Home Blog Page 48

ಊಟ ಮಾಡುವಾಗ ಬೆವರು ಬರುವುದು ಮಧುಮೇಹದ ಲಕ್ಷಣವೇ? ಇಲ್ಲಿದೆ ಉತ್ತರ

0

ಊಟ ಮಾಡುವ ವೇಳೆ ಕೆಲವರಿಗೆ ಹಣೆಯ ಮೇಲೆ ಹೆಚ್ಚು ಬೆವರು ಬರುತ್ತಿರುವುದು ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯಾಗಿದೆ. ಮಸಾಲೆಯುಕ್ತ ಅಥವಾ ಬಿಸಿ ಆಹಾರ ಸೇವಿಸುವಾಗ ಈ ರೀತಿ ಆಗುವುದು ಸಹಜವಾದರೂ, ಪ್ರತೀ ಬಾರಿ ಊಟ ಮಾಡುವಾಗಲೇ ಅಥವಾ ತಣಿದ ಆಹಾರ ಸೇವಿಸುವಾಗಲೂ, ಚಳಿಯ ವಾತಾವರಣದಲ್ಲಿಯೂ ಬೆವರುವುದು ಕಂಡುಬಂದರೆ ಅದನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

ವೈದ್ಯಕೀಯ ಭಾಷೆಯಲ್ಲಿ ಊಟ ಮಾಡುವಾಗ ಬೆವರು ಬರುವ ಸಮಸ್ಯೆಯನ್ನು ಗಸ್ಟೇಟರಿ ಸ್ವೆಟಿಂಗ್ (Gustatory Sweating) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ದೇಹದ ಉಷ್ಣತೆ ಹೆಚ್ಚಾಗಿರುವವರು ಅಥವಾ ತುಂಬಾ ಮಸಾಲೆಯುಕ್ತ ಆಹಾರ ಸೇವಿಸುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಇದು ಅಡಗಿರುವ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು.

ಮಧುಮೇಹದ ಲಕ್ಷಣವೇ?
ಡಾ. ಹಿಮಾಂಶು ಅವರ ಪ್ರಕಾರ, ಊಟ ಮಾಡುವಾಗ ಹೆಚ್ಚು ಬೆವರುವುದು ಕೆಲವರಲ್ಲಿ ಮಧುಮೇಹದ ಆರಂಭಿಕ ಲಕ್ಷಣವಾಗಿರಬಹುದು. ಮಧುಮೇಹದಿಂದ ನರಗಳಿಗೆ ಹಾನಿಯಾಗುವ ಸಾಧ್ಯತೆ ಇದ್ದು, ಅದರ ಪರಿಣಾಮವಾಗಿ ಊಟ ಸಮಯದಲ್ಲಿ ಬೆವರುವುದು ಕಾಣಿಸಿಕೊಳ್ಳಬಹುದು. ಆದರೆ ಇದು ಎಲ್ಲ ಮಧುಮೇಹ ರೋಗಿಗಳಲ್ಲಿಯೂ ಕಂಡುಬರುವುದಿಲ್ಲ. ಜೊತೆಗೆ ಥೈರಾಯ್ಡ್ ಸಮಸ್ಯೆ ಅಥವಾ ಹಾರ್ಮೋನುಗಳ ಅಸಮತೋಲನದಿಂದಲೂ ಈ ರೀತಿ ಆಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಮಕ್ಕಳಲ್ಲೂ ಈ ಸಮಸ್ಯೆ ಕಂಡುಬರುತ್ತದೆಯೇ?
ಹೌದು. ಮಕ್ಕಳು ಮಸಾಲೆಯುಕ್ತ ಆಹಾರ ಸೇವಿಸಿದಾಗ ಜೀರ್ಣಕ್ರಿಯೆ ವೇಳೆ ದೇಹದ ಉಷ್ಣತೆ ಹೆಚ್ಚಾಗಿ ಬೆವರುವುದು ಸಹಜ. ಆದರೆ ಸಾಮಾನ್ಯ ಆಹಾರ ಸೇವಿಸುವಾಗಲೂ ಮಗು ಹೆಚ್ಚು ಬೆವರುತ್ತಿದ್ದರೆ, ತೂಕ ವೇಗವಾಗಿ ಇಳಿಕೆಯಾಗುತ್ತಿದ್ದರೆ ಅಥವಾ ಊಟ ಸಮಯದಲ್ಲಿ ಹೃದಯ ಬಡಿತ ಅಸಹಜವಾಗಿ ಹೆಚ್ಚಾಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವೆಂದು ತಜ್ಞರು ಸಲಹೆ ನೀಡುತ್ತಾರೆ.

ಊಟ ಮಾಡುವಾಗ ಬೆವರುವುದನ್ನು ಕಡಿಮೆ ಮಾಡಲು ಸಲಹೆಗಳು:

  • ತುಂಬಾ ಮಸಾಲೆಯುಕ್ತ ಆಹಾರ ಸೇವನೆ ಕಡಿಮೆ ಮಾಡಬೇಕು
  • ಮಾನಸಿಕ ಒತ್ತಡವನ್ನು ನಿಯಂತ್ರಣದಲ್ಲಿ ಇಡಬೇಕು
  • ದಿನಕ್ಕೆ ಕನಿಷ್ಠ 7–8 ಗ್ಲಾಸ್ ನೀರು ಕುಡಿಯಬೇಕು

ಊಟ ಮಾಡುವಾಗ ಸ್ವಲ್ಪ ಪ್ರಮಾಣದಲ್ಲಿ ಬೆವರುವುದು ಸಾಮಾನ್ಯವಾದರೂ, ಅದು ನಿಯಮಿತವಾಗಿ ಹೆಚ್ಚಾಗಿ ಕಾಣಿಸಿದರೆ ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಚೆಕ್ ಬೌನ್ಸ್ ಪ್ರಕರಣ: ತಿಹಾರ್ ಜೈಲ್​​ಗೆ ಸರೆಂಡರ್ ಆದ ಬಾಲಿವುಡ್ ಖ್ಯಾತ ಹಾಸ್ಯ ನಟ

ಚೆಕ್ ಬೌನ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ರಾಜ್ಪಾಲ್ ಯಾದವ್‌ಗೆ ದೆಹಲಿ ಹೈಕೋರ್ಟ್ ಕಠಿಣ ಸಂದೇಶ ನೀಡಿದೆ. ಯಾವುದೇ ರಿಲೀಫ್ ನೀಡಲು ನಿರಾಕರಿಸಿರುವ ನ್ಯಾಯಾಲಯದ ಆದೇಶದಂತೆ, ನಟ ಗುರುವಾರ ಸಂಜೆ ತಿಹಾರ್ ಜೈಲಿನ ಮುಂದೆ ಶರಣಾಗಿದ್ದಾರೆ.

ಜನವರಿ 5ರಂದು ಸಂಜೆ ನಾಲ್ಕು ಗಂಟೆಗೆ ರಾಜ್ಪಾಲ್ ಯಾದವ್ ಜೈಲಿಗೆ ಆಗಮಿಸಿದ್ದು, ನಂತರ ಅಗತ್ಯ ಕಾನೂನು ಪ್ರಕ್ರಿಯೆ ನಡೆಸಿದ ಅಧಿಕಾರಿಗಳು ಅವರನ್ನು ಬಂಧನದಲ್ಲಿಟ್ಟಿದ್ದಾರೆ.

ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ದಾಖಲಿಸಿದ್ದ ಈ ಪ್ರಕರಣದಲ್ಲಿ, ರಾಜ್ಪಾಲ್ ಯಾದವ್ ಹಾಗೂ ಅವರ ಪತ್ನಿ ನೀಡಿದ ಚೆಕ್ ಬೌನ್ಸ್ ಆಗಿದೆ ಎಂದು ಆರೋಪಿಸಲಾಗಿದೆ. 2018ರಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಪ್ರಕರಣದಲ್ಲಿ ಇಬ್ಬರನ್ನೂ ದೋಷಿಗಳೆಂದು ಘೋಷಿಸಿತ್ತು. 2019ರಲ್ಲಿ ಸೆಷನ್ ಕೋರ್ಟ್ ಕೂಡ ಈ ತೀರ್ಪನ್ನು ಎತ್ತಿ ಹಿಡಿದಿತ್ತು.

ನಂತರ, ರಾಜ್ಪಾಲ್ ಯಾದವ್ ಈ ಆದೇಶವನ್ನು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಪ್ರಕರಣವನ್ನು ಸೆಟಲ್ ಮಾಡಲು ಯತ್ನಿಸುತ್ತಿದ್ದೇವೆ ಎಂಬ ವಾದದ ಮೇರೆಗೆ 2024ರಲ್ಲಿ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿತ್ತು. ಆದರೆ, ಹಲವು ಅವಕಾಶಗಳಿದ್ದರೂ ಹಣವನ್ನು ಪಾವತಿಸದ ಹಿನ್ನೆಲೆ ಕೋರ್ಟ್ ಕಠಿಣ ಕ್ರಮಕ್ಕೆ ಮುಂದಾಗಿದೆ.

ಇತ್ತೀಚೆಗೆ ಇನ್ನೂ ಕೆಲವು ವಾರಗಳ ಕಾಲಾವಕಾಶ ನೀಡುವಂತೆ ರಾಜ್ಪಾಲ್ ಪರ ವಕೀಲರು ಮನವಿ ಮಾಡಿದ್ದರೂ, ಹೈಕೋರ್ಟ್ ಅದನ್ನು ತಿರಸ್ಕರಿಸಿತು. ಬುಧವಾರ ನಾಲ್ಕು ಗಂಟೆಗಳ ಒಳಗೆ ಶರಣಾಗುವಂತೆ ಕೋರ್ಟ್ ನಿರ್ದೇಶನ ನೀಡಿತ್ತು.

ಈ ವೇಳೆ ನ್ಯಾಯಾಲಯ ನೀಡಿದ ಟಿಪ್ಪಣಿ ಗಮನ ಸೆಳೆದಿದೆ. “ಯಾವುದೇ ವ್ಯಕ್ತಿ ನಟನಾಗಿದ್ದಾನೆ, ಪ್ರಸಿದ್ಧನಾಗಿದ್ದಾನೆ ಅಥವಾ ನಿರ್ದಿಷ್ಟ ಉದ್ಯಮಕ್ಕೆ ಸೇರಿದವನು ಎಂಬ ಕಾರಣಕ್ಕಾಗಿ ಈ ನ್ಯಾಯಾಲಯವು ವಿಶೇಷ ಸೌಲಭ್ಯ ನೀಡುವುದಿಲ್ಲ. ಒಂದೇ ತಪ್ಪು ಮರುಮರು ನಡೆದರೆ ಅದನ್ನು ಸಹಿಸಲಾಗದು” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈ ಪ್ರಕರಣವು ಸೆಲೆಬ್ರಿಟಿಗಳಿಗೂ ಕಾನೂನು ಒಂದೇ ಎಂಬ ಸಂದೇಶವನ್ನು ಮತ್ತೊಮ್ಮೆ ಬಲವಾಗಿ ನೀಡಿದೆ.

ನೆಟ್ಫ್ಲಿಕ್ಸ್ ‘ಧುರಂಧರ್’ ಕ್ರೆಡಿಟ್ಸ್‌ನಲ್ಲಿ ರಾಹುಲ್ ಗಾಂಧಿ! ರಾಜಕೀಯದ ಎಂಟ್ರಿಯೇ?

ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಒಟಿಟಿಗೆ ಬಂದ ಬೆನ್ನಲ್ಲೇ ನೆಟ್ಫ್ಲಿಕ್ಸ್‌ನಲ್ಲಿ ಧೂಳೆಬ್ಬಿಸಿದೆ. ಲಕ್ಷಾಂತರ ಮಂದಿ ಸಿನಿಮಾ ವೀಕ್ಷಿಸುತ್ತಿದ್ದು, ಕಥೆ, ಅಭಿನಯದ ಜೊತೆಗೆ ಈಗ ಕ್ರೆಡಿಟ್ಸ್ ಲಿಸ್ಟ್ ಕೂಡ ವೈರಲ್ ಆಗಿದೆ.

ಸಿನಿಮಾದ ಅಂತಿಮ ಕ್ರೆಡಿಟ್ಸ್‌ನಲ್ಲಿ ‘Executive Producer – Rahul Gandhi’ ಎಂಬ ಹೆಸರು ಕಾಣಿಸಿಕೊಂಡಿರುವುದೇ ಈ ವೈರಲ್ ಗೊಂದಲಕ್ಕೆ ಕಾರಣ. ಇದನ್ನು ಕಂಡ ನೆಟ್ಟಿಗರು, “ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿನಿಮಾ ನಿರ್ಮಾಪಕರಾಗಿದ್ದಾರಾ?”, “ರಾಜಕೀಯ ಬಿಟ್ಟು ಬಾಲಿವುಡ್‌ಗೆ ಎಂಟ್ರಿಯೇ?” ಎಂದು ಪ್ರಶ್ನೆ ಮಾಡಲಾರಂಭಿಸಿದ್ದಾರೆ. ಕೆಲವರು ಈ ವಿಷಯವನ್ನು ಹಿಡಿದು ರಾಜಕೀಯ ಮೀಮ್‌ಗಳು, ವ್ಯಂಗ್ಯ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.

ಆದರೆ, ಇಲ್ಲಿ ತಿಳಿಯಬೇಕಾದ ಮಹತ್ವದ ವಿಚಾರವೇನೆಂದರೆ — ಈ ರಾಹುಲ್ ಗಾಂಧಿಗೂ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೂ ಯಾವುದೇ ಸಂಬಂಧವಿಲ್ಲ. ‘ಧುರಂಧರ್’ ಸಿನಿಮಾದಲ್ಲಿ ಉಲ್ಲೇಖಗೊಂಡಿರುವ ರಾಹುಲ್ ಗಾಂಧಿ ಬಾಲಿವುಡ್‌ನಲ್ಲೇ ಕೆಲಸ ಮಾಡುತ್ತಿರುವ ಅನುಭವೀ ಕಾರ್ಯಕಾರಿ ನಿರ್ಮಾಪಕ.

ಈ ರಾಹುಲ್ ಗಾಂಧಿ ಈ ಹಿಂದೆಯೂ ‘ರುಸ್ತುಂ’, ‘ದಿ ಫ್ಯಾಮಿಲಿ ಮ್ಯಾನ್’, ‘ಫರ್ಜಿ’, ‘ರಾಕೆಟ್ ಬಾಯ್ಸ್’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳು ಮತ್ತು ವೆಬ್ ಸರಣಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೆಸರು ಒಂದೇ ಇರುವುದರಿಂದ ಈ ಗೊಂದಲ ಉಂಟಾಗಿದೆ.

‘ಧುರಂಧರ್’ ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ಮತ್ತು B62 ಸ್ಟುಡಿಯೋಸ್ ನಿರ್ಮಿಸಿದ್ದು, ಆದಿತ್ಯ ಧಾರ್ ಅವರ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದೆ. ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಗೂಢಚಾರನ ಕಥೆ ಹೊಂದಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 1500 ಕೋಟಿ ರೂಪಾಯಿಯ ಸಮೀಪದ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.

ಸಾರಾಂಶವಾಗಿ ಹೇಳುವುದಾದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಗೊಂದಲಕ್ಕೆ ಯಾವುದೇ ರಾಜಕೀಯ ಅರ್ಥವಿಲ್ಲ. ಇದು ಕೇವಲ ಹೆಸರಿನ ಸಾಮ್ಯದಿಂದ ಉಂಟಾದ ತಪ್ಪು ಕಲ್ಪನೆ.

ವಿದೇಶಿ ರಾಯಭಾರಿ ಕಚೇರಿಗಳಿಗೆ ಮತ್ತೆ ಬಾಂಬ್ ಬೆದರಿಕೆ; ಬೆಂಗಳೂರಿನಲ್ಲಿ ಹೆಚ್ಚಿದ ಆತಂಕ

0

ಬೆಂಗಳೂರು: ಬೆಂಗಳೂರಿನಲ್ಲಿ ವಿದೇಶಿ ರಾಯಭಾರಿ ಕಚೇರಿಗಳ ಮೇಲೆ ಮತ್ತೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದು, ನಗರದಲ್ಲಿ ಆತಂಕ ಮೂಡಿಸಿದೆ.

ಇಟಲಿ ಮತ್ತು ಜಪಾನ್ ಕಾನ್ಸುಲೇಟ್ ನಂತರ, ಈಗ ನೆದರ್‌ಲ್ಯಾಂಡ್ ರಾಯಭಾರಿ ಕಚೇರಿಗೂ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಆರ್‍ಟಿ ನಗರದ ಗಂಗಾನಗರದಲ್ಲಿ ನೆದರ್‌ಲ್ಯಾಂಡ್ ರಾಯಭಾರಿ ಕಚೇರಿ ಜನವರಿ 29ರಂದು ಕಿಡಿಗೇಡಿಗಳಿಂದ ಇ-ಮೇಲ್ ಪಡೆದಿದ್ದು, ಅವರು “5 RDX ಮತ್ತು ಐಇಡಿ ಬಳಸಿ ಸ್ಫೋಟ ಮಾಡುತ್ತೇವೆ” ಎಂದು ಬೆದರಿಕೆ ಹಾಕಿದ್ದಾರೆ.

ರಾಯಭಾರಿ ಕಚೇರಿಯ ಅಧಿಕಾರಿ ಭಾಸ್ಕರ್ ಸುಬ್ರಹ್ಮಣಿ ಈ ಕುರಿತು ಆರ್‍ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ, ಮತ್ತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಲ್ಲದೇ ಇತ್ತೀಚೆಗೆ ಹಲಸೂರಿನ ಇಟಾಲಿಯನ್ ಕಾನ್ಸುಲೇಟ್‌ಗೆ ಕೂಡ gaina_ramesh@outlook.com ವಿಳಾಸದಿಂದ bangalore.visa@esteri.it ಗೆ ‘5 RDX ಬಾಂಬ್ ಸ್ಫೋಟ ಮಾಡುತ್ತೇವೆ’ ಎಂಬ ಸಂದೇಶ ಕಳುಹಿಸಲಾಗಿತ್ತು. ಇಟಾಲಿಯನ್ ಕಾನ್ಸುಲೇಟ್ ಭದ್ರತಾ ವ್ಯವಸ್ಥಾಪಕ ಜಿಯೋಡೊಮೆನಿಕ್ ಒ ಮಿಲಾನೋ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಇದಲ್ಲದೆ, ಕಬ್ಬನ್ ರಸ್ತೆಯಲ್ಲಿರುವ ಜಪಾನ್ ಕಾನ್ಸುಲೇಟ್ ಜನರಲ್ ಕಚೇರಿಗೆ ಅಪರಿಚಿತ ಸಂಖ್ಯೆಯಿಂದ “Please be careful, someone will kill you” ಎಂದು ಕೊಲೆ ಬೆದರಿಕೆ ಕರೆ ಬಂದಿತ್ತು. ಈ ಪ್ರಕರಣವನ್ನು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

ಸದ್ಯ, ಇಟಲಿ, ಜಪಾನ್ ಮತ್ತು ನೆದರ್‌ಲ್ಯಾಂಡ್ ಕಚೇರಿಗಳಿಗೆ ಬಂದ ಬೆದರಿಕೆಗಳ ಮೂಲವನ್ನು ಪತ್ತೆ ಹಚ್ಚಲು ಪೊಲೀಸರು ಇ-ಮೇಲ್ ಐಡಿ ಮತ್ತು ಕರೆಗಳ ಜಾಡು ಬೆನ್ನತ್ತಿದ್ದು, ರಾಯಭಾರಿ ಕಚೇರಿಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಪ್ರಚಾರ ವೇದಿಕೆಯಲ್ಲಿ ಅಶ್ಲೀಲ ಹಾಡು, ಪತ್ರಕರ್ತರಿಗೆ ಬೆದರಿಕೆ: ತೆಲುಗು ನಟ ಚಂದ್ರಹಾಸ್ ವಿರುದ್ಧ ದೂರು

ತೆಲುಗಿನ ಉದಯೋನ್ಮುಖ ನಟ ಚಂದ್ರಹಾಸ್ ವಿರುದ್ಧ ಪ್ರಚಾರ ಕಾರ್ಯಕ್ರಮದ ವೇಳೆ ನಡೆದ ಘಟನೆಯೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ಹಿರಿಯ ನಟ ಇಟಿವಿ ಪ್ರಭಾಕರ್ ಅವರ ಪುತ್ರರಾಗಿರುವ ಚಂದ್ರಹಾಸ್, ತಮ್ಮ ಮುಂದಿನ ಸಿನಿಮಾ ‘ಬರಾಬರ್ ಪ್ರೇಮಿಸ್ತ’ ಪ್ರಚಾರ ಕಾರ್ಯಕ್ರಮದಲ್ಲಿ ಅಸಭ್ಯ ವರ್ತನೆ ತೋರಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.

ಕಾರ್ಯಕ್ರಮದ ವೇಳೆ ವೇದಿಕೆ ಏರಿದ ಚಂದ್ರಹಾಸ್, ಅಶ್ಲೀಲ ಅರ್ಥ ಹೊಂದಿರುವ ಹಾಡೊಂದನ್ನು ಹಾಡಿದ್ದಾರೆ. ವೇದಿಕೆಯ ಎದುರು ಸಿನಿಮಾದ ನಾಯಕಿ ಸೇರಿದಂತೆ ಹಲವು ಮಹಿಳೆಯರು, ಹಿರಿಯ ನಟ ಜೆಡಿ ಚಕ್ರವರ್ತಿ ಹಾಗೂ ಮಾಧ್ಯಮ ಪ್ರತಿನಿಧಿಗಳು ಇದ್ದರೂ, ಸಂಯಮ ತೋರದೇ ಹಾಡಿನಲ್ಲಿ ಅಸಭ್ಯ ಪದಗಳ ಬಳಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಹಾಡಿನ ಬಳಿಕ, ಅಲ್ಲೇ ಇದ್ದ ಕೆಲ ಪತ್ರಕರ್ತರು ಅದರ ಔಚಿತ್ವದ ಬಗ್ಗೆ ಪ್ರಶ್ನೆ ಮಾಡಿದಾಗ, ಚಂದ್ರಹಾಸ್ ಕೋಪಗೊಂಡು ಒಬ್ಬ ಪತ್ರಕರ್ತನಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದಂತೆ, ವಿಷಯ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ನಟ ಚಂದ್ರಹಾಸ್ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಲಾಗಿದೆ.

ವಿವಾದ ಹೆಚ್ಚಾಗುತ್ತಿದ್ದಂತೆ, ಚಿತ್ರದ ನಿರ್ದೇಶಕ ಸಂಪತ್ ರುದ್ರಾ ಹಾಗೂ ನಿರ್ಮಾಪಕರು ಮಾಧ್ಯಮಗಳ ಮುಂದೆ ಬಂದು ಕ್ಷಮೆಯಾಚಿಸಿದ್ದು, “ಆ ಹಾಡು ನಮ್ಮ ಸಿನಿಮಾದ ಭಾಗವಲ್ಲ. ಇದು ಹೀರೋ ಅವರ ವೈಯಕ್ತಿಕ ನಡೆ. ಈ ಘಟನೆಯಿಂದ ನಮಗೂ ಆಘಾತವಾಗಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ.

ಆದರೆ ನಟ ಚಂದ್ರಹಾಸ್ ತಮ್ಮ ಮೇಲೆ ಬಂದ ಆರೋಪಗಳನ್ನು ತಳ್ಳಿಹಾಕಿದ್ದು, “ನಾನು ಯಾರ ಬಳಿಯೂ ಕ್ಷಮೆ ಕೇಳುವುದಿಲ್ಲ. ನನ್ನ ಹಾಡಿನ ಕೆಲವೇ ಭಾಗಗಳನ್ನು ಕಟ್ ಮಾಡಿ ತಪ್ಪಾಗಿ ಪ್ರದರ್ಶಿಸಲಾಗುತ್ತಿದೆ” ಎಂದು ಹೇಳಿದ್ದಾರೆ.

ಈ ಘಟನೆ, ಸಿನಿಮಾದ ನಾಯಕರ ಸಾಮಾಜಿಕ ಜವಾಬ್ದಾರಿ ಮತ್ತು ಸಾರ್ವಜನಿಕ ವೇದಿಕೆಯಲ್ಲಿ ತೋರಬೇಕಾದ ಸಂಯಮದ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.

ಬಿಟೌನ್‌ಗೆ ಬಿಗ್‌ ಶಾಕ್!‌ ಎಪ್ಸ್ಟೀನ್ ಫೈಲ್ಸ್‌ನಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ಹೆಸರು ಉಲ್ಲೇಖ

ಲೈಂಗಿಕ ಅಪರಾಧಗಳ ಆರೋಪ ಎದುರಿಸಿದ್ದ ಜೆಫ್ರಿ ಎಪ್ಸ್ಟೀನ್ ಪ್ರಕರಣವು ಮತ್ತೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ದುರುಪಯೋಗಕ್ಕೆ ತಳ್ಳಿದ ಆರೋಪಕ್ಕೆ ಸಂಬಂಧಿಸಿದಂತೆ ಸಂಗ್ರಹಿಸಲಾದ ಲಕ್ಷಾಂತರ ಪುಟಗಳ ‘ಎಪ್ಸ್ಟೀನ್ ಫೈಲ್ಸ್’ ದಾಖಲೆಗಳು, ಪ್ರಭಾವಿ ವ್ಯಕ್ತಿಗಳ ಸಂಪರ್ಕ ಜಾಲವನ್ನು ಬಹಿರಂಗಪಡಿಸಿವೆ.

ಈ ದಾಖಲೆಗಳಲ್ಲಿ ಇ-ಮೇಲ್ ಸಂವಹನಗಳು, ವಿಡಿಯೋಗಳು, ಫೋಟೋಗಳು ಮತ್ತು ಸಭೆಗಳ ವಿವರಗಳು ಸೇರಿವೆ. ಜಗತ್ತಿನ ಹಲವು ಶ್ರೀಮಂತರು ಮತ್ತು ಸೆಲೆಬ್ರಿಟಿಗಳ ಹೆಸರುಗಳು ಇದರಲ್ಲಿ ಕಾಣಿಸಿಕೊಂಡಿದ್ದು, ಬಿಲ್ ಗೇಟ್ಸ್ ಅವರು ಈಗಾಗಲೇ ಎಪ್ಸ್ಟೀನ್ ಜೊತೆಗಿನ ಸಂಪರ್ಕದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಇದೀಗ, ಭಾರತದ ಕೆಲ ಪ್ರಸಿದ್ಧ ಸೆಲೆಬ್ರಿಟಿಗಳ ಹೆಸರುಗಳು ಈ ದಾಖಲೆಗಳಲ್ಲಿ ಉಲ್ಲೇಖವಾಗಿವೆ ಎಂಬ ವರದಿಗಳು ಹೊರಬಿದ್ದಿವೆ. ನಂದಿತಾ ದಾಸ್, ಅನುರಾಗ್ ಕಶ್ಯಪ್, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಹೆಸರುಗಳು ಪ್ರಸ್ತಾಪವಾಗಿವೆ ಎನ್ನಲಾಗುತ್ತಿದೆ. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಪ್ರಶ್ನೆಗಳು ಎದ್ದಿವೆ.

ಆದರೆ, ಹೆಸರು ಉಲ್ಲೇಖವಾಗಿದೆ ಎಂಬುದರಿಂದಲೇ ಅಪರಾಧಕ್ಕೆ ನೇರ ಸಂಬಂಧವಿದೆ ಎಂದು ನಿರ್ಧರಿಸಲಾಗುವುದಿಲ್ಲ. ಜೆಫ್ರಿ ಎಪ್ಸ್ಟೀನ್ ಜಾಗತಿಕ ಮಟ್ಟದ ಪ್ರಭಾವಿ ವ್ಯಕ್ತಿಯಾಗಿದ್ದ ಕಾರಣ, ಅನೇಕ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದ. ಆ ಹಿನ್ನೆಲೆಯಲ್ಲಿಯೇ ಹಲವರ ಹೆಸರುಗಳು ದಾಖಲೆಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಅನುರಾಗ್ ಕಶ್ಯಪ್, ತಮ್ಮ ವಿರುದ್ಧ ಹರಡುತ್ತಿರುವ ಆರೋಪಗಳನ್ನು ನಿರಾಕರಿಸಿದ್ದು, ಯಾವುದೇ ಅಕ್ರಮ ಚಟುವಟಿಕೆಗೆ ತಮ್ಮ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಜ್ಞರ ಅಭಿಪ್ರಾಯದಂತೆ, ಎಪ್ಸ್ಟೀನ್ ಫೈಲ್ಸ್‌ಗಳನ್ನು ಆರೋಪದ ದೃಷ್ಟಿಯಿಂದಲ್ಲ, ದಾಖಲೆಗಳ ದೃಷ್ಟಿಯಿಂದ ನೋಡಬೇಕು. ತನಿಖಾ ಸಂಸ್ಥೆಗಳು ಮತ್ತು ನ್ಯಾಯಾಲಯಗಳು ಸ್ಪಷ್ಟ ನಿರ್ಣಯ ನೀಡುವವರೆಗೂ, ಹೆಸರುಗಳ ಉಲ್ಲೇಖವನ್ನು ಆರೋಪ ಎಂದು ಪರಿಗಣಿಸುವುದು ಸೂಕ್ತವಲ್ಲ ಎನ್ನಲಾಗುತ್ತಿದೆ.

ಕರ್ನಾಟಕದಾದ್ಯಂತ ಮೆಗಾ ದಾಳಿ; ಮ್ಯೂಲ್ ಅಕೌಂಟ್ ಸೈಬರ್ ದಂಧೆಗೆ ಸಿಐಡಿ ಶಾಕ್: 13 ವಂಚಕರು ಅರೆಸ್ಟ್

0

ಬೆಂಗಳೂರು: ರಾಜ್ಯದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮ್ಯೂಲ್ ಅಕೌಂಟ್‌ಗಳ ಮೂಲಕ ನಡೆಯುತ್ತಿದ್ದ ಭಾರೀ ಸೈಬರ್ ವಂಚಕ ದಂಧೆಯನ್ನು ಸಿಐಡಿ ಸೈಬರ್ ಕ್ರೈಂ ವಿಭಾಗ ಭೇದಿಸಿದೆ.

ನೂರಾರು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ಸಿಐಡಿ ತಂಡ, ಈ ಕೃತ್ಯಕ್ಕೆ ಬಳಸಲಾಗುತ್ತಿದ್ದ 40,000ಕ್ಕೂ ಹೆಚ್ಚು ಮ್ಯೂಲ್ ಅಕೌಂಟ್‌ಗಳನ್ನು ಪತ್ತೆಹಚ್ಚಿದೆ. ಸಿಐಡಿ ತಂಡವು ರಾಜ್ಯಾದ್ಯಂತ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ ಈ ಪ್ರಕರಣದ ಪ್ರಮುಖ 13 ಮಾಸ್ಟರ್ ಮೈಂಡ್‌ಗಳನ್ನು ಬಂಧಿಸಿದೆ. ತನಿಖೆ ವೇಳೆ ತಿಳಿದುಬಂದಂತೆ, ಅಮಾಯಕರ ಬ್ಯಾಂಕ್ ಖಾತೆಗಳು, ಎಟಿಎಂ ಕಾರ್ಡ್‌ಗಳು ಹಾಗೂ ಖಾತೆ ವಿವರಗಳನ್ನು ಹಣದ ಹಿತಾಸಕ್ತಿಗಾಗಿ ಸಂಗ್ರಹಿಸಿ ಸೈಬರ್ ವಂಚಕರಿಗೆ ನೀಡಲಾಗುತ್ತಿತ್ತು. ಮ್ಯೂಲ್ ಅಕೌಂಟ್‌ಗಳ ಮೂಲಕ ಆನ್‌ಲೈನ್ ವಂಚನೆ ನಡೆಸಿ ಹಣ ವರ್ಗಾವಣೆ ಹಾಗೂ ಎಟಿಎಂ ಮೂಲಕ ನಗದು ವಿತ್‌ಡ್ರಾ ಮಾಡಲಾಗುತ್ತಿತ್ತು.

ಖಾತೆ ವಿವರಗಳನ್ನು ಒದಗಿಸಿದವರಲ್ಲಿ ವಂಚನೆಯ ಬಗ್ಗೆ ಯಾವುದೇ ಅರಿವು ಇರಲಿಲ್ಲ ಎಂದು ಸಿಐಡಿ ತಿಳಿಸಿದೆ. ಈ ದಾಳಿಯ ವೇಳೆ ಸುಮಾರು 42,000 ಮ್ಯೂಲ್ ಅಕೌಂಟ್‌ಗಳು ಬಳಸಲಾಗುತ್ತಿದ್ದು, ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ.

ಬೆಳಗಾವಿ| ಸೀಕ್ರೆಟ್ ಕ್ಯಾಮೆರಾದಲ್ಲಿ ಮಹಿಳಾ ಅಧಿಕಾರಿಯ ಖಾಸಗಿ ವಿಡಿಯೋ ಚಿತ್ರೀಕರಣ; ನಕಲಿ ಪತ್ರಕರ್ತರು ಅರೆಸ್ಟ್!

0

ಬೆಳಗಾವಿ:- ಮಹಿಳಾ ಅಧಿಕಾರಿಯ ಖಾಸಗಿ ಕ್ಷಣಗಳನ್ನು ರಹಸ್ಯ ಕ್ಯಾಮೆರಾದಲ್ಲಿ ಸೆರೆಹಿಡಿದು 50 ಲಕ್ಷ ರೂ.ಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ನಕಲಿ ಪತ್ರಕರ್ತರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಮೀರ್ ನಿಸಾರ್ ಅಹ್ಮದ್ ಶೇಖ್, ಅಬ್ಬುಲ್ ರಶೀದ್ ಮಕಾಂದಾರ್ ಹಾಗೂ ಮೊಹಮ್ಮದ್ ಬಾಳೇಕುಂದ್ರಿ ಬಂಧಿತ ಆರೋಪಿಗಳು. ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣ ಸದ್ಯ ಬೆಳಗಾವಿಯಲ್ಲಿ ಸಂಚಲನ ಮೂಡಿಸಿದೆ. ಬಂಧಿತ ಆರೋಪಿಗಳು, ಮಹಿಳಾ ಅಧಿಕಾರಿ ಮನೆಯ ಲೈಟ್ ಬಲ್ಬ್ ಹೋಲ್ಡರ್‌ಗಳಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿ ಖಾಸಗಿ ದೃಶ್ಯಗಳನ್ನು ಸೆರೆಹಿಡಿದಿದ್ದರು. ಬಳಿಕ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಬೆದರಿಸಿ 50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ.

ಬಳಿಕ ಮಹಿಳಾ ಅಧಿಕಾರಿಯು, ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದರು. ಬಳಿಕ ಮಾಳಮಾರುತಿ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಎರಡು ಸ್ಯಾಮ್‌ಸಂಗ್ ಅಲ್ಟ್ರಾ ಮೊಬೈಲ್, ಒಂದು ವಿವೋ ಮೊಬೈಲ್, 64 ಜಿಬಿ ಪೆನ್‌ಡ್ರೈವ್, ಆರು ರಹಸ್ಯ ಕ್ಯಾಮರಾಗಳು, ಎರಡು ಓಟಿಜಿ ಸಾಧನಗಳು, ಹಲವು ಮೆಮೊರಿ ಕಾರ್ಡ್‌ಗಳು ಹಾಗೂ ಇನ್ನೋವಾ ಕ್ರಿಸ್ಟಾ ಕಾರನ್ನು ಜಪ್ತಿ ಮಾಡಲಾಗಿದೆ.

ಪ್ರಕರಣದಲ್ಲಿ ಮಹಿಳಾ ಅಧಿಕಾರಿಯ ಮನೆ ಕೆಲಸದವನ ಪಾತ್ರವೂ ಬೆಳಕಿಗೆ ಬಂದಿದೆ. ಪರಾರಿಯಾಗಿರುವ ಮನೆ ಕೆಲಸದವನ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.

ನೆಲಮಂಗಲದಲ್ಲಿ ಭೀಕರ ಅಗ್ನಿ ಅವಘಡ| ಡಿವೈಡರ್ ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಖಾಸಗಿ ಬಸ್‌ – ತಪ್ಪಿದ ಭಾರೀ ಅನಾಹುತ!

0

ನೆಲಮಂಗಲ:- ನೆಲಮಂಗಲ ತಾಲೂಕಿನ ತುಮಕೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಹನುಮಂತಪುರ ಗೇಟ್ ಬಳಿ ಭೀಕರ ಅವಘಡ ಸಂಭವಿಸಿದೆ.

ಬೆಂಗಳೂರಿನಿಂದ ಕಲಬುರಗಿಗೆ ಹೊರಟಿದ್ದ ಸಂಜನಾ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಬಸ್‌ ಬೆಳಗ್ಗಿನ ಜಾವ ಸುಮಾರು 3 ಗಂಟೆ ವೇಳೆಗೆ ಚಾಲಕನನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾಗಿದೆ.

ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಬಳಿಕ ನೆಲಮಂಗಲ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಸ್ಸಿನಲ್ಲಿ ಚಾಲಕರು ಸೇರಿ ಸುಮಾರು 40 ಮಂದಿ ಪ್ರಯಾಣಿಕರು ಇದ್ದು, ಎಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ. ಆದರೆ ಬಸ್‌ನ ಲಗೇಜ್ ಬಾಕ್ಸ್‌ನಲ್ಲಿ ಇಟ್ಟಿದ್ದ ಪ್ರಯಾಣಿಕರ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡ ಪ್ರಯಾಣಿಕರು ಕಣ್ಣೀರು ಹಾಕಿರುವುದು ಕಂಡುಬಂದಿದೆ.

ವಿಪಕ್ಷಗಳ ಬಳಿ ದಾಖಲೆ ಇಲ್ಲ, ಅಬಕಾರಿ ಸಚಿವರ ರಾಜೀನಾಮೆಗೆ ಅವಶ್ಯಕತೆ ಇಲ್ಲ; ಶಾಸಕ ಹೆಚ್.ಸಿ. ಬಾಲಕೃಷ್ಣ

0

ರಾಮನಗರ: ಅಬಕಾರಿ ಸಚಿವರ ರಾಜೀನಾಮೆಗೆ ವಿಪಕ್ಷಗಳು ಆಗ್ರಹ ಮಾಡುತ್ತಿರುವುದಕ್ಕೆ ಯಾವುದೇ ಸೂಕ್ತ ದಾಖಲೆ ಇಲ್ಲ. ಹೀಗಾಗಿ ಸಚಿವರು ರಾಜೀನಾಮೆ ಕೊಡುವ ಅಗತ್ಯವೇ ಇಲ್ಲ ಎಂದು ಶಾಸಕ ಹೆಚ್.ಸಿ. ಬಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ.

ಬಿಡದಿ ತಾಲೂಕಿನ ರಾಮನಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅಬಕಾರಿ ಇಲಾಖೆಯನ್ನು ನಿರ್ವಹಿಸಿದ ಪ್ರತಿಯೊಬ್ಬ ಸಚಿವರ ಮೇಲೂ ಈ ರೀತಿಯ ಆರೋಪಗಳು ಕೇಳಿಬಂದಿವೆ. ಆದರೆ ಇದುವರೆಗೆ ಯಾವುದೇ ಸಚಿವರು ಈ ಆರೋಪಗಳ ಹಿನ್ನೆಲೆ ರಾಜೀನಾಮೆ ನೀಡಿದ ಉದಾಹರಣೆ ಇಲ್ಲ. ಬಿಜೆಪಿಯವರು ಸರ್ಕಾರದ ಒಂದು ವಿಕೆಟ್ ಉರುಳಿಸಲು ಕಸರತ್ತು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಯಾರೋ ಮಾತನಾಡಿರುವ ಆಡಿಯೋ ಒಂದನ್ನು ಹಿಡಿದುಕೊಂಡು ರಾಜೀನಾಮೆ ಕೇಳುವುದು ಸರಿಯಲ್ಲ. ಸೂಕ್ತ ಆಧಾರ, ಮಾಹಿತಿ ಇಲ್ಲದೇ ಆರೋಪ ಮಾಡುವುದಕ್ಕೆ ಅರ್ಥವೇ ಇಲ್ಲ. ಈ ವಿಚಾರಕ್ಕೆ ಸಂಬಂಧಿಸಿ ಅಬಕಾರಿ ಸಚಿವರು ಸದನದಲ್ಲೇ ಸ್ಪಷ್ಟ ಉತ್ತರ ನೀಡಿದ್ದಾರೆ ಎಂದು ಬಾಲಕೃಷ್ಣ ಹೇಳಿದರು. ಇನ್ನೂ ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಸದ್ಯ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಇಲ್ಲ. ಹೈಕಮಾಂಡ್ ಕೆಲ ನಾಯಕರನ್ನು ಕರೆಸಿರುವ ಮಾತು ಕೇಳಿಬಂದಿದೆ, ಏನಾಗುತ್ತೋ ಮುಂದೇ ನೋಡಬೇಕು ಎಂದು ತಿಳಿಸಿದರು.

ಕನಕೋತ್ಸವದ ಹೆಸರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಶಕ್ತಿ ಪ್ರದರ್ಶನ ಮಾಡಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು, ಡಿಕೆಶಿ ಮೇಲಿನ ವಿಶ್ವಾಸದಿಂದ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಎಲ್ಲ ಶಾಸಕರಿಗೂ ಆಹ್ವಾನ ನೀಡಲಾಗಿತ್ತು. ಕೆಲವರು ಕೆಲಸದ ಒತ್ತಡದಿಂದ ಬರಲಿಲ್ಲ, ಹಲವರು ಬಂದು ಭಾಗವಹಿಸಿದ್ದಾರೆ. ಇದರಲ್ಲಿ ಶಕ್ತಿ ಪ್ರದರ್ಶನ ಎನ್ನುವುದಕ್ಕೆ ಅರ್ಥವೇ ಇಲ್ಲ ಎಂದು ಹೇಳಿದರು.

ಡಿಕೆಶಿ ಇಡೀ ರಾಜ್ಯದ ಡಿಸಿಎಂ. ಅವರ ಆಹ್ವಾನಕ್ಕೆ ಶಾಸಕರು ಬಂದು ಗೌರವ ಕೊಟ್ಟಿದ್ದಾರೆ. ಸಿಎಂ ಬದಲಾವಣೆ ಕುರಿತು ತೀರ್ಮಾನ ಹೈಕಮಾಂಡ್ ಕೈಯಲ್ಲಿದೆ. ನಾನು ಸಿಎಂ ಹಾಗೂ ಡಿಸಿಎಂ ಇಬ್ಬರ ಜೊತೆಯಲ್ಲೂ ಉತ್ತಮ ಸಂಬಂಧ ಹೊಂದಿದ್ದೇನೆ. ಇನ್ನೂ ಡಿಕೆಶಿ ನಮ್ಮ ಜಿಲ್ಲೆಯವರೇ. ಅವರು ಸಿಎಂ ಆಗಬೇಕು ಎಂಬ ಅಭಿಪ್ರಾಯ ಇದೆ. ಆದರೆ ಅದು ಯಾವಾಗ ಎನ್ನುವುದನ್ನು ಹೈಕಮಾಂಡ್ ನಿರ್ಧರಿಸಬೇಕು. ಡಿಕೆಶಿ ಸಾಕಷ್ಟು ಶ್ರಮಪಟ್ಟಿದ್ದಾರೆ, ದುಡಿದಿದ್ದಾರೆ. ಹೀಗಾಗಿ ಹಳೆ ಮೈಸೂರು ಭಾಗದವರ ಒತ್ತಡ ಹೆಚ್ಚಾಗಿದೆ. ಈ ವಿಚಾರವನ್ನು ಹೈಕಮಾಂಡ್ ಬಗೆಹರಿಸಬೇಕು, ಇಲ್ಲವಾದರೆ ಸಮಸ್ಯೆ ಉಂಟಾಗಬಹುದು ಎಂದು ಶಾಸಕ ಹೆಚ್.ಸಿ. ಬಾಲಕೃಷ್ಣ ಎಚ್ಚರಿಸಿದರು.

error: Content is protected !!