Home Blog Page 43

ಸೋಮವಾರದಿಂದ ತಂಬಾಕು ಖರೀದಿ ಆರಂಭ: ಕೇಂದ್ರ ಸಚಿವ ಪಿಯೂಷ್ ಗೋಯಲ್ ರಿಂದ ಕುಮಾರಸ್ವಾಮಿಗೆ ಭರವಸೆ

0

ನವದೆಹಲಿ: ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ತಂಬಾಕು ಬೆಳೆಗಾರರ ನೆರವಿಗೆ ಕೇಂದ್ರ ಸರಕಾರ ಧಾವಿಸಿದೆ. ಈ ಸಂಬಂಧ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವರಾದ ಪಿಯೂಷ್ ಗೋಯಲ್ ಅವರ ಜತೆ ಮಾತುಕತೆ ನಡೆಸಿದರು.

ಸಚಿವ ಗೋಯಲ್ ಅವರಿಗೆ ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಮನವರಿಕೆ ಮಾಡಿ ಕೊಡಲಾಯಿತು. ಎಲ್ಲ ಮನವಿಗಳನ್ನು ಸಚಿವರು ಆಲಿಸಿದರಲ್ಲದೆ, ಅವುಗಳನ್ನು ಕೂಡಲೇ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ಸೋಮವಾರದಿಂದಲೇ ತಂಬಾಕು ಖರೀದಿ, ವಿದೇಶ ಮಾರುಕಟ್ಟೆಗಳಿಗೆ ರಫ್ತು, ಹೊಸ ವಿದೇಶಿ ಮಾರುಕಟ್ಟೆಗಳ ಅನ್ವೇಷಣೆ ಸೇರಿದಂತೆ ಬೆಳೆಗಾರ ಬೇಡಿಕೆಗಳಿಗೆ ಸಚಿವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದರು. ಅಲ್ಲದೆ, ಈ ಸಂದರ್ಭದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಶಮನಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಚಿವ ಗೋಯಲ್ ಅವರು ತಮ್ಮ ಸಚಿವಾಲಯದ ಉನ್ನತ ಅಧಿಕಾರಿಗಳು ಹಾಗೂ ತಂಬಾಕು ಖರೀದಿಸುವ ಉದ್ಯಮದ ಪ್ರಮುಖರ ಜತೆ ಮಾತನಾಡಿ ಬೆಳೆಗಾರರ ನೆರವಿಗೆ ಬರುವಂತೆ ಸೂಚಿಸಿದರು ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.

ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡ ಅವರ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಮಾಜಿ ಸಚಿವರಾದ ಸಾ.ರಾ. ಮಹೇಶ್, ಮೈಸೂರು -ಕೊಡಗು ಸಂಸದರಾದ ಯದುವೀರ್ ಚಾಮರಾಜೇಂದ್ರ ಕೃಷ್ಣದತ್ತ ಒಡೆಯರ್, ಶಾಸಕರಾದ ಎ. ಮಂಜು, ಜಿ.ಡಿ. ಹರೀಶ್ ಗೌಡ, ಸಿ.ಎನ್. ಮಂಜೇಗೌಡ, ಮಾಜಿ ಶಾಸಕರಾದ ಮಹದೇವು, ಅಶ್ವಿನ್ ಕುಮಾರ್ , ಜೆಡಿಎಸ್ ಹಿರಿಯ ಮುಖಂಡ ಕೃಷ್ಣನಾಯಕ ಹಾಗೂ ಕೋಲಾರ ಸಂಸದ ಮಲ್ಲೇಶ್ ಬಾಬು ಅವರು ಹಾಗೂ ವಾಣಿಜ್ಯ ಸಚಿವಾಲಯದ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು.

ಮುಟ್ಟಿನ ರಜೆ ಕಡ್ಡಾಯ ಮಾಡಿದರೆ ಮಹಿಳೆಯರ ಉದ್ಯೋಗಕ್ಕೆ ಪರಿಣಾಮ: ಸುಪ್ರೀಂ ಕೋರ್ಟ್ ಅಭಿಪ್ರಾಯ

0

ನವದೆಹಲಿ: ಮಹಿಳೆಯರಿಗೆ ಕಡ್ಡಾಯವಾಗಿ ಮುಟ್ಟಿನ ರಜೆ ನೀಡುವ ಕಾನೂನು ಜಾರಿಗೆ ತಂದರೆ ಅದು ಮಹಿಳೆಯರ ಉದ್ಯೋಗಾವಕಾಶಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ವಕೀಲ ಶೈಲೇಂದ್ರ ಮಣಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಿಜೆಐ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠದಲ್ಲಿ ನಡೆಯಿತು. ಅರ್ಜಿಯಲ್ಲಿ ಮಹಿಳೆಯರಿಗೆ ಸಂಬಳದೊಂದಿಗೆ ಮುಟ್ಟಿನ ರಜೆ ನೀಡುವಂತೆ ರಾಜ್ಯಗಳಿಗೆ ನಿಯಮ ರೂಪಿಸಲು ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಗಿತ್ತು.

ವಿಚಾರಣೆ ವೇಳೆ ಪೀಠವು, ಇಂತಹ ಕಾನೂನು ಜಾರಿಗೆ ತಂದರೆ ಮಹಿಳೆಯರು ಪುರುಷರಿಗಿಂತ ಕಡಿಮೆ ಸಾಮರ್ಥ್ಯ ಹೊಂದಿದ್ದಾರೆ ಎಂಬ ಭಾವನೆ ಉಂಟಾಗಬಹುದು ಎಂದು ಅಭಿಪ್ರಾಯಪಟ್ಟಿತು. ಉದ್ಯೋಗದಾತರ ಮನೋಭಾವವನ್ನು ಗಮನಿಸಿದರೆ, ಕಡ್ಡಾಯ ರಜೆ ನಿಯಮ ತಂದರೆ ಅವರು ಮಹಿಳೆಯರನ್ನು ನೇಮಿಸಿಕೊಳ್ಳುವುದೇ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಕೋರ್ಟ್ ತಿಳಿಸಿತು.

ಪ್ರತಿ ತಿಂಗಳು ಮುಟ್ಟಿನ ರಜೆಯನ್ನು ಕಾನೂನುಬದ್ಧ ಹಕ್ಕಾಗಿ ಮಾಡುವುದು ಮಹಿಳೆಯರ ವೃತ್ತಿಜೀವನದ ಬೆಳವಣಿಗೆಗೆ ಅಡ್ಡಿಯಾಗಬಹುದು. ಖಾಸಗಿ ವಲಯದಲ್ಲಿ ತಿಂಗಳಿಗೆ ಹೆಚ್ಚುವರಿ ರಜೆ ಕಡ್ಡಾಯವಾದರೆ ಉದ್ಯೋಗದಾತರು ಮಹಿಳೆಯರನ್ನು ತಾತ್ಸಾರದಿಂದ ನೋಡುವ ಸಾಧ್ಯತೆಯಿದೆ ಎಂದು ನ್ಯಾಯಮೂರ್ತಿ ಬಾಗ್ಚಿ ಅಭಿಪ್ರಾಯಪಟ್ಟರು.

ಈ ಕಾರಣದಿಂದ ಪೀಠವು ಅರ್ಜಿಯನ್ನು ವಜಾಗೊಳಿಸಿತು. ಆದರೆ ಮಹಿಳೆಯರ ಮುಟ್ಟಿನ ಆರೋಗ್ಯದ ಬಗ್ಗೆ ಸೂಕ್ತ ನೀತಿ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತು.

ಕೇರಳ ಮತ್ತು ಕರ್ನಾಟಕ ಸರ್ಕಾರಗಳು ಸ್ವಯಂಪ್ರೇರಿತವಾಗಿ ಮುಟ್ಟಿನ ರಜೆ ನೀಡುತ್ತಿರುವುದನ್ನು ವಕೀಲರು ಗಮನಕ್ಕೆ ತಂದಾಗ, ಸ್ವಯಂಪ್ರೇರಿತವಾಗಿ ನೀಡುವ ಕ್ರಮ ಉತ್ತಮ ಎಂದು ಕೋರ್ಟ್ ಹೇಳಿತು. ಆದರೆ ಕಾನೂನಿನಲ್ಲಿ ಕಡ್ಡಾಯ ಮಾಡಿದರೆ ಅದು ಮಹಿಳೆಯರ ವೃತ್ತಿಜೀವನಕ್ಕೆ ಹಾನಿ ಉಂಟುಮಾಡಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಅರ್ಜಿದಾರರು ಇದೇ ವಿಷಯದ ಕುರಿತು ಮೂರನೇ ಬಾರಿ ಅರ್ಜಿ ಸಲ್ಲಿಸಿದ್ದು, 2023 ಮತ್ತು 2024ರಲ್ಲಿ ನಡೆದ ಹಿಂದಿನ ವಿಚಾರಣೆಗಳಲ್ಲಿಯೂ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಈ ವಿಷಯವನ್ನು ಪರಿಗಣಿಸಲು ಸೂಚಿಸಿತ್ತು.

ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ಕಳೆದ ನಾಲ್ಕೈದು ದಶಕಗಳ ನನ್ನ ರಾಜಕೀಯ ಬದುಕಿನಲ್ಲಿ ಅನೇಕ ಸೋಲುಗೆಲುವುಗಳನ್ನು ಕಂಡಿದ್ದರೂ, ಜನಸೇವೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವರಕೋಡು ಗಡಿ ಗುರುಮಠ ವರುಣದಲ್ಲಿ ಆಯೋಜಿಸಲಾಗಿದ್ದ ಶ್ರೀ ಬೀರೇಶ್ವರಸ್ವಾಮಿ ದೇವಸ್ಥಾನದ ಸಂಪ್ರೊಕ್ಷಣ ಪುನರ್ ಪ್ರತಿಷ್ಠಾಪನೆ ಕುಂಭಾಭಿಷೇಕ ಹಾಗೂ ಮಹಾದ್ವಾರ ಪೂಜಾ ಮಹೋತ್ಸವ ಭಾಗವಹಿಸಿ ಮಾತನಾಡಿದರು.

ಭಕ್ತಿ ಪರಿಶುದ್ಧವಾಗಿರಬೇಕಲ್ಲದೇ, ಮಾನವೀಯತೆ ಹಾಗೂ ಪರರ ಹಿತಚಿಂತನೆಯಿಂದ ಮಾತ್ರ ದೇವರು ಒಲಿಯುತ್ತಾನೆ. ದೇವರು ಸರ್ವಾಂತರ್ಯಾಮಿಯಾಗಿದ್ದಾನೆ. ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ. ಶ್ರೀ ಬೀರೇಶ್ವರಸ್ವಾಮಿ ದೇವಸ್ಥಾನದ ಪೂಜಾ ಮಹೋತ್ಸವಗಳು, ಜಾತ್ರೆಗಳಲ್ಲಿ ಜನರು ಸಂತೋಷದಿಂದ ಭಾಗವಹಿಸಿದ್ದಾರೆ. ಶ್ರೀ ಬೀರೇಶ್ವರಸ್ವಾಮಿ , ನಾಡಿನ ಸಮಸ್ತ ಜನತೆಗೆ ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

1978 ರಲ್ಲಿ ಈ ಪ್ರದೇಶದಿಂದಲೇ ನನ್ನ ರಾಜಕೀಯ ಜೀವನ ಪ್ರಾರಂಭವಾಗಿದ್ದು, ಅಪಾರ ಜನಬೆಂಬಲ ನನಗೆ ದೊರೆತಿದೆ. ಅಲ್ಲಿಂದ ಇಲ್ಲಿಯವರೆಗೆ ಚಾಮುಂಡೇಶ್ವರಿ ಮತ್ತು ವರುಣಾ ಕ್ಷೇತ್ರದ ಜನರು ನನ್ನನ್ನು ಬೆಂಬಲಿಸುತ್ತಲೇ ಬಂದಿದ್ದಾರೆ. ಇಲ್ಲಿನ ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿ, ಆರ್ಥಿಕ ಸಚಿವನಾಗಿ 17 ಬಾರಿ ಆಯವ್ಯಯಗಳನ್ನು ಮಂಡಿಸುವ ಅವಕಾಶ ದೊರೆತಿದೆ. 13 ಬಾರಿ ಚುನಾವಣೆಗಳನ್ನು ಎದುರಿಸಿದ್ದು, ನಾಲ್ಕು ಬಾರಿ ಸೋತ ಸಂದರ್ಭದಲ್ಲಿಯೂ , ಈ ಭಾಗದ ಜನರು ನನ್ನನ್ನೇ ಬೆಂಬಲಿಸಿದ್ದೇನೆ. ನನ್ನ ರಾಜಕೀಯ ಬದುಕಿಗೆ ಇಲ್ಲಿನ ಜನರ ಕೊಡುಗೆ ಅನನ್ಯವಾಗಿದೆ ಎಂದರು.

ನನ್ನ ಗುರುಗಳ ಮಾರ್ಗದರ್ಶನದಿಂದ ಶಿಕ್ಷಣ ಪಡೆದು, ವಕೀಲನಾಗಿ, ರಾಜಕಾರಣಿಯಾಗಿ ಜನರ ಸೇವೆ ಮಾಡುವ ಅವಕಾಶ ದೊರೆತಿದೆ. ನನ್ನ ರಾಜಕೀಯ ಜೀವನ ಸೋಲುಗೆಲುವುಗಳನ್ನು ಕಂಡಿದ್ದರೂ, ಜನಸೇವೆಯನ್ನು ಎಂದಿಗೂ ಮರೆಯುವುದಿಲ್ಲ. ನನ್ನ ಕೊನೆ ಉಸಿರುವವರೆಗೆ ಜನ ಸೇವೆಯಲ್ಲಿ ಸದಾ ತೊಡಗಿರುತ್ತೇನೆ. ಯತೀಂದ್ರ ಸಿದ್ದರಾಮಯ್ಯ ಈ ಕ್ಷೇತ್ರದ ಅಭಿವೃದ್ಧಿಗೆ ಸೇವೆ ಸಲ್ಲಿಸುತ್ತಿದ್ದು, ಜನರು ಅವರನ್ನು ಬೆಂಬಲಿಸಬೇಕು ಎಂದರು.ರಾಜ್ಯದ ವಿವಿಧ ಜಾತಿ, ಧರ್ಮ, ವರ್ಗಗಳ ಬಡಜನರಿಗೆ ಅನೇಕ ಭಾಗ್ಯಗಳು ಹಾಗೂ ಗ್ಯಾರಂಟಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದೇನೆ ಎಂದರು.

ಗ್ಯಾರಂಟಿ ಯೋಜನೆ ಹಿಂಪಡೆಯುವ ಬಗ್ಗೆ ಬಿಜೆಪಿಯಿಂದ ಅಧಿಕೃತ ನಿರ್ಣಯ ಮಂಡಿಸಿ, ಚರ್ಚಿಸೋಣ: ಡಿ.ಕೆ. ಶಿವಕುಮಾರ್

ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ಹಿಂಪಡೆಯಿರಿ, ಮರುಪರಿಶೀಲನೆ ಮಾಡಿ ಎಂದು ಬಿಜೆಪಿಯಿಂದ ಅಧಿಕೃತ ತೀರ್ಮಾನ ಮಾಡಿ ಸದನದಲ್ಲಿ ನಿರ್ಣಯ ಮಂಡಿಸಿ, ಆನಂತರ ಜನರ ಮುಂದೆ ಸದನದಲ್ಲಿ ಇದರ ಬಗ್ಗೆ ಚರ್ಚೆ ನಡೆಸೋಣ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸವಾಲೆಸೆದರು.

ವಿಧಾನಸಭೆಯಲ್ಲಿ 2026-27ನೇ ಸಾಲಿನ ಬಜೆಟ್ ಕುರಿತು ಚರ್ಚೆ ವೇಳೆ ಬಿಜೆಪಿ ಶಾಸಕ ಸುರೇಶ್ ಗೌಡ ಅವರು ಗ್ಯಾರಂಟಿ ಯೋಜನೆಗಳನ್ನು ರದ್ದುಗೊಳಿಸಬೇಕು ಎಂದು ಹೇಳಿದಾಗ, ಶಿವಕುಮಾರ್ ಅವರು ತಿರುಗೇಟು ನೀಡಿದರು.

“ಸುರೇಶ್ ಅವರೇ ನೀವು ಹಿರಿಯ ನಾಯಕರಿದ್ದೀರಿ, ಮಾಜಿ ನಿಮ್ಮ ಜತೆ ಮಾಜಿ ಡಿಸಿಎಂ ಇದ್ದಾರೆ. ಈ ಅಭಿಪ್ರಾಯ ಕೇವಲ ನಿಮ್ಮ ವೈಯಕ್ತಿಕವಲ್ಲ. ಅದು ಪಕ್ಷದ ಅಭಿಪ್ರಾಯ. ನೀವು ಏನು ಹೇಳುವಿರೋ ಅದರ ಬಗ್ಗೆ ಚಿಂತನೆ ನಡೆಸೋಣ. ನೀವು ಹೇಳುತ್ತಿರುವುದು ಸರಿಯಿಲ್ಲ ಎಂದು ಹೇಳುತ್ತಿಲ್ಲ. ಈ ಬಜೆಟ್ ಅಧಿವೇಶನದ ಒಳಗೆಯೇ ನಿಮ್ಮ ತೀರ್ಮಾನ ತಿಳಿಸಿ” ಎಂದು ಹೇಳಿದರು.

ಕೋಳಿ ಕೇಳಿ ಖಾರ ಅರೆದಂತಿದೆ, ಗ್ಯಾರಂಟಿ ಕೊಡುವಾಗ ನಮ್ಮನ್ನು ನೀವು ಕೇಳಿದ್ರ ಎಂದು ಸುರೇಶ್ ಅವರು ಪ್ರತಿಕ್ರಿಯೆ ನೀಡಿದಾಗ, “ಯಡಿಯೂರಪ್ಪ ಅವರು ಒಂದು ಕಾಳು ಕಡಿಮೆ ಆದರೂ ಬಿಡುವುದಿಲ್ಲ ಎಂದು ಹೇಳಿದ್ದರು. ಆನಂತರ ಅದು ಕಡಿಮೆ ಆಯಿತು, ಇದು ಕಡಿಮೆ ಆಯಿತು ಎಂದವರು ನೀವು. ಅದಕ್ಕೆ ಆರು ತಿಂಗಳಲ್ಲಿ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆವು. ನಿಮ್ಮ ಮಾತನ್ನೂ ಕೇಳಿ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ” ಎಂದು ತಿರುಗೇಟು ನೀಡಿದರು.

“ಇತ್ತೀಚೆಗೆ ಅಸ್ಸಾಂ ರಾಜ್ಯಕ್ಕೆ ಹೋಗಿದ್ದೆ. ಅಸ್ಸಾಂನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ಇಲ್ಲ. ಈಗ ಚಾಟ್ ಜಿಪಿಟಿಯಲ್ಲಿ ಹೌ ಟು ವಿನ್ ಗುಜರಾತ್ ಎಲೆಕ್ಷನ್ ಎಂದು ಹಾಕು, ಕರ್ನಾಟಕ ಮಾದರಿ ಅನುಸರಿಸಿ ಎಂದು ಬರಲಿಲ್ಲ ಎಂದರೆ ಕೇಳಿ. ಸರ್ಕಾರಿ ಅಧಿಕಾರಿಗಳಿಗೆ, ಉಳ್ಳವರಿಗೆ ಗ್ಯಾರಂಟಿ ಯೋಜನೆಗಳು ಬೇಕಿಲ್ಲ. ನಾವು ಒಂದು ತೀರ್ಮಾನ ಮಾಡಿದ್ದೇವೆ. ಅದೇ ರೀತಿ ನೀವು ಒಂದು ತೀರ್ಮಾನಕ್ಕೆ ಬನ್ನಿ” ಎಂದರು.

ಮರುಚಿಂತನೆ ಮಾಡಿ ಎಂದು ಮುಖ್ಯಮಂತ್ರಿಯವರಿಗೆ ಹೇಳಿದ್ದೇ ಎಂದು ಸುರೇಶ್ ಗೌಡ ಅವರು ಹೇಳಿದಾಗ, “ಪಕ್ಕದಲ್ಲಿ, ಡಿನ್ನರ್ ಮೀಟಿಂಗ್, ಡೇ ಲೈಟ್ ಮೀಟಿಂಗ್ ಅಲ್ಲಿ, ಬೇರೆ, ಬೇರೆ ಮೀಟಿಂಗ್ ಅಲ್ಲಿ ಹೇಳಿರುವುದು ಬೇಡ. ನಿಮ್ಮ ತೀರ್ಮಾನವನ್ನ ವಿಧಾನಸಭೆ, ಜನ, ದೇಶ ನೋಡಬೇಕು” ಎಂದರು.

ಬಾಗಲಕೋಟೆಯಲ್ಲಿ ಯುವಕನ ಮೇಲೆ ಹಲ್ಲೆ: ಚಿಕಿತ್ಸೆ ಫಲಿಸದೆ ಸಾವು!

0

ಬಾಗಲಕೋಟೆ: ಮೂವರು ಯುವಕರು ಸೇರಿ ಹಲ್ಲೆ ನಡೆಸಿದ ಪರಿಣಾಮ ಯುವಕನೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಾವಳಗಿ ಗ್ರಾಮದಲ್ಲಿ ಕಳೆದ ಮಂಗಳವಾರ (ಮಾರ್ಚ್ 11) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆ ನಡೆಸಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಮೃತ ಯುವಕನನ್ನು ಸುದೀಪ್ ಪಾಂಗೆ (19) ಎಂದು ಗುರುತಿಸಲಾಗಿದೆ. ಹಲ್ಲೆಯ ನಂತರ ಸುದೀಪ್‌ಗೆ ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಶಾಲೆಯ ವಾರ್ಷಿಕ ಕಾರ್ಯಕ್ರಮದ ವೇಳೆ ಸುದೀಪ್ ಶಾಲೆಯ ಮೇಲ್ಛಾವಣಿಯ ಮೇಲೆ ಕುಳಿತು ಕಲ್ಲೆಸೆದಿದ್ದಾನೆ ಎಂದು ಆರೋಪಿಸಿ ಕೆಲ ಯುವಕರು ಅವನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗಂಭೀರವಾಗಿ ಗಾಯಗೊಂಡ ಸುದೀಪ್ ಅನ್ನು ಜಮಖಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ.

ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಲ್ಲೆಗೈದ ಆರೋಪದ ಮೇಲೆ ರಾಜು ಮಾಳೆ, ವಿಜಯ್ ಸಾವಳಗಿ ಮತ್ತು ಮಲ್ಲಿಕಾರ್ಜುನ ಮಾಳೆ ವಿರುದ್ಧ ಎಫ್‌ಐಆರ್ ದಾಖಲಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ ಎಂಬ ಆರೋಪದಡಿ ಮೃತನ ಸಹೋದರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಭಿಕ್ಷಾಟನೆ ಮಾಫಿಯಾ: ಸರ್ಕಾರ ಕ್ರಮಕ್ಕೆ ಡಾ. ಕೆ. ಗೋವಿಂದರಾಜು ಆಗ್ರಹ

ಬೆಂಗಳೂರು: ಬೆಂಗಳೂರಿನಲ್ಲಿ ಭಿಕ್ಷಾಟನೆ ಹಿಂದೆ ದೊಡ್ಡ ಮಾಫಿಯಾ ಕಾರ್ಯನಿರ್ವಹಿಸುತ್ತಿದ್ದು, ಅದರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಡಾ. ಕೆ. ಗೋವಿಂದರಾಜು ಆಗ್ರಹಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು, ಭಿಕ್ಷಾಟನೆ ನಿಷೇಧ ಕಾಯ್ದೆ ಜಾರಿಗೆ ಬಂದು 50 ವರ್ಷಗಳಾದರೂ ರಾಜ್ಯದಲ್ಲಿ ಭಿಕ್ಷಾಟನೆ ನಿಲ್ಲಿಲ್ಲ ಎಂದು ಹೇಳಿದರು. ಬೆಂಗಳೂರಿನ ಮಾರ್ಕೆಟ್ ಪ್ರದೇಶಗಳು, ಎಂ.ಜಿ.ರೋಡ್ ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಭಿಕ್ಷಾಟನೆ ಹೆಚ್ಚಾಗಿದೆ ಎಂದು ಅವರು ಗಮನಕ್ಕೆ ತಂದರು.

ಭಿಕ್ಷಾಟನೆ ಹಿಂದೆ ಸಂಘಟಿತ ಮಾಫಿಯಾ ಕಾರ್ಯನಿರ್ವಹಿಸುತ್ತಿದ್ದು, ಏಜೆಂಟ್‌ಗಳು ಜನರನ್ನು ಕರೆದುಕೊಂಡು ಬಂದು ನಗರದಲ್ಲಿ ಬಿಟ್ಟು ಭಿಕ್ಷಾಟನೆ ಮಾಡಿಸುತ್ತಿದ್ದಾರೆ. ಚಿಕ್ಕ ಮಕ್ಕಳನ್ನೂ ಸಹ ಇದರಲ್ಲಿಗೆ ತಳ್ಳಲಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಈ ಸಮಸ್ಯೆ ತಡೆಯಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ, ಭಿಕ್ಷಾಟನೆ ಹಿಂದೆ ಮಾಫಿಯಾ ಇರುವುದಾಗಿ ಮಾಹಿತಿ ದೊರೆತರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಭಿಕ್ಷಾಟನೆ ಮಾಡುತ್ತಿರುವುದು ಕಂಡುಬಂದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಈ ಸಂಬಂಧ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಕಾಳಸಂತೆಯಲ್ಲಿ LPG ಸಿಲಿಂಡರ್ ಮಾರಾಟಕ್ಕೆ ಬ್ರೇಕ್: ಕ್ರಮ ಕೈಗೊಳ್ಳಲು ಸೂಚನೆ ನೀಡಿದ ಗೃಹ ಸಚಿವ

ಬೆಂಗಳೂರು: ಕಾಳಸಂತೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಮಾರಾಟ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,

ವಾಣಿಜ್ಯ ಸಿಲಿಂಡರ್ ಅವ್ಯವಹಾರ ಕುರಿತು ಪ್ರತಿಕ್ರಿಯಿಸಿ, ಈಗಾಗಲೇ ಡಿಜಿಪಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು. ಕಾಳಸಂತೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಮಾರಾಟವಾಗುತ್ತಿರುವ ಬಗ್ಗೆ ಸರ್ಕಾರ ಗಂಭೀರವಾಗಿ ಗಮನಹರಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ನಗರ ಪೊಲೀಸ್ ಆಯುಕ್ತರು ಈ ಸಂಬಂಧ ವಿಶೇಷ ತಂಡವನ್ನು ರಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ಶಾಸಕರು ದೆಹಲಿಗೆ ತೆರಳುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜಕೀಯದಲ್ಲಿ ಹುದ್ದೆಗಳ ಬಗ್ಗೆ ಆಸೆ ಇರುವುದು ಸಹಜ ಎಂದು ಹೇಳಿದರು. ಪ್ರತಿಯೊಬ್ಬರೂ ಶಾಸಕನಾಗಬೇಕು, ಸಚಿವನಾಗಬೇಕು ಎಂಬ ಆಶಯ ಹೊಂದಿರುತ್ತಾರೆ. ರಾಜಕಾರಣದಲ್ಲೂ ಸರ್ಕಾರಿ ಸೇವೆಯಂತೆ ಹಂತ ಹಂತವಾಗಿ ಅವಕಾಶಗಳು ಬರುತ್ತವೆ ಎಂದು ಹೇಳಿದರು.

ಶಾಸಕ ಇಕ್ಬಾಲ್ ಹುಸೇನ್ ಅವರನ್ನು ಪಕ್ಷದಿಂದ ಹೊರಗಿಡಬೇಕೆಂಬ ಒತ್ತಾಯ ಕುರಿತು ಮಾತನಾಡಿದ ಅವರು, ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ಹೇಳಬಹುದು. ಆದರೆ ಪಕ್ಷದ ಮಿತಿ ಮೀರಿ ಹೇಳಿಕೆ ನೀಡಿದರೆ ವರಿಷ್ಠರು ಗಮನಿಸಿ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಟಿಕೆಟ್ ನೀಡುವ ವಿಚಾರವೂ ಇರುವುದರಿಂದ ಎಲ್ಲರೂ ಎಚ್ಚರಿಕೆಯಿಂದ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದು ತಿಳಿಸಿದರು.

ವಿಜಯನಗರದಲ್ಲಿ ಭೀಕರ ಅಪಘಾತ: ಲಾರಿ ಹರಿದು ಅಜ್ಜ–ಮೊಮ್ಮಗಳು ಸ್ಥಳದಲ್ಲೇ ಸಾವು!

0

ವಿಜಯನಗರ: ಲಾರಿ ಡಿಕ್ಕಿಯಾಗಿ ಅಜ್ಜ ಹಾಗೂ ಮೊಮ್ಮಗಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕ್ಯಾಸನಕೆರೆ ಸಮೀಪದ ರಾಷ್ಟ್ರೀಯ ಹೆದ್ದಾರಿ–50ರಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಈಶ್ವರಪ್ಪ (55) ಹಾಗೂ ಸೃಷ್ಟಿ (14) ಮೃತಪಟ್ಟವರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಲೂಕಿನ ಕರ್ನಾರ್ಹಟ್ಟಿ ಗ್ರಾಮದ ಬಾಲಕಿ ಸೃಷ್ಟಿ ಕೂಡ್ಲಿಗಿ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಳು. ಗುರುವಾರ ವಾರ್ಷಿಕ ಪರೀಕ್ಷೆ ಮುಗಿದ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರು ಬಾಲಕಿಯನ್ನು ಬೈಕ್ನಲ್ಲಿ ತಮ್ಮ ಸ್ವಗ್ರಾಮಕ್ಕೆ ಕರೆದುಕೊಂಡು ಹೋಗುತ್ತಿದ್ದರು.

ಕ್ಯಾಸನಕೆರೆ ಸಮೀಪ ಬೈಕ್ ಸಾಗುತ್ತಿದ್ದಾಗ ಹೆದ್ದಾರಿಯಲ್ಲಿ ಒಣಹಾಕಿದ್ದ ರಾಗಿ ಕಣದ ಮೇಲೆ ಬೈಕ್ ಚಲಾಯಿಸಿದ ಪರಿಣಾಮ ವಾಹನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿದೆ. ಇದೇ ವೇಳೆ ಹಿಂದಿನಿಂದ ಬಂದ ಲಾರಿ ಇಬ್ಬರ ಮೇಲೂ ಹರಿದಿದೆ.

ಅಪಘಾತದ ಪರಿಣಾಮ ಅಜ್ಜ ಮತ್ತು ಮೊಮ್ಮಗಳು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಕಮರ್ಷಿಯಲ್ ಗ್ಯಾಸ್ ಕೊರತೆ: ಒಂದು ವಾರ ಹೋಟೆಲ್‌ʼಗಳು ಸಹಿಸಿಕೊಳ್ಳಬೇಕು – ಸಚಿವ ಮುನಿಯಪ್ಪ

ಬೆಂಗಳೂರು: ರಾಜ್ಯದಲ್ಲಿ ಕಮರ್ಷಿಯಲ್ ಗ್ಯಾಸ್ ಪೂರೈಕೆಯಲ್ಲಿ ಉಂಟಾಗಿರುವ ಸಮಸ್ಯೆಯಿಂದ ಹೋಟೆಲ್ಗಳಿಗೆ ತಾತ್ಕಾಲಿಕ ಅಡಚಣೆ ಉಂಟಾಗಿದ್ದು, ಇನ್ನೂ ಒಂದು ವಾರದಿಂದ 10 ದಿನಗಳವರೆಗೆ ಸಮಸ್ಯೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಸಚಿವ ಮುನಿಯಪ್ಪ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ವಿಚಾರವನ್ನು ಕಾಂಗ್ರೆಸ್ ಸದಸ್ಯರಾದ ಐವಾನ್ ಡಿಸೋಜ ಮತ್ತು ನಾಗರಾಜ್ ಯಾದವ್ ಪ್ರಸ್ತಾಪಿಸಿದರು. ರಾಜ್ಯದಲ್ಲಿ ಆಟೋ, ಹೋಟೆಲ್ಗಳು ಸೇರಿದಂತೆ ಹಲವೆಡೆ ಕಮರ್ಷಿಯಲ್ ಗ್ಯಾಸ್ ದೊರೆಯುತ್ತಿಲ್ಲ. ಗ್ಯಾಸ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ ಎಂದು ಅವರು ಹೇಳಿದರು.

ಗ್ಯಾಸ್ ಕೊರತೆಯಿಂದ ಹೋಟೆಲ್ಗಳಲ್ಲಿ ತಿಂಡಿ, ಊಟ ವ್ಯವಸ್ಥೆಗೆ ತೊಂದರೆ ಉಂಟಾಗುತ್ತಿದೆ. ವಿಶ್ವವಿದ್ಯಾಲಯಗಳಲ್ಲಿಯೂ ಗ್ಯಾಸ್ನಿಂದ ಅಡುಗೆ ಮಾಡಲು ಸಾಧ್ಯವಾಗುತ್ತಿಲ್ಲ. ಇಂದಿರಾ ಕ್ಯಾಂಟೀನ್, ಆಸ್ಪತ್ರೆಗಳು ಸೇರಿದಂತೆ ಹಲವು ಕಡೆ ಸಮಸ್ಯೆ ಎದುರಾಗಿದೆ. ಮದುವೆ ಸಮಾರಂಭಗಳು ಮತ್ತು ದೇವಸ್ಥಾನಗಳಲ್ಲಿ ಪ್ರಸಾದ ತಯಾರಿಕೆಗೆ ಕೂಡ ಅಡಚಣೆ ಉಂಟಾಗಿದೆ ಎಂದು ಸದಸ್ಯರು ತಿಳಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಮುನಿಯಪ್ಪ, ಇಂದು ಕೂಡ ತೈಲ ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಆಸ್ಪತ್ರೆಗಳು, ಹಾಸ್ಟೆಲ್ಗಳು ಹಾಗೂ ವಸತಿ ನಿಲಯಗಳಿಗೆ ಕಮರ್ಷಿಯಲ್ ಗ್ಯಾಸ್ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಪ್ರಸ್ತುತ ತಾತ್ಕಾಲಿಕವಾಗಿ ಸಮಸ್ಯೆ ಎದುರಾಗಿದ್ದು, ಒಂದು ವಾರದೊಳಗೆ ಸಮಸ್ಯೆ ಪರಿಹಾರವಾಗಲಿದೆ. ಅವಧಿಯಲ್ಲಿ ಹೋಟೆಲ್ಗಳು ಸಾಧ್ಯವಾದಷ್ಟು ಎಲೆಕ್ಟ್ರಿಕ್ ಸ್ಟೌವ್ ಬಳಕೆ ಮಾಡಲು ಮನವಿ ಮಾಡಲಾಗಿದೆ. ಹೋಟೆಲ್ ಮಾಲೀಕರು ಒಂದು ವಾರ ಸಹನೆ ವಹಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.

ನ್ಯಾ.ನಾಗಮೋಹನ್ ದಾಸ್ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ: ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಎಸ್ಸಿ ಸಮುದಾಯದ ಒಳ ಮೀಸಲಾತಿ ಜಾರಿ ಮಾಡಲು ವಿಶೇಷ ಸಂಪುಟ ಸಭೆ ಅಗತ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬದ್ದತೆ ಇದ್ದರೆ, ಸುಪ್ರೀಂ ಕೊರ್ಟ್ ನಿರ್ದೇಶನದಂತೆ ನ್ಯಾ.‌ನಾಗಮೋಹನ್ ದಾಸ್ ವರದಿ ಆಧರಿಸಿ ಒಳಮೀಸಲಾತಿ ಜಾರಿ ಮಾಡಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಎಸ್ಸಿ ಎಸ್ಟಿಗಳಿಗೆ ಸದಾ ಕಾಲ ಅನ್ಯಾಯ ಮಾಡುತ್ತ ಬಂದಿದೆ‌. ಅವರ ವಿಚಾರ ಬಂದಾಗ ಯಾವುದೇ ಸ್ಪಷ್ಡವಾಗಿರುವ ನಿಲುವು ನಿರ್ಧಾರ ತೆಗೆದುಕೊಂಡಿಲ್ಲ ಹಿಂದೆ ಐದು ವರ್ಷ ಸಿದ್ದರಾಮಯ್ಯ ಸಿಎಂ ಆದಾಗ ಒಳ ಮೀಸಲಾತಿ ಹೋರಾಟ,

ಎಸ್ಟಿ ಎಸ್ಸಿ ಜನಾಂಗಕ್ಕೆ ಮೀಸಲಾತಿ ಹೆಚ್ಚಳ ಮಾಡಬೇಕೆಂಬ ಕೂಗು ಕೇಳಿತು. ಸ್ವಾಮೀಜಿಗಳು ಪಾದಯಾತ್ರೆ ಮಾಡಿದರು. ಹಿಂದುಳಿದ ವರ್ಗದ ಸ್ವಾಮೀಜಿಗಳು ಪಾದಯಾತ್ರೆ ಮಾಡಿದರು. ಅಹಿಂದ ನಾಯಕ ಅಂತ ಹೇಳುವ ಸಿಎಂ ಮುಸ್ಲೀಮರನ್ನು ಬಿಟ್ಟು ಅಹಿಂದ ವರ್ಗಕ್ಕೆ ಬದುಕಿನಲ್ಲಿ ಬದಲಾಗುವ ಯಾವುದೇ ಯೋಜನೆ ಮಾಡಿಲ್ಲ ಎಂದು ಆರೋಪಿಸಿದರು.

ಎಸ್ಸಿ ಎಸ್ಟಿ ಹಣ ಬೇರೆಡೆ ಖರ್ಚು

ಎಸ್ಸಿ ಎಸ್ಟಿ ಗೆ ಮೀಸಲಿಟ್ಟ ಅನುದಾನ ವರ್ಗಾಯಿಸಿ ಬೇರೆ ಕಡೆ ಖರ್ಚು ಮಾಡುತ್ತೀರಿ ಅದರ ಬಗ್ಗೆ ಏನೂ ಅನಿಸುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಸುಮಾರು 60 ಸಾವಿರ ಕೋಟಿ ಹಣ ಬೇರೆ ಕಡೆಗೆ ಖರ್ಚಾಗಿದೆ. ಬಜೆಟ್ ನಲ್ಲಿ ಒಬಿಸಿಗೆ 441ಕೋಟಿ ರೂ. ಇಟ್ಟಿದ್ದರು. ಅದನ್ನು ಜಾತಿ ಗಣತಿ ಮಾಡಲು ಇಟ್ಟರು. ಅದನ್ನು ರಾಜ್ಯದ ಬೊಕ್ಕಸದಿಂದ ಖರ್ಚು ಮಾಡಬೇಕಿತ್ತು.

ನಿಗಮ ಮಂಡಳಿಗಳಲ್ಲಿ ಎಸ್ಸಿ ಎಸ್ಟಿ ಶಾಸಕರೆ ಗಂಗಾ ಕಲ್ಯಾಣಕ್ಕೆ ಹಣ ನಿಡಿಲ್ಲ ಅಂತ ಆರೋಪ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಒಳ ಮೀಸಲಾತಿಯ ಬಗ್ಗೆ ಸ್ಪಷ್ಟತೆ ಇಲ್ಲ ಈ ಜನಾಂಗದ ಬಗ್ಗೆ ಕಳಕಳಿ ಇಲ್ಲ. ನಾವು ಮಿಸಲಾತಿ ಹೆಚ್ಚಳ ಮಾಡಿದ್ದು ಚುನಾವಣೆ ಗಿಮಿಕ್ ಅಂದರು, ನಾವು ನವೆಂಬರ್ ನಲ್ಲಿ ಮೀಸಲಾತಿ ಹೆಚ್ಚಳ ಮಾಡಿದ್ದೇವು ಚುನಾವಣೆ ಎಪ್ರಿಲ್ ನಲ್ಲಿ ನಡೆಯಿತು‌. ಅಂಬೇಡ್ಕರ್ ಅವರು ಎಸ್ಸಿ ಎಸ್ಡಿ ಜನಾಂಗಕ್ಕೆ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಬೇಕು ಎಂದು ಹೇಳಿದ್ದಾರೆ.

ನಾವು ಅಧಿಕಾರದಲ್ಲಿದ್ದಾಗ ಮೀಸಲಾತಿ ಹೆಚ್ಚಳ ಮಾಡಲು ನ್ಯಾ. ನಾಗಮೊಹನ್ ದಾಸ್ ಸಮಿತಿ ವರದಿ ನೀಡಿತ್ತು. ಆ ವರದಿಯಂತೆ ನಾವು ಸಂಪುಟದಲ್ಲಿ ಒಪ್ಪಿಗೆ ಪಡೆದು ಕಾನೂನು ಮಾಡಿ ಜಾರಿ ಮಾಡಿದ್ದೇವೆ. ಒಳ ಮೀಸಲಾತಿ ಹೆಚ್ಚಳವನ್ನೂ ನಾವು ಮಾಡಿದ್ದೇವು. ಅದರ ಬಗ್ಗೆ ಎರಡು ತೀರ್ಪುಗಳಿದ್ದವು. ಇವರಿಗೆ ಬದ್ದತೆ ಇದ್ದಿದ್ದರೆ 2013 ರಲ್ಲಿಯೇ ಮಾಡಬಹುದಿತ್ತು. ಒಳ ಮೀಸಲಾತಿ ಜಾರಿ ಮಾಡಲು ಸಂವಿಧಾನ ತಿದ್ದುಪಡಿ ಅಗತ್ಯ ಇಲ್ಲ ಅಂತ ಸುಪ್ರೀಂ ಕೋರ್ಟ್ ಹೇಳಿತು. ನಾವು ಮಾಡಿದಂತೆ ಸುಪ್ರೀಂ ಕೋರ್ಟ್ ಹೇಳಿತು.

ಅದರಂತೆ ಮತ್ತೆ ನ್ಯಾ. ನಾಗಮೊಹನ ದಾಸ್ ಸಮಿತಿ ಮಾಡಿದರು. ಅವರು ವರದಿ ಕೊಟ್ಟರು ಆ ವರದಿಯಂತೆಯೂ ಜಾರಿ ಮಾಡದೇ ಸಂಪುಟದಲ್ಲಿ ತಮಗೆ ಬೇಕಾದಂತೆ ಮಾಡಿದರು‌. ಹೈಕೋರ್ಟ್ ನಲ್ಲಿ ನಿಮ್ಮ ಅಡ್ವಕೇಟ್ ಜನರಲ್ ಅವರೇ ಬರೆದು ಕೊಟ್ಡಿದ್ದಾರೆ. ಒಳ ಮೀಸಲಾತಿಯನ್ನು ಕಾನೂನು ಮಾಡಿದ್ದೀರಿ ಅದಕ್ಕೆ ರಾಜ್ಯಪಾಲರ ಒಪ್ಪಿಗೆ ಇದೆ. ಆದರೆ, ರಾಜ್ಯ ಸರ್ಕಾರ ತಾವೇ ಮಾಡಿದ ಕಾನೂನು ಜಾರಿ ಮಾಡಲು ಆಗುತ್ತಿಲ್ಲ. ಅದಕ್ಕೆ ವಿಶೇಷ ಸಂಪುಟ ಸಭೆ ಏಕೆ ಬೇಕು. ಅವರ ಮಂತ್ರಿ ಮಂಡಲದಲ್ಲಿಯೇ ಎರಡು ಗುಂಪಿದೆ. ಒಳ ಮಿಸಲಾತಿಯೇ ಬೇಡ ಎನ್ನುವ ಗುಂಪಿದೆ. ಸಿಎಂ ಒಳ ಮೀಸಲಾತಿ ಬೇಡ ಎನ್ನುವ ಗುಂಪಿನ ಸಚಿವರ ಒತ್ತಡಕ್ಕೆ ಮಣಿದಿದ್ದಾರೆ ಎಂದು ಆರೋಪಿಸಿದರು.

ರಾಜ್ಯಾದ್ಯಂತ ಹೋರಾಟ

ಮೀಸಲಾತಿಯ ಬಗ್ಗೆ ಸ್ಪಷ್ಟತೆ ಇಲ್ಲದೇ 56 ಸಾವಿರ ಪೋಸ್ಟ್ ತುಂಬಿಕೊಳ್ಳಲು ತೀರ್ಮಾನಿಸಿದ್ದಾರೆ‌‌. ಈಗಗಾಕೇ ಶೇ 56% ಮೀಸಲಾತಿ ಶಿಕ್ಷಣ ಕ್ಷೇತ್ರದಲ್ಲಿ ಜಾರಿಯಲ್ಲಿದೆ. ಇವರು ಗಟ್ಟಿಯಾಗಿ ಜಾರಿ ಮಾಡಿದರೆ ಸುಪ್ರೀಂ ಕೋರ್ಟ್ ಬಿಟ್ಟರೆ ಯಾರೂ ಅಡ್ಡಿ ಮಾಡುವುದಿಲ್ಲ. ಶೇ 56% ಮೀಸಲಾತಿಗೆ ಯಾರೂ ತಡೆ ಕೊಟ್ಟಿಲ್ಲ. ಸುಪ್ರೀಂ ಕೊರ್ಟ್ ನಿರ್ದೇಶನದಂತೆ ನಾಗಮೋಹನ್ ದಾಸ್ ಅವರ ಸಮಿತಿ ನೀಡಿರುವ ವರದಿಯಂತೆ ಒಳ ಮಿಸಲಾತಿ ಜಾರಿ ಮಾಡಬೇಕು.

ಅಲೆಮಾರಿಗಳು ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿ ಇದ್ದಾರೆ. ಅವರಿಗೆ ಮನೆ ಇಲ್ಲ. ಕಾಡಿನಲ್ಲಿದ್ದಾರೆ‌ ಅವರು ಸಂಘಟಿತ ಆಗಿಲ್ಲ ಎನ್ನುವ ಕಾರಣಕ್ಕೆ ಅವರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ‌. ನಾವು ಈ ಬಗ್ಗೆ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ಮಾಡುತ್ತೆವೆ. ಈಗಾಗಲೇ ಒಂದು ಹೋರಾಟ ಆಗಿದೆ. ಇದು ರಾಜ್ಯಾದ್ಯಂತ ಆಗುತ್ತದೆ. ಕೂಡಲೇ ಒಳ ಮೀಸಲಾತಿ ಜಾರಿ ಮಾಡಬೇಕು. ವಿಳಂಬ ಮಾಡುತ್ತಿರುವುದನ್ನು ಖಂಡಿಸುತ್ತೇನೆ ಎಂದು ಹೇಳಿದರು.

ಮೀಸಲಾತಿ ಹೆಚ್ಚಳ ಮಾಡಿರುವುದನ್ನು ಸಂವಿಧಾನದ ಸೆಡ್ಯೂಲ್ 9 ರಲ್ಲಿ ಸೇರಿಸುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಂವಿಧಾನದ ಸೆಡ್ಯೂಲ್ 9 ನಲ್ಲಿ ಮೊದಲಿನಂತೆ ರಕ್ಷಣೆ ಇಲ್ಲ. ಅದನ್ನು ಪ್ರಶ್ನೆ ಮಾಡಲು ಅವಕಾಶ ಇದೆ. ತಮಿಳು ನಾಡಿನ ಮೀಸಲಾತಿಯನ್ನೂ ಪ್ರಶ್ನಿಸಲಾಗಿದೆ. ಒಳ ಮೀಸಲಾತಿ ವಿಚಾರದಲ್ಲಿ ತೆಲಂಗಾಣದ ಸರ್ಕಾರದಲ್ಲಿ ಗೊಂದಲ ಇಲ್ಲ‌ ಇಲ್ಲಿ ಸರ್ಕಾರಕ್ಕೆ ಮಾಡಲು ಮನಸಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಬಿ. ಶ್ರೀರಾಮುಲು, ರಾಜುಗೌಡ, ಶಿವನಗೌಡ ನಾಯಕ್ ಹಾಗೂ ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಹಾಜರಿದ್ದರು.

error: Content is protected !!