Home Blog Page 39

ಮಸೀದಿಗಳ ಕಮಾನುಗಳಲ್ಲಿ ಅಡಗಿದೆ ಇಸ್ಲಾಂ ತತ್ವಜ್ಞಾನ: ಡಾ. ಅಪ್ಪಣ್ಣ ಹಂಜೆ

ವಿಜಯಸಾಕ್ಷಿ ಸುದ್ದಿ, ಗದಗ: ಇಸ್ಲಾಂ ವಾಸ್ತುಕಲೆ ಕೇವಲ ಕಟ್ಟಡ ನಿರ್ಮಾಣವಲ್ಲ, ಅದು ಧಾರ್ಮಿಕ ನಂಬಿಕೆ, ಆಧ್ಯಾತ್ಮಿಕತೆ, ಅನಂತತೆ ಹಾಗೂ ಸೌಂದರ್ಯದ ಸಂಕೇತವಾಗಿದೆ ಎಂದು ಹುಲಕೋಟಿಯ ಕೆ.ಎಚ್. ಪಾಟೀಲ ಫಸ್ಟ್ ಗ್ರೇಡ್ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಅಪ್ಪಣ್ಣ ಹಂಜೆ ಹೇಳಿದರು.

ನಗರದ ಅಬ್ದುಲ್‌ ಕಲಾಂ ಆರ್ಟ್ಸ್ ಅಂಡ್

ಕಾಮರ್ಸ್ ಕಾಲೇಜ್ ಇತಿಹಾಸ ವಿಭಾಗದ ಬಿ.ಎ. 6ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಪ್ರಾಜೆಕ್ಟ್ ವರದಿ ಮೌಲ್ಯಮಾಪನ ಕಾರ್ಯದಲ್ಲಿ ಬಾಹ್ಯ ಪರಿವೀಕ್ಷಕರಾಗಿ ಮಾತನಾಡಿದ ಅವರು, ಇಸ್ಲಾಂ ಧರ್ಮದ ಕಟ್ಟಡಗಳಲ್ಲಿ ಕಾಣಸಿಗುವ ಮಿಹ್ರಾಬ್, ಕಿಬ್ಲಾ, ಕಮಾನು, ಗುಮ್ಮಟ, ಮಿನಾರ ಹಾಗೂ ಜ್ಯಾಮಿತೀಯ ವಿನ್ಯಾಸಗಳು ಇಸ್ಲಾಂ ತತ್ವ-ಸಿದ್ಧಾಂತ ಮತ್ತು ನಂಬಿಕೆಗಳ ಪ್ರತೀಕಗಳಾಗಿವೆ ಎಂದು ವಿವರಿಸಿದರು.

ಮಸೀದಿ, ದರ್ಗಾ, ಈದ್ಗಾ, ಗೋರಿ ಹಾಗೂ ಸಮಾಧಿಗಳಂತಹ ಧಾರ್ಮಿಕ ಕಟ್ಟಡಗಳನ್ನು ಕೇವಲ ವಾಸ್ತುಶೈಲಿಯಾಗಿ ನೋಡದೇ, ಅವುಗಳ ಹಿಂದಿರುವ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಿಕಲ್ಪನೆಗಳೊಂದಿಗೆ ಅರ್ಥೈಸಿಕೊಳ್ಳಬೇಕು ಎಂದರು.

ಇತಿಹಾಸ ವಿಭಾಗದ ಉಪನ್ಯಾಸಕಿ ರಾಜೇಶ್ವರಿ ಬಾರಕೇರ ಮಾತನಾಡಿ, ಇಸ್ಲಾಂ ವಾಸ್ತುಕಲೆ ಕಲಾತ್ಮಕತೆ, ವೈಜ್ಞಾನಿಕತೆ ಮತ್ತು ಸಾಂಸ್ಕೃತಿಕ ಮೌಲ್ಯಗಳ ಸಮನ್ವಯವಾಗಿದ್ದು, ವಿಭಿನ್ನ ಸಂಸ್ಕೃತಿಗಳ ನಡುವೆ ಸೌಹಾರ್ದತೆಯ ಸೇತುವೆಯಾಗಿ ಕಾರ್ಯನಿರ್ವಹಿಸಿದೆ ಎಂದು ಹೇಳಿದರು.

ಪ್ರಾಚಾರ್ಯ ಎಸ್.ಎಚ್. ಬಡೇಖಾನ ಅಧ್ಯಕ್ಷೀಯ ನುಡಿಗಳಲ್ಲಿ ಮಾತನಾಡಿ, ಧಾರ್ಮಿಕ ಕಟ್ಟಡಗಳ ಅಧ್ಯಯನ ಮಾಡುವಾಗ ಅವುಗಳ ತಾತ್ವಿಕ ಮತ್ತು ಧಾರ್ಮಿಕ ಹಿನ್ನೆಲೆಯನ್ನು ಅರ್ಥೈಸಿಕೊಳ್ಳುವುದು ಅತ್ಯಗತ್ಯ. ಇಲ್ಲವಾದರೆ ಅಧ್ಯಯನ ಕೇವಲ ಭೌತಿಕ ವಿವರಣೆಗೆ ಸೀಮಿತವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಮಾಜಶಾಸ್ತ್ರ ಉಪನ್ಯಾಸಕಿ ಸವಿತಾ ಆರಾಧ್ಯಮಠ ವಂದಿಸಿದರು. ಕನ್ನಡ ಉಪನ್ಯಾಸಕಿ ಕವಿತಾ ಅಜನಾಳ ಕಾರ್ಯಕ್ರಮ ನಿರೂಪಿಸಿದರು. ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 “ಇಸ್ಲಾಂ ವಾಸ್ತುಕಲೆಯ ಪ್ರತಿಯೊಂದು ಕಮಾನು, ಗುಮ್ಮಟ ಮತ್ತು ವಿನ್ಯಾಸವೂ ಧಾರ್ಮಿಕ ತತ್ವ ಹಾಗೂ ಆಧ್ಯಾತ್ಮಿಕ ಸಂದೇಶವನ್ನು ಹೊತ್ತಿರುತ್ತದೆ.”

ಡಾ. ಅಪ್ಪಣ್ಣ ಹಂಜೆ

 

ಧರ್ಮ ಮರೆತರೆ ಸಮಾಜ ದಾರಿ ತಪ್ಪುತ್ತದೆ: ಪ್ರವೀಣ ಬೆನ್ನೂರ

ವಿಜಯಸಾಕ್ಷಿ ಸುದ್ದಿ, ಗದಗ: ಯುವ ಪೀಳಿಗೆಗೆ ಧರ್ಮ ಸಂಸ್ಕಾರ, ಧರ್ಮ ಶಿಕ್ಷಣ ಹಾಗೂ ಸನಾತನ ಭಾರತೀಯ ಸಂಸ್ಕೃತಿಯನ್ನು ಕಲಿಸುವುದು ಇಂದಿನ ಕಾಲದ ತುರ್ತು ಅಗತ್ಯವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕ ಪ್ರವೀಣ ಬೆನ್ನೂರ ಹೇಳಿದರು.

ನಗರದ ರಾಜೀವ ಗಾಂಧಿ ನಗರದ ನವಲೆ ಕಟ್ಟಡದಲ್ಲಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಭಾವಸಾರ ವ್ಹಿಜನ್ ಇಂಡಿಯಾ ಗದಗ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ವಿಶೇಷ ಹಿಂದೂ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಮತ್ತು ಧರ್ಮ ವಿಮುಖತೆಯಿಂದ ಯುವಜನತೆ ದಾರಿ ತಪ್ಪುತ್ತಿದೆ. ಇದಕ್ಕೆ ಪರಿಹಾರವೆಂದರೆ ಬಾಲ್ಯದಿಂದಲೇ ಮಕ್ಕಳಿಗೆ ಧರ್ಮ ಶಿಕ್ಷಣ, ರಾಷ್ಟ್ರಭಕ್ತಿ ಮತ್ತು ಭಾರತೀಯ ಸಂಸ್ಕಾರಗಳನ್ನು ಬಿತ್ತುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ‘ಲವ್ ಜಿಹಾದ್’ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಷಡ್ಯಂತ್ರಗಳ ವಿರುದ್ಧ ಸಮಾಜ ಎಚ್ಚರಗೊಳ್ಳಬೇಕು. ಮಹಿಳೆಯರು ಮತ್ತು ಯುವತಿಯರಲ್ಲಿ ಧರ್ಮರಕ್ಷಣೆ, ಸ್ವಸಂರಕ್ಷಣೆ ಹಾಗೂ ಆತ್ಮಗೌರವದ ಜಾಗೃತಿ ಮೂಡಿಸಲು ‘ರಣರಾಗಿಣಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಭಾವಸಾರ ವ್ಹಿಜನ್ ಇಂಡಿಯಾದ ನಿರ್ದೇಶಕ ಅಶ್ವಥ್ ಸುಲಾಖೆ, ಸನಾತನ ಧರ್ಮದ ಮೌಲ್ಯಗಳನ್ನು ಉಳಿಸುವುದು ಪ್ರತಿಯೊಬ್ಬ ಹಿಂದುವಿನ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.

ಸನಾತನ ಸಂಸ್ಥೆಯ ಸಾಧಕಿ ಜಯಶ್ರೀ ಹೆಬಸೂರ ಮಾತನಾಡಿ, ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಎಂಬ ಧ್ಯೇಯದೊಂದಿಗೆ ಸನಾತನ ಸಂಸ್ಥೆ ಧರ್ಮ ಜಾಗೃತಿ ಹಾಗೂ ಭಾರತೀಯ ಸಂಸ್ಕಾರದ ಉಳಿವಿಗಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಭಾವಸಾರ ವ್ಹಿಜನ್ ಇಂಡಿಯಾ ಅಧ್ಯಕ್ಷ ಶ್ರೀಪಾದ ವೈಕುಂಠೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗದಗ ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷ ಪರಶುರಾಮ ಮಹೇಂದ್ರಕರ, ಸಮಾಜ ಟ್ರಸ್ಟ್ ಸದಸ್ಯ ತುಕಾರಾಮ ಬೇಂದ್ರೆ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆತಿಥ್ಯ ವಹಿಸಿದ್ದ ವಿಜಯಾ ಪರಶುರಾಮ ನವಲೆ ದಂಪತಿಯನ್ನು ಸನ್ಮಾನಿಸಲಾಯಿತು.

ಭಾಗ್ಯಶ್ರೀ ನವಲೆ ಪ್ರಾರ್ಥಿಸಿದರು. ರಾಘವೇಂದ್ರ ನವಲೆ ಸ್ವಾಗತಿಸಿದರು. ರಾಜು ಕಪಟಕರ ಕಾರ್ಯಕ್ರಮ ನಿರೂಪಿಸಿದರು. ಸುಧಾ ವೈಕುಂಠೆ ವಂದಿಸಿದರು.

ಜೆ.ಡಿ. ಉತ್ತರಕರ, ರಾಜೇಂದ್ರ ತ್ರಿಮಲ್ಲೆ, ಈರಣ್ಣ ಬೆಳಮಕರ, ಷಣ್ಮುಖ ಸುಲಾಖೆ, ನಾಗರಾಜ ವಾದೋನೆ, ವೀಣಾ ಸುಲಾಖೆ, ಸುರೇಖಾ ಪಾಟೀಲ, ವಿಜಯಲಕ್ಷ್ಮೀ ದೇಸಾಯಿ, ದ್ಯಾಮಕ್ಕ ಬಸೆಟ್ಟಿ, ಅಕ್ಕಮ್ಮ ಅಬ್ಬಿಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 “ಧರ್ಮ ಶಿಕ್ಷಣ ಮತ್ತು ಭಾರತೀಯ ಸಂಸ್ಕಾರಗಳನ್ನು ಮಕ್ಕಳಿಗೆ ಬಾಲ್ಯದಲ್ಲೇ ನೀಡಿದರೆ ಮಾತ್ರ ಸಮಾಜದ ಭವಿಷ್ಯ ಸುರಕ್ಷಿತವಾಗಿರುತ್ತದೆ.”

ಪ್ರವೀಣ ಬೆನ್ನೂರ

 

ಜನರ ಆಕ್ರೋಶಕ್ಕೆ ಎಚ್ಚೆತ್ತ ಪಂಚಾಯಿತಿ: 35 ಮಿನಿ ಟ್ಯಾಂಕ್ ಸ್ವಚ್ಛತೆ, ಪೈಪ್‌ಲೈನ್ ದುರಸ್ತಿ ಆರಂಭ

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಗ್ರಾಮ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಅಸ್ವಚ್ಛತೆ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಲಕ್ಕುಂಡಿ ಗ್ರಾಮ ಪಂಚಾಯಿತಿ ಎಚ್ಚೆತ್ತುಕೊಂಡಿದ್ದು, ಗ್ರಾಮದಲ್ಲಿ ಮಿನಿ ಟ್ಯಾಂಕ್‌ಗಳ ಸ್ವಚ್ಛತೆ, ಪೈಪ್‌ಲೈನ್ ಹಾಗೂ ಕೊಳವೆಬಾವಿ ದುರಸ್ತಿ ಕಾರ್ಯವನ್ನು ಭರದಿಂದ ಆರಂಭಿಸಿದೆ.

ಕಳೆದ ಜೂನ್ 5ರಂದು ನಡೆದ ಗ್ರಾಮ ಸಭೆಯಲ್ಲಿ, ಪೈಪ್‌ಲೈನ್ ಮತ್ತು ಕೊಳವೆಬಾವಿ ದುರಸ್ತಿ ನಿರ್ಲಕ್ಷ್ಯದಿಂದ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ. ಗ್ರಾಮದ ಹೊರವಲಯ ಅಸ್ವಚ್ಛತೆಯಿಂದ ಕೂಡಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದರು. ಇದರ ಪರಿಣಾಮವಾಗಿ ಗ್ರಾಮ ಪಂಚಾಯಿತಿ ತುರ್ತು ಸಭೆ ನಡೆಸಿ ಕ್ರಮ ಕೈಗೊಂಡಿದೆ.

ಗ್ರಾಮದ ವಾರ್ಡ್‌, ಶಾಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಲಾಗಿರುವ ಒಟ್ಟು 35 ಮಿನಿ ಟ್ಯಾಂಕ್‌ಗಳನ್ನು ಪಂಚಾಯಿತಿ ಸಿಬ್ಬಂದಿಯಿಂದ ಸ್ವಚ್ಛಗೊಳಿಸಿ ಸುಣ್ಣ ಹಚ್ಚುವ ಕಾರ್ಯ ಆರಂಭಿಸಲಾಗಿದೆ. ಜಂತ್ಲಿ-ಶಿರೂರು ರಸ್ತೆಯ ಕೊಳವೆಬಾವಿಯಿಂದ ನೀರು ಪೂರೈಕೆಯಾಗುವ ಪೈಪ್‌ಲೈನ್‌ಗಳ ದುರಸ್ತಿ ಕಾರ್ಯವೂ ಪ್ರಗತಿಯಲ್ಲಿದೆ.

ಕುಡಿಯುವ ನೀರಿನ ಟ್ಯಾಂಕ್‌ಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಿ, ಸುಣ್ಣ-ಬಣ್ಣ ಬಳಿದು ಸುಂದರಗೊಳಿಸುತ್ತಿರುವ ಪಂಚಾಯಿತಿ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಗ್ರಾಮದಲ್ಲಿ ಒಟ್ಟು 11 ವಾರ್ಡ್‌ಗಳಿದ್ದು, 1ರಿಂದ 5 ಹಾಗೂ 11ನೇ ವಾರ್ಡ್‌ಗಳಿಗೆ ಈಗಾಗಲೇ 2-3 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಆದರೆ 6ರಿಂದ 10ನೇ ವಾರ್ಡ್‌ಗಳಿಗೆ 8ರಿಂದ 12 ದಿನಕ್ಕೊಮ್ಮೆ ಮಾತ್ರ ನೀರು ಬರುತ್ತಿರುವುದು ಗ್ರಾಮ ಸಭೆಯಲ್ಲಿ ಬೆಳಕಿಗೆ ಬಂದಿತ್ತು.

ಈ ಕುರಿತು ಮಾತನಾಡಿದ ಆಡಳಿತಾಧಿಕಾರಿ ಶರಣು ಗೋಗೇರಿ, ಹೆಚ್ಚು ಕುಟುಂಬಗಳಿರುವ 6ರಿಂದ 10ನೇ ವಾರ್ಡ್‌ನಲ್ಲಿ 35 ವಾಲ್‌ಗಳಿದ್ದು, ಇಲ್ಲಿ ಇಬ್ಬರು ವಾಲ್‌ಮನ್‌ಗಳನ್ನು ನೇಮಕ ಮಾಡಿ ಅವರಿಗೆ ನಿಗದಿತ ಸಮಯ ವಹಿಸಲಾಗಿದೆ. ಇನ್ನು ಮುಂದೆ ಕನಿಷ್ಠ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಗ್ರಾಮಕ್ಕೆ ಪ್ರತಿದಿನ ಸುಮಾರು 9 ಲಕ್ಷ ಲೀಟರ್ ನೀರಿನ ಅಗತ್ಯವಿದ್ದು, ಪ್ರಸ್ತುತ ತುಂಗಭದ್ರಾ ನದಿ ಪಾತ್ರದಿಂದ 5 ಲಕ್ಷ ಲೀಟರ್ ನೀರು ಮಾತ್ರ ಲಭ್ಯವಾಗುತ್ತಿದೆ. ಉಳಿದ 4 ಲಕ್ಷ ಲೀಟರ್ ನೀರನ್ನು ಗ್ರಾಮದ ಕೊಳವೆಬಾವಿ ಸಂಪನ್ಮೂಲಗಳಿಂದ ಪೂರೈಸಲು ಪ್ರಯತ್ನಿಸಲಾಗುತ್ತಿದೆ ಎಂದು ಪಿಡಿಒ ಡಾ. ಅಮೀರನಾಯಕ ಮಾಹಿತಿ ನೀಡಿದರು.

ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಅನೈರ್ಮಲ್ಯ ತಪ್ಪಿಸಲು ಗ್ರಾಮದ ವಿವಿಧ ಭಾಗಗಳ ಮಿನಿ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿ ಪರಿಸರ ಸುಂದರವಾಗಿಡುವ ಅಭಿಯಾನವನ್ನು ಆರಂಭಿಸಲಾಗಿದೆ ಎಂದರು.

 “ಒಂದು ವಾರದೊಳಗೆ ಎಲ್ಲಾ ವಾರ್ಡ್‌ಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು.”

ಶರಣು ಗೋಗೇರಿ

 

ವರುಣನ ಅಬ್ಬರಕ್ಕೆ 8 ಮನೆಗಳು ನೆಲಸಮ; ಮುಗಿಲು ಮುಟ್ಟಿದ ಕುಟುಂಬಗಳ ಆಕ್ರಂದನ!

ಬೆಳಗಾವಿ: ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಹಲವೆಡೆ ಭಾರೀ ಹಾನಿ ಉಂಟಾಗಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಕಲ್ಮಠ ಓಣಿಯಲ್ಲಿ ಸುರಿದ ಧಾರಾಕಾರ ಮಳೆಗೆ ಒಂದೇ ಪ್ರದೇಶದಲ್ಲಿ ಎಂಟು ಮನೆಗಳು ಕುಸಿದು ಬಿದ್ದಿವೆ.

ಮನೆಗಳು ಕುಸಿದ ವೇಳೆ ಒಳಗಿದ್ದ ನಿವಾಸಿಗಳು ಸಮಯಕ್ಕೆ ಹೊರಬಂದ ಪರಿಣಾಮ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅದೃಷ್ಟವಶಾತ್ ಎಂಟು ಮನೆಗಳಲ್ಲಿದ್ದ ಕುಟುಂಬಗಳು ಪವಾಡ ಸದೃಶವಾಗಿ ಪಾರಾಗಿವೆ.

ಕುಸಿದ ಮನೆಗಳಲ್ಲಿ ವಾಸಿಸುತ್ತಿದ್ದವರು ಬಹುತೇಕ ಕೂಲಿ ಕಾರ್ಮಿಕರಾಗಿದ್ದು, ಮಳೆಯ ಅವಾಂತರದಿಂದ ಬಟ್ಟೆ, ದವಸ-ಧಾನ್ಯ, ಹಣ, ಪ್ರಮುಖ ದಾಖಲೆಗಳು ಸೇರಿದಂತೆ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಮಣ್ಣಿನಡಿ ಹುದುಗಿವೆ. ಉಟ್ಟ ಬಟ್ಟೆ ಹೊರತುಪಡಿಸಿ ಉಳಿದ ಎಲ್ಲವನ್ನೂ ಕಳೆದುಕೊಂಡಿರುವ ಕುಟುಂಬಗಳು ಇದೀಗ ಸಂಕಷ್ಟಕ್ಕೆ ಸಿಲುಕಿವೆ.

ಮನೆ ಕಳೆದುಕೊಂಡ ಕುಟುಂಬಗಳು ಬೀದಿಗೆ ಬಿದ್ದಿದ್ದು, ತಮ್ಮ ನೋವನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡು ಕಣ್ಣೀರು ಹಾಕಿವೆ. ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣ ನೆರವಿಗೆ ಧಾವಿಸಿ ಪರಿಹಾರ ಒದಗಿಸಬೇಕೆಂದು ಸಂತ್ರಸ್ತರು ಮನವಿ ಮಾಡಿದ್ದಾರೆ.

ಮುಂಗಾರು ಮಳೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹಳೆಯ ಹಾಗೂ ಶಿಥಿಲಾವಸ್ಥೆಯ ಮನೆಗಳಲ್ಲಿ ವಾಸಿಸುವವರು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಹಸಿವಾದಾಗ ಕೋಪ ಯಾಕೆ ಬರುತ್ತದೆ? ಇದರ ಹಿಂದಿದೆ ವೈಜ್ಞಾನಿಕ ಕಾರಣ

ಆಹಾರವು ಮಾನವನ ದೇಹಕ್ಕೆ ಅತ್ಯಗತ್ಯವಾದ ಮೂಲಭೂತ ಅವಶ್ಯಕತೆಯಾಗಿದೆ.

ದೇಹಕ್ಕೆ ಶಕ್ತಿ ಒದಗಿಸುವ ಆಹಾರ ಸಮಯಕ್ಕೆ ಸಿಗದಿದ್ದರೆ ಅಥವಾ ಹೆಚ್ಚು ಹೊತ್ತು ಹೊಟ್ಟೆ ಖಾಲಿಯಾಗಿದ್ದರೆ ಅನೇಕರು ಕಿರಿಕಿರಿ, ಅಸಹನೆ ಮತ್ತು ಕೋಪವನ್ನು ಅನುಭವಿಸುತ್ತಾರೆ. ಹಸಿವಾದಾಗ ಸಣ್ಣಪುಟ್ಟ ವಿಷಯಗಳಿಗೂ ಕೋಪಗೊಳ್ಳುವ ಈ ಸ್ಥಿತಿಯ ಹಿಂದೆ ವೈಜ್ಞಾನಿಕ ಕಾರಣಗಳಿವೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ನಾವು ಹೆಚ್ಚು ಸಮಯ ಆಹಾರ ಸೇವಿಸದೇ ಇದ್ದಾಗ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ. ಗ್ಲೂಕೋಸ್ ದೇಹ ಮತ್ತು ಮೆದುಳಿಗೆ ಪ್ರಮುಖ ಶಕ್ತಿಯ ಮೂಲವಾಗಿರುವುದರಿಂದ ಅದರ ಪ್ರಮಾಣ ಕಡಿಮೆಯಾದಾಗ ದೇಹವು ಅದನ್ನು ಸಮತೋಲನಕ್ಕೆ ತರಲು ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ ಎಂಬ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಈ ಹಾರ್ಮೋನ್‌ಗಳು ಒತ್ತಡ ಮತ್ತು ತುರ್ತು ಪ್ರತಿಕ್ರಿಯೆಗಳಿಗೆ ಕಾರಣವಾಗುವುದರಿಂದ ವ್ಯಕ್ತಿಯಲ್ಲಿ ಕೋಪ, ಅಸಹನೆ ಮತ್ತು ಕಿರಿಕಿರಿ ಹೆಚ್ಚಾಗಬಹುದು.

ಗ್ಲೂಕೋಸ್ ಮಟ್ಟ ಇಳಿದಾಗ ಮೆದುಳಿನ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರುತ್ತದೆ. ವಿಶೇಷವಾಗಿ ಭಾವನೆಗಳು ಮತ್ತು ನಡವಳಿಕೆಯನ್ನು ನಿಯಂತ್ರಿಸುವ ಮೆದುಳಿನ ಭಾಗಗಳು ಒತ್ತಡಕ್ಕೆ ಒಳಗಾಗುತ್ತವೆ. ಪರಿಣಾಮವಾಗಿ ಭಾವನೆಗಳನ್ನು ನಿಯಂತ್ರಿಸುವ ಸಾಮರ್ಥ್ಯ ಕಡಿಮೆಯಾಗಿ, ಸಣ್ಣ ವಿಷಯಗಳಿಗೂ ವ್ಯಕ್ತಿ ಅತಿಯಾಗಿ ಪ್ರತಿಕ್ರಿಯಿಸುವ ಸಾಧ್ಯತೆ ಹೆಚ್ಚುತ್ತದೆ.

ಹಸಿವಿನ ಸಮಯದಲ್ಲಿ ಕೋಪದ ಜೊತೆಗೆ ಗಮನ ಕೇಂದ್ರೀಕರಿಸಲು ಕಷ್ಟವಾಗುವುದು, ತಲೆನೋವು, ಆಯಾಸ, ಹೃದಯ ಬಡಿತ ಹೆಚ್ಚಾಗುವುದು ಮತ್ತು ಮನಸ್ಥಿತಿಯಲ್ಲಿ ಬದಲಾವಣೆ ಕಾಣಿಸಿಕೊಳ್ಳಬಹುದು. ಇವುಗಳೆಲ್ಲವೂ ದೇಹಕ್ಕೆ ಆಹಾರದ ಅಗತ್ಯವಿದೆ ಎಂಬ ಎಚ್ಚರಿಕೆಯ ಸಂಕೇತಗಳಾಗಿವೆ.

ತಜ್ಞರ ಪ್ರಕಾರ, ಹಸಿವಿನಿಂದ ಉಂಟಾಗುವ ಕಿರಿಕಿರಿ ಮತ್ತು ಕೋಪವನ್ನು ತಡೆಯಲು ನಿಯಮಿತ ಸಮಯಕ್ಕೆ ಆಹಾರ ಸೇವಿಸುವುದು ಅಗತ್ಯ. ದೀರ್ಘ ಸಮಯ ಹೊಟ್ಟೆ ಖಾಲಿ ಇರಿಸಿಕೊಳ್ಳದೇ ಸಣ್ಣ ಪ್ರಮಾಣದಲ್ಲಿ ಆರೋಗ್ಯಕರ ಆಹಾರ ಸೇವಿಸುವುದು ಉತ್ತಮ. ಹಣ್ಣುಗಳು, ಒಣಹಣ್ಣುಗಳು ಹಾಗೂ ಪೌಷ್ಟಿಕಾಂಶಯುಕ್ತ ತಿಂಡಿಗಳು ಗ್ಲೂಕೋಸ್ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತವೆ. ಜೊತೆಗೆ ಸಾಕಷ್ಟು ನೀರು ಕುಡಿಯುವುದರಿಂದ ದೇಹ ಹೈಡ್ರೇಟ್ ಆಗಿ ಉಳಿಯುತ್ತದೆ.

ಆರೋಗ್ಯ ತಜ್ಞರು ಜಂಕ್ ಫುಡ್‌ಗಳ ಸೇವನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ, ಸಮತೋಲಿತ ಆಹಾರ ಪದ್ಧತಿಯನ್ನು ಅನುಸರಿಸುವಂತೆ ಸಲಹೆ ನೀಡಿದ್ದಾರೆ. ಇದರಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಸ್ಥಿತಿಯೂ ಉತ್ತಮವಾಗಿರುತ್ತದೆ.

ದುನಿಯಾ ವಿಜಯ್‌ ಪ್ರತಿಭೆ, ಶಿಸ್ತು ನೋಡಿದರೆ ಗೌರವ ಹೆಚ್ಚಾಗುತ್ತದೆ: ವಿಜಯ್ ಸೇತುಪತಿ

ಕನ್ನಡ ಚಿತ್ರರಂಗದ ಮಾಸ್ ನಟ ದುನಿಯಾ ವಿಜಯ್ ಅವರ ಅಭಿನಯಕ್ಕೆ ಇದೀಗ ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ ಫಿದಾ ಆಗಿದ್ದಾರೆ. ಇಬ್ಬರೂ ಒಟ್ಟಾಗಿ ನಟಿಸಿರುವ ‘ಸ್ಲಂ ಡಾಗ್’ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ವಿಜಯ್ ಸೇತುಪತಿ, ದುನಿಯಾ ವಿಜಯ್ ಬಗ್ಗೆ ಭಾವುಕರಾಗಿ ಮಾತನಾಡಿದ್ದು, ಅವರ ವೃತ್ತಿಪರತೆ ಮತ್ತು ನಟನಾ ಕೌಶಲ್ಯವನ್ನು ಕೊಂಡಾಡಿದ್ದಾರೆ.

“ದುನಿಯಾ ಸಿನಿಮಾ ಬಿಡುಗಡೆಯಾದಾಗಲೇ ವಿಜಯ್ ಅವರ ಹೆಸರು ನನ್ನ ಗಮನಕ್ಕೆ ಬಂದಿತ್ತು. ಆದರೆ ಅವರೊಂದಿಗೆ ಕೆಲಸ ಮಾಡಿದ ನಂತರ ಅವರ ನಿಜವಾದ ಸಾಮರ್ಥ್ಯ ಗೊತ್ತಾಯಿತು. ಪಾತ್ರಕ್ಕಾಗಿ ಅವರು ತೋರಿಸುವ ಸಮರ್ಪಣೆ, ಶ್ರಮ ಮತ್ತು ತಯಾರಿ ಅಸಾಧಾರಣ. ಪ್ರತಿಯೊಂದು ದೃಶ್ಯವನ್ನೂ ಇನ್ನಷ್ಟು ಪರಿಣಾಮಕಾರಿಯಾಗಿಸಲು ಅವರು ಸದಾ ಪ್ರಯತ್ನಿಸುತ್ತಾರೆ” ಎಂದು ವಿಜಯ್ ಸೇತುಪತಿ ಹೇಳಿದರು.

“ನಿರ್ದೇಶಕರು ಹೇಳಿದುದನ್ನು ಮಾತ್ರ ಮಾಡುವ ನಟ ಅವರು ಅಲ್ಲ. ಪಾತ್ರವನ್ನು ಅರ್ಥಮಾಡಿಕೊಂಡು, ಅದಕ್ಕೆ ತಮ್ಮದೇ ಆದ ಹೊಸ ಆಯಾಮ ನೀಡುತ್ತಾರೆ. ಪ್ರತಿ ಶಾಟ್‌ನಲ್ಲಿ ವಿಭಿನ್ನವಾಗಿ ಕಾಣಬೇಕು ಎನ್ನುವ ಹಸಿವು ಅವರಲ್ಲಿದೆ. ಅವರು ಅದ್ಭುತ ನಟ ಮಾತ್ರವಲ್ಲ, ಅತ್ಯುತ್ತಮ ವ್ಯಕ್ತಿಯೂ ಹೌದು. ಅವರ ಜೊತೆ ಕೆಲಸ ಮಾಡಿದ್ದು ನನಗೆ ಗೌರವದ ಸಂಗತಿ” ಎಂದು ಸೇತುಪತಿ ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರದ ನಿರ್ದೇಶಕ ಪುರಿ ಜಗನ್ನಾಥ್ ಕೂಡ ದುನಿಯಾ ವಿಜಯ್ ಅವರ ಅಭಿನಯವನ್ನು ಶ್ಲಾಘಿಸಿದ್ದು, ‘ಸ್ಲಂ ಡಾಗ್’ ಚಿತ್ರದಲ್ಲಿ ಅವರ ಪಾತ್ರ ಪ್ರೇಕ್ಷಕರಿಗೆ ದೊಡ್ಡ ಅಚ್ಚರಿ ನೀಡಲಿದೆ ಎಂದು ಹೇಳಿದ್ದಾರೆ.

ಭಿಕ್ಷುಕ ಮಾಫಿಯಾದ ಸುತ್ತ ಸಾಗುವ ಈ ಆ್ಯಕ್ಷನ್ ಡ್ರಾಮಾದಲ್ಲಿ ವಿಜಯ್ ಸೇತುಪತಿ, ದುನಿಯಾ ವಿಜಯ್, ಟಬು ಸೇರಿದಂತೆ ಹಲವು ಖ್ಯಾತ ಕಲಾವಿದರು ನಟಿಸಿದ್ದು, ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗಿದೆ.

ಬೆಳಗಾವಿ ವಂಚನೆ ಪ್ರಕರಣ: ನಟಿ ಸನ್ನಿ ಲಿಯೋನಿಗೆ ನೊಟೀಸ್ ನೀಡಿದ ಸಿಐಡಿ

ಬೆಂಗಳೂರು: ಬೆಳಗಾವಿ ಮೂಲದ ಶಿವಂ ಅಸೋಸಿಯೇಟ್ಸ್ ಬಹುಕೋಟಿ ವಂಚನೆ ಪ್ರಕರಣ ಇದೀಗ ಸಿನಿಮಾ ಕ್ಷೇತ್ರವನ್ನೂ ತಲುಪಿದೆ. ಸಾವಿರಾರು ಹೂಡಿಕೆದಾರರಿಗೆ ವಂಚನೆ ಎಸಗಿದ ಆರೋಪದಡಿ ಬಂಧಿತನಾಗಿರುವ ಶಿವಾನಂದ ನೀಲಣ್ಣವರ ವಿರುದ್ಧದ ತನಿಖೆಯಲ್ಲಿ ಹೊಸ ತಿರುವು ಸಿಕ್ಕಿದ್ದು, ಬಾಲಿವುಡ್ ನಟಿ ಸನ್ನಿ ಲಿಯೋನ್ ಸೇರಿದಂತೆ ಹಲವು ನಟ-ನಟಿಯರಿಗೆ ಕರ್ನಾಟಕ ಸಿಐಡಿ ನೋಟಿಸ್ ಜಾರಿ ಮಾಡಿದೆ.

ಸಾರ್ವಜನಿಕರಿಂದ ಅಕ್ರಮವಾಗಿ ಸಂಗ್ರಹಿಸಲಾದ ಹಣವನ್ನು ಪ್ರಚಾರ ಕಾರ್ಯಕ್ರಮಗಳು ಹಾಗೂ ಸೆಲೆಬ್ರಿಟಿಗಳ ಪಾವತಿಗೆ ಬಳಸಲಾಗಿದೆ ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಹಣಕಾಸು ವ್ಯವಹಾರಗಳ ವಿವರ ಪಡೆಯಲು ಚಿತ್ರರಂಗದ ಗಣ್ಯರನ್ನು ವಿಚಾರಣೆಗೆ ಕರೆಯಲು ಸಿಐಡಿ ನಿರ್ಧರಿಸಿದೆ.

ಸಿಐಡಿ ತನಿಖೆಯ ಪ್ರಕಾರ, ಶಿವಂ ಅಸೋಸಿಯೇಟ್ಸ್ ಮೂಲಕ 40,700 ಹೂಡಿಕೆದಾರರಿಂದ ಸುಮಾರು 2,400 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. ಅದರಲ್ಲಿ 540 ಕೋಟಿ ರೂಪಾಯಿಯನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗಿದ್ದು, 170 ಕೋಟಿ ರೂಪಾಯಿ ನಷ್ಟವಾಗಿದೆ. ಈ ಸಂಪೂರ್ಣ ಜಾಲವನ್ನು ನಿರ್ವಹಿಸಲು ಆರೋಪಿ 30ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಬಳಸಿದ್ದಾನೆ.

ಹೊಸ ಹೂಡಿಕೆದಾರರಿಂದ ಬಂದ ಹಣವನ್ನು ಹಳೆಯ ಹೂಡಿಕೆದಾರರಿಗೆ ಲಾಭಾಂಶ ರೂಪದಲ್ಲಿ ನೀಡುವ ಪಾಂಜಿ ಮಾದರಿಯ ವಂಚನೆ ವ್ಯವಸ್ಥೆ ನಡೆಸಲಾಗುತ್ತಿತ್ತು. ಬಂಧನದ ಬಳಿಕವೂ ಕಂಪನಿಯ ಖಾತೆಗೆ ಸಾರ್ವಜನಿಕರು ಹಣ ಜಮಾ ಮಾಡಿರುವುದು ತನಿಖಾಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ. ಬಂಧನದ ನಂತರವೂ 5 ಕೋಟಿಗೂ ಹೆಚ್ಚು ಹಣ ಕಂಪನಿಯ ಖಾತೆಗೆ ವರ್ಗಾವಣೆಯಾಗಿದೆ.

ಪ್ರಕರಣದಲ್ಲಿ ಅಕ್ರಮ ಹಣದಿಂದ ಖರೀದಿಸಲಾದ ಆಸ್ತಿಗಳ ಜಾಡು ಹಿಡಿದಿರುವ ಸಿಐಡಿ, ಸುಮಾರು 55 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ವಾಹನಗಳು ಹಾಗೂ ಇತರೆ ಆಸ್ತಿಗಳ ಜಪ್ತಿಗೆ ಮುಂದಾಗಿದೆ. ವಿವಿಧ ರಾಜ್ಯಗಳಲ್ಲಿ ನೋಂದಾಯಿತ ವಾಹನಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.

ಇದೀಗ ನಟಿ ಸನ್ನಿ ಲಿಯೋನ್ ಸೇರಿದಂತೆ ಹಣ ಪಡೆದಿರುವ ಸಿನಿಮಾ ಕ್ಷೇತ್ರದ ವ್ಯಕ್ತಿಗಳ ಬ್ಯಾಂಕ್ ವ್ಯವಹಾರಗಳ ಪರಿಶೀಲನೆಗೂ ಸಿಐಡಿ ಮುಂದಾಗಿದ್ದು, ಈ ಹೈಪ್ರೊಫೈಲ್ ತನಿಖೆ ಮತ್ತಷ್ಟು ದೊಡ್ಡ ಮಟ್ಟದ ಬಹಿರಂಗಪಡಿಸುವಿಕೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ.

ನಕಲಿ ಸಹಿ ಹಗರಣ: ಮಮತಾ ಬ್ಯಾನರ್ಜಿ ನಿವಾಸದ ಮೇಲೆ ಸಿಐಡಿ ದಾಳಿ!

ಕೋಲ್ಕತ್ತಾ: ನಕಲಿ ಸಹಿ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ಭಾಗವಾಗಿ ಪಶ್ಚಿಮ ಬಂಗಾಳ ಸಿಐಡಿ ಅಧಿಕಾರಿಗಳು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ.

ಮೂರು ಬಾರಿ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ಅವರ ಪಕ್ಷದಲ್ಲಿ ಉಂಟಾದ ಭಿನ್ನಾಭಿಪ್ರಾಯಗಳು ಮತ್ತು ಶಾಸಕರ ನಕಲಿ ಸಹಿ ವಿವಾದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು, ಕಾಲಿಘಾಟ್ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೆ ಕೋಲ್ಕತ್ತಾದ 30ಬಿ, ಹರೀಶ್ ಚಟರ್ಜಿ ಸ್ಟ್ರೀಟ್‌ನಲ್ಲಿರುವ ನಿವಾಸ ಮತ್ತು ಪಕ್ಷದ ಕಚೇರಿಗೆ ಭೇಟಿ ನೀಡಿದ್ದಾರೆ.

ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಮಾನ್ಯತೆಗಾಗಿ ಸ್ಪೀಕರ್‌ಗೆ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಕೆಲವು ತೃಣಮೂಲ ಕಾಂಗ್ರೆಸ್ ಶಾಸಕರ ಸಹಿಗಳನ್ನು ನಕಲಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಅಗತ್ಯ ಮಾಹಿತಿ ನೀಡುವಂತೆ ಸಿಐಡಿ ಈಗಾಗಲೇ ನೋಟಿಸ್ ಜಾರಿ ಮಾಡಿತ್ತು.

ಸಿಐಡಿ ನೀಡಿದ್ದ ನೋಟಿಸ್‌ಗೆ ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸಲ್ಲಿಸಿದ ಉತ್ತರದ ಆಧಾರದ ಮೇಲೆ ಮುಂದಿನ ತನಿಖಾ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳದಲ್ಲಿ ಮತ್ತೊಂದು ವೈರಸ್‌ ಆತಂಕ; 443 ಮಂದಿಗೆ ಸೋಂಕು ತಗುಲಿರುವ ಶಂಕೆ, ರಾಜ್ಯಾದ್ಯಂತ ಹೈ ಅಲರ್ಟ್‌ ಘೋಷಣೆ

ಕೇರಳ: ರಾಜ್ಯದಲ್ಲಿ ಶಿಗೆಲ್ಲಾ ಸೋಂಕು ವೇಗವಾಗಿ ಹರಡುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಸೋಂಕಿನಿಂದ 4 ವರ್ಷದ ಮಗು ಮೃತಪಟ್ಟಿದ್ದು, 440ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿರುವ ಶಂಕೆ ವ್ಯಕ್ತವಾಗಿದೆ. ಸೋಂಕಿತರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಯನಾಡ್ ಮತ್ತು ಕೋಯಿಕ್ಕೋಡ್ ಜಿಲ್ಲೆಗಳಲ್ಲಿ ಸೋಂಕು ಹೆಚ್ಚು ವ್ಯಾಪಿಸಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ. ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿ ವ್ಯಾಪ್ತಿಯ ನೆನ್ಮೇನಿ ಪಂಚಾಯಿತಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ.

ಕಳೆದ ವಾರ ಸುಲ್ತಾನ್ ಬತ್ತೇರಿಯ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಲ್ಲಿ ವಾಂತಿ, ಭೇದಿ ಹಾಗೂ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಬಳಿಕ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಇಬ್ಬರು ಮಕ್ಕಳಿಗೆ ಶಿಗೆಲ್ಲಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈ ಘಟನೆ ಬಳಿಕ ಸೋಂಕಿನ ವ್ಯಾಪ್ತಿಯನ್ನು ಪತ್ತೆಹಚ್ಚಲು ಆರೋಗ್ಯ ಇಲಾಖೆ ವ್ಯಾಪಕ ತಪಾಸಣೆ ಆರಂಭಿಸಿತು.

ಪ್ರಸ್ತುತ 337 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 443 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇವರಲ್ಲಿ 68 ಮಂದಿ ಇನ್ನೂ ಆಸ್ಪತ್ರೆಗಳಲ್ಲಿ ದಾಖಲಾಗಿದ್ದು, 26 ಮಂದಿ ಬತ್ತೇರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಇತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇತ್ತೀಚೆಗೆ ಮತ್ತಷ್ಟು 14 ಮಂದಿಯಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ 163 ಮಂದಿಯನ್ನು ವಿಶೇಷ ನಿಗಾದಲ್ಲಿ ಇರಿಸಿದೆ. ಕೆಲವು ಮಕ್ಕಳಲ್ಲಿ ರೋಗಲಕ್ಷಣಗಳು ಮತ್ತೆ ಕಾಣಿಸಿಕೊಳ್ಳುತ್ತಿರುವ ಕಾರಣ ಅವರನ್ನು ಮರುದಾಖಲು ಮಾಡಿ ಚಿಕಿತ್ಸೆ ಮುಂದುವರಿಸಲಾಗಿದೆ.

ಸೋಂಕು ಹರಡುವುದನ್ನು ತಡೆಯಲು ಶಾಲೆಗಳು, ಆಸ್ಪತ್ರೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಸರ್ಕಾರ ಸೂಚಿಸಿದೆ. ಅಗತ್ಯ ಔಷಧಿಗಳ ಕೊರತೆ ಉಂಟಾಗದಂತೆ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಸಮರ್ಪಕ ದಾಸ್ತಾನು ಇಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ನಿಮ್ಮಪ್ಪನಿಂದಲೇ RSSಗೆ ಏನೂ ಮಾಡಲು ಆಗಲಿಲ್ಲ, ನಿಮ್ಮಿಂದ ಆಗುತ್ತಾ?: ಪ್ರಿಯಾಂಕ್ ಖರ್ಗೆ ವಿರುದ್ಧ ಸಿ.ಟಿ. ರವಿ ವಾಗ್ದಾಳಿ

ಬೆಂಗಳೂರು: ಆರ್‌ಎಸ್‌ಎಸ್ ನೋಂದಣಿ ಕುರಿತಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಗೆ ಬಿಜೆಪಿ ನಾಯಕ ಸಿ.ಟಿ. ರವಿ ತೀವ್ರ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ತಂದೆಯಿಂದಲೇ ಆರ್‌ಎಸ್‌ಎಸ್‌ಗೆ ಏನೂ ಮಾಡಲು ಸಾಧ್ಯವಾಗಿಲ್ಲ, ನಿಮ್ಮಿಂದ ಏನು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಹಲವು ಸರ್ಕಾರಗಳು ಮತ್ತು ನಾಯಕರು ಆರ್‌ಎಸ್‌ಎಸ್ ವಿರುದ್ಧ ನಿಲುವು ತಳೆದಿದ್ದರೂ ಸಂಘಟನೆ ತನ್ನ ಕಾರ್ಯಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬಂದಿದೆ ಎಂದು ಹೇಳಿದರು.

“ಪಂಡಿತ್ ಜವಾಹರಲಾಲ್ ನೆಹರು ಪ್ರಧಾನಿಯಾಗಿದ್ದಾಗಲೂ ಆರ್‌ಎಸ್‌ಎಸ್ ವಿರುದ್ಧ ಟೀಕೆಗಳು ನಡೆದಿದ್ದವು. ಬಳಿಕ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ವೇಳೆ ಆರ್‌ಎಸ್‌ಎಸ್‌ಗೆ ನಿಷೇಧ ಹೇರಿದ್ದರು. ಆದರೆ ಇಂದು ಆ ನಾಯಕರು ಇಲ್ಲ, ಆರ್‌ಎಸ್‌ಎಸ್ ಮಾತ್ರ ಇನ್ನೂ ಕಾರ್ಯನಿರ್ವಹಿಸುತ್ತಿದೆ” ಎಂದು ಅವರು ಹೇಳಿದರು.

ಪ್ರಿಯಾಂಕ್ ಖರ್ಗೆ ಅವರನ್ನು ಉದ್ದೇಶಿಸಿ ಮಾತನಾಡಿದ ಸಿ.ಟಿ. ರವಿ, “ನೀವು ಇತ್ತೀಚೆಗೆ ಗೃಹ ಸಚಿವರಾಗಿದ್ದೀರಿ. ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಕೂಡ ಈ ಹಿಂದೆ ಗೃಹ ಸಚಿವರಾಗಿದ್ದರು. ಅವರಿಂದಲೇ ಆರ್‌ಎಸ್‌ಎಸ್‌ಗೆ ಏನೂ ಮಾಡಲು ಆಗಿಲ್ಲ. ಇನ್ನು ನಿಮ್ಮಿಂದ ಆಗುತ್ತದೆಯೇ?” ಎಂದು ಪ್ರಶ್ನಿಸಿದರು.

ಆರ್‌ಎಸ್‌ಎಸ್ ರಾಷ್ಟ್ರ ಸೇವೆ ಹಾಗೂ ವ್ಯಕ್ತಿತ್ವ ನಿರ್ಮಾಣದ ಕೆಲಸ ಮಾಡುತ್ತಿರುವ ಸಂಘಟನೆ ಎಂದು ಬಣ್ಣಿಸಿದ ಅವರು, “ಆರ್‌ಎಸ್‌ಎಸ್ ಕೇವಲ ನೋಂದಣಿ ಮಾಡಿಸಬೇಕಾದ ಸಂಘವಲ್ಲ. ಅದು ಸಮಾಜವನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿರುವ ಸಂಸ್ಥೆ” ಎಂದು ಹೇಳಿದರು.

ಗೃಹ ಸಚಿವರು ತಮ್ಮ ಜವಾಬ್ದಾರಿಗಳತ್ತ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದ ಅವರು, “ರಾಜ್ಯದಲ್ಲಿ ಅಕ್ರಮ ವಲಸಿಗರು, ಡ್ರಗ್ಸ್ ಜಾಲ, ದರೋಡೆ ಪ್ರಕರಣಗಳು ಹಾಗೂ ಮಹಿಳೆಯರು ಮತ್ತು ಮಕ್ಕಳ ನಾಪತ್ತೆ ಪ್ರಕರಣಗಳಂತಹ ಗಂಭೀರ ಸಮಸ್ಯೆಗಳಿವೆ. ಇವುಗಳ ಬಗ್ಗೆ ಗಮನ ಹರಿಸುವುದು ಮುಖ್ಯ” ಎಂದು ಅಭಿಪ್ರಾಯಪಟ್ಟರು.

“ಆರ್‌ಎಸ್‌ಎಸ್‌ನಿಂದ ಯಾವುದೇ ಅಪಾಯವಿಲ್ಲ. ಬದಲಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಅವರು ಒತ್ತಾಯಿಸಿದರು.

ಇದೇ ವೇಳೆ, “ಗೃಹ ಸಚಿವರಾಗಿ ಗೃಹ ಸಚಿವರಂತೆ ವರ್ತಿಸಬೇಕು. ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡದೆ, ಸಮಸ್ಯೆಗಳನ್ನು ಶಮನಗೊಳಿಸುವ ಕೆಲಸ ಮಾಡಬೇಕು. ಅಧಿಕಾರ ಶಾಶ್ವತವಲ್ಲ ಎಂಬುದನ್ನು ಎಲ್ಲರೂ ನೆನಪಿಡಬೇಕು” ಎಂದು ಸಿ.ಟಿ. ರವಿ ಹೇಳಿದರು.

error: Content is protected !!