ ಮೆರೆದಿದ್ದಾನೆ ಎನ್ನಲಾಗಿದೆ. ಈ ಘಟನೆ ಗ್ರಾಮದಲ್ಲಿ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ಮಹಿಳೆಯ ದೂರಿನ ಮೇರೆಗೆ ಸಾವಳಗಿ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮಹಿಳೆಯರ ಗೌರವ ಹಾಗೂ ಭದ್ರತೆಗೆ ಧಕ್ಕೆಯಾಗುವ ಇಂತಹ ಘಟನೆಗಳನ್ನು ಕಠಿಣವಾಗಿ ನಿಗ್ರಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮಂಜೇಶ್ವರದಲ್ಲಿ ಎರಡು ಸಾವು, ಬೀದರ್‌ನಲ್ಲಿ ವಕೀಲನ ಮೇಲೆ ಚಾಕು ದಾಳಿ: ರಾಜ್ಯದ ವಿವಿಧೆಡೆ ಹಿಂಸಾಚಾರ

0

ಮಂಗಳೂರು: ಕೌಟುಂಬಿಕ ಕಲಹ ಮತ್ತು ಕ್ಷುಲ್ಲಕ ಕಾರಣಗಳು ಎರಡು ಪ್ರತ್ಯೇಕ ಜಿಲ್ಲೆಗಳಲ್ಲಿ ಭೀಕರ ಹಿಂಸಾಚಾರಕ್ಕೆ ಕಾರಣವಾಗಿರುವ ಘಟನೆಗಳು ವರದಿಯಾಗಿವೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಇಬ್ಬರು ಸಾವನ್ನಪ್ಪಿದ್ದರೆ, ಬೀದರ್ ಜಿಲ್ಲೆಯಲ್ಲಿ ವಕೀಲನ ಮೇಲೆ ಚಾಕು ದಾಳಿ ನಡೆದಿದೆ.

ಮಂಜೇಶ್ವರ ತಾಲೂಕಿನ ತೂಮಿನಾಡಿನಲ್ಲಿ ನಡೆದ ಕೌಟುಂಬಿಕ ಕಲಹದಲ್ಲಿ ಜುಮೈಲ (18) ಮತ್ತು ಶೇಕುಂಞ (55) ಮೃತರಾಗಿದ್ದಾರೆ. ಆರೋಪಿ ಉಮರ್ ಫಾರೂಕ್ ಅನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಫಾರೂಕ್ ಹಾಗೂ ಪತ್ನಿ ತಾಹಿರ ನಡುವೆ ಕಲಹ ನಡೆಯುತ್ತಿದ್ದು, ವಿಚ್ಛೇದನದ ಹಂತಕ್ಕೂ ವಿಚಾರ ತಲುಪಿತ್ತು. ಇದೇ ವೇಳೆ ಆಸ್ತಿ ತನ್ನ ಹೆಸರಿಗೆ ಮಾಡಿಕೊಡುವಂತೆ ಫಾರೂಕ್ ಒತ್ತಾಯಿಸಿದ್ದಾನೆ ಎನ್ನಲಾಗಿದೆ.

ಈ ವಿಚಾರವಾಗಿ ಉಮರ್ ಫಾರೂಕ್ ಮತ್ತು ಆತನ ಬಾವ ಶೇಕುಂಞ ನಡುವೆ ಜಗಳ ಆರಂಭವಾಗಿದ್ದು, ಜಗಳ ಬಿಡಿಸಲು ಹೋದ ಜುಮೈಲಗೆ ಕತ್ತಿ ತಗುಲಿ ಆಕೆ ಮೃತಪಟ್ಟಿದ್ದಾಳೆ. ಗಂಭೀರ ಗಾಯಗೊಂಡಿದ್ದ ಶೇಕುಂಞ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವಿದೇಶದಿಂದ ಕೆಲ ತಿಂಗಳ ಹಿಂದಷ್ಟೇ ಮರಳಿದ್ದ ಫಾರೂಕ್ ಮಾದಕ ವ್ಯಸನಿಯಾಗಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ಇನ್ನೊಂದು ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡದಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳು ವಕೀಲನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಬೆನ್ ಚಿಂಚೊಳ್ಳಿ ನಿವಾಸಿ 26 ವರ್ಷದ ಅನಿಲ್ ಕುಮಾರ್ ಗಾಯಗೊಂಡಿದ್ದು, ಹಂದಿ ಸಾಕಾಣಿಕೆ ವಿಚಾರವಾಗಿ ನಡೆದ ಜಗಳ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲು ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ.

ಘಟನೆ ಸಂಬಂಧ ಹಳ್ಳಿಖೇಡ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಗಾಯಗೊಂಡ ಅನಿಲ್ ಕುಮಾರ್‌ಗೆ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡೂ ಪ್ರಕರಣಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

error: Content is protected !!