Home Blog Page 391

ಗ್ಯಾಸ್ ರೀಫಿಲ್ ಮಾಡುವಾಗ ಸಿಲಿಂಡರ್​ ಏಕಾಏಕಿ​ ಸ್ಫೋಟ: ನಾಲ್ವರಿಗೆ ಗಂಭೀರ ಗಾಯ!

ಹಾಸನ: ಸಿಲಿಂಡರ್ ಬದಲಿಸುವ ವೇಳೆ ಅನಿಲ ಸೋರಿಕೆಯಿಂದ ಸಂಭವಿಸಿದ ಭೀಕರ ಸ್ಫೋಟದಲ್ಲಿ ನಾಲ್ವರು ಗಾಯಗೊಂಡ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಕೆ. ಅಬ್ಬೂರು ಗ್ರಾಮದಲ್ಲಿ ನಡೆದಿದೆ.

ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಖಾಲಿಯಾಗಿದ್ದರಿಂದ ಹೊಸ ಸಿಲಿಂಡರ್ ಅಳವಡಿಸಲು ಮುಂದಾದಾಗ ಈ ಅವಘಡ ಸಂಭವಿಸಿದೆ. ಗ್ಯಾಸ್ ತುಂಬಿದ್ದ ಸಿಲಿಂಡರ್‌ಗೆ ರೆಗ್ಯುಲೇಟರ್ ಜೋಡಿಸುವ ವೇಳೆ ಅನಿಲ ಸೋರಿಕೆಯಾಗಿ ಏಕಾಏಕಿ ಸ್ಫೋಟ ಸಂಭವಿಸಿದೆ. ಪರಿಣಾಮವಾಗಿ ಮಹಿಳೆ ಹಾಗೂ ಪುತ್ರ ಸೇರಿ ಮನೆಯಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ತಕ್ಷಣವೇ ಕೊಣನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸುಂದರೇಶ್ ಅವರ ಮನೆಯಲ್ಲಿ ನಡೆದ ಈ ಘಟನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾನಿಗೊಳಗಾಗಿವೆ.

ಈ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿದ ಥಾಯ್ಲೆಂಡ್ ಮಹಿಳೆ: ಸ್ವದೇಶಕ್ಕೆ ಕಳುಹಿಸಲು ಹೈಕೋರ್ಟ್ ಆದೇಶ

ಬೆಂಗಳೂರು: ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿದ ಥಾಯ್ಲೆಂಡ್ ಮೂಲದ ಮಹಿಳೆಯನ್ನು ತಕ್ಷಣ ಸ್ವದೇಶಕ್ಕೆ ಹಿಂತಿರುಗಿಸುವಂತೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ)ಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಈ ಕುರಿತು ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, 2025ರ ನವೆಂಬರ್ 25ರಂದು ಜಾರಿಗೆ ಬಂದಿರುವ ಪ್ರಾಮಾಣಿತ ಕಾರ್ಯವಿಧಾನ (ಎಸ್‌ಒಪಿ) ಅನುಸಾರ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.

ಅರ್ಜಿದಾರರು ವೇಶ್ಯಾವಾಟಿಕೆ ದಂಧೆಯ ಸಂತ್ರಸ್ತೆಯಾಗಿರುವುದರಿಂದ, ಅವರು ಯಾವುದೇ ಇತರೆ ಕ್ರಿಮಿನಲ್ ಪ್ರಕರಣಗಳಿಗೆ ಅಗತ್ಯವಿಲ್ಲದಿದ್ದರೆ, ತಕ್ಷಣವೇ ಥಾಯ್ಲೆಂಡ್‌ಗೆ ಮರಳಿಸಲು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ:
ಬೆಂಗಳೂರು ರಾಮಮೂರ್ತಿ ನಗರ ಪೊಲೀಸರು 2026ರ ಫೆಬ್ರವರಿ 3ರಂದು ಟ್ರಿನಿಟಿ ಥಾಯ್ ಸ್ಪಾ ವೆಲ್‌ನೆಸ್ ಸೆಂಟರ್ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅಕ್ರಮ ವೇಶ್ಯಾವಾಟಿಕೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು, ಸಂತ್ರಸ್ತ ಮಹಿಳೆಯನ್ನು ರಕ್ಷಿಸಿ ಫೆಬ್ರವರಿ 5ರಂದು ಎಫ್‌ಆರ್‌ಆರ್‌ಒ ವಶಕ್ಕೆ ಒಪ್ಪಿಸಲಾಗಿತ್ತು.

ನಂತರ ಆಕೆಯನ್ನು ತುಮಕೂರಿನ ದಿಬ್ಬೂರು ಕಾಲೋನಿಯಲ್ಲಿರುವ ವಿದೇಶಿ ಮಹಿಳೆಯರ ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿತ್ತು.

ವಿಚಾರಣೆ ವೇಳೆ ಮಹಿಳೆಯ ಪರ ವಕೀಲರು, ಆಕೆ ಉದ್ಯೋಗಕ್ಕಾಗಿ ಭಾರತಕ್ಕೆ ಬಂದಿದ್ದು, ಮೋಸದಿಂದ ಈ ಜಾಲದಲ್ಲಿ ಸಿಲುಕಿದ್ದಾಳೆ. ಈಗ ಮಾನಸಿಕ ಒತ್ತಡದಲ್ಲಿದ್ದು, ವೀಸಾ ಅವಧಿ ಮುಗಿದ ಕಾರಣ ಇಲ್ಲಿ ಉಳಿದಿದ್ದಾಳೆ. ಸ್ವದೇಶಕ್ಕೆ ಹಿಂತಿರುಗಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು.

ರಸ್ತೆ ಸಾರಿಗೆ ನಿಗಮಗಳಿಗೆ ಸದ್ಯಕ್ಕೆ ಡೀಸೆಲ್ ಕೊರತೆ ಸಮಸ್ಯೆ ಇಲ್ಲ: ಸಚಿವ ರಾಮಲಿಂಗ ರೆಡ್ಡಿ

ಬೆಂಗಳೂರು: ರಸ್ತೆ ಸಾರಿಗೆ ನಿಗಮಗಳಿಗೆ ಸದ್ಯಕ್ಕೆ ಡೀಸೆಲ್ ಕೊರತೆ ಸಮಸ್ಯೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ. ಆದರೆ ಮಧ್ಯಪ್ರಾಚ್ಯದಲ್ಲಿ ಯುದ್ಧ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಎಸ್‌ಆರ್‌ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳಿಗೂ ತಕ್ಷಣಕ್ಕೆ ಯಾವುದೇ ತೊಂದರೆ ಇಲ್ಲ. ಡೀಸೆಲ್ ಪೂರೈಕೆ ಸರಾಗವಾಗಿದ್ದು, ಜನರು ಆತಂಕಪಡಬೇಕಾಗಿಲ್ಲ ಎಂದು ಹೇಳಿದರು.

ಇದೇ ವೇಳೆ ಬೆಂಗಳೂರು ಕರಗ ಉತ್ಸವದ ಸಿದ್ಧತೆಗಳ ಕುರಿತು ಮಾತನಾಡಿದ ಸಚಿವರು, ಏಪ್ರಿಲ್ 1ರಂದು ಮಧ್ಯರಾತ್ರಿ 12:30ಕ್ಕೆ ಕರಗ ಆಚರಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ. ಅವರು ಆಗಮಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ ಎಂದರು.

ಡಿಕೆ ಶಿವಕುಮಾರ್ ಅವರಿಗೆ ಕೂಡ ಆಹ್ವಾನ ನೀಡಲಾಗುತ್ತಿದೆ. ಈ ಬಾರಿ ಕರಗ ಉತ್ಸವಕ್ಕೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಎಲ್ಲ ವಿಧಿವಿಧಾನಗಳ ಸಿದ್ಧತೆ ಪೂರ್ಣಗೊಂಡಿದೆ ಎಂದು ಹೇಳಿದರು.

ಉತ್ಸವದ ವೇಳೆ ಯಾವುದೇ ಸಂಚಾರ ದಟ್ಟಣೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. 24 ಗಂಟೆಗಳ ಕಾಲ ಕಸ ವಿಲೇವಾರಿ ಮಾಡುವಂತೆ ಸೂಚನೆ ನೀಡಲಾಗಿದೆ. ಬೆಂಗಳೂರು ಸೇರಿದಂತೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳ ಜನರು ಕರಗ ಉತ್ಸವವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಸರ್ಕಾರ ಹಿಂದಿ ವಿಚಾರದಲ್ಲಿ ದೇಶದ್ರೋಹದ ಕೆಲಸ ಮಾಡುತ್ತಿದೆ: ಅಶ್ವತ್ಥ್ ನಾರಾಯಣ್

ಬೆಂಗಳೂರು: ಹಿಂದಿ ಭಾಷೆ ಕುರಿತ ರಾಜ್ಯ ಸರ್ಕಾರದ ನಿಲುವಿಗೆ ಬಿಜೆಪಿ ನಾಯಕ ಅಶ್ವತ್ಥ್ ನಾರಾಯಣ್ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಿಂದಿ ವಿಚಾರದಲ್ಲಿ ದೇಶದ್ರೋಹದ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ತ್ರಿಭಾಷಾ ನೀತಿ ಕುರಿತು ಪ್ರತಿಕ್ರಿಯಿಸಿದ ಅವರು, ಈಗ ಸರ್ಕಾರ ದ್ವಿಭಾಷಾ ನೀತಿಗೆ ಒತ್ತು ನೀಡುತ್ತಿದ್ದು, ಇಂಗ್ಲಿಷ್ ಬೇಕು ಆದರೆ ಹಿಂದಿ ಬೇಡ ಎಂಬ ನಿಲುವು ತಾಳಿದೆ. ಇದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.

ತ್ರಿಭಾಷಾ ನೀತಿಯಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಕಲಿಯಲೇಬೇಕು ಎಂಬುದಿಲ್ಲ. ಆದರೂ ಸರ್ಕಾರ ವಿಷಯದಲ್ಲಿ ಸಣ್ಣತನ ತೋರಿಸಿದೆ. ಇಂತಹ ನಿರ್ಧಾರಗಳಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂದು ಅಶ್ವತ್ಥ್ ನಾರಾಯಣ್ ಆಕ್ಷೇಪಿಸಿದರು.

ಶಿಕ್ಷಣ ಕ್ಷೇತ್ರಕ್ಕೆ ಕೋಟಿ ಕೋಟಿ ಅನುದಾನ ಖರ್ಚು ಮಾಡಿದರೂ, ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ವಿಫಲವಾಗಿದೆ. ಹಿಂದಿಯನ್ನು ತೆಗೆದು ದೇಶದ ಏಕತೆ ಹೇಗೆ ಸಾಧಿಸುತ್ತಾರೆ? ದೇಶದ ಮಟ್ಟದಲ್ಲಿ ಸಂಪರ್ಕ ಸಾಧಿಸಲು ಹಿಂದಿ ಅಗತ್ಯ ಎಂದು ಹೇಳಿದರು.

ಇನ್ನೊಂದೆಡೆ, ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರೀಖ್ ತಪ್ಪೊಪ್ಪಿಕೊಂಡಿರುವ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು, ಪ್ರಕರಣದಲ್ಲಿ ಕಾಂಗ್ರೆಸ್ ಮೊದಲು ಸಮರ್ಥನೆ ಮಾಡಲು ಪ್ರಯತ್ನಿಸಿತ್ತು. ಈಗ ಏನು ಹೇಳುತ್ತಾರೆ ಎಂಬುದು ನೋಡಬೇಕು ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಓಲೈಕೆ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಬಸ್: ಮೂವರಿಗೆ ಕೈಕಾಲು ಮುರಿತ, ಹಲವರಿಗೆ ಗಾಯ

0

ಶಿವಮೊಗ್ಗ: ಭದ್ರಾವತಿ ತಾಲೂಕಿನ ಕಾಗೇಹಳ್ಳದ ಬಳಿ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಹಳ್ಳಕ್ಕೆ ಬಿದ್ದ ಪರಿಣಾಮ ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ.

ದಾವಣಗೆರೆಯಿಂದ ಭದ್ರಾವತಿಗೆ ಬರುತ್ತಿದ್ದ ಬಸ್, ಕಾಗೇಹಳ್ಳದ ಬಳಿ ಇಂದು ಮಧ್ಯಾಹ್ನ ಸುಮಾರು 12:30ರ ವೇಳೆಗೆ ಅಪಘಾತಕ್ಕೀಡಾಗಿದೆ. ಬಸ್‌ನಲ್ಲಿ ಚಾಲಕ ಹಾಗೂ ಕಂಡಕ್ಟರ್ ಸೇರಿದಂತೆ ಒಟ್ಟು 35 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.

ಅಪಘಾತದಲ್ಲಿ ಮೂವರು ಪ್ರಯಾಣಿಕರಿಗೆ ಕೈ ಮತ್ತು ಕಾಲು ಮುರಿದು ಗಂಭೀರ ಗಾಯಗಳಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಾಲಕನ ಅತಿವೇಗ ಮತ್ತು ನಿಯಂತ್ರಣ ಕಳೆದುಕೊಂಡದ್ದೇ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ.

ಎತ್ತಿಗೆ ಮೈ ತೊಳೆಯಲು ಹೋಗಿ ಯುವಕ ದುರಂತ ಸಾವು: ಸಂಬಂಧಿಕರ ಆಕ್ರಂದನ

ಗದಗ: ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ಯುವಕನೊಬ್ಬ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಮುತ್ತಪ್ಪ ಅಲಿಯಾಸ್ ಫಕ್ಕೀರೇಶ್ ದೇವಪ್ಪ ಮುರ್ಲಾಪುರ (23) ಮೃತ ಯುವಕ ಎಂದು ಗುರುತಿಸಲಾಗಿದೆ.

ಸೋಮವಾರ ಬೆಳಿಗ್ಗೆ ಎತ್ತಿಗೆ ಮೈ ತೊಳೆಯಲು ಕೆರೆಗೆ ತೆರಳಿದ್ದ ವೇಳೆ, ಆಯಾತಪ್ಪಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಗದಗ ಗ್ರಾಮೀಣ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಕೆರೆಯಲ್ಲಿ ಮುಳುಗಿದ್ದ ಯುವಕನ ಮೃತದೇಹವನ್ನು ಹೊರತೆಗೆದರು.

ಘಟನಾ ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ದುಃಖದ ವಾತಾವರಣ ನಿರ್ಮಾಣವಾಗಿತ್ತು.

ಗದಗ ಗ್ರಾಮೀಣ ಠಾಣೆಯ ಹಿರಿಯ ಪೊಲೀಸ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಮರಕ್ಕೆ ಬಸ್ ಡಿಕ್ಕಿ–ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ!

0

ಹಗರಿಬೊಮ್ಮನಹಳ್ಳಿ: ಹೊಸಪೇಟೆ–ಹರಿಹರ ಮುಖ್ಯ ರಸ್ತೆಯಲ್ಲಿ ಬರುವ ಪಿಂಜಾರ ಹೆಗ್ಡಾಳ್ ಗ್ರಾಮದ ಬಳಿ ಕೆಕೆಆರ್‌ಟಿಸಿ ಬಸ್ಸೊಂದು ಮರಕ್ಕೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ.

ಬಸ್ ಚಾಲಕನ ಸಮಯಪ್ರಜ್ಞೆಯಿಂದ ಸಂಭವಿಸಬಹುದಾದ ಭಾರಿ ಅನಾಹುತ ತಪ್ಪಿದೆ. ಬಸ್ಸಿನಲ್ಲಿ ಒಟ್ಟು 16 ಮಂದಿ ಪ್ರಯಾಣಿಕರಿದ್ದು, ಎಲ್ಲರೂ ಸುರಕ್ಷಿತರಾಗಿದ್ದಾರೆ.

ಮಾಹಿತಿಯಂತೆ, ಬಸ್ಸಿನ ಪಾಟಾ (ಪ್ಲೇಟ್ ಕಟ್) ಆಗಿರುವುದರಿಂದ ಬಸ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಈ ಘಟನೆ ವೇಳೆ ಚಾಲಕ ಶಂಕರಲಿಂಗ ಹಾಗೂ ನಿರ್ವಾಹಕ ಹನುಮಂತಪ್ಪ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸಾರಿಗೆ ಬಸ್ ಹಗರಿಬೊಮ್ಮನಹಳ್ಳಿಯಿಂದ ಹೊಸಪೇಟೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ಡಿಪೋ ಅಧಿಕಾರಿಯಾದ ಸಂತೋಷ್ ಕುಮಾರ್ ಮಾಹಿತಿ ನೀಡಿದ್ದು, ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿರುವುದಾಗಿ ತಿಳಿಸಿದ್ದಾರೆ.

ಗ್ಯಾಸ್ ಸಮಸ್ಯೆ ಕುರಿತು ಕೇಂದ್ರ ಸ್ಪಷ್ಟನೆ ನೀಡಲಿ: ಕೆ.ಹೆಚ್ ಮುನಿಯಪ್ಪ ಒತ್ತಾಯ

ಬೆಂಗಳೂರು: ಗ್ಯಾಸ್ ಕೊರತೆ ಸಮಸ್ಯೆ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಪೆಟ್ರೋಲಿಯಂ ಸಚಿವರು ಸ್ಪಷ್ಟನೆ ನೀಡಬೇಕು ಮತ್ತು ತಕ್ಷಣ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಹೋಟೆಲ್‌ಗಳಲ್ಲಿ ಸಿಲಿಂಡರ್ ಕೊರತೆ ಉಂಟಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ನಿನ್ನೆ ಹೆಚ್ಚುವರಿ ಸಿಲಿಂಡರ್ ಪೂರೈಕೆಗೆ ಆದೇಶ ಹೊರಡಿಸಿದೆ ಎಂದು ಹೇಳಿದರು. ಇವು ಇಂದು ಡಿಸ್ಟ್ರಿಬ್ಯೂಟರ್‌ಗಳಿಗೆ ತಲುಪಲಿದ್ದು, ನಾಳೆಯಿಂದ ಹೋಟೆಲ್‌ಗಳಿಗೆ ವಿತರಣೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

ನಾವು ತಿಳಿಸಿದಂತೆ 17,500 ಸಿಲಿಂಡರ್‌ಗಳನ್ನು ಹೋಟೆಲ್‌ಗಳಿಗೆ ಪೂರೈಸಲಾಗುತ್ತದೆ. ಹೀಗಾಗಿ ಯಾರೂ ಆತಂಕಪಡಬೇಕಾಗಿಲ್ಲ ಎಂದು ಭರವಸೆ ನೀಡಿದ್ದಾರೆ.

ಇನ್ನೂ ಕೇಂದ್ರ ಸರ್ಕಾರವನ್ನು ಉದ್ದೇಶಿಸಿ ಮಾತನಾಡಿದ ಮುನಿಯಪ್ಪ, “ಹಿಂದೆ ಬೇಕಾದಷ್ಟು ಕಮರ್ಷಿಯಲ್ ಗ್ಯಾಸ್ ಬಳಸಿ ಎಂದು ಹೇಳಿದ್ದ ಕೇಂದ್ರ, ಈಗ ಏಕಾಏಕಿ ಪೂರೈಕೆಯನ್ನು ನಿಲ್ಲಿಸಿರುವುದು ಸಮಸ್ಯೆಗೆ ಕಾರಣವಾಗಿದೆ. ಈ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಗ್ಯಾಸ್ ಕೊರತೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಈ ಸಮಸ್ಯೆಗೆ ತಕ್ಷಣ ಪರಿಹಾರ ಒದಗಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ್ದೇ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ 5 ದಿನ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಮುಂದಿನ ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಸಿಎಸ್ ಪಾಟೀಲ್ ಮುನ್ಸೂಚನೆ ನೀಡಿದ್ದಾರೆ.

ಮಾರ್ಚ್ 30ರಿಂದ ಏಪ್ರಿಲ್ 3ರವರೆಗೆ ಬೆಂಗಳೂರಿನಲ್ಲಿ ಗುಡುಗು-ಮಿಂಚಿನೊಂದಿಗೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಈ ಅವಧಿಯಲ್ಲಿ ನಗರದಲ್ಲಿ ಗರಿಷ್ಠ ಉಷ್ಣಾಂಶ 35-36 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ ಸುಮಾರು 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿಯೂ ಇದೇ ಅವಧಿಯಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕಲಬುರ್ಗಿಯಲ್ಲಿ ಗರಿಷ್ಠ ಉಷ್ಣಾಂಶ 39-40 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ.

ಬೀದರ್, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ ಹಾಗೂ ಗದಗ ಜಿಲ್ಲೆಗಳಲ್ಲಿ 37-39 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದ್ದು, ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ 34-36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ನಿರೀಕ್ಷೆಯಿದೆ.

ಇದೇ ವೇಳೆ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ 36-38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆ. ಗುಡುಗು-ಮಿಂಚಿನ ವೇಳೆ ಗಾಳಿಯ ವೇಗ ಗಂಟೆಗೆ 40ರಿಂದ 50 ಕಿಲೋಮೀಟರ್‌ವರೆಗೆ ಬೀಸುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಶಾಸಕರು ಐಪಿಎಲ್ ಉಚಿತ ಟಿಕೆಟ್ ಕೇಳುವುದು ತಪ್ಪು: ಡಿ.ಕೆ. ಸುರೇಶ್

ಬೆಂಗಳೂರು: ಉಚಿತವಾಗಿ ಟಿಕೆಟ್ ಕೇಳಿರುವುದು ತಪ್ಪು. ಪಂದ್ಯ ವೀಕ್ಷಣೆ ಮಾಡುವ ಆಸೆ ಇರುವವರು ವೈಯಕ್ತಿಕವಾಗಿ ಹಣ ಕೊಟ್ಟು ಹೋಗಿ ನೋಡಲಿ. ಇದು ಉತ್ತಮವಾದುದು” ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಪ್ರತಿಕ್ರಿಯೆ ನೀಡಿದರು.

ಶಾಸಕರಿಗೆ ಉಚಿತವಾಗಿ ಐಪಿಎಲ್ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಬಗ್ಗೆ ಕೇಳಿದಾಗ, “ಈ ಬಗ್ಗೆ ಯಾರು ಮಾತನಾಡುತ್ತಿದ್ದಾರೆ ಅದು ಮಹಾಪರಾಧ. ಐಪಿಎಲ್ ದುರ್ಘಟನೆ ಸಂದರ್ಭದಲ್ಲಿ ಅವರು ಯಾವ ರೀತಿ ವಾಗ್ದಾಳಿ ಮಾಡಿದ್ದರು, ಪದ ಬಳಸಿದ್ದರು ಎಂದು ತೆಗೆದು ನೋಡಲಿ.

ಮೊದಲಿನಿಂದಲೂ ಟಿಕೆಟ್ ನೀಡುತ್ತಾ ಬಂದಿದ್ದಾರೆ. ಇದನ್ನು ಅಪಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿ ಶಾಸಕರು ಕೂಡ ಐಪಿಎಲ್ ಟಿಕೆಟ್ ಪಡೆದಿದ್ದಾರೆ. ಐಪಿಎಲ್ ರಾಷ್ಟ್ರವನ್ನು ಪ್ರತಿನಿಧಿಸುವ ಪಂದ್ಯಾವಳಿ ಅಲ್ಲ. ವಾಣಿಜ್ಯ ಉದ್ದೇಶಿತ ಪಂದ್ಯಾವಳಿ. ಇವುಗಳ ಬಗ್ಗೆ ಜನಪ್ರತಿನಿಧಿಗಳು ಹೆಚ್ಚು ಗಮನಹರಿಸುವುದು ಒಳ್ಳೆಯದಲ್ಲ” ಎಂದು ಹೇಳಿದರು.

ಬೆಂಗಳೂರಿನ ನಾಲ್ಕು ಕಡೆ ಕ್ರೀಡಾಂಗಣಗಳನ್ನು ನಿರ್ಮಿಸಬೇಕು

ಚಿನ್ನಸ್ವಾಮಿ ಕ್ರೀಡಾಂಗಣ ಬೇರೆಡೆ ಸ್ಥಳಾಂತರ ಮಾಡಬೇಕು ಎಂಬ ಚರ್ಚೆ ಬಗ್ಗೆ ಕೇಳಿದಾಗ, “ಈಗಾಗಲೇ ನಾನು ಆಯ್ಕೆ ಮಾಡಿ, ಸೂಚಿಸಿದ ಜಾಗದಲ್ಲಿ ಹೊಸ ಕ್ರೀಡಾಂಗಣ ಮಾಡಲು ಸರ್ಕಾರ ಮನ್ನಣೆ ನೀಡಿದೆ. ಸೂರ್ಯ ಸಿಟಿಯಲ್ಲಿ ಕ್ರೀಡಾಂಗಣ ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು ನಾನೇ. ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ ನಾಲ್ಕು ಕ್ರೀಡಾಂಗಣ ಮಾಡಬೇಕು. ಕಂಠೀರವ ಕ್ರೀಡಾಂಗಣ, ಕೆಎಸ್ ಸಿಎ, ಫುಟ್ಬಾಲ್ ಕ್ರೀಡಾಂಗಣ ಹೊರತಾಗಿ ಬೇರೆ ಯಾವುದೇ ಕ್ರೀಡಾಂಗಣವಿಲ್ಲ.

ಇಷ್ಟು ದೊಡ್ಡ ಜನಸಂಖ್ಯೆ ಇರುವ ನಗರದಲ್ಲಿ ಯುವಕರಿಗೆ ಕ್ರೀಡೆಯಲ್ಲಿ ಪ್ರೋತ್ಸಾಹ ನೀಡಬೇಕಾದರೆ ನಾಲ್ಕು ದಿಕ್ಕಿನಲ್ಲಿ ಕ್ರೀಡಾಂಗಣ ನಿರ್ಮಿಸಬೇಕು ಎಂದು ಸಲಹೆ ನೀಡಿದ್ದೆ. ನಾನು ಲೋಕಸಭೆ ಸದಸ್ಯನಾಗಿದ್ದಾಗ, ನನ್ನದೇ ಕ್ಷೇತ್ರದ ಸೂರ್ಯ ಸಿಟಿಯಲ್ಲಿ 100 ಎಕರೆ ಮೀಸಲಿಡಬೇಕು ಎಂದು ಹೇಳಿದ್ದೆ. ನಂತರ ಅದನ್ನು ಮೀಸಲಿಟ್ಟು, ಯೋಜನೆ ಅನುಮೋದನೆ ಪಡೆಯಲಾಗಿತ್ತು. ಈ ಬಗ್ಗೆ ನಾನು ಸಚಿವರಾದ ಜಮೀರ್ ಅಹ್ಮದ್, ಅಧ್ಯಕ್ಷರಾದ ಶಿವಲಿಂಗೇಗೌಡರನ್ನು ಭೇಟಿ ಮಾಡಿ ನಾನು ಹಾಗೂ ಶಾಸಕರಾದ ಶಿವಣ್ಣ ಅವರು ಚರ್ಚೆ ಮಾಡಿದ್ದೆವು.

ಈಗ ಈ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲೂ ಅನುಮೋದನೆ ನೀಡಲಾಗಿದೆ. 50-60 ಎಕರೆ ಪ್ರದೇಶದಲ್ಲಿ ಅತ್ಯುತ್ತಮ ಕ್ರೀಡಾಂಗಣ ಆಗಲಿದೆ. ಬಿಡಿಎ ಮೂಲಕ ಶಿವರಾಮ ಕಾರಂತ ಬಡಾವಣೆಯಲ್ಲೂ ಕ್ರೀಡಾಂಗಣ ಮಾಡಬೇಕು ಎಂದು ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಅಲ್ಲೂ 40 ಎಕರೆ ಮೀಸಲಿಡಲಾಗಿದೆ. ಬಿಡದಿಯಲ್ಲೂ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಮೀಸಲಿಡಲು ಸಂಬಂಧಪಟ್ಟವರ ಜತೆ ಚರ್ಚೆ ಮಾಡುವೆ” ಎಂದು ತಿಳಿಸಿದರು.

ದ್ವಿಭಾಷಾ ನೀತಿ ತೀರ್ಮಾನ ಉತ್ತಮ:

ದ್ವಿಭಾಷಾ ನೀತಿ ತೀರ್ಮಾನದ ಬಗ್ಗೆ ಕೇಳಿದಾಗ, “ಮಕ್ಕಳ ಮೇಲೆ ಮೂರು ಭಾಷೆಗಳ ಕಲಿಕೆ ಒತ್ತಡ ಹಾಕಿದರೆ, ಅವರ ಕಲಿಗೆ ಹಾಗೂ ಗ್ರಹಿಕೆ ಕಡಿಮೆಯಾಗುತ್ತದೆ. ಈ ದೃಷ್ಟಿಯಿಂದ ಶಿಕ್ಷಕರು ಕೈಗೊಂಡಿರುವ ತೀರ್ಮಾನ ಉತ್ತಮವಾಗಿದೆ. ಮಕ್ಕಳು ಎರಡು ಭಾಷೆ ಕಡ್ಡಾಯವಾಗಿ ಕಲಿಯಬೇಕು ಎಂಬುದು ಉತ್ತಮ ನಿರ್ಧಾರ. ಮೂರು ಭಾಷೆ ಕಲಿಯುವುದು ಅವರವರ ವೈಯಕ್ತಿಕ ಅಭಿಲಾಷೆ” ಎಂದರು.

ಬಿಜೆಪಿ ನಾಯಕರು ಈ ನಿರ್ಧಾರ ಟೀಕೆ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಸರ್ಕಾರ ಯಾವುದೇ ತೀರ್ಮಾನ ಕೈಗೊಂಡರೂ ವಿರೋಧ ಮಾಡಬೇಕು ಎಂಬುದೊಂದೇ ಬಿಜೆಪಿ ನಾಯಕರ ಗುರಿ. ಅವರ ಕೇಂದ್ರ ನಾಯಕರನ್ನು ಮೆಚ್ಚಿಸಲು, ಮನವೊಲಿಸಲು ಹಿಂದಿ ಪರವಾಗಿರಬೇಕು. ಬಿಜೆಪಿ ನಾಯಕರು ತಮ್ಮ ಕೇಂದ್ರ ನಾಯಕರಿಗೆ ಕನ್ನಡವನ್ನು ಎಲ್ಲಾ ರಾಜ್ಯಗಳಲ್ಲಿ ಅಳವಡಿಸಿಕೊಳ್ಳುವಂತೆ ಮಾಡಬೇಕು ಎಂದು ಮನವರಿಕೆ ಮಾಡಬೇಕು” ಎಂದು ತಿಳಿಸಿದರು.

ತ್ರಿಭಾಷಾ ನೀತಿ ಜಾರಿಗೆ ತಂದಿದ್ದು ಕಾಂಗ್ರೆಸ್, ಈ ನಿರ್ಧಾರ ರಾಜಕೀಯವೇ ಎಂದು ಕೇಳಿದಾಗ, “ಅವತ್ತಿನ ಪರಿಸ್ಥಿತಿ ಬೇರೆ, ಈಗಿನ ಪರಿಸ್ಥಿತಿ ಬೇರೆ. ಇಂದು ಗುಣಮಟ್ಟದ ಅಗತ್ಯವಿದ್ದು, ಎರಡು ಭಾಷೆಗಳಲ್ಲಿ ಕಲಿಕೆ ಆಗಬೇಕು. ಕನ್ನಡವನ್ನು ಪ್ರಧಾನ ಭಾಷೆಯಾಗಿಟ್ಟುಕೊಂಡು ಉಳಿದ ಮತ್ತೊಂದು ಭಾಷೆ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದ್ದು, ಇದು ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಬಿಟ್ಟ ವಿಚಾರ” ಎಂದರು.

ವರ್ಷಪೂರ್ತಿ ಓದಿದ ಬಳಿಕ ಈಗ ಈ ನಿರ್ಧಾರ ಗೊಂದಲ ಮೂಡಿಸುವುದಿಲ್ಲವೇ ಎಂದು ಕೇಳಿದಾಗ, “ಬಹುತೇಕರು ತೃತೀಯ ಭಾಷೆಯಲ್ಲಿ ಅನುತ್ತೀರ್ಣರಾಗುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ತೀರ್ಮಾನ ಮಾಡಿದೆ” ಎಂದು ತಿಳಿಸಿದರು.