Home Blog Page 403

ವಿಡಿಯೋದಲ್ಲಿ ನಗು… ವಾಸ್ತವದಲ್ಲಿ ದುಃಖ? ನಟಿ ಸುಭಾಷಿಣಿ ಸಾವು ಮಿಸ್ಟರಿ – ಪತಿ ಜೊತೆ ಕಾಲ್ ಬಳಿಕ ಶಾಕಿಂಗ್‌ ನಿರ್ಧಾರ!

ತಮಿಳು ಕಿರುತೆರೆ ನಟಿ ಸುಭಾಷಿಣಿ ಬಾಲಸುಬ್ರಮಣಿಯಂ ಅವರ ಅಕಾಲಿಕ ನಿಧನ ಈಗ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಏಪ್ರಿಲ್ 6ರಂದು ಚೆನ್ನೈನಲ್ಲಿ ನಡೆದ ಈ ಘಟನೆ ಆತ್ಮಹತ್ಯೆ ಎಂಬ ಶಂಕೆ ವ್ಯಕ್ತವಾಗುತ್ತಿದ್ದರೂ, ಇದರ ಹಿಂದೆ ಇರುವ ನಿಜವಾದ ಕಾರಣ ಇನ್ನೂ ಮಿಸ್ಟರಿಯಾಗಿಯೇ ಉಳಿದಿದೆ.

ಶ್ರೀಲಂಕಾದಿಂದ ಚೆನ್ನೈಗೆ ಬಂದು ಅವಕಾಶಗಳಿಗಾಗಿ ಹೋರಾಡಿದ ಸುಭಾಷಿಣಿ, ‘ಕಯಲ್’ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿದ್ದರು. ಆದರೆ, ಯಶಸ್ಸಿನ ನಡುವೆಯೇ ಅವರ ವೈಯಕ್ತಿಕ ಜೀವನದಲ್ಲಿ ಏನೋ ಗಂಭೀರ ಸಮಸ್ಯೆಗಳು ನಡೆದಿದ್ದವೆಯೇ ಎಂಬ ಅನುಮಾನಗಳು ಹೆಚ್ಚುತ್ತಿವೆ.

ಸಾವಿಗೆ ಮುನ್ನ ಅವರು ತಮ್ಮ ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದರು ಎಂಬ ಮಾಹಿತಿ ಹೊರಬಿದ್ದಿದ್ದು, ಆ ವೇಳೆ ಏನಾದರೂ ಜಗಳ ನಡೆದಿತ್ತೇ ಎಂಬ ಪ್ರಶ್ನೆ ತಲೆದೋರಿದೆ. ಈ ಘಟನೆ ಅವರ ಮನಸ್ಥಿತಿಗೆ ಪರಿಣಾಮ ಬೀರಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಆದರೆ, ಈ ಪ್ರಕರಣದಲ್ಲಿ ಹೆಚ್ಚು ಚರ್ಚೆಗೆ ಕಾರಣವಾದುದು ಅವರ ಕೊನೆಯ ವಿಡಿಯೋ. ಕೇವಲ ಎರಡು ದಿನಗಳ ಹಿಂದಷ್ಟೇ ಹಂಚಿಕೊಂಡ ಆ ವಿಡಿಯೋದಲ್ಲಿ ಸುಭಾಷಿಣಿ ತುಂಬಾ ಖುಷಿಯಾಗಿ ಕಾಣಿಸಿಕೊಂಡಿದ್ದರು. ಈ ವಿರುದ್ಧ ಚಿತ್ರಣವೇ ಇದೀಗ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

“ನಗು ಮುಖದ ಹಿಂದೆ ನೋವು ಮರೆಮಾಡಲಾಗಿತ್ತೇ?” ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ. ಸೆಲೆಬ್ರಿಟಿಗಳ ಜೀವನದ ಮತ್ತೊಂದು ಕತ್ತಲೆ ಮುಖ ಈ ಘಟನೆಯಿಂದ ಹೊರಬಂದಂತಾಗಿದೆ.

ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಸುಭಾಷಿಣಿ ಅವರ ಸಾವಿನ ಅಸಲಿ ಕಾರಣ ಮುಂದಿನ ದಿನಗಳಲ್ಲಿ ಬಹಿರಂಗವಾಗುವ ನಿರೀಕ್ಷೆ ಇದೆ.

ಪ್ಯಾನ್ ಇಂಡಿಯಾ ಸ್ಟಾರ್ ಯಶ್ ‘ವಿಲನ್’ ಆಗಲು ಕಾರಣವೇನು? 4000 ಕೋಟಿ ‘ರಾಮಾಯಣ’ದಲ್ಲಿ ರಾವಣನ ಹೊಸ ಮುಖ!

ಭಾರತದ ಅತಿದೊಡ್ಡ ಬಜೆಟ್ ಸಿನಿಮಾ ‘ರಾಮಾಯಣ’ ಈಗಾಗಲೇ ಸಿನಿ ಲೋಕವನ್ನು ಕಾದು ಕುಳಿತಿದೆ. 4000 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ದ್ವಿಭಾಗೀಯ ಚಿತ್ರ, ತಾಂತ್ರಿಕವಾಗಿ ಹಾಗೂ ಕಲಾತ್ಮಕವಾಗಿ ಹೊಸ ಮಾನದಂಡಗಳನ್ನು ಸ್ಥಾಪಿಸಲು ಸಜ್ಜಾಗಿದೆ.

ಈ ಭವ್ಯ ಯೋಜನೆಯಲ್ಲಿ ರಣ್ಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ನಟಿಸುತ್ತಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ, ‘ಕೆಜಿಎಫ್’ ಮೂಲಕ ಹೀರೋ ಇಮೇಜ್ ಗಟ್ಟಿಗೊಳಿಸಿರುವ ಯಶ್, ವಿಲನ್ ಪಾತ್ರಕ್ಕೆ ಒಪ್ಪಿಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.

ಈ ಪ್ರಶ್ನೆಗೆ ಉತ್ತರ ನೀಡಿರುವ ನಿರ್ದೇಶಕ ನಿತೇಶ್ ತಿವಾರಿ, ‘ನಾವು ರಾವಣನನ್ನು ಕೇವಲ ದುಷ್ಟನಾಗಿ ತೋರಿಸುವುದಿಲ್ಲ. ಆತ ಒಂದು ಬಹುಮುಖ ವ್ಯಕ್ತಿತ್ವ – ಜ್ಞಾನ, ಭಕ್ತಿ, ಅಹಂಕಾರ ಮತ್ತು ಶಕ್ತಿ ಎಲ್ಲವೂ ಸೇರಿ ಇಂತಹ ಪಾತ್ರವನ್ನು ನಿಭಾಯಿಸಲು ಯಶ್ ಅವರಂತಹ ನಟನೇ ಬೇಕು’ ಎಂದು ಹೇಳಿದ್ದಾರೆ.

ಚಿತ್ರದ ಕಥೆಯಲ್ಲಿನ ಈ ವಿಭಿನ್ನ ನಿರೂಪಣೆ ಯಶ್ ಅವರನ್ನು ಸೆಳೆದಿದ್ದು, ಅದೇ ಕಾರಣಕ್ಕೆ ಅವರು ಈ ಪಾತ್ರಕ್ಕೆ ಒಪ್ಪಿಕೊಂಡಿದ್ದಾರೆ. ರಣ್ಬೀರ್ ಕಪೂರ್ ಕೂಡ ಈ ಹೊಸ ದೃಷ್ಟಿಕೋನವನ್ನು ಮೆಚ್ಚಿಕೊಂಡಿದ್ದಾರೆ ಎಂಬುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಇನ್ನೊಂದೆಡೆ, ಯಶ್ ಈ ಚಿತ್ರದ ಸಹ ನಿರ್ಮಾಪಕರಾಗಿರುವುದು ಅವರ ಬದ್ಧತೆಯನ್ನು ತೋರಿಸುತ್ತದೆ. ತಾರಾಗಣದಲ್ಲಿ ಸನ್ನಿ ಡಿಯೋಲ್, ಕಾಜಲ್ ಅಗರ್ವಾಲ್, ರಕುಲ್ ಪ್ರೀತ್ ಸಿಂಗ್, ಲಾರಾ ದತ್ತ ಸೇರಿದಂತೆ ಹಲವು ಪ್ರಮುಖ ಕಲಾವಿದರು ಇದ್ದಾರೆ.

ಎ.ಆರ್. ರೆಹಮಾನ್ ಮತ್ತು ಹಾನ್ಸ್ ಜೀಮರ್ ಸಂಗೀತ ನೀಡುತ್ತಿರುವುದು ಚಿತ್ರದ ಮಟ್ಟವನ್ನು ಹಾಲಿವುಡ್ ಮಟ್ಟಕ್ಕೆ ಏರಿಸುತ್ತಿದೆ. ಐಮ್ಯಾಕ್ಸ್‌ನಲ್ಲಿ ಚಿತ್ರೀಕರಣಗೊಂಡಿರುವ ಈ ಸಿನಿಮಾ ಈ ದೀಪಾವಳಿಗೆ ಬಿಡುಗಡೆಯಾಗಲಿದ್ದು, ಮುಂದಿನ ವರ್ಷ ಎರಡನೇ ಭಾಗ ಬಿಡುಗಡೆಯಾಗಲಿದೆ.

ಒಟ್ಟಿನಲ್ಲಿ, ‘ರಾಮಾಯಣ’ ಕೇವಲ ಸಿನಿಮಾ ಅಲ್ಲ — ಇದು ಭಾರತೀಯ ಸಿನಿರಂಗದ ಹೊಸ ಯುಗದ ಆರಂಭ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಮಧುರೈ ರಾಜಕೀಯದಲ್ಲಿ ಫೇಕ್ ನ್ಯೂಸ್ ಸ್ಫೋಟ: ‘ಮಾಂಸದಂಗಡಿ ನಿಷೇಧ’ ಸುಳ್ಳು ಹೇಳಿಕೆ – ಸುಂದರ್ ಸಿ., ಖುಷ್ಬೂ ಕಿಡಿ!

ತಮಿಳುನಾಡು ಚುನಾವಣೆ ಬಿಸಿ ಏರಿದಂತೆ ರಾಜಕೀಯದಲ್ಲಿ ಫೇಕ್ ನ್ಯೂಸ್ ಯುದ್ಧವೂ ತಾರಕಕ್ಕೇರಿದೆ. ಇದೀಗ ಅದರ ಟಾರ್ಗೆಟ್ ಆಗಿರುವವರು ನಟ-ನಿರ್ದೇಶಕ ಸುಂದರ್ ಸಿ., ಮಧುರೈ ಸೆಂಟ್ರಲ್ ಕ್ಷೇತ್ರದ ಪ್ರಮುಖ ಅಭ್ಯರ್ಥಿ.

‘ಗೆದ್ದರೆ ಕ್ಷೇತ್ರದಲ್ಲಿನ ಎಲ್ಲಾ ಮಾಂಸದ ಅಂಗಡಿಗಳನ್ನು ಮುಚ್ಚಿಸುತ್ತೇನೆ’ ಎಂಬ ಸುಳ್ಳು ಹೇಳಿಕೆಯನ್ನು ಸುಂದರ್ ಸಿ. ಹೆಸರಿನಲ್ಲಿ ಹರಡಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪೋಸ್ಟ್‌ಗಳು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಎಂದು ಟೀಕೆಗಳು ವ್ಯಕ್ತವಾಗುತ್ತಿದ್ದಂತೆಯೇ, ರಾಜಕೀಯ ವಾತಾವರಣ ಉತ್ಕಂಠೆಗೆ ತಳ್ಳಲ್ಪಟ್ಟಿದೆ.

ಆದರೆ, ಈ ಎಲ್ಲ ಆರೋಪಗಳಿಗೆ ಸುಂದರ್ ಸಿ. ತೀವ್ರವಾಗಿ ತಿರುಗೇಟು ನೀಡಿದ್ದು, ‘ಇದು ಸಂಪೂರ್ಣ ಸುಳ್ಳು ಮತ್ತು ದುರುದ್ದೇಶಪೂರಿತ ಪ್ರಚಾರ. ನನ್ನನ್ನು ಎದುರಿಸಲು ಸಾಧ್ಯವಾಗದವರು ಜನರನ್ನು ತಪ್ಪು ದಾರಿಗೆಳೆಯಲು ಯತ್ನಿಸುತ್ತಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಈ ವಿಚಾರದಲ್ಲಿ ಅವರ ಪತ್ನಿ ಖುಷ್ಬೂ ಕೂಡ ಮೌನ ಮುರಿದು ನೇರವಾಗಿ ಆಡಳಿತಾರೂಢ ಡಿಎಂಕೆ ವಿರುದ್ಧ ಆರೋಪ ಮಾಡಿದ್ದಾರೆ. ‘ಸತ್ಯವನ್ನು ಎದುರಿಸಲು ಆಗದಾಗ ಸುಳ್ಳು ಕಥೆಗಳನ್ನು ಹುಟ್ಟುಹಾಕುತ್ತಾರೆ. ಇದು ಅವರ ಸೋಲಿನ ಭೀತಿಯ ಸಂಕೇತ’ ಎಂದು ಅವರು ಕಿಡಿಕಾರಿದ್ದಾರೆ.

ಈ ಬೆಳವಣಿಗೆಗಳ ನಡುವೆ, ಎಐಎಡಿಎಂಕೆ ಮೈತ್ರಿಯೊಂದಿಗೆ ಪಿಎನ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಂದರ್ ಸಿ. ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಮುಂದುವರೆಸಿದ್ದಾರೆ. ಮತ್ತೊಂದೆಡೆ, ನಟ ದಳಪತಿ ವಿಜಯ್ ತಮ್ಮದೇ ಪಕ್ಷದೊಂದಿಗೆ ಚುನಾವಣೆಗೆ ಇಳಿದಿರುವುದು ರಾಜಕೀಯ ಲೆಕ್ಕಾಚಾರವನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ.

ಒಟ್ಟಿನಲ್ಲಿ, ಮಧುರೈ ರಾಜಕೀಯ ಈಗ ಫೇಕ್ ನ್ಯೂಸ್, ಆರೋಪ ಮತ್ತು ಪ್ರತಿಯುತ್ತರಗಳ ಅಖಾಡವಾಗಿದ್ದು, ಮುಂದಿನ ದಿನಗಳಲ್ಲಿ ಈ ಸಂಘರ್ಷ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

ಹಾಡಿನಲ್ಲಿ ಅಶ್ಲೀಲ ಪದಪ್ರಯೋಗ ಆರೋಪ: ಬಾದ್‌ಶಾಗೆ ಸಮನ್ಸ್, ಕ್ಷಮೆಯಾಚಿಸಿ 50 ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಹಾಯ

‘ಟಟೀರಿ’ ಹಾಡಿನ ಅಶ್ಲೀಲ ಸಾಹಿತ್ಯದಿಂದ ಎದ್ದ ವಿವಾದ ಇದೀಗ ಬಾದ್‌ಶಾ ಅವರಿಗೆ ದೊಡ್ಡ ಪಾಠವಾಗಿದ್ದು, ಅಂತಿಮವಾಗಿ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ತಲೆಬಾಗುವಂತಾಗಿದೆ.

ಹರಿಯಾಣ್ವಿ ಹಾಡಾದ ‘ಟಟೀರಿ’ ಮಹಿಳೆಯರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿದೆ ಎಂಬ ಆರೋಪ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಯಿತು. ವಿಷಯ ಗಂಭೀರವಾಗುತ್ತಿದ್ದಂತೆ NCW ಸ್ವಯಂ ಪ್ರಕರಣ ದಾಖಲಿಸಿಕೊಂಡು, ಬಾದ್‌ಶಾ ಸೇರಿದಂತೆ ನಿರ್ಮಾಪಕರಿಗೆ ನೋಟಿಸ್ ನೀಡಿತು.

ವಿಜಯಾ ರಾಹತ್ಕರ್ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ, ಹಾಡಿನ ಅಶ್ಲೀಲತೆ ಮಹಿಳೆಯರ ಗೌರವಕ್ಕೆ ಧಕ್ಕೆ ತಂದಿದೆ ಎಂದು ಆಯೋಗ ಸ್ಪಷ್ಟವಾಗಿ ತಿರಸ್ಕರಿಸಿತು. ಈ ಒತ್ತಡದ ನಡುವೆ ಬಾದ್‌ಶಾ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದರು.

ಆದರೆ ಇದು ಕೇವಲ ಕ್ಷಮೆಗೆ ಸೀಮಿತವಾಗಿಲ್ಲ. ತಮ್ಮ ಇಮೇಜ್‌ ಅನ್ನು ಮರುಸ್ಥಾಪಿಸಲು ಬಾದ್‌ಶಾ ಹಲವು ಘೋಷಣೆಗಳನ್ನು ಮಾಡಿದ್ದಾರೆ. 50 ಹಿಂದುಳಿದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೆರವಾಗುವ ಜವಾಬ್ದಾರಿಯನ್ನು ತೆಗೆದುಕೊಂಡಿರುವ ಅವರು, ಮಹಿಳಾ ಸಬಲೀಕರಣದ ಕುರಿತು ಸಕಾರಾತ್ಮಕ ಸಂದೇಶ ನೀಡುವ ಹೊಸ ಹಾಡನ್ನು 4 ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ಇದಲ್ಲದೆ, ವಿವಾದಿತ ಹಾಡನ್ನು ಎಲ್ಲಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕಲಾಗಿದೆ. ಮುಂದಿನ ದಿನಗಳಲ್ಲಿ ಕಲಾತ್ಮಕ ಸ್ವಾತಂತ್ರ್ಯದ ಹೆಸರಿನಲ್ಲಿ ಮಹಿಳೆಯರ ಗೌರವಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುವುದಾಗಿ ಅವರು ಲಿಖಿತ ಭರವಸೆ ನೀಡಿದ್ದಾರೆ.

ರೈಲಿನಲ್ಲೇ ಹೆರಿಗೆ; ಹೆಣ್ಣು ಮಗುವಿಗೆ ಜನ್ಮ, ತಾಯಿ-ಮಗು ಸುರಕ್ಷಿತ!

ವಿಜಯವಾಡ: ಆಂಧ್ರಪ್ರದೇಶದಲ್ಲಿ ಸಂಚರಿಸುತ್ತಿದ್ದ ರೈಲಿನಲ್ಲೇ ಗರ್ಭಿಣಿಯೊಬ್ಬರು ಹೆರಿಗೆಗೊಂಡು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.

ರೈಲ್ವೆ ಸಿಬ್ಬಂದಿಯ ತ್ವರಿತ ನೆರವಿನಿಂದ ಹೆರಿಗೆ ಸುಸೂತ್ರವಾಗಿ ನಡೆದಿದ್ದು, ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

ಜಾರ್ಖಂಡ್ ಮೂಲದ ಗರ್ಭಿಣಿ ಮಹಿಳೆ ಏಪ್ರಿಲ್ 5ರಂದು ಆಲಪ್ಪುಳ-ಧನಬಾದ್ ಎಕ್ಸ್‌ಪ್ರೆಸ್ ರೈಲಿನಲ್ಲಿ ತಮ್ಮ ಕುಟುಂಬದವರೊಂದಿಗೆ ಪ್ರಯಾಣಿಸುತ್ತಿದ್ದರು. ಅನ್ನಾವರಂ ನಿಲ್ದಾಣವನ್ನು ದಾಟಿದ ಬಳಿಕ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಕುಟುಂಬದವರು ಟಿಕೆಟ್ ಪರಿಶೀಲಕರನ್ನು ಸಂಪರ್ಕಿಸಿದ್ದು, ಸಿಬ್ಬಂದಿ ತಕ್ಷಣ ಸ್ಪಂದಿಸಿದ್ದಾರೆ.

ಪರಿಸ್ಥಿತಿಯ ತುರ್ತುಸ್ಥಿತಿಯನ್ನು ಗಮನಿಸಿ ರೈಲಿಗೆ ಎಲಮಂಚಿಲಿ ನಿಲ್ದಾಣದಲ್ಲಿ ವಿಶೇಷ ನಿಲುಗಡೆ ನೀಡಲಾಗಿದ್ದು, ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಈ ನಡುವೆ, ಕೋಚ್‌ನಲ್ಲಿದ್ದ ಪುರುಷ ಪ್ರಯಾಣಿಕರನ್ನು ಹೊರಗೆ ಕಳುಹಿಸಿ, ಮಹಿಳೆಗೆ ಸುರಕ್ಷಿತವಾಗಿ ಹೆರಿಗೆ ನಡೆಸಲು ಸಹಕರಿಸಲಾಗಿದೆ.

ಹೆರಿಗೆಯ ಬಳಿಕ ತಾಯಿ ಮತ್ತು ನವಜಾತ ಶಿಶುವನ್ನು 108 ಆಂಬ್ಯುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಘಟನೆ ರೈಲು ಪ್ರಯಾಣದ ವೇಳೆ ಮಾನವೀಯತೆ ಮತ್ತು ತುರ್ತುಸಹಾಯದ ಮಹತ್ವವನ್ನು ಮತ್ತೊಮ್ಮೆ ತೋರಿಸಿದೆ.

 

ಚಾಮರಾಜನಗರದಲ್ಲಿ ಸೈಕೋಪಾತ್ ಕಾಟ; ಮಹಿಳೆಯರ ಒಳ ಉಡುಪು ಕಳವು, ಸಿಸಿಟಿವಿಯಲ್ಲಿ ಸೆರೆಯಾದ ವಿಕೃತಿ

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ವಿಚಿತ್ರ ಸೈಕೋಪಾತ್ ಒಬ್ಬನ ಕೃತ್ಯ ಮಹಿಳೆಯರಲ್ಲಿ ಭೀತಿ ಹುಟ್ಟಿಸಿದೆ.

ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯರ ಒಳ ಉಡುಪುಗಳನ್ನು ಟಾರ್ಗೆಟ್ ಮಾಡಿ ಕಳವು ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಮನೆಗಳ ಮುಂದೆ ಒಣಗಲು ಹಾಕಿದ್ದ ಒಳ ಉಡುಪುಗಳು ಪದೇ ಪದೇ ನಾಪತ್ತೆಯಾಗುತ್ತಿದ್ದ ಹಿನ್ನೆಲೆಯಲ್ಲಿ ನಿವಾಸಿಗಳು ಅನುಮಾನಗೊಂಡು ಸಿಸಿಟಿವಿ ಪರಿಶೀಲಿಸಿದ್ದಾರೆ. ಈ ವೇಳೆ ತಡರಾತ್ರಿ ಮಹಿಳೆಯ ವೇಷದಲ್ಲಿ ಬರುವ ವ್ಯಕ್ತಿ, ಒಳ ಉಡುಪುಗಳನ್ನು ಕದ್ದು ಸ್ಥಳದಲ್ಲೇ ಧರಿಸಿಕೊಂಡು ವಿಕೃತಿ ತೋರಿಸುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಈ ಘಟನೆ ಕಾಲೋನಿಯ ಮಹಿಳೆಯರಲ್ಲಿ ಆತಂಕ ಸೃಷ್ಟಿಸಿದ್ದು, ಸುರಕ್ಷತೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಸದ್ಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಚಾಮರಾಜನಗರ ಪಟ್ಟಣ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

ಚಂದ್ರದ್ರೋಣ ಪರ್ವತದಲ್ಲಿ ಅಪ್ರಾಪ್ತ ಬಾಲಕಿ ನಾಪತ್ತೆ; ಡ್ರೋನ್ ಮೂಲಕ ಶೋಧ ಕಾರ್ಯ

ಚಿಕ್ಕಮಗಳೂರು: ಕೊಡಗಿನಲ್ಲಿ ಚಾರಣಕ್ಕೆ ತೆರಳಿದ್ದ ಶರಣ್ಯ ನಾಪತ್ತೆ ಪ್ರಕರಣದ ಬೆನ್ನಲ್ಲೇ ಮತ್ತೊಂದು ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.

ಜಿಲ್ಲೆಯ ಚಂದ್ರದ್ರೋಣ ಪರ್ವತ ಸರಣಿಯಲ್ಲಿ ಪ್ರವಾಸಕ್ಕೆ ಬಂದಿದ್ದ 14 ವರ್ಷದ ಬಾಲಕಿ ಶ್ರೀ ನಂದಾ ನಿನ್ನೆ ಸಂಜೆದಿಂದ ಕಾಣೆಯಾಗಿದ್ದಾಳೆ.

ಕೇರಳದ ಪಾಲಕ್ಕಾಡ್ ಮೂಲದ ಈ ಬಾಲಕಿ ಪೋಷಕರೊಂದಿಗೆ ಸುಮಾರು 40 ಜನರ ತಂಡದೊಂದಿಗೆ ಪ್ರವಾಸಕ್ಕೆ ಬಂದಿದ್ದಳು. ಮಾಣಿಕ್ಯಧಾರಾ ಸಮೀಪದಲ್ಲಿ ಆಕೆ ಕಾಣೆಯಾಗಿರುವುದು ತಿಳಿದುಬಂದಿದೆ. ಬಾಲಕಿ ನಾಪತ್ತೆಯಾದ ಕೂಡಲೇ ಸ್ಥಳೀಯರು ಹಾಗೂ ಪ್ರವಾಸಿಗರು ಹುಡುಕಾಟ ಆರಂಭಿಸಿದರೂ ಯಾವುದೇ ಸುಳಿವು ಸಿಗಲಿಲ್ಲ.

ರಾತ್ರಿ ಪೂರ್ತಿ ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದು, ಇಂದೂ ಡ್ರೋನ್ ಸಹಾಯದಿಂದ ಕಾರ್ಯಾಚರಣೆ ಮುಂದುವರಿದಿದೆ. ಹುಲ್ಲುಗಾವಲು ಹಾಗೂ ಇಳಿಜಾರು ಪ್ರದೇಶಗಳಿಂದ ಕೂಡಿರುವ ಈ ಭಾಗದಲ್ಲಿ ಹುಡುಕಾಟ ಸವಾಲಿನದ್ದಾಗಿದೆ.

ಈ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬಾಲಕಿ ನಾಪತ್ತೆಯಾಗಿರುವ ಹಿನ್ನೆಲೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ.

 

ಮೈಸೂರು ರಸ್ತೆ ಸಿಗ್ನಲ್ ಬಳಿ ಎರಡು ಲಾರಿಗಳ ಅಪಘಾತ: ಚಾಲಕ ಸಾವು!

ಬೆಂಗಳೂರು: ಮೈಸೂರು ರಸ್ತೆಯ ಸಾಟಲೈಟ್ ಬಸ್ ನಿಲ್ದಾಣದ ಸಿಗ್ನಲ್ ಬಳಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ಮೃತರನ್ನು ವಿಜಯ್ ಕುಮಾರ್ (60) ಎಂದು ಗುರುತಿಸಲಾಗಿದೆ. ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಫ್ಲೈಓವರ್ ಇಳಿಯುವಾಗಲೇ ನಿಯಂತ್ರಣ ಕಳೆದುಕೊಂಡ ಹಿಂಬದಿ ಲಾರಿ, ಸಿಗ್ನಲ್ ಬಳಿ ನಿಂತಿದ್ದ ಲಾರಿಗೆ ಭಾರೀ ವೇಗದಲ್ಲಿ ಗುದ್ದಿದೆ.

ಸ್ವಿಗ್ಗಿ ಇನ್ಸ್ಟಾಮಾರ್ಟ್‌ಗೆ ತರಕಾರಿ ಸಾಗಿಸುತ್ತಿದ್ದ ಈ ಲಾರಿ ಕೋಲಾರದ ಮಾಲೂರಿನಿಂದ ಆರ್‌ಆರ್ ನಗರ ಕಡೆಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಚಾಲಕ ವಿಜಯ್ ಕುಮಾರ್ ಅವರ ದೇಹ ನಜ್ಜುಗುಜ್ಜಾಗಿದೆ.

ಅಪಘಾತದ ಬಳಿಕ ಸಂಚಾರಿ ಪೊಲೀಸರು ವಾಹನವನ್ನು ತೆರವುಗೊಳಿಸಿದ್ದು, ಮೃತದೇಹವನ್ನು ಕೆಆರ್ ಮಾರುಕಟ್ಟೆಯ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ಕುರಿತು ತನಿಖೆ ಮುಂದುವರಿದಿದೆ.

ರಾಜ್ಯದ ಈ ಮೂರು ಜಿಲ್ಲೆಗಳಲ್ಲಿ ಇಂದು ಮಳೆಯ ಮುನ್ಸೂಚನೆ: ಇಲ್ಲೆಲ್ಲಾ ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯ ಆರ್ಭಟ ಕಂಡುಬಂದಿದ್ದರೂ, ಇಂದು ಮಳೆಯ ತೀವ್ರತೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಮಾತ್ರ ಮಳೆಯಾಗುವ ಸಾಧ್ಯತೆ ಇದ್ದು, ಈ ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಉಳಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಒಣ ಹವೆಯ ವಾತಾವರಣ ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಶುಷ್ಕ ಹವಾಮಾನ ಇರಲಿದೆ.

ಇನ್ನೂ ಕರಾವಳಿ ಭಾಗಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಮಳೆಯ ಲಕ್ಷಣಗಳು ಕಡಿಮೆಯಾಗಿದ್ದು, ಒಣ ಹವೆಯೇ ಮುಂದುವರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಹ ಒಣ ಹವಾಮಾನವಿರಲಿದೆ ಎಂದು ತಿಳಿಸಲಾಗಿದೆ.

ಒಟ್ಟಾರೆ, ರಾಜ್ಯದಲ್ಲಿ ಮಳೆಯ ಚಟುವಟಿಕೆ ತಗ್ಗಿ, ಬಹುತೇಕ ಭಾಗಗಳಲ್ಲಿ ಬಿಸಿಲು ಹಾಗೂ ಒಣ ಹವೆಯ ವಾತಾವರಣ ಕಾಣಿಸಿಕೊಳ್ಳಲಿದೆ.

ಗಾಢ ನಿದ್ರೆಯಲ್ಲಿದ್ದವರ ಮೇಲೆ ಮಾರಣಾಂತಿಕ ಹಲ್ಲೆ: ರಕ್ತದ ಮಡುವಿನಲ್ಲಿ ಒದ್ದಾಡಿದ ಗಾಯಾಳುಗಳು, ಸ್ಥಿತಿ ಗಂಭೀರ!

ಗದಗ:- ಗಾಢ ನಿದ್ರೆಯಲ್ಲಿದ್ದ ಆರು ಜನರ ಮೇಲೆ ಕಿರಾತಕನೋರ್ವ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ತಾಂಡಾದಲ್ಲಿ ನಡುರಾತ್ರಿ ಜರುಗಿದೆ.

ಹರ್ಜಪ್ಪ ಲಮಾಣಿ ಎಂಬ ವ್ಯಕ್ತಿಯೇ ಮಾರಣಾಂತಿಕ ಹಲ್ಲೆ ಮಾಡಿದವ. ಎಗ್ಗಪ್ಪ ಭಜನೆನಾಯಕ, ಶೇಖಪ್ಪ ನಾಯಕ್, ದೇವಕ್ಕ ನಾಯಕ್, ಷಣ್ಮುಖಪ್ಪ ರಾಠೋಡ, ಜಗದೀಶ್ ಲಮಾಣಿ ಹಾಗೂ ಚವಳ್ಳವ್ವ ಲಮಾಣಿ ಗಾಯಗೊಂಡವರು.

ಹರ್ಜಪ್ಪ ಲಮಾಣಿ ಎಂಬ ಕಿರಾತಕ, ತಡರಾತ್ರಿ ಸುಮಾರು 1 ಗಂಟೆಯ ವೇಳೆ ಮನೆ ಮುಂದೆ ಮಲಗಿದ್ದವರ ಮೇಲೆ ದೊಣ್ಣೆಯಿಂದ ಮನಬಂದಂತೆ ಹಲ್ಲೆ ನಡೆಸಿದ ಪರಿಣಾಮ, ಹಲ್ಲೆಗೊಳಗಾದವರು ರಕ್ತದ ಮಡುವಿನಲ್ಲಿ ಒದ್ದಾಡಿದ್ದಾರೆ. ಗಾಯಾಳುಗಳ ಕೂಗಾಟ, ಚೀರಾಟ ಕೇಳಿ ತಾಂಡಾ ನಿವಾಸಿಗಳು ಸ್ಥಳಕ್ಕೆ ಧಾವಿಸಿ, ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ.

ಗಂಭೀರವಾಗಿ ಗಾಯಗೊಂಡ ಎಗ್ಗಪ್ಪ ಭಜನೆನಾಯಕ, ಶೇಖಪ್ಪ ನಾಯಕ್, ದೇವಕ್ಕ ನಾಯಕ್, ಷಣ್ಮುಖಪ್ಪ ರಾಠೋಡ, ಜಗದೀಶ್ ಲಮಾಣಿ ಹಾಗೂ ಚವಳ್ಳವ್ವ ಲಮಾಣಿ ಅವರನ್ನು ತಕ್ಷಣ ಗದಗ ಜಿಮ್ಸ್ ಆಸ್ಪತ್ರೆಗೆ ರವಾನಿಸಿ, ಬಳಿಕ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಗಾಯಾಳುಗಳ ತಲೆ, ಕಣ್ಣು ಹಾಗೂ ಮುಖ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

ಗಾಯಾಳುಗಳ ಸ್ಥಿತಿ ಕಂಡು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಘಟನೆ ಕುರಿತು ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.