ವಿಜಯಸಾಕ್ಷಿ ಸುದ್ದಿ, ನರಗುಂದ-ಕೊಣ್ಣೂರ: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಪುನರ್ರೂಪಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ಬೆಳೆಸಾಲ ಪಡೆದ ರೈತರು ಕಡ್ಡಾಯವಾಗಿ ಬ್ಯಾಂಕ್ಗಳ ಮೂಲಕವೇ ನೋಂದಣಿ ಮಾಡಿಸಬೇಕು ಎಂಬ ಸರ್ಕಾರದ ಆದೇಶ ಜಾರಿಯಲ್ಲಿದ್ದರೂ, ಹಲವು ಬ್ಯಾಂಕ್ಗಳು ಬೆಳೆ ವಿಮೆ ನೋಂದಣಿಯಲ್ಲಿ ನಿರಾಸಕ್ತಿ ತೋರುತ್ತಿವೆ. ಇದರಿಂದ ಸಾವಿರಾರು ರೈತರು ವಿಮಾ ಸೌಲಭ್ಯದಿಂದ ವಂಚಿತರಾಗುವ ಆತಂಕ ಎದುರಿಸುತ್ತಿದ್ದಾರೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬರದ ಆತಂಕ ಕಾಡುತ್ತಿದ್ದರೂ ಜಿಲ್ಲೆಯಲ್ಲಿ ಇದುವರೆಗೆ ಕೇವಲ ಶೇ.10ರಷ್ಟು ರೈತರು ಮಾತ್ರ ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಬ್ಯಾಂಕ್ಗಳಲ್ಲಿ ಬೆಳೆಸಾಲ ಪಡೆಯುವ ರೈತರಿಗೆ ವಿಮೆ ನೋಂದಣಿ ಮಾಡಿಸುವ ಬದಲು, “ಬೆಳೆ ವಿಮೆ ಮಾಡಿಸಿಕೊಳ್ಳುವುದಿಲ್ಲ (ಆಪ್ಟ್ ಔಟ್)” ಎಂಬ ಘೋಷಣೆಗೆ ಸಹಿ ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಬೆಳೆಸಾಲ ಪಡೆದ ರೈತರು ಸಿಎಸ್ಸಿ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿಯೂ ಸ್ವಯಂ ನೋಂದಣಿ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಈ ಹಿಂದೆ ಮಧ್ಯವರ್ತಿಗಳು ರೈತರ ಪರವಾಗಿ ಪ್ರೀಮಿಯಂ ಪಾವತಿಸಿ, ನಂತರ ವಿಮೆ ಪರಿಹಾರದಲ್ಲಿ ಪಾಲು ಪಡೆಯುವ ದಂಧೆ ನಡೆಸುತ್ತಿದ್ದರು. ಇದನ್ನು ತಡೆಯುವ ಉದ್ದೇಶದಿಂದಲೇ ಕೇಂದ್ರ ಸರ್ಕಾರದ ನಿರ್ದೇಶನದಂತೆ ಬ್ಯಾಂಕ್ಗಳ ಮೂಲಕವೇ ಬೆಳೆ ವಿಮೆ ನೋಂದಣಿ ಕಡ್ಡಾಯಗೊಳಿಸಲಾಗಿದೆ.
ಆದರೆ ಈಗ ಬ್ಯಾಂಕ್ಗಳೇ ನೋಂದಣಿಯಿಂದ ಹಿಂದೆ ಸರಿಯುತ್ತಿರುವುದರಿಂದ ಸರ್ಕಾರದ ಉದ್ದೇಶವೇ ವಿಫಲವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ರೈತರು ಹೆಚ್ಚಿನ ಸಾಲ ಪಡೆಯಲು ಬ್ಯಾಂಕ್ ದಾಖಲೆಗಳಲ್ಲಿ ಈರುಳ್ಳಿ, ಹತ್ತಿ, ಮೆಣಸಿನಕಾಯಿ ಮೊದಲಾದ ಬೆಳೆಗಳನ್ನು ನಮೂದಿಸುತ್ತಾರೆ. ಆದರೆ ವಾಸ್ತವದಲ್ಲಿ ಹೆಸರು, ಮುಸುಕಿನ ಜೋಳ, ಸೂರ್ಯಕಾಂತಿ ಸೇರಿದಂತೆ ಬೇರೆ ಬೆಳೆಗಳನ್ನು ಬಿತ್ತಿರುತ್ತಾರೆ. ಬ್ಯಾಂಕ್ ದಾಖಲೆಯಲ್ಲಿರುವ ಬೆಳೆಗೆ ಮಾತ್ರ ವಿಮೆ ಅನ್ವಯವಾಗುವುದರಿಂದ ಜಿಪಿಎಸ್ ಹಾಗೂ ಆಡಿಟ್ ಪರಿಶೀಲನೆ ವೇಳೆ ರೈತರಿಗೆ ತೊಂದರೆ ಎದುರಾಗುವ ಸಾಧ್ಯತೆ ಇದೆ.
“ಬಹುತೇಕ ರೈತರು ಬ್ಯಾಂಕ್ನಲ್ಲಿ ಒಂದು ಬೆಳೆಯ ಹೆಸರಿನಲ್ಲಿ ಸಾಲ ಪಡೆದು, ಹೊಲದಲ್ಲಿ ಇನ್ನೊಂದು ಬೆಳೆ ಬೆಳೆದಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ವಿಮೆ ಮತ್ತು ಜಿಪಿಎಸ್ ಪರಿಶೀಲನೆ ವೇಳೆ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ.”
– ಹೆಸರು ಬಹಿರಂಗಪಡಿಸಲು ಇಚ್ಛಿಸದ ಕೃಷಿ ಇಲಾಖೆ ಅಧಿಕಾರಿ



