ವಿಜಯಸಾಕ್ಷಿ ಸುದ್ದಿ, ಗದಗ: ವೇದಗಳ ತತ್ವ-ಸಂದೇಶಗಳ ತಳಹದಿಯ ಮೇಲೆ ರಚನೆಗೊಂಡ ಎಲ್ಲ ಧಾರ್ಮಿಕ ಗ್ರಂಥಗಳು ಮನುಕುಲದ ಒಳಿತನ್ನು ಬಯಸಿವೆ ಎಂದು ಜಂಗಮವಾಡಿಮಠ ವಾರಣಾಸಿ ಕಾಶೀ ಮಹಾಪೀಠದ ಶ್ರೀಮತ್ ಕಾಶೀ ಜ್ಞಾನಸಿಂಹಾಸನಾಧೀಶ್ವರ ಜ. ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು.
ಅವರು ಬುಧವಾರ ನಗರದ ಗಾಣಿಗ ಭವನದಲ್ಲಿ ಗದಗ-ಬೆಟಗೇರಿ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಸಮಿತಿ ಹಮ್ಮಿಕೊಂಡಿರುವ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮನುಕುಲಕ್ಕೆ ಉಪದೇಶ ಮಾಡುವ ಸಿದ್ಧಾಂತ ಶಿಖಾಮಣಿ ಪವಿತ್ರ ಗ್ರಂಥವನ್ನು ವೀರಶೈವ ಧರ್ಮಗ್ರಂಥ ಎಂದು ಬಣ್ಣಿಸಲಾಗಿದ್ದರೂ ಅದು ವೀರಶೈವರಿಗೆ ಅಷ್ಟೇ ಸೀಮಿತವಾಗಿಲ್ಲ. ಎಲ್ಲ ಧರ್ಮದವರಿಗೂ ಒಳ್ಳೆಯ ಸಂದೇಶ ನೀಡಿ ಮಾರ್ಗದರ್ಶಿ ಆಗಬಲ್ಲ ಗ್ರಂಥವಾಗಿದೆ ಎಂದು ಬಣ್ಣಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನರೇಗಲ್ ಹಿರೇಮಠದ ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು, ಮನುಷ್ಯನನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ, ಮನುಷ್ಯನ ಮನೋಸ್ಥಿತಿಯನ್ನು ದೈವತ್ವದೆಡೆಗೆ ಸಾಗಿಸುವ ಸನಾತನ ಧರ್ಮ ಗ್ರಂಥ ಸಿದ್ಧಾಂತ ಶಿಖಾಮಣಿಯಾಗಿದೆ ಎಂದರು.
ಡಾ. ಶೇಖರ ಸಜ್ಜನರ ಹಾಗೂ ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷ ಪೀರಸಾಬ ಕೌತಾಳ ಅವರು ಧರ್ಮ, ದೇವರು, ಭಕ್ತಿ ಹಾಗೂ ಭಾರತೀಯ ಸಂಸ್ಕೃತಿ, ಪರಂಪರೆ ಕುರಿತು ಮಾತನಾಡಿದರು. ಅತಿಥಿಗಳಾಗಿ ಹಾಲಪ್ಪ ಬಣವಿ, ತೋಟಪ್ಪ ಗಾಣಿಗೇರ, ಅಶೋಕ ಮಂದಾಲಿ, ಗಿರಿಯಪ್ಪ ಅಸೂಟಿ, ಸುರೇಶ ಮರಳಪ್ಪನವರ, ಬಿ.ಎಸ್. ವಡ್ಡಟ್ಟಿ, ಬಸವಂತಪ್ಪ ನ್ಯಾವಳ್ಳಿ, ಈಶಪ್ಪ ಕಿರೇಸೂರ, ಗಂಗಾಧರ ಗಾಣಿಗೇರ, ರಮೇಶ ಮಂದಾಲಿ, ಶಿವಣ್ಣ ಹಿಟ್ನಳ್ಳಿ, ಎಸ್.ವ್ಹಿ. ಪವಾಡಿಗೌಡ್ರ, ಸೋಮನಗೌಡ ಪಾಟೀಲ ಆಗಮಿಸಿದ್ದರು.
ಪ್ರಶಾಂತ ಶಾಬಾದಿಮಠ, ಸಂತೋಷ ಅಬ್ಬಿಗೇರಿ, ಜ್ಯೋತಿ ಚಳಗೇರಿ, ಉಮಾಪತಿ ಭೂಸನೂರಮಠ, ಮಹಾಂತೇಶ ಮುಧೋಳ, ಗಿರಿಜಮ್ಮ ಅಬ್ಬಿಗೇರಿ, ಶಂಕರಗೌಡ ಸಂಕನಗೌಡರ, ಡಾ.ವಾಣಿ ಶಿವಪೂರ, ಶೈಲಾ ಹಿರೇಮಠ, ಗುರುಸ್ವಾಮಿಮಠ, ಶಾರದಾ ತಡಸದ ಸೇರಿದಂತೆ ಅತಿಥಿಗಳನ್ನು ಪೂಜ್ಯರು ಸನ್ಮಾನಿಸಿ ಗೌರವಿಸಿದರು.
ದೀಪ್ತಿ ಪಾಠಕ ಅವರಿಂದ ಪ್ರಾರ್ಥನೆ, ಸಂಗೀತ ಜರುಗಿತು. ಎಂ.ಸಿ. ಐಲಿ ಸ್ವಾಗತಿಸಿದರು. ವ್ಹಿ.ಕೆ. ಗುರುಮಠ ನಿರೂಪಿಸಿ ವಂದಿಸಿದರು.
ನೇತೃತ್ವ ವಹಿಸಿದ್ದ ವೀರೇಶ್ವರ ಪುಣ್ಯಾಶ್ರಮದ ಪೂಜ್ಯ ಕಲ್ಲಯ್ಯಜ್ಜನವರು ಮಾತನಾಡಿ, ಗದಗ-ಬೆಟಗೇರಿಯ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಸಮಿತಿ ಪ್ರತಿ ವರ್ಷ ಕಾಶೀ ಜಗದ್ಗುರುಗಳಿಂದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಏರ್ಪಡಿಸಿ ಗದಗ ಪರಿಸರದ ಜನರನ್ನು ಧರ್ಮದ ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ಜಾಗೃತಗೊಳಿಸಿದ್ದಾರೆ. ಪೂಜ್ಯರ ಪ್ರವಚನದಿಂದಾಗಿ ಧರ್ಮ ಜಾಗೃತಿ, ಜನ ಜಾಗೃತಿಯಾಗಿದೆ ಎಂದರು.