HomeKarnataka Newsಬಿಜೆಪಿಯಿಂದ ಬೆಲೆ ಏರಿಕೆ, ಕಾಂಗ್ರೆಸ್ ನಿಂದ ಗ್ಯಾರಂಟಿ: ಡಿಸಿಎಂ ಡಿ.ಕೆ. ಶಿವಕುಮಾರ್

ಬಿಜೆಪಿಯಿಂದ ಬೆಲೆ ಏರಿಕೆ, ಕಾಂಗ್ರೆಸ್ ನಿಂದ ಗ್ಯಾರಂಟಿ: ಡಿಸಿಎಂ ಡಿ.ಕೆ. ಶಿವಕುಮಾರ್

For Dai;y Updates Join Our whatsapp Group

Spread the love

ಬೆಂಗಳೂರು: ಬಿಜೆಪಿಯ ಕೇಂದ್ರ ಸರ್ಕಾರ ಬೆಲೆ ಏರಿಕೆ ಮೂಲಕ ಜನರ ಮೇಲೆ ಆರ್ಥಿಕ ಹೊರೆ ಹೆಚ್ಚಿಸಿದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನಸಾಮಾನ್ಯರ ಆರ್ಥಿಕ ಹೊರೆ ಇಳಿಸುತ್ತಿದೆ. ಕಾಂಗ್ರೆಸ್ ಗ್ಯಾರಂಟಿ ಇಲ್ಲವಾಗಿದ್ದರೆ ಪರಿಸ್ಥಿತಿ ಯಾವ ರೀತಿ ಇರುತ್ತಿತ್ತು ಎಂದು ಆಲೋಚನೆ ಮಾಡಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಶಿವಕುಮಾರ್ ಅವರು ಸೋಮವಾರ ಮಾತನಾಡಿದರು.

“ನಮ್ಮ ಗ್ಯಾರಂಟಿ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ದೇಶವೇ ಮೆಚ್ಚಿದೆ. ವಿಶ್ವಸಂಸ್ಥೆಯೇ ಪ್ರಶಂಸೆ ನೀಡಿದೆ. ಬೆಲೆ ಏರಿಕೆ ಗಗನಕ್ಕೆ, ಆದಾಯ ಪಾತಾಳಕ್ಕೆ ಕುಸಿಯುತ್ತಿದೆ. ಅನೇಕ ಹೊಟೇಲ್ ಗಳು ಸಿಲಿಂಡರ್ ದರ ಏರಿಕೆ ಹಾಗೂ ಅಭಾವದಿಂದ ಅರ್ಧ ಬಂದ್ ಮಾಡಿದ್ದಾರೆ. ಈ ವರ್ಷ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಮಾರ್ಚ್ 1ರಂದು ₹28, ಮಾರ್ಚ್ 7ರಂದು ₹114.50, ಮಾರ್ಚ್ 23ರಂದು ₹49, ಏಪ್ರಿಲ್ 1ರಂದು ₹195 ರಿಂದ ₹218 ರವರೆಗೆ, ಮೇ 1ರಂದು ₹993 ನಷ್ಟು ಏರಿಕೆ ಮಾಡಿದ್ದಾರೆ” ಎಂದು ವಿವರಿಸಿದರು.

ಬೆಲೆ ಏರಿಕೆ ಜನರ ಬದುಕಿಗೆ ಶಾಪ:

“ಈ ಬೆಲೆ ಏರಿಕೆ ಎಲ್ಲರ ಬದುಕಿಗೆ ಶಾಪವಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ಬೆಲೆ ಕಡಿಮೆ ಇದ್ದರೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಲಾಗಿದೆ. ಇಂಧನ ಮೇಲಿನ ತೆರಿಗೆ ಮೂಲಕ ಕೇಂದ್ರ ಸರ್ಕಾರ ನಿತ್ಯ 1 ಸಾವಿರ ಕೋಟಿ ಸಂಗ್ರಹಿಸುತ್ತಿದೆ.

ಈ ತೆರಿಗೆ ಬಿಟ್ಟು ಜನಸಾಮಾನ್ಯರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಬಹುದಾಗಿತ್ತು. ಬೇರೆ ಯಾವುದೇ ದೇಶದಲ್ಲಿ ಈ ರೀತಿ ಬೆಲೆ ಏರಿಕೆಯಾಗಿಲ್ಲ. ಕಳೆದ 11 ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು 7.52 ರೂ. ಹೆಚ್ಚಳ ಮಾಡಲಾಗಿದೆ. ಇದರಿಂದ ಜನಸಾಮಾನ್ಯರ ಮೇಲೆ ಪರಿಣಾಮ ಬೀರಿದೆ” ಎಂದು ತಿಳಿಸಿದರು.

ಮಾನ ಮಾರ್ಯಾದೆ ಇಲ್ಲದ ಬಿಜೆಪಿ ನಾಯಕರು ರಾಜ್ಯ ಸರ್ಕಾರಕ್ಕೆ ಬೆಲೆ ಇಳಿಸಲು ಹೇಳುತ್ತಿದ್ದಾರೆ

ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಸುಲಿಗೆ ಎಂದು ಟೀಕೆ ಮಾಡಿದೆವು, 100 ನಾಟೌಟ್ ಎಂದು ಪ್ರತಿಭಟನೆ ಮಾಡಿದೆವು. ನಿಘಂಟಿನಲ್ಲಿರುವ ಎಲ್ಲಾ ಪದ ಪ್ರಯೋಗ ಮಾಡಿ ಟೀಕೆ ಮಾಡಿದರೂ ಮಾನ ಮರ್ಯಾದೆ ಇಲ್ಲದೆ, ರಾಜ್ಯ ಸರ್ಕಾರ ತೆರಿಗೆ ಕಡಿಮೆ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಹೇಳುತ್ತಿದ್ದಾರೆ. ಮೊದಲು ನೀವು ಕೇಂದ್ರ ಸರ್ಕಾರದ ಸುಲಿಗೆ ನಿಲ್ಲಿಸಿ” ಎಂದು ವಾಗ್ದಾಳಿ ನಡೆಸಿದರು.

“ಈ ಮಧ್ಯೆ ಪ್ರಧಾನಮಂತ್ರಿಗಳು ಅಡುಗೆ ಎಣ್ಣೆ ಕಡಿಮೆ ಮಾಡಿ ಎಂದು ಸಲಹೆ ನೀಡುತ್ತಾರೆ. ಕೇಂದ್ರ ಸರ್ಕಾರ 12 ವರ್ಷಗಳಲ್ಲಿ ಇಂಧನ ತೈಲಗಳ ಮೇಲಿನ ತೆರಿಗೆ ಮೂಲಕ 43 ಲಕ್ಷ ಕೋಟಿ ಸಂಗ್ರಹಿಸಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ 71 ರೂ. ಇದ್ದ ಪೆಟ್ರೋಲ್ ಹಾಗೂ 56 ರೂ. ಇದ್ದ ಡೀಸೆಲ್ ಬೆಲೆ ಇಂದು ಕ್ರಮವಾಗಿ 110 ಹಾಗೂ 99 ರೂ. ತಲುಪಿದೆ.

ಇದೇ ತಿಂಗಳು 30ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ನಮ್ಮ ಪಕ್ಷ ಇಂದಿನ ಸಭೆಯ ಬಳಿಕ ಮುಂದಿನ ಹೋರಾಟದ ರೂಪುರೇಷೆ ಪ್ರಕಟಿಸುತ್ತೇವೆ. ನಂತರ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೋರಾಟ ಮಾಡುವಂತೆ ಸೂಚಿಸಲಾಗುವುದು” ಎಂದು ತಿಳಿಸಿದರು.

ಕೇಂದ್ರ ಬಿಜೆಪಿ ಸರ್ಕಾರವನ್ನು ಜನರೇ ಕಿತ್ತೊಗೆಯಬೇಕು

“ಬೆಲೆ ಏರಿಕೆ ವಿರುದ್ಧ ಜನರ ಗಮನ ಸೆಳೆಯುವುದು, ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಜನರೇ ಈ ಜನವಿರೋಧಿ ಕೇಂದ್ರ ಸರ್ಕಾರವನ್ನು ಕಿತ್ತೊಗೆಯುವ ಕೆಲಸ ಆಗಬೇಕು. ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಸಾಧನೆ ಬಗ್ಗೆ ಮಾತನಾಡುತ್ತಾರೆ.

ಮೋದಿ ಅವರು ಮದುವೆಗೆ ಚಿನ್ನ ಖರೀದಿ ಮಾಡಬೇಡಿ, ಸರಿಯಾಗಿ ಊಟ ಮಾಡಬೇಡಿ ಎಂದು ಹೇಳಿ ಜನರನ್ನು ನಿಯಂತ್ರಿಸಲು ಹೇಗೆ ಸಾಧ್ಯ? ಒಂದು ದಿನ ಮೆಟ್ರೋದಲ್ಲಿ ಸಂಚರಿಸಿದ ಬಿಜೆಪಿ ನಾಯಕರು, ಕೇಂದ್ರ ಸಚಿವರು, ಅಧಿಕಾರಿಗಳು ಈಗ ಸಾರ್ವಜನಿಕ ಸಾರಿಗೆ ಬಳಸುತ್ತಿದ್ದಾರಾ? ಕೇವಲ ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಒಂದು ದಿನ ಫೋಟೋ ಶೂಟ್ ಮಾಡಿಕೊಂಡಿದ್ದಾರೆ. ಇದು ವಾಸ್ತವವಾಗಿ ಜಾರಿ ಮಾಡಲು ಆಗದ ಕೆಲಸ. ಜನರಿಗೆ ತೊಂದರೆ ಆಗಲಿ ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮ ರೂಪಿಸುತ್ತಿದ್ದಾರೆ” ಎಂದು ಹರಿಹಾಯ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!