Home Blog Page 423

ಬೀದಿ ನಾಯಿಗಳ ಹಾವಳಿಗೆ ಬೇಸತ್ತ ಅಪಾರ್ಟ್ಮೆಂಟ್ ನಿವಾಸಿಗಳು: ಕಾಲಭೈರವನಿಗೆ ವಿಶೇಷ ಪೂಜೆ! ಬೇಡಿಕೆ ಏನು?

ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆ ಜನರಲ್ಲಿ ಆತಂಕ ಹೆಚ್ಚುತ್ತಿದೆ. ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದ್ದು, ಪುಟ್ಟ ಮಕ್ಕಳು ಮತ್ತು ವೃದ್ಧರಿಗೂ ಅಪಾಯ ಉಂಟಾಗುವ ಭಯ ಇದೆ.

ಇಂತಹ ಸಂದರ್ಭದಲ್ಲೇ ಜೆಪಿ ನಗರ ಎಲಿಟಾ ಪ್ರೊಮೆನೇಡ್ ಅಪಾರ್ಟ್ಮೆಂಟ್ ನಿವಾಸಿಗಳು ಬೀದಿ ನಾಯಿಗಳಿಗೆ ಶಾಂತಿಯುತ ಪರಿಹಾರ ಕಂಡುಹಿಡಿಯಲು ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ್ದಾರೆ. ಅವರು ಕಾಲಭೈರವ ಮತ್ತು ದತ್ತಾತ್ರೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಬೀದಿ ನಾಯಿಗಳು ಹಾಗೂ ಸಾಕು ನಾಯಿಗಳಿಗೆ ಶಾಂತಿ ದೊರಕಲಿ ಮತ್ತು ಮಾನವರೊಂದಿಗೆ ಸ್ನೇಹಭಾವ ಬೆಳೆಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ಅಪಾರ್ಟ್ಮೆಂಟ್ ಕ್ಲಬ್ ಹೌಸ್‌ನಲ್ಲಿ ನಡೆದ ಈ ಪೂಜೆಯಲ್ಲಿ ವಾಸಿಗಳು, ಮಕ್ಕಳು ಮತ್ತು ಸಾಕು ನಾಯಿಗಳು ಭಾಗವಹಿಸಿದ್ದರು. ಪೂಜೆಯ ನಂತರ ವಿಶೇಷ ಪ್ರಸಾದ ಹಾಗೂ ಆಹಾರ ವ್ಯವಸ್ಥೆ ಮಾಡಲಾಯಿತು. ಕಾರ್ಯಕ್ರಮದ ವೇಳೆ ಕೆಲ ನಿವಾಸಿಗಳು ಬೀದಿ ನಾಯಿಗಳಿಂದ ಎದುರಾಗುತ್ತಿರುವ ತೊಂದರೆಗಳ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

ನಗರದ ಅನೇಕ ಅಪಾರ್ಟ್ಮೆಂಟ್‌ಗಳಲ್ಲಿ ಬೀದಿ ನಾಯಿಗಳ ಸಮಸ್ಯೆ ಹೆಚ್ಚಿರುವುದು ಗಮನಾರ್ಹವಾಗಿದ್ದು, ಕೆಲವೆಡೆ ಮಕ್ಕಳಿಗೆ ಹಾಗೂ ನಿವಾಸಿಗಳಿಗೆ ಕಚ್ಚುವ ಘಟನೆಗಳೂ ವರದಿಯಾಗಿವೆ. ಇಂತಹ ಸಂದರ್ಭದಲ್ಲಿ ಪೂಜೆ ಮತ್ತು ಪ್ರಾರ್ಥನೆಯ ಮೂಲಕ ಮಾನವ-ನಾಯಿ ನಡುವಿನ ಸ್ನೇಹವನ್ನು ಹೆಚ್ಚಿಸಲು ನಿವಾಸಿಗಳು ಮುಂದಾಗಿರುವುದು ವಿಶೇಷವಾಗಿದೆ.

ಒಟ್ಟಿನಲ್ಲಿ, ಬೀದಿ ನಾಯಿಗಳು ಮತ್ತು ಜನರ ನಡುವೆ ಪರಸ್ಪರ ಪ್ರೀತಿ, ನಂಬಿಕೆ ಮತ್ತು ಸಹಕಾರ ಬೆಳೆಸುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮ ಜನರ ಗಮನಸೆಳೆದಿದೆ.

ಕರ್ತವ್ಯದಲ್ಲಿದ್ದಾಗಲೇ ದುರಂತ: ಹಠಾತ್ತನೆ ಕುಸಿದು ಗ್ರಾ.ಪಂ ಸಿಬ್ಬಂದಿ ಸಾವು!

ಬಳ್ಳಾರಿ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಸೀತಾರಾಮ ತಾಂಡಾದಲ್ಲಿ ಕರ್ತವ್ಯನಿರತ ಗ್ರಾ.ಪಂ ಸಿಬ್ಬಂದಿ ಹಠಾತ್ತನೆ ಕುಸಿದು ಬಿದ್ದು, ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಸೀತಾರಾಮ ತಾಂಡಾದಲ್ಲಿ ನಡೆದಿದೆ.

ನೀರಗಂಟಿ ಗಂಗಪ್ಪ ಎಲ್ (58) ಮೃತ ದುರ್ದೈವಿ. ಕಳೆದ 29 ವರ್ಷಗಳಿಂದ ಗಂಗಪ್ಪ ನೀರಗಂಟಿಯಾಗಿ ಸೀತಾರಾಮ ತಾಂಡದ ಗ್ರಾಮ ಪಂಚಾಯ್ತಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗಂಗಪ್ಪ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮತ್ತೆ ಕೆಲಸಕ್ಕೆ ಹೋಗಿದ್ದರು. ಭಾನುವಾರ ಕರ್ತವ್ಯದಲ್ಲಿದ್ದಾಗಲೇ ಗಂಗಪ್ಪ ಹಠಾತ್ ಕುಸಿದು ಬಿದ್ದಿದ್ದಾರೆ.

ಕೂಡಲೇ ಕುಟುಂಬಸ್ಥರು ಗಂಗಪ್ಪರನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಗಂಗಪ್ಪ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕೆಲಸ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 25 ಕೋಟಿ ವಂಚನೆ: ಖತರ್ನಾಕ್ ದಂಪತಿ ಅರೆಸ್ಟ್

ಬೆಂಗಳೂರು: ಕೋರ್ಟ್‍ನಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿ ಸುಮಾರು 500ಕ್ಕೂ ಹೆಚ್ಚು ಜನರನ್ನು ವಂಚಿಸಿದ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಜೈಸನ್ ಡಿಸೋಜಾ ಮತ್ತು ಲವೀನಾ ಎಂದು ಗುರುತಿಸಲಾಗಿದೆ.

ವಂಚಿತ ಜೋಡಿ, ನಿರೋದ್ಯೋಗಿಗಳು ಮತ್ತು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಮಾಯಕರನ್ನು ಟಾರ್ಗೆಟ್ ಮಾಡಿ, ಡಿ ಗ್ರೂಪ್ ಉದ್ಯೋಗ ಭರವಸೆ ನೀಡಿ, ಒಬ್ಬೊಬ್ಬರಿಂದ 10 ರಿಂದ 25 ಲಕ್ಷ ರೂ. ವರೆಗೆ ಹಣ ಪಡೆದು ವಂಚಿಸುತ್ತಿದ್ದರು. ವರದಿ ಪ್ರಕಾರ, ಹೀಗೆ ಸುಮಾರು ಐನೂರಕ್ಕೂ ಹೆಚ್ಚು ಜನರಿಂದ  25 ಕೋಟಿ ರೂ.ಗೂ ಹೆಚ್ಚು ಹಣ ವಂಚಿಸಲಾಗಿದೆ.

ನ್ಯಾಯಾಧೀಶರ ಸಹಿಯನ್ನೇ ನಕಲು ಮಾಡಿ ಆರ್ಡರ್ ಪ್ರತಿ ತೋರಿಸುವ ಮೂಲಕ, ಆರ್ಡರ್ ಪಡೆದಂತೆ ಜನರನ್ನು ನಂಬಿಸುವ ಈ ಜೋಡಿ, ಕೆಲಸ ಕೇಳಿದ್ರೆ ನಾಳೆ ನಾಡಿದ್ದು ಎಂದು ಕಥೆ ಹೇಳುತ್ತಿದ್ದರು. ಕೊನೆಗೆ ಫೋನ್ ರಿಸೀವ್ ಮಾಡುತ್ತಲೇ ಇರಲಿಲ್ಲ. ಮೋಸ ಹೋಗಿರೋದು ಗೊತ್ತಾಗಿ ಸಿಸಿಬಿಗೆ ಸಂತ್ರಸ್ಥರು ದೂರು ನೀಡಿದ್ದರು.

ಆರೋಪಿಗಳು ವಂಚನೆಗಾಗಿ ಒಂದು ಜಾಲವನ್ನೇ ಸೃಷ್ಟಿಸಿದ್ದರು. ಜನರನ್ನು ನಂಬಿಸಲು, ಹಣ ಪಡೆಯಲು ಏಜೆಂಟ್‍ಗಳನ್ನು ನೇಮಿಸಿಕೊಂಡಿದ್ದರು. ದಾಖಲೆ ಪರಿಶೀಲನೆ ಅಂತ ಖಾಸಗಿ ಹೋಟೆಲ್‍ಗೆ ಕರೆಸಿಕೊಂಡು ಬೇರೆಯವರಿಗೆ ಆಫರ್ ಲೆಟರ್ ಬಂದಿದೆ ಎಂದು ನಕಲಿ ಆಫರ್ ಲೆಟರ್ ತೋರಿಸಿ ವಂಚಿಸುತ್ತಿದ್ದರು. ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.‌

 

ರಾಮನಗರ| ಡಿವೈಡರ್‌ಗೆ ಬಸ್‌ ಡಿಕ್ಕಿ, ನಾಲ್ವರು ಪ್ರಯಾಣಿಕರು ಸಾವು!

ರಾಮನಗರ: ಭೀಕರ ಅಪಘಾತದಲ್ಲಿ ಡಿವೈಡರ್‌ಗೆ ಬಸ್‌ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಕೇರಳ ಮೂಲದ ಟ್ರಾವೆಲ್ಸ್ ಕಂಪನಿಗೆ ಸೇರಿದ ಬಸ್‌ ಕೇರಳದಿಂದ ಬೆಂಗಳೂರು ಕಡೆಗೆ ತೆರಳುತ್ತಿತ್ತು. ಈ ವೇಳೆ ಚನ್ನಪಟ್ಟಣ ತಾಲೂಕಿನ ಪುಟ್ಟಪ್ಪನದೊಡ್ಡಿ ಬಳಿ ಬಸ್‌ ಡಿವೈಡರ್‌ಗೆ ಡಿಕ್ಕಿಯಾಗಿದೆ.

ಘಟನೆ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಾಲಕ ನಿದ್ದೆ ಮಂಪರಿನಲ್ಲಿ ಇದ್ದಿದ್ದರಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಘಟನೆಯಲ್ಲಿ ಮೃತಪಟ್ಟ ಎಲ್ಲರೂ ಕೇರಳ ಮೂಲದವರು ಎಂದು ತಿಳಿದು ಬಂದಿದೆ. ಮೃತದೇಹಗಳು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಚನ್ನಪಟ್ಟಣ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗಾಂಜಾ ಮತ್ತಿನಲ್ಲಿ ಸ್ನೇಹಿತನನ್ನೇ ಕೊಂದು ಶವ ಸುಟ್ಟ ದುಷ್ಕರ್ಮಿಗಳು

0

ಹಾಸನ: ಗಾಂಜಾ ಅಮಲಿನಲ್ಲಿ ಸ್ನೇಹಿತನನ್ನೇ ಅಪಹರಿಸಿ ಕ್ರೂರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿ, ಬಳಿಕ ಶವವನ್ನು ಸುಟ್ಟು ಸಾಕ್ಷಿ ನಾಶ ಮಾಡಲು ಯತ್ನಿಸಿರುವ ಬೆಚ್ಚಿಬೀಳಿಸುವ ಘಟನೆ ಹಾಸನ ತಾಲೂಕಿನ ನಿಟ್ಟೂರು ಸಮೀಪದ ಹಂಗರಹಳ್ಳಿ ತೋಟದ ಮನೆಯಲ್ಲಿ ಬೆಳಕಿಗೆ ಬಂದಿದೆ.

ಅರಸೀಕೆರೆ ತಾಲೂಕಿನ ಕಾಡಯ್ಯನಕೊಪ್ಪಲು ನಿವಾಸಿ ವರುಣ್ (22) ಹತ್ಯೆಯಾದ ಯುವಕನಾಗಿದ್ದು, ಹಣಕಾಸು ವಿಚಾರವೇ ಈ ದಾರುಣ ಕೃತ್ಯಕ್ಕೆ ಕಾರಣ ಎಂದು ತಿಳಿದುಬಂದಿದೆ. ಈ ಸಂಬಂಧ ಶಶಾಂಕ್, ಸತೀಶ್, ಕಿರಣ್, ಅಭಿ, ಜೀವನ್, ಚೇತನ್, ಪೃಥ್ವಿಕ್ ಹಾಗೂ ಗಜ ಅಲಿಯಾಸ್ ಪ್ರಜ್ವಲ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಮಾರ್ಚ್ 10ರಿಂದ ವರುಣ್ ನಾಪತ್ತೆಯಾಗಿದ್ದ. ಹಣಕಾಸು ವಿಚಾರದಲ್ಲಿ ವಾಗ್ವಾದದ ಹಿನ್ನೆಲೆಯಲ್ಲಿ ವರುಣ್ ಹಾಗೂ ಅವನ ಸ್ನೇಹಿತ ಲೋಹಿತ್ ಅವರನ್ನು ಆರೋಪಿಗಳು ಅಪಹರಿಸಿ ಹಂಗರಹಳ್ಳಿಯ ತೋಟದ ಮನೆಯಲ್ಲಿ ಬಂಧಿಸಿದ್ದರು. ಅಲ್ಲಿ ಇಬ್ಬರ ಮೇಲೂ ಹಲ್ಲೆ ನಡೆಸಲಾಗಿದ್ದು, ಲೋಹಿತ್ ಹೇಗೋ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾನೆ.

ಆದರೆ ವರುಣ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈದ ಆರೋಪಿಗಳು, ಬಳಿಕ ಅರಸೀಕೆರೆ ತಾಲೂಕಿನ ಜೇನುಕಲ್ಲು ಸಿದ್ದೇಶ್ವರಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಶವವನ್ನು ಸುಟ್ಟು ಪರಾರಿಯಾಗಿದ್ದಾರೆ.

ಇನ್ನೊಂದೆಡೆ, ಮಾರ್ಚ್ 15ರಂದು ಪುತ್ರ ನಾಪತ್ತೆಯಾದ ಬಗ್ಗೆ ವರುಣ್ ತಾಯಿ ಕಲಾವತಿ ಗಂಡಸಿ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ತನಿಖೆಯ ವೇಳೆ ಕೊಲೆ ಪ್ರಕರಣದ ಭೀಕರ ಸತ್ಯ ಬಹಿರಂಗವಾಗಿದೆ.

ಸಿನಿಮೀಯ ಶೈಲಿಯಲ್ಲಿ ಅಪಹರಣೆ, ಹಲ್ಲೆ ಹಾಗೂ ಹತ್ಯೆ ನಡೆಸಿದ ಆರೋಪಿಗಳ ವಿರುದ್ಧ ಮಾರ್ಚ್ 19ರಂದು ದುದ್ದ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಈಗಾಗಲೇ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ತನಿಖೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ.

‘ನನ್ನ ಫೋಟೋ ಬಳಸಿ ಫ್ಲೆಕ್ಸ್ ಬೇಡ’: ವಿವಾದಕ್ಕೆ ತೆರೆ ಎಳೆದ ಐಪಿಎಸ್ ಶೋಭಾರಾಣಿ

0

ಮಂಡ್ಯ: ಯುಗಾದಿ ಹಬ್ಬದ ಹಿನ್ನೆಲೆ ಮಂಡ್ಯ ನಗರದಾದ್ಯಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿ.ಜೆ. ಶೋಭಾರಾಣಿ ಅವರ ಭಾವಚಿತ್ರವಿರುವ ಫ್ಲೆಕ್ಸ್‌ಗಳು ರಾರಾಜಿಸಿದ್ದರಿಂದ ಭಾರೀ ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯ ಫ್ಲೆಕ್ಸ್ ಅಳವಡಿಕೆ ಕುರಿತು ಟೀಕೆಗಳು ವ್ಯಕ್ತವಾಗುತ್ತಿದ್ದಂತೆಯೇ, ಐಪಿಎಸ್ ಅಧಿಕಾರಿ ಶೋಭಾರಾಣಿ ತಕ್ಷಣ ಸ್ಪಷ್ಟನೆ ನೀಡಿ ತಮ್ಮ ನಿಲುವು ಪ್ರಕಟಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯಿಸಿದ ಅವರು, “ನನ್ನ ಭಾವಚಿತ್ರವನ್ನು ಬಳಸಿಕೊಂಡು ಯಾವುದೇ ಫ್ಲೆಕ್ಸ್‌, ಬ್ಯಾನರ್ ಅಥವಾ ಪ್ರಚಾರ ಕಾರ್ಯಗಳನ್ನು ನಡೆಸಬಾರದು. ಕಾನೂನು ಮತ್ತು ವೈಯಕ್ತಿಕ ಗೌರವವನ್ನು ಕಾಪಾಡುವುದು ನನ್ನ ಕರ್ತವ್ಯ. ದಯವಿಟ್ಟು ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ,” ಎಂದು ಅಭಿಮಾನಿಗಳಿಗೆ ವಿನಂತಿಸಿದ್ದಾರೆ.

ಇತ್ತೀಚೆಗೆ ಯುಗಾದಿ ಹಬ್ಬದ ಶುಭಾಶಯ ಕೋರಿ ಮಂಡ್ಯ ನಗರದ ಪ್ರಮುಖ ವೃತ್ತಗಳು, ಹೆದ್ದಾರಿ ಬದಿ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಬೃಹತ್ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಈ ಫ್ಲೆಕ್ಸ್‌ಗಳಲ್ಲಿ ಶೋಭಾರಾಣಿ ಅವರ ಜೊತೆಗೆ ಮಂಜುನಾಥ್ ಗೌಡ, ಶಿವಾನಂದ್ ಹಾಗೂ ಪಾಪಣ್ಣ ಅವರ ಭಾವಚಿತ್ರಗಳೂ ಕಾಣಿಸಿಕೊಂಡಿದ್ದವು. ಇದಕ್ಕೂ ಮೊದಲು ಅವರು ಅಧಿಕಾರ ಸ್ವೀಕರಿಸಿದಾಗಲೂ ಇದೇ ರೀತಿ ಫ್ಲೆಕ್ಸ್ ಹಾಕಿ ಸ್ವಾಗತ ಕೋರಲಾಗಿತ್ತು.

ಸಕ್ಕರೆ ನಾಡು ಮಂಡ್ಯದಲ್ಲಿ ರಾಜಕೀಯ ಮುಖಂಡರ ಫ್ಲೆಕ್ಸ್‌ಗಳು ಸಾಮಾನ್ಯವಾದರೂ, ಈ ಬಾರಿ ಅಧಿಕಾರಿಯೊಬ್ಬರ ಭಾವಚಿತ್ರವೇ ನಗರದೆಲ್ಲೆಡೆ ಮೆರೆಯುತ್ತಿರುವುದು ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಯಿತು. ಕೆಲವರು ಅಧಿಕಾರಿಯ ಜನಸ್ನೇಹಿ ಧೋರಣೆಯನ್ನು ಮೆಚ್ಚಿದರೆ, ಇನ್ನೂ ಕೆಲವರು ಫ್ಲೆಕ್ಸ್ ಸಂಸ್ಕೃತಿಯ ಅತಿರೇಕವನ್ನು ಪ್ರಶ್ನಿಸಿದರು.

ಸಾಮಾಜಿಕ ಜಾಲತಾಣಗಳಲ್ಲೂ ಈ ಫೋಟೋಗಳು ವೈರಲ್ ಆಗಿ, ಅಧಿಕಾರಿಯೊಬ್ಬರು ಈ ಮಟ್ಟಿಗೆ ಫ್ಲೆಕ್ಸ್‌ಗಳಲ್ಲಿ ಕಾಣಿಸಿಕೊಳ್ಳುವುದು ರಾಜಕೀಯ ಮುನ್ಸೂಚನೆಯೇ ಎಂಬ ಚರ್ಚೆಯೂ ಕೇಳಿಬಂದಿತ್ತು. ಈ ಎಲ್ಲಾ ಗೊಂದಲಗಳ ನಡುವೆಯೇ ಶೋಭಾರಾಣಿ ನೀಡಿದ ಸ್ಪಷ್ಟನೆ ಇದೀಗ ವಿವಾದಕ್ಕೆ ತೆರೆ ಎಳೆದಂತಾಗಿದೆ.

ಹೈಕಮಾಂಡ್ ತೀರ್ಮಾನದಂತೆ ನನ್ನ ಪುತ್ರನಿಗೆ ಟಿಕೆಟ್ ಲಭಿಸಿದೆ: ಎಸ್‌.ಎಸ್‌.ಮಲ್ಲಿಕಾರ್ಜುನ್‌

ದಾವಣಗೆರೆ:- ದಾವಣಗೆರೆ ಟಿಕೆಟ್‌ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಹೇಳಿದ್ದಾರೆ.

ಪುತ್ರನ ಪರವಾಗಿ ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಂದ ‘ಬಿ’ ಫಾರಂ ಪಡೆದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಹೈಕಮಾಂಡ್ ತೀರ್ಮಾನದಂತೆ ಪುತ್ರ ಸಮರ್ಥ್‌ಗೆ ಟಿಕೆಟ್ ಘೋಷಣೆ ಆಗಿದೆ. ದಾವಣಗೆರೆ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.

ಸಿಎಂ, ‌ಡಿಸಿಎಂ, ಸುರ್ಜೇವಾಲ, ಅಲ್ಪಸಂಖ್ಯಾತ ನಾಯಕರಿಗೆ ಧನ್ಯವಾದ ಹೇಳ್ತೀನಿ. ನಿನ್ನೆಯ ಸಭೆಯಲ್ಲಿ ರಾಜಿ ಸಂಧಾನ ಮಾಡಿದ್ರು. ನಾವೆಲ್ಲರೂ ಹೈಕಮಾಂಡ್ ‌ನಿರ್ಧಾರಕ್ಕೆ ಬಿಟ್ಟಿದ್ವಿ. ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಿದೆ. ಯಾವುದೇ ಗೊಂದಲ ಇಲ್ಲ. ಅಣ್ಣ-ತಮ್ಮಂದಿರ ರೀತಿ ‌ಇದ್ದೇವೆ‌ ಎಂದು ಹೇಳಿದರು.

ಮಲಗಿದ್ದ ಗಂಡನ ಮರ್ಮಾಂಗಕ್ಕೆ ಒದ್ದು ಹಲ್ಲೆ ಮಾಡಿದ ಹೆಂಡ್ತಿ: ಮಧ್ಯರಾತ್ರಿ ಏನಾಯ್ತು?

0

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ವೆಂಕಟರಾಯನಕೋಟೆ ಗ್ರಾಮದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಆದರೆ ಇಲ್ಲಿ ನಡೆದ ಜಗಳ ದುರಂತಕ್ಕೆ ಎಡೆಮಾಡಿಕೊಟ್ಟಿದೆ. ಎಸ್, ಜಗಳದ ಬಳಿಕ ಮಲಗಿದ್ದ ಗಂಡನ ಮರ್ಮಾಂಗಕ್ಕೆ ಹೆಂಡತಿ ಒದ್ದು ಗಂಭೀರವಾಗಿ ಹಲ್ಲೆ ಮಾಡಿದ್ದಾಳೆ.

ಗಂಡ ಹೆಂಡತಿ ಇಬ್ಬರು ಕಳೆದ ಒಂದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ನಂತರ ಮಹಿಳೆ ಚಿತ್ರ ವಿಚಿತ್ರವಾಗಿ ವರ್ತನೆ ಮಾಡುತ್ತಿದ್ದಳಂತೆ. ವಿನಾಕಾರಣ ಗಂಡನ ಜೊತೆ ಕ್ಯಾತೆ ತೆಗೆದು ಜಗಳ ಮಾಡುತ್ತಿದ್ದಳಂತೆ. ಇದೇ ರೀತಿ ಬೆಳಿಗ್ಗೆ ಗಂಡನ ಬಟ್ಟೆ ಹರಿದು ಹಾಕಿ ಜೋರು ಗಲಾಟೆ ಮಾಡಿದ್ದಳಂತೆ. ನಂತರ ಮಧ್ಯರಾತ್ರಿ ಮನೆಯಲ್ಲಿ ಮಲಗಿದ್ದ ಗಂಡನ ಮರ್ಮಾಂಗಕ್ಕೆ ಬಲವಾಗಿ ಒದ್ದಿದ್ದಾಳೆ.

ಬಳಿಕ ಆತನೇ ಆಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಬೆಳಗ್ಗೆ ಗಂಡನ ನೋಡಲು ಆಸ್ಪತ್ರೆಗೆ ಬಂದ ಮಹಿಳೆಗೆ ಗಂಡನನ್ನ ನೋಡಲು ಕುಟುಂಬಸ್ಥರು ಅವಕಾಶ ನೀಡಿಲ್ಲ. ಇದಾದ ಬಳಿಕ ಪೊಲೀಸರಿಗೆ ಕುಟುಂಬಸ್ಥರು ದೂರು ಕೊಟ್ಟಿದ್ದಾರೆ. ದೂರು ಬೆನ್ನಲ್ಲೇ ಮಹಿಳೆಯು ಕ್ರೀಮಿನಾಶಕ ಸೇವಿಸಿ ಅಸ್ವಸ್ಥಳಾಗಿದ್ದಾಳೆ. ಕೂಡಲೇ ಮಹಿಳೆಯನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಚನ್ನಪಟ್ಟಣದಲ್ಲಿ ಕಾಡಾನೆಗಳ ಹಾವಳಿ: ಕೆರೆಯಲ್ಲಿ ಆನೆಗಳ ಹಿಂಡು ಕಂಡು ಗ್ರಾಮಸ್ಥರಲ್ಲಿ ಆತಂಕ!

ರಾಮನಗರ: ಚನ್ನಪಟ್ಟಣ ತಾಲೂಕಿನ ಬ್ರಹ್ಮಣೀಪುರ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದೆ.

ಬೆಳ್ಳಂಬೆಳಗ್ಗೆ ಗ್ರಾಮದ ಹೊರವಲಯದ ಕೆರೆಯಲ್ಲಿ ಮೂರು ಕಾಡಾನೆಗಳು ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿವೆ.

ಕೆರೆಯಲ್ಲಿ ಬೀಡುಬಿಟ್ಟಿರುವ ಆನೆಗಳು ರಾತ್ರಿಯಿಡೀ ಸುತ್ತಮುತ್ತಲಿನ ಜಮೀನುಗಳಲ್ಲಿ ನುಗ್ಗಿ ಬೆಳೆಗಳನ್ನು ತಿಂದು ನಾಶಪಡಿಸಿವೆ. ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ಗ್ರಾಮಕ್ಕೆ ಬಂದಿರುವ ಆನೆಗಳು, ಕಳೆದ ಕೆಲ ದಿನಗಳಿಂದ ಒಂದಲ್ಲ ಒಂದು ಕಡೆ ದಾಂಧಲೆ ನಡೆಸಿ ರೈತರ ನಿದ್ದೆಗೆಡಿಸುತ್ತಿವೆ.

ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಜೆ ಬಳಿಕ ಆನೆಗಳನ್ನು ಸುರಕ್ಷಿತವಾಗಿ ಕಾಡಿಗೆ ಹಿಂತಿರುಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಧಾನಸೌಧ ಮುಂಭಾಗ ಸ್ವಚ್ಛತೆ: ನಟ ಅನಿರುದ್ಧ್ ಜತ್ಕರ್ ಮಾದರಿ ಕಾರ್ಯ!

ಬೆಂಗಳೂರು: ನಟ ಅನಿರುದ್ಧ ಜತ್ಕರ್ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಹೆಸರಾಗಿರುವುದರ ಜೊತೆಗೆ ಸಾಮಾಜಿಕ ಕಳಕಳಿ ಕೂಡ ಹೊಂದಿದ್ದಾರೆ.

ನಗರದಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಅವರು, ವಿಧಾನಸೌಧ ಮುಂಭಾಗ ಸ್ವಚ್ಛಗೊಳಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ನಗರದ ಯಾವುದೇ ಭಾಗದಲ್ಲಿ ಕಸದ ರಾಶಿ ಕಂಡರೂ ಅದರ ವಿಡಿಯೋವನ್ನು ಪೋಸ್ಟ್ ಮಾಡಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರುವ ಕಾರ್ಯವನ್ನು ಅವರು ನಿರಂತರವಾಗಿ ಮಾಡುತ್ತಿದ್ದಾರೆ.

ಅನಿರುದ್ಧ್ ಅವರ ಈ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.