ಚಿಕ್ಕಮಗಳೂರು: ಕಾಡುಕೋಣ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಕಳಸ ತಾಲೂಕಿನ ಬಿಳಗುಳಿ ಗ್ರಾಮದ ಬಳಿ ನಡೆದಿದೆ.
ಮೃತರನ್ನು ಶೀಲಾ (52) ಎಂದು ಗುರುತಿಸಲಾಗಿದೆ. ಅವರು ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕಾಡುಕೋಣ ದಾಳಿ ನಡೆಸಿದೆ. ದಾಳಿಯಿಂದ ಮಹಿಳೆಯ ಹೊಟ್ಟೆ ಹಾಗೂ ಕತ್ತಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ.
ತಕ್ಷಣ ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರೂ, ಮಾರ್ಗಮಧ್ಯೆಯೇ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.
ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಕಾಡುಕೋಣ ದಾಳಿ ಪ್ರಕರಣಗಳು ಹೆಚ್ಚಳ:
ಕಳಸ ತಾಲೂಕಿನಲ್ಲಿ ಕಾಡುಕೋಣಗಳ ಹಾವಳಿ ನಿರಂತರವಾಗಿ ಮುಂದುವರಿದಿದೆ. ಕಳೆದ ಏಪ್ರಿಲ್ನಲ್ಲಿ ಕಳಸ ತಾಲೂಕಿನ ಮೈದಾಡಿಯ ಯಮಗೊಂಡ ಎಸ್ಟೇಟ್ನಲ್ಲಿ ಯುವಕನೊಬ್ಬ ಕಾಡುಕೋಣ ದಾಳಿಗೆ ಬಲಿಯಾಗಿದ್ದ.
ಇದಕ್ಕೂ ಮುನ್ನ ಹಲವು ಮಂದಿ ಕಾಡುಕೋಣ ದಾಳಿಯಿಂದ ಗಾಯಗೊಂಡಿದ್ದಾರೆ. ಪದೇ ಪದೇ ನಡೆಯುತ್ತಿರುವ ಘಟನೆಗಳಿಂದ ಮಲೆನಾಡು ಭಾಗದ ಜನರಲ್ಲಿ ಆತಂಕ ಹೆಚ್ಚಾಗಿದೆ.
ಕಾಡುಕೋಣಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.



